023 ವ್ಯಾಸವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 231

ಸಾರ

**ವ್ಯಾಸನು ಯುಧಿಷ್ಠಿರನಿಗೆ ರಾಜಾ ಸುದ್ಯುಮ್ನನ ದಂಡಧರ್ಮಪಾಲನೆಯ ಮಹತ್ತ್ವವನ್ನು ತಿಳಿಸಿದುದು (1-15).

12023001 ವೈಶಂಪಾಯನ ಉವಾಚ।
12023001a ಏವಮುಕ್ತಸ್ತು ಕೌಂತೇಯೋ ಗುಡಾಕೇಶೇನ ಭಾರತ।
12023001c ನೋವಾಚ ಕಿಂ ಚಿತ್ಕೌರವ್ಯಸ್ತತೋ ದ್ವೈಪಾಯನೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಭಾರತ! ಕೌಂತೇಯ ಗುಡಾಕೇಶನು ಹೀಗೆ ಹೇಳಲು ಕೌರವ್ಯನು ಏನನ್ನೂ ಮಾತನಾಡಲಿಲ್ಲ. ಆಗ ದ್ವೈಪಾಯನನು ಹೇಳಿದನು:

12023002a ಬೀಭತ್ಸೋರ್ವಚನಂ ಸಮ್ಯಕ್ಸತ್ಯಮೇತದ್ಯುಧಿಷ್ಠಿರ।
12023002c ಶಾಸ್ತ್ರದೃಷ್ಟಃ ಪರೋ ಧರ್ಮಃ ಸ್ಮೃತೋ ಗಾರ್ಹಸ್ಥ್ಯ ಆಶ್ರಮಃ।।

“ಯುಧಿಷ್ಠಿರ! ಬೀಭತ್ಸುವಿನ ಮಾತು ಸತ್ಯ. ಗೃಹಸ್ಥಾಶ್ರಮವು ಶಾಸ್ತ್ರ-ಸ್ಮೃತಿಗಳಲ್ಲಿ ತೋರಿಸಿಕೊಟ್ಟಿರುವ ಪರಮ ಧರ್ಮವು.

12023003a ಸ್ವಧರ್ಮಂ ಚರ ಧರ್ಮಜ್ಞ ಯಥಾಶಾಸ್ತ್ರಂ ಯಥಾವಿಧಿ।
12023003c ನ ಹಿ ಗಾರ್ಹಸ್ಥ್ಯಮುತ್ಸೃಜ್ಯ ತವಾರಣ್ಯಂ ವಿಧೀಯತೇ।।

ಧರ್ಮಜ್ಞ! ಶಾಸ್ತ್ರಗಳಲ್ಲಿರುವಂತೆ ಯಥಾವಿಧಿಯಾಗಿ ಸ್ವಧರ್ಮದಲ್ಲಿ ನಡೆದುಕೋ. ಗೃಹಸ್ಥಧರ್ಮವನ್ನು ತ್ಯಜಿಸಿ ಅರಣ್ಯವನ್ನು ಸೇರುವುದು ನಿನಗೆ ವಿಹಿತವಾದುದಲ್ಲ.

12023004a ಗೃಹಸ್ಥಂ ಹಿ ಸದಾ ದೇವಾಃ ಪಿತರ ಋಷಯಸ್ತಥಾ।
12023004c ಭೃತ್ಯಾಶ್ಚೈವೋಪಜೀವಂತಿ ತಾನ್ಭಜಸ್ವ ಮಹೀಪತೇ।।

ಮಹೀಪತೇ! ದೇವತೆಗಳು, ಪಿತೃಗಳು, ಋಷಿಗಳು ಮತ್ತು ಸೇವಕರು ಗೃಹಸ್ಥರನ್ನೇ ಆಶ್ರಯಿಸಿ ಉಪಜೀವನ ಮಾಡುತ್ತಾರೆ. ಆದುದರಿಂದ ನೀನು ಅವರ ಭರಣ-ಪೋಷಣೆಯನ್ನು ಮಾಡು.

12023005a ವಯಾಂಸಿ ಪಶವಶ್ಚೈವ ಭೂತಾನಿ ಚ ಮಹೀಪತೇ।
12023005c ಗೃಹಸ್ಥೈರೇವ ಧಾರ್ಯಂತೇ ತಸ್ಮಾಜ್ಜ್ಯೇಷ್ಠಾಶ್ರಮೋ ಗೃಹೀ।।

ಮಹೀಪತೇ! ಪಶು-ಪಕ್ಷಿಗಳು ಮತ್ತು ಇತರ ಪ್ರಾಣಿಗಳು ಗೃಹಸ್ಥರನ್ನೇ ಅವಲಂಬಿಸಿವೆ. ಆದುದರಿಂದ ಗೃಹಸ್ಥಾಶ್ರಮವೇ ಹಿರಿದಾದುದು.

12023006a ಸೋಽಯಂ ಚತುರ್ಣಾಮೇತೇಷಾಮಾಶ್ರಮಾಣಾಂ ದುರಾಚರಃ।
12023006c ತಂ ಚರಾವಿಮನಾಃ ಪಾರ್ಥ ದುಶ್ಚರಂ ದುರ್ಬಲೇಂದ್ರಿಯೈಃ।।

ಪಾರ್ಥ! ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮದ ಆಚರಣೆಯು ಅತ್ಯಂತ ಕಠಿಣವಾದುದು. ದುರ್ಬಲ ಇಂದ್ರಿಯಗಳಿರುವವರಿಗೆ ಕಷ್ಟಕರವಾದ ಗೃಹಸ್ಥಾಶ್ರಮವನ್ನು ವಿಮನಸ್ಕನಾಗಿ ನೀನು ಪಾಲಿಸು!

12023007a ವೇದಜ್ಞಾನಂ ಚ ತೇ ಕೃತ್ಸ್ನಂ ತಪಶ್ಚ ಚರಿತಂ ಮಹತ್।
12023007c ಪಿತೃಪೈತಾಮಹೇ ರಾಜ್ಯೇ ಧುರಮುದ್ವೋಢುಮರ್ಹಸಿ।।

ನಿನ್ನಲ್ಲಿ ಸಂಪೂರ್ಣ ವೇದಜ್ಞಾನವಿದೆ. ಮಹಾ ತಪಸ್ಸನ್ನೂ ತಪಿಸಿದ್ದೀಯೆ. ಪಿತೃ-ಪಿತಾಮಹರ ಈ ರಾಜ್ಯದ ಭಾರವನ್ನು ನೀನು ಹೊರಬಲ್ಲೆ!

12023008a ತಪೋ ಯಜ್ಞಸ್ತಥಾ ವಿದ್ಯಾ ಭೈಕ್ಷಮಿಂದ್ರಿಯನಿಗ್ರಹಃ।
12023008c ಧ್ಯಾನಮೇಕಾಂತಶೀಲತ್ವಂ ತುಷ್ಟಿರ್ದಾನಂ ಚ ಶಕ್ತಿತಃ।।
12023009a ಬ್ರಾಹ್ಮಣಾನಾಂ ಮಹಾರಾಜ ಚೇಷ್ಟಾಃ ಸಂಸಿದ್ಧಿಕಾರಿಕಾಃ।

ಮಹಾರಾಜ! ತಪಸ್ಸು, ಯಜ್ಞ, ವಿದ್ಯೆ, ಭಿಕ್ಷಾಟನೆ, ಇಂದ್ರಿಯನಿಗ್ರಹ, ಧ್ಯಾನ. ಏಕಾಂತಶೀಲತ್ವ, ತೃಪ್ತಿ, ಶಕ್ತಿಯಿದ್ದಷ್ಟು ದಾನ – ಇವು ಬ್ರಾಹ್ಮಣರಿಗೆ ಸಿದ್ಧಿಯನ್ನು ನೀಡುವ ಕ್ರಿಯೆಗಳು.

12023009c ಕ್ಷತ್ರಿಯಾಣಾಂ ಚ ವಕ್ಷ್ಯಾಮಿ ತವಾಪಿ ವಿದಿತಂ ಪುನಃ।।
12023010a ಯಜ್ಞೋ ವಿದ್ಯಾ ಸಮುತ್ಥಾನಮಸಂತೋಷಃ ಶ್ರಿಯಂ ಪ್ರತಿ।
12023010c ದಂಡಧಾರಣಮತ್ಯುಗ್ರಂ ಪ್ರಜಾನಾಂ ಪರಿಪಾಲನಮ್।।
12023011a ವೇದಜ್ಞಾನಂ ತಥಾ ಕೃತ್ಸ್ನಂ ತಪಃ ಸುಚರಿತಂ ತಥಾ।
12023011c ದ್ರವಿಣೋಪಾರ್ಜನಂ ಭೂರಿ ಪಾತ್ರೇಷು ಪ್ರತಿಪಾದನಮ್।।
12023012a ಏತಾನಿ ರಾಜ್ಞಾಂ ಕರ್ಮಾಣಿ ಸುಕೃತಾನಿ ವಿಶಾಂ ಪತೇ।
12023012c ಇಮಂ ಲೋಕಮಮುಂ ಲೋಕಂ ಸಾಧಯಂತೀತಿ ನಃ ಶ್ರುತಮ್।।

ನಿನಗೆ ತಿಳಿದಿದ್ದರೂ ಕ್ಷತ್ರಿಯರು ಏನು ಮಾಡಬೇಕು ಎನ್ನುವುದನ್ನು ಹೇಳುತ್ತೇನೆ. ವಿಶಾಂಪತೇ! ಯಜ್ಞ, ವಿದ್ಯಾಭ್ಯಾಸ, ಶತ್ರುಗಳ ಮೇಲೆ ಆಕ್ರಮಣ ಮಾಡುವುದು, ಸಂಪತ್ತಿನ ಕುರಿತು ಅಸಂತೋಷದಿಂದಿರುವುದು, ದಂಡಧಾರಣ, ಉಗ್ರತೆ, ಪ್ರಜೆಗಳ ಪರಿಪಾಲನೆ, ಸಂಪೂರ್ಣ ವೇದಜ್ಞಾನ, ತಪಸ್ಸು, ಸದಾಚಾರ, ಅಪಾರ ಐಶ್ವರ್ಯವನ್ನು ಗಳಿಸುವುದು, ಸತ್ಪಾತ್ರರಲ್ಲಿ ದಾನಮಾಡುವುದು – ಇವು ರಾಜರು ಮಾಡುವ ಪುಣ್ಯ ಕರ್ಮಗಳು. ಇವುಗಳನ್ನು ಮಾಡುವ ರಾಜರು ಇಹ-ಪರಗಳೆರಡನ್ನೂ ಸಾಧಿಸುತ್ತಾರೆಂದು ಕೇಳಿದ್ದೇವೆ.

12023013a ತೇಷಾಂ ಜ್ಯಾಯಸ್ತು ಕೌಂತೇಯ ದಂಡಧಾರಣಮುಚ್ಯತೇ।
12023013c ಬಲಂ ಹಿ ಕ್ಷತ್ರಿಯೇ ನಿತ್ಯಂ ಬಲೇ ದಂಡಃ ಸಮಾಹಿತಃ।।

ಕೌಂತೇಯ! ಇವುಗಳಲ್ಲಿ ದಂಡಧಾರಣೆಯೇ ಶ್ರೇಷ್ಠವಾದುದೆಂದು ಹೇಳುತ್ತಾರೆ. ಕ್ಷತ್ರಿಯನಿಗೆ ಬಲವೇ ನಿತ್ಯ. ಬಲದಲ್ಲಿಯೇ ದಂಡವು ಸಮಾಹಿತವಾಗಿರುವುದು.

12023014a ಏತಾಶ್ಚೇಷ್ಟಾಃ ಕ್ಷತ್ರಿಯಾಣಾಂ ರಾಜನ್ಸಂಸಿದ್ಧಿಕಾರಿಕಾಃ।
12023014c ಅಪಿ ಗಾಥಾಮಿಮಾಂ ಚಾಪಿ ಬೃಹಸ್ಪತಿರಭಾಷತ।।

ರಾಜನ್! ಈ ಶ್ರೇಷ್ಠ ಕರ್ಮಗಳು ಕ್ಷತ್ರಿಯರಿಗೆ ಸಂಸಿದ್ಧಿಕಾರಕಗಳು. ಇದರ ಕುರಿತು ಬೃಹಸ್ಪತಿಯು ಒಂದು ಗೀತೆಯನ್ನು ಹಾಡಿದ್ದಾನೆ:

12023015a ಭೂಮಿರೇತೌ ನಿಗಿರತಿ ಸರ್ಪೋ ಬಿಲಶಯಾನಿವ।
12023015c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್।।

“ಸರ್ಪವು ಬಿಲದಲ್ಲಿರುವ ಇಲಿಗಳನ್ನು ನುಂಗುವಂತೆ ಭೂಮಿಯು ಶತ್ರುವನ್ನು ವಿರೋಧಿಸದೇ ಇರುವ ರಾಜನನ್ನೂ ದೇಶಪರ್ಯಟನೆಮಾಡದ ಬ್ರಾಹ್ಮಣನನ್ನೂ ನುಂಗಿಹಾಕುತ್ತದೆ!”

12023016a ಸುದ್ಯುಮ್ನಶ್ಚಾಪಿ ರಾಜರ್ಷಿಃ ಶ್ರೂಯತೇ ದಂಡಧಾರಣಾತ್।
12023016c ಪ್ರಾಪ್ತವಾನ್ಪರಮಾಂ ಸಿದ್ಧಿಂ ದಕ್ಷಃ ಪ್ರಾಚೇತಸೋ ಯಥಾ।।

ರಾಜರ್ಷಿ ಸುದ್ಯುಮ್ನನೂ ಕೂಡ ದಂಡಧಾರಣೆಯಿಂದಾಗಿ ಪ್ರಾಚೇತಸ ದಕ್ಷನಂತೆ ಪರಮ ಸಿದ್ಧಿಯನ್ನು ಪಡೆದನೆಂದು ಕೇಳಿದ್ದೇವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.


  1. ಗೀತಾ ಪ್ರೆಸ್ ನಲ್ಲಿ ಈ ಅಧ್ಯಾಯ ಮತ್ತು ಮುಂದಿನ ಅಧ್ಯಾಯಗಳನ್ನು ಸೇರಿಸಿ ಒಂದೇ ಅಧ್ಯಾಯದಲ್ಲಿ ಶಂಖ-ಲಿಖಿತರ ಆಖ್ಯಾನವನ್ನು ಕೊಟ್ಟಿದ್ದಾರೆ. ↩︎