ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 29
ಸಾರ
ಶ್ರೀಕೃಷ್ಣನು ನಾರದ-ಸೃಂಜಯರ ಸಂವಾದ ರೂಪದಲ್ಲಿ ಹದಿನಾರು ರಾಜರ ಉಪಾಖ್ಯಾನವನ್ನು ಸಂಕ್ಷಿಪ್ತವಾಗಿ ಹೇಳಿ ಯುಧಿಷ್ಠಿರನ ಶೋಕನಿವಾರಣೆಗೆ ಪ್ರಯತ್ನಿಸಿದುದು (1-141).
12029001 ವೈಶಂಪಾಯನ ಉವಾಚ।
12029001a ಅವ್ಯಾಹರತಿ ಕೌಂತೇಯೇ ಧರ್ಮಪುತ್ರೇ ಯುಧಿಷ್ಠಿರೇ।
12029001c ಗುಡಾಕೇಶೋ ಹೃಷೀಕೇಶಮಭ್ಯಭಾಷತ ಪಾಂಡವಃ।।
ವೈಶಂಪಾಯನನು ಹೇಳಿದನು: “ಕೌಂತೇಯ ಧರ್ಮಪುತ್ರ ಯುಧಿಷ್ಠಿರನು ಸುಮ್ಮನೇ ಕುಳಿತುಕೊಂಡಿರಲು ಗುಡಾಕೇಶ ಪಾಂಡವನು ಹೃಷೀಕೇಶನಿಗೆ ಇಂತೆಂದನು:
12029002a ಜ್ಞಾತಿಶೋಕಾಭಿಸಂತಪ್ತೋ ಧರ್ಮರಾಜಃ ಪರಂತಪಃ।
12029002c ಏಷ ಶೋಕಾರ್ಣವೇ ಮಗ್ನಸ್ತಮಾಶ್ವಾಸಯ ಮಾಧವ।।
“ಮಾಧವ! ಜ್ಞಾತಿಶೋಕದಿಂದ ಸಂತಪ್ತನಾಗಿರುವ ಧರ್ಮರಾಜ ಪರಂತಪನು ಈ ಶೋಕಸಾಗರದಲ್ಲಿ ಮುಳುಗಿಹೋಗಿದ್ದಾನೆ. ಅವನಿಗೆ ಸಮಾಧಾನ ಹೇಳು!
12029003a ಸರ್ವೇ ಸ್ಮ ತೇ ಸಂಶಯಿತಾಃ ಪುನರೇವ ಜನಾರ್ದನ।
12029003c ಅಸ್ಯ ಶೋಕಂ ಮಹಾಬಾಹೋ ಪ್ರಣಾಶಯಿತುಮರ್ಹಸಿ।।
ಜನಾರ್ದನ! ನಾವೆಲ್ಲರೂ ಪುನಃ ಸಂಶಯಕ್ಕೆ ಸಿಲುಕಿದ್ದೇವೆ. ಮಹಾಬಾಹೋ! ಈ ಶೋಕವನ್ನು ಹೋಗಲಾಡಿಸಬೇಕು!”
12029004a ಏವಮುಕ್ತಸ್ತು ಗೋವಿಂದೋ ವಿಜಯೇನ ಮಹಾತ್ಮನಾ।
12029004c ಪರ್ಯವರ್ತತ ರಾಜಾನಂ ಪುಂಡರೀಕೇಕ್ಷಣೋಽಚ್ಯುತಃ।।
ಮಹಾತ್ಮ ವಿಜಯನು ಹೀಗೆ ಹೇಳಲು ಅಚ್ಯುತ ಗೋವಿಂದನು ತಿರುಗಿ ರಾಜನಿಗೆ ಅಭಿಮುಖನಾಗಿ ಕುಳಿತನು.
12029005a ಅನತಿಕ್ರಮಣೀಯೋ ಹಿ ಧರ್ಮರಾಜಸ್ಯ ಕೇಶವಃ।
12029005c ಬಾಲ್ಯಾತ್ಪ್ರಭೃತಿ ಗೋವಿಂದಃ ಪ್ರೀತ್ಯಾ ಚಾಭ್ಯಧಿಕೋಽರ್ಜುನಾತ್।।
ಧರ್ಮರಾಜನು ಕೇಶವನ ಮಾತನ್ನು ಯಾವಾಗಲೂ ಉಲ್ಲಂಘಿಸಿದವನೇ ಅಲ್ಲ. ಏಕೆಂದರೆ ಬಾಲ್ಯದಿಂದಲೂ ಅವನಿಗೆ ಗೋವಿಂದನೇ ಅರ್ಜುನನಿಗಿಂತ ಅಧಿಕ ಪ್ರಿಯನಾಗಿದ್ದನು.
12029006a ಸಂಪ್ರಗೃಹ್ಯ ಮಹಾಬಾಹುರ್ಭುಜಂ ಚಂದನಭೂಷಿತಮ್।
12029006c ಶೈಲಸ್ತಂಭೋಪಮಂ ಶೌರಿರುವಾಚಾಭಿವಿನೋದಯನ್।।
ಆ ಮಹಾಬಾಹು ಶೌರಿಯು ಯುಧಿಷ್ಠಿರನ ಶೈಲಸ್ತಂಭದಂತಿದ್ದ ಚಂದನಭೂಷಿತ ಭುಜಗಳನ್ನು ಹಿಡಿದು ವಿನೋದದಿಂದ ಮಾತನಾಡತೊಡಗಿದನು.
12029007a ಶುಶುಭೇ ವದನಂ ತಸ್ಯ ಸುದಂಷ್ಟ್ರಂ ಚಾರುಲೋಚನಮ್।
12029007c ವ್ಯಾಕೋಶಮಿವ ವಿಸ್ಪಷ್ಟಂ ಪದ್ಮಂ ಸೂರ್ಯವಿಬೋಧಿತಮ್।।
ಸುಂದರ ಹಲ್ಲುಗಳಿಂದಲೂ ಸುಂದರ ಕಣ್ಣುಗಳಿಂದಲೂ ಕೂಡಿದ್ದ ಅವನ ಮುಖವು ಸೂರ್ಯೋದಯದ ಸಮಯದಲ್ಲಿ ಸಂಪೂರ್ಣವಾಗಿ ಅರಳಿದ ಕಮಲದಂತೆ ಪ್ರಕಾಶಿಸುತ್ತಿತ್ತು.
12029008a ಮಾ ಕೃಥಾಃ ಪುರುಷವ್ಯಾಘ್ರ ಶೋಕಂ ತ್ವಂ ಗಾತ್ರಶೋಷಣಮ್।
12029008c ನ ಹಿ ತೇ ಸುಲಭಾ ಭೂಯೋ ಯೇ ಹತಾಸ್ಮಿನ್ರಣಾಜಿರೇ।।
“ಪುರುಷವ್ಯಾಘ್ರ! ಶೋಕಿಸಬೇಡ! ಶೋಕವು ನಿನ್ನ ಶರೀರವನ್ನೇ ಶೋಷಿಸುತ್ತಿದೆ. ರಣರಂಗದಲ್ಲಿ ಹತರಾಗಿರುವವರು ಪುನಃ ನಿನಗೆ ಸುಲಭದಲ್ಲಿ ದೊರಕುವವರಲ್ಲ!
12029009a ಸ್ವಪ್ನಲಬ್ಧಾ ಯಥಾ ಲಾಭಾ ವಿತಥಾಃ ಪ್ರತಿಬೋಧನೇ।
12029009c ಏವಂ ತೇ ಕ್ಷತ್ರಿಯಾ ರಾಜನ್ಯೇ ವ್ಯತೀತಾ ಮಹಾರಣೇ।।
ಸ್ವಪ್ನದಲ್ಲಿ ಪಡೆದುಕೊಂಡ ಧನವು ಎಚ್ಚರವಾದೊಡನೆಯೇ ಇಲ್ಲವಾಗಿಬಿಡುವಂತೆ ರಾಜನ್! ಮಹಾರಣದಲ್ಲಿ ವಿನಾಶಹೊಂದಿರುವ ಕ್ಷತ್ರಿಯರು ಪುನಃ ದೊರಕಲಾರರು.
12029010a ಸರ್ವೇ ಹ್ಯಭಿಮುಖಾಃ ಶೂರಾ ವಿಗತಾ ರಣಶೋಭಿನಃ।
12029010c ನೈಷಾಂ ಕಶ್ಚಿತ್ಪೃಷ್ಠತೋ ವಾ ಪಲಾಯನ್ವಾಪಿ ಪಾತಿತಃ।।
ರಣಶೋಭಿಗಳಾಗಿದ್ದ ಆ ಎಲ್ಲ ಶೂರರೂ ಯುದ್ಧಕ್ಕೆ ಅಭಿಮುಖರಾಗಿಯೇ ಪ್ರಾಣಬಿಟ್ಟಿರುವರು. ಅವರಲ್ಲಿ ಯಾರೂ ಬೆನ್ನುಹಾಕಿ ಅಥವಾ ಪಲಾಯನಮಾಡಿ ಕೆಳಗುರುಳಲಿಲ್ಲ.
12029011a ಸರ್ವೇ ತ್ಯಕ್ತ್ವಾತ್ಮನಃ ಪ್ರಾಣಾನ್ಯುದ್ಧ್ವಾ ವೀರಾ ಮಹಾಹವೇ।
12029011c ಶಸ್ತ್ರಪೂತಾ ದಿವಂ ಪ್ರಾಪ್ತಾ ನ ತಾನ್ಶೋಚಿತುಮರ್ಹಸಿ।। 47
ಆ ವೀರರೆಲ್ಲರೂ ಮಹಾಹವದಲ್ಲಿ ಯುದ್ಧಮಾಡಿ ತಮ್ಮ ಪ್ರಾಣಗಳನ್ನು ತೊರೆದಿದ್ದಾರೆ. ಶಸ್ತ್ರಗಳಿಂದ ಪವಿತ್ರರಾಗಿ ಸ್ವರ್ಗವನ್ನು ಪಡೆದಿದ್ದಾರೆ. ಅವರ ಕುರಿತು ಶೋಕಿಸಬಾರದು.
12029012a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
12029012c ಸೃಂಜಯಂ ಪುತ್ರಶೋಕಾರ್ತಂ ಯಥಾಯಂ ಪ್ರಾಹ ನಾರದಃ।।
ಇದಕ್ಕೆ ಸಂಬಂಧಿಸಿದಂತೆ ಈ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಪುತ್ರಶೋಕಾರ್ತನಾದ ಸೃಂಜಯನಿಗೆ ನಾರದನು ಇದನ್ನು ಹೇಳಿದ್ದನು.
12029013a ಸುಖದುಃಖೈರಹಂ ತ್ವಂ ಚ ಪ್ರಜಾಃ ಸರ್ವಾಶ್ಚ ಸೃಂಜಯ।
12029013c ಅವಿಮುಕ್ತಂ ಚರಿಷ್ಯಾಮಸ್ತತ್ರ ಕಾ ಪರಿದೇವನಾ।।
“ಸೃಂಜಯ! ನಾನಾಗಲೀ, ನೀನಾಗಲೀ, ಈ ಎಲ್ಲ ಪ್ರಜೆಗಳಾಗಲೀ ಯಾರೂ ಸುಖ-ದುಃಖಗಳಿಂದ ವಿಮುಕ್ತರಾಗಿರುವುದಿಲ್ಲ. ನಾವೆಲ್ಲರೂ ಒಂದು ದಿನ ಸಾಯುತ್ತೇವೆ. ಅದಕ್ಕಾಗಿ ದುಃಖಿಸುವುದೇಕೆ?
12029014a ಮಹಾಭಾಗ್ಯಂ ಪರಂ ರಾಜ್ಞಾಂ ಕೀರ್ತ್ಯಮಾನಂ ಮಯಾ ಶೃಣು।
12029014c ಗಚ್ಚಾವಧಾನಂ ನೃಪತೇ ತತೋ ದುಃಖಂ ಪ್ರಹಾಸ್ಯಸಿ।।
ನಾನು ಈಗ ವರ್ಣಿಸುವ ರಾಜರ ಪರಮ ಮಹಾಭಾಗ್ಯದ ಕುರಿತು ಕೇಳು. ನೃಪತೇ! ಆಗಿ ಹೋಗಿರುವ ಇವರ ವಿಷಯವನ್ನು ಕೇಳಿ ನಿನ್ನ ದುಃಖವು ದೂರವಾಗಬಹುದು!
12029015a ಮೃತಾನ್ಮಹಾನುಭಾವಾಂಸ್ತ್ವಂ ಶ್ರುತ್ವೈವ ತು ಮಹೀಪತೀನ್।
12029015c ಶ್ರುತ್ವಾಪನಯ ಸಂತಾಪಂ ಶೃಣು ವಿಸ್ತರಶಶ್ಚ ಮೇ।। 48
ಮೃತರಾಗಿಹೋಗಿರುವ ಮಹಾನುಭಾವ ಮಹೀಪತಿಗಳ ಕುರಿತು ಕೇಳಿ ಸಂತಾಪವನ್ನು ಕಳೆದುಕೋ! ವಿಸ್ತಾರವಾಗಿ ಇದನ್ನು ನನ್ನಿಂದ ಕೇಳು!
12029016a ಆವಿಕ್ಷಿತಂ ಮರುತ್ತಂ ಮೇ ಮೃತಂ ಸೃಂಜಯ ಶುಶ್ರುಹಿ।
12029016c ಯಸ್ಯ ಸೇಂದ್ರಾಃ ಸವರುಣಾ ಬೃಹಸ್ಪತಿಪುರೋಗಮಾಃ।।
12029016e ದೇವಾ ವಿಶ್ವಸೃಜೋ ರಾಜ್ಞೋ ಯಜ್ಞಮೀಯುರ್ಮಹಾತ್ಮನಃ।।
ಸೃಂಜಯ! ಅವಿಕ್ಷಿತನ ಮಗ ಮರುತ್ತನೂ ಮೃತನಾದನೆಂದು ಕೇಳಿದ್ದೇವೆ. ಆ ರಾಜ ಮಹಾತ್ಮನ ಯಜ್ಞದಲ್ಲಿ ವರುಣ-ಬೃಹಸ್ಪತಿಗಳೊಂದಿಗೆ ಇಂದ್ರನನ್ನು ಮುಂದಿಟ್ಟುಕೊಂಡು ದೇವತೆಗಳು ಮತ್ತು ಪ್ರಜಾಪತಿಯೂ ಬಂದಿದ್ದರು.
12029017a ಯಃ ಸ್ಪರ್ಧಾಮನಯಚ್ಚಕ್ರಂ ದೇವರಾಜಂ ಶತಕ್ರತುಮ್।
12029017c ಶಕ್ರಪ್ರಿಯೈಷೀ ಯಂ ವಿದ್ವಾನ್ಪ್ರತ್ಯಾಚಷ್ಟ ಬೃಹಸ್ಪತಿಃ।।
12029017e ಸಂವರ್ತೋ ಯಾಜಯಾಮಾಸ ಯಂ ಪೀಡಾರ್ಥಂ ಬೃಹಸ್ಪತೇಃ।।
ಅವನು ಯಜ್ಞದಲ್ಲಿ ದೇವರಾಜ ಶತುಕ್ರತುವಿನೊಂದಿಗೆ ಸ್ಪರ್ಧಿಸಿ ಅವನನ್ನೂ ಸೋಲಿಸಿದ್ದನು. ಆಗ ಶಕ್ರಪ್ರಿಯ ವಿದ್ವಾನ್ ಬೃಹಸ್ಪತಿಯು ಯಜ್ಞಮಾಡಿಸುವುದಿಲ್ಲವೆಂದು ನಿರಾಕರಿಸಿದಾಗ ಬೃಹಸ್ಪತಿಯ ತಮ್ಮ ಸಂವರ್ತನು ಮರುತ್ತನಿಂದ ಯಜ್ಞಮಾಡಿಸಿದನು.
12029018a ಯಸ್ಮಿನ್ಪ್ರಶಾಸತಿ ಸತಾಂ ನೃಪತೌ ನೃಪಸತ್ತಮ।
12029018c ಅಕೃಷ್ಟಪಚ್ಯಾ ಪೃಥಿವೀ ವಿಬಭೌ ಚೈತ್ಯಮಾಲಿನೀ।।
ನೃಪತಿಗಳಲ್ಲಿ ಶ್ರೇಷ್ಠ ಆ ನೃಪಸತ್ತಮನು ರಾಜ್ಯವಾಳುತ್ತಿದ್ದಾಗ ಚೈತ್ಯಗಳ ಮಾಲೆಗಳಿಂದ ಕೂಡಿದ್ದ ಭೂಮಿಯಲ್ಲಿ ಕೃಷಿಯಿಲ್ಲದೇ ಬೆಳೆಗಳು ಬೆಳೆಯುತ್ತಿದ್ದವು.
12029019a ಆವಿಕ್ಷಿತಸ್ಯ ವೈ ಸತ್ರೇ ವಿಶ್ವೇ ದೇವಾಃ ಸಭಾಸದಃ।
12029019c ಮರುತಃ ಪರಿವೇಷ್ಟಾರಃ ಸಾಧ್ಯಾಶ್ಚಾಸನ್ಮಹಾತ್ಮನಃ।।
ಆವಿಕ್ಷಿತ ಮರುತ್ತನ ಆ ಸತ್ರದಲ್ಲಿ ವಿಶ್ವೇದೇವರು ಸಭಾಸದರಾಗಿದ್ದರು. ಮಹಾತ್ಮ ಮರುದ್ಗಣಗಳು ಮತ್ತು ಸಾಧ್ಯರು ಯಜ್ಞದಲ್ಲಿ ಭಾಗವಹಿಸಿದ್ದವರಿಗೆ ಉಣಬಡಿಸುವ ಪರಿಚಾರಕರಾಗಿದ್ದರು49.
12029020a ಮರುದ್ಗಣಾ ಮರುತ್ತಸ್ಯ ಯತ್ಸೋಮಮಪಿಬಂತ ತೇ।
12029020c ದೇವಾನ್ಮನುಷ್ಯಾನ್ಗಂಧರ್ವಾನತ್ಯರಿಚ್ಯಂತ ದಕ್ಷಿಣಾಃ।।
ಮರುತ್ತನ ಆ ಯಜ್ಞದಲ್ಲಿ ಮರುದ್ಗಣಗಳು ಸೋಮವನ್ನು ಕುಡಿದವು. ಮರುತ್ತನು ಕೊಟ್ಟ ದಕ್ಷಿಣೆಯು ದೇವ-ಮನುಷ್ಯ-ಗಂಧರ್ವರು ಯಜ್ಞಗಳಲ್ಲಿ ಕೊಡುವ ದಕ್ಷಿಣೆಗಳಿಗಿಂತ ಹೆಚ್ಚಾಗಿತ್ತು.
12029021a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029021c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯ ಈ ನಾಲ್ಕರಲ್ಲಿ ನಿನಗಿಂತಲೂ ಅಧಿಕನಾಗಿದ್ದ, ಮತ್ತು ನಿನ್ನ ಪುತ್ರನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಮರುತ್ತನೇ ಮರಣಹೊಂದಿದನೆಂದರೆ ನಿನ್ನ ಪುತ್ರನ ವಿಷಯವಾಗಿ ಹೇಳುವುದೇನಿದೆ? ಆದುದರಿಂದ ನಿನ್ನ ಮಗನ ವಿಯೋಗಕ್ಕಾಗಿ ದುಃಖಿಸಬೇಡ!
12029022a ಸುಹೋತ್ರಂ ಚೇದ್ವೈತಿಥಿನಂ ಮೃತಂ ಸೃಂಜಯ ಶುಶ್ರುಮ।
12029022c ಯಸ್ಮೈ ಹಿರಣ್ಯಂ ವವೃಷೇ ಮಗಹ್ವಾನ್ಪರಿವತ್ಸರಮ್।।
ಸೃಂಜಯ! ಅತಿಥಿಸತ್ಕಾರದಲ್ಲಿ ನಿರತನಾಗಿದ್ದ ಸುಹೋತ್ರನೂ ಮೃತನಾದನೆಂದು ಕೇಳಿದ್ದೇವೆ. ಅವನ ದೇಶದಲ್ಲಿ ಮಗಹ ಇಂದ್ರನು ಒಂದು ವರ್ಷದ ಕಾಲ ಚಿನ್ನದ ಮಳೆಯನ್ನೇ ಸುರಿಸಿದ್ದನು.
12029023a ಸತ್ಯನಾಮಾ ವಸುಮತೀ ಯಂ ಪ್ರಾಪ್ಯಾಸೀಜ್ಜನಾಧಿಪ।
12029023c ಹಿರಣ್ಯಮವಹನ್ನದ್ಯಸ್ತಸ್ಮಿನ್ಜನಪದೇಶ್ವರೇ।।
ಸುಹೋತ್ರನನ್ನು ರಾಜನನ್ನಾಗಿ ಪಡೆದ ಭೂಮಿಯು ವಸುಮತೀ ಎಂಬ ಹೆಸರಿನ ಸಾರ್ಥಕತೆಯನ್ನು ಪಡೆಯಿತು. ಆ ಜನಪದೇಶ್ವರದಲ್ಲಿ ನದಿಗಳು ಸುವರ್ಣದ ನೀರಿನಿಂದ ಹರಿಯುತ್ತಿದ್ದವು.
12029024a ಕೂರ್ಮಾನ್ಕರ್ಕಟಕಾನ್ನಕ್ರಾನ್ಮಕರಾನ್ಶಿಂಶುಕಾನಪಿ।
12029024c ನದೀಷ್ವಪಾತಯದ್ರಾಜನ್ಮಘವಾ ಲೋಕಪೂಜಿತಃ।।
ರಾಜನ್! ಲೋಕಪೂಜಿತ ಮಘವ ಇಂದ್ರನು ಆ ನದಿಗಳಲ್ಲಿ ಚಿನ್ನದ ಆಮೆ-ಏಡಿ-ಮೊಸಳೆ-ಮೀನು-ಕಡಲಹಂದಿಗಳನ್ನು ಬಿಟ್ಟಿದ್ದನು.
12029025a ಹೈರಣ್ಯಾನ್ಪತಿತಾನ್ದೃಷ್ಟ್ವಾ ಮತ್ಸ್ಯಾನ್ಮಕರಕಚ್ಚಪಾನ್।
12029025c ಸಹಸ್ರಶೋಽಥ ಶತಶಸ್ತತೋಽಸ್ಮಯತ ವೈತಿಥಿಃ।।
ನೂರಾರು ಸಾವಿರಾರು ಹಿರಣ್ಮಯ ಮೀನು-ಮೊಸಳೆ-ಆಮೆಗಳು ಬಿದ್ದುದನ್ನು ನೋಡಿ ಅತಿಥಿಸತ್ಕಾರಗಳಲ್ಲಿಯೇ ಆಸಕ್ತನಾಗಿದ್ದ ಸುಹೋತ್ರನು ವಿಸ್ಮಯಗೊಂಡನು.
12029026a ತದ್ಧಿರಣ್ಯಮಪರ್ಯಂತಮಾವೃತ್ತಂ ಕುರುಜಾಂಗಲೇ।
12029026c ಈಜಾನೋ ವಿತತೇ ಯಜ್ಞೇ ಬ್ರಾಹ್ಮಣೇಭ್ಯಃ ಸಮಾಹಿತಃ।।
ಕುರುಜಾಂಗಲದ ಎಲ್ಲಕಡೆ ವ್ಯಾಪಿಸಿದ್ದ ಆ ಹಿರಣ್ಯವನ್ನು ಸಮಾಹಿತನಾದ ಸುಹೋತ್ರನು ಯಜ್ಞಗಳನ್ನು ನಡೆಸಿ ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿತ್ತನು.
12029027a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029027c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
12029027e ಅದಕ್ಷಿಣಮಯಜ್ವಾನಂ ಶ್ವೈತ್ಯ ಸಂಶಾಮ್ಯ ಮಾ ಶುಚಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಸುಹೋತ್ರನೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಹೇಳುವುದೇನಿದೆ? ದಕ್ಷಿಣೆಗಳನ್ನು ನೀಡದಿದ್ದ, ಯಜ್ಞಗಳನ್ನು ಯಾಜಿಸದಿದ್ದ ಅವನ ಕುರಿತು ಶೋಕಿಸಬೇಡ. ಸಮಾಧಾನ ತಾಳು!
12029028a ಅಂಗಂ ಬೃಹದ್ರಥಂ ಚೈವ ಮೃತಂ ಶುಶ್ರುಮ ಸೃಂಜಯ।
12029028c ಯಃ ಸಹಸ್ರಂ ಸಹಸ್ರಾಣಾಂ ಶ್ವೇತಾನಶ್ವಾನವಾಸೃಜತ್।।
12029029a ಸಹಸ್ರಂ ಚ ಸಹಸ್ರಾಣಾಂ ಕನ್ಯಾ ಹೇಮವಿಭೂಷಿತಾಃ।
12029029c ಈಜಾನೋ ವಿತತೇ ಯಜ್ಞೇ ದಕ್ಷಿಣಾಮತ್ಯಕಾಲಯತ್50।।
ಸೃಂಜಯ! ಅಂಗದೇಶದ ರಾಜ ಬೃಹದ್ರಥನೂ ಕೂಡ ಮೃತನಾದನೆಂದು ಕೇಳಿದ್ದೇವೆ. ಅವನು ಮಾಡಿದ ವಿಸ್ತಾರ ಯಜ್ಞದಲ್ಲಿ ಹತ್ತು ಲಕ್ಷ ಬಿಳೀ ಕುದುರೆಗಳನ್ನು ಸಿಂಗರಿಸಿ, ಹತ್ತು ಲಕ್ಷ ಹೇಮವಿಭೂಷಿತ ಕನ್ಯೆಯರೊಂದಿಗೆ ದಕ್ಷಿಣೆಯನ್ನಾಗಿತ್ತಿದ್ದನು.
12029030a ಶತಂ ಶತಸಹಸ್ರಾಣಾಂ ವೃಷಾಣಾಂ ಹೇಮಮಾಲಿನಾಮ್।
12029030c ಗವಾಂ ಸಹಸ್ರಾನುಚರಂ ದಕ್ಷಿಣಾಮತ್ಯಕಾಲಯತ್।।
ಅವನು ಹತ್ತು ಲಕ್ಷ ಹೇಮಮಾಲೆಗಳನ್ನು ಧರಿಸಿದ್ದ ಹೋರಿಗಳನ್ನು ಮತ್ತು ಗೋವುಗಳನ್ನೂ ಸಹಸ್ರ ಅನುಚರರೊಂದಿಗೆ ದಕ್ಷಿಣೆಯನ್ನಾಗಿತ್ತಿದ್ದನು.
12029031a ಅಂಗಸ್ಯ ಯಜಮಾನಸ್ಯ ತದಾ ವಿಷ್ಣುಪದೇ ಗಿರೌ।
12029031c ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ।।
ವಿಷ್ಣುಪದ ಗಿರಿಯಲ್ಲಿ ಅಂಗರಾಜನು ಯಜ್ಞಮಾಡಿದಾಗ ಇಂದ್ರನು ಸೋಮದಿಂದ ಮತ್ತು ಬ್ರಾಹ್ಮಣರು ದಕ್ಷಿಣೆಗಳಿಂದ ಮತ್ತರಾಗಿ ಹೋದರು!
12029032a ಯಸ್ಯ ಯಜ್ಞೇಷು ರಾಜೇಂದ್ರ ಶತಸಂಖ್ಯೇಷು ವೈ ಪುನಃ।
12029032c ದೇವಾನ್ಮನುಷ್ಯಾನ್ಗಂಧರ್ವಾನತ್ಯರಿಚ್ಯಂತ ದಕ್ಷಿಣಾಃ।।
ರಾಜೇಂದ್ರ! ಈ ರೀತಿ ಬೃಹದ್ರಥನು ದೇವ-ಮನುಷ್ಯ-ಗಂಧರ್ವರು ಯಜ್ಞಗಳಲ್ಲಿ ನೀಡುವ ದಕ್ಷಿಣೆಗಳಿಗಿಂತ ಹೆಚ್ಚು ದಕ್ಷಿಣೆಗಳನ್ನಿತ್ತು ನೂರಾರು ಯಜ್ಞಗಳನ್ನು ಮಾಡಿದನು.
12029033a ನ ಜಾತೋ ಜನಿತಾ ಚಾನ್ಯಃ ಪುಮಾನ್ಯಸ್ತತ್ಪ್ರದಾಸ್ಯತಿ।
12029033c ಯದಂಗಃ ಪ್ರದದೌ ವಿತ್ತಂ ಸೋಮಸಂಸ್ಥಾಸು ಸಪ್ತಸು।।
ಅಂಗರಾಜನು ಏಳು ಸೋಮಸಂಸ್ಥ51ಗಳಲ್ಲಿ ಎಷ್ಟು ವಿತ್ತವನ್ನು ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿತ್ತನೋ ಅಷ್ಟು ವಿತ್ತವನ್ನು ದಾನಮಾಡಿದವರು ಹಿಂದೆಯೂ ಹುಟ್ಟಲಿಲ್ಲ, ಮುಂದೆಯೂ ಹುಟ್ಟುವುದಿಲ್ಲ.
12029034a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029034c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಬೃಹದ್ರಥನೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಶೋಕಿಸಬೇಡ.
12029035a ಶಿಬಿಮೌಶೀನರಂ ಚೈವ ಮೃತಂ ಶುಶ್ರುಮ ಸೃಂಜಯ।
12029035c ಯ ಇಮಾಂ ಪೃಥಿವೀಂ ಕೃತ್ಸ್ನಾಂ ಚರ್ಮವತ್ಸಮವೇಷ್ಟಯತ್।।
ಸೃಂಜಯ! ಉಶೀನರನ ಮಗ ಶಿಬಿಯೂ ಕೂಡ ಮೃತನಾದನೆಂದು ಕೇಳಿದ್ದೇವೆ. ಅವನು ಇಡೀ ಪೃಥ್ವಿಯನ್ನು ಚರ್ಮದಂತೆ ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದನು.
12029036a ಮಹತಾ ರಥಘೋಷೇಣ ಪೃಥಿವೀಮನುನಾದಯನ್।
12029036c ಏಕಚ್ಚತ್ರಾಂ ಮಹೀಂ ಚಕ್ರೇ ಜೈತ್ರೇಣೈಕರಥೇನ ಯಃ।।
ಅವನು ಮಹಾ ರಥಘೋಷದಿಂದ ಇಡೀ ಪೃಥ್ವಿಯಲ್ಲಿಯೇ ಪ್ರತಿಧ್ವನಿಗೊಳಿಸುತ್ತಾ ಒಂದೇ ಒಂದು ರಥಯಾತ್ರೆಯಿಂದ ಇಡೀ ಭೂಮಿಯನ್ನು ಒಂದು ಶಾಸನದಡಿಗೆ ತಂದನು.
12029037a ಯಾವದದ್ಯ ಗವಾಶ್ವಂ ಸ್ಯಾದಾರಣ್ಯೈಃ ಪಶುಭಿಃ ಸಹ।
12029037c ತಾವತೀಃ ಪ್ರದದೌ ಗಾಃ ಸ ಶಿಬಿರೌಶೀನರೋಽಧ್ವರೇ।।
ಔಶೀನರ ಶಿಬಿಯು ಇಂದು ಎಷ್ಟು ಗೋವುಗಳಿವೆಯೋ ಮತ್ತು ಅರಣ್ಯಗಳಲ್ಲಿ ಎಷ್ಟು ಪಶುಗಳಿವೆಯೋ ಅಷ್ಟೇ ಸಂಖ್ಯೆಯ ಗೋವುಗಳನ್ನು ಯಜ್ಞಗಳಲ್ಲಿ ದಾನವನ್ನಾಗಿತ್ತಿದ್ದನು.
12029038a ನೋದ್ಯಂತಾರಂ ಧುರಂ ತಸ್ಯ ಕಂ ಚಿನ್ಮೇನೇ ಪ್ರಜಾಪತಿಃ।
12029038c ನ ಭೂತಂ ನ ಭವಿಷ್ಯಂತಂ ಸರ್ವರಾಜಸು ಭಾರತ।।
12029038e ಅನ್ಯತ್ರೌಶೀನರಾಚ್ಚೈಬ್ಯಾದ್ರಾಜರ್ಷೇರಿಂದ್ರವಿಕ್ರಮಾತ್।।
ಭಾರತ! ಎಲ್ಲ ರಾಜರುಗಳಿಗೆ ತುಲನೆ ಮಾಡಿದರೆ, ಇಂದ್ರವಿಕ್ರಮಿ ರಾಜರ್ಷಿ ಔಶೀನರನಂತೆ ರಾಜ್ಯಭಾರವನ್ನಾಗಲೀ ಮತ್ತು ಕಾರ್ಯಭಾರವನ್ನಾಗಲೀ ವಹಿಸಲು ಸಮರ್ಥರಾಜನು ಬೇರೆ ಯಾರೂ ಇರಲಿಲ್ಲ ಮತ್ತು ಮುಂದೆ ಇರುವುದಿಲ್ಲ ಎನ್ನುವುದು ಪ್ರಜಾಪತಿಯ ಅಭಿಪ್ರಾಯವಾಗಿತ್ತು.
12029039a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029039c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
12029039e ಅದಕ್ಷಿಣಮಯಜ್ವಾನಂ ತಂ ವೈ ಸಂಶಾಮ್ಯ ಮಾ ಶುಚಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಶಿಬಿಯೂ ಮೃತನಾದನೆಂದಮೇಲೆ ನಿನ್ನ ಪುತ್ರನ ವಿಷಯದಲ್ಲಿ ಹೇಳುವುದೇನಿದೆ? ದಕ್ಷಿಣೆಗಳನ್ನು ನೀಡದಿದ್ದ, ಯಜ್ಞಗಳನ್ನು ಯಾಜಿಸದಿದ್ದ ಅವನ ಕುರಿತು ಶೋಕಿಸಬೇಡ. ಸಮಾಧಾನ ತಾಳು!
12029040a ಭರತಂ ಚೈವ ದೌಃಷಂತಿಂ ಮೃತಂ ಸೃಂಜಯ ಶುಶ್ರುಮ।
12029040c ಶಾಕುಂತಲಿಂ ಮಹೇಷ್ವಾಸಂ ಭೂರಿದ್ರವಿಣತೇಜಸಮ್।।
ಸೃಂಜಯ! ದುಃಷಂತ-ಶಕುಂತಲೆಯರ ಮಗ, ಮಹೇಶ್ವಾಸ, ಮಹಾ ಧನಿಕನೂ ತೇಜಸ್ವಿಯೂ ಆಗಿದ್ದ ಭರತನೂ ಮೃತನಾದನೆಂದು ಕೇಳಿದ್ದೇವೆ.
12029041a ಯೋ ಬದ್ಧ್ವಾ ತ್ರಿಂಶತೋ ಹ್ಯಶ್ವಾನ್ದೇವೇಭ್ಯೋ ಯಮುನಾಮನು।
12029041c ಸರಸ್ವತೀಂ ವಿಂಶತಿಂ ಚ ಗಂಗಾಮನು ಚತುರ್ದಶ।।
ಅವನು ದೇವತೆಗಳ ಸಲುವಾಗಿ ಯಮುನಾನದಿಯ ತಟದಲ್ಲಿ ಮುನ್ನೂರು, ಸರಸ್ವತೀ ತೀರದಲ್ಲಿ ಇಪ್ಪತ್ತು ಮತ್ತು ಗಂಗಾತೀರದಲ್ಲಿ ಹದಿನಾಲ್ಕು ಅಶ್ವಮೇಧ ಯಜ್ಞಗಳನ್ನು ನಡೆಸಿದನು.
12029042a ಅಶ್ವಮೇಧಸಹಸ್ರೇಣ ರಾಜಸೂಯಶತೇನ ಚ।
12029042c ಇಷ್ಟವಾನ್ಸ ಮಹಾತೇಜಾ ದೌಃಷಂತಿರ್ಭರತಃ ಪುರಾ।।
ಹಿಂದೆ ದುಃಷಂತನ ಮಗ ಮಹಾತೇಜಸ್ವೀ ಭರತನು ಸಹಸ್ರ ಅಶ್ವಮೇಧಗಳಿಂದಲೂ ಮತ್ತು ನೂರು ರಾಜಸೂಯ ಯಜ್ಞಗಳಿಂದಲೂ ದೇವತೆಗಳನ್ನು ತೃಪ್ತಿಪಡಿಸಿದ್ದನು.
12029043a ಭರತಸ್ಯ ಮಹತ್ಕರ್ಮ ಸರ್ವರಾಜಸು ಪಾರ್ಥಿವಾಃ।
12029043c ಖಂ ಮರ್ತ್ಯಾ ಇವ ಬಾಹುಭ್ಯಾಂ ನಾನುಗಂತುಮಶಕ್ನುವನ್।।
ಮನುಷ್ಯನು ತನ್ನೆರಡು ಬಾಹುಗಳ ಮಾತ್ರದಿಂದ ಆಕಾಶವನ್ನೇರಲು ಹೇಗೆ ಸಾಧ್ಯವಿಲ್ಲವೋ ಹಾಗೆ ವಿಶ್ವದ ಎಲ್ಲ ರಾಜ-ಪಾರ್ಥಿವರೂ ಭರತನಂಥಹ ಮಹಾಕಾರ್ಯಗಳನ್ನು ಮಾಡಲಾರದೇ ಹೋದರು.
12029044a ಪರಂ ಸಹಸ್ರಾದ್ಯೋ ಬದ್ಧ್ವಾ ಹಯಾನ್ವೇದೀಂ ವಿಚಿತ್ಯ ಚ।
12029044c ಸಹಸ್ರಂ ಯತ್ರ ಪದ್ಮಾನಾಂ ಕಣ್ವಾಯ ಭರತೋ ದದೌ।।
ಭರತನು ಸಾವಿರಕ್ಕೂ ಅಧಿಕ ಕುದುರೆಗಳನ್ನು ಕಟ್ಟಿ ವೇದಿಗಳನ್ನು ವಿಸ್ತರಿಸಿ ಅಶ್ವಮೇಧಯಾಗಗಳನ್ನು ಮಾಡಿದನು. ಯಜ್ಞಗಳಲ್ಲಿ ಅವನು ಕಣ್ವನಿಗೆ ಸಹಸ್ರ ಚಿನ್ನದ ಕಮಲಗಳನ್ನು ದಾನವಾಗಿ ಕೊಟ್ಟಿದ್ದನು.
12029045a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029045c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಭರತನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029046a ರಾಮಂ ದಾಶರಥಿಂ ಚೈವ ಮೃತಂ ಶುಶ್ರುಮ ಸೃಂಜಯ।
12029046c ಯೋಽನ್ವಕಂಪತ ವೈ ನಿತ್ಯಂ ಪ್ರಜಾಃ ಪುತ್ರಾನಿವೌರಸಾನ್।।
ಸೃಂಜಯ! ನಿತ್ಯವೂ ತನ್ನ ಔರಸಪುತ್ರರಂತೆ ಪ್ರಜೆಗಳನ್ನು ಅನುಕಂಪದಿಂದ ಕಾಣುತ್ತಿದ್ದ ದಾಶರಥಿ ರಾಮನೂ ಕೂಡ ಮೃತನಾದನೆಂದು ಕೇಳಿದ್ದೇವೆ.
12029047a ವಿಧವಾ ಯಸ್ಯ ವಿಷಯೇ ನಾನಾಥಾಃ ಕಾಶ್ಚನಾಭವನ್।
12029047c ಸರ್ವಸ್ಯಾಸೀತ್ಪಿತೃಸಮೋ ರಾಮೋ ರಾಜ್ಯಂ ಯದಾನ್ವಶಾತ್।।
ರಾಮನು ರಾಜ್ಯವಾಳುತ್ತಿದ್ದಾಗ ಅವನ ರಾಜ್ಯದಲ್ಲಿ ಅನಾಥ ವಿಧವೆಯರ್ಯಾರೂ ಇರಲಿಲ್ಲ. ಅವನು ಸರ್ವರಿಗೂ ಪಿತೃಸಮನಾಗಿದ್ದನು.
12029048a ಕಾಲವರ್ಷಾಶ್ಚ ಪರ್ಜನ್ಯಾಃ ಸಸ್ಯಾನಿ ರಸವಂತಿ ಚ।
12029048c ನಿತ್ಯಂ ಸುಭಿಕ್ಷಮೇವಾಸೀದ್ರಾಮೇ ರಾಜ್ಯಂ ಪ್ರಶಾಸತಿ।।
ರಾಮನು ರಾಜ್ಯವಾಳುತ್ತಿದ್ದಾಗ ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆಸುರಿಸುತ್ತಿದ್ದನು. ಸಸ್ಯಗಳು ರಸವತ್ತಾಗಿದ್ದವು.
12029049a ಪ್ರಾಣಿನೋ ನಾಪ್ಸು ಮಜ್ಜಂತಿ ನಾನರ್ಥೇ ಪಾವಕೋಽದಹತ್।
12029049c ನ ವ್ಯಾಲಜಂ ಭಯಂ ಚಾಸೀದ್ರಾಮೇ ರಾಜ್ಯಂ ಪ್ರಶಾಸತಿ।।
ರಾಮನು ರಾಜ್ಯವಾಳುತ್ತಿದ್ದಾಗ ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾಯುತ್ತಿರಲಿಲ್ಲ. ಅನರ್ಥಕವಾಗಿ ಅಗ್ನಿಯು ಯಾರನ್ನೂ ಸುಡುತ್ತಿರಲಿಲ್ಲ. ಯಾರಿಗೂ ಸರ್ಪಗಳ ಭಯವಿರಲಿಲ್ಲ.
12029050a ಆಸನ್ವರ್ಷಸಹಸ್ರಾಣಿ ತಥಾ ಪುತ್ರಸಹಸ್ರಿಕಾಃ।
12029050c ಅರೋಗಾಃ ಸರ್ವಸಿದ್ಧಾರ್ಥಾಃ ಪ್ರಜಾ ರಾಮೇ ಪ್ರಶಾಸತಿ।।
ರಾಮನು ರಾಜ್ಯವಾಳುತ್ತಿದ್ದಾಗ ಸ್ತ್ರೀಯರು ಸಾವಿರವರ್ಷ ಜೀವಿಸುತ್ತಿದ್ದರು ಮತ್ತು ಸಾವಿರ ಮಕ್ಕಳನ್ನು ಪಡೆಯುತ್ತಿದ್ದರು. ಸರ್ವರೂ ಸಿದ್ಧಾರ್ಥರಾಗಿ ಅರೋಗಿಗಳಾಗಿದ್ದರು.
12029051a ನಾನ್ಯೋನ್ಯೇನ ವಿವಾದೋಽಭೂತ್ಸ್ತ್ರೀಣಾಮಪಿ ಕುತೋ ನೃಣಾಮ್।
12029051c ಧರ್ಮನಿತ್ಯಾಃ ಪ್ರಜಾಶ್ಚಾಸನ್ರಾಮೇ ರಾಜ್ಯಂ ಪ್ರಶಾಸತಿ।।
ರಾಮನು ರಾಜ್ಯವಾಳುತ್ತಿದ್ದಾಗ ಅನ್ಯೋನ್ಯ ಸ್ತ್ರೀಯರಲ್ಲಿಯೇ ಯಾವುದೇ ವಿವಾದಗಳಿರುತ್ತಿರಲಿಲ್ಲ. ಇನ್ನು ಅನ್ಯೋನ್ಯ ಪುರುಷರಲ್ಲಿ ವಿವಾದಗಳೇನು? ಪ್ರಜೆಗಳು ನಿತ್ಯವೂ ಧರ್ಮನಿರತರಾಗಿದ್ದರು. 5212029052a ನಿತ್ಯಪುಷ್ಪಫಲಾಶ್ಚೈವ ಪಾದಪಾ ನಿರುಪದ್ರವಾಃ।
12029052c ಸರ್ವಾ ದ್ರೋಣದುಘಾ ಗಾವೋ ರಾಮೇ ರಾಜ್ಯಂ ಪ್ರಶಾಸತಿ।।
ರಾಮನು ರಾಜ್ಯವಾಳುತ್ತಿದ್ದಾಗ ಮರಗಳು ಉಪದ್ರವಗಳಿಲ್ಲದೇ ನಿತ್ಯವೂ ಪುಷ್ಪ-ಫಲಗಳನ್ನು ನೀಡುತ್ತಿದ್ದವು. ಎಲ್ಲ ಹಸುಗಳೂ ಪಾತ್ರೆಗಳ ತುಂಬ ಹಾಲನ್ನು ನೀಡುತ್ತಿದ್ದವು.
12029053a ಸ ಚತುರ್ದಶ ವರ್ಷಾಣಿ ವನೇ ಪ್ರೋಷ್ಯ ಮಹಾತಪಾಃ।
12029053c ದಶಾಶ್ವಮೇಧಾನ್ಜಾರೂಥ್ಯಾನಾಜಹಾರ ನಿರರ್ಗಲಾನ್।।
ಮಹಾತಪಸ್ವಿ ರಾಮನು ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ದಶಾಶ್ವಮೇಧಗಳನ್ನು ನೆರವೇರಿಸಿ ನಿರರ್ಗಲ ಭೋಜನಗಳನ್ನಿತ್ತನು.
12029054a ಶ್ಯಾಮೋ ಯುವಾ ಲೋಹಿತಾಕ್ಷೋ ಮತ್ತವಾರಣವಿಕ್ರಮಃ53।
12029054c ದಶ ವರ್ಷಸಹಸ್ರಾಣಿ ರಾಮೋ ರಾಜ್ಯಮಕಾರಯತ್54।।
ಶ್ಯಾಮವರ್ಣದ ಯುವಕ, ಲೋಹಿತಾಕ್ಷ, ಮದಿಸಿದ ಆನೆಯ ವಿಕ್ರಮವುಳ್ಳ ರಾಮನು ಹತ್ತು ಸಾವಿರ ವರ್ಷಗಳು ರಾಜ್ಯಭಾರವನ್ನು ಮಾಡಿದನು.
12029055a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029055c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ರಾಮನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029056a ಭಗೀರಥಂ ಚ ರಾಜಾನಂ ಮೃತಂ ಶುಶ್ರುಮ ಸೃಂಜಯ।
12029056c ಯಸ್ಯೇಂದ್ರೋ ವಿತತೇ ಯಜ್ಞೇ ಸೋಮಂ ಪೀತ್ವಾ ಮದೋತ್ಕಟಃ।।
12029057a ಅಸುರಾಣಾಂ ಸಹಸ್ರಾಣಿ ಬಹೂನಿ ಸುರಸತ್ತಮಃ।
12029057c ಅಜಯದ್ಬಾಹುವೀರ್ಯೇಣ ಭಗವಾನ್ಪಾಕಶಾಸನಃ।।
ಸೃಂಜಯ! ರಾಜಾ ಭಗೀರಥನೂ ಮೃತನಾದನೆಂದು ಕೇಳಿದ್ದೇವೆ. ಅವನ ಯಜ್ಞದಲ್ಲಿ ಭಗವಾನ್ ಪಾಕಶಾಸನ ಸುರಸತ್ತಮ ಇಂದ್ರನು ಸೋಮವನ್ನು ಕುಡಿದು ಮತೋತ್ಕಟನಾಗಿ ತನ್ನ ಬಾಹುವೀರ್ಯದಿಂದ ಅನೇಕ ಸಹಸ್ರ ಅಸುರರನ್ನು ಗೆದ್ದನು.
12029058a ಯಃ ಸಹಸ್ರಂ ಸಹಸ್ರಾಣಾಂ ಕನ್ಯಾ ಹೇಮವಿಭೂಷಿತಾಃ।
12029058c ಈಜಾನೋ ವಿತತೇ ಯಜ್ಞೇ ದಕ್ಷಿಣಾಮತ್ಯಕಾಲಯತ್।।
ಅವನು ಯಜ್ಞಮಾಡುತ್ತಿರುವಾಗ ಹತ್ತು ಲಕ್ಷ ಹೇಮವಿಭೂಷಿತ ಕನ್ಯೆಯರನ್ನು ದಕ್ಷಿಣೆಯಾಗಿ ನೀಡಿದ್ದನು.
12029059a ಸರ್ವಾ ರಥಗತಾಃ ಕನ್ಯಾ ರಥಾಃ ಸರ್ವೇ ಚತುರ್ಯುಜಃ।
12029059c ರಥೇ ರಥೇ ಶತಂ ನಾಗಾಃ ಪದ್ಮಿನೋ ಹೇಮಮಾಲಿನಃ।।
ಆ ಕನ್ಯೆಯರೆಲ್ಲರೂ ಪ್ರತ್ಯೇಕ ರಥಗಳಲ್ಲಿ ಕುಳಿತಿದ್ದರು. ಪ್ರತಿ ರಥಕ್ಕೂ ನಾಲ್ಕು ಕುದುರೆಗಳನ್ನು ಕಟ್ಟಿದ್ದರು. ಪ್ರತಿಯೊಂದು ರಥದ ಹಿಂದೂ ಪದ್ಮಗಳಿಂದ ಅಲಂಕೃತಗೊಂಡ ಹೇಮಮಾಲೀ ನೂರು ಆನೆಗಳು ಹೋಗುತ್ತಿದ್ದವು.
12029060a ಸಹಸ್ರಮಶ್ವಾ ಏಕೈಕಂ ಹಸ್ತಿನಂ ಪೃಷ್ಠತೋಽನ್ವಯುಃ।
12029060c ಗವಾಂ ಸಹಸ್ರಮಶ್ವೇಽಶ್ವೇ ಸಹಸ್ರಂ ಗವ್ಯಜಾವಿಕಮ್।।
ಒಂದೊಂದು ಆನೆಯ ಹಿಂದೆಯೂ ಸಾವಿರ ಕುದುರೆಗಳು ಅನುಸರಿಸಿ ಹೋಗುತ್ತಿದ್ದವು. ಒಂದೊಂದು ಕುದುರೆಯ ಹಿಂದೆ ಸಹಸ್ರ ಗೋವುಗಳಿದ್ದವು ಮತ್ತು ಒಂದೊಂದು ಗೋವಿನ ಹಿಂದೆಯೂ ಸಹಸ್ರ ಆಡುಗಳಿದ್ದವು.
12029061a ಉಪಹ್ವರೇ ನಿವಸತೋ ಯಸ್ಯಾಂಕೇ ನಿಷಸಾದ ಹ।
12029061c ಗಂಗಾ ಭಾಗೀರಥೀ ತಸ್ಮಾದುರ್ವಶೀ ಹ್ಯಭವತ್ಪುರಾ।।
ಹಿಂದೆ ಅವನು ಗಂಗಾತೀರದಲ್ಲಿ ವಾಸಿಸುತ್ತಿದ್ದಾಗ ಗಂಗೆಯು ಬಂದು ಅವನ ತೊಡೆಯಮೇಲೆ ಕುಳಿತುಕೊಳ್ಳುತ್ತಿದ್ದಳು. ಅದರಿಂದ ಅವಳಿಗೆ ಭಾಗೀರಥೀ ಮತ್ತು ಉರ್ವಶೀ ಎಂಬ ಹೆಸರುಗಳು ಬಂದವು.
12029062a ಭೂರಿದಕ್ಷಿಣಮಿಕ್ಷ್ವಾಕುಂ ಯಜಮಾನಂ ಭಗೀರಥಮ್।
12029062c ತ್ರಿಲೋಕಪಥಗಾ ಗಂಗಾ ದುಹಿತೃತ್ವಮುಪೇಯುಷೀ।।
ಭೂರಿದಕ್ಷಿಣೆಗಳನ್ನು ನೀಡುತ್ತಾ ಯಜ್ಞಮಾಡುತ್ತಿದ್ದ ಇಕ್ಷ್ವಾಕು ಕುಲದ ಭಗೀರಥನನ್ನು ತ್ರಿಲೋಕಪಥಗೆ ಗಂಗೆಯು ತಂದೆಯನ್ನಾಗಿ ಮಾಡಿಕೊಂಡಳು.
12029063a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029063c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಭಗೀರಥನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029064a ದಿಲೀಪಂ ಚೈವೈಲವಿಲಂ ಮೃತಂ ಶುಶ್ರುಮ ಸೃಂಜಯ।
12029064c ಯಸ್ಯ ಕರ್ಮಾಣಿ ಭೂರೀಣಿ ಕಥಯಂತಿ ದ್ವಿಜಾತಯಃ।।
ಸೃಂಜಯ! ಯಾರ ಮಹತ್ಕಾರ್ಯಗಳನ್ನು ಬ್ರಾಹ್ಮಣರು ಈಗಲೂ ಹೇಳಿಕೊಳ್ಳುತ್ತಾರೋ ಆ ದಿಲೀಪನೂ ಕೂಡ ಮೃತನಾದನೆಂದು ಕೇಳಿದ್ದೇವೆ.
12029065a ಇಮಾಂ ವೈ ವಸುಸಂಪನ್ನಾಂ ವಸುಧಾಂ ವಸುಧಾಧಿಪಃ।
12029065c ದದೌ ತಸ್ಮಿನ್ಮಹಾಯಜ್ಞೇ ಬ್ರಾಹ್ಮಣೇಭ್ಯಃ ಸಮಾಹಿತಃ।।
ಆ ವಸುಧಾಧಿಪನು ಮಹಾಯಜ್ಞದಲ್ಲಿ ಬಂದು ಸೇರಿದ್ದ ಬ್ರಾಹ್ಮಣರಿಗೆ ವಸುಸಂಪನ್ನವಾದ ಈ ವಸುಧೆಯನ್ನು ದಾನವನ್ನಾಗಿತ್ತನು.
12029066a ತಸ್ಯೇಹ ಯಜಮಾನಸ್ಯ ಯಜ್ಞೇ ಯಜ್ಞೇ ಪುರೋಹಿತಃ।
12029066c ಸಹಸ್ರಂ ವಾರಣಾನ್ ಹೈಮಾನ್ದಕ್ಷಿಣಾಮತ್ಯಕಾಲಯತ್।।
ಅವನು ಯಜಮಾನನಾಗಿದ್ದ ಯಜ್ಞ-ಯಜ್ಞಗಳಲ್ಲಿಯೂ ಪುರೋಹಿತನು ಸಹಸ್ರ ಸುವರ್ಣದ ಆನೆಗಳನ್ನು ದಕ್ಷಿಣಾರೂಪವಾಗಿ ಕೊಂಡೊಯ್ಯುತ್ತಿದ್ದನು.
12029067a ಯಸ್ಯ ಯಜ್ಞೇ ಮಹಾನಾಸೀದ್ಯೂಪಃ ಶ್ರೀಮಾನ್ಹಿರಣ್ಮಯಃ।
12029067c ತಂ ದೇವಾಃ ಕರ್ಮ ಕುರ್ವಾಣಾಃ ಶಕ್ರಜ್ಯೇಷ್ಠಾ ಉಪಾಶ್ರಯನ್।।
ಅವನ ಯಜ್ಞದಲ್ಲಿ ಶ್ರೀಮಂತವಾದ ಸುವರ್ಣಮಯ ಮಹಾನ್ ಯೂಪವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಕರ್ಮಗಳನ್ನು ಮಾಡುತ್ತಾ ಇಂದ್ರನೇ ಮೊದಲಾದ ದೇವತೆಗಳು ಆ ಯೂಪವನ್ನು ಆಶ್ರಯಿಸಿ ಕುಳಿತುಕೊಳ್ಳುತ್ತಿದ್ದರು.
12029068a ಚಷಾಲೋ ಯಸ್ಯ ಸೌವರ್ಣಸ್ತಸ್ಮಿನ್ಯೂಪೇ ಹಿರಣ್ಮಯೇ।
12029068c ನನೃತುರ್ದೇವಗಂಧರ್ವಾಃ ಷಟ್ಸಹಸ್ರಾಣಿ ಸಪ್ತಧಾ।।
ಆ ಹಿರಣ್ಮಯ ಯೂಪಸ್ಥಂಭದ ಸುವರ್ಣದ ಬಳೆಯ ಸುತ್ತಲೂ ಅರವತ್ತು ಸಾವಿರ ದೇವ-ಗಂಧರ್ವರು ಏಳು ರೀತಿಯ ನರ್ತನಗಳನ್ನು ಮಾಡುತ್ತಿದ್ದರು.
12029069a ಅವಾದಯತ್ತತ್ರ ವೀಣಾಂ ಮಧ್ಯೇ ವಿಶ್ವಾವಸುಃ ಸ್ವಯಮ್।
12029069c ಸರ್ವಭೂತಾನ್ಯಮನ್ಯಂತ ಮಮ ವಾದಯತೀತ್ಯಯಮ್।।
ಅದರ ಮಧ್ಯೆ ಸ್ವಯಂ ವಿಶ್ವಾವಸುವು ವೀಣೆಯನ್ನು ನುಡಿಸುತ್ತಿರಲು ಎಲ್ಲ ಜೀವಿಗಳೂ ಅವನು ತನಗಾಗಿಯೇ ನುಡಿಸುತ್ತಿದ್ದಾನೆ ಎಂದು ಭಾವಿಸುತ್ತಿದ್ದರು.
12029070a ಏತದ್ರಾಜ್ಞೋ ದಿಲೀಪಸ್ಯ ರಾಜಾನೋ ನಾನುಚಕ್ರಿರೇ।
12029070c ಯತ್ಸ್ತ್ರಿಯೋ ಹೇಮಸಂಪನ್ನಾಃ ಪಥಿ ಮತ್ತಾಃ ಸ್ಮ ಶೇರತೇ।।
ರಾಜ ದಿಲೀಪನಂತಹ ಕರ್ಮಗಳನ್ನು ಮಾಡಲು ಇತರ ರಾಜರು ಸಮರ್ಥರಿರಲಿಲ್ಲ. ಸುವರ್ಣಾಭರಣಗಳನ್ನು ಧರಿಸಿದ್ದ ಸ್ತ್ರೀಯರು ಮತ್ತರಾಗಿ ರಸ್ತೆಯ ಮೇಲೆಯೇ ಮಲಗುತ್ತಿದ್ದರು.
12029071a ರಾಜಾನಮುಗ್ರಧನ್ವಾನಂ ದಿಲೀಪಂ ಸತ್ಯವಾದಿನಮ್।
12029071c ಯೇಽಪಶ್ಯನ್ಸುಮಹಾತ್ಮಾನಂ ತೇಽಪಿ ಸ್ವರ್ಗಜಿತೋ ನರಾಃ।।
ಸತ್ಯವಾದಿಯೂ ಉಗ್ರಧನ್ವಿಯೂ ಆಗಿದ್ದ ರಾಜಾ ಮಹಾತ್ಮಾ ದಿಲೀಪನನ್ನು ಸಂದರ್ಶಿಸಿದವರೆಲ್ಲರೂ ಸ್ವರ್ಗಕ್ಕೆ ಹೋದರು!
12029072a ತ್ರಯಃ ಶಬ್ದಾ ನ ಜೀರ್ಯಂತೇ ದಿಲೀಪಸ್ಯ ನಿವೇಶನೇ।
12029072c ಸ್ವಾಧ್ಯಾಯಘೋಷೋ ಜ್ಯಾಘೋಷೋ ದೀಯತಾಮಿತಿ ಚೈವ ಹಿ।।
ದಿಲೀಪನ ಅರಮನೆಯಲ್ಲಿ ಸ್ವಾಧ್ಯಾಯಘೋಷ, ಮೌರ್ವಿಯ ಟೇಂಕಾರ ಶಬ್ಧ ಮತ್ತು “ದಾನಮಾಡಿರಿ!” ಎನ್ನುವ ಈ ಮೂರು ಶಬ್ಧಗಳು ನಿಲ್ಲಲೇ ಇಲ್ಲ.
12029073a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029073c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ದಿಲೀಪನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029074a ಮಾಂಧಾತಾರಂ ಯೌವನಾಶ್ವಂ ಮೃತಂ ಶುಶ್ರುಮ ಸೃಂಜಯ।
12029074c ಯಂ ದೇವಾ ಮರುತೋ ಗರ್ಭಂ ಪಿತುಃ ಪಾರ್ಶ್ವಾದಪಾಹರನ್।।
ಸೃಂಜಯ! ಯಾರನ್ನು ಮರುತ್ತ ದೇವತೆಗಳು ಅವನ ತಂದೆ ಯುವನಾಶ್ವನ ಬೆನ್ನಿನಿಂದ ಹೊರತೆಗೆದರೋ ಆ ಮಾಂಧಾತನೂ ಮೃತನಾದನೆಂದು ಕೇಳಿದ್ದೇವೆ.
12029075a ಸಂವೃದ್ಧೋ ಯುವನಾಶ್ವಸ್ಯ ಜಠರೇ ಯೋ ಮಹಾತ್ಮನಃ।
12029075c ಪೃಷದಾಜ್ಯೋದ್ಭವಃ ಶ್ರೀಮಾಂಸ್ತ್ರಿಲೋಕವಿಜಯೀ ನೃಪಃ।।
ತ್ರಿಲೋಕ ವಿಜಯಿಯಾಗಿದ್ದ ಆ ಶ್ರೀಮಾನ್ ನೃಪ ಮಹಾತ್ಮನು ಮೊಸರು ಬೆರೆಸಿದ ಹಾಲನ್ನು ಕುಡಿದ ಯುವನಾಶ್ವನ ಜಠರದಲ್ಲಿ ಬೆಳೆದವನಾಗಿದ್ದನು.
12029076a ಯಂ ದೃಷ್ಟ್ವಾ ಪಿತುರುತ್ಸಂಗೇ ಶಯಾನಂ ದೇವರೂಪಿಣಮ್।
12029076c ಅನ್ಯೋನ್ಯಮಬ್ರುವನ್ದೇವಾಃ ಕಮಯಂ ಧಾಸ್ಯತೀತಿ ವೈ।।
ತಂದೆಯ ತೊಡೆಯಮೇಲೆ ಮಲಗಿದ್ದ ಆ ದೇವರೂಪಿಣೀ ಶಿಶುವನ್ನು ಕಂಡು ದೇವತೆಗಳು ಪರಸ್ಪರರಲ್ಲಿ “ಇವನು ಯಾರ ಹಾಲನ್ನು ಕುಡಿಯುತ್ತಾನೆ?” ಎಂದು ಚರ್ಚಿಸಿದ್ದರು.
12029077a ಮಾಮೇವ ಧಾಸ್ಯತೀತ್ಯೇವಮಿಂದ್ರೋ ಅಭ್ಯವಪದ್ಯತ।
12029077c ಮಾಂಧಾತೇತಿ ತತಸ್ತಸ್ಯ ನಾಮ ಚಕ್ರೇ ಶತಕ್ರತುಃ।।
“ನಾನು ಇವನಿಗೆ ಹಾಲುಣ್ಣಿಸುತ್ತೇನೆ!” ಎಂದು ಇಂದ್ರನೇ ಮುಂದೆಬಂದನು. ಶತಕ್ರತುವೇ ಅವನಿಗೆ “ಮಾಂಧಾತ” ಎಂಬ ಹೆಸರನ್ನಿಟ್ಟಿದ್ದನು.
12029078a ತತಸ್ತು ಪಯಸೋ ಧಾರಾಂ ಪುಷ್ಟಿಹೇತೋರ್ಮಹಾತ್ಮನಃ।
12029078c ತಸ್ಯಾಸ್ಯೇ ಯೌವನಾಶ್ವಸ್ಯ ಪಾಣಿರಿಂದ್ರಸ್ಯ ಚಾಸ್ರವತ್।।
ಆ ಮಹಾತ್ಮ ಯೌವನಾಶ್ವ ಮಾಂಧಾತನ ಪುಷ್ಟಿಗಾಗಿ ಅವನ ಬಾಯಿಯಲ್ಲಿಟ್ಟ ಇಂದ್ರನ ಬೆರಳೇ ಹಾಲಿನ ಧಾರೆಯನ್ನು ಸುರಿಸಿತ್ತು!
12029079a ತಂ ಪಿಬನ್ಪಾಣಿಮಿಂದ್ರಸ್ಯ ಸಮಾಮಹ್ನಾ ವ್ಯವರ್ಧತ।
12029079c ಸ ಆಸೀದ್ದ್ವಾದಶಸಮೋ ದ್ವಾದಶಾಹೇನ ಪಾರ್ಥಿವ।।
ಪಾರ್ಥಿವ! ಇಂದ್ರನ ಬೆರಳಿನಿಂದ ಹಾಲನ್ನು ಕುಡಿದ ಅವನು ಹನ್ನೆರಡು ದಿನಗಳಲ್ಲಿಯೇ ಹನ್ನೆರಡು ವರ್ಷದಷ್ಟು ದೊಡ್ಡದಾಗಿ ಬೆಳೆದಿದ್ದನು!
12029080a ತಮಿಯಂ ಪೃಥಿವೀ ಸರ್ವಾ ಏಕಾಹ್ನಾ ಸಮಪದ್ಯತ।
12029080c ಧರ್ಮಾತ್ಮಾನಂ ಮಹಾತ್ಮಾನಂ ಶೂರಮಿಂದ್ರಸಮಂ ಯುಧಿ।।
ಯುದ್ಧದಲ್ಲಿ ಇಂದ್ರಸಮನಾಗಿದ್ದ ಆ ಧರ್ಮಾತ್ಮ ಮಹಾತ್ಮನು ಇಡೀ ಭೂಮಿಯನ್ನೇ ಒಂದು ಆಡಳಿತದ ಅಧೀನವನ್ನಾಗಿಸಿದನು.
12029081a ಯ ಆಂಗಾರಂ ಹಿ ನೃಪತಿಂ ಮರುತ್ತಮಸಿತಂ ಗಯಮ್।
12029081c ಅಂಗಂ ಬೃಹದ್ರಥಂ ಚೈವ ಮಾಂಧಾತಾ ಸಮರೇಽಜಯತ್।।
ಮಾಂಧಾತನು ಸಮರದಲ್ಲಿ ಆಂಗಾರನನ್ನೂ, ಮರುತ್ತನನ್ನೂ, ಅಸಿತನನ್ನೂ, ಗಯನನ್ನೂ, ಅಂಗರಾಜ ಬೃಹದ್ರಥನನ್ನೂ ಜಯಿಸಿದ್ದನು.
12029082a ಯೌವನಾಶ್ವೋ ಯದಾಂಗಾರಂ ಸಮರೇ ಸಮಯೋಧಯತ್।
12029082c ವಿಸ್ಫಾರೈರ್ಧನುಷೋ ದೇವಾ ದ್ಯೌರಭೇದೀತಿ ಮೇನಿರೇ।।
ಯೌವನಾಶ್ವನು ಆಂಗಾರನನ್ನು ಸಮರದಲ್ಲಿ ಎದುರಿಸಿ ಯುದ್ಧಮಾಡುತ್ತಿದ್ದಾಗಿ ಅವನ ಧನುಸ್ಸಿನ ಟೇಂಕಾರವನ್ನು ಕೇಳಿ ದೇವತೆಗಳು ಅವನು ಆಕಾಶವನ್ನೇ ಸೀಳಿಬಿಡುತ್ತಿದ್ದಾನೋ ಎಂದು ಅಂದುಕೊಂಡಿದ್ದರು.
12029083a ಯತಃ ಸೂರ್ಯ ಉದೇತಿ ಸ್ಮ ಯತ್ರ ಚ ಪ್ರತಿತಿಷ್ಠತಿ।
12029083c ಸರ್ವಂ ತದ್ಯೌವನಾಶ್ವಸ್ಯ ಮಾಂಧಾತುಃ ಕ್ಷೇತ್ರಮುಚ್ಯತೇ।।
ಸೂರ್ಯನು ಉದಯಿಸುವ ಸ್ಥಳದಿಂದ ಹಿಡಿದು ಅವನು ಅಸ್ತಮಿಸುವ ಸ್ಥಳದ ವರೆಗಿನ ಎಲ್ಲವೂ ಯೌವನಾಶ್ವ ಮಾಂಧಾತನ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು.
12029084a ಅಶ್ವಮೇಧಶತೇನೇಷ್ಟ್ವಾ ರಾಜಸೂಯಶತೇನ ಚ।
12029084c ಅದದಾದ್ರೋಹಿತಾನ್ಮತ್ಸ್ಯಾನ್ಬ್ರಾಹ್ಮಣೇಭ್ಯೋ ಮಹೀಪತಿಃ।।
12029085a ಹೈರಣ್ಯಾನ್ಯೋಜನೋತ್ಸೇಧಾನಾಯತಾನ್ದಶಯೋಜನಮ್।
12029085c ಅತಿರಿಕ್ತಾನ್ದ್ವಿಜಾತಿಭ್ಯೋ ವ್ಯಭಜನ್ನಿತರೇ ಜನಾಃ।।
ಆ ಮಹೀಪತಿಯು ನೂರು ಅಶ್ವಮೇಧಗಳನ್ನೂ ನೂರು ರಾಜಸೂಯಗಳನ್ನೂ ಮಾಡಿ ಬ್ರಾಹ್ಮಣರಿಗೆ ಹತ್ತು ಯೋಜನಗಳಷ್ಟು ದಪ್ಪವಾಯಿಯೂ ಒಂದು ಯೋಜನದಷ್ಟು ಎತ್ತರವಾಗಿಯೂ ಇರುವ ಸುವರ್ಣಮಯ ರೋಹಿತ ಮತ್ಸ್ಯಗಳನ್ನು ದಾನವನ್ನಾಗಿತ್ತಿದ್ದನು. ಉಳಿದುದನ್ನು ಇತರ ದ್ವಿಜಾತಿಯವರು ಹಂಚಿಕೊಂಡಿದ್ದರು.
12029086a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029086c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಮಂಧಾತನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029087a ಯಯಾತಿಂ ನಾಹುಷಂ ಚೈವ ಮೃತಂ ಶುಶ್ರುಮ ಸೃಂಜಯ।
12029087c ಯ ಇಮಾಂ ಪೃಥಿವೀಂ ಸರ್ವಾಂ ವಿಜಿತ್ಯ ಸಹಸಾಗರಾಮ್।।
ಸೃಂಜಯ! ಸಾಗರಪರ್ಯಂತವಾದ ಈ ಇಡೀ ಪೃಥ್ವಿಯನ್ನು ಗೆದ್ದ ನಹುಷನ ಮಗ ಯಯಾತಿಯೂ ಮೃತನಾದನೆಂದು ಕೇಳಿದ್ದೇವೆ!
12029088a ಶಮ್ಯಾಪಾತೇನಾಭ್ಯತೀಯಾದ್ವೇದೀಭಿಶ್ಚಿತ್ರಯನ್ನೃಪ।
12029088c ಈಜಾನಃ ಕ್ರತುಭಿಃ ಪುಣ್ಯೈಃ ಪರ್ಯಗಚ್ಚದ್ವಸುಂಧರಾಮ್।।
ಶಮ್ಯಾಪಾತ55ದಿಂದ ಭೂಮಿಯನ್ನು ಗುರುತಿಸುತ್ತಾ ಅವನು ಅಲ್ಲಲ್ಲಿಯೇ ಯಜ್ಞ ವೇದಿಗಳನ್ನು ಪ್ರತಿಷ್ಠಾಪಿಸಿ ಪುಣ್ಯ ಕ್ರತುಗಳನ್ನು ಯಾಜಿಸುತ್ತಾ ಇಡೀ ಭೂಮಿಯನ್ನು ಸುತ್ತಿದನು.
12029089a ಇಷ್ಟ್ವಾ ಕ್ರತುಸಹಸ್ರೇಣ ವಾಜಿಮೇಧಶತೇನ ಚ।
12029089c ತರ್ಪಯಾಮಾಸ ದೇವೇಂದ್ರಂ ತ್ರಿಭಿಃ ಕಾಂಚನಪರ್ವತೈಃ।।
ಅವನು ಮೂರು ಕಾಂಚನ ಪರ್ವತಗಳಷ್ಟು ದಾನವನ್ನಿತ್ತು ಸಹಸ್ರ ಇಷ್ಟಿ-ಕ್ರತುಗಳಿಂದಲೂ ನೂರು ಅಶ್ವಮೇಧಗಳಿಂದಲೂ ದೇವೇಂದ್ರನನ್ನು ತೃಪ್ತಿಗೊಳಿಸಿದ್ದನು.
12029090a ವ್ಯೂಢೇ ದೇವಾಸುರೇ ಯುದ್ಧೇ ಹತ್ವಾ ದೈತೇಯದಾನವಾನ್।
12029090c ವ್ಯಭಜತ್ಪೃಥಿವೀಂ ಕೃತ್ಸ್ನಾಂ ಯಯಾತಿರ್ನಹುಷಾತ್ಮಜಃ।।
ನಹುಷನ ಮಗ ಯಯಾತಿಯು ದೇವಾಸುರ ಯುದ್ಧದಲ್ಲಿ ವ್ಯೂಹದಲ್ಲಿದ್ದ ದೈತ್ಯ-ದಾನವರನ್ನು ಸಂಹರಿಸಿ ಇಡೀ ಭೂಮಿಯನ್ನೇ ತನ್ನ ಮಕ್ಕಳಲ್ಲಿ ವಿಭಜಿಸಿದ್ದನು.
12029091a ಅಂತೇಷು ಪುತ್ರಾನ್ನಿಕ್ಷಿಪ್ಯ ಯದುದ್ರುಹ್ಯುಪುರೋಗಮಾನ್।
12029091c ಪೂರುಂ ರಾಜ್ಯೇಽಭಿಷಿಚ್ಯ ಸ್ವೇ ಸದಾರಃ ಪ್ರಸ್ಥಿತೋ ವನಮ್।।
ಯದು-ದ್ರುಹ್ಯ ಮೊದಲಾದ ಮಕ್ಕಳನ್ನು ಅಲ್ಲಲ್ಲಿ ಸಂಸ್ಥಾಪಿಸಿ, ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಿ, ಪತ್ನಿಯೊಂದಿಗೆ ವನವಾಸಗೈದನು.
12029092a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029092c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಯಯಾತಿಯೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029093a ಅಂಬರೀಷಂ ಚ ನಾಭಾಗಂ ಮೃತಂ ಶುಶ್ರುಮ ಸೃಂಜಯ।
12029093c ಯಂ ಪ್ರಜಾ ವವ್ರಿರೇ ಪುಣ್ಯಂ ಗೋಪ್ತಾರಂ ನೃಪಸತ್ತಮ।।
ನೃಪಸತ್ತಮ! ಸೃಂಜಯ! ಪ್ರಜೆಗಳು ಯಾರನ್ನು ಪುಣ್ಯ ರಕ್ಷಕನೆಂದು ತಿಳಿದುಕೊಂಡಿದ್ದರೋ ಆ ನಭಾಗನ ಮಗ ಅಂಬರೀಷನೂ ಮೃತನಾದನೆಂದು ಕೇಳಿದ್ದೇವೆ.
12029094a ಯಃ ಸಹಸ್ರಂ ಸಹಸ್ರಾಣಾಂ ರಾಜ್ಞಾಮಯುತ ಯಾಜಿನಾಮ್।
12029094c ಈಜಾನೋ ವಿತತೇ ಯಜ್ಞೇ ಬ್ರಾಹ್ಮಣೇಭ್ಯಃ ಸಮಾಹಿತಃ।।
ಅವನು ಯಜ್ಞ ಮಾಡುತ್ತಿರುವಾಗ ಒಂದು ಲಕ್ಷ ಹತ್ತು ಸಾವಿರ ರಾಜರನ್ನು ಬ್ರಾಹ್ಮಣರ ಸೇವೆಗಾಗಿ ನಿಯಮಿಸಿದ್ದನು.
12029095a ನೈತತ್ಪೂರ್ವೇ ಜನಾಶ್ಚಕ್ರುರ್ನ ಕರಿಷ್ಯಂತಿ ಚಾಪರೇ।
12029095c ಇತ್ಯಂಬರೀಷಂ ನಾಭಾಗಮನ್ವಮೋದಂತ ದಕ್ಷಿಣಾಃ।।
“ಈ ಹಿಂದೆ ಇದನ್ನು ಯಾರೂ ಮಾಡಿರಲಿಲ್ಲ ಮತ್ತು ಮುಂದೆ ಕೂಡ ಮಾಡುವವರಿಲ್ಲ!” ಎಂದು ಜನರು ನಾಭಾಗ ಅಂಬರೀಷನ ದಕ್ಷಿಣೆಗಳನ್ನು ಪ್ರಶಂಸಿಸಿದ್ದರು.
12029096a ಶತಂ ರಾಜಸಹಸ್ರಾಣಿ ಶತಂ ರಾಜಶತಾನಿ ಚ।
12029096c ಸರ್ವೇಽಶ್ವಮೇಧೈರೀಜಾನಾಸ್ತೇಽಭ್ಯಯುರ್ದಕ್ಷಿಣಾಯನಮ್।।
ಅವನ ಯಜ್ಞದಲ್ಲಿ ಪಾಲ್ಗೊಂಡಿದ್ದ ಒಂದು ಲಕ್ಷ ಹತ್ತು ಸಾವಿರ ರಾಜರೆಲ್ಲರೂ ಕೂಡ ದಕ್ಷಿಣಾಯನ ಮಾರ್ಗವಾಗಿ ಪುಣ್ಯಲೋಕಗಳನ್ನು ಸೇರಿದರು.
12029097a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029097c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಅಂಬರೀಷನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029098a ಶಶಬಿಂದುಂ ಚೈತ್ರರಥಂ ಮೃತಂ ಶುಶ್ರುಮ ಸೃಂಜಯ।
12029098c ಯಸ್ಯ ಭಾರ್ಯಾಸಹಸ್ರಾಣಾಂ ಶತಮಾಸೀನ್ಮಹಾತ್ಮನಃ।।
ಸೃಂಜಯ! ಚಿತ್ರರಥನ ಮಗ ಶಶಬಿಂದುವೂ ಮೃತ್ಯುವಶನಾದನೆಂದು ಕೇಳಿದ್ದೇವೆ. ಆ ಮಾಹಾತ್ಮನಿಗೆ ಒಂದು ಲಕ್ಷ ಪತ್ನಿಯರಿದ್ದರು.
12029099a ಸಹಸ್ರಂ ತು ಸಹಸ್ರಾಣಾಂ ಯಸ್ಯಾಸನ್ಶಾಶಬಿಂದವಃ।
12029099c ಹಿರಣ್ಯಕವಚಾಃ ಸರ್ವೇ ಸರ್ವೇ ಚೋತ್ತಮಧನ್ವಿನಃ।।
ಶಶಬಿಂದುವಿಗೆ ಹತ್ತು ಲಕ್ಷ ಮಕ್ಕಳಿದ್ದರು. ಅವರೆಲ್ಲರೂ ಹಿರಣ್ಯ ಕವಚಗಳನ್ನು ಧರಿಸಿದ್ದರು. ಎಲ್ಲರೂ ಉತ್ತಮ ಧನ್ವಿಗಳಾಗಿದ್ದರು.
12029100a ಶತಂ ಕನ್ಯಾ ರಾಜಪುತ್ರಮೇಕೈಕಂ ಪೃಷ್ಠತೋಽನ್ವಯುಃ।
12029100c ಕನ್ಯಾಂ ಕನ್ಯಾಂ ಶತಂ ನಾಗಾ ನಾಗಂ ನಾಗಂ ಶತಂ ರಥಾಃ।।
12029101a ರಥಂ ರಥಂ ಶತಂ ಚಾಶ್ವಾ ದೇಶಜಾ ಹೇಮಮಾಲಿನಃ।
12029101c ಅಶ್ವಮಶ್ವಂ ಶತಂ ಗಾವೋ ಗಾಂ ಗಾಂ ತದ್ವದಜಾವಿಕಮ್।।
ಒಬ್ಬೊಬ್ಬ ರಾಜಪುತ್ರನನ್ನೂ ನೂರು ನೂರು ಕನ್ಯೆಯರು ಅನುಸರಿಸಿ ಹೋಗುತ್ತಿದ್ದರು. ಪ್ರತಿಯೊಬ್ಬ ಕನ್ಯೆಯ ಹಿಂದೆಯೂ ನೂರು ನೂರು ಆನೆಗಳು, ಪ್ರತಿಯೊಂದು ಆನೆಯನ್ನೂ ನೂರು ನೂರು ರಥಗಳೂ, ಪ್ರತಿಯೊಂದು ರಥವನ್ನೂ ನೂರು ನೂರು ಸುವರ್ಣಮಾಲೆಗಳಿಂದ ಅಲಂಕೃತ ನೂರು ನೂರು ಉತ್ತಮ ಜಾತಿಯ ಕುದುರೆಗಳೂ, ಪ್ರತಿಯೊಂದು ಕುದುರೆಯನ್ನೂ ನೂರು ನೂರು ಗೋವುಗಳು, ಮತ್ತು ಪ್ರತಿಯೊಂದು ಗೋವನ್ನೂ ನೂರು ನೂರು ಆಡು-ಕುರಿಗಳು ಹಿಂಬಾಲಿಸಿ ಹೋಗುತ್ತಿದ್ದವು.
12029102a ಏತದ್ಧನಮಪರ್ಯಂತಮಶ್ವಮೇಧೇ ಮಹಾಮಖೇ।
12029102c ಶಶಬಿಂದುರ್ಮಹಾರಾಜ ಬ್ರಾಹ್ಮಣೇಭ್ಯಃ ಸಮಾದಿಶತ್।।
ಮಹಾರಾಜ ಶಶಬಿಂದುವು ಮಹಾ ಮಖ ಅಶ್ವಮೇಧದಲ್ಲಿ ಬ್ರಾಹ್ಮಣರಿಗೆ ಇಷ್ಟೊಂದು ಅಪಾರ ಧನವನ್ನು ದಾನವನ್ನಾಗಿತ್ತಿದ್ದನು.
12029103a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029103c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಶಶಬಿಂದುವೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029104a ಗಯಮಾಮೂರ್ತರಯಸಂ ಮೃತಂ ಶುಶ್ರುಮ ಸೃಂಜಯ।
12029104c ಯಃ ಸ ವರ್ಷಶತಂ ರಾಜಾ ಹುತಶಿಷ್ಟಾಶನೋಽಭವತ್।।
ಸೃಂಜಯ! ಅಮೂರ್ತರಯಸನ ಮಗ ಗಯನೂ ಮೃತನಾದನೆಂದು ಕೇಳಿದ್ದೇವೆ. ಆ ರಾಜನು ನೂರು ವರ್ಷಗಳ ಕಾಲ ಯಜ್ಞಮಾಡಿ ಯಜ್ಞಾವಶೇಷವನ್ನೇ ಭುಂಜಿಸಿದನು.
12029105a ಯಸ್ಮೈ ವಹ್ನಿರ್ವರಾನ್ಪ್ರಾದಾತ್ತತೋ ವವ್ರೇ ವರಾನ್ಗಯಃ।
12029105c ದದತೋ ಮೇಽಕ್ಷಯಾ ಚಾಸ್ತು ಧರ್ಮೇ ಶ್ರದ್ಧಾ ಚ ವರ್ಧತಾಮ್।।
12029106a ಮನೋ ಮೇ ರಮತಾಂ ಸತ್ಯೇ ತ್ವತ್ಪ್ರಸಾದಾದ್ಧುತಾಶನ।
ಅದರಿಂದ ತೃಪ್ತನಾದ ಅಗ್ನಿಯು ಅವನಿಗೆ ವರಗಳನ್ನು ನೀಡಿದಾಗ ಗಯನು ಈ ವರಗಳನ್ನು ಕೇಳಿದ್ದನು: “ಹುತಾಶನ! ದಾನ ಕೊಡುತ್ತಿದ್ದಂತೆಲ್ಲಾ ಅಕ್ಷಯವಾದ ಧನವು ಹಾಗೂ ಧರ್ಮದಲ್ಲಿ ಶ್ರದ್ಧೆಯು ವೃದ್ಧಿಯಾಗುತ್ತಿರಲಿ. ನನ್ನ ಮನಸ್ಸು ಸತ್ಯದಲ್ಲಿಯೇ ಅನುರಕ್ತವಾಗಿರುವಂತೆ ಅನುಗ್ರಹಿಸು!”
12029106c ಲೇಭೇ ಚ ಕಾಮಾಂಸ್ತಾನ್ಸರ್ವಾನ್ಪಾವಕಾದಿತಿ ನಃ ಶ್ರುತಮ್।।
12029107a ದರ್ಶೇನ ಪೌರ್ಣಮಾಸೇನ ಚಾತುರ್ಮಾಸ್ಯೈಃ ಪುನಃ ಪುನಃ।
12029107c ಅಯಜತ್ಸ ಮಹಾತೇಜಾಃ ಸಹಸ್ರಂ ಪರಿವತ್ಸರಾನ್।।
ಪಾವಕನಿಂದ ಅವನು ತನ್ನ ಎಲ್ಲ ಕಾಮನೆಗಳನ್ನೂ ಪಡೆದುಕೊಂಡನೆಂದು ಕೇಳಿದ್ದೇವೆ. ಮಹಾತೇಜಸ್ವಿಯಾದ ಅವನು ಒಂದು ಸಾವಿರ ವರ್ಷಗಳ ಪರ್ಯಂತ ಪುನಃ ಪುನಃ ದರ್ಶ, ಪೌರ್ಣಮಾಸ ಮತ್ತು ಚಾತುರ್ಮಾಸ ಯಜ್ಞಗಳನ್ನು ಯಾಜಿಸಿದನು.
12029108a ಶತಂ ಗವಾಂ ಸಹಸ್ರಾಣಿ ಶತಮಶ್ವಶತಾನಿ ಚ।
12029108c ಉತ್ಥಾಯೋತ್ಥಾಯ ವೈ ಪ್ರಾದಾತ್ಸಹಸ್ರಂ ಪರಿವತ್ಸರಾನ್।।
ಅವನು ಸಹಸ್ರ ವರ್ಷಗಳ ವರೆಗೆ ಪ್ರತಿದಿನವೂ ಮುಂಜಾನೆ ಏಳುತ್ತಲೇ ಒಂದು ಲಕ್ಷ ಹಸುಗಳನ್ನೂ ಮತ್ತು ಹತ್ತು ಸಾವಿರ ಕುದುರೆಗಳನ್ನೂ ದಾನವನ್ನಾಗಿ ಕೊಡುತ್ತಿದ್ದನು.
12029109a ತರ್ಪಯಾಮಾಸ ಸೋಮೇನ ದೇವಾನ್ವಿತ್ತೈರ್ದ್ವಿಜಾನಪಿ।
12029109c ಪಿತೃನ್ಸ್ವಧಾಭಿಃ ಕಾಮೈಶ್ಚ ಸ್ತ್ರಿಯಃ ಸ್ವಾಃ ಪುರುಷರ್ಷಭ।।
ಆ ಪುರುಷರ್ಷಭನು ಸೋಮದ ಮೂಲಕ ದೇವತೆಗಳನ್ನೂ, ವಿತ್ತದಿಂದ ದ್ವಿಜಾತಿಯವರನ್ನೂ, ಶ್ರಾದ್ಧ-ತರ್ಪಣಾದಿಗಳಿಂದ ಪಿತೃಗಳನ್ನೂ ಮತ್ತು ತನ್ನ ಸ್ತ್ರೀಯರನ್ನು ಕಾಮಗಳಿಂದಲೂ ತೃಪ್ತಿಗೊಳಿಸಿದನು.
12029110a ಸೌವರ್ಣಾಂ ಪೃಥಿವೀಂ ಕೃತ್ವಾ ದಶವ್ಯಾಮಾಂ ದ್ವಿರಾಯತಾಮ್।
12029110c ದಕ್ಷಿಣಾಮದದದ್ರಾಜಾ ವಾಜಿಮೇಧಮಹಾಮಖೇ।।
ಹತ್ತು ವ್ಯಾಮ ಅಗಲವಾಗಿಯೂ ಇಪ್ಪತ್ತು ವ್ಯಾಮ ಉದ್ದವಾಗಿಯೂ ಇರುವ ಸುವರ್ಣಭುಮಿಯನ್ನು ಕಲ್ಪಿಸಿ ಅಶ್ವಮೇಧದ ಮಹಾಮಖದಲ್ಲಿ ದಕ್ಷಿಣೆಯನ್ನಾಗಿ ಅವನು ಕೊಟ್ಟಿದ್ದನು.
12029111a ಯಾವತ್ಯಃ ಸಿಕತಾ ರಾಜನ್ಗಂಗಾಯಾಃ ಪುರುಷರ್ಷಭ।
12029111c ತಾವತೀರೇವ ಗಾಃ ಪ್ರಾದಾದಾಮೂರ್ತರಯಸೋ ಗಯಃ।।
ರಾಜನ್! ಗಂಗಾತೀರದಲ್ಲಿ ಎಷ್ಟು ಮರಳು ಕಣಗಳಿವೆಯೋ ಅಷ್ಟೇ ಸಂಖ್ಯೆಯ ಗೋವುಗಳನ್ನು ಅಮೂರ್ತರಯಸನ ಮಗ ಪುರುಷರ್ಷಭ ಗಯನು ದಾನವನ್ನಾಗಿತ್ತಿದ್ದನು.
12029112a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029112c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಗಯನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029113a ರಂತಿದೇವಂ ಚ ಸಾಂಕೃತ್ಯಂ ಮೃತಂ ಶುಶ್ರುಮ ಸೃಂಜಯ।
12029113c ಸಮ್ಯಗಾರಾಧ್ಯ ಯಃ ಶಕ್ರಂ ವರಂ ಲೇಭೇ ಮಹಾಯಶಾಃ।।
12029114a ಅನ್ನಂ ಚ ನೋ ಬಹು ಭವೇದತಿಥೀಂಶ್ಚ ಲಭೇಮಹಿ।
12029114c ಶ್ರದ್ಧಾ ಚ ನೋ ಮಾ ವ್ಯಗಮನ್ಮಾ ಚ ಯಾಚಿಷ್ಮ ಕಂ ಚನ।।
ಸುಕೃತಿಯ ಮಗ ಮಹಾಯಶಸ್ವಿ ರಂತಿದೇವನೂ ಮೃತನಾದನೆಂದು ಕೇಳಿದ್ದೇವೆ. ಅವನು ಶಕ್ರನನ್ನು ಚೆನ್ನಾಗಿ ಆರಾಧಿಸಿ ಈ ವರವನ್ನು ಪಡೆದುಕೊಂಡಿದ್ದನು: “ನಮ್ಮಲ್ಲಿಗೆ ಬರುವ ಅತಿಥಿಗಳಿಗೆ ಸಾಕಾಗುವಷ್ಟು ನಮ್ಮಲ್ಲಿ ಅನ್ನವು ವೃದ್ಧಿಯಾಗಿರಲಿ. ನಮ್ಮಿಂದ ಯಾವಾಗಲೂ ಧರ್ಮಶ್ರದ್ಧೆಯು ದೂರವಾಗದಿರಲಿ. ಯಾರಿಂದಲೂ ಯಾಚಿಸದಿರುವಂತಾಗಲಿ!”
12029115a ಉಪಾತಿಷ್ಠಂತ ಪಶವಃ ಸ್ವಯಂ ತಂ ಸಂಶಿತವ್ರತಮ್।
12029115c ಗ್ರಾಮ್ಯಾರಣ್ಯಾ ಮಹಾತ್ಮಾನಂ ರಂತಿದೇವಂ ಯಶಸ್ವಿನಮ್।।
ಸಂಶಿತವ್ರತನಾಗಿದ್ದ ಯಶಸ್ವೀ ಮಹಾತ್ಮ ರಂತಿದೇವನ ಬಳಿ ಗ್ರಾಮ್ಯ ಮತ್ತು ಅರಣ್ಯ ಪಶುಗಳು ಸ್ವಯಂ ತಾವಾಗಿಯೇ ಬರುತ್ತಿದ್ದವು!
12029116a ಮಹಾನದೀ ಚರ್ಮರಾಶೇರುತ್ಕ್ಲೇದಾತ್ಸುಸ್ರುವೇ ಯತಃ।
12029116c ತತಶ್ಚರ್ಮಣ್ವತೀತ್ಯೇವಂ ವಿಖ್ಯಾತಾ ಸಾ ಮಹಾನದೀ।।
ಈ ಪ್ರಾಣಿಗಳ ಮೈತೊಳೆದ ನೀರಿನಿಂದಲೇ ಹುಟ್ಟಿದ್ದರಿಂದ ಆ ನದಿಯು ಚರ್ಮಣ್ವತೀ56 ಎಂಬ ಹೆಸರಿನಿಂದ ಪ್ರಖ್ಯಾತವಾಯಿತು!
12029117a ಬ್ರಾಹ್ಮಣೇಭ್ಯೋ ದದೌ ನಿಷ್ಕಾನ್ಸದಸಿ ಪ್ರತತೇ ನೃಪಃ।
12029117c ತುಭ್ಯಂ ತುಭ್ಯಂ ನಿಷ್ಕಮಿತಿ ಯತ್ರಾಕ್ರೋಶಂತಿ ವೈ ದ್ವಿಜಾಃ।।
12029117e ಸಹಸ್ರಂ ತುಭ್ಯಮಿತ್ಯುಕ್ತ್ವಾ ಬ್ರಾಹ್ಮಣಾನ್ಸ್ಮ ಪ್ರಪದ್ಯತೇ।।
ಆ ನೃಪನು ಯಜ್ಞದ ಸದಸ್ಸಿನಲ್ಲಿ ಬ್ರಾಹ್ಮಣರಿಗೆ ಸುವರ್ಣನಾಣ್ಯಗಳನ್ನು ಯಥೇಚ್ಛವಾಗಿ ಕೊಟ್ಟನು. ಅಲ್ಲಿ ದ್ವಿಜರು “ಈ ನಿಷ್ಕಗಳು ನಿನಗೆ! ನಿನಗೆ!” ಎಂದು ಕೂಗುತ್ತಿರಲು ರಂತಿದೇವನು ಆ ಬ್ರಾಹ್ಮಣರಿಗೆ “ನೀವೇ ಈ ಸಹಸ್ರ ನಿಷ್ಕಗಳನ್ನು ಸ್ವೀಕರಿಸಿ!” ಎಂದು ನೀಡುತ್ತಿದ್ದನು.
12029118a ಅನ್ವಾಹಾರ್ಯೋಪಕರಣಂ ದ್ರವ್ಯೋಪಕರಣಂ ಚ ಯತ್।
12029118c ಘಟಾಃ ಸ್ಥಾಲ್ಯಃ ಕಟಾಹಾಶ್ಚ ಪಾತ್ರ್ಯಶ್ಚ ಪಿಠರಾ ಅಪಿ।।
12029118e ನ ತತ್ಕಿಂ ಚಿದಸೌವರ್ಣಂ ರಂತಿದೇವಸ್ಯ ಧೀಮತಃ।।
ಧೀಮಂತ ರಂತಿದೇವನ ಯಜ್ಞದಲ್ಲಿ ಅನ್ವಾಹಾರ್ಯಾಗ್ನಿಯಲ್ಲಿ ಹೋಮಮಾಡಲು ಬೇಕಾದ ದ್ರವ್ಯ-ಉಪಕರಣಗಳು – ಕೊಡಗಳು, ಪಾತ್ರೆಗಳು, ಕಡಾಯಿಗಳು, ಸ್ಥಾಲಿಗಳು, ಮಡಕೆಗಳು ಎಲ್ಲವೂ ಚಿನ್ನದ್ದೇ ಆಗಿದ್ದವು. ಸುವರ್ಣಮಯವಾಗಿರದ ಯಾವ ವಸ್ತುವೂ ಅಲ್ಲಿರುತ್ತಿರಲಿಲ್ಲ.
12029119a ಸಾಂಕೃತೇ ರಂತಿದೇವಸ್ಯ ಯಾಂ ರಾತ್ರಿಮವಸದ್ಗೃಹೇ।
12029119c ಆಲಭ್ಯಂತ ಶತಂ ಗಾವಃ ಸಹಸ್ರಾಣಿ ಚ ವಿಂಶತಿಃ।।
ಸಂಕೃತಿಯ ಮಗ ರಂತಿದೇವನ ಮನೆಯಲ್ಲಿ ರಾತ್ರಿ ಉಳಿದ ಅತಿಥಿಗಳು ಇಪ್ಪತ್ತು ಸಾವಿರದ ನೂರು ಗೋವುಗಳನ್ನು ಪಡೆಯುತ್ತಿದ್ದರು.
12029120a ತತ್ರ ಸ್ಮ ಸೂದಾಃ ಕ್ರೋಶಂತಿ ಸುಮೃಷ್ಟಮಣಿಕುಂಡಲಾಃ।
12029120c ಸೂಪಭೂಯಿಷ್ಠಮಶ್ನೀಧ್ವಂ ನಾದ್ಯ ಮಾಂಸಂ ಯಥಾ ಪುರಾ।।
ಮಣಿಕುಂಡಲಗಳನ್ನು ಧರಿಸಿದ್ದ ಅವನ ಅಡುಗೆಯವರು “ಇಂದಿನ ಭೋಜನವು ಹಿಂದಿನಂತಿಲ್ಲ. ಆದುದರಿಂದ ಚೆನ್ನಾಗಿ ಭೋಜನ ಮಾಡಿ!” ಎಂದು ಕೂಗಿ ಹೇಳುತ್ತಿದ್ದರು.
12029121a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029121c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ರಂತಿದೇವನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029122a ಸಗರಂ ಚ ಮಹಾತ್ಮಾನಂ ಮೃತಂ ಶುಶ್ರುಮ ಸೃಂಜಯ।
12029122c ಐಕ್ಷ್ವಾಕಂ ಪುರುಷವ್ಯಾಘ್ರಮತಿಮಾನುಷವಿಕ್ರಮಮ್।।
ಸೃಂಜಯ! ಇಕ್ಷ್ವಾಕುವಂಶಜ, ಪುರುಷವ್ಯಾಘ್ರ, ಅತಿಮಾನುಷವಿಕ್ರಮಿ ಮಹಾತ್ಮ ಸಗರನೂ ಕೂಡ ಮೃತನಾದನೆಂದು ಕೇಳಿದ್ದೇವೆ!
12029123a ಷಷ್ಟಿಃ ಪುತ್ರಸಹಸ್ರಾಣಿ ಯಂ ಯಾಂತಂ ಪೃಷ್ಠತೋಽನ್ವಯುಃ।
12029123c ನಕ್ಷತ್ರರಾಜಂ ವರ್ಷಾಂತೇ ವ್ಯಭ್ರೇ ಜ್ಯೋತಿರ್ಗಣಾ ಇವ।।
ಮಳೆಗಾಲದ ನಂತರ ಆಕಾಶದಲ್ಲಿ ನಕ್ಷತ್ರರಾಜ ಚಂದ್ರನನ್ನು ನಕ್ಷತ್ರಗಣಗಳು ಹೇಗೋ ಹಾಗೆ ಸಗರನನ್ನು ಅವನ ಅರವತ್ತು ಸಾವಿರ ಮಕ್ಕಳು ಹಿಂಬಾಲಿಸಿ ಹೋಗುತ್ತಿದ್ದರು.
12029124a ಏಕಚ್ಚತ್ರಾ ಮಹೀ ಯಸ್ಯ ಪ್ರಣತಾ ಹ್ಯಭವತ್ಪುರಾ।
12029124c ಯೋಽಶ್ವಮೇಧಸಹಸ್ರೇಣ ತರ್ಪಯಾಮಾಸ ದೇವತಾಃ।।
ಅವನ ಬಾಹುಬಲದಿಂದ ಹಿಂದೆ ಇಡೀ ಭೂಮಿಯು ಒಂದೇ ಛತ್ರದಡಿಯಲ್ಲಿ ಇತ್ತು. ಅವನು ಸಹಸ್ರ ಅಶ್ವಮೇಧಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದನು.
12029125a ಯಃ ಪ್ರಾದಾತ್ಕಾಂಚನಸ್ತಂಭಂ ಪ್ರಾಸಾದಂ ಸರ್ವಕಾಂಚನಮ್।
12029125c ಪೂರ್ಣಂ ಪದ್ಮದಲಾಕ್ಷೀಣಾಂ ಸ್ತ್ರೀಣಾಂ ಶಯನಸಂಕುಲಮ್।।
12029126a ದ್ವಿಜಾತಿಭ್ಯೋಽನುರೂಪೇಭ್ಯಃ ಕಾಮಾನುಚ್ಚಾವಚಾಂಸ್ತಥಾ।
12029126c ಯಸ್ಯಾದೇಶೇನ ತದ್ವಿತ್ತಂ ವ್ಯಭಜಂತ ದ್ವಿಜಾತಯಃ।।
ಕಾಂಚನದ ಕಂಬಗಳಿದ್ದ ಸರ್ವವೂ ಕಾಂಚನಮಯವಾಗಿದ್ದ, ಪದ್ಮದಲಾಯತಾಕ್ಷೀ ಸ್ತ್ರೀಯರಿಂದ ಸಂಪನ್ನವಾಗಿದ್ದ, ಶಯನಗಳಿಂದ ಕೂಡಿದ್ದ ಪ್ರಾಸಾದವನ್ನೂ ವಿಧ-ವಿಧದ ಕಾಮೋಪಭೋಗ ಸಾಮಾಗ್ರಿಗಳನ್ನೂ ಯೋಗ್ಯ ದ್ವಿಜಾತಿಯವರಿಗೆ ಅವನು ದಾನಮಾಡಿದನು. ಅವನ ಆದೇಶದಂತೆ ದ್ವಿಜಾತಿಯವರು ಆ ವಿತ್ತವನ್ನು ತಮ್ಮಲ್ಲಿಯೇ ಹಂಚಿಕೊಂಡಿದ್ದರು.
12029127a ಖಾನಯಾಮಾಸ ಯಃ ಕೋಪಾತ್ಪೃಥಿವೀಂ ಸಾಗರಾಂಕಿತಾಮ್।
12029127c ಯಸ್ಯ ನಾಮ್ನಾ ಸಮುದ್ರಶ್ಚ ಸಾಗರತ್ವಮುಪಾಗತಃ।।
ಒಮ್ಮೆ ಕುಪಿತನಾದ ಅವನು ಈಗ ಸಾಗರವೆಂದು ಹೇಳಿಸಿಕೊಳ್ಳುವ ಭೂಭಾಗವನ್ನು ಅಗೆಯಿಸಿದ್ದನು. ಅವನ ಹೆಸರಿನಿಂದಲೇ ಸಮುದ್ರವು ಸಾಗರವೆಂದು ಕರೆಯಲ್ಪಟ್ಟಿತು.
12029128a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029128c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಸಗರನೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029129a ರಾಜಾನಂ ಚ ಪೃಥುಂ ವೈನ್ಯಂ ಮೃತಂ ಶುಶ್ರುಮ ಸೃಂಜಯ।
12029129c ಯಮಭ್ಯಷಿಂಚನ್ಸಂಭೂಯ ಮಹಾರಣ್ಯೇ ಮಹರ್ಷಯಃ।।
ಸೃಂಜಯ! ಮಹಾರಣ್ಯದಲ್ಲಿ ಮಹರ್ಷಿಗಳೆಲ್ಲರೂ ಸೇರಿ ರಾಜನೆಂದು ಅಭಿಷೇಕಿಸಿದ, ವೇನನ ಮಗ ಪೃಥುವೂ ಕೂಡ ಮೃತನಾದನೆಂದು ಕೇಳಿದ್ದೇವೆ!
12029130a ಪ್ರಥಯಿಷ್ಯತಿ ವೈ ಲೋಕಾನ್ಪೃಥುರಿತ್ಯೇವ ಶಬ್ದಿತಃ।
12029130c ಕ್ಷತಾಚ್ಚ ನಸ್ತ್ರಾಯತೀತಿ ಸ ತಸ್ಮಾತ್ಕ್ಷತ್ರಿಯಃ ಸ್ಮೃತಃ।।
“ಧರ್ಮಮರ್ಯಾದೆಯನ್ನು ಲೋಕದಲ್ಲಿ ಸ್ಥಾಪಿಸುತ್ತಾನೆ” ಎಂದು ಅವನನ್ನು ಪೃಥುವೆಂದು ಕರೆದರು. ಆಪತ್ತಿನಿಂದ ರಕ್ಷಿಸುವವನಾದುದರಿಂದ ಅವನು ಕ್ಷತ್ರಿಯನೆಂದು ಕರೆಯಲ್ಪಟ್ಟನು.
12029131a ಪೃಥುಂ ವೈನ್ಯಂ ಪ್ರಜಾ ದೃಷ್ಟ್ವಾ ರಕ್ತಾಃ ಸ್ಮೇತಿ ಯದಬ್ರುವನ್।
12029131c ತತೋ ರಾಜೇತಿ ನಾಮಾಸ್ಯ ಅನುರಾಗಾದಜಾಯತ।।
ವೈನ್ಯ ಪೃಥುವನ್ನು ನೋಡಿದ ಪ್ರಜೆಗಳು “ಇವನಲ್ಲಿ ನಾವು ಅನುರಕ್ತರಾಗಿದ್ದೇವೆ!” ಎಂದರು. ಅವರ ಅನುರಾಗದಿಂದ ಅವನಿಗೆ “ರಾಜ” ಎನ್ನುವ ಹೆಸರೂ ಹುಟ್ಟಿಕೊಂಡಿತು.
12029132a ಅಕೃಷ್ಟಪಚ್ಯಾ ಪೃಥಿವೀ ಪುಟಕೇ ಪುಟಕೇ ಮಧು।
12029132c ಸರ್ವಾ ದ್ರೋಣದುಘಾ ಗಾವೋ ವೈನ್ಯಸ್ಯಾಸನ್ಪ್ರಶಾಸತಃ।।
ಪೃಥುವಿನ ರಾಜ್ಯಭಾರದಲ್ಲಿ ಉತ್ತು-ಬಿತ್ತದೇ ಇದ್ದರೂ ಬೆಳೆಯು ಬೆಳೆಯುತ್ತಿತ್ತು. ಎಲೆ-ಎಲೆಗಳಲ್ಲಿ ಜೇನು ಸುರಿಯುತ್ತಿತ್ತು. ಹಸುಗಳು ಬಳ್ಳ-ಬಳ್ಳದಷ್ಟು ಹಾಲನ್ನು ಕರೆಯುತ್ತಿದ್ದವು.
12029133a ಅರೋಗಾಃ ಸರ್ವಸಿದ್ಧಾರ್ಥಾ ಮನುಷ್ಯಾ ಅಕುತೋಭಯಾಃ।
12029133c ಯಥಾಭಿಕಾಮಮವಸನ್ಕ್ಷೇತ್ರೇಷು ಚ ಗೃಹೇಷು ಚ।।
ಮನುಷ್ಯರೆಲ್ಲರೂ ಅರೋಗಿಗಳಾಗಿದ್ದರು. ಬೇಕಾದುದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೂ ಭಯವಿರಲಿಲ್ಲ. ಎಲ್ಲರೂ ಅವರವರ ಇಷ್ಟದಂತೆ ಮನೆಗಳಲ್ಲಿಯೋ ಹೊರಗಡೆಯೋ ನಿಶ್ಚಿಂತರಾಗಿ ವಾಸಿಸುತ್ತಿದ್ದರು.
12029134a ಆಪಃ ಸಂಸ್ತಂಭಿರೇ ಯಸ್ಯ ಸಮುದ್ರಸ್ಯ ಯಿಯಾಸತಃ।
12029134c ಸರಿತಶ್ಚಾನುದೀರ್ಯಂತ ಧ್ವಜಸಂಗಶ್ಚ ನಾಭವತ್।।
ಅವನು ಸಮುದ್ರವನ್ನು ದಾಟಲು ಹೋಗುವಾಗ ಅದರ ನೀರು ಸ್ತಂಭವಾಗುತ್ತಿತ್ತು. ನದಿಗಳ ಪ್ರವಾಹಗಳೂ ಇಳಿದುಹೋಗುತ್ತಿದ್ದವು. ಅವನ ಧ್ವಜವು ಎಂದೂ ಮುರಿಯಲಿಲ್ಲ!
12029135a ಹೈರಣ್ಯಾಂಸ್ತ್ರಿನಲೋತ್ಸೇಧಾನ್ಪರ್ವತಾನೇಕವಿಂಶತಿಮ್।
12029135c ಬ್ರಾಹ್ಮಣೇಭ್ಯೋ ದದೌ ರಾಜಾ ಯೋಽಶ್ವಮೇಧೇ ಮಹಾಮಖೇ।।
ಅಶ್ವಮೇಧ ಮಹಾಮಖದಲ್ಲಿ ಆ ರಾಜನು ಬ್ರಾಹ್ಮಣರಿಗೆ ಸಾವಿರದ ಇನ್ನೂರು ಮೊಳಗಳಷ್ಟು ಎತ್ತರವಿರುವ ಇಪ್ಪತ್ತೊಂದು ಸುವರ್ಣ ಪರ್ವತಗಳನ್ನು ದಾನವಾಗಿ ಕೊಟ್ಟಿದ್ದನು.
12029136a ಸ ಚೇನ್ಮಮಾರ ಸೃಂಜಯ ಚತುರ್ಭದ್ರತರಸ್ತ್ವಯಾ।
12029136c ಪುತ್ರಾತ್ಪುಣ್ಯತರಶ್ಚೈವ ಮಾ ಪುತ್ರಮನುತಪ್ಯಥಾಃ।।
ಸೃಂಜಯ! ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯಗಳಲ್ಲಿ ನಿನಗಿಂತಲೂ ಅಧಿಕನಾಗಿದ್ದ, ನಿನ್ನ ಮಗನಿಗಿಂತಲೂ ಹೆಚ್ಚು ಪುಣ್ಯಶಾಲಿಯಾಗಿದ್ದ ಪೃಥುವೂ ಮೃತನಾದನೆಂದಮೇಲೆ ನಿನ್ನ ಪುತ್ರನ ಕುರಿತು ಶೋಕಿಸಬೇಡ.
12029137a ಕಿಂ ವೈ ತೂಷ್ಣೀಂ ಧ್ಯಾಯಸಿ ಸೃಂಜಯ ತ್ವಂ ನ ಮೇ ರಾಜನ್ವಾಚಮಿಮಾಂ ಶೃಣೋಷಿ।
12029137c ನ ಚೇನ್ಮೋಘಂ ವಿಪ್ರಲಪ್ತಂ ಮಯೇದಂ ಪಥ್ಯಂ ಮುಮೂರ್ಷೋರಿವ ಸಮ್ಯಗುಕ್ತಮ್।।
ರಾಜನ್! ಸೃಂಜಯ! ನೀನು ಏಕೆ ಸುಮ್ಮನೇ ಯೋಚನಾಮಗ್ನನಾಗಿರುವೆ? ನನ್ನ ಈ ಮಾತುಗಳನ್ನು ನೀನು ಕೇಳುತ್ತಿಲ್ಲವೇ? ಸಾಯುವವನಿಗೆ ಚಿಕಿತ್ಸೆಯು ವ್ಯರ್ಥವಾಗುವಂತೆ ನನ್ನ ಈ ಪ್ರಲಾಪವು ವ್ಯರ್ಥವಾಗಿಲ್ಲ ತಾನೇ?”
12029138 ಸೃಂಜಯ ಉವಾಚ
12029138a ಶೃಣೋಮಿ ತೇ ನಾರದ ವಾಚಮೇತಾಂ ವಿಚಿತ್ರಾರ್ಥಾಂ ಸ್ರಜಮಿವ ಪುಣ್ಯಗಂಧಾಮ್।
12029138c ರಾಜರ್ಷೀಣಾಂ ಪುಣ್ಯಕೃತಾಂ ಮಹಾತ್ಮನಾಂ ಕೀರ್ತ್ಯಾ ಯುಕ್ತಾಂ ಶೋಕನಿರ್ಣಾಶನಾರ್ಥಮ್।।
ಸೃಂಜಯನು ಹೇಳಿದನು: “ನಾರದ! ನನ್ನ ಈ ಶೋಕವನ್ನು ವಿನಾಶಗೊಳಿಸಲೋಸುಗ ಪುಣ್ಯಕೃತ ಮಹಾತ್ಮ ರಾಜರ್ಷಿಗಳ ಕೀರ್ತಿಯುಕ್ತವಾಗಿರುವ ಮತ್ತು ಪವಿತ್ರಗಂಧಸೂಸುವ ಮಾಲೆಯಂತೆ ವಿಚಿತ್ರಾರ್ಥಗಳುಳ್ಳ ನಿನ್ನ ಮಾತುಗಳನ್ನು ನಾನು ಕೇಳುತ್ತಿದ್ದೇನೆ.
12029139a ನ ತೇ ಮೋಘಂ ವಿಪ್ರಲಪ್ತಂ ಮಹರ್ಷೇ ದೃಷ್ಟ್ವೈವ ತ್ವಾಂ ನಾರದಾಹಂ ವಿಶೋಕಃ।
12029139c ಶುಶ್ರೂಷೇ ತೇ ವಚನಂ ಬ್ರಹ್ಮವಾದಿನ್ ನ ತೇ ತೃಪ್ಯಾಮ್ಯಮೃತಸ್ಯೇವ ಪಾನಾತ್।।
ಮಹರ್ಷೇ! ನಿನ್ನ ಈ ಮಾತುಗಳು ಖಂಡಿತವಾಗಿಯು ವ್ಯರ್ಥವಾಗಿಲ್ಲ. ನಾರದ! ನಿನ್ನನ್ನು ನೋಡಿದಾಕ್ಷಣವೇ ನಾನು ಶೋಕರಹಿತನಾದೆನು. ಬ್ರಹ್ಮವಾದಿನ್! ಅಮೃತಸೇವನೆಗೆ ಸಮನಾಗಿದ್ದ ನಿಮ್ಮ ಮಾತುಗಳಿಂದ ಇನ್ನೂ ತೃಪ್ತನಾಗದೇ ಸುಮ್ಮನೇ ಕೇಳುತ್ತಲೇ ಇದ್ದೆ!
12029140a ಅಮೋಘದರ್ಶಿನ್ಮಮ ಚೇತ್ಪ್ರಸಾದಂ ಸುತಾಘದಗ್ಧಸ್ಯ ವಿಭೋ ಪ್ರಕುರ್ಯಾಃ।
12029140c ಮೃತಸ್ಯ ಸಂಜೀವನಮದ್ಯ ಮೇ ಸ್ಯಾತ್ ತವ ಪ್ರಸಾದಾತ್ಸುತಸಂಗಮಶ್ಚ।।
ಅಮೋಘದರ್ಶಿಯೇ! ವಿಭೋ! ನನ್ನ ಮೇಲೆ ಪ್ರಸನ್ನತೆಯಿದ್ದರೆ ಪುತ್ರಶೋಕದಿಂದ ಸುಟ್ಟುಹೋಗಿರುವ ನನ್ನ ಮೃತನಾದ ಮಗನನ್ನು ಪುನಃ ಬದುಕಿಸಿಕೊಡಬೇಕು! ನಿನ್ನ ಪ್ರಸಾದದಿಂದ ನನಗೆ ನನ್ನ ಮಗನೊಡನೆ ಸಮಾಗಮವಾಗಲಿ!”
12029141 ನಾರದ ಉವಾಚ
12029141a ಯಸ್ತೇ ಪುತ್ರೋ ದಯಿತೋಽಯಂ ವಿಯಾತಃ ಸ್ವರ್ಣಷ್ಠೀವೀ ಯಮದಾತ್ಪರ್ವತಸ್ತೇ।
12029141c ಪುನಸ್ತೇ ತಂ ಪುತ್ರಮಹಂ ದದಾಮಿ ಹಿರಣ್ಯನಾಭಂ ವರ್ಷಸಹಸ್ರಿಣಂ ಚ।।
ನಾರದನು ಹೇಳಿದನು: “ಪರ್ವತನು ನಿನಗೆ ಅನುಗ್ರಹಿಸಿದ್ದ ಸ್ವರ್ಣಷ್ಠೀವೀ ಎಂಬ ಹೆಸರಿನ ಪುತ್ರನು ಹೊರಟುಹೋಗಿದ್ದಾನೆ. ಅವನು ಇನ್ನಿಲ್ಲ. ಆದರೆ ನಾನು ನಿನಗೆ ಸಹಸ್ರವರ್ಷ ಆಯುಸ್ಸುಳ್ಳ ಹಿರಣ್ಯನಾಭನೆನ್ನುವ ಮಗನನ್ನು ನೀಡುತ್ತೇನೆ!””