ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 24
ಸಾರ
ವ್ಯಾಸನು ಶಂಖ-ಲಿಖಿತರ ಕಥೆಯನ್ನು ಹೇಳಿ ಯುಧಿಷ್ಠಿರನಿಗೆ ರಾಜಧರ್ಮದಲ್ಲಿಯೇ ದೃಢನಾಗಿರಲು ಆಜ್ಞೆಯನ್ನು ನೀಡಿದುದು (1-30).
12024001 ಯುಧಿಷ್ಠಿರ ಉವಾಚ।
12024001a ಭಗವನ್ಕರ್ಮಣಾ ಕೇನ ಸುದ್ಯುಮ್ನೋ ವಸುಧಾಧಿಪಃ।
12024001c ಸಂಸಿದ್ಧಿಂ ಪರಮಾಂ ಪ್ರಾಪ್ತಃ ಶ್ರೋತುಮಿಚ್ಚಾಮಿ ತಂ ನೃಪಮ್।।
ಯುಧಿಷ್ಠಿರನು ಹೇಳಿದನು: “ಭಗವನ್! ವಸುಧಾಧಿಪ ನೃಪ ಸುದ್ಯುಮ್ನನು ಯಾವ ಕರ್ಮದಿಂದ ಪರಮ ಸಂಸಿದ್ಧಿಯನ್ನು ಪಡೆದನು ಎನ್ನುವುದನ್ನು ಕೇಳಲು ಬಯಸುತ್ತೇನೆ.”
12024002 ವ್ಯಾಸ ಉವಾಚ।
12024002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12024002c ಶಂಖಶ್ಚ ಲಿಖಿತಶ್ಚಾಸ್ತಾಂ ಭ್ರಾತರೌ ಸಂಯತವ್ರತೌ।।
ವ್ಯಾಸನು ಹೇಳಿದನು: “ಈ ವಿಷಯದಲ್ಲಿ ಸಂಯತವ್ರತರಾಗಿದ್ದ ಶಂಖ ಮತ್ತು ಲಿಖಿತ ಎನ್ನುವ ಸಹೋದರರ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
12024003a ತಯೋರಾವಸಥಾವಾಸ್ತಾಂ ರಮಣೀಯೌ ಪೃಥಕ್ ಪೃಥಕ್।
12024003c ನಿತ್ಯಪುಷ್ಪಫಲೈರ್ವೃಕ್ಷೈರುಪೇತೌ ಬಾಹುದಾಮನು।।
ಅವರಿಗೆ ಬಾಹುದಾನದಿಯ ತೀರದಲ್ಲಿ ನಿತ್ಯಪುಷ್ಪ-ಫಲಗಳ ವೃಕ್ಷಗಳಿಂದ ತುಂಬಿದ್ದ ರಮಣೀಯವಾದ ಪ್ರತ್ಯೇಕ ಆಶ್ರಮಗಳಿದ್ದವು.
12024004a ತತಃ ಕದಾ ಚಿಲ್ಲಿಖಿತಃ ಶಂಖಸ್ಯಾಶ್ರಮಮಾಗಮತ್।
12024004c ಯದೃಚ್ಚಯಾಪಿ ಶಂಖೋಽಥ ನಿಷ್ಕ್ರಾಂತೋಽಭವದಾಶ್ರಮಾತ್।।
ಹೀಗಿರಲು ಒಮ್ಮೆ ಲಿಖಿತನು ಶಂಖನ ಆಶ್ರಮಕ್ಕೆ ಬಂದನು. ಅಕಸ್ಮಾತ್ತಾಗಿ ಅದೇ ಸಮದಲ್ಲಿ ಶಂಖನು ಆಶ್ರಮದ ಹೊರಗೆ ಹೋಗಿದ್ದನು.
12024005a ಸೋಽಭಿಗಮ್ಯಾಶ್ರಮಂ ಭ್ರಾತುಃ ಶಂಖಸ್ಯ ಲಿಖಿತಸ್ತದಾ।
12024005c ಫಲಾನಿ ಶಾತಯಾಮಾಸ ಸಮ್ಯಕ್ಪರಿಣತಾನ್ಯುತ।।
ಅಣ್ಣ ಶಂಖನ ಆಶ್ರಮಕ್ಕೆ ಬಂದು ಲಿಖಿತನು ಅಲ್ಲಿ ಚೆನ್ನಾಗಿ ಹಣ್ಣಾಗಿದ್ದ ಫಲಗಳನ್ನು ವೃಕ್ಷದಿಂದ ಕೆಳಕ್ಕೆ ಬೀಳಿಸಿದನು.
12024006a ತಾನ್ಯುಪಾದಾಯ ವಿಸ್ರಬ್ಧೋ ಭಕ್ಷಯಾಮಾಸ ಸ ದ್ವಿಜಃ।
12024006c ತಸ್ಮಿಂಶ್ಚ ಭಕ್ಷಯತ್ಯೇವ ಶಂಖೋಽಪ್ಯಾಶ್ರಮಮಾಗಮತ್।।
ಅವುಗಳನ್ನು ಒಟ್ಟುಹಾಕಿ ಒಂದೆಡೆಯಲ್ಲಿ ಕುಳಿತು ಆ ದ್ವಿಜನು ನಿಶ್ಚಿಂತೆಯಿಂದ ತಿನ್ನುತ್ತಿದ್ದನು. ಅವುಗಳನ್ನು ತಿನ್ನುತ್ತಿರುವಾಗಲೇ ಶಂಖನು ಆಶ್ರಮಕ್ಕೆ ಹಿಂದಿರುಗಿದನು.
12024007a ಭಕ್ಷಯಂತಂ ತು ತಂ ದೃಷ್ಟ್ವಾ ಶಂಖೋ ಭ್ರಾತರಮಬ್ರವೀತ್।
12024007c ಕುತಃ ಫಲಾನ್ಯವಾಪ್ತಾನಿ ಹೇತುನಾ ಕೇನ ಖಾದಸಿ।।
ಹಣ್ಣುಗಳನ್ನು ತಿನ್ನುತ್ತಿರುವ ಅವನನ್ನು ನೋಡಿ ಶಂಖನು “ಈ ಹಣ್ಣುಗಳು ಎಲ್ಲಿ ದೊರಕಿದವು? ಏಕೆ ಇವುಗಳನ್ನು ತಿನ್ನುತ್ತಿರುವೆ?” ಎಂದು ತಮ್ಮನನ್ನು ಕೇಳಿದನು.
12024008a ಸೋಽಬ್ರವೀದ್ಭ್ರಾತರಂ ಜ್ಯೇಷ್ಠಮುಪಸ್ಪೃಶ್ಯಾಭಿವಾದ್ಯ ಚ।
12024008c ಇತ ಏವ ಗೃಹೀತಾನಿ ಮಯೇತಿ ಪ್ರಹಸನ್ನಿವ।।
ಅವನು ಅಣ್ಣನ ಬಳಿಹೋಗಿ, ಪಾದಗಳನ್ನು ಮುಟ್ಟಿ ನಮಸ್ಕರಿಸಿ, ನಗುತ್ತಾ “ಇವುಗಳನ್ನು ನಾನು ಇಲ್ಲಿಂದಲೇ ತೆಗೆದುಕೊಂಡೆ!” ಎಂದನು.
12024009a ತಮಬ್ರವೀತ್ತದಾ ಶಂಖಸ್ತೀವ್ರಕೋಪಸಮನ್ವಿತಃ।
12024009c ಸ್ತೇಯಂ ತ್ವಯಾ ಕೃತಮಿದಂ ಫಲಾನ್ಯಾದದತಾ ಸ್ವಯಮ್।।
12024009e ಗಚ್ಚ ರಾಜಾನಮಾಸಾದ್ಯ ಸ್ವಕರ್ಮ ಪ್ರಥಯಸ್ವ ವೈ।।
ಇದನ್ನು ಕೇಳಿ ಶಂಖನು ತೀವ್ರ ಶೋಕಸಮನ್ವಿತನಾಗಿ ತಮ್ಮನಿಗೆ ಹೇಳಿದನು: “ಸ್ವಯಂ ನೀನೇ ಈ ಹಣ್ಣುಗಳನ್ನು ತೆಗೆದುಕೊಂಡಿದುದರಿಂದ ನೀನು ಕಳ್ಳತನ ಮಾಡಿರುವೆ. ಹೋಗು! ರಾಜನಲ್ಲಿಗೆ ಹೋಗಿ ನೀನು ಮಾಡಿದ ಕೆಲಸವನ್ನು ಹೇಳಿಕೋ!
12024010a ಅದತ್ತಾದಾನಮೇವೇದಂ ಕೃತಂ ಪಾರ್ಥಿವಸತ್ತಮ।
12024010c ಸ್ತೇನಂ ಮಾಂ ತ್ವಂ ವಿದಿತ್ವಾ ಚ ಸ್ವಧರ್ಮಮನುಪಾಲಯ।।
12024010e ಶೀಘ್ರಂ ಧಾರಯ ಚೌರಸ್ಯ ಮಮ ದಂಡಂ ನರಾಧಿಪ।।
“ಪಾರ್ಥಿವಸತ್ತಮ! ದಾನವಾಗಿ ಕೊಟ್ಟಿರದ, ಯಾರನ್ನೂ ಕೇಳದೇ ಮತ್ತು ಯಾರಿಗೂ ಹೇಳದೇ ನಾನು ಫಲವನ್ನು ತಿಂದುಬಿಟ್ಟೆನು. ನನ್ನನ್ನು ನೀನು ಕಳ್ಳನೆಂದು ತಿಳಿದು ಸ್ವಧರ್ಮವನ್ನು ಅನುಸರಿಸು. ನರಾಧಿಪ! ಕಳ್ಳನಿಗೆ ದೊರಕುವ ಶಿಕ್ಷೆಯನ್ನು ನನಗೂ ಶೀಘ್ರವಾಗಿ ನೀಡು!””
12024011a ಇತ್ಯುಕ್ತಸ್ತಸ್ಯ ವಚನಾತ್ಸುದ್ಯುಮ್ನಂ ವಸುಧಾಧಿಪಮ್।
12024011c ಅಭ್ಯಗಚ್ಚನ್ಮಹಾಬಾಹೋ ಲಿಖಿತಃ ಸಂಶಿತವ್ರತಃ।।
ಮಹಾಬಾಹೋ! ಅವನ ಮಾತಿನಂತೆ ಸಂಶಿತವ್ರತ ಲಿಖಿತನು ವಸುಧಾಧಿಪ ಸುದ್ಯುಮ್ನನಲ್ಲಿಗೆ ಹೋದನು.
12024012a ಸುದ್ಯುಮ್ನಸ್ತ್ವಂತಪಾಲೇಭ್ಯಃ ಶ್ರುತ್ವಾ ಲಿಖಿತಮಾಗತಮ್।
12024012c ಅಭ್ಯಗಚ್ಚತ್ಸಹಾಮಾತ್ಯಃ ಪದ್ಭ್ಯಾಮೇವ ನರೇಶ್ವರಃ।।
ಲಿಖಿತನ ಬರುವಿಕೆಯನ್ನು ದ್ವಾರಪಾಲರಿಂದ ಕೇಳಿದ ನರೇಶ್ವರ ಸುದ್ಯುಮ್ನನು ಅಮಾತ್ಯರೊಂದಿಗೆ ಕಾಲ್ನಡುಗೆಯಲ್ಲಿಯೇ ಬಂದನು.
12024013a ತಮಬ್ರವೀತ್ಸಮಾಗತ್ಯ ಸ ರಾಜಾ ಬ್ರಹ್ಮವಿತ್ತಮಮ್।
12024013c ಕಿಮಾಗಮನಮಾಚಕ್ಷ್ವ ಭಗವನ್ಕೃತಮೇವ ತತ್।।
ಆ ಬ್ರಹ್ಮವಿತ್ತಮನನ್ನು ಸ್ವಾಗತಿಸಿ ರಾಜನು “ಭಗವನ್! ನೀನು ಯಾವ ಕಾರಣದಿಂದ ಇಲ್ಲಿಗೆ ಆಗಮಿಸಿರುವೆಯೋ ಆ ಕಾರ್ಯವು ಆದಂತೆಯೇ ತಿಳಿ” ಎಂದನು.
12024014a ಏವಮುಕ್ತಃ ಸ ವಿಪ್ರರ್ಷಿಃ ಸುದ್ಯುಮ್ನಮಿದಮಬ್ರವೀತ್।
12024014c ಪ್ರತಿಶ್ರೌಷಿ ಕರಿಷ್ಯೇತಿ ಶ್ರುತ್ವಾ ತತ್ಕರ್ತುಮರ್ಹಸಿ।।
ಹೀಗೆ ಹೇಳಲು ಆ ವಿಪ್ರರ್ಷಿಯು ಸುದ್ಯುಮ್ನನಿಗೆ ಹೇಳಿದನು: “ಮಾಡುತ್ತೇನೆ ಎಂದು ಮಾತುಕೊಟ್ಟಮೇಲೆ, ನಾನು ಹೇಳುವುದನ್ನು ಕೇಳಿ ಅದರಂತೆಯೇ ಮಾಡಬೇಕಾಗುತ್ತದೆ!
12024015a ಅನಿಸೃಷ್ಟಾನಿ ಗುರುಣಾ ಫಲಾನಿ ಪುರುಷರ್ಷಭ।
12024015c ಭಕ್ಷಿತಾನಿ ಮಯಾ ರಾಜಂಸ್ತತ್ರ ಮಾಂ ಶಾಧಿ ಮಾಚಿರಮ್।।
ಪುರುಷರ್ಷಭ! ರಾಜನ್! ಅವನು ಕೊಡದೆಯೇ ಮತ್ತು ಅವನನ್ನು ಕೇಳದೆಯೇ ನಾನು ಅಣ್ಣನ ಫಲಗಳನ್ನು ತಿಂದಿದ್ದೇನೆ. ಆ ಅಪರಾಧಕ್ಕೆ ಕೂಡಲೇ ನನ್ನನ್ನು ಶಿಕ್ಷಿಸು!”
12024016 ಸುದ್ಯುಮ್ನ ಉವಾಚ।
12024016a ಪ್ರಮಾಣಂ ಚೇನ್ಮತೋ ರಾಜಾ ಭವತೋ ದಂಡಧಾರಣೇ।
12024016c ಅನುಜ್ಞಾಯಾಮಪಿ ತಥಾ ಹೇತುಃ ಸ್ಯಾದ್ಬ್ರಾಹ್ಮಣರ್ಷಭ।।
ಸುದ್ಯುಮ್ನನು ಹೇಳಿದನು: “ಬ್ರಾಹ್ಮಣರ್ಷಭ! ನಿನ್ನನ್ನು ಶಿಕ್ಷಿಸಲು ರಾಜನು ಮಾತ್ರ ಅರ್ಹನೆಂದು ಇರುವುದಾದರೆ ನಿನ್ನನ್ನು ಕ್ಷಮಿಸಿ ಕಳುಹಿಸಿಕೊಡಲೂ ಅವನು ಅರ್ಹನಲ್ಲವೇ?
12024017a ಸ ಭವಾನಭ್ಯನುಜ್ಞಾತಃ ಶುಚಿಕರ್ಮಾ ಮಹಾವ್ರತಃ।
12024017c ಬ್ರೂಹಿ ಕಾಮಾನತೋಽನ್ಯಾಂಸ್ತ್ವಂ ಕರಿಷ್ಯಾಮಿ ಹಿ ತೇ ವಚಃ।।
ಶುಚಿಕರ್ಮಾ! ಮಹಾವ್ರತ! ನಿನ್ನನ್ನು ನಾನು ಕ್ಷಮಿಸಿದ್ದೇನೆ ಮತ್ತು ಹಿಂದಿರುಗಲು ಅನುಮತಿಯಿತ್ತಿದ್ದೇನೆ. ಮತ್ತೇನಾದರೂ ಅಭಿಲಾಷೆಗಳಿದ್ದರೆ ಅದನ್ನೂ ಹೇಳು. ನಿನ್ನ ಆ ಮಾತನ್ನೂ ನಡೆಸಿಕೊಡುತ್ತೇನೆ.””
12024018 ವ್ಯಾಸ ಉವಾಚ।
12024018a ಚಂದ್ಯಮಾನೋಽಪಿ ಬ್ರಹ್ಮರ್ಷಿಃ ಪಾರ್ಥಿವೇನ ಮಹಾತ್ಮನಾ।
12024018c ನಾನ್ಯಂ ವೈ ವರಯಾಮಾಸ ತಸ್ಮಾದ್ದಂಡಾದೃತೇ ವರಮ್।।
ವ್ಯಾಸನು ಹೇಳಿದನು: “ಮಹಾತ್ಮ ಪಾರ್ಥಿವನು ಸಮಾಧಾನ ಪಡಿಸುತ್ತಿದ್ದರೂ ಬ್ರಹ್ಮರ್ಷಿಯು “ಶಿಕ್ಷೆಯ ವರವನ್ನಲ್ಲದೇ ಬೇರೆ ಯಾವ ವರವನ್ನೂ ನಿನ್ನಿಂದ ನಾನು ಸ್ವೀಕರಿಸುವುದಿಲ್ಲ” ಎಂದು ಹಠಹಿಡಿದನು.
12024019a ತತಃ ಸ ಪೃಥಿವೀಪಾಲೋ ಲಿಖಿತಸ್ಯ ಮಹಾತ್ಮನಃ।
12024019c ಕರೌ ಪ್ರಚ್ಚೇದಯಾಮಾಸ ಧೃತದಂಡೋ ಜಗಾಮ ಸಃ।।
ಆಗ ಆ ಪೃಥಿವೀಪಾಲನು ಮಹಾತ್ಮ ಲಿಖಿತನ ಎರಡೂ ಕೈಗಳನ್ನೂ ಕತ್ತರಿಸುಂತೆ ಮಾಡಿದನು. ಶಿಕ್ಷೆಯನ್ನು ಪಡೆದ ಅವನು ಹೊರಟುಹೋದನು.
12024020a ಸ ಗತ್ವಾ ಭ್ರಾತರಂ ಶಂಖಮಾರ್ತರೂಪೋಽಬ್ರವೀದಿದಮ್।
12024020c ಧೃತದಂಡಸ್ಯ ದುರ್ಭುದ್ಧೇರ್ಭಗವನ್ ಕ್ಷಂತುಮರ್ಹಸಿ।।
ಅವನು ಅಣ್ಣ ಶಂಖನ ಬಳಿ ಹೋಗಿ ಆರ್ತರೂಪನಾಗಿ “ಭಗವನ್! ಶಿಕ್ಷೆಯನ್ನು ಪಡೆದ ಈ ದುರ್ಬುದ್ಧಿಯನ್ನು ಕ್ಷಮಿಸಬೇಕು” ಎಂದು ಕೇಳಿಕೊಂಡನು.
12024021 ಶಂಖ ಉವಾಚ।
12024021a ನ ಕುಪ್ಯೇ ತವ ಧರ್ಮಜ್ಞ ನ ಚ ದೂಷಯಸೇ ಮಮ।
12024021c ಧರ್ಮಸ್ತು ತೇ ವ್ಯತಿಕ್ರಾಂತಸ್ತತಸ್ತೇ ನಿಷ್ಕೃತಿಃ ಕೃತಾ।।
ಶಂಖನು ಹೇಳಿದನು: “ಧರ್ಮಜ್ಞ! ನಿನ್ನಮೇಲೆ ಕೋಪವಿಲ್ಲ. ನಿನ್ನನ್ನು ದೂಷಿಸುವುದೂ ಇಲ್ಲ. ಧರ್ಮವನ್ನು ಅತಿಕ್ರಮಿಸಿದುದರಿಂದ ನಿನಗೆ ಈ ಪ್ರಾಯಶ್ಚಿತ್ತವಾಯಿತು.
12024022a ಸ ಗತ್ವಾ ಬಾಹುದಾಂ ಶೀಘ್ರಂ ತರ್ಪಯಸ್ವ ಯಥಾವಿಧಿ।
12024022c ದೇವಾನ್ಪಿತೃನೃಷೀಂಶ್ಚೈವ ಮಾ ಚಾಧರ್ಮೇ ಮನಃ ಕೃಥಾಃ।।
ಶೀಘ್ರದಲ್ಲಿಯೇ ನೀನು ಬಹುದಾನದಿಗೆ ಹೋಗಿ ಯಥಾವಿಧಿಯಾಗಿ ದೇವತೆಗಳಿಗೂ, ಪಿತೃಗಳಿಗೂ, ಋಷಿಗಳಿಗೂ ತರ್ಪಣಗಳನ್ನು ನೀಡು. ನಿನ್ನ ಮನಸ್ಸನ್ನು ಅಧರ್ಮದಲ್ಲಿ ತೊಡಗಿಸಬೇಡ!””
12024023 ವ್ಯಾಸ ಉವಾಚ।
12024023a ತಸ್ಯ ತದ್ವಚನಂ ಶ್ರುತ್ವಾ ಶಂಖಸ್ಯ ಲಿಖಿತಸ್ತದಾ।
12024023c ಅವಗಾಹ್ಯಾಪಗಾಂ ಪುಣ್ಯಾಮುದಕಾರ್ಥಂ ಪ್ರಚಕ್ರಮೇ।।
ವ್ಯಾಸನು ಹೇಳಿದನು: “ಶಂಖನ ಆ ಮಾತನ್ನು ಕೇಳಿದ ಲಿಖಿತನು ಪುಣ್ಯ ನದಿಯಲ್ಲಿ ಮಿಂದು ತರ್ಪಣಗಳನ್ನು ಕೊಡಲು ಪ್ರಾರಂಭಿಸಿದನು.
12024024a ಪ್ರಾದುರಾಸ್ತಾಂ ತತಸ್ತಸ್ಯ ಕರೌ ಜಲಜಸಂನಿಭೌ।
12024024c ತತಃ ಸ ವಿಸ್ಮಿತೋ ಭ್ರಾತುರ್ದರ್ಶಯಾಮಾಸ ತೌ ಕರೌ।।
ಕೂಡಲೇ ಅವನಿಗೆ ಕಮಲದಂತಹ ಕೈಗಳು ಹುಟ್ಟಿಕೊಂಡವು. ವಿಸ್ಮಿತನಾದ ಅವನು ತನ್ನ ಆ ಎರಡೂ ಕೈಗಳನ್ನೂ ಅಣ್ಣನಿಗೆ ತೋರಿಸಿದನು.
12024025a ತತಸ್ತಮಬ್ರವೀಚ್ಚಂಖಸ್ತಪಸೇದಂ ಕೃತಂ ಮಯಾ।
12024025c ಮಾ ಚ ತೇಽತ್ರ ವಿಶಂಕಾ ಭೂದ್ದೈವಮೇವ ವಿಧೀಯತೇ।।
ಆಗ ಶಂಖನು “ನನ್ನ ತಪಸ್ಸಿನಿಂದಾಗಿ ನಾನೇ ಇದನ್ನು ಹೀಗೆ ಮಾಡಿದೆನು. ಇದರಲ್ಲಿ ಶಂಕೆತಾಳದಿರು. ದೈವವೇ ಎಲ್ಲವನ್ನೂ ಮಾಡಿಸುತ್ತದೆ!” ಎಂದು ಹೇಳಿದನು.
12024026 ಲಿಖಿತ ಉವಾಚ।
12024026a ಕಿಂ ನು ನಾಹಂ ತ್ವಯಾ ಪೂತಃ ಪೂರ್ವಮೇವ ಮಹಾದ್ಯುತೇ।
12024026c ಯಸ್ಯ ತೇ ತಪಸೋ ವೀರ್ಯಮೀದೃಶಂ ದ್ವಿಜಸತ್ತಮ।।
ಲಿಖಿತನು ಹೇಳಿದನು: “ಮಹಾದ್ಯುತೇ! ದ್ವಿಜಸತ್ತಮ! ನಿನ್ನ ತಪಸ್ಸಿನ ವೀರ್ಯವು ಈ ತರಹನಾಗಿತ್ತೆಂದರೆ ಮೊದಲೇ ನೀನು ನನ್ನನ್ನು ಪವಿತ್ರನನ್ನಾಗಿ ಮಾಡಬಹುದಿತ್ತಲ್ಲವೇ?”
12024027 ಶಂಖ ಉವಾಚ।
12024027a ಏವಮೇತನ್ಮಯಾ ಕಾರ್ಯಂ ನಾಹಂ ದಂಡಧರಸ್ತವ।
12024027c ಸ ಚ ಪೂತೋ ನರಪತಿಸ್ತ್ವಂ ಚಾಪಿ ಪಿತೃಭಿಃ ಸಹ।।
ಶಂಖನು ಹೇಳಿದನು: “ಹೀಗೆ ಮಾಡುವುದೇ ನನ್ನ ಕರ್ತವ್ಯವಾಗಿತ್ತು. ನಿನಗೆ ಶಿಕ್ಷೆಯನ್ನು ವಿಧಿಸುವವನು ನಾನಲ್ಲ! ನಿನಗೆ ದಂಡವನ್ನಿತ್ತು ಆ ನರಪತಿಯೂ, ಪಿತೃಗಳೊಂದಿಗೆ ನೀನೂ ಪವಿತ್ರರಾದಿರಿ!””
12024028 ವ್ಯಾಸ ಉವಾಚ।
12024028a ಸ ರಾಜಾ ಪಾಂಡವಶ್ರೇಷ್ಠ ಶ್ರೇಷ್ಠೋ ವೈ ತೇನ ಕರ್ಮಣಾ।
12024028c ಪ್ರಾಪ್ತವಾನ್ಪರಮಾಂ ಸಿದ್ಧಿಂ ದಕ್ಷಃ ಪ್ರಾಚೇತಸೋ ಯಥಾ।।
ವ್ಯಾಸನು ಹೇಳಿದನು: “ಪಾಂಡವಶ್ರೇಷ್ಠ! ದಂಡಧಾರಣೆಯ ಆ ಶ್ರೇಷ್ಠ ಕರ್ಮದಿಂದಾಗಿ ರಾಜಾ ಸುದ್ಯುಮ್ನನು ದಕ್ಷ ಪ್ರಾಚೇತಸನಂತೆ ಪರಮ ಸಿದ್ಧಿಯನ್ನು ಪಡೆದನು.
12024029a ಏಷ ಧರ್ಮಃ ಕ್ಷತ್ರಿಯಾಣಾಂ ಪ್ರಜಾನಾಂ ಪರಿಪಾಲನಮ್।
12024029c ಉತ್ಪಥೇಽಸ್ಮಿನ್ಮಹಾರಾಜ ಮಾ ಚ ಶೋಕೇ ಮನಃ ಕೃಥಾಃ।।
ಮಹಾರಾಜ! ಪ್ರಜೆಗಳ ಪರಿಪಾಲನೆಯೇ ಕ್ಷತ್ರಿಯರ ಧರ್ಮ. ಆದುದರಿಂದ ಇದರ ಕುರಿತು ಶೋಕಿಸಬೇಡ!
12024030a ಭ್ರಾತುರಸ್ಯ ಹಿತಂ ವಾಕ್ಯಂ ಶೃಣು ಧರ್ಮಜ್ಞಸತ್ತಮ।
12024030c ದಂಡ ಏವ ಹಿ ರಾಜೇಂದ್ರ ಕ್ಷತ್ರಧರ್ಮೋ ನ ಮುಂಡನಮ್।।
ಧರ್ಮಜ್ಞ! ಸತ್ತಮ! ತಮ್ಮನ ಹಿತವಾಕ್ಯವನ್ನು ಕೇಳು. ರಾಜೇಂದ್ರ! ದಂಡವೇ ಕ್ಷತ್ರಧರ್ಮ. ಮುಂಡನವಲ್ಲ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.