ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 27
ಸಾರ
ಶೋಕವಶನಾದ ಯುಧಿಷ್ಠಿರನು ಶರೀರತ್ಯಾಗಮಾಡಲು ಉದ್ಯತನಾಗಲು ವ್ಯಾಸನು ಅವನನ್ನು ತಡೆದು ತಿಳಿಯ ಹೇಳಿದುದು (1-32).
12027001 ಯುಧಿಷ್ಠಿರ ಉವಾಚ।
12027001a ಅಭಿಮನ್ಯೌ ಹತೇ ಬಾಲೇ ದ್ರೌಪದ್ಯಾಸ್ತನಯೇಷು ಚ।
12027001c ಧೃಷ್ಟದ್ಯುಮ್ನೇ ವಿರಾಟೇ ಚ ದ್ರುಪದೇ ಚ ಮಹೀಪತೌ।।
12027002a ವಸುಷೇಣೇ ಚ ಧರ್ಮಜ್ಞೇ ಧೃಷ್ಟಕೇತೌ ಚ ಪಾರ್ಥಿವೇ।
12027002c ತಥಾನ್ಯೇಷು ನರೇಂದ್ರೇಷು ನಾನಾದೇಶ್ಯೇಷು ಸಂಯುಗೇ।।
12027003a ನ ವಿಮುಂಚತಿ ಮಾಂ ಶೋಕೋ ಜ್ಞಾತಿಘಾತಿನಮಾತುರಮ್।
12027003c ರಾಜ್ಯಕಾಮುಕಮತ್ಯುಗ್ರಂ ಸ್ವವಂಶೋಚ್ಚೇದಕಾರಕಮ್।।
ಯುಧಿಷ್ಠಿರನು ಹೇಳಿದನು: “ಬಾಲಕ ಅಭಿಮನ್ಯು, ದ್ರೌಪದಿಯ ಐವರು ಮಕ್ಕಳು, ಧೃಷ್ಟದ್ಯುಮ್ನ, ಮಹೀಪತಿಗಳಾದ ದ್ರುಪದ-ವಿರಾಟರು, ಧರ್ಮಜ್ಞ ಪಾರ್ಥಿವ ವಸುಷೇಣ45-ಧೃಷ್ಟಕೇತು, ಹಾಗೆಯೇ ನಾನಾದೇಶಗಳಿಂದ ಬಂದಿದ್ದ ಅನ್ಯ ನರೇಂದ್ರರು ಯುದ್ಧದಲ್ಲಿ ಮಡಿದುದರಿಂದ ಜ್ಞಾತಿಘಾತಿಕನಾದ ನನ್ನನ್ನು ಶೋಕವು ಬಿಡುತ್ತಿಲ್ಲ. ರಾಜ್ಯಲೋಭದಿಂದಾಗಿ ನಾನೇ ಈ ಉಗ್ರಕರ್ಮವನ್ನೆಸಗಿದೆನು!
12027004a ಯಸ್ಯಾಂಕೇ ಕ್ರೀಡಮಾನೇನ ಮಯಾ ವೈ ಪರಿವರ್ತಿತಮ್।
12027004c ಸ ಮಯಾ ರಾಜ್ಯಲುಬ್ಧೇನ ಗಾಂಗೇಯೋ ವಿನಿಪಾತಿತಃ।।
ಯಾರ ತೊಡೆಯಮೇಲೆ ಹೊರಳಾಡಿ ಆಡುತ್ತಿದ್ದೆನೋ ಆ ಗಾಂಗೇಯನನ್ನೇ ನಾನು ರಾಜಲೋಭದಿಂದ ಕೆಳಗುರುಳಿಸಿದೆನು!
12027005a ಯದಾ ಹ್ಯೇನಂ ವಿಘೂರ್ಣಂತಮಪಶ್ಯಂ ಪಾರ್ಥಸಾಯಕೈಃ।
12027005c ಕಂಪಮಾನಂ ಯಥಾ ವಜ್ರೈಃ ಪ್ರೇಕ್ಷಮಾಣಂ ಶಿಖಂಡಿನಮ್।।
12027006a ಜೀರ್ಣಂ ಸಿಂಹಮಿವ ಪ್ರಾಂಶುಂ ನರಸಿಂಹಂ ಪಿತಾಮಹಮ್।
12027006c ಕೀರ್ಯಮಾಣಂ ಶರೈಸ್ತೀಕ್ಷ್ಣೈರ್ದೃಷ್ಟ್ವಾ ಮೇ ವ್ಯಥಿತಂ ಮನಃ।।
ಮುದಿಸಿಂಹದಂತಿದ್ದ, ಉನ್ನತ ಕಾಯ ನರಶ್ರೇಷ್ಠ ಪಿತಾಮಹ ಭೀಷ್ಮನು ಅರ್ಜುನನ ವಜ್ರಸದೃಶ ಬಾಣಗಳಿಂದ ಪೀಡಿತನಾಗಿ ಕಂಪಿಸುತ್ತಿರುವಾದ ಶಿಖಂಡಿಯು ಅವನನ್ನು ಎವೆಯಿಕ್ಕದೇ ನೋಡುತ್ತಿದ್ದನು. ಆಗ ಅರ್ಜುನನ ಬಾಣಗಳಿಂದ ಶರೀರಾದ್ಯಂತ ಮುಚ್ಚಲ್ಪಟ್ಟ ನನ್ನ ಆ ನರಸಿಂಹ ಪಿತಾಮಹನನ್ನು ನೋಡಿ ನನ್ನ ಮನಸ್ಸು ಬಹಳವಾಗಿ ವ್ಯಥೆಗೊಂಡಿತ್ತು.
12027007a ಪ್ರಾಙ್ಮುಖಂ ಸೀದಮಾನಂ ಚ ರಥಾದಪಚ್ಯುತಂ ಶರೈಃ।
12027007c ಘೂರ್ಣಮಾನಂ ಯಥಾ ಶೈಲಂ ತದಾ ಮೇ ಕಶ್ಮಲೋಽಭವತ್।।
ರಥದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಶರಗಳಿಂದ ಪೀಡಿತನಾಗಿ ಅವನು ಕುಸಿಯುತ್ತಿರಲು ಮತ್ತು ಪರ್ವತದಂತೆ ಕಂಪಿಸುತ್ತಿರಲು ನನಗೆ ಮೂರ್ಛೆಯೇ ಬಂದಂತಾಗಿತ್ತು.
12027008a ಯಃ ಸ ಬಾಣಧನುಷ್ಪಾಣಿರ್ಯೋಧಯಾಮಾಸ ಭಾರ್ಗವಮ್।
12027008c ಬಹೂನ್ಯಹಾನಿ ಕೌರವ್ಯಃ ಕುರುಕ್ಷೇತ್ರೇ ಮಹಾಮೃಧೇ।।
12027009a ಸಮೇತಂ ಪಾರ್ಥಿವಂ ಕ್ಷತ್ರಂ ವಾರಾಣಸ್ಯಾಂ ನದೀಸುತಃ।
12027009c ಕನ್ಯಾರ್ಥಮಾಹ್ವಯದ್ವೀರೋ ರಥೇನೈಕೇನ ಸಂಯುಗೇ।।
12027010a ಯೇನ ಚೋಗ್ರಾಯುಧೋ ರಾಜಾ ಚಕ್ರವರ್ತೀ ದುರಾಸದಃ।
12027010c ದಗ್ಧಃ ಶಸ್ತ್ರಪ್ರತಾಪೇನ ಸ ಮಯಾ ಯುಧಿ ಘಾತಿತಃ।।
ಯಾವ ಕೌರವ್ಯನು ಬಾಣ-ಧನುಷ್ಪಾಣಿಯಾಗಿ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾರ್ಗವ ಪರುಶುರಾಮನೊಡನೆ ಅನೇಕ ದಿನಗಳು ಹೋರಾಡಿದನೋ ಆ ಮಹಾವೀರ ಉಗ್ರಾಯುಧ ರಾಜಾ ಚಕ್ರವರ್ತಿ ದುರಾಸದ ನದೀಸುತನು ವಾರಾಣಸಿಯಲ್ಲಿ ಕನ್ಯಾರ್ಥಿಗಳಾಗಿ ಕ್ಷತ್ರಿಯ ರಾಜರೆಲ್ಲಾ ಸೇರಿದ್ದಾಗ ಯುದ್ಧದಲ್ಲಿ ಒಂದೇ ರಥದಿಂದ ಶಸ್ತ್ರಪ್ರತಾಪದಿಂದ ಸುಟ್ಟುಹಾಕಿದ್ದನು. ಅವನನ್ನೇ ನಾನು ಯುದ್ಧದಲ್ಲಿ ಕೊಲ್ಲಿಸಿದೆ!
12027011a ಸ್ವಯಂ ಮೃತ್ಯುಂ ರಕ್ಷಮಾಣಃ ಪಾಂಚಾಲ್ಯಂ ಯಃ ಶಿಖಂಡಿನಮ್।
12027011c ನ ಬಾಣೈಃ ಪಾತಯಾಮಾಸ ಸೋಽರ್ಜುನೇನ ನಿಪಾತಿತಃ।।
ತನಗೇ ಮೃತ್ಯುವಾಗಿದ್ದ ಪಾಂಚಾಲ್ಯ ಶಿಖಂಡಿಯನ್ನು ಸ್ವಯಂ ತಾನೇ ರಕ್ಷಿಸಿಕೊಂಡು ಬಂದಿದ್ದ ಅವನನ್ನು ಅರ್ಜುನನು ಬಾಣಗಳಿಂದ ಕೆಳಗುರುಳಿಸಿದನು.
12027012a ಯದೈನಂ ಪತಿತಂ ಭೂಮಾವಪಶ್ಯಂ ರುಧಿರೋಕ್ಷಿತಮ್।
12027012c ತದೈವಾವಿಶದತ್ಯುಗ್ರೋ ಜ್ವರೋ ಮೇ ಮುನಿಸತ್ತಮ।।
ಮುನಿಸತ್ತಮ! ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಅವನು ಬೀಳುತ್ತಲೇ ಉಗ್ರ ಜ್ವರವು ನನ್ನನ್ನು ಆವರಿಸಿತು.
12027012e ಯೇನ ಸಂವರ್ಧಿತಾ ಬಾಲಾ ಯೇನ ಸ್ಮ ಪರಿರಕ್ಷಿತಾಃ।।
12027013a ಸ ಮಯಾ ರಾಜ್ಯಲುಬ್ಧೇನ ಪಾಪೇನ ಗುರುಘಾತಿನಾ।
12027013c ಅಲ್ಪಕಾಲಸ್ಯ ರಾಜ್ಯಸ್ಯ ಕೃತೇ ಮೂಢೇನ ಘಾತಿತಃ।।
ಬಾಲ್ಯದಲ್ಲಿ ಯಾರಿಂದ ಬೆಳೆಯಿಸಲ್ಪಟ್ಟೆವೋ ಮತ್ತು ಯಾರಿಂದ ಪರಿರಕ್ಷಿತಗೊಂಡೆವೋ ಅವನನ್ನೇ ರಾಜ್ಯಲೋಭದಿಂದ ನಾನು ಅಲ್ಪಕಾಲವೇ ಭೋಗಿಸಬಲ್ಲ ಈ ರಾಜ್ಯಕ್ಕಾಗಿ ಸಂಹರಿಸಿದೆನು. ಆದುದರಿಂದ ನಾನು ಪಾಪಿ, ಗುರುಘಾತಿ ಮತ್ತು ಮೂಢನಾಗಿದ್ದೇನೆ.
12027014a ಆಚಾರ್ಯಶ್ಚ ಮಹೇಷ್ವಾಸಃ ಸರ್ವಪಾರ್ಥಿವಪೂಜಿತಃ।
12027014c ಅಭಿಗಮ್ಯ ರಣೇ ಮಿಥ್ಯಾ ಪಾಪೇನೋಕ್ತಃ ಸುತಂ ಪ್ರತಿ।।
ಮಹೇಷ್ವಾಸ, ಸರ್ವಪಾರ್ಥಿವರಿಂದ ಪೂಜಿಸಲ್ಪಡುತ್ತಿದ್ದ ಆಚಾರ್ಯನಿಗೆ ರಣರಂಗದಲ್ಲಿ ಅವನ ಮಗನ ಸಂಬಂಧದಲ್ಲಿ ಪಾಪಿಯಾದ ನಾನು ಸುಳ್ಳನ್ನೇ ಹೇಳಿದೆ.
12027015a ತನ್ಮೇ ದಹತಿ ಗಾತ್ರಾಣಿ ಯನ್ಮಾಂ ಗುರುರಭಾಷತ।
12027015c ಸತ್ಯವಾಕ್ಯೋ ಹಿ ರಾಜಂಸ್ತ್ವಂ ಯದಿ ಜೀವತಿ ಮೇ ಸುತಃ।।
ಆ ಸಮಯದಲ್ಲಿ ಗುರುವು ನನ್ನೊಡನೆ “ರಾಜನ್! ನನ್ನ ಮಗನು ಜೀವಿಸಿರುವನೋ ಇಲ್ಲವೋ ಸತ್ಯವನ್ನೇ ನುಡಿ!” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ನನ್ನ ದೇಹವೇ ಸುಡುತ್ತಿದೆ.
12027015e ಸತ್ಯಂ ಮಾ ಮರ್ಶಯನ್ವಿಪ್ರೋ ಮಯಿ ತತ್ಪರಿಪೃಷ್ಟವಾನ್।।
12027016a ಕುಂಜರಂ ಚಾಂತರಂ ಕೃತ್ವಾ ಮಿಥ್ಯೋಪಚರಿತಂ ಮಯಾ।
ಸತ್ಯವನ್ನು ನಿರ್ಣಯಿಸುವ ಸಲುವಾಗಿ ವಿಪ್ರನು ನನ್ನಲ್ಲಿ ಹೀಗೆ ಪ್ರಶ್ನಿಸಿದ್ದನು. ನಾನು ಆನೆಯನ್ನು ನೆಪವಾಗಿ ಮಾಡಿಕೊಂಡು ಸುಳ್ಳಾಗಿ ನಡೆದುಕೊಂಡೆನು.
12027016c ಸುಭೃಶಂ ರಾಜ್ಯಲುಬ್ಧೇನ ಪಾಪೇನ ಗುರುಘಾತಿನಾ।।
12027017a ಸತ್ಯಕಂಚುಕಮಾಸ್ಥಾಯ ಮಯೋಕ್ತೋ ಗುರುರಾಹವೇ।
12027017c ಅಶ್ವತ್ಥಾಮಾ ಹತ ಇತಿ ಕುಂಜರೇ ವಿನಿಪಾತಿತೇ।।
12027017e ಕಾನ್ನು ಲೋಕಾನ್ಗಮಿಷ್ಯಾಮಿ ಕೃತ್ವಾ ತತ್ಕರ್ಮ ದಾರುಣಮ್।।
ರಾಜ್ಯಕ್ಕಾಗಿ ಅತ್ಯಂತ ಲೋಭಿಯಾಗಿದ್ದ ಪಾಪಿ ಗುರುಘಾತಿ ನಾನು ಸತ್ಯವೆಂಬ ನನ್ನ ಅಂಗಿಯನ್ನು ತೆಗೆದುಹಾಕಿ ಯುದ್ಧದಲ್ಲಿ ಆನೆಯು ಕೆಳಗುರುಳಲು ಅಶ್ವತ್ಥಾಮನು ಹತನಾದನೆಂದು ಗುರುವಿಗೆ ಹೇಳಿದೆನು. ಆ ದಾರುಣ ಕರ್ಮವನ್ನೆಸಗಿದ ನಾನು ಯಾವ ಲೋಕಗಳಿಗೆ ಹೋಗುತ್ತೇನೋ!
12027018a ಅಘಾತಯಂ ಚ ಯತ್ಕರ್ಣಂ ಸಮರೇಷ್ವಪಲಾಯಿನಮ್।
12027018c ಜ್ಯೇಷ್ಠಂ ಭ್ರಾತರಮತ್ಯುಗ್ರಂ ಕೋ ಮತ್ತಃ ಪಾಪಕೃತ್ತಮಃ।।
ಸಮರದಲ್ಲಿ ಹಿಂದೆಸರಿಯದೇ ಇದ್ದ ಉಗ್ರನಾಗಿದ್ದ ಹಿರಿಯಣ್ಣ ಕರ್ಣನನ್ನು ಕೊಲ್ಲಿಸಿದೆನು. ನನಗಿಂತಲೂ ಹೆಚ್ಚು ಪಾಪಕೃತ್ಯಗಳನ್ನು ಮಾಡಿದವರು ಬೇರೆ ಯಾರಾದರೂ ಇದ್ದಾರೆಯೇ?
12027019a ಅಭಿಮನ್ಯುಂ ಚ ಯದ್ಬಾಲಂ ಜಾತಂ ಸಿಂಹಮಿವಾದ್ರಿಷು।
12027019c ಪ್ರಾವೇಶಯಮಹಂ ಲುಬ್ಧೋ ವಾಹಿನೀಂ ದ್ರೋಣಪಾಲಿತಾಮ್।।
ಗಿರಿಯಲ್ಲಿ ಹುಟ್ಟಿದ ಸಿಂಹದಂತಿದ್ದ ಬಾಲಕ ಅಭಿಮನ್ಯುವನ್ನು ನಾನು ರಾಜ್ಯಲುಬ್ಧನಾಗಿ ದ್ರೋಣನಿಂದ ರಕ್ಷಿತಗೊಂಡಿದ್ದ ವಾಹಿನಿಯನ್ನು ಪ್ರವೇಶಿಸಲು ಬಿಟ್ಟೆನು!
12027020a ತದಾಪ್ರಭೃತಿ ಬೀಭತ್ಸುಂ ನ ಶಕ್ನೋಮಿ ನಿರೀಕ್ಷಿತುಮ್।
12027020c ಕೃಷ್ಣಂ ಚ ಪುಂಡರೀಕಾಕ್ಷಂ ಕಿಲ್ಬಿಷೀ ಭ್ರೂಣಹಾ ಯಥಾ।।
ಅಂದಿನಿಂದ ನಾನು ಭ್ರೂಣಹತ್ಯೆಯನ್ನು ಮಾಡಿದ ಪಾಪಿಯಂತೆ ಬೀಭತ್ಸುವನ್ನಾಗಲೀ ಪುಂಡರೀಕಾಕ್ಷ ಕೃಷ್ಣನನ್ನಾಗಲೀ ಕಣ್ಣೆತ್ತಿ ನೋಡಲೂ ಅಸಮರ್ಥನಾಗಿದ್ದೇನೆ.
12027021a ದ್ರೌಪದೀಂ ಚಾಪ್ಯದುಃಖಾರ್ಹಾಂ ಪಂಚಪುತ್ರವಿನಾಕೃತಾಮ್।
12027021c ಶೋಚಾಮಿ ಪೃಥಿವೀಂ ಹೀನಾಂ ಪಂಚಭಿಃ ಪರ್ವತೈರಿವ।।
ಐದು ಪರ್ವತಗಳನ್ನು ಕಳೆದುಕೊಂಡ ಪೃಥ್ವಿಯಂತೆ ಐದು ಪುತ್ರರನ್ನು ಕಳೆದುಕೊಂಡ ದ್ರೌಪದಿಯ ದುಃಖವನ್ನು ನೋಡಿ ನಾನೂ ಕೂಡ ಶೋಕಿಸುತ್ತಿದ್ದೇನೆ.
12027022a ಸೋಽಹಮಾಗಸ್ಕರಃ ಪಾಪಃ ಪೃಥಿವೀನಾಶಕಾರಕಃ।
12027022c ಆಸೀನ ಏವಮೇವೇದಂ ಶೋಷಯಿಷ್ಯೇ ಕಲೇವರಮ್।।
ಆದುದರಿಂದ ನಾನು ಅಪರಾಧಿಯೂ ಪೃಥ್ವಿಯನ್ನು ನಾಶಪಡಿಸಿದ ಪಾಪಿಯೂ ಆಗಿದ್ದೇನೆ. ಅದಕ್ಕಾಗಿ ನಾನು ಇಲ್ಲಿಯೇ ಕುಳಿತುಕೊಂಡು ಈ ಶರೀರವನ್ನು ಶೋಷಿಸಿಬಿಡುತ್ತೇನೆ.
12027023a ಪ್ರಾಯೋಪವಿಷ್ಟಂ ಜಾನೀಧ್ವಮದ್ಯ ಮಾಂ ಗುರುಘಾತಿನಮ್।
12027023c ಜಾತಿಷ್ವನ್ಯಾಸ್ವಪಿ ಯಥಾ ನ ಭವೇಯಂ ಕುಲಾಂತಕೃತ್।।
ಗುರುಘಾತಿಯಾದ ನಾನು ಇಂದು ಪ್ರಾಯೋಪವೇಶವನ್ನು ಮಾಡಿದ್ದೇನೆಂದು ತಿಳಿಯಿರಿ. ಇನ್ನೊಂದು ಜನ್ಮದಲ್ಲಿಯಾದರೂ ನಾನು ಕುಲಾಂತಕನಾಗದೇ ಇರಲಿ.
12027024a ನ ಭೋಕ್ಷ್ಯೇ ನ ಚ ಪಾನೀಯಮುಪಯೋಕ್ಷ್ಯೇ ಕಥಂ ಚನ।
12027024c ಶೋಷಯಿಷ್ಯೇ ಪ್ರಿಯಾನ್ಪ್ರಾಣಾನಿಹಸ್ಥೋಽಹಂ ತಪೋಧನ।।
ತಪೋಧನ! ನಾನೂ ಇನ್ನು ಯಾವುದೇ ಕಾರಣಕ್ಕೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. ಇಲ್ಲಿಯೇ ಕುಳಿತು ಪ್ರಿಯ ಪ್ರಾಣಗಳನ್ನು ಬಿಡುತ್ತೇನೆ.
12027025a ಯಥೇಷ್ಟಂ ಗಮ್ಯತಾಂ ಕಾಮಮನುಜಾನೇ ಪ್ರಸಾದ್ಯ ವಃ।
12027025c ಸರ್ವೇ ಮಾಮನುಜಾನೀತ ತ್ಯಕ್ಷ್ಯಾಮೀದಂ ಕಲೇವರಮ್।।
ನಿಮಗಿಷ್ಟಬಂದಲ್ಲಿಗೆ ಹೋಗಲು ಅನುಮತಿಯನ್ನು ಕೊಡುತ್ತಿದ್ದೇನೆ. ನೀವೆಲ್ಲರೂ ಪ್ರಸನ್ನರಾಗಿ ಈ ಶರೀರವನ್ನು ತ್ಯಜಿಸಲು ನನಗೆ ಅನುಮತಿಯನ್ನು ನೀಡಿ!””
12027026 ವೈಶಂಪಾಯನ ಉವಾಚ।
12027026a ತಮೇವಂವಾದಿನಂ ಪಾರ್ಥಂ ಬಂಧುಶೋಕೇನ ವಿಹ್ವಲಮ್।
12027026c ಮೈವಮಿತ್ಯಬ್ರವೀದ್ವ್ಯಾಸೋ ನಿಗೃಹ್ಯ ಮುನಿಸತ್ತಮಃ।।
ವೈಶಂಪಾಯನನು ಹೇಳಿದನು: “ಬಂಧುಶೋಕದಿಂದ ವಿಹ್ವಲನಾಗಿ ಹೀಗೆ ಮಾತನಾಡುತ್ತಿದ್ದ ಪಾರ್ಥನಿಗೆ ಹೀಗೆಂದೂ ಮಾಡಬಾರದೆಂದು ಹೇಳುತ್ತಾ ಮುನಿಸತ್ತಮನು ಅವನನ್ನು ತಡೆದನು.
12027027a ಅತಿವೇಲಂ ಮಹಾರಾಜ ನ ಶೋಕಂ ಕರ್ತುಮರ್ಹಸಿ।
12027027c ಪುನರುಕ್ತಂ ಪ್ರವಕ್ಷ್ಯಾಮಿ ದಿಷ್ಟಮೇತದಿತಿ ಪ್ರಭೋ।।
“ಮಹಾರಾಜ! ಉಕ್ಕಿಬರುತ್ತಿರುವ ಅಲೆಗಳಂತೆ ಈ ರೀತಿ ನೀನು ಶೋಕಿಸಕೂಡದು. ಪ್ರಭೋ! ಆದುದೆಲ್ಲವೂ ಒಳ್ಳೆಯದಾಯಿತೆಂದೇ ನಾನು ನಿನಗೆ ಪುನಃ ಹೇಳುತ್ತೇನೆ.
12027028a ಸಂಯೋಗಾ ವಿಪ್ರಯೋಗಾಶ್ಚ ಜಾತಾನಾಂ ಪ್ರಾಣಿನಾಂ ಧ್ರುವಮ್।
12027028c ಬುದ್ಬುದಾ ಇವ ತೋಯೇಷು ಭವಂತಿ ನ ಭವಂತಿ ಚ।।
ಹುಟ್ಟಿದ ಪ್ರಾಣಿಗಳಿಗೆ ಸೇರುವಿಕೆಯು ಅಗಲಿಕೆಯಿಂದಲೇ ಅಂತ್ಯವಾಗುತ್ತದೆ ಎನ್ನುವುದು ನಿಶ್ಚಯವಾದುದು. ನೀರಿನ ಮೇಲಿನ ಗುಳ್ಳೆಗಳಂತೆ ಪ್ರಾಣಿಗಳು ಹುಟ್ಟುತ್ತಿರುತ್ತವೆ ಮತ್ತು ಸಾಯುತ್ತಿರುತ್ತವೆ.
12027029a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ।
12027029c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್।।
ಕೂಡಿಟ್ಟ ಐಶ್ವರ್ಯವು ವಿನಾಶದೊಂದಿಗೆ ಕೊನೆಗೊಳ್ಳುತ್ತವೆ. ಸೇರುವಿಕೆಯು ಅಗಲುವಿಕೆಯಿಂದ ಮತ್ತು ಜನನವು ಮರಣದಿಂದ ಪರ್ಯಾವಸಾನಹೊಂದುತ್ತದೆ.
12027030a ಸುಖಂ ದುಃಖಾಂತಮಾಲಸ್ಯಂ ದಾಕ್ಷ್ಯಂ ದುಃಖಂ ಸುಖೋದಯಮ್।
12027030c ಭೂತಿಃ ಶ್ರೀರ್ಹ್ರೀರ್ಧೃತಿಃ ಸಿದ್ಧಿರ್ನಾದಕ್ಷೇ ನಿವಸಂತ್ಯುತ।।
ಆಲಸಿಗೆ ಸುಖವೂ ದುಃಖವಾಗಿ ಪರಿಣಮಿಸುತ್ತದೆ ಮತ್ತು ದಕ್ಷನಾದವನಿಗೆ ದುಃಖವೂ ಸುಖೋದಯಕ್ಕೆ ಕಾರಣವಾಗುತ್ತದೆ. ಐಶ್ವರ್ಯ, ಲಕ್ಷ್ಮಿ, ಲಜ್ಜೆ, ಧೈರ್ಯ ಮತ್ತು ಕೀರ್ತಿಗಳು ದಕ್ಷನಾದವನಲ್ಲಿ ವಾಸಿಸುತ್ತವೆಯೇ ಹೊರತು ಆಲಸಿಯಲ್ಲಲ್ಲ.
12027031a ನಾಲಂ ಸುಖಾಯ ಸುಹೃದೋ ನಾಲಂ ದುಃಖಾಯ ದುರ್ಹೃದಃ।
12027031c ನ ಚ ಪ್ರಜ್ಞಾಲಮರ್ಥೇಭ್ಯೋ ನ ಸುಖೇಭ್ಯೋಽಪ್ಯಲಂ ಧನಮ್।।
ಸ್ನೇಹಿತರು ಸುಖವನ್ನು ನೀಡಲು ಸಮರ್ಥರಲ್ಲ. ಶತ್ರುಗಳು ದುಃಖವನ್ನು ನೀಡಲೂ ಸಮರ್ಥರಲ್ಲ. ಪ್ರಜೆಗಳು ಸಂಪತ್ತನ್ನು ನೀಡಲು ಸಮರ್ಥರಲ್ಲ ಮತ್ತು ಧನವು ಸುಖವನ್ನು ನೀಡಲು ಸಮರ್ಥವಲ್ಲ.
12027032a ಯಥಾ ಸೃಷ್ಟೋಽಸಿ ಕೌಂತೇಯ ಧಾತ್ರಾ ಕರ್ಮಸು ತತ್ಕುರು।
12027032c ಅತ ಏವ ಹಿ ಸಿದ್ಧಿಸ್ತೇ ನೇಶಸ್ತ್ವಮಾತ್ಮನಾ ನೃಪ।।
ಕೌಂತೇಯ! ನೃಪ! ಬ್ರಹ್ಮನು ಯಾವ ಕರ್ಮಕ್ಕೆಂದು ನಿನ್ನನ್ನು ಸೃಷ್ಟಿಸಿರುವನೋ ಅದನ್ನೇ ಮಾಡು. ಅದರಿಂದಲೇ ನಿನಗೆ ಸಿದ್ಧಿಯಾಗುತ್ತದೆ. ಏಕೆಂದರೆ ನೀನು ಮಾಡಬೇಕಾದ ಕರ್ಮಗಳ ಮೇಲೆ ನಿನಗೆ ಅಧಿಕಾರವಿಲ್ಲ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.