ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 22
ಸಾರ
ಅರ್ಜುನನು ಕ್ಷತ್ರಿಯ ಧರ್ಮವನ್ನು ಪ್ರಶಂಸಿಸುತ್ತಾ ಪುನಃ ಯುಧಿಷ್ಠಿರನಿಗೆ ತಿಳಿಯ ಹೇಳುವುದು (1-15).
12022001 ವೈಶಂಪಾಯನ ಉವಾಚ।
12022001a ತಸ್ಮಿನ್ವಾಕ್ಯಾಂತರೇ ವಾಕ್ಯಂ ಪುನರೇವಾರ್ಜುನೋಽಬ್ರವೀತ್।
12022001c ವಿಷಣ್ಣಮನಸಂ ಜ್ಯೇಷ್ಠಮಿದಂ ಭ್ರಾತರಮೀಶ್ವರಮ್।।
ವೈಶಂಪಾಯನನು ಹೇಳಿದನು: “ಈ ಮಧ್ಯದಲ್ಲಿ ಅರ್ಜುನನು ಖಿನ್ನಮನಸ್ಕನಾಗಿದ ಹಿರಿಯಣ್ಣ ರಾಜನಿಗೆ ಪುನಃ ಈ ಮಾತನ್ನಾಡಿದನು:
12022002a ಕ್ಷತ್ರಧರ್ಮೇಣ ಧರ್ಮಜ್ಞ ಪ್ರಾಪ್ಯ ರಾಜ್ಯಮನುತ್ತಮಮ್।
12022002c ಜಿತ್ವಾ ಚಾರೀನ್ನರಶ್ರೇಷ್ಠ ತಪ್ಯತೇ ಕಿಂ ಭವಾನ್ಭೃಶಮ್।।
“ಧರ್ಮಜ್ಞ! ನರಶ್ರೇಷ್ಠ! ಕ್ಷತ್ರಧರ್ಮದಿಂದ ಈ ಅನುತ್ತಮ ರಾಜ್ಯವನ್ನು ಪಡೆದೂ ಮತ್ತು ಶತ್ರುಗಳನ್ನು ಗೆದ್ದೂ ಕೂಡ ನೀನು ಏಕೆ ಹೀಗೆ ತುಂಬಾ ಪರಿತಪಿಸುತ್ತಿರುವೆ?
12022003a ಕ್ಷತ್ರಿಯಾಣಾಂ ಮಹಾರಾಜ ಸಂಗ್ರಾಮೇ ನಿಧನಂ ಸ್ಮೃತಮ್।
12022003c ವಿಶಿಷ್ಟಂ ಬಹುಭಿರ್ಯಜ್ಞೈಃ ಕ್ಷತ್ರಧರ್ಮಮನುಸ್ಮರ।।
ಮಹಾರಾಜ! ಕ್ಷತ್ರಿಯ ಧರ್ಮವೇನು ಎನ್ನುವುದನ್ನು ನೆನಪಿಸಿಕೋ! ಅನೇಕ ಯಜ್ಞಗಳನ್ನು ಮಾಡುವುದಕ್ಕಿಂತಲೂ ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವೇ ವಿಶಿಷ್ಠವಾದುದು.
12022004a ಬ್ರಾಹ್ಮಣಾನಾಂ ತಪಸ್ತ್ಯಾಗಃ ಪ್ರೇತ್ಯಧರ್ಮವಿಧಿಃ ಸ್ಮೃತಃ।
12022004c ಕ್ಷತ್ರಿಯಾಣಾಂ ಚ ವಿಹಿತಂ ಸಂಗ್ರಾಮೇ ನಿಧನಂ ವಿಭೋ।।
ಬ್ರಾಹ್ಮಣರಿಗೆ ತಪಸ್ಸು ಮತ್ತು ತ್ಯಾಗ ಇವೇ ಮರಣಾನಂತರ ಪುಣ್ಯಲೋಕಗಳನ್ನು ನೀಡುವ ಧರ್ಮವಿಧಿಯೆಂದು ಹೇಳಿದ್ದಾರೆ. ಪ್ರಭೋ! ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವು ವಿಹಿತವಾದುದು.
12022005a ಕ್ಷತ್ರಧರ್ಮೋ ಮಹಾರೌದ್ರಃ ಶಸ್ತ್ರನಿತ್ಯ ಇತಿ ಸ್ಮೃತಃ।
12022005c ವಧಶ್ಚ ಭರತಶ್ರೇಷ್ಠ ಕಾಲೇ ಶಸ್ತ್ರೇಣ ಸಂಯುಗೇ।।
ಭರತಶ್ರೇಷ್ಠ! ನಿತ್ಯವೂ ಶಸ್ತ್ರಧಾರಣೆಮಾಡಬೇಕಾದ, ಯುದ್ಧದಲ್ಲಿ ಸಮಯವೊದಗಿದಾಗ ಶಸ್ತ್ರಗಳಿಂದ ವಧೆಯನ್ನೂ ಮಾಡಬೇಕಾದ ಕ್ಷತ್ರಧರ್ಮವನ್ನು ಮಹಾರೌದ್ರವಾದುದು ಎಂದು ಹೇಳುತ್ತಾರೆ.
12022006a ಬ್ರಾಹ್ಮಣಸ್ಯಾಪಿ ಚೇದ್ರಾಜನ್ ಕ್ಷತ್ರಧರ್ಮೇಣ ತಿಷ್ಠತಃ।
12022006c ಪ್ರಶಸ್ತಂ ಜೀವಿತಂ ಲೋಕೇ ಕ್ಷತ್ರಂ ಹಿ ಬ್ರಹ್ಮಸಂಸ್ಥಿತಮ್।।
ರಾಜನ್! ಬ್ರಾಹ್ಮಣನಿಗೆ ಕೂಡ ಕ್ಷತ್ರಧರ್ಮಾನುಸಾರವಾಗಿ ಜೀವಿಸುವುದು ಪ್ರಶಸ್ತವಾದುದೇ. ಏಕೆಂದರೆ ಲೋಕದಲ್ಲಿ ಬ್ರಾಹ್ಮಣರಿಂದಲೇ ಕ್ಷತ್ರಿಯರು ಜನಿಸಿದ್ದುದು.
12022007a ನ ತ್ಯಾಗೋ ನ ಪುನರ್ಯಾಚ್ಚೋ ನ ತಪೋ ಮನುಜೇಶ್ವರ।
12022007c ಕ್ಷತ್ರಿಯಸ್ಯ ವಿಧೀಯಂತೇ ನ ಪರಸ್ವೋಪಜೀವನಮ್।।
ಮನುಜೇಶ್ವರ! ಕ್ಷತ್ರಿಯನಿಗೆ ತ್ಯಾಗ, ನಂತರ ಯಾಚನೆ ಮತ್ತು ತಪಸ್ಸುಗಳು ಹಾಗು ಇತರರ ಸ್ವತ್ತಿನಿಂದ ಜೀವನ ನಿರ್ವಹಣೆ ಇವು ವಿಹಿತವಾಗಿಲ್ಲ.
12022008a ಸ ಭವಾನ್ಸರ್ವಧರ್ಮಜ್ಞಃ ಸರ್ವಾತ್ಮಾ ಭರತರ್ಷಭ।
12022008c ರಾಜಾ ಮನೀಷೀ ನಿಪುಣೋ ಲೋಕೇ ದೃಷ್ಟಪರಾವರಃ।।
ಭರತರ್ಷಭ! ರಾಜಾ! ಸರ್ವಾತ್ಮನಾಗಿರುವ ನೀನು ಸರ್ವಧರ್ಮಗಳನ್ನೂ ತಿಳಿದಿರುವೆ. ಲೋಕದಲ್ಲಿ ನೀನು ಶ್ರೇಷ್ಠವಾದವುಗಳನ್ನು ಮತ್ತು ಶ್ರೇಷ್ಠವಲ್ಲದವುಗಳನ್ನು ಚೆನ್ನಾಗಿ ತಿಳಿದುಕೊಂಡಿರುವೆ.
12022009a ತ್ಯಕ್ತ್ವಾ ಸಂತಾಪಜಂ ಶೋಕಂ ದಂಶಿತೋ ಭವ ಕರ್ಮಣಿ।
12022009c ಕ್ಷತ್ರಿಯಸ್ಯ ವಿಶೇಷೇಣ ಹೃದಯಂ ವಜ್ರಸಂಹತಮ್।।
ಸಂತಾಪದಿಂದ ಹುಟ್ಟಿರುವ ಶೋಕವನ್ನು ತ್ಯಜಿಸಿ ಮಾಡಬೇಕಾದ ಕರ್ಮಗಳ ಕವಚವನ್ನು ತೊಡು! ಕ್ಷತ್ರಿಯನ ಹೃದಯವು ವಿಶೇಷವಾಗಿ ವಜ್ರದಂತೆ ಕಠಿಣವಾದುದೆಂದು ಹೇಳುತ್ತಾರೆ.
12022010a ಜಿತ್ವಾರೀನ್ ಕ್ಷತ್ರಧರ್ಮೇಣ ಪ್ರಾಪ್ಯ ರಾಜ್ಯಮಕಂಟಕಮ್।
12022010c ವಿಜಿತಾತ್ಮಾ ಮನುಷ್ಯೇಂದ್ರ ಯಜ್ಞದಾನಪರೋ ಭವ।।
ಮನುಷ್ಯೇಂದ್ರ! ಕ್ಷತ್ರಧರ್ಮದಿಂದ ಶತ್ರುಗಳನ್ನು ಗೆದ್ದು, ಕಂಟಕಗಳಿಲ್ಲದ ರಾಜ್ಯವನ್ನು ಪಡೆದು ವಿಜಿತಾತ್ಮನಾಗಿ ಯಜ್ಞದಾನಪರನಾಗಿರು.
12022011a ಇಂದ್ರೋ ವೈ ಬ್ರಹ್ಮಣಃ ಪುತ್ರಃ ಕರ್ಮಣಾ ಕ್ಷತ್ರಿಯೋಽಭವತ್।
12022011c ಜ್ಞಾತೀನಾಂ ಪಾಪವೃತ್ತೀನಾಂ ಜಘಾನ ನವತೀರ್ನವ।।
ಬ್ರಾಹ್ಮಣ ಪುತ್ರನಾಗಿದ್ದ ಇಂದ್ರನು ತನ್ನ ಕರ್ಮಗಳಿಂದ ಕ್ಷತ್ರಿಯನಾದನು. ಪಾಪವೃತ್ತಿಗಳಲ್ಲಿ ತೊಡಗಿದ್ದ ಎಂಟುನೂರಾಹತ್ತು ಜ್ಞಾತಿಬಾಂಧವರನ್ನು ಸಂಹರಿಸಿದನು.
12022012a ತಚ್ಚಾಸ್ಯ ಕರ್ಮ ಪೂಜ್ಯಂ ಹಿ ಪ್ರಶಸ್ಯಂ ಚ ವಿಶಾಂ ಪತೇ।
12022012c ತೇನ ಚೇಂದ್ರತ್ವಮಾಪೇದೇ ದೇವಾನಾಮಿತಿ ನಃ ಶ್ರುತಮ್।।
ವಿಶಾಂಪತೇ! ಅವನ ಆ ಕರ್ಮವನ್ನು ಗೌರವಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ. ಅದರಿಂದಲೇ ಅವನಿಗೆ ದೇವತೆಗಳ ಇಂದ್ರತ್ವವು ದೊರಕಿತೆಂದು ನಾವು ಕೇಳಿದ್ದೇವೆ.
12022013a ಸ ತ್ವಂ ಯಜ್ಞೈರ್ಮಹಾರಾಜ ಯಜಸ್ವ ಬಹುದಕ್ಷಿಣೈಃ।
12022013c ಯಥೈವೇಂದ್ರೋ ಮನುಷ್ಯೇಂದ್ರ ಚಿರಾಯ ವಿಗತಜ್ವರಃ।।
ಮನುಷ್ಯೇಂದ್ರ! ಮಹಾರಾಜ! ನೀನೂ ಕೂಡ ಇಂದ್ರನಂತೆ ಬಹುದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳನ್ನು ಮಾಡಿ ಬಹುಕಾಲ ನಿಶ್ಚಿಂತನಾಗಿರು.
12022014a ಮಾ ತ್ವಮೇವಂಗತೇ ಕಿಂ ಚಿತ್ ಕ್ಷತ್ರಿಯರ್ಷಭ ಶೋಚಿಥಾಃ।
12022014c ಗತಾಸ್ತೇ ಕ್ಷತ್ರಧರ್ಮೇಣ ಶಸ್ತ್ರಪೂತಾಃ ಪರಾಂ ಗತಿಮ್।।
ಕ್ಷತ್ರಿಯರ್ಷಭ! ಹೀಗೆ ಹಿಂದೆಯೂ ನಡೆದುಹೋಗಿದ್ದುದರಿಂದ ನೀನು ಸ್ವಲ್ವವೂ ಶೋಕಿಸಬೇಕಾಗಿಲ್ಲ. ಕ್ಷತ್ರಧರ್ಮಾನುಸಾರವಾಗಿ ಶಸ್ತ್ರಗಳಿಂದ ಪವಿತ್ರರಾದ ಅವರು ಪರಮ ಗತಿಯನ್ನು ಹೊಂದಿದ್ದಾರೆ.
12022015a ಭವಿತವ್ಯಂ ತಥಾ ತಚ್ಚ ಯದ್ವೃತ್ತಂ ಭರತರ್ಷಭ।
12022015c ದಿಷ್ಟಂ ಹಿ ರಾಜಶಾರ್ದೂಲ ನ ಶಕ್ಯಮತಿವರ್ತಿತುಮ್।।
ಭರತರ್ಷಭ! ಈಗ ನಡೆದುಹೋದುದು ಹಾಗೆಯೇ ಆಗಬೇಕಾಗಿತ್ತು. ರಾಜಶಾರ್ದೂಲ! ದೈವದ ನಿಯಮವನ್ನು ಉಲ್ಲಂಘಿಸಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.