028 ವ್ಯಾಸವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 28

ಸಾರ

ಋಷಿ ಅಶ್ಮ ಮತ್ತು ಜನಕನ ಸಂವಾದದ ಮೂಲಕ ಪ್ರಾರಬ್ಧದ ಪ್ರಬಲತೆಯನ್ನು ವರ್ಣಿಸುತ್ತಾ ವ್ಯಾಸನು ಯುಧಿಷ್ಠಿರನಿಗೆ ತಿಳಿಯ ಹೇಳಿದುದು (1-58).

12028001 ವೈಶಂಪಾಯನ ಉವಾಚ।
12028001a ಜ್ಞಾತಿಶೋಕಾಭಿತಪ್ತಸ್ಯ ಪ್ರಾಣಾನಭ್ಯುತ್ಸಿಸೃಕ್ಷತಃ।
12028001c ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ವ್ಯಾಸಃ ಶೋಕಮಪಾನುದತ್।।

ವೈಶಂಪಾಯನನು ಹೇಳಿದನು: “ಜ್ಞಾತಿಶೋಕದಿಂದ ತಪಿಸುತ್ತಾ ಪ್ರಾಣಗಳನ್ನೇ ತೊರೆಯಲು ಸಿದ್ಧನಾಗಿದ್ದ ಪಾಂಡುಪುತ್ರರ ಜ್ಯೇಷ್ಠ ಯುಧಿಷ್ಠಿರನ ಶೋಕವನ್ನು ನೀಗಿಸಲು ವ್ಯಾಸನು ಹೀಗೆ ಹೇಳಿದನು:

12028002 ವ್ಯಾಸ ಉವಾಚ।
12028002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12028002c ಅಶ್ಮಗೀತಂ ನರವ್ಯಾಘ್ರ ತನ್ನಿಬೋಧ ಯುಧಿಷ್ಠಿರ।।

ವ್ಯಾಸನು ಹೇಳಿದನು: “ನರವ್ಯಾಘ್ರ! ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಅಶ್ಮಗೀತವೆನ್ನುವ ಪುರಾತನ ಇತಿಹಾಸವೊಂದನ್ನು ಕೇಳು.

12028003a ಅಶ್ಮಾನಂ ಬ್ರಾಹ್ಮಣಂ ಪ್ರಾಜ್ಞಂ ವೈದೇಹೋ ಜನಕೋ ನೃಪಃ।
12028003c ಸಂಶಯಂ ಪರಿಪಪ್ರಚ್ಚ ದುಃಖಶೋಕಪರಿಪ್ಲುತಃ।।

ದುಃಖ-ಶೋಕಗಳಲ್ಲಿ ಮುಳುಗಿಹೋಗಿದ್ದ ವಿದೇಹ ದೇಶದ ನೃಪ ಜನಕನು ಪ್ರಾಜ್ಞ ಬ್ರಾಹ್ಮಣ ಅಶ್ಮನನ್ನು ಪ್ರಶ್ನಿಸಿದನು:

12028004 ಜನಕ ಉವಾಚ।
12028004a ಆಗಮೇ ಯದಿ ವಾಪಾಯೇ ಜ್ಞಾತೀನಾಂ ದ್ರವಿಣಸ್ಯ ಚ।
12028004c ನರೇಣ ಪ್ರತಿಪತ್ತವ್ಯಂ ಕಲ್ಯಾಣಂ ಕಥಮಿಚ್ಚತಾ।।

ಜನಕನು ಹೇಳಿದನು: “ಕುಟುಂಬದ ಮತ್ತು ಸಂಪತ್ತಿನ ವೃದ್ಧಿ-ವಿನಾಶಗಳುಂಟಾದಾಗ ಕಲ್ಯಾಣವುಂಟಾಗಲು ಮನುಷ್ಯನು ಏನು ಮಾಡಬೇಕು?”

12028005 ಅಶ್ಮೋವಾಚ।
12028005a ಉತ್ಪನ್ನಮಿಮಮಾತ್ಮಾನಂ ನರಸ್ಯಾನಂತರಂ ತತಃ।
12028005c ತಾನಿ ತಾನ್ಯಭಿವರ್ತಂತೇ ದುಃಖಾನಿ ಚ ಸುಖಾನಿ ಚ।।

ಅಶ್ಮನು ಹೇಳಿದನು: “ಜನನದ ನಂತರ ಸತತವಾಗಿ ದುಃಖ-ಸುಖಗಳು ಮನುಷ್ಯನನ್ನು ಅನುಸರಿಸಿ ಬರುತ್ತಲೇ ಇರುತ್ತವೆ.

12028006a ತೇಷಾಮನ್ಯತರಾಪತ್ತೌ ಯದ್ಯದೇವೋಪಸೇವತೇ।
12028006c ತತ್ತದ್ಧಿ ಚೇತನಾಮಸ್ಯ ಹರತ್ಯಭ್ರಮಿವಾನಿಲಃ।।

ಆ ಸುಖ-ದುಃಖಗಳಲ್ಲಿ ಯಾವುದು ಪ್ರಾಪ್ತವಾಗುವುದೋ ಅದೇ ಮನುಷ್ಯನ ಬುದ್ಧಿಯನ್ನು ಗಾಳಿಯು ಮೋಡವನ್ನು ಹಾರಿಸಿಕೊಂಡು ಹೋಗುವಂತೆ ಹಾರಿಸಿಕೊಂಡು ಹೋಗುತ್ತದೆ.

12028007a ಅಭಿಜಾತೋಽಸ್ಮಿ ಸಿದ್ಧೋಽಸ್ಮಿ ನಾಸ್ಮಿ ಕೇವಲಮಾನುಷಃ।
12028007c ಇತ್ಯೇವಂ ಹೇತುಭಿಸ್ತಸ್ಯ ತ್ರಿಭಿಶ್ಚಿತ್ತಂ ಪ್ರಸಿಚ್ಯತಿ।।

ನಾನು ಒಳ್ಳೆಯಕುಲದಲ್ಲಿ ಹುಟ್ಟಿದ್ದೇನೆ, ನಾನು ಎಲ್ಲವನ್ನೂ ಸಾಧಿಸಿದ್ದೇನೆ ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಅಹಂಕಾರಗುಣಗಳು ಮನುಷ್ಯನ ಚಿತ್ತವನ್ನು ತೋಯಿಸಿಬಿಡುತ್ತವೆ.

12028008a ಸ ಪ್ರಸಿಕ್ತಮನಾ ಭೋಗಾನ್ವಿಸೃಜ್ಯ ಪಿತೃಸಂಚಿತಾನ್।
12028008c ಪರಿಕ್ಷೀಣಃ ಪರಸ್ವಾನಾಮಾದಾನಂ ಸಾಧು ಮನ್ಯತೇ।।

ಭೋಗಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಂಡು ಪಿತೃಸಂಚಿತ ಸಂಪತ್ತು ಮುಗಿದುಹೋಗಲು ಪರರ ಸ್ವತ್ತನ್ನು ಕಿತ್ತುಕೊಳ್ಳುವುದೇ ಸರಿಯೆಂದು ಭಾವಿಸುತ್ತಾನೆ.

12028009a ತಮತಿಕ್ರಾಂತಮರ್ಯಾದಮಾದದಾನಮಸಾಂಪ್ರತಮ್।
12028009c ಪ್ರತಿಷೇಧಂತಿ ರಾಜಾನೋ ಲುಬ್ಧಾ ಮೃಗಮಿವೇಷುಭಿಃ।।

ಮರ್ಯಾದೆಗಳನ್ನು ಮೀರಿ ಇತರರ ಸ್ವತ್ತನ್ನು ಅಪಹರಿಸುವ ಆ ಲುಬ್ಧರನ್ನು ರಾಜನು ಮೃಗಗಳನ್ನು ಬಾಣಗಳಿಂದ ಹೇಗೋ ಹಾಗೆ ಬೇಟೆಯಾಡಿ ವಿರೋಧಿಸುತ್ತಾನೆ.

12028010a ಯೇ ಚ ವಿಂಶತಿವರ್ಷಾ ವಾ ತ್ರಿಂಶದ್ವರ್ಷಾಶ್ಚ ಮಾನವಾಃ।
12028010c ಪರೇಣ ತೇ ವರ್ಷಶತಾನ್ನ ಭವಿಷ್ಯಂತಿ ಪಾರ್ಥಿವ।।

ಪಾರ್ಥಿವ! ಇಪ್ಪತ್ತು ಅಥವಾ ಮೂವತ್ತು ವರ್ಷಗಳ ಇಂತಹ ಯುವಕರು ನೂರು ವರ್ಷಗಳ ಪರ್ಯಂತ ಜೀವಿಸುವುದಿಲ್ಲ.

12028011a ತೇಷಾಂ ಪರಮದುಃಖಾನಾಂ ಬುದ್ಧ್ಯಾ ಭೇಷಜಮಾದಿಶೇತ್।
12028011c ಸರ್ವಪ್ರಾಣಭೃತಾಂ ವೃತ್ತಂ ಪ್ರೇಕ್ಷಮಾಣಸ್ತತಸ್ತತಃ।।

ಹೀಗೆ ಎಲ್ಲ ಪ್ರಾಣಿಗಳ ವ್ಯವಹಾರಗಳನ್ನೂ ಅಲ್ಲಲ್ಲಿ ನೋಡುತ್ತಾ ಅವರ ಪರಮದುಃಖಗಳಿಗೆ ಬುದ್ಧಿಯಿಂದ ಯೋಚಿಸಿ ಚಿಕಿತ್ಸೆಗಳನ್ನು ನಡೆಸಬೇಕು.

12028012a ಮಾನಸಾನಾಂ ಪುನರ್ಯೋನಿರ್ದುಃಖಾನಾಂ ಚಿತ್ತವಿಭ್ರಮಃ।
12028012c ಅನಿಷ್ಟೋಪನಿಪಾತೋ ವಾ ತೃತೀಯಂ ನೋಪಪದ್ಯತೇ।।

ಮಾನಸಿಕ ದುಃಖಗಳಿಗೆ ಬುದ್ಧಿಭ್ರಮೆ ಮತ್ತು ಅನಿಷ್ಟಗಳೆಂಬ ಎರಡು ಕಾರಣಗಳಿವೆ. ಮೂರನೆಯ ಯಾವುದೇ ಕಾರಣವೂ ಇರುವುದಿಲ್ಲ.

12028013a ಏವಮೇತಾನಿ ದುಃಖಾನಿ ತಾನಿ ತಾನೀಹ ಮಾನವಮ್।
12028013c ವಿವಿಧಾನ್ಯುಪವರ್ತಂತೇ ತಥಾ ಸಾಂಸ್ಪರ್ಶಕಾನಿ ಚ।।

ಇವೇ ಮೊದಲಾದ ದುಃಖಗಳು ಮಾನವನನ್ನು ಆವರಿಸುತ್ತಿರುತ್ತವೆ. ಹಾಗೆಯೇ ವಿಷಯಾಸಕ್ತಿಗಳಿಂದಲೂ ದುಃಖಗಳು ಪ್ರಾಪ್ತವಾಗುತ್ತವೆ.

12028014a ಜರಾಮೃತ್ಯೂ ಹ ಭೂತಾನಿ ಖಾದಿತಾರೌ ವೃಕಾವಿವ।
12028014c ಬಲಿನಾಂ ದುರ್ಬಲಾನಾಂ ಚ ಹ್ರಸ್ವಾನಾಂ ಮಹತಾಮಪಿ।।

ಮುಪ್ಪು ಮತ್ತು ಸಾವು ಎನ್ನುವವು ಪ್ರಾಣಿಗಳನ್ನು ತಿನ್ನುವಂಥಹ ತೋಳಗಳಂತೆ. ಅವು ಬಲಶಾಲಿಗಳನ್ನೂ, ದುರ್ಬಲರನ್ನೂ, ಸಣ್ಣವರನ್ನೂ ಮತ್ತು ದೊಡ್ಡವರನ್ನೂ ತಿನ್ನುತ್ತವೆ.

12028015a ನ ಕಶ್ಚಿಜ್ಜಾತ್ವತಿಕ್ರಾಮೇಜ್ಜರಾಮೃತ್ಯೂ ಹ ಮಾನವಃ।
12028015c ಅಪಿ ಸಾಗರಪರ್ಯಂತಾಂ ವಿಜಿತ್ಯೇಮಾಂ ವಸುಂಧರಾಮ್।।

ಸಾಗರ ಪರ್ಯಂತವಾದ ಈ ಭೂಮಿಯನ್ನು ಜಯಿಸಿದರೂ, ಜರಾಮೃತ್ಯುಗಳನ್ನು ಜಯಿಸಲು ಯಾವ ಮನುಷ್ಯನಿಗೂ ಸಾಧ್ಯವಿಲ್ಲ.

12028016a ಸುಖಂ ವಾ ಯದಿ ವಾ ದುಃಖಂ ಭೂತಾನಾಂ ಪರ್ಯುಪಸ್ಥಿತಮ್।
12028016c ಪ್ರಾಪ್ತವ್ಯಮವಶೈಃ ಸರ್ವಂ ಪರಿಹಾರೋ ನ ವಿದ್ಯತೇ।।

ಕಾಲ-ಕರ್ಮ ಸಂಯೋಗದಿಂದ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವನ್ನೂ ಪ್ರಾಣಿಗಳು ಅವಶ್ಯವಾಗಿ ಅನುಭವಿಸಬೇಕೇ ಹೊರತು ಅವುಗಳಿಗೆ ಯಾವ ಪರಿಹಾರವೂ ಇಲ್ಲ.

12028017a ಪೂರ್ವೇ ವಯಸಿ ಮಧ್ಯೇ ವಾಪ್ಯುತ್ತಮೇ ವಾ ನರಾಧಿಪ।
12028017c ಅವರ್ಜನೀಯಾಸ್ತೇಽರ್ಥಾ ವೈ ಕಾಂಕ್ಷಿತಾಶ್ಚ ತತೋಽನ್ಯಥಾ।।

ನರಾಧಿಪ! ಮನುಷ್ಯನಿಗೆ ಪೂರ್ವ ವಯಸ್ಸಿನಲ್ಲಿ, ಅಥವಾ ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿಯಾಗಲೀ ಈ ಸುಖ-ದುಃಖಗಳನ್ನು ತ್ಯಜಿಸಲು ಸಾಧ್ಯವಿಲ್ಲ. ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

12028018a ಸುಪ್ರಿಯೈರ್ವಿಪ್ರಯೋಗಶ್ಚ ಸಂಪ್ರಯೋಗಸ್ತಥಾಪ್ರಿಯೈಃ।
12028018c ಅರ್ಥಾನರ್ಥೌ ಸುಖಂ ದುಃಖಂ ವಿಧಾನಮನುವರ್ತತೇ।।

ಅತ್ಯಂತ ಪ್ರಿಯರಾದವರಿಂದ ವಿಯೋಗ, ಅಪ್ರಿಯರೊಡನೆ ಸಹವಾಸ, ಧನಪ್ರಾಪ್ತಿ, ಧನನಷ್ಟ, ಮತ್ತು ಸುಖ-ದುಃಖಗಳು ಅವರವರ ಪ್ರಾರಬ್ಧವನ್ನು ಅನುಸರಿಸಿ ಬರುತ್ತಲೇ ಇರುತ್ತವೆ.

12028019a ಪ್ರಾದುರ್ಭಾವಶ್ಚ ಭೂತಾನಾಂ ದೇಹನ್ಯಾಸಸ್ತಥೈವ ಚ।
12028019c ಪ್ರಾಪ್ತಿವ್ಯಾಯಾಮಯೋಗಶ್ಚ ಸರ್ವಮೇತತ್ಪ್ರತಿಷ್ಠಿತಮ್।।

ಪ್ರಾಣಿಗಳ ಹುಟ್ಟು-ಸಾವುಗಳೂ ಲಾಭಾಲಾಭಗಳೂ ಎಲ್ಲವೂ ಅವರವರು ಪಡೆದುಕೊಂಡು ಬಂದಿರುವ ಪ್ರಾರಬ್ಧಕರ್ಮಫಲಗಳಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ.

12028020a ಗಂಧವರ್ಣರಸಸ್ಪರ್ಶಾ ನಿವರ್ತಂತೇ ಸ್ವಭಾವತಃ।
12028020c ತಥೈವ ಸುಖದುಃಖಾನಿ ವಿಧಾನಮನುವರ್ತತೇ।।

ಗಂಧ-ವರ್ಣ-ರಸ-ಸ್ಪರ್ಶಗಳು ಸ್ವಾಭಾವಿಕವಾಗಿ ಬಂದು-ಹೋಗುತ್ತಲೇ ಇರುತ್ತವೆ. ಹಾಗೆಯೇ ಸುಖದುಃಖಗಳು ಕರ್ಮಫಲಾನುಸಾರವಾಗಿ ದೈವ ನಿಯಮವನ್ನನುಸರಿಸಿ ಬಂದು-ಹೋಗುತ್ತಿರುತ್ತವೆ.

12028021a ಆಸನಂ ಶಯನಂ ಯಾನಮುತ್ಥಾನಂ ಪಾನಭೋಜನಮ್।
12028021c ನಿಯತಂ ಸರ್ವಭೂತಾನಾಂ ಕಾಲೇನೈವ ಭವಂತ್ಯುತ।।

ಸರ್ವಪ್ರಾಣಿಗಳಿಗೂ ಕುಳಿತುಕೊಳ್ಳುವ, ಮಲಗುವ, ತಿರುಗಾಡುವ, ಏಳುವ, ಮತ್ತು ಪಾನ-ಭೋಜನಗಳ ಕಾಲವು ನಿಯತವಾಗಿರುತ್ತದೆ.

12028022a ವೈದ್ಯಾಶ್ಚಾಪ್ಯಾತುರಾಃ ಸಂತಿ ಬಲವಂತಃ ಸುದುರ್ಬಲಾಃ।
12028022c ಸ್ತ್ರೀಮಂತಶ್ಚ ತಥಾ ಷಂಢಾ ವಿಚಿತ್ರಃ ಕಾಲಪರ್ಯಯಃ।।

ವೈದ್ಯರೂ ರೋಗಿಗಳಾಗುತ್ತಾರೆ. ಬಲಿಷ್ಠರೂ ದುರ್ಬಲರಾಗುತ್ತಾರೆ. ಸ್ತ್ರೀಸಂಗಗಳನ್ನು ಹೊಂದಿದವರೂ ಷಂಢರಾಗುತ್ತಾರೆ. ಕಾಲದ ವೈಪರೀತ್ಯವು ಹೀಗೆ ವಿಚಿತ್ರವಾದುದು.

12028023a ಕುಲೇ ಜನ್ಮ ತಥಾ ವೀರ್ಯಮಾರೋಗ್ಯಂ ಧೈರ್ಯಮೇವ ಚ।
12028023c ಸೌಭಾಗ್ಯಮುಪಭೋಗಶ್ಚ ಭವಿತವ್ಯೇನ ಲಭ್ಯತೇ।।

ಉತ್ತಮ ಕುಲದಲ್ಲಿ ಜನ್ಮ, ವೀರ್ಯ, ಆರೋಗ್ಯ, ಧೈರ್ಯ, ಸೌಭಾಗ್ಯ ಮತ್ತು ಉಪಭೋಗಗಳು ಅದೃಷ್ಟದಿಂದಲೇ ಲಭ್ಯವಾಗುತ್ತವೆ.

12028024a ಸಂತಿ ಪುತ್ರಾಃ ಸುಬಹವೋ ದರಿದ್ರಾಣಾಮನಿಚ್ಚತಾಮ್।
12028024c ಬಹೂನಾಮಿಚ್ಚತಾಂ ನಾಸ್ತಿ ಸಮೃದ್ಧಾನಾಂ ವಿಚೇಷ್ಟತಾಮ್।।

ಮಕ್ಕಳೇ ಬೇಡವೆನ್ನುವ ದರಿದ್ರನಿಗೆ ಅನೇಕ ಮಕ್ಕಳಾಗುತ್ತಾರೆ. ಮಕ್ಕಳಾಗಬೇಕೆಂದು ಹಂಬಲಿಸುವ ಶ್ರೀಮಂತನಿಗೆ ಮಕ್ಕಳೇ ಆಗುವುದಿಲ್ಲ. ವಿಧಿಯು ವಿಚಿತ್ರವಾದುದು.

12028025a ವ್ಯಾಧಿರಗ್ನಿರ್ಜಲಂ ಶಸ್ತ್ರಂ ಬುಭುಕ್ಷಾ ಶ್ವಾಪದಂ ವಿಷಮ್।
12028025c ರಜ್ಜ್ವಾ ಚ ಮರಣಂ ಜಂತೋರುಚ್ಚಾಚ್ಚ ಪತನಂ ತಥಾ।।

ವ್ಯಾಧಿ, ಅಗ್ನಿ, ನೀರು, ಶಸ್ತ್ರ, ಹಸಿವು, ಅಪಘಾತ, ವಿಷಜ್ವರ, ಬೀಳುವುದು ಇವೇ ಪ್ರಾಣಿಗಳ ಮರಣಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.

12028026a ನಿರ್ಯಾಣಂ ಯಸ್ಯ ಯದ್ದಿಷ್ಟಂ ತೇನ ಗಚ್ಚತಿ ಹೇತುನಾ।
12028026c ದೃಶ್ಯತೇ ನಾಭ್ಯತಿಕ್ರಾಮನ್ನತಿಕ್ರಾಂತೋ ನ ವಾ ಪುನಃ।।

ಯಾರ ಅದೃಷ್ಟದಲ್ಲಿ ಯಾವ ಕಾರಣದಿಂದ ಮರಣಹೊಂದಬೇಕೆಂದಿರುತ್ತದೆಯೋ ಅದೇ ರೀತಿಯಲ್ಲಿ ಮರಣ ಹೊಂದುತ್ತಾರೆ. ಕೆಲವೊಮ್ಮೆ ಧರ್ಮಗಳನ್ನು ಉಲ್ಲಂಘಿಸದೇ ಇರತಕ್ಕವನೂ ಆಪತ್ತಿನಿಂದ ಪಾರಾಗದೇ ಇರುವುದನ್ನು ಕಾಣುತ್ತೇವೆ.

12028027a ದೃಶ್ಯತೇ ಹಿ ಯುವೈವೇಹ ವಿನಶ್ಯನ್ವಸುಮಾನ್ನರಃ।
12028027c ದರಿದ್ರಶ್ಚ ಪರಿಕ್ಲಿಷ್ಟಃ ಶತವರ್ಷೋ ಜನಾಧಿಪ।।

ಜನಾಧಿಪ! ಐಶ್ವರ್ಯವಂತನಾದವನು ಯುವಕನಾಗಿರುವಾಗಲೇ ಸತ್ತುಹೋಗುವುದನ್ನು ಮತ್ತು ದರಿದ್ರನಾಗಿ ಕಷ್ಟದಲ್ಲಿರುವವನು ನೂರುವರ್ಷಗಳು ಬದುಕಿರುವುದನ್ನು ನೋಡುತ್ತೇವೆ.

12028028a ಅಕಿಂಚನಾಶ್ಚ ದೃಶ್ಯಂತೇ ಪುರುಷಾಶ್ಚಿರಜೀವಿನಃ।
12028028c ಸಮೃದ್ಧೇ ಚ ಕುಲೇ ಜಾತಾ ವಿನಶ್ಯಂತಿ ಪತಂಗವತ್।।

ಯಾರಲ್ಲಿ ಏನೂ ಇರುವುದಿಲ್ಲವೋ ಅಂಥಹ ದರಿದ್ರ ಜನರು ಬಹುಕಾಲ ಬಾಳುತ್ತಾರೆ. ಶ್ರೀಮಂತ ಕುಲದಲ್ಲಿ ಹುಟ್ಟಿದವರು ಪತಂಗಗಳಂತೆ ನಾಶಹೊಂದುತ್ತಾರೆ.

12028029a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ।
12028029c ಕಾಷ್ಠಾನ್ಯಪಿ ಹಿ ಜೀರ್ಯಂತೇ ದರಿದ್ರಾಣಾಂ ನರಾಧಿಪ।।

ನರಾಧಿಪ! ಲೋಕದಲ್ಲಿ ಶ್ರೀಮಂತರಿಗೆ ಬಹುಷಃ ಭೋಗಿಸುವ ಶಕ್ತಿಯೇ ಇರುವುದಿಲ್ಲ. ಆದರೆ ದರಿದ್ರನಿಗೆ ಕಟ್ಟಿಗೆಯನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿರುತ್ತದೆ.

12028030a ಅಹಮೇತತ್ಕರೋಮೀತಿ ಮನ್ಯತೇ ಕಾಲಚೋದಿತಃ।
12028030c ಯದ್ಯದಿಷ್ಟಮಸಂತೋಷಾದ್ದುರಾತ್ಮಾ ಪಾಪಮಾಚರನ್।।

ಕಾಲಚೋದಿತ ಮನುಷ್ಯನು ನಾನೇ ಇದನ್ನು ಮಾಡುತ್ತೇನೆ ಎಂದು ಭಾವಿಸಿಕೊಳ್ಳುತ್ತಾನೆ. ತನಗಿಲ್ಲವೆಂಬ ಅಸಂತೋಷದಿಂದ ದುರಾತ್ಮನು ಪಾಪಕರ್ಮಗಳನ್ನೆಸಗುತ್ತಾನೆ.

12028031a ಸ್ತ್ರಿಯೋಽಕ್ಷಾ ಮೃಗಯಾ ಪಾನಂ ಪ್ರಸಂಗಾನ್ನಿಂದಿತಾ ಬುಧೈಃ।
12028031c ದೃಶ್ಯಂತೇ ಚಾಪಿ ಬಹವಃ ಸಂಪ್ರಸಕ್ತಾ ಬಹುಶ್ರುತಾಃ।।

ಸ್ತ್ರೀಸಂಗ, ದ್ಯೂತ, ಬೇಟೆ, ಸುರಾಪಾನ ಇವುಗಳು ಕೆಟ್ಟ ಹವ್ಯಾಸಗಳೆಂದು ತಿಳಿದವರು ನಿಂದಿಸುತ್ತಾರೆ. ಆದರೆ ತಿಳಿದವರೇ ಹೆಚ್ಚಾಗಿ ಇವುಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ!

12028032a ಇತಿ ಕಾಲೇನ ಸರ್ವಾರ್ಥಾನೀಪ್ಸಿತಾನೀಪ್ಸಿತಾನಿ ಚ।
12028032c ಸ್ಪೃಶಂತಿ ಸರ್ವಭೂತಾನಿ ನಿಮಿತ್ತಂ ನೋಪಲಭ್ಯತೇ।।

ಹೀಗೆ ಕಾಲದ ಪ್ರಭಾವದಿಂದಲೇ ಜೀವಿಗಳು – ಇಷ್ಟವಾದವುಗಳು ಮತ್ತು ಇಷ್ಟವಲ್ಲದವುಗಳು – ಎಲ್ಲವನ್ನೂ ಅವರವರ ಅದೃಷ್ಟದ ಪ್ರಕಾರ ಪಡೆಯುತ್ತವೆ.

12028033a ವಾಯುಮಾಕಾಶಮಗ್ನಿಂ ಚ ಚಂದ್ರಾದಿತ್ಯಾವಹಃಕ್ಷಪೇ।
12028033c ಜ್ಯೋತೀಂಷಿ ಸರಿತಃ ಶೈಲಾನ್ಕಃ ಕರೋತಿ ಬಿಭರ್ತಿ ವಾ।।

ವಾಯು, ಆಕಾಶ, ಅಗ್ನಿ, ಚಂದ್ರಾದಿತ್ಯರು, ಹಗಲು-ರಾತ್ರಿಗಳು, ನಕ್ಷತ್ರಗಳು ಮತ್ತು ನದೀ-ಪರ್ವತಗಳನ್ನು ಕಾಲವಲ್ಲದೇ ಇನ್ನ್ಯಾರು ಸೃಷ್ಟಿಸುತ್ತಾರೆ? ಬೇರೆ ಯಾರು ಇವುಗಳನ್ನು ಹೊರುತ್ತಾರೆ?

12028034a ಶೀತಮುಷ್ಣಂ ತಥಾ ವರ್ಷಂ ಕಾಲೇನ ಪರಿವರ್ತತೇ।
12028034c ಏವಮೇವ ಮನುಷ್ಯಾಣಾಂ ಸುಖದುಃಖೇ ನರರ್ಷಭ।।

ನರರ್ಷಭ! ಛಳಿ-ಬೇಸಗೆ-ಮಳೆಗಾಲಗಳು ಕಾಲದ ಪ್ರಭಾವದಿಂದಲೇ ಬದಲಾಗುತ್ತಿರುತ್ತವೆ. ಹಾಗೆಯೇ ಮನುಷ್ಯರ ಸುಖ-ದುಃಖಗಳೂ ಬದಲಾಗುತ್ತಿರುತ್ತವೆ.

12028035a ನೌಷಧಾನಿ ನ ಶಾಸ್ತ್ರಾಣಿ ನ ಹೋಮಾ ನ ಪುನರ್ಜಪಾಃ।
12028035c ತ್ರಾಯಂತೇ ಮೃತ್ಯುನೋಪೇತಂ ಜರಯಾ ವಾಪಿ ಮಾನವಮ್।।

ಔಷಧಗಳಾಗಲೀ, ಶಾಸ್ತ್ರಗಳಾಗಲೀ, ಹೋಮಗಳಾಗಲೀ ಅಥವಾ ಪುನಃ ಜಪಗಳಾಗಲೀ ಮಾನವನನ್ನು ಮೃತ್ಯುವಿನಿಂದಾಗಲೀ ಮುಪ್ಪಿನಿಂದಾಗಲೀ ರಕ್ಷಿಸುವುದಿಲ್ಲ.

12028036a ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ।
12028036c ಸಮೇತ್ಯ ಚ ವ್ಯತೀಯಾತಾಂ ತದ್ವದ್ಭೂತಸಮಾಗಮಃ।।

ಮಹಾಸಾಗರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ತೇಲಿಕೊಂಡು ಬಂದು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಪುನಃ ದೂರ ತೇಲಿಕೊಂಡು ಹೋಗುವುದೋ ಹಾಗೆಯೇ ಜೀವಿಗಳ ಸಮಾಗಮವೂ ಕೂಡ ಕ್ಷಣಿಕವಾಗಿರುತ್ತದೆ.

12028037a ಯೇ ಚಾಪಿ ಪುರುಷೈಃ ಸ್ತ್ರೀಭಿರ್ಗೀತವಾದ್ಯೈರುಪಸ್ಥಿತಾಃ।
12028037c ಯೇ ಚಾನಾಥಾಃ ಪರಾನ್ನಾದಾಃ ಕಾಲಸ್ತೇಷು ಸಮಕ್ರಿಯಃ।।

ಸ್ತ್ರೀಯರೊಡನೆ ಗೀತ-ವಾದ್ಯಗಳಿಂದ ಆನಂದಿತರಾಗಿರುವ ಪುರುಷರು ಮತ್ತು ಅನಾಥರಾಗಿ ಪರಾನ್ನವನ್ನೇ ತಿಂದು ಜೀವಿಸುವ ಪುರುಷರು ಇವರೊಬ್ಬಡನೆಯೂ ಕಾಲವು ಒಂದೇ ಸಮನಾಗಿ ವರ್ತಿಸುತ್ತದೆ46.

12028038a ಮಾತೃಪಿತೃಸಹಸ್ರಾಣಿ ಪುತ್ರದಾರಶತಾನಿ ಚ।
12028038c ಸಂಸಾರೇಷ್ವನುಭೂತಾನಿ ಕಸ್ಯ ತೇ ಕಸ್ಯ ವಾ ವಯಮ್।।

ಈ ಸಂಸಾರದಲ್ಲಿ ನಾವು ಅನೇಕಾನೇಕ ಸಹಸ್ರ ತಾಯಿ-ತಂದೆಯರನ್ನೂ, ಪತ್ನಿ-ಮಕ್ಕಳನ್ನೂ ಪಡೆದಿರುತ್ತೇವೆ. ಆದರೆ ಇಂದು ಅವರು ಯಾರಿಗೆ ಸಂಬಂಧಪಟ್ಟವರು? ಅಥವಾ ನಾವು ಯಾರಿಗೆ ಸಂಬಂಧಿಸಿದವರು?

12028039a ನೈವಾಸ್ಯ ಕಶ್ಚಿದ್ಭವಿತಾ ನಾಯಂ ಭವತಿ ಕಸ್ಯ ಚಿತ್।
12028039c ಪಥಿ ಸಂಗತಮೇವೇದಂ ದಾರಬಂಧುಸುಹೃದ್ಗಣೈಃ।।

ನಾವು ಯಾರದ್ದೂ ಆಗಿರುವುದಿಲ್ಲ. ಯಾರೂ ನಮ್ಮವರಾಗಿರುವುದಿಲ್ಲ. ಈ ಪತ್ನಿ-ಬಂಧು-ಸ್ನೇಹಿತ ಗಣಗಳು ದಾರಿಯಲ್ಲಿ ಸಿಗುವ ದಾರಿಹೋಕರು ಅಷ್ಟೆ!

12028040a ಕ್ವಾಸಂ ಕ್ವಾಸ್ಮಿ ಗಮಿಷ್ಯಾಮಿ ಕೋ ನ್ವಹಂ ಕಿಮಿಹಾಸ್ಥಿತಃ।
12028040c ಕಸ್ಮಾತ್ಕಮನುಶೋಚೇಯಮಿತ್ಯೇವಂ ಸ್ಥಾಪಯೇನ್ಮನಃ।।
12028040e ಅನಿತ್ಯೇ ಪ್ರಿಯಸಂವಾಸೇ ಸಂಸಾರೇ ಚಕ್ರವದ್ಗತೌ।।

“ನಾನು ಯಾರು? ಎಲ್ಲಿಗೆ ಹೋಗುತ್ತಿದ್ದೇನೆ? ನಾನು ಯಾರವನು? ಇಲ್ಲಿಗೇಕೆ ಬಂದಿದ್ದೇನೆ? ಯಾರಿಗೋಸ್ಕರ ಚಿಂತಿಸುತ್ತಿದ್ದೇನೆ?” ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿರಬೇಕು. ಚಕ್ರದಂತೆ ತಿರುಗುತ್ತಿರುವ ಈ ಸಂಸಾರದಲ್ಲಿ ಪ್ರಿಯವಾದುದನ್ನು ಪಡೆಯುವ ಅಥವಾ ಪ್ರಿಯರೊಡನೆ ಸೇರುವ ಕ್ರಿಯೆಗಳು ಅನಿತ್ಯವಾದವು. ಶಾಶ್ವತವಾದವುಗಳಲ್ಲ.

12028041a ನ ದೃಷ್ಟಪೂರ್ವಂ ಪ್ರತ್ಯಕ್ಷಂ ಪರಲೋಕಂ ವಿದುರ್ಬುಧಾಃ।
12028041c ಆಗಮಾಂಸ್ತ್ವನತಿಕ್ರಮ್ಯ ಶ್ರದ್ಧಾತವ್ಯಂ ಬುಭೂಷತಾ।।

ಪರಲೋಕವು ಪ್ರತ್ಯಕ್ಷದಲ್ಲಿಲ್ಲ. ಪರಲೋಕವನ್ನು ನೋಡಿದವರು ಯಾರೂ ಇಲ್ಲ ಎನ್ನುವುದನ್ನು ತಿಳಿದವರು ಹೇಳುತ್ತಾರೆ. ಆದರೆ ಆಗಮಗಳನ್ನು ಉಲ್ಲಂಘಿಸದೇ ಅವುಗಳಲ್ಲಿ ಶ್ರದ್ಧೆಯನ್ನಿಡಬೇಕು.

12028042a ಕುರ್ವೀತ ಪಿತೃದೈವತ್ಯಂ ಧರ್ಮಾಣಿ ಚ ಸಮಾಚರೇತ್।
12028042c ಯಜೇಚ್ಚ ವಿದ್ವಾನ್ವಿಧಿವತ್ತ್ರಿವರ್ಗಂ ಚಾಪ್ಯನುವ್ರಜೇತ್।।

ವಿದ್ವಾನನು ಪಿತೃ-ದೇವಕಾರ್ಯಗಳನ್ನು ಮತ್ತು ಯಜ್ಞಗಳನ್ನು – ಈ ಮೂರು ವಿಧದ ಕರ್ಮಗಳನ್ನು ವಿಧಿವತ್ತಾಗಿ ನಡೆಸುತ್ತಿರಬೇಕು.

12028043a ಸಂನಿಮಜ್ಜಜ್ಜಗದಿದಂ ಗಂಭೀರೇ ಕಾಲಸಾಗರೇ।
12028043c ಜರಾಮೃತ್ಯುಮಹಾಗ್ರಾಹೇ ನ ಕಶ್ಚಿದವಬುಧ್ಯತೇ।।

ಮುಪ್ಪು-ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರ ಸಮುದ್ರದಂತಿರುವ ಈ ಕಾಲದಲ್ಲಿ ಜಗತ್ತೆಲ್ಲವೂ ಮುಳುಗಿಹೋಗಿದೆ. ಆದರೆ ಯಾರೂ ಇದನ್ನು ತಿಳಿದುಕೊಳ್ಳುವುದಿಲ್ಲ!

12028044a ಆಯುರ್ವೇದಮಧೀಯಾನಾಃ ಕೇವಲಂ ಸಪರಿಗ್ರಹಮ್।
12028044c ದೃಶ್ಯಂತೇ ಬಹವೋ ವೈದ್ಯಾ ವ್ಯಾಧಿಭಿಃ ಸಮಭಿಪ್ಲುತಾಃ।।

ಆಯುರ್ವೇದವನ್ನು ಅಧ್ಯಯನ ಮಾಡಿರುವ ಅನೇಕ ವೈದ್ಯರು ಪರಿವಾರ ಸಮೇತರಾಗಿ ನಾನಾ ವ್ಯಾಧಿಗಳಿಗೆ ತುತ್ತಾಗಿರುವುದನ್ನು ಕಾಣುತ್ತೇವೆ.

12028045a ತೇ ಪಿಬಂತಃ ಕಷಾಯಾಂಶ್ಚ ಸರ್ಪೀಂಷಿ ವಿವಿಧಾನಿ ಚ।
12028045c ನ ಮೃತ್ಯುಮತಿವರ್ತಂತೇ ವೇಲಾಮಿವ ಮಹೋದಧಿಃ।।

ಅವರು ವಿವಿಧ ಕಷಾಯಗಳನ್ನೂ ಲೇಹಗಳನ್ನೂ ಸೇವಿಸುತ್ತಲೇ ಇರುತ್ತಾರೆ. ಆದರೂ ಸಮುದ್ರವು ಎಷ್ಟೇ ಪ್ರಯತ್ನಿಸಿದರೂ ತೀರವನ್ನು ಉಲ್ಲಂಘಿಸದಂತೆ ಅವರು ಮೃತ್ಯುವನ್ನು ಮೀರಲಾರರು.

12028046a ರಸಾಯನವಿದಶ್ಚೈವ ಸುಪ್ರಯುಕ್ತರಸಾಯನಾಃ।
12028046c ದೃಶ್ಯಂತೇ ಜರಯಾ ಭಗ್ನಾ ನಗಾ ನಾಗೈರಿವೋತ್ತಮೈಃ।।

ರಸಾಯನ ಶಾಸ್ತ್ರವನ್ನು ತಿಳಿದವರೂ ಕೂಡ ಉಪಯುಕ್ತ ರಸಾಯನಪದಾರ್ಥಗಳನ್ನು ಸೇವಿಸಿದರೂ ಬಲಿಷ್ಠ ಆನೆಯಿಂದ ಮುರಿಯಲ್ಪಟ್ಟ ವೃಕ್ಷದಂತೆ ಮುಪ್ಪಿನಿಂದ ಮುರಿಯಲ್ಪಟ್ಟು ಬೀಳುತ್ತಾರೆ.

12028047a ತಥೈವ ತಪಸೋಪೇತಾಃ ಸ್ವಾಧ್ಯಾಯಾಭ್ಯಸನೇ ರತಾಃ।
12028047c ದಾತಾರೋ ಯಜ್ಞಶೀಲಾಶ್ಚ ನ ತರಂತಿ ಜರಾಂತಕೌ।।

ಹಾಗೆಯೇ ತಪಸ್ಸಿನಿಂದ ಕೂಡಿ ಸ್ವಾಧ್ಯಾಯ-ಅಭ್ಯಾಸಗಳಲ್ಲಿ ನಿರತರಾದವರೂ, ದಾನಗಳನ್ನಿತ್ತವರೂ ಮತ್ತು ಯಜ್ಞಶೀಲರೂ ಕೂಡ ಮುಪ್ಪು-ಮರಣಗಳನ್ನು ಮೀರುವುದಿಲ್ಲ.

12028048a ನ ಹ್ಯಹಾನಿ ನಿವರ್ತಂತೇ ನ ಮಾಸಾ ನ ಪುನಃ ಸಮಾಃ।
12028048c ಜಾತಾನಾಂ ಸರ್ವಭೂತಾನಾಂ ನ ಪಕ್ಷಾ ನ ಪುನಃ ಕ್ಷಪಾಃ।।

ಹುಟ್ಟಿದ ಎಲ್ಲ ಪ್ರಾಣಿಗಳಿಗೂ ಕಳೆದುಹೋದ ದಿನಗಳಾಗಲೀ, ರಾತ್ರಿಗಳಾಗಲೀ, ಮಾಸಗಳಾಗಲೀ, ಪಕ್ಷಗಳಾಗಲೀ, ವರ್ಷಗಳಾಗಲೀ ಪುನಃ ಮರಳಿ ಬರುವುದಿಲ್ಲ.

12028049a ಸೋಽಯಂ ವಿಪುಲಮಧ್ವಾನಂ ಕಾಲೇನ ಧ್ರುವಮಧ್ರುವಃ।
12028049c ನರೋಽವಶಃ ಸಮಭ್ಯೇತಿ ಸರ್ವಭೂತನಿಷೇವಿತಮ್।।

ಅಸ್ಥಿರನಾದ ಅಸ್ವತಂತ್ರನಾದ ಮನುಷ್ಯನು ಕಾಲವು ಸನ್ನಿಹಿತವಾದೊಡನೆಯೇ ಸರ್ವಪ್ರಾಣಿಗಳೂ ಹೋಗುವ ಶಾಶ್ವತವಾದ ವಿಶಾಲ ಮೃತ್ಯುಪಥದಲ್ಲಿ ಹೋಗುತ್ತಾನೆ.

12028050a ದೇಹೋ ವಾ ಜೀವತೋಽಭ್ಯೇತಿ ಜೀವೋ ವಾಭ್ಯೇತಿ ದೇಹತಃ।
12028050c ಪಥಿ ಸಂಗತಮೇವೇದಂ ದಾರೈರನ್ಯೈಶ್ಚ ಬಂಧುಭಿಃ।।

ದೇಹವೇ ಜೀವವೆಂದು ತಿಳಿದುಕೊಂಡಿರುವವರು ಅಥವಾ ಜೀವವೇ ದೇಹವೆಂದು ತಿಳಿದುಕೊಂಡಿರುವವರು ಇಬ್ಬರೂ ಕೂಡ ದಾರಿಯಲ್ಲಿ ಪತ್ನಿಯೇ ಮೊದಲಾದ ಬಂಧುಗಳೊಡನೆ ಸೇರಿಕೊಂಡು ಸ್ವಲ್ಪಕಾಲವೇ ಇರುತ್ತಾರೆ.

12028051a ನಾಯಮತ್ಯಂತಸಂವಾಸೋ ಲಭ್ಯತೇ ಜಾತು ಕೇನ ಚಿತ್।
12028051c ಅಪಿ ಸ್ವೇನ ಶರೀರೇಣ ಕಿಮುತಾನ್ಯೇನ ಕೇನ ಚಿತ್।।

ಯಾರಿಗೂ ಅನಂತವಾದ (ಕೊನೆಯಾಗದ) ಸಂಬಂಧಗಳು ಯಾವಾಗಲೂ ದೊರಕುವುದಿಲ್ಲ. ತನ್ನ ಶರೀರದೊಡನಿರುವ ಸಂಬಂಧವೇ ಅಲ್ಪಕಾಲದ್ದಾಗಿರುವಾಗ ಬೇರೆಯವರೊಡನಿರುವ ಸಂಬಂಧಗಳ ಕುರಿತು ಹೇಳುವುದೇನಿದೆ?

12028052a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ।
12028052c ನ ತ್ವಂ ಪಶ್ಯಸಿ ತಾನದ್ಯ ನ ತ್ವಾಂ ಪಶ್ಯಂತಿ ತೇಽಪಿ ಚ।।

ರಾಜನ್! ಈಗ ನಿನ್ನ ತಂದೆಯೆಲ್ಲಿದ್ದಾನೆ? ನಿನ್ನ ಪಿತಾಮಹನೆಲ್ಲಿದ್ದಾನೆ? ಅವರನ್ನು ಇಂದು ನೀನೂ ಕಾಣುತ್ತಿಲ್ಲ. ಅವರಿಗೂ ಕೂಡ ನೀನು ಕಾಣುತ್ತಿಲ್ಲ!

12028053a ನ ಹ್ಯೇವ ಪುರುಷೋ ದ್ರಷ್ಟಾ ಸ್ವರ್ಗಸ್ಯ ನರಕಸ್ಯ ವಾ।
12028053c ಆಗಮಸ್ತು ಸತಾಂ ಚಕ್ಷುರ್ನೃಪತೇ ತಮಿಹಾಚರ।।

ನೃಪತೇ! ಯಾವ ಪುರುಷನೂ ಇಲ್ಲಿಂದ ಸ್ವರ್ಗ ಅಥವಾ ನರಕವನ್ನು ಕಂಡಿಲ್ಲ. ಆದರೆ ಆಗಮಗಳೇ ಸತ್ಪುರುಷರಿಗೆ ಕಣ್ಣುಗಳಾಗಿವೆ. ಆದುದರಂತೆ ಅವುಗಳು ಹೇಳುವಂತೆ ನಡೆದುಕೋ!

12028054a ಚರಿತಬ್ರಹ್ಮಚರ್ಯೋ ಹಿ ಪ್ರಜಾಯೇತ ಯಜೇತ ಚ।
12028054c ಪಿತೃದೇವಮಹರ್ಷೀಣಾಮಾನೃಣ್ಯಾಯಾನಸೂಯಕಃ।।

ಬ್ರಹ್ಮಚರ್ಯವನ್ನು ನಡೆಸಿ, ಮಕ್ಕಳನ್ನು ಪಡೆದು ಯಜ್ಞಗಳನ್ನು ಮಾಡಬೇಕು. ಈ ರೀತಿ ಪಿತೃ-ದೇವ-ಮಹರ್ಷಿಗಳ ಋಣಗಳನ್ನು ದೋಷವೆಣಿಸದೇ ತೀರಿಸಬೇಕು.

12028055a ಸ ಯಜ್ಞಶೀಲಃ ಪ್ರಜನೇ ನಿವಿಷ್ಟಃ ಪ್ರಾಗ್ಬ್ರಹ್ಮಚಾರೀ ಪ್ರವಿಭಕ್ತಪಕ್ಷಃ।
12028055c ಆರಾಧಯನ್ಸ್ವರ್ಗಮಿಮಂ ಚ ಲೋಕಂ ಪರಂ ಚ ಮುಕ್ತ್ವಾ ಹೃದಯವ್ಯಲೀಕಮ್।।

ಮೊದಲು ಬ್ರಹ್ಮಚಾರಿಯಾಗಿದ್ದುಕೊಂಡು, ನಂತರ ಸಂತಾನಗಳನ್ನು ಪಡೆದು, ದ್ವಂದ್ವಗಳನ್ನು ಮೀರಿ ಅವಿಭಕ್ತನಾಗಿದ್ದುಕೊಂಡು ಈ ಲೋಕವೇ ಸ್ವರ್ಗವೆಂದು ಆರಾಧಿಸಿ ಹೃದಯದಲ್ಲಿರುವ ಮುಳ್ಳನ್ನು ಕಿತ್ತೊಗೆಯಬೇಕು.

12028056a ಸಮ್ಯಗ್ಹಿ ಧರ್ಮಂ ಚರತೋ ನೃಪಸ್ಯ ದ್ರವ್ಯಾಣಿ ಚಾಪ್ಯಾಹರತೋ ಯಥಾವತ್।
12028056c ಪ್ರವೃತ್ತಚಕ್ರಸ್ಯ ಯಶೋಽಭಿವರ್ಧತೇ ಸರ್ವೇಷು ಲೋಕೇಷು ಚರಾಚರೇಷು।।

ಉತ್ತಮ ಧರ್ಮದಲ್ಲಿಯೇ ನಡೆದುಕೊಂಡು, ಯಥಾವತ್ತಾಗಿ ದ್ರವ್ಯಗಳನ್ನು ಸಂಗ್ರಹಿಸುತ್ತಾ ನಡೆದುಕೊಳ್ಳುವ ನೃಪನ ಯಶಸ್ಸು ಎಲ್ಲ ಲೋಕಗಳಲ್ಲಿಯೂ ವಿಸ್ತರಿಸುತ್ತದೆ.”

12028057 ವ್ಯಾಸ ಉವಾಚ
12028057a ಇತ್ಯೇವಮಾಜ್ಞಾಯ ವಿದೇಹರಾಜೋ ವಾಕ್ಯಂ ಸಮಗ್ರಂ ಪರಿಪೂರ್ಣಹೇತುಃ।
12028057c ಅಶ್ಮಾನಮಾಮಂತ್ರ್ಯ ವಿಶುದ್ಧಬುದ್ಧಿರ್ ಯಯೌ ಗೃಹಂ ಸ್ವಂ ಪ್ರತಿ ಶಾಂತಶೋಕಃ।।

ವ್ಯಾಸನು ಹೇಳಿದನು: “ಹೀಗೆ ಅಶ್ಮನಿಂದ ಈ ಸಮಗ್ರವಾದ, ಉದಾಹರಣೆಗಳಿಂದ ಪರಿಪೂರ್ಣವಾಗಿದ್ದ ಮಾತುಗಳನ್ನು ಕೇಳಿ ಜನಕನು ವಿಶುದ್ಧ ಮನಸ್ಸುಳ್ಳವನಾಗಿ, ಶೋಕವನ್ನು ತೊರೆದು ಶಾಂತನಾಗಿ ತನ್ನ ಅರಮನೆಗೆ ತೆರಳಿದನು.

12028058a ತಥಾ ತ್ವಮಪ್ಯಚ್ಯುತ ಮುಂಚ ಶೋಕಮ್ ಉತ್ತಿಷ್ಠ ಶಕ್ರೋಪಮ ಹರ್ಷಮೇಹಿ।
12028058c ಕ್ಷಾತ್ರೇಣ ಧರ್ಮೇಣ ಮಹೀ ಜಿತಾ ತೇ ತಾಂ ಭುಂಕ್ಷ್ವ ಕುಂತೀಸುತ ಮಾ ವಿಷಾದೀಃ।।

ಅಚ್ಯುತ! ಇಂದ್ರನ ಸಮಾನನೇ! ಕುಂತೀಸುತ! ಹಾಗೆಯೇ ನೀನೂ ಕೂಡ ಶೋಕವನ್ನು ತೊರೆ! ಎದ್ದೇಳು! ಹರ್ಷವನ್ನು ತಾಳು! ಕ್ಷಾತ್ರಧರ್ಮದಿಂದ ಮಹಿಯನ್ನು ಗೆದ್ದ ನೀನು ಅದನ್ನು ಭೋಗಿಸು! ವಿಷಾದಿಸಬೇಡ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಅಷ್ಟಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.