ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 26
ಸಾರ
ಸೇನಜಿತುವಿನ ಉಪದೇಶಯುಕ್ತ ಉದ್ಗಾರಗಳನ್ನು ಉಲ್ಲೇಖಿಸಿ ವ್ಯಾಸನು ಯುಧಿಷ್ಠಿರನಿಗೆ ತಿಳಿಯ ಹೇಳಿದುದು (1-36).
12026001 ವೈಶಂಪಾಯನ ಉವಾಚ।
12026001a ದ್ವೈಪಾಯನವಚಃ ಶ್ರುತ್ವಾ ಕುಪಿತೇ ಚ ಧನಂಜಯೇ।
12026001c ವ್ಯಾಸಮಾಮಂತ್ರ್ಯ ಕೌಂತೇಯಃ ಪ್ರತ್ಯುವಾಚ ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಧನಂಜಯನು ಕುಪಿತನಾಗಿರಲು, ದ್ವೈಪಾಯನನ ಮಾತನ್ನು ಕೇಳಿ ಕೌಂತೇಯ ಯುಧಿಷ್ಠಿರನು ವ್ಯಾಸನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದನು:
12026002a ನ ಪಾರ್ಥಿವಮಿದಂ ರಾಜ್ಯಂ ನ ಚ ಭೋಗಾಃ ಪೃಥಗ್ವಿಧಾಃ।
12026002c ಪ್ರೀಣಯಂತಿ ಮನೋ ಮೇಽದ್ಯ ಶೋಕೋ ಮಾಂ ನರ್ದಯತ್ಯಯಮ್।।
“ಭೂಮಿಯ ಈ ರಾಜ್ಯವೂ ನಾನಾವಿಧದ ಭೋಗಗಳೂ ಇಂದು ನನ್ನ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿಲ್ಲ. ಶೋಕವೇ ನನ್ನನ್ನು ಹಿಂಡುತ್ತಿದೆ.
12026003a ಶ್ರುತ್ವಾ ಚ ವೀರಹೀನಾನಾಮಪುತ್ರಾಣಾಂ ಚ ಯೋಷಿತಾಮ್।
12026003c ಪರಿದೇವಯಮಾನಾನಾಂ ಶಾಂತಿಂ ನೋಪಲಭೇ ಮುನೇ।।
ಮುನೇ! ವೀರಪತಿಗಳಿಂದಲೂ, ಪುತ್ರರಿಂದಲೂ ವಿಹೀನರಾದ ಸ್ತ್ರೀಯರ ವಿಲಾಪಗಳಿಂದ ನನ್ನ ಮನಸ್ಸಿಗೆ ಶಾಂತಿಯೇ ದೊರೆಯದಂತಾಗಿದೆ.”
12026004a ಇತ್ಯುಕ್ತಃ ಪ್ರತ್ಯುವಾಚೇದಂ ವ್ಯಾಸೋ ಯೋಗವಿದಾಂ ವರಃ।
12026004c ಯುಧಿಷ್ಠಿರಂ ಮಹಾಪ್ರಾಜ್ಞಂ ಧರ್ಮಜ್ಞೋ ವೇದಪಾರಗಃ।।
ಹೀಗೆ ಹೇಳಲು ಯೋಗಜ್ಞಾನಿಗಳಲ್ಲಿ ಶ್ರೇಷ್ಠ ಧರ್ಮಜ್ಞ ವೇದಪಾರಗ ವ್ಯಾಸನು ಮಹಾಪ್ರಾಜ್ಞ ಯುಧಿಷ್ಠಿರನಿಗೆ ಇಂತೆಂದನು:
12026005a ನ ಕರ್ಮಣಾ ಲಭ್ಯತೇ ಚಿಂತಯಾ ವಾ ನಾಪ್ಯಸ್ಯ ದಾತಾ ಪುರುಷಸ್ಯ ಕಶ್ಚಿತ್।
12026005c ಪರ್ಯಾಯಯೋಗಾದ್ವಿಹಿತಂ ವಿಧಾತ್ರಾ ಕಾಲೇನ ಸರ್ವಂ ಲಭತೇ ಮನುಷ್ಯಃ।।
“ಕರ್ಮಮಾಡುವುದರಿಂದಾಗಲೀ ಚಿಂತಿಸುತ್ತಿರುವುದರಿಂದಾಗಲೀ ಬೇಕಾಗಿರುವುದು ಸಿಗುವುದಿಲ್ಲ. ಮನುಷ್ಯನಿಗೆ ಬೇಕಾದುದನ್ನು ಕೊಡುವವರೂ ಯಾರೂ ಇಲ್ಲ. ಪರ್ಯಾಯಯೋಗದಿಂದ ವಿಧಾತ್ರನು ವಿಹಿಸಿದುದೆಲ್ಲವನ್ನೂ ಮನುಷ್ಯನು ಕಾಲ ಬಂದಾಗ ಪಡೆಯುತ್ತಾನೆ.
12026006a ನ ಬುದ್ಧಿಶಾಸ್ತ್ರಾಧ್ಯಯನೇನ ಶಕ್ಯಂ ಪ್ರಾಪ್ತುಂ ವಿಶೇಷೈರ್ಮನುಜೈರಕಾಲೇ।
12026006c ಮೂರ್ಖೋಽಪಿ ಪ್ರಾಪ್ನೋತಿ ಕದಾ ಚಿದರ್ಥಾನ್ ಕಾಲೋ ಹಿ ಕಾರ್ಯಂ ಪ್ರತಿ ನಿರ್ವಿಶೇಷಃ।।
ಬುದ್ಧಿಯಿಂದಾಗಲೀ, ಶಾಸ್ತ್ರಾಧ್ಯಯನದಿಂದಾಗಲೀ ಮನುಷ್ಯನು ಯೋಗವಿರದ ಕಾಲದಲ್ಲಿ ವಿಶೇಷ ಫಲವನ್ನು ಹೊಂದಲು ಸಾಧ್ಯವಿಲ್ಲ. ಕಾಲವು ಒದಗಿಬಂದಿತೆಂದರೆ ಮೂರ್ಖನೂ ಯಥೇಚ್ಛ ಐಶ್ವರ್ಯವನ್ನು ಪಡೆದುಕೊಳ್ಳುತ್ತಾನೆ. ಏಕೆಂದರೆ ಕಾರ್ಯಫಲಗಳಲ್ಲಿ ಕಾಲವೇ ವಿಶೇಷಪಾತ್ರವನ್ನು ವಹಿಸುತ್ತದೆ.
12026007a ನಾಭೂತಿಕಾಲೇ ಚ ಫಲಂ ದದಾತಿ ಶಿಲ್ಪಂ ನ ಮಂತ್ರಾಶ್ಚ ತಥೌಷಧಾನಿ।
12026007c ತಾನ್ಯೇವ ಕಾಲೇನ ಸಮಾಹಿತಾನಿ ಸಿಧ್ಯಂತಿ ಚೇಧ್ಯಂತಿ ಚ ಭೂತಿಕಾಲೇ।।
ಯೋಗವಿಲ್ಲದಿರುವಾಗ ಶಿಲ್ಪವಾಗಲೀ, ಮಂತ್ರಗಳಾಗಲೀ, ಔಷಧಿಗಳಾಗಲೀ ಫಲವನ್ನೀಯುವುದಿಲ್ಲ. ಆದರೆ ಇವೇ ಉತ್ತಮ ಯೋಗವಿರುವಾಗ ಕಾಲದ ಪ್ರೇರಣೆಯಿಂದ ಸಿದ್ಧಿಯುಂಟಾಗುತ್ತವೆ.
12026008a ಕಾಲೇನ ಶೀಘ್ರಾಃ ಪ್ರವಿವಾಂತಿ ವಾತಾಃ ಕಾಲೇನ ವೃಷ್ಟಿರ್ಜಲದಾನುಪೈತಿ।
12026008c ಕಾಲೇನ ಪದ್ಮೋತ್ಪಲವಜ್ಜಲಂ ಚ ಕಾಲೇನ ಪುಷ್ಯಂತಿ ನಗಾ ವನೇಷು।।
ಕಾಲಕ್ಕೆ ಸರಿಯಾಗಿಯೇ ಭಿರುಗಾಳಿಯು ಬೀಸುತ್ತದೆ. ಕಾಲಕ್ಕೆ ತಕ್ಕಂತೆಯೇ ಮೋಡಗಳು ಮಳೆಯನ್ನು ಸುರಿಸುತ್ತವೆ. ಕಾಲಕ್ಕೆ ಸರಿಯಾಗಿಯೇ ಪದ್ಮಗಳು ಅರಳುತ್ತವೆ. ಕಾಲಕ್ಕೆ ತಕ್ಕಂತೆಯೇ ಅರಣ್ಯದ ವೃಕ್ಷಗಳು ಚಿಗುರಿ ಹುಲುಸಾಗುತ್ತವೆ.
12026009a ಕಾಲೇನ ಕೃಷ್ಣಾಶ್ಚ ಸಿತಾಶ್ಚ ರಾತ್ರ್ಯಃ ಕಾಲೇನ ಚಂದ್ರಃ ಪರಿಪೂರ್ಣಬಿಂಬಃ।
12026009c ನಾಕಾಲತಃ ಪುಷ್ಪಫಲಂ ನಗಾನಾಂ ನಾಕಾಲವೇಗಾಃ ಸರಿತೋ ವಹಂತಿ।।
ಕಾಲಾನುಗುಣವಾಗಿ ರಾತ್ರಿಗಳು ಕಪ್ಪಾಗಿಯೂ ಬೆಳದಿಂಗಳಾಗಿಯೂ ಇರುತ್ತವೆ. ಕಾಲಕ್ಕೆ ತಕ್ಕಂತೆಯೇ ಚಂದ್ರನು ಪರಿಪೂರ್ಣಬಿಂಬನಾಗುತ್ತಾನೆ. ಅಕಾಲದಲ್ಲಿ ವೃಕ್ಷಗಳು ಪುಷ್ಪ-ಫಲಗಳನ್ನು ಪಡೆಯುವುದಿಲ್ಲ. ಅಕಾಲದಲ್ಲಿ ನದಿಗಳು ಪೂರ್ಣವೇಗದಲ್ಲಿ ಹರಿಯುವುದಿಲ್ಲ.
12026010a ನಾಕಾಲಮತ್ತಾಃ ಖಗಪನ್ನಗಾಶ್ಚ ಮೃಗದ್ವಿಪಾಃ ಶೈಲಮಹಾಗ್ರಹಾಶ್ಚ।
12026010c ನಾಕಾಲತಃ ಸ್ತ್ರೀಷು ಭವಂತಿ ಗರ್ಭಾ ನಾಯಾಂತ್ಯಕಾಲೇ ಶಿಶಿರೋಷ್ಣವರ್ಷಾಃ।।
ಪಕ್ಷಿಗಳಾಗಲೀ, ಸರ್ಪಗಳಾಗಲೀ, ಮೃಗಗಳಾಗಲೀ, ಆನೆಗಳಾಗಲೀ, ಪರ್ವತಗಳಲ್ಲಿ ವಾಸಿಸುವ ಮಹಾಮೃಗಗಳಾಗಲೀ ಅವುಗಳ ಕಾಲವು ಬಾರದೇ ಮದಿಸುವುದಿಲ್ಲ. ಸ್ತ್ರೀಯರು ತಮ್ಮ ಕಾಲವು ಬರದೇ ಗರ್ಭವನ್ನು ಧರಿಸುವುದಿಲ್ಲ. ಅಕಾಲದಲ್ಲಿ ಛಳಿ, ಸೆಖೆ ಮತ್ತು ಮಳೆಗಳಾಗುವುದಿಲ್ಲ.
12026011a ನಾಕಾಲತೋ ಮ್ರಿಯತೇ ಜಾಯತೇ ವಾ ನಾಕಾಲತೋ ವ್ಯಾಹರತೇ ಚ ಬಾಲಃ।
12026011c ನಾಕಾಲತೋ ಯೌವನಮಭ್ಯುಪೈತಿ ನಾಕಾಲತೋ ರೋಹತಿ ಬೀಜಮುಪ್ತಮ್।।
ಕಾಲ ಬಾರದೇ ಶಿಶುವು ಹುಟ್ಟುವುದಿಲ್ಲ. ಕಾಲ ಬಾರದೇ ಅದು ಮಾತನಾಡುವುದೂ ಇಲ್ಲ. ಕಾಲಬಾರದೇ ಅದು ಯೌವನವನ್ನು ಹೊಂದುವುದಿಲ್ಲ. ಹಾಗೆಯೇ ಕಾಲಬಾರದೇ ಅದು ಸಾಯುವುದೂ ಇಲ್ಲ.
12026012a ನಾಕಾಲತೋ ಭಾನುರುಪೈತಿ ಯೋಗಂ ನಾಕಾಲತೋಽಸ್ತಂ ಗಿರಿಮಭ್ಯುಪೈತಿ।
12026012c ನಾಕಾಲತೋ ವರ್ಧತೇ ಹೀಯತೇ ಚ ಚಂದ್ರಃ ಸಮುದ್ರಶ್ಚ ಮಹೋರ್ಮಿಮಾಲೀ।।
ಅಕಾಲದಲ್ಲಿ ಸೂರ್ಯನು ಉದಯಿಸುವುದಿಲ್ಲ ಮತ್ತು ಅಕಾಲದಲ್ಲಿ ಸೂರ್ಯನು ಅಸ್ತಂಗತನೂ ಆಗುವುದಿಲ್ಲ. ಅಕಾಲದಲ್ಲಿ ಚಂದ್ರನಾಗಲೀ ಮಹಾ ಅಲೆಗಳುಳ್ಳ ಸಮುದ್ರವಾಗಲೀ ವರ್ಧಿಸುವುದಿಲ್ಲ ಮತ್ತು ಕ್ಷೀಣಿಸುವುದೂ ಇಲ್ಲ.
12026013a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12026013c ಗೀತಂ ರಾಜ್ಞಾ ಸೇನಜಿತಾ ದುಃಖಾರ್ತೇನ ಯುಧಿಷ್ಠಿರ।।
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ, ದುಃಖಾರ್ತನಾಗಿದ್ದ ರಾಜಾ ಸೇನಜಿತುವು ಹೇಳಿದ ಗೀತೆಯನ್ನು ಉದಾಹರಿಸುತ್ತಾರೆ.
12026014a ಸರ್ವಾನೇವೈಷ ಪರ್ಯಾಯೋ ಮರ್ತ್ಯಾನ್ ಸ್ಪೃಶತಿ ದುಸ್ತರಃ।
12026014c ಕಾಲೇನ ಪರಿಪಕ್ವಾ ಹಿ ಮ್ರಿಯಂತೇ ಸರ್ವಮಾನವಾಃ।।
“ದುಸ್ತರವಾಗಿ ತಿರುಗುತ್ತಿರುವ ಕಾಲವು ಸರ್ವಮನುಷ್ಯರ ಮೇಲೂ ಪ್ರಭಾವಬೀರುತ್ತದೆ. ಸರ್ವಮಾನವರೂ ಕಾಲವು ಪರಿಪಕ್ವವಾಗಿ ಮರಣಹೊಂದುತ್ತಾರೆ.
12026015a ಘ್ನಂತಿ ಚಾನ್ಯಾನ್ನರಾ ರಾಜಂಸ್ತಾನಪ್ಯನ್ಯೇ ನರಾಸ್ತಥಾ।
12026015c ಸಂಜ್ಞೈಷಾ ಲೌಕಿಕೀ ರಾಜನ್ನ ಹಿನಸ್ತಿ ನ ಹನ್ಯತೇ।।
ರಾಜನ್! ಕೆಲವು ಮನುಷ್ಯರು ಕೆಲವರನ್ನು ಸಂಹರಿಸುತ್ತಾರೆ. ಸಂಹರಿಸಿದ ಅವರನ್ನೂ ಇನ್ನು ಕೆಲವರು ಸಂಹರಿಸುತ್ತಾರೆ. ಆದರೆ ಒಬ್ಬರು ಇನ್ನೊಬ್ಬರನ್ನು ಕೊಂದರೆನ್ನುವುದು ಒಂದು ಲೌಕಿಕವಾದ ಸಂಜ್ಞೆಯಾಗಿರುತ್ತದೆ. ನಿಜವಾಗಿ ನೋಡಿದರೆ ಯಾರೂ ಕೊಲ್ಲುವುದಿಲ್ಲ ಯಾರೂ ಕೊಲ್ಲಲ್ಪಡುವುದೂ ಇಲ್ಲ.
12026016a ಹಂತೀತಿ ಮನ್ಯತೇ ಕಶ್ಚಿನ್ನ ಹಂತೀತ್ಯಪಿ ಚಾಪರೇ।
12026016c ಸ್ವಭಾವತಸ್ತು ನಿಯತೌ ಭೂತಾನಾಂ ಪ್ರಭವಾಪ್ಯಯೌ।।
ಕೊಲ್ಲುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಕೊಲ್ಲಲ್ಪಡಲಿಲ್ಲ ಎಂದು ಇತರರು ತಿಳಿದುಕೊಳ್ಳುತ್ತಾರೆ. ಸ್ವಭಾವತಃ ಪ್ರಾಣಿಗಳ ಹುಟ್ಟು ಮತ್ತು ಮರಣ ಇವೆರಡೂ ವಿಧಿವಿಹಿತವಾಗಿವೆ.
12026017a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ।
12026017c ಅಹೋ ಕಷ್ಟಮಿತಿ ಧ್ಯಾಯನ್ಶೋಕಸ್ಯಾಪಚಿತಿಂ ಚರೇತ್।।
ಧನವು ನಷ್ಟವಾಗಲೀ ಅಥವಾ ಪತ್ನಿಯಾಗಲೀ, ಪುತ್ರನಾಗಲೀ ಅಥವಾ ಪಿತನಾಗಲೀ ಮೃತನಾಗಲೀ “ಅಯ್ಯೋ ಕಷ್ಟವೇ!” ಎಂದು ಯೋಚಿಸಿ, ಶೋಕವನ್ನು ಕಡಿಮೆಮಾಡಿಕೊಳ್ಳಬೇಕು.
12026018a ಸ ಕಿಂ ಶೋಚಸಿ ಮೂಢಃ ಸನ್ಶೋಚ್ಯಃ ಕಿಮನುಶೋಚಸಿ।
12026018c ಪಶ್ಯ ದುಃಖೇಷು ದುಃಖಾನಿ ಭಯೇಷು ಚ ಭಯಾನ್ಯಪಿ।।
ಆದರೆ ನೀನು ಏಕೆ ಹೀಗೆ ಮೂಢನಾಗಿ ಶೋಕವನ್ನು ಹೆಚ್ಚಿಸಿಕೊಳ್ಳುತ್ತಿರುವೆ? ದುಃಖಪಡುವುದರಿಂದ ದುಃಖವೂ ಮತ್ತು ಭಯಪಡುವುದರಿಂದ ಭಯವೂ ಹೆಚ್ಚಾಗುತ್ತದೆ.
12026019a ಆತ್ಮಾಪಿ ಚಾಯಂ ನ ಮಮ ಸರ್ವಾಪಿ ಪೃಥಿವೀ ಮಮ।
12026019c ಯಥಾ ಮಮ ತಥಾನ್ಯೇಷಾಮಿತಿ ಪಶ್ಯನ್ನ ಮುಹ್ಯತಿ।।
ನನಗೆ ನಾನೂ ಮತ್ತು ಈ ಸರ್ವ ಭೂಮಿಯೂ ಹೇಗೆ ನನ್ನದಲ್ಲವೋ ಹಾಗೆ ಅನ್ಯರ ದೇಹಗಳೂ, ರಾಜ್ಯಗಳೂ ಅವರದ್ದಲ್ಲ ಎಂದು ಕಾಣುವವನು ಹೀಗೆ ಮೋಹಪಡುವುದಿಲ್ಲ.
12026020a ಶೋಕಸ್ಥಾನಸಹಸ್ರಾಣಿ ಹರ್ಷಸ್ಥಾನಶತಾನಿ ಚ।
12026020c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್।।
ಶೋಕಪಡುವುದಕ್ಕೆ ಸಹಸ್ರಾರು ಕಾರಣಗಳೂ, ಹರ್ಷಿಸುವುದಕ್ಕೆ ನೂರಾರು ಕಾರಣಗಳೂ ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ!
12026021a ಏವಮೇತಾನಿ ಕಾಲೇನ ಪ್ರಿಯದ್ವೇಷ್ಯಾಣಿ ಭಾಗಶಃ।
12026021c ಜೀವೇಷು ಪರಿವರ್ತಂತೇ ದುಃಖಾನಿ ಚ ಸುಖಾನಿ ಚ।।
ಹೀಗೆ ಪ್ರಿಯ-ಅಪ್ರಿಯ ಸಮಯಗಳು ಮತ್ತು ದುಃಖ-ಸುಖಗಳು ಜೀವಿಗೆ ಕಾಲಾನುಗುಣವಾಗಿ ಒಂದರ ನಂತರ ಇನ್ನೊಂದು ತಿರುಗಿ ತಿರುಗಿ ಬರುತ್ತಲೇ ಇರುತ್ತವೆ.
12026022a ದುಃಖಮೇವಾಸ್ತಿ ನ ಸುಖಂ ತಸ್ಮಾತ್ತದುಪಲಭ್ಯತೇ।
12026022c ತೃಷ್ಣಾರ್ತಿಪ್ರಭವಂ ದುಃಖಂ ದುಃಖಾರ್ತಿಪ್ರಭವಂ ಸುಖಮ್।।
ಜೀವಿಗಳಿಗೆ ದುಃಖವಿರುವುದೇ ಹೊರತು ಸುಖವೆನ್ನುವುದು ಇಲ್ಲ. ಆದುದರಿಂದಲೇ ಅಡಿಗಡಿಗೆ ದುಃಖವೇ ಆಗುತ್ತಿರುತ್ತದೆ. ಆಸೆಗಳಿಂದಲೇ ದುಃಖವು ಹುಟ್ಟುತ್ತದೆ. ದುಃಖದ ವಿನಾಶವೇ ಸುಖ.
12026023a ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್।
12026023c ನ ನಿತ್ಯಂ ಲಭತೇ ದುಃಖಂ ನ ನಿತ್ಯಂ ಲಭತೇ ಸುಖಮ್।।
ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ. ದುಃಖವು ಯಾವಾಗಲೂ ಇರುವುದಿಲ್ಲ ಮತು ಸುಖವೂ ಯಾವಾಗಲೂ ಇರುವುದಿಲ್ಲ.
12026024a ಸುಖಮಂತೇ ಹಿ ದುಃಖಾನಾಂ ದುಃಖಮಂತೇ ಸುಖಸ್ಯ ಚ।
12026024c ತಸ್ಮಾದೇತದ್ದ್ವಯಂ ಜಹ್ಯಾದ್ಯ ಇಚ್ಚೇಚ್ಚಾಶ್ವತಂ ಸುಖಮ್।।
ಏಕೆಂದರೆ ಸುಖದ ಅಂತ್ಯವೇ ದುಃಖ ಮತ್ತು ದುಃಖದ ಅಂತ್ಯವೇ ಸುಖ. ಆದುದರಿಂದ ಇವೆರಡನ್ನೂ ತ್ಯಜಿಸಿ ಇಂದು ಶಾಶ್ವತ ಸುಖವನ್ನು ಬಯಸು.
12026025a ಯನ್ನಿಮಿತ್ತಂ ಭವೇಚ್ಚೋಕಸ್ತಾಪೋ ವಾ ದುಃಖಮೂರ್ಚಿತಃ।
12026025c ಆಯಾಸೋ ವಾಪಿ ಯನ್ಮೂಲಸ್ತದೇಕಾಂಗಮಪಿ ತ್ಯಜೇತ್।।
ಯಾವಕಾರಣದಿಂದ ಶೋಕವಾಗಲೀ, ತಾಪವಾಗಲೀ, ದುಃಖವಾಗಲೀ, ಆಯಾಸವಾಗಲೀ ಉಂಟಾಗುತ್ತದೆಯೋ ಅದರ ಮೂಲವನ್ನೇ, ಅದು ಶರೀರದ ಒಂದು ಅಂಗವಾಗಿದ್ದರೂ, ಕಿತ್ತೊಗೆಯಬೇಕು.
12026026a ಸುಖಂ ವಾ ಯದಿ ವಾ ದುಃಖಂ ಪ್ರಿಯಂ ವಾ ಯದಿ ವಾಪ್ರಿಯಮ್।
12026026c ಪ್ರಾಪ್ತಂ ಪ್ರಾಪ್ತಮುಪಾಸೀತ ಹೃದಯೇನಾಪರಾಜಿತಃ।।
ಸುಖವಾಗಲೀ, ದುಃಖವಾಗಲೀ, ಪ್ರಿಯವಾದದ್ದಾಗಲೀ, ಅಪ್ರಿಯವಾದದ್ದಾಗಲೀ ಅವುಗಳು ಬಂದಹಾಗೆಯೇ, ಸೋಲನ್ನಪ್ಪಿಕೊಳ್ಳದೇ, ಸಂತೋಷದಿಂದ ಅನುಭವಿಸಬೇಕು.
12026027a ಈಷದಪ್ಯಂಗ ದಾರಾಣಾಂ ಪುತ್ರಾಣಾಂ ವಾ ಚರಾಪ್ರಿಯಮ್।
12026027c ತತೋ ಜ್ಞಾಸ್ಯಸಿ ಕಃ ಕಸ್ಯ ಕೇನ ವಾ ಕಥಮೇವ ವಾ।।
ಅಂಗ! ನಿನ್ನ ಪತ್ನಿಯರಿಗೆ ಅಥವಾ ಮಕ್ಕಳಿಗೆ ಸ್ವಲ್ಪವಾದರೂ ಅಪ್ರಿಯವಾದುದನ್ನು ಮಾಡು. ಆಗ ನೀನು ಯಾರು, ಯಾರಿಗೆ ಸೇರಿದವನು, ಯಾರಿಂದ ಇಲ್ಲಿಗೆ ಬಂದಿರುವೆ ಮತ್ತು ಹೇಗೆ ಬಂದಿರುವೆ ಎನ್ನುವುದನ್ನು ತಿಳಿದುಕೊಳ್ಳುತ್ತೀಯೆ.
12026028a ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ।
12026028c ತ ಏವ ಸುಖಮೇಧಂತೇ ಮಧ್ಯಃ ಕ್ಲೇಶೇನ ಯುಜ್ಯತೇ।।
ಅತ್ಯಂತ ಮೂಢರಾದವರು ಮತ್ತು ಅತ್ಯಂತ ಬುದ್ಧಿಶಾಲಿಗಳು ಮಾತ್ರ ಈ ಲೋಕದಲ್ಲಿ ಪರಮ ಸುಖವನ್ನು ಹೊಂದುತ್ತಾರೆ. ಮಧ್ಯವರ್ತಿಗಳು ಕ್ಲೇಶಪಡುತ್ತಲೇ ಇರುತ್ತಾರೆ.”
12026029a ಇತ್ಯಬ್ರವೀನ್ಮಹಾಪ್ರಾಜ್ಞೋ ಯುಧಿಷ್ಠಿರ ಸ ಸೇನಜಿತ್।
12026029c ಪರಾವರಜ್ಞೋ ಲೋಕಸ್ಯ ಧರ್ಮವಿತ್ಸುಖದುಃಖವಿತ್।।
ಯುಧಿಷ್ಠಿರ! ಭೂತ-ಭವಿಷ್ಯಗಳನ್ನೂ ಲೋಕಗಳ ಧರ್ಮವನ್ನೂ, ಸುಖ-ದುಃಖಗಳನ್ನೂ ತಿಳಿದಿದ್ದ ಮಹಾಪ್ರಾಜ್ಞ ಸೇನಜಿತುವು ಹೀಗೆ ಹೇಳಿದನು:
12026030a ಸುಖೀ ಪರಸ್ಯ ಯೋ ದುಃಖೇ ನ ಜಾತು ಸ ಸುಖೀ ಭವೇತ್। 42 12026030c ದುಃಖಾನಾಂ ಹಿ ಕ್ಷಯೋ ನಾಸ್ತಿ ಜಾಯತೇ ಹ್ಯಪರಾತ್ಪರಮ್।।
ಇತರರ ದುಃಖವನ್ನು ನೋಡಿ ಖುಷಿಪಡುವವನಿಗೆ ಸುಖವೆಂಬುದೇ ಇರುವುದಿಲ್ಲ. ದುಃಖಗಳಿಗೆ ಕೊನೆಯೆಂಬುದೇ ಇಲ್ಲ. ಒಂದರ ಮೇಲೆ ಒಂದು ದುಃಖವು ಬರುತ್ತಲೇ ಇರುತ್ತದೆ.
12026031a ಸುಖಂ ಚ ದುಃಖಂ ಚ ಭವಾಭವೌ ಚ ಲಾಭಾಲಾಭೌ ಮರಣಂ ಜೀವಿತಂ ಚ।
12026031c ಪರ್ಯಾಯಶಃ ಸರ್ವಮಿಹ ಸ್ಪೃಶಂತಿ ತಸ್ಮಾದ್ಧೀರೋ ನೈವ ಹೃಷ್ಯೇನ್ನ ಕುಪ್ಯೇತ್43।।
ಸುಖ-ದುಃಖಗಳೂ, ಲಾಭ-ನಷ್ಟಗಳೂ, ಜನನ-ಮರಣಗಳು, ಉತ್ಪತ್ತಿ-ವಿನಾಶಗಳೂ ಒಂದಾದ ಮೇಲೆ ಇನ್ನೊಂದರಂತೆ ಪರ್ಯಾಯವಾಗಿ ಜೀವಿಗಳಿಗೆ ತಟ್ಟುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಇವುಗಳ ಕುರಿತು ಹರ್ಷಿಸುವುದೂ ಇಲ್ಲ, ಕುಪಿತನಾಗುವುದೂ ಇಲ್ಲ.
12026032a ದೀಕ್ಷಾಂ ಯಜ್ಞೇ ಪಾಲನಂ ಯುದ್ಧಮಾಹುರ್ ಯೋಗಂ ರಾಷ್ಟ್ರೇ ದಂಡನೀತ್ಯಾ ಚ ಸಮ್ಯಕ್।
12026032c ವಿತ್ತತ್ಯಾಗಂ ದಕ್ಷಿಣಾನಾಂ ಚ ಯಜ್ಞೇ ಸಮ್ಯಗ್ ಜ್ಞಾನಂ ಪಾವನಾನೀತಿ ವಿದ್ಯಾತ್।।
ಯುದ್ಧವೇ ಯಜ್ಞ ದೀಕ್ಷೆಯೆಂದೂ, ರಾಷ್ಟ್ರವನ್ನು ದಂಡನೀತಿಯಿಂದ ಪಾಲಿಸುವುದನ್ನು ಯೋಗವೆಂದೂ, ಯಜ್ಞಗಳಲ್ಲಿ ಸಂಪತ್ತನ್ನು ದಕ್ಷಿಣೆಯಾಗಿ ಕೊಡುವುದನ್ನು ತ್ಯಾಗವನ್ನೂ ರಾಜರಿಗೆ ಪಾವನವಾದುವೆಂದು ಹೇಳುತ್ತಾರೆ. ಅವುಗಳ ಸಂಪೂರ್ಣ ಜ್ಞಾನವಿರಬೇಕು.
12026033a ರಕ್ಷನ್ರಾಷ್ಟ್ರಂ ಬುದ್ಧಿಪೂರ್ವಂ ನಯೇನ ಸಂತ್ಯಕ್ತಾತ್ಮಾ ಯಜ್ಞಶೀಲೋ ಮಹಾತ್ಮಾ।
12026033c ಸರ್ವಾಽಲ್ಲೋಕಾನ್ಧರ್ಮಮೂರ್ತ್ಯಾ ಚರಂಶ್ಚಾಪ್ಯ್ ಊರ್ಧ್ವಂ ದೇಹಾನ್ಮೋದತೇ ದೇವಲೋಕೇ।।
ಬುದ್ಧಿಪೂರ್ವಕವಾಗಿ ಸುನೀತಿಯಿಂದ ತನ್ನದೆನ್ನುವುದನ್ನು ತ್ಯಜಿಸಿ ರಾಷ್ಟ್ರವನ್ನು ರಕ್ಷಿಸುತ್ತಾ, ಯಜ್ಞಶೀಲನಾಗಿ ಧರ್ಮವನ್ನು ರಕ್ಷಿಸಲು ಸರ್ವ ಲೋಕಗಳನ್ನೂ ಚರಿಸುವ ಮಹಾತ್ಮನು ದೇಹಾವಸಾನದ ನಂತರ ದೇವಲೋಕದಲ್ಲಿ ಮೋದಿಸುತ್ತಾನೆ.
12026034a ಜಿತ್ವಾ ಸಂಗ್ರಾಮಾನ್ಪಾಲಯಿತ್ವಾ ಚ ರಾಷ್ಟ್ರಂ ಸೋಮಂ ಪೀತ್ವಾ ವರ್ಧಯಿತ್ವಾ ಪ್ರಜಾಶ್ಚ।
12026034c ಯುಕ್ತ್ಯಾ ದಂಡಂ ಧಾರಯಿತ್ವಾ ಪ್ರಜಾನಾಂ ಯುದ್ಧೇ ಕ್ಷೀಣೋ ಮೋದತೇ ದೇವಲೋಕೇ।।
ಸಂಗ್ರಾಮಗಳನ್ನು ಗೆದ್ದು, ರಾಷ್ಟ್ರವನ್ನು ಪಾಲಿಸುತ್ತಾ, ಸೋಮವನ್ನು ಕುಡಿಯುತ್ತಾ, ಪ್ರಜೆಗಳನ್ನು ಅಭಿವೃದ್ಧಿಗೊಳಿಸುತ್ತಾ, ದಂಡಯುಕ್ತನಾಗಿ ಪ್ರಜೆಗಳನ್ನು ಪಾಲಿಸುತ್ತಾ ಯುದ್ಧದಲ್ಲಿ ಮಡಿದ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ.
12026035a ಸಮ್ಯಗ್ವೇದಾನ್ಪ್ರಾಪ್ಯ ಶಾಸ್ತ್ರಾಣ್ಯಧೀತ್ಯ ಸಮ್ಯಗ್ರಾಷ್ಟ್ರಂ ಪಾಲಯಿತ್ವಾ ಚ ರಾಜಾ।
12026035c ಚಾತುರ್ವರ್ಣ್ಯಂ ಸ್ಥಾಪಯಿತ್ವಾ ಸ್ವಧರ್ಮೇ ಪೂತಾತ್ಮಾ ವೈ ಮೋದತೇ ದೇವಲೋಕೇ।।
ಸಂಪೂರ್ಣ ವೇದಗಳನ್ನು ಪಡೆದು, ಶಾಸ್ತ್ರಗಳನ್ನು ಅಧ್ಯಯನ ಮಾಡಿ, ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾ ಚಾತುರ್ವರ್ಣ್ಯವನ್ನು ಸ್ಥಾಪಿಸಿ, ಸ್ವಧರ್ಮದಲ್ಲಿಯೇ ಪೂತಾತ್ಮನಾಗಿರುವ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ.
12026036a ಯಸ್ಯ ವೃತ್ತಂ ನಮಸ್ಯಂತಿ ಸ್ವರ್ಗಸ್ಥಸ್ಯಾಪಿ ಮಾನವಾಃ।
12026036c ಪೌರಜಾನಪದಾಮಾತ್ಯಾಃ ಸ ರಾಜಾ ರಾಜಸತ್ತಮಃ।।
ಸ್ವರ್ಗಸ್ಥನಾದಮೇಲೂ ಯಾರ ನಡತೆಗಳನ್ನು ಮಾನವರು, ಪೌರಜಾನಪದರು ಮತ್ತು ಅಮಾತ್ಯರು ನಮಸ್ಕರಿಸುತ್ತಾರೋ ಆ ರಾಜನೇ ರಾಜಸತ್ತಮನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸೇನಜಿದುಪಾಖ್ಯಾನೇ ಷಡ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸೇನಜಿದುಪಾಖ್ಯಾನ ಎನ್ನುವ ಇಪ್ಪತ್ತಾರನೇ ಅಧ್ಯಾಯವು.