025 ವ್ಯಾಸವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 25

ಸಾರ

ವ್ಯಾಸನು ಯುಧಿಷ್ಠಿರನಿಗೆ ರಾಜ ಹಯಗ್ರೀವನ ಕಥೆಯನ್ನು ಹೇಳಿ ರಾಜೋಚಿತ ಕರ್ತವ್ಯವನ್ನು ಪಾಲಿಸಲು ಒತ್ತಾಯಿಸಿದುದು (1-33).

12025001 ವೈಶಂಪಾಯನ ಉವಾಚ।
12025001a ಪುನರೇವ ಮಹರ್ಷಿಸ್ತಂ ಕೃಷ್ಣದ್ವೈಪಾಯನೋಽಬ್ರವೀತ್।
12025001c ಅಜಾತಶತ್ರುಂ ಕೌಂತೇಯಮಿದಂ ವಚನಮರ್ಥವತ್।।

ವೈಶಂಪಾಯನನು ಹೇಳಿದನು: “ಅಜಾತಶತ್ರು ಕೌಂತೇಯನಿಗೆ ಮಹರ್ಷಿ ಕೃಷ್ಣದ್ವೈಪಾಯನನು ಪುನಃ ಈ ಅರ್ಥವತ್ತಾದ ಮಾತುಗಳನ್ನಾಡಿದನು:

12025002a ಅರಣ್ಯೇ ವಸತಾಂ ತಾತ ಭ್ರಾತೃಣಾಂ ತೇ ತಪಸ್ವಿನಾಮ್।
12025002c ಮನೋರಥಾ ಮಹಾರಾಜ ಯೇ ತತ್ರಾಸನ್ಯುಧಿಷ್ಠಿರ।।
12025003a ತಾನಿಮೇ ಭರತಶ್ರೇಷ್ಠ ಪ್ರಾಪ್ನುವಂತು ಮಹಾರಥಾಃ।
12025003c ಪ್ರಶಾಧಿ ಪೃಥಿವೀಂ ಪಾರ್ಥ ಯಯಾತಿರಿವ ನಾಹುಷಃ।।

“ಯುಧಿಷ್ಠಿರ! ಮಗೂ! ಭರತಶ್ರೇಷ್ಠ! ಅರಣ್ಯದಲ್ಲಿ ವಾಸಿಸುತ್ತಿರುವಾಗ ತಪಸ್ವಿಗಳಾಗಿದ್ದ ನಿನ್ನ ಮಹಾರಥ ಸಹೋದರರು ಇಟ್ಟುಕೊಂಡಿದ್ದ ಮನೋರಥಗಳನ್ನು ಈಗ ಪೂರೈಸಿಕೊಳ್ಳಲಿ! ಪಾರ್ಥ! ನಹುಷನ ಮಗ ಯಯಾತಿಯಂತೆ ಈ ಭೂಮಿಯ ಮೇಲೆ ಶಾಸನ ಮಾಡು!

12025004a ಅರಣ್ಯೇ ದುಃಖವಸತಿರನುಭೂತಾ ತಪಸ್ವಿಭಿಃ।
12025004c ದುಃಖಸ್ಯಾಂತೇ ನರವ್ಯಾಘ್ರಾಃ ಸುಖಂ ತ್ವನುಭವಂತ್ವಿಮೇ।।

ಆ ತಪಸ್ವಿಗಳು ಅರಣ್ಯದಲ್ಲಿ ವಾಸಿಸುತ್ತಿರುವಾಗ ದುಃಖಗಳನ್ನು ಅನುಭವಿಸಿದರು. ಆ ದುಃಖದ ಅಂತ್ಯದಲ್ಲಿ ನರವ್ಯಾಘ್ರರು ಈಗಲಾದರೂ ಸುಖವನ್ನು ಅನುಭವಿಸಲಿ.

12025005a ಧರ್ಮಮರ್ಥಂ ಚ ಕಾಮಂ ಚ ಭ್ರಾತೃಭಿಃ ಸಹ ಭಾರತ।
12025005c ಅನುಭೂಯ ತತಃ ಪಶ್ಚಾತ್ಪ್ರಸ್ಥಾತಾಸಿ ವಿಶಾಂ ಪತೇ।।

ಭಾರತ! ವಿಶಾಂಪತೇ! ಧರ್ಮ, ಅರ್ಥ, ಮತ್ತು ಕಾಮಗಳನ್ನು ಸಹೋದರರೊಂದಿಗೆ ಅನುಭವಿಸಿ, ಅದರ ನಂತರ ನೀನು ವಾನಪ್ರಸ್ಥವನ್ನು ಕೈಗೊಳ್ಳಬಹುದು.

12025006a ಅತಿಥೀನಾಂ ಚ ಪಿತೃಣಾಂ ದೇವತಾನಾಂ ಚ ಭಾರತ।
12025006c ಆನೃಣ್ಯಂ ಗಚ್ಚ ಕೌಂತೇಯ ತತಃ ಸ್ವರ್ಗಂ ಗಮಿಷ್ಯಸಿ।।

ಭಾರತ! ಕೌಂತೇಯ! ಅತಿಥಿಗಳ, ಪಿತೃಗಳ ಮತ್ತು ದೇವತೆಗಳ ಋಣಮುಕ್ತನಾದ ನಂತರ ಹೋಗು! ಆಗ ಸ್ವರ್ಗಕ್ಕೇ ಹೋಗುತ್ತೀಯೆ!

12025007a ಸರ್ವಮೇಧಾಶ್ವಮೇಧಾಭ್ಯಾಂ ಯಜಸ್ವ ಕುರುನಂದನ।
12025007c ತತಃ ಪಶ್ಚಾನ್ಮಹಾರಾಜ ಗಮಿಷ್ಯಸಿ ಪರಾಂ ಗತಿಮ್।।

ಕುರುನಂದನ! ಮಹಾರಾಜ! ಸರ್ವಮೇಧ-ಅಶ್ವಮೇಧ ಯಜ್ಞಗಳನ್ನು ಯಾಜಿಸು. ಅದರನಂತರ ಪರಮ ಗತಿಯನ್ನು ಪಡೆಯುವಿಯಂತೆ.

12025008a ಭ್ರಾತೃಂಶ್ಚ ಸರ್ವಾನ್ಕ್ರತುಭಿಃ ಸಂಯೋಜ್ಯ ಬಹುದಕ್ಷಿಣೈಃ।
12025008c ಸಂಪ್ರಾಪ್ತಃ ಕೀರ್ತಿಮತುಲಾಂ ಪಾಂಡವೇಯ ಭವಿಷ್ಯಸಿ।।

ಪಾಂಡವೇಯ! ಬಹುದಕ್ಷಿಣೆಗಳಿಂದ ಯುಕ್ತವಾದ ಆ ಎಲ್ಲ ಕ್ರತುಗಳಲ್ಲಿ ನಿನ್ನ ಸಹೋದರರನ್ನೂ ಜೋಡಿಸಿಕೋ! ಇದರಿಂದ ನೀನು ಅಪಾರ ಕೀರ್ತಿಯನ್ನು ಪಡೆಯುತ್ತೀಯೆ.

12025009a ವಿದ್ಮ ತೇ ಪುರುಷವ್ಯಾಘ್ರ ವಚನಂ ಕುರುನಂದನ।
12025009c ಶೃಣು ಮಚ್ಚ ಯಥಾ ಕುರ್ವನ್ಧರ್ಮಾನ್ನ ಚ್ಯವತೇ ನೃಪಃ।।

ಪುರುಷವ್ಯಾಘ್ರ! ಕುರುನಂದನ! ನಿನ್ನ ಮಾತುಗಳು ನಮಗೆ ಚೆನ್ನಾಗಿ ಅರ್ಥವಾಗುತ್ತಿವೆ. ಏನು ಮಾಡಿದರೆ ನೃಪನು ಧರ್ಮಚ್ಯುತನಾಗುವುದಿಲ್ಲ ಎನ್ನುವುದನ್ನು ಕೇಳು.

12025010a ಆದದಾನಸ್ಯ ಚ ಧನಂ ನಿಗ್ರಹಂ ಚ ಯುಧಿಷ್ಠಿರ।
12025010c ಸಮಾನಂ ಧರ್ಮಕುಶಲಾಃ ಸ್ಥಾಪಯಂತಿ ನರೇಶ್ವರ।।

ಯುಧಿಷ್ಠಿರ! ನರೇಶ್ವರ! ಧನ ಸಂಗ್ರಹಣೆ ಮತ್ತು ದುಷ್ಟ ನಿಗ್ರಹ ಇವೆರಡೂ ಸಮಾನ ಕ್ಷತ್ರಿಯ ಧರ್ಮಗಳೆಂದು ಧರ್ಮಕುಶಲರು ಸಿದ್ಧಪಡಿಸಿದ್ದಾರೆ. 4012025011a ದೇಶಕಾಲಪ್ರತೀಕ್ಷೇ ಯೋ ದಸ್ಯೋರ್ದರ್ಶಯತೇ ನೃಪಃ।

12025011c ಶಾಸ್ತ್ರಜಾಂ ಬುದ್ಧಿಮಾಸ್ಥಾಯ ನೈನಸಾ ಸ ಹಿ ಯುಜ್ಯತೇ।।

ದೇಶಕಾಲಗಳನ್ನು ನೋಡಿಕೊಂಡು ಶಾಸ್ತ್ರಗಳಲ್ಲಿ ತೋರಿಸಿರುವ ಬುದ್ಧಿಯನ್ನು ಬಳಸಿ ದಸ್ಯುಗಳನ್ನು ಕಾಣುವ ನೃಪನಿಗೆ ಪಾಪವು ತಗಲುವುದಿಲ್ಲ.

12025012a ಆದಾಯ ಬಲಿಷಡ್ಭಾಗಂ ಯೋ ರಾಷ್ಟ್ರಂ ನಾಭಿರಕ್ಷತಿ।
12025012c ಪ್ರತಿಗೃಹ್ಣಾತಿ ತತ್ಪಾಪಂ ಚತುರ್ಥಾಂಶೇನ ಪಾರ್ಥಿವಃ।।

ಪ್ರಜೆಗಳ ಆರನೆಯ ಒಂದು ಭಾಗವನ್ನು ಪಡೆದೂ ಯಾವ ರಾಜನು ರಾಷ್ಟ್ರವನ್ನು ರಕ್ಷಿಸುವುದಿಲ್ಲವೋ ಅವನು ಪ್ರಜೆಗಳು ಮಾಡುವ ಪಾಪಗಳ ನಾಲ್ಕನೆಯ ಒಂದು ಭಾಗವನ್ನೂ ಅನುಭವಿಸುತ್ತಾನೆ.

12025013a ನಿಬೋಧ ಚ ಯಥಾತಿಷ್ಠನ್ಧರ್ಮಾನ್ನ ಚ್ಯವತೇ ನೃಪಃ।
12025013c ನಿಗ್ರಹಾದ್ಧರ್ಮಶಾಸ್ತ್ರಾಣಾಮನುರುಧ್ಯನ್ನಪೇತಭೀಃ।।

ಹೇಗಿದ್ದರೆ ರಾಜನು ಧರ್ಮಗಳಿಂದ ಚ್ಯುತನಾಗುವುದಿಲ್ಲ, ಧರ್ಮಶಾಸ್ತ್ರಗಳಂತೆ ನಡೆದುಕೊಂಡರೆ ಅಥವಾ ಅವುಗಳಿಗೆ ವಿರೋಧವಾಗಿ ನಡೆದುಕೊಂಡರೆ ಯಾವ ಅಧೋಗತಿಗಿಳಿಯುತ್ತಾನೆ ಎನ್ನುವುದನ್ನು ಕೇಳು.

12025013e ಕಾಮಕ್ರೋಧಾವನಾದೃತ್ಯ ಪಿತೇವ ಸಮದರ್ಶನಃ।।
12025014a ದೈವೇನೋಪಹತೇ ರಾಜಾ ಕರ್ಮಕಾಲೇ ಮಹಾದ್ಯುತೇ।
12025014c ಪ್ರಮಾದಯತಿ ತತ್ಕರ್ಮ ನ ತತ್ರಾಹುರತಿಕ್ರಮಮ್।।

ಕಾಮ-ಕ್ರೋಧಗಳನ್ನು ಅನಾದರಿಸಿ ತಂದೆಯಂತೆ ಎಲ್ಲರನ್ನೂ ಸಮನಾಗಿ ಕಾಣುವವನಿಗೆ ಪಾಪವಿಲ್ಲ. ಮಹಾದ್ಯುತೇ! ಪ್ರಜೆಗಳ ಕರ್ಮವನ್ನು ಮಾಡುತ್ತಿರುವಾಗಲೇ ರಾಜನು ದೈವವಶನಾದರೆ ಅದನ್ನು ಪ್ರಮಾದವೆಂದಾಗಲೀ ಧರ್ಮದ ಅತಿಕ್ರಮವೆಂದಾಗಲೀ ಹೇಳಲಾಗುವುದಿಲ್ಲ.

12025015a ತರಸಾ ಬುದ್ಧಿಪೂರ್ವಂ ವಾ ನಿಗ್ರಾಹ್ಯಾ ಏವ ಶತ್ರವಃ।
12025015c ಪಾಪೈಃ ಸಹ ನ ಸಂದಧ್ಯಾದ್ರಾಷ್ಟ್ರಂ ಪಣ್ಯಂ ನ ಕಾರಯೇತ್।।

ಮೊದಲೇ ಯೋಚಿಸಿಯೋ ಅಥವಾ ತಕ್ಷಣವೋ ಶತ್ರುಗಳನ್ನು ನಿಗ್ರಹಿಸಲೇಬೇಕು. ಪಾಪಿಗಳೊಂದಿಗೆ ಸಂಧಿಮಾಡಿಕೊಳ್ಳಬಾರದು. ರಾಷ್ಟ್ರವನ್ನು ಮಾರುಕಟ್ಟೆಯ ವಸ್ತುವನ್ನಾಗಿ ಮಾಡಬಾರದು.

12025016a ಶೂರಾಶ್ಚಾರ್ಯಾಶ್ಚ ಸತ್ಕಾರ್ಯಾ ವಿದ್ವಾಂಸಶ್ಚ ಯುಧಿಷ್ಠಿರ।
12025016c ಗೋಮತೋ ಧನಿನಶ್ಚೈವ ಪರಿಪಾಲ್ಯಾ ವಿಶೇಷತಃ।।

ಯುಧಿಷ್ಠಿರ! ಶೂರರನ್ನೂ, ಆರ್ಯರನ್ನೂ, ವಿದ್ವಾಂಸರನ್ನೂ ಸತ್ಕರಿಸಬೇಕು. ಗೋವುಗಳನ್ನು ಪಡೆದಿರುವವರಿಗೂ ಧನಿಗಳಿಗೂ ವಿಶೇಷವಾದ ರಕ್ಷಣೆಯನ್ನು ನೀಡಬೇಕು.

12025017a ವ್ಯವಹಾರೇಷು ಧರ್ಮ್ಯೇಷು ನಿಯೋಜ್ಯಾಶ್ಚ ಬಹುಶ್ರುತಾಃ।

4112025017c ಗುಣಯುಕ್ತೇಽಪಿ ನೈಕಸ್ಮಿನ್ವಿಶ್ವಸ್ಯಾಚ್ಚ ವಿಚಕ್ಷಣಃ।।
ಧರ್ಮದ ವ್ಯವಹಾರಗಳಲ್ಲಿ ಸಕಲಶಾಸ್ತ್ರಜ್ಞರನ್ನೂ ನಿಯೋಜಿಸಬೇಕು. ಗುಣಯುಕ್ತನಾದರೂ ಒಬ್ಬನಲ್ಲಿಯೇ ರಾಜನು ವಿಶ್ವಾಸವನ್ನಿಡಬಾರದು.

12025018a ಅರಕ್ಷಿತಾ ದುರ್ವಿನೀತೋ ಮಾನೀ ಸ್ತಬ್ಧೋಽಭ್ಯಸೂಯಕಃ।
12025018c ಏನಸಾ ಯುಜ್ಯತೇ ರಾಜಾ ದುರ್ದಾಂತ ಇತಿ ಚೋಚ್ಯತೇ।।

ಪ್ರಜೆಗಳನ್ನು ರಕ್ಷಿಸದ, ಉದ್ಧತನಾದ, ದುರಭಿಮಾನೀ, ಮಾನ್ಯರಲ್ಲಿ ಅವಿನೀತನಾಗಿರುವ, ಅನ್ಯರಲ್ಲಿ ದೋಷವನ್ನೇ ಹುಡುಕುವ ರಾಜನು ಪಾಪಯುಕ್ತನನೆಂದು ಹೇಳುತ್ತಾರೆ.

12025019a ಯೇಽರಕ್ಷ್ಯಮಾಣಾ ಹೀಯಂತೇ ದೈವೇನೋಪಹತೇ ನೃಪೇ।
12025019c ತಸ್ಕರೈಶ್ಚಾಪಿ ಹನ್ಯಂತೇ ಸರ್ವಂ ತದ್ರಾಜಕಿಲ್ಬಿಷಮ್।।

ರಾಜನಿಂದ ರಕ್ಷಿಸಲ್ಪಡದ ಪ್ರಜೆಗಳು ದೈವಿಕ ಆಪತ್ತಿನಿಂದಲೂ ಕಳ್ಳ-ಕಾಕರಿಂದಲೂ ವಿನಾಶಹೊಂದುತ್ತಾರೆ. ಅವರ ವಿನಾಶಕ್ಕೆ ಕಾರಣನಾದ ನೃಪನೇ ಮಹಾಪಾಪಕ್ಕೆ ಗುರಿಯಾಗುತ್ತಾನೆ.

12025020a ಸುಮಂತ್ರಿತೇ ಸುನೀತೇ ಚ ವಿಧಿವಚ್ಚೋಪಪಾದಿತೇ।
12025020c ಪೌರುಷೇ ಕರ್ಮಣಿ ಕೃತೇ ನಾಸ್ತ್ಯಧರ್ಮೋ ಯುಧಿಷ್ಠಿರ।।

ಯುಧಿಷ್ಠಿರ! ಚೆನ್ನಾಗಿ ಸಮಾಲೋಚಿಸಿ, ನೀತಿಯನ್ನನುಸರಿಸಿ, ಸರ್ವಪ್ರಕಾರದಿಂದಲೂ ಮನುಷ್ಯಪ್ರಯತ್ನವನ್ನು ಮಾಡಿದರೆ ರಾಜನು ಅಧರ್ಮಿಯೆಂದೆನಿಸಿಕೊಳ್ಳುವುದಿಲ್ಲ.

12025021a ವಿಪದ್ಯಂತೇ ಸಮಾರಂಭಾಃ ಸಿಧ್ಯಂತ್ಯಪಿ ಚ ದೈವತಃ।
12025021c ಕೃತೇ ಪುರುಷಕಾರೇ ತು ನೈನಃ ಸ್ಪೃಶತಿ ಪಾರ್ಥಿವಮ್।।

ಉತ್ತಮವಾಗಿ ಆರಂಭಿಸಿದ ಕಾರ್ಯಗಳು ದೈವವಶದಿಂದ ಸಿದ್ಧಿಯಾಗದೆಯೂ ಇರಬಹುದು. ಆದರೆ ಪುರುಷಪ್ರಯತ್ನವನ್ನು ಮಾಡಿದ ಪಾರ್ಥಿವನಿಗೆ ಪಾಪವು ತಗಲುವುದಿಲ್ಲ.

12025022a ಅತ್ರ ತೇ ರಾಜಶಾರ್ದೂಲ ವರ್ತಯಿಷ್ಯೇ ಕಥಾಮಿಮಾಮ್।
12025022c ಯದ್ವೃತ್ತಂ ಪೂರ್ವರಾಜರ್ಷೇರ್ಹಯಗ್ರೀವಸ್ಯ ಪಾರ್ಥಿವ।।
12025023a ಶತ್ರೂನ್ಹತ್ವಾ ಹತಸ್ಯಾಜೌ ಶೂರಸ್ಯಾಕ್ಲಿಷ್ಟಕರ್ಮಣಃ।
12025023c ಅಸಹಾಯಸ್ಯ ಧೀರಸ್ಯ ನಿರ್ಜಿತಸ್ಯ ಯುಧಿಷ್ಠಿರ।।

ರಾಜಶಾರ್ದೂಲ! ಪಾರ್ಥಿವ! ಇದಕ್ಕೆ ಸಂಬಂಧಿಸಿದಂತೆ ಹಿಂದಿನ ರಾಜರ್ಷಿ ಹಯಗ್ರೀವನ ಕಥೆಯನ್ನು ನಿನಗೆ ಹೇಳುತ್ತೇನೆ. ಯುಧಿಷ್ಠಿರ! ಆ ಅಕ್ಲಿಷ್ಟಕರ್ಮಿಯು ಅಸಹಾಯಕನಾಗಿದ್ದೂ ಧೀರನಾಗಿ ಶೂರತನದಿಂದ ಶತ್ರುಗಳನ್ನು ಸಂಹರಿಸಿ ಜಯಿಸಿದುದನ್ನು ಹೇಳುತ್ತೇನೆ.

12025024a ಯತ್ಕರ್ಮ ವೈ ನಿಗ್ರಹೇ ಶಾತ್ರವಾಣಾಂ ಯೋಗಶ್ಚಾಗ್ರ್ಯಃ ಪಾಲನೇ ಮಾನವಾನಾಮ್।
12025024c ಕೃತ್ವಾ ಕರ್ಮ ಪ್ರಾಪ್ಯ ಕೀರ್ತಿಂ ಸುಯುದ್ಧೇ ವಾಜಿಗ್ರೀವೋ ಮೋದತೇ ದೇವಲೋಕೇ।।

ಮಾನವರ ಯೋಗಪಾಲನೆಯಲ್ಲಿ ಅಗ್ರಗಣ್ಯನಾದ ಅವನು ಶತ್ರುಗಳನ್ನು ನಿಗ್ರಹಿಸುವ ಕರ್ಮವನ್ನೆಸಗಿದನು. ಉತ್ತಮ ಯುದ್ಧದಲ್ಲಿ ಈ ಕರ್ಮವನ್ನೆಸಗಿ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025025a ಸಂತ್ಯಕ್ತಾತ್ಮಾ ಸಮರೇಷ್ವಾತತಾಯೀ ಶಸ್ತ್ರೈಶ್ಚಿನ್ನೋ ದಸ್ಯುಭಿರರ್ದ್ಯಮಾನಃ।
12025025c ಅಶ್ವಗ್ರೀವಃ ಕರ್ಮಶೀಲೋ ಮಹಾತ್ಮಾ ಸಂಸಿದ್ಧಾತ್ಮಾ ಮೋದತೇ ದೇವಲೋಕೇ।।

ಸಮರದಲ್ಲಿ ದಸ್ಯುಗಳ ಶಸ್ತ್ರಗಳಿಂದ ಛಿನ್ನನಾಗಿ ಈ ಆತತಾಯಿಯು ಅಸುನೀಗಿದ ಈ ಕರ್ಮಶೀಲ ಮಹಾತ್ಮ ಸಿದ್ಧಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025026a ಧನುರ್ಯೂಪೋ ರಶನಾ ಜ್ಯಾ ಶರಃ ಸ್ರುಕ್ ಸ್ರುವಃ ಖಡ್ಗೋ ರುಧಿರಂ ಯತ್ರ ಚಾಜ್ಯಮ್।
12025026c ರಥೋ ವೇದೀ ಕಾಮಗೋ ಯುದ್ಧಮಗ್ನಿಶ್ ಚಾತುರ್ಹೋತ್ರಂ ಚತುರೋ ವಾಜಿಮುಖ್ಯಾಃ।।
12025027a ಹುತ್ವಾ ತಸ್ಮಿನ್ಯಜ್ಞವಹ್ನಾವಥಾರೀನ್ ಪಾಪಾನ್ಮುಕ್ತೋ ರಾಜಸಿಂಹಸ್ತರಸ್ವೀ।
12025027c ಪ್ರಾಣಾನ್ಹುತ್ವಾ ಚಾವಭೃಥೇ ರಣೇ ಸ ವಾಜಿಗ್ರೀವೋ ಮೋದತೇ ದೇವಲೋಕೇ।।

ಧನುಸ್ಸೇ ಯೂಪಸ್ತಂಭವಾಗಿದ್ದ, ಮೌರ್ವಿಯೇ ರಜ್ಜುವಾಗಿದ್ದ, ಬಾಣವೇ ಸ್ರುಕ್ಕಾಗಿದ್ದ, ಖಡ್ಗವೇ ಸ್ರುವವಾಗಿದ್ದ, ರಕ್ತವೇ ಆಜ್ಯವಾಗಿದ್ದ, ಬೇಕಾದಲ್ಲಿ ಹೋಗುತ್ತಿದ್ದ ರಥವೇ ವೇದಿಯಾಗಿದ್ದ, ಯುದ್ಧವೇ ಅಗ್ನಿಯಾಗಿದ್ದ, ನಾಲ್ಕು ಕುದುರೆಗಳು ನಾಲ್ಕು ಹೋತೃಗಳಾಗಿದ್ದ ಆ ಯಜ್ಞದಲ್ಲಿ ವೇಗಶಾಲೀ ರಾಜಸಿಂಹನು ಶತ್ರುಗಳನ್ನು ಆಹುತಿಯನ್ನಾಗಿತ್ತು ಪಾಪದಿಂದ ಮುಕ್ತನಾಗಿ ರಣದ ಅವಭೃತದಲ್ಲಿ ತನ್ನ ಪ್ರಾಣವನ್ನೇ ಹೋಮಮಾಡಿದ ಹಯಗ್ರೀಯನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025028a ರಾಷ್ಟ್ರಂ ರಕ್ಷನ್ಬುದ್ಧಿಪೂರ್ವಂ ನಯೇನ ಸಂತ್ಯಕ್ತಾತ್ಮಾ ಯಜ್ಞಶೀಲೋ ಮಹಾತ್ಮಾ।
12025028c ಸರ್ವಾಽಲ್ಲೋಕಾನ್ವ್ಯಾಪ್ಯ ಕೀರ್ತ್ಯಾ ಮನಸ್ವೀ ವಾಜಿಗ್ರೀವೋ ಮೋದತೇ ದೇವಲೋಕೇ।।

ಯಜ್ಞಶೀಲ ಮಹಾತ್ಮ ಮನನಶೀಲ ಹಯಗ್ರೀವನು ಬುದ್ಧಿಪೂರ್ವಕ ಸುನೀತಿಯಿಂದ ರಾಷ್ಟ್ರವನ್ನು ರಕ್ಷಿಸುತ್ತಾ ಪ್ರಾಣವನ್ನು ತೊರೆದು ತನ್ನ ಕೀರ್ತಿಯು ಸರ್ವ ಲೋಕಗಳಲ್ಲಿ ವ್ಯಾಪಿಸುವಂತೆ ಮಾಡಿ ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025029a ದೈವೀಂ ಸಿದ್ಧಿಂ ಮಾನುಷೀಂ ದಂಡನೀತಿಂ ಯೋಗನ್ಯಾಯೈಃ ಪಾಲಯಿತ್ವಾ ಮಹೀಂ ಚ।
12025029c ತಸ್ಮಾದ್ರಾಜಾ ಧರ್ಮಶೀಲೋ ಮಹಾತ್ಮಾ ಹಯಗ್ರೀವೋ ಮೋದತೇ ಸ್ವರ್ಗಲೋಕೇ।।

ಧರ್ಮಶೀಲ ಮಹಾತ್ಮ ರಾಜಾ ಹಯಗ್ರೀವನು ದೈವೀ ಸಿದ್ಧಿಯನ್ನೂ ಮಾನುಷ ದಂಡನೀತಿಯನ್ನೂ ಬಳಸಿ ಯೋಗ-ನ್ಯಾಯಗಳಿಂದ ಭೂಮಿಯನ್ನು ಆಳಿ ಸ್ವರ್ಗಲೋಕದಲ್ಲಿ ಮೋದಿಸುತ್ತಿದ್ದಾನೆ.

12025030a ವಿದ್ವಾಂಸ್ತ್ಯಾಗೀ ಶ್ರದ್ದಧಾನಃ ಕೃತಜ್ಞಸ್ ತ್ಯಕ್ತ್ವಾ ಲೋಕಂ ಮಾನುಷಂ ಕರ್ಮ ಕೃತ್ವಾ।
12025030c ಮೇಧಾವಿನಾಂ ವಿದುಷಾಂ ಸಂಮತಾನಾಂ ತನುತ್ಯಜಾಂ ಲೋಕಮಾಕ್ರಮ್ಯ ರಾಜಾ।।

ವಿದ್ವಾಂಸನೂ, ತ್ಯಾಗಿಯೂ, ಶದ್ಧಾಳುವೂ, ಕೃತಜ್ಞನೂ ಆಗಿದ್ದ ರಾಜಾ ಹಯಗ್ರೀವನು ಮಾನುಷ ಕರ್ಮವನ್ನು ಮಾಡಿ ದೇಹವನ್ನು ತ್ಯಜಿಸಿ ಮೇಧಾವಿಗಳಿಗೂ, ಸರ್ವಸನ್ಮಾನ್ಯರಿಗೂ, ಜ್ಞಾನಿಗಳಿಗೂ ದೊರಕುವ ಲೋಕವನ್ನು ಆಕ್ರಮಣಿಸಿದ್ದಾನೆ.

12025031a ಸಮ್ಯಗ್ವೇದಾನ್ಪ್ರಾಪ್ಯ ಶಾಸ್ತ್ರಾಣ್ಯಧೀತ್ಯ ಸಮ್ಯಗ್ರಾಷ್ಟ್ರಂ ಪಾಲಯಿತ್ವಾ ಮಹಾತ್ಮಾ।
12025031c ಚಾತುರ್ವರ್ಣ್ಯಂ ಸ್ಥಾಪಯಿತ್ವಾ ಸ್ವಧರ್ಮೇ ವಾಜಿಗ್ರೀವೋ ಮೋದತೇ ದೇವಲೋಕೇ।।

ಸರ್ವವೇದಗಳನ್ನೂ ಪಡೆದು ಶಾಸ್ತ್ರಗಳನ್ನು ತಿಳಿದುಕೊಂಡು ಸಂಪೂರ್ಣ ರಾಷ್ಟ್ರವನ್ನು ಪಾಲಿಸುತ್ತ, ಸ್ವಧರ್ಮದಿಂದ ಚಾತುರ್ವರ್ಣಗಳನ್ನು ಸಂಸ್ಥಾಪಿಸಿ ಆ ಮಹಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025032a ಜಿತ್ವಾ ಸಂಗ್ರಾಮಾನ್ಪಾಲಯಿತ್ವಾ ಪ್ರಜಾಶ್ಚ ಸೋಮಂ ಪೀತ್ವಾ ತರ್ಪಯಿತ್ವಾ ದ್ವಿಜಾಗ್ರ್ಯಾನ್।
12025032c ಯುಕ್ತ್ಯಾ ದಂಡಂ ಧಾರಯಿತ್ವಾ ಪ್ರಜಾನಾಂ ಯುದ್ಧೇ ಕ್ಷೀಣೋ ಮೋದತೇ ದೇವಲೋಕೇ।।

ಸಂಗ್ರಾಮಗಳನ್ನು ಗೆದ್ದು, ಪ್ರಜೆಗಳನ್ನು ಪಾಲಿಸಿ, ಸೋಮವನ್ನು ಕುಡಿದು, ದ್ವಿಜಾಗ್ರರಿಗೆ ತರ್ಪಣೆಗಳನ್ನಿತ್ತು, ದಂಡನೀತಿಯನ್ನು ಧರಿಸಿ ಪ್ರಜೆಗಳನ್ನು ಪಾಲಿಸಿ, ಯುದ್ಧದಲ್ಲಿ ಅಸುನೀಗಿದ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.

12025033a ವೃತ್ತಂ ಯಸ್ಯ ಶ್ಲಾಘನೀಯಂ ಮನುಷ್ಯಾಃ ಸಂತೋ ವಿದ್ವಾಂಸಶ್ಚಾರ್ಹಯಂತ್ಯರ್ಹಣೀಯಾಃ।
12025033c ಸ್ವರ್ಗಂ ಜಿತ್ವಾ ವೀರಲೋಕಾಂಶ್ಚ ಗತ್ವಾ ಸಿದ್ಧಿಂ ಪ್ರಾಪ್ತಃ ಪುಣ್ಯಕೀರ್ತಿರ್ಮಹಾತ್ಮಾ।।

ಸಂತರೂ ವಿದ್ವಾಂಸರೂ ಆದ ಮನುಷ್ಯರು ಯಾರ ನಡತೆಯನ್ನು ಅರ್ಹರೀತಿಯಲ್ಲಿ ಶ್ಲಾಘಿಸುತ್ತಿರುವರೋ ಆ ಮಹಾತ್ಮನು ಸ್ವರ್ಗವನ್ನು ಗೆದ್ದು, ವೀರಲೋಕಗಳನ್ನು ಸೇರಿ, ಸಿದ್ಧಿಯನ್ನು ಪಡೆದು ಪುಣ್ಯಕೀರ್ತಿಯನ್ನೂ ಪಡೆದನು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ತೈದನೇ ಅಧ್ಯಾಯವು.