030 ನಾರದಪರ್ವತೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 30

ಸಾರ

ನಾರದ-ಪರ್ವತೋಪಾಖ್ಯಾನ (1-42)

12030001 ಯುಧಿಷ್ಠಿರ ಉವಾಚ।
12030001a ಸ ಕಥಂ ಕಾಂಚನಷ್ಠೀವೀ ಸೃಂಜಯಸ್ಯ ಸುತೋಽಭವತ್।
12030001c ಪರ್ವತೇನ ಕಿಮರ್ಥಂ ಚ ದತ್ತಃ ಕೇನ ಮಮಾರ ಚ।।

ಯುಧಿಷ್ಠಿರನು ಹೇಳಿದನು: “ಸ್ವರ್ಣಷ್ಠೀವಿಯು ಸೃಂಜಯನ ಸುತನಾದದ್ದು ಹೇಗೆ? ಯಾವ ಕಾರಣಕ್ಕಾಗಿ ಪರ್ವತನು ಅವನನ್ನು ಸೃಂಜಯನಿಗೆ ದಯಪಾಲಿಸಿದನು ಮತ್ತು ಯಾವ ಕಾರಣಕ್ಕಾಗಿ ಸ್ವರ್ಣಷ್ಠೀವಿಯು ಕೌಮಾರ್ಯದಲ್ಲಿಯೇ ಮರಣಹೊಂದಿದನು?

12030002a ಯದಾ ವರ್ಷಸಹಸ್ರಾಯುಸ್ತದಾ ಭವತಿ ಮಾನವಃ।
12030002c ಕಥಮಪ್ರಾಪ್ತಕೌಮಾರಃ ಸೃಂಜಯಸ್ಯ ಸುತೋ ಮೃತಃ।।

ಮನುಷ್ಯನಿಗೆ ಒಂದು ಸಾವಿರ ವರ್ಷಗಳ ಆಯುಸ್ಸು ಇರುವಂಥಹ ಆ ಕಾಲದಲ್ಲಿ ಸೃಂಜಯನ ಮಗನು ಕೌಮಾರ್ಯದಲ್ಲಿಯೇ ಹೇಗೆ ಮೃತನಾದನು?

12030003a ಉತಾಹೋ ನಾಮಮಾತ್ರಂ ವೈ ಸುವರ್ಣಷ್ಠೀವಿನೋಽಭವತ್।
12030003c ತಥ್ಯಂ ವಾ ಕಾಂಚನಷ್ಠೀವೀತ್ಯೇತದಿಚ್ಚಾಮಿ ವೇದಿತುಮ್।।

ಅವನು ಹೆಸರಿನಲ್ಲಿ ಮಾತ್ರ ಸ್ವರ್ಣಷ್ಠೀವಿಯಾಗಿದ್ದನೋ? ಅಥವಾ ಅವನನ್ನು ಸುವರ್ಣಷ್ಠೀವಿಯೆಂದು ಏಕೆ ಕರೆಯುತ್ತಿದ್ದರು? ಇವೆಲ್ಲವನ್ನೂ ತಿಳಿಯಲು ಬಯಸುತ್ತೇನೆ.”

12030004 ವಾಸುದೇವ ಉವಾಚ।
12030004a ಅತ್ರ ತೇ ಕಥಯಿಷ್ಯಾಮಿ ಯಥಾ ವೃತ್ತಂ ಜನೇಶ್ವರ।
12030004c ನಾರದಃ ಪರ್ವತಶ್ಚೈವ ಪ್ರಾಗೃಷೀ ಲೋಕಪೂಜಿತೌ।।

ವಾಸುದೇವನು ಹೇಳಿದನು: “ಜನೇಶ್ವರ! ಅದು ಹೇಗೆ ನಡೆಯಿತೆನ್ನುವುದನ್ನು ನಿನಗೆ ಹೇಳುತ್ತೇನೆ. ಋಷಿಗಳಾದ ನಾರದ-ಪರ್ವತರು ಲೋಕಪೂಜಿತರು.

12030005a ಮಾತುಲೋ ಭಾಗಿನೇಯಶ್ಚ ದೇವಲೋಕಾದಿಹಾಗತೌ।
12030005c ವಿಹರ್ತುಕಾಮೌ ಸಂಪ್ರೀತ್ಯಾ ಮಾನುಷ್ಯೇಷು ಪುರಾ ಪ್ರಭೂ।।

ಪ್ರಭೋ! ಹಿಂದೊಮ್ಮೆ ಆ ಸೋದರಮಾವ-ಸೋದರಳಿಯಂದಿರು ಮನುಷ್ಯಲೋಕದಲ್ಲಿ ಸಂಚರಿಸಬೇಕೆಂದು ಬಯಸಿ ದೇವಲೋಕದಿಂದ ಇಲ್ಲಿಗಿಳಿದರು.

12030006a ಹವಿಃಪವಿತ್ರಭೋಜ್ಯೇನ ದೇವ ಭೋಜ್ಯೇನ ಚೈವ ಹ।
12030006c ನಾರದೋ ಮಾತುಲಶ್ಚೈವ ಭಾಗಿನೇಯಶ್ಚ ಪರ್ವತಃ।।
12030007a ತಾವುಭೌ ತಪಸೋಪೇತಾವವನೀತಲಚಾರಿಣೌ।
12030007c ಭುಂಜಾನೌ ಮಾನುಷಾನ್ಭೋಗಾನ್ಯಥಾವತ್ಪರ್ಯಧಾವತಾಮ್।।

ತಾಪಸಿಗಳಾಗಿದ್ದ ಸೋದರಮಾವ ನಾರದ ಮತ್ತು ಸೋದರಳಿಯ ಪರ್ವತರು ಪವಿತ್ರವಾದ ಹವಿಸ್ಸನ್ನೂ, ದೇವಭೋಜನಕ್ಕೆ ಯೋಗ್ಯವಾದ ಆಹಾರಪದಾರ್ಥಗಳನ್ನೂ ತಿನ್ನುತ್ತಾ, ಮನುಷ್ಯರ ಭೋಗಗಳನ್ನು ಭೋಗಿಸುತ್ತಾ ಸ್ವೇಚ್ಛೆಯಿಂದ ಭೂಮಿಯಲ್ಲಿ ಸಂಚರಿಸುತ್ತಿದ್ದರು.

12030008a ಪ್ರೀತಿಮಂತೌ ಮುದಾ ಯುಕ್ತೌ ಸಮಯಂ ತತ್ರ ಚಕ್ರತುಃ।
12030008c ಯೋ ಭವೇದ್ಧೃದಿ ಸಂಕಲ್ಪಃ ಶುಭೋ ವಾ ಯದಿ ವಾಶುಭಃ।।
12030008e ಅನ್ಯೋನ್ಯಸ್ಯ ಸ ಆಖ್ಯೇಯೋ ಮೃಷಾ ಶಾಪೋಽನ್ಯಥಾ ಭವೇತ್।।

ಪರಸ್ಪರ ಪ್ರೀತಿಪಾತ್ರರಾಗಿದ್ದ ಅವರು ತಮ್ಮ-ತಮ್ಮಲ್ಲಿಯೇ ಒಂದು ಒಪ್ಪಂದವನ್ನು ಮಾಡಿಕೊಂಡರು: “ಯಾರೊಬ್ಬರಲ್ಲಿ ಯಾವುದೇ ಶುಭ ಅಥವಾ ಅಶುಭ ಸಂಕಲ್ಪವು ಮೂಡಿಕೊಂಡರೂ ಅದನ್ನು ಅನ್ಯೋನ್ಯರಲ್ಲಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳದೇ ಇದ್ದರೆ ಅಥವಾ ಸುಳ್ಳನ್ನು ಹೇಳಿದರೆ ಅವರು ಶಾಪಕ್ಕೆ ಗುರಿಯಾಗಬೇಕು.”

12030009a ತೌ ತಥೇತಿ ಪ್ರತಿಜ್ಞಾಯ ಮಹರ್ಷೀ ಲೋಕಪೂಜಿತೌ।
12030009c ಸೃಂಜಯಂ ಶ್ವೈತ್ಯಮಭ್ಯೇತ್ಯ ರಾಜಾನಮಿದಮೂಚತುಃ।।

ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಆ ಇಬ್ಬರು ಲೋಕಪೂಜಿತ ಮಹರ್ಷಿಗಳೂ ಶ್ವೇತಪುತ್ರನ ಮಗ ರಾಜಾ ಸೃಂಜಯನಲ್ಲಿ ಹೋಗಿ ಇಂತೆಂದರು:

12030010a ಆವಾಂ ಭವತಿ ವತ್ಸ್ಯಾವಃ ಕಂ ಚಿತ್ ಕಾಲಂ ಹಿತಾಯ ತೇ।
12030010c ಯಥಾವತ್ಪೃಥಿವೀಪಾಲ ಆವಯೋಃ ಪ್ರಗುಣೀಭವ।।
12030010e ತಥೇತಿ ಕೃತ್ವಾ ತೌ ರಾಜಾ ಸತ್ಕೃತ್ಯೋಪಚಚಾರ ಹ।।

“ಪೃಥಿವೀಪಾಲ! ನಿನ್ನ ಹಿತಕ್ಕಾಗಿ ನಾವು ಕೆಲವು ಕಾಲ ನಿನ್ನ ಬಳಿಯಲ್ಲಿಯೇ ವಾಸಿಸುತ್ತೇವೆ. ನಾವಿರುವಲ್ಲಿಯವರೆಗೆ ನಮಗೆ ಅನುಕೂಲಕರನಾಗಿರು!” ಹಾಗೆಯೇ ಆಗಲೆಂದು ಹೇಳಿ ರಾಜನು ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದನು.

12030011a ತತಃ ಕದಾ ಚಿತ್ತೌ ರಾಜಾ ಮಹಾತ್ಮಾನೌ ತಥಾಗತೌ।
12030011c ಅಬ್ರವೀತ್ಪರಮಪ್ರೀತಃ ಸುತೇಯಂ ವರವರ್ಣಿನೀ।।

ಆಗ ಒಮ್ಮೆ ಪರಮಪ್ರೀತನಾದ ರಾಜನು ತನ್ನ ವರವರ್ಣಿನೀ ಮಗಳನ್ನು ಆ ಮಹಾತ್ಮರ ಬಳಿ ಕರೆದುಕೊಂಡು ಹೋಗಿ ಹೀಗೆಂದನು:

12030012a ಏಕೈವ ಮಮ ಕನ್ಯೈಷಾ ಯುವಾಂ ಪರಿಚರಿಷ್ಯತಿ।
12030012c ದರ್ಶನೀಯಾನವದ್ಯಾಂಗೀ ಶೀಲವೃತ್ತಸಮನ್ವಿತಾ।।
12030012e ಸುಕುಮಾರೀ ಕುಮಾರೀ ಚ ಪದ್ಮಕಿಂಜಲ್ಕಸಂನಿಭಾ।।

ಅನವದ್ಯಾಂಗಿಯೂ ಶೀಲಚಾರಿತ್ರ್ಯಗಳಿಂದ ಕೂಡಿದವಳೂ, ಕಮಲದ ಕುಸುಮದಂತೆ ಕಾಂತಿಯುಕ್ತಳಾಗಿರುವ ಈ ಸುಂದರ ಯುವತಿಯು ನನ್ನ ಓರ್ವಳೇ ಮಗಳು ಕುಮಾರೀ ಸುಕುಮಾರಿ. ಇವಳು ನಿಮ್ಮ ಸೇವೆಯನ್ನು ಮಾಡುತ್ತಾಳೆ!”

12030013a ಪರಮಂ ಸೌಮ್ಯ ಇತ್ಯುಕ್ತಸ್ತಾಭ್ಯಾಂ ರಾಜಾ ಶಶಾಸ ತಾಮ್।
12030013c ಕನ್ಯೇ ವಿಪ್ರಾವುಪಚರ ದೇವವತ್ಪಿತೃವಚ್ಚ ಹ।।

“ತುಂಬಾ ಒಳ್ಳೆಯದಾಯಿತು!” ಎಂದು ಅವರು ಹೇಳಲು ರಾಜನು ಅವಳಿಗೆ “ಕನ್ಯೇ! ದೇವ-ಪಿತೃಗಳಂತೆ ಈ ವಿಪ್ರರನ್ನು ಉಪಚರಿಸು!” ಎಂದು ಶಾಸನವನ್ನಿತ್ತನು.

12030014a ಸಾ ತು ಕನ್ಯಾ ತಥೇತ್ಯುಕ್ತ್ವಾ ಪಿತರಂ ಧರ್ಮಚಾರಿಣೀ।
12030014c ಯಥಾನಿದೇಶಂ ರಾಜ್ಞಸ್ತೌ ಸತ್ಕೃತ್ಯೋಪಚಚಾರ ಹ।।

ಆ ಧರ್ಮಚಾರಿಣೀ ಕನ್ಯೆಯು ತಂದೆಗೆ ಹಾಗೆಯೇ ಆಗಲೆಂದು ಹೇಳಿ, ರಾಜನ ನಿರ್ದೇಶನದಂತೆ ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದಳು.

12030015a ತಸ್ಯಾಸ್ತಥೋಪಚಾರೇಣ ರೂಪೇಣಾಪ್ರತಿಮೇನ ಚ।
12030015c ನಾರದಂ ಹೃಚ್ಚಯಸ್ತೂರ್ಣಂ ಸಹಸೈವಾನ್ವಪದ್ಯತ।।

ಅವಳ ಉಪಚಾರಗಳಿಂದ ಮತ್ತು ಅಪ್ರತಿಮ ರೂಪದಿಂದ ನಾರದನ ಹೃದಯದಲ್ಲಿ ಮಲಗಿದ್ದ ಕಾಮನು ಒಮ್ಮೆಲೇ ಎದ್ದು ಅವನನ್ನು ಆಕ್ರಮಣಿಸಲಾರಂಭಿಸಿದನು.

12030016a ವವೃಧೇ ಚ ತತಸ್ತಸ್ಯ ಹೃದಿ ಕಾಮೋ ಮಹಾತ್ಮನಃ।
12030016c ಯಥಾ ಶುಕ್ಲಸ್ಯ ಪಕ್ಷಸ್ಯ ಪ್ರವೃತ್ತಾವುಡುರಾಟ್ಶನೈಃ।।

ಶುಕ್ಲಪಕ್ಶದಲ್ಲಿ ಉಡುರಾಜ ಚಂದ್ರನು ಹೇಗೆ ಮೆಲ್ಲ ಮೆಲ್ಲನೇ ವರ್ಧಿಸುತ್ತಾನೋ ಹಾಗೆ ಆ ಮಹಾತ್ಮನ ಹೃದಯದಲ್ಲಿ ಕಾಮವು ವೃದ್ಧಿಯಾಗತೊಡಗಿತು.

12030017a ನ ಚ ತಂ ಭಾಗಿನೇಯಾಯ ಪರ್ವತಾಯ ಮಹಾತ್ಮನೇ।
12030017c ಶಶಂಸ ಮನ್ಮಥಂ ತೀವ್ರಂ ವ್ರೀಡಮಾನಃ ಸ ಧರ್ಮವಿತ್।।

ಆದರೆ ಧರ್ಮವಿದುವಾದ ಅವನು ನಾಚಿಕೊಂಡು ತನಗಾಗುತ್ತಿದ್ದ ಮನ್ಮಥನ ತೀವ್ರತೆಯನ್ನು ಸೋದರಳಿಯ ಮಹಾತ್ಮ ಪರ್ವತನಲ್ಲಿ ಹೇಳಿಕೊಳ್ಳಲೇ ಇಲ್ಲ.

12030018a ತಪಸಾ ಚೇಂಗಿತೇನಾಥ ಪರ್ವತೋಽಥ ಬುಬೋಧ ತತ್।
12030018c ಕಾಮಾರ್ತಂ ನಾರದಂ ಕ್ರುದ್ಧಃ ಶಶಾಪೈನಂ ತತೋ ಭೃಶಮ್।।

ತನ್ನ ತಪಸ್ಸಿನ ಪ್ರಭಾವದಿಂದ ಅವನ ಇಂಗಿತವನ್ನು ತಿಳಿದುಕೊಂಡ ಪರ್ವತನು ಕ್ರುದ್ಧನಾಗಿ ಕಾಮಾರ್ತನಾದ ನಾರದನಿಗೆ ಭಯಂಕರವಾದ ಈ ಶಾಪವನ್ನಿತ್ತನು:

12030019a ಕೃತ್ವಾ ಸಮಯಮವ್ಯಗ್ರೋ ಭವಾನ್ವೈ ಸಹಿತೋ ಮಯಾ।
12030019c ಯೋ ಭವೇದ್ಧೃದಿ ಸಂಕಲ್ಪಃ ಶುಭೋ ವಾ ಯದಿ ವಾಶುಭಃ।।
12030020a ಅನ್ಯೋನ್ಯಸ್ಯ ಸ ಆಖ್ಯೇಯ ಇತಿ ತದ್ವೈ ಮೃಷಾ ಕೃತಮ್।
12030020c ಭವತಾ ವಚನಂ ಬ್ರಹ್ಮಂಸ್ತಸ್ಮಾದೇತದ್ವದಾಮ್ಯಹಮ್।।

“ಏನೇನು ಶುಭಾಶುಭ ಸಂಕಲ್ಪಗಳು ಹುಟ್ಟುತ್ತವೆಯೋ ಅವುಗಳನ್ನು ಅನ್ಯೋನ್ಯರಲ್ಲಿ ಹೇಳಬೇಕು” ಎಂದು ಅವ್ಯಗ್ರನಾಗಿ ನನ್ನೊಡನೆ ಒಪ್ಪೊಂದ ಮಾಡಿಕೊಂಡಿರುವ ನೀನು ಆ ವಚನಕ್ಕೆ ಸುಳ್ಳಾಗಿ ಮಾಡುತ್ತಿರುವೆ! ಬ್ರಹ್ಮನ್! ಆದುದರಿಂದ ನಾನು ನಿನಗೆ ಹೀಗೆ ಹೇಳುತ್ತಿದ್ದೇನೆ.

12030021a ನ ಹಿ ಕಾಮಂ ಪ್ರವರ್ತಂತಂ ಭವಾನಾಚಷ್ಟ ಮೇ ಪುರಾ।
12030021c ಸುಕುಮಾರ್ಯಾಂ ಕುಮಾರ್ಯಾಂ ತೇ ತಸ್ಮಾದೇಷ ಶಪಾಮ್ಯಹಮ್।।

ಕುಮಾರಿ ಸುಕುಮಾರಿಯ ಕುರಿತು ನಿನ್ನಲ್ಲಿ ಹುಟ್ಟಿರುವ ಈ ಕಾಮದ ಕುರಿತು ನೀನು ನನಗೆ ಈ ಮೊದಲೇ ಹೇಳಲಿಲ್ಲ! ಆದುದರಿಂದ ನಾನು ನಿನ್ನನ್ನು ಶಪಿಸುತ್ತಿದ್ದೇನೆ.

12030022a ಬ್ರಹ್ಮವಾದೀ ಗುರುರ್ಯಸ್ಮಾತ್ತಪಸ್ವೀ ಬ್ರಾಹ್ಮಣಶ್ಚ ಸನ್।
12030022c ಅಕಾರ್ಷೀಃ ಸಮಯಭ್ರಂಶಮಾವಾಭ್ಯಾಂ ಯಃ ಕೃತೋ ಮಿಥಃ।।

ಬ್ರಹ್ಮವಾದಿಯೂ, ಗುರುವೂ, ತಪಸ್ವೀ ಬ್ರಾಹ್ಮಣನೂ ಆಗಿರುವ ನೀನು ನಮ್ಮಿಬ್ಬರ ನಡುವೆ ಮಾಡಿಕೊಂಡ ಒಪ್ಪಂದವನ್ನು ಮುರಿದಿರುವೆ!

12030023a ಶಪ್ಸ್ಯೇ ತಸ್ಮಾತ್ಸುಸಂಕ್ರುದ್ಧೋ ಭವಂತಂ ತಂ ನಿಬೋಧ ಮೇ।
12030023c ಸುಕುಮಾರೀ ಚ ತೇ ಭಾರ್ಯಾ ಭವಿಷ್ಯತಿ ನ ಸಂಶಯಃ।।

ಆದುದರಿಂದ ಸಂಕ್ರುದ್ಧನಾಗಿ ನಾನು ನಿನ್ನನ್ನು ಶಪಿಸುತ್ತಿದ್ದೇನೆ. ನಾನು ಹೇಳುವುದನ್ನು ಕೇಳು! ಸುಕುಮಾರಿಯು ನಿನ್ನ ಪತ್ನಿಯಾಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ!

12030024a ವಾನರಂ ಚೈವ ಕನ್ಯಾ ತ್ವಾಂ ವಿವಾಹಾತ್ಪ್ರಭೃತಿ ಪ್ರಭೋ।
12030024c ಸಂದ್ರಕ್ಷ್ಯಂತಿ ನರಾಶ್ಚಾನ್ಯೇ ಸ್ವರೂಪೇಣ ವಿನಾಕೃತಮ್।।

ಆದರೆ ಪ್ರಭೋ! ಆ ಕನ್ಯೆಯನ್ನು ವಿವಾಹವಾದೊಡನೆಯೇ ನೀನು ವಾನರ ರೂಪವನ್ನು ತಾಳುತ್ತೀಯೆ! ಸ್ವರೂಪವನ್ನು ಕಳೆದುಕೊಂಡು ಕಪಿಮುಖನಾಗುವ ನಿನ್ನನ್ನು ಜನರು ನೋಡುತ್ತಾರೆ!”

12030025a ಸ ತದ್ವಾಕ್ಯಂ ತು ವಿಜ್ಞಾಯ ನಾರದಃ ಪರ್ವತಾತ್ತದಾ।
12030025c ಅಶಪತ್ತಮಪಿ ಕ್ರೋಧಾದ್ಭಾಗಿನೇಯಂ ಸ ಮಾತುಲಃ।।

ಪರ್ವತನ ಆ ಮಾತನ್ನು ಕೇಳಿದ ಸೋದರ ಮಾವ ನಾರದನೂ ಕೂಡ ಕುಪಿತನಾಗಿ ತನ್ನ ಅಳಿಯನನ್ನೂ ಶಪಿಸಿದನು:

12030026a ತಪಸಾ ಬ್ರಹ್ಮಚರ್ಯೇಣ ಸತ್ಯೇನ ಚ ದಮೇನ ಚ।
12030026c ಯುಕ್ತೋಽಪಿ ಧರ್ಮನಿತ್ಯಶ್ಚ ನ ಸ್ವರ್ಗವಾಸಮಾಪ್ಸ್ಯಸಿ।।

“ತಪಸ್ಸು, ಬ್ರಹ್ಮಚರ್ಯ, ಸತ್ಯ ಮತ್ತು ದಮಗಳಿಂದ ಯುಕ್ತನಾಗಿದ್ದರೂ, ಧರ್ಮನಿತ್ಯನಾಗಿದ್ದರೂ, ನಿನಗೆ ಸ್ವರ್ಗವಾಸವು ದೊರಕುವುದಿಲ್ಲ!”

12030027a ತೌ ತು ಶಪ್ತ್ವಾ ಭೃಶಂ ಕ್ರುದ್ಧೌ ಪರಸ್ಪರಮಮರ್ಷಣೌ।
12030027c ಪ್ರತಿಜಗ್ಮತುರನ್ಯೋನ್ಯಂ ಕ್ರುದ್ಧಾವಿವ ಗಜೋತ್ತಮೌ।।

ಹೀಗೆ ಕ್ರುದ್ಧರಾಗಿ ಪರಸ್ಪರರನ್ನು ಘೋರವಾಗಿ ಶಪಿಸಿ ಕ್ರುದ್ಧ ಗಜೋತ್ತಮರಂತೆ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾಗದೇ ಅಗಲಿ ಹೊರಟುಹೋದರು.

12030028a ಪರ್ವತಃ ಪೃಥಿವೀಂ ಕೃತ್ಸ್ನಾಂ ವಿಚಚಾರ ಮಹಾಮುನಿಃ।
12030028c ಪೂಜ್ಯಮಾನೋ ಯಥಾನ್ಯಾಯಂ ತೇಜಸಾ ಸ್ವೇನ ಭಾರತ।।

ಭಾರತ! ಮಹಾಮುನಿ ಪರ್ವತನು, ತನ್ನದೇ ತೇಜಸ್ಸಿನಿಂದ ಯಥಾನ್ಯಾಯವಾಗಿ ಪೂಜಿಸಲ್ಪಡುತ್ತಾ, ಭೂಮಿಯನ್ನಿಡೀ ಸಂಚರಿಸಿದನು.

12030029a ಅಥ ತಾಮಲಭತ್ಕನ್ಯಾಂ ನಾರದಃ ಸೃಂಜಯಾತ್ಮಜಾಮ್।
12030029c ಧರ್ಮೇಣ ಧರ್ಮಪ್ರವರಃ ಸುಕುಮಾರೀಮನಿಂದಿತಾಮ್।।

ಅನಂತರ ಧರ್ಮಪ್ರವರ ನಾರದನು ಸೃಂಜಯನ ಮಗಳು ಅನಿಂದಿತೆ ಕನ್ಯೆ ಸುಕುಮಾರಿಯನ್ನು ಧರ್ಮಪ್ರಕಾರವಾಗಿ ಪಡೆದುಕೊಂಡನು.

12030030a ಸಾ ತು ಕನ್ಯಾ ಯಥಾಶಾಪಂ ನಾರದಂ ತಂ ದದರ್ಶ ಹ।
12030030c ಪಾಣಿಗ್ರಹಣಮಂತ್ರಾಣಾಂ ಪ್ರಯೋಗಾದೇವ ವಾನರಮ್।।

ಪಾಣಿಗ್ರಹಣ ಮಂತ್ರಗಳು ಮತ್ತು ಪ್ರಯೋಗಗಳು ಮುಗಿದಾಕ್ಷಣವೇ ಆ ಕನ್ಯೆಯು, ಶಾಪವಿದ್ದಂತೆ, ನಾರದನನ್ನು ವಾನರರೂಪದಲ್ಲಿ ಕಂಡಳು.

12030031a ಸುಕುಮಾರೀ ಚ ದೇವರ್ಷಿಂ ವಾನರಪ್ರತಿಮಾನನಮ್।
12030031c ನೈವಾವಮನ್ಯತ ತದಾ ಪ್ರೀತಿಮತ್ಯೇವ ಚಾಭವತ್।।

ವಾನರನ ಮುಖವನ್ನು ಹೊಂದಿದ್ದ ದೇವರ್ಷಿಯನ್ನು ಸುಕುಮಾರಿಯು ಅವಮಾನಗೊಳಿಸಲಿಲ್ಲ. ಅವನ ಮೇಲೆ ಪ್ರೀತಿಭಾವವನ್ನೇ ಹೊಂದಿದ್ದಳು.

12030032a ಉಪತಸ್ಥೇ ಚ ಭರ್ತಾರಂ ನ ಚಾನ್ಯಂ ಮನಸಾಪ್ಯಗಾತ್।
12030032c ದೇವಂ ಮುನಿಂ ವಾ ಯಕ್ಷಂ ವಾ ಪತಿತ್ವೇ ಪತಿವತ್ಸಲಾ।।

ಪತಿಯ ಸೇವಾನಿರತಳಾಗಿದ್ದ ಅವಳು ಮನಸ್ಸಿನಲ್ಲಿ ಕೂಡ ದೇವ, ಮುನಿ, ಯಕ್ಷರು ಮತ್ತು ಬೇರೆ ಯಾರಲ್ಲಿಯೂ ಪತಿತ್ವವನ್ನು ಕಾಣಲಿಲ್ಲ.

12030033a ತತಃ ಕದಾ ಚಿದ್ ಭಗವಾನ್ಪರ್ವತೋಽನುಸಸಾರ ಹ।
12030033c ವನಂ ವಿರಹಿತಂ ಕಿಂ ಚಿತ್ತತ್ರಾಪಶ್ಯತ್ಸ ನಾರದಮ್।।

ಹೀಗಿರಲು ಒಮ್ಮೆ ಭಗವಾನ್ ಪರ್ವತನು ಯಾವುದೋ ಕಾರಣಕ್ಕಾಗಿ ವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿ ನಾರದನನ್ನು ಕಂಡನು.

12030034a ತತೋಽಭಿವಾದ್ಯ ಪ್ರೋವಾಚ ನಾರದಂ ಪರ್ವತಸ್ತದಾ।
12030034c ಭವಾನ್ಪ್ರಸಾದಂ ಕುರುತಾಂ ಸ್ವರ್ಗಾದೇಶಾಯ ಮೇ ಪ್ರಭೋ।।

ಆಗ ಪರ್ವತನು ನಾರದನನ್ನು ಅಭಿವಂದಿಸಿ “ಪ್ರಭೋ! ನಿನ್ನ ಕರುಣೆಯಿಂದ ನಾನು ಸ್ವರ್ಗಕ್ಕೆ ಹೋಗುವಂತೆ ಮಾಡು!” ಎಂದು ಕೇಳಿಕೊಂಡನು.

12030035a ತಮುವಾಚ ತತೋ ದೃಷ್ಟ್ವಾ ಪರ್ವತಂ ನಾರದಸ್ತದಾ।
12030035c ಕೃತಾಂಜಲಿಮುಪಾಸೀನಂ ದೀನಂ ದೀನತರಃ ಸ್ವಯಮ್।।

ತನಗಿಂತಲೂ ದೀನನಾಗಿ ಕೈಮುಗಿದು ಕುಳಿತುಕೊಂಡು ಯಾಚಿಸುತ್ತಿದ್ದ ಪರ್ವತನನ್ನು ನೋಡಿ ನಾರದನು ಅವನಿಗೆ ಇಂತೆಂದನು:

12030036a ತ್ವಯಾಹಂ ಪ್ರಥಮಂ ಶಪ್ತೋ ವಾನರಸ್ತ್ವಂ ಭವಿಷ್ಯಸಿ।
12030036c ಇತ್ಯುಕ್ತೇನ ಮಯಾ ಪಶ್ಚಾಚ್ಚಪ್ತಸ್ತ್ವಮಪಿ ಮತ್ಸರಾತ್।।
12030036e ಅದ್ಯಪ್ರಭೃತಿ ವೈ ವಾಸಂ ಸ್ವರ್ಗೇ ನಾವಾಪ್ಸ್ಯಸೀತಿ ಹ।।

“ನೀನೇ ನನ್ನನ್ನು ಮೊದಲು ವಾನರನಾಗೆಂದು ಶಪಿಸಿದೆ. ಇದನ್ನು ಕೇಳಿದ ನಾನು ಮತ್ಸರದಿಂದ ಇಂದಿನಿಂದ ನಿನಗೆ ಸ್ವರ್ಗವಾಸವು ದೊರೆಯದಿರಲಿ ಎಂದು ನಿನ್ನನ್ನೂ ಪ್ರತಿಯಾಗಿ ಶಪಿಸಿದೆನು.

12030037a ತವ ನೈತದ್ಧಿ ಸದೃಶಂ ಪುತ್ರಸ್ಥಾನೇ ಹಿ ಮೇ ಭವಾನ್।
12030037c ನಿವರ್ತಯೇತಾಂ ತೌ ಶಾಪಮನ್ಯೋಽನ್ಯೇನ ತದಾ ಮುನೀ।।

ನನ್ನ ಪುತ್ರಸ್ಥಾನದಲ್ಲಿರುವ ನೀನು ಈ ರೀತಿ ಮಾಡಬಾರದಾಗಿತ್ತು!” ಅನಂತರ ಆ ಇಬ್ಬರು ಮುನಿಗಳೂ ಅನ್ಯೋನ್ಯರಿಗಿತ್ತಿದ್ದ ಶಾಪವನ್ನು ಹಿಂದೆ ತೆಗೆದುಕೊಂಡರು.

12030038a ಶ್ರೀಸಮೃದ್ಧಂ ತದಾ ದೃಷ್ಟ್ವಾ ನಾರದಂ ದೇವರೂಪಿಣಮ್।
12030038c ಸುಕುಮಾರೀ ಪ್ರದುದ್ರಾವ ಪರಪತ್ಯಭಿಶಂಕಯಾ।।

ಆಗ ಕಾಂತಿಯುಕ್ತನಾಗಿದ್ದ ದೇವರೂಪೀ ಆ ನಾರದನನ್ನು ನೋಡಿ ಸುಕುಮಾರಿಯು ಪರಪುರುಷನೆಂಬ ಸಂದೇಹದಿಂದ ಓಡಿಹೋದಳು.

12030039a ತಾಂ ಪರ್ವತಸ್ತತೋ ದೃಷ್ಟ್ವಾ ಪ್ರದ್ರವಂತೀಮನಿಂದಿತಾಮ್।
12030039c ಅಬ್ರವೀತ್ತವ ಭರ್ತೈಷ ನಾತ್ರ ಕಾರ್ಯಾ ವಿಚಾರಣಾ।।

ಓಡಿಹೋಗುತ್ತಿದ್ದ ಆ ಅನಿಂದಿತೆಯನ್ನು ನೋಡಿ ಪರ್ವತನು ಇಂತೆಂದನು: “ಇವನೇ ನಿನ್ನ ಪತಿ. ಅದರಲ್ಲಿ ವಿಚಾರಮಾಡಬೇಕಾದುದೇ ಇಲ್ಲ!

12030040a ಋಷಿಃ ಪರಮಧರ್ಮಾತ್ಮಾ ನಾರದೋ ಭಗವಾನ್ಪ್ರಭುಃ।
12030040c ತವೈವಾಭೇದ್ಯಹೃದಯೋ ಮಾ ತೇ ಭೂದತ್ರ ಸಂಶಯಃ।।

ಈ ಋಷಿ, ಪರಮ ಧರ್ಮಾತ್ಮಾ ಭಗವಾನ್ ಪ್ರಭು ನಾರದನು ನಿನ್ನ ಅಭೇದ್ಯಹೃದಯ ಪತಿ. ಅದರಲ್ಲಿ ನಿನಗೆ ಸಂಶಯವಾಗದಿರಲಿ!”

12030041a ಸಾನುನೀತಾ ಬಹುವಿಧಂ ಪರ್ವತೇನ ಮಹಾತ್ಮನಾ।
12030041c ಶಾಪದೋಷಂ ಚ ತಂ ಭರ್ತುಃ ಶ್ರುತ್ವಾ ಸ್ವಾಂ ಪ್ರಕೃತಿಂ ಗತಾ।।
12030041e ಪರ್ವತೋಽಥ ಯಯೌ ಸ್ವರ್ಗಂ ನಾರದೋಽಥ ಯಯೌ ಗೃಹಾನ್।।

ಆ ಮಹಾತ್ಮ ಪರ್ವತನು ಬಹುವಿಧವಾಗಿ ಅವಳನ್ನು ಒಪ್ಪಿಸಲು, ತನ್ನ ಪತಿಯು ಶಾಪದೋಷಕ್ಕೊಳಗಾಗಿದ್ದುದನ್ನು ಕೇಳಿ ಸುಕುಮಾರಿಯು ಸ್ವಸ್ಥಚಿತ್ತಳಾದಳು. ಆಗ ಪರ್ವತನು ಸ್ವರ್ಗಕ್ಕೂ ನಾರದನು ಪತ್ನಿಯೊಡನೆ ತನ್ನ ಮನೆಗೂ ತೆರಳಿದರು.

12030042a ಪ್ರತ್ಯಕ್ಷಕರ್ಮಾ ಸರ್ವಸ್ಯ ನಾರದೋಽಯಂ ಮಹಾನೃಷಿಃ।
12030042c ಏಷ ವಕ್ಷ್ಯತಿ ವೈ ಪೃಷ್ಟೋ ಯಥಾ ವೃತ್ತಂ ನರೋತ್ತಮ।।

ನರೋತ್ತಮ! ಈ ಮಹಾನೃಷಿ ನಾರದನೇ ಇದರ ಪ್ರತ್ಯಕ್ಷಕರ್ಮಿಯಾಗಿದ್ದನು. ನೀನು ಕೇಳಿದುದನ್ನು ನಡೆದಂತೆ ಇವನೇ ಹೇಳುತ್ತಾನೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ನಾರದಪರ್ವತೋಪಾಖ್ಯಾನೇ ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ನಾರದಪರ್ವತೋಪಾಖ್ಯಾನ ಎನ್ನುವ ಮೂವತ್ತನೇ ಅಧ್ಯಾಯವು.