020 ದೇವಸ್ಥಾನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 20

ಸಾರ

ಮುನಿವರ ದೇವಸ್ಥಾನನು ರಾಜಾ ಯುಧಿಷ್ಠಿರನಿಗೆ ಯಜ್ಞಾನುಷ್ಠಾನಗಳಿಗೆ ಪ್ರೇರೇಪಿಸಿದುದು (1-14).

12020001 ವೈಶಂಪಾಯನ ಉವಾಚ।
12020001a ತಸ್ಮಿನ್ವಾಕ್ಯಾಂತರೇ ವಕ್ತಾ ದೇವಸ್ಥಾನೋ ಮಹಾತಪಾಃ।
12020001c ಅಭಿನೀತತರಂ ವಾಕ್ಯಮಿತ್ಯುವಾಚ ಯುಧಿಷ್ಠಿರಮ್।।

ವೈಶಂಪಾಯನನು ಹೇಳಿದನು: “ಈ ಮಧ್ಯದಲ್ಲಿ ಮಹಾತಪಸ್ವಿ ದೇವಸ್ಥಾನನು ಯುಧಿಷ್ಠಿರನಿಗೆ ನೀತಿಯುಕ್ತವಾದ ಈ ಮಾತುಗಳನ್ನು ಹೇಳಿದನು:

12020002a ಯದ್ವಚಃ ಫಲ್ಗುನೇನೋಕ್ತಂ ನ ಜ್ಯಾಯೋಽಸ್ತಿ ಧನಾದಿತಿ।
12020002c ಅತ್ರ ತೇ ವರ್ತಯಿಷ್ಯಾಮಿ ತದೇಕಾಗ್ರಮನಾಃ ಶೃಣು।।

“ಧನಕ್ಕಿಂತಲೂ ಹೆಚ್ಚಿನದಾದುದ್ದು ಇಲ್ಲ ಎಂದು ಫಲ್ಗುನನು ಏನು ಹೇಳಿದನೋ ಅದೇ ವಿಷಯದಲ್ಲಿ ನಾನೂ ಕೂಡ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12020003a ಅಜಾತಶತ್ರೋ ಧರ್ಮೇಣ ಕೃತ್ಸ್ನಾ ತೇ ವಸುಧಾ ಜಿತಾ।
12020003c ತಾಂ ಜಿತ್ವಾ ನ ವೃಥಾ ರಾಜಂಸ್ತ್ವಂ ಪರಿತ್ಯಕ್ತುಮರ್ಹಸಿ।।

ಅಜಾತಶತ್ರೋ! ರಾಜನ್! ಧರ್ಮದಿಂದಲೇ ನೀನು ಈ ಸಂಪೂರ್ಣ ವಸುಧೆಯನ್ನು ಗೆದ್ದಿರುವೆ. ಹಾಗೆ ಗೆದ್ದಿರುವ ರಾಜ್ಯವನ್ನು ವೃಥಾ ಪರಿತ್ಯಜಿಸುವುದು ಸರಿಯಲ್ಲ.

12020004a ಚತುಷ್ಪದೀ ಹಿ ನಿಃಶ್ರೇಣೀ ಕರ್ಮಣ್ಯೇಷಾ ಪ್ರತಿಷ್ಠಿತಾ।
12020004c ತಾಂ ಕ್ರಮೇಣ ಮಹಾಬಾಹೋ ಯಥಾವಜ್ಜಯ ಪಾರ್ಥಿವ।।

ಬ್ರಹ್ಮ ಸಾಕ್ಷಾತ್ಕಾರಕ್ಕೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಆಶ್ರಮಧರ್ಮಗಳಿವೆ. ಇವುಗಳಲ್ಲಿ ಶ್ರೇಣಿಯೆಂಬುದಿಲ್ಲ. ಇವೆಲ್ಲವೂ ಕರ್ಮದಲ್ಲಿಯೇ ಪ್ರತಿಷ್ಠಿತವಾಗಿವೆ. ಮಹಾಬಾಹೋ! ಪಾರ್ಥಿವ! ಇವುಗಳನ್ನು ಕ್ರಮೇಣವಾಗಿ ಒಂದಾದ ನಂತರ ಮತ್ತೊಂದನ್ನು ಜಯಿಸುತ್ತಾ ಬಾ!

12020005a ತಸ್ಮಾತ್ಪಾರ್ಥ ಮಹಾಯಜ್ಞೈರ್ಯಜಸ್ವ ಬಹುದಕ್ಷಿಣೈಃ।
12020005c ಸ್ವಾಧ್ಯಾಯಯಜ್ಞಾ ಋಷಯೋ ಜ್ಞಾನಯಜ್ಞಾಸ್ತಥಾಪರೇ।।

ಪಾರ್ಥ! ಆದುದರಿಂದ ಬಹುದಕ್ಷಿಣೆಗಳಿಂದ ಯುಕ್ತವಾದ ಮಹಾಯಜ್ಞಗಳನ್ನು ಯಾಜಿಸು. ಸ್ವಾಧ್ಯಾಯ ಯಜ್ಞದಲ್ಲಿ ನಿರತರಾಗಿರುವವರು ಋಷಿಗಳು. ಜ್ಞಾನಯಜ್ಞದಲ್ಲಿ ನಿರತರಾಗಿರುವವರು ಸಂನ್ಯಾಸಿಗಳು.

12020006a ಕರ್ಮನಿಷ್ಠಾಂಸ್ತು ಬುಧ್ಯೇಥಾಸ್ತಪೋನಿಷ್ಠಾಂಶ್ಚ ಭಾರತ।
12020006c ವೈಖಾನಸಾನಾಂ ರಾಜೇಂದ್ರ ವಚನಂ ಶ್ರೂಯತೇ ಯಥಾ।।

ಭಾರತ! ರಾಜೇಂದ್ರ! ಕರ್ಮನಿಷ್ಠರು ಮತ್ತು ತಪೋನಿಷ್ಠರು ಇವರ ಕುರಿತು ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ವೈಖಾನಸರು ಈ ರೀತಿ ಹೇಳಿದ್ದಾರೆ:

12020007a ಈಹತೇ ಧನಹೇತೋರ್ಯಸ್ತಸ್ಯಾನೀಹಾ ಗರೀಯಸೀ।
12020007c ಭೂಯಾನ್ದೋಷಃ ಪ್ರವರ್ಧೇತ ಯಸ್ತಂ ಧನಮಪಾಶ್ರಯೇತ್।।

ಧನವನ್ನು ಕೂಡಿಡಬೇಕೆಂದೇ ಧನವನ್ನು ಬಯಸುವುದಕ್ಕಿಂತ ಅದನ್ನು ಬಯಸದೇ ಇರುವುದೇ ಶ್ರೇಷ್ಠವಾದುದು. ಧನವನ್ನೇ ಆಶ್ರಯಿಸಿರುವವನಲ್ಲಿ ಅನೇಕ ದೋಷಗಳು ಪುನಃ ಪುನಃ ಬೆಳೆಯುತ್ತಿರುತ್ತವೆ.

12020008a ಕೃಚ್ಚ್ರಾಚ್ಚ ದ್ರವ್ಯಸಂಹಾರಂ ಕುರ್ವಂತಿ ಧನಕಾರಣಾತ್।
12020008c ಧನೇನ ತೃಷಿತೋಽಬುದ್ಧ್ಯಾ ಭ್ರೂಣಹತ್ಯಾಂ ನ ಬುಧ್ಯತೇ।।

ಧನದ ಕಾರಣದಿಂದ ದ್ರವ್ಯವನ್ನು ಹೇಗೆ ವ್ಯಯಮಾಡಬೇಕೆಂದೂ ಕಷ್ಟಪಡುತ್ತಾರೆ. ಧನವನ್ನು ಹೇಗೆ ವ್ಯಯಮಾಡಬೇಕೆಂದು ತಿಳಿಯದೇ ಭ್ರೂಣಹತ್ಯಾದೋಷಕ್ಕೂ ಗುರಿಯಾಗುತ್ತಾರೆ.

12020009a ಅನರ್ಹತೇ ಯದ್ದದಾತಿ ನ ದದಾತಿ ಯದರ್ಹತೇ।
12020009c ಅನರ್ಹಾರ್ಹಾಪರಿಜ್ಞಾನಾದ್ದಾನಧರ್ಮೋಽಪಿ ದುಷ್ಕರಃ।।

ಅನರ್ಹರಿಗೆ ದಾನನೀಡುವವನು ಮತ್ತು ಅರ್ಹನಾದವನಿಗೆ ದಾನನೀಡದಿರುವವನು ಇವೆರಡೂ ಪಾಪಕರ್ಮಗಳೇ. ಅನರ್ಹರ್ಯಾರು ಮತ್ತು ಅರ್ಹರ್ಯಾರು ಎಂದು ಪರಿಜ್ಞಾನವಿಲ್ಲದಿರುವುದರಿಂದ ದಾನಧರ್ಮಗಳೂ ದುಷ್ಕರವೇ ಸರಿ!

12020010a ಯಜ್ಞಾಯ ಸೃಷ್ಟಾನಿ ಧನಾನಿ ಧಾತ್ರಾ ಯಷ್ಟಾದಿಷ್ಟಃ ಪುರುಷೋ ರಕ್ಷಿತಾ ಚ।
12020010c ತಸ್ಮಾತ್ಸರ್ವಂ ಯಜ್ಞ ಏವೋಪಯೋಜ್ಯಂ ಧನಂ ತತೋಽನಂತರ ಏವ ಕಾಮಃ।।

ಧಾತ್ರನು ಧನವನ್ನು ಯಜ್ಞಕ್ಕಾಗಿಯೇ ಸೃಷ್ಟಿಸಿದ್ದಾನೆ. ಸೃಷ್ಟಿಯ ಮುಖ್ಯ ಉದ್ದೇಶವಾದ ಯಜ್ಞಕ್ಕಾಗಿಯೇ ಮನುಷ್ಯನ ಸೃಷ್ಟಿಯೂ ರಕ್ಷಣೆಯೂ ನಡೆಯುತ್ತಿದೆ. ಆದುದರಿಂದ ಸರ್ವ ಧನವನ್ನೂ ಯಜ್ಞಕ್ಕಾಗಿಯೇ ಉಪಯೋಗಿಸಬೇಕು. ಧನವನ್ನು ಈ ರೀತಿ ಬಳಸಿದ ನಂತರವೇ ಮನುಷ್ಯನು ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಾನೆ.

12020011a ಯಜ್ಞೈರಿಂದ್ರೋ ವಿವಿಧೈರನ್ನವದ್ಭಿರ್ ದೇವಾನ್ಸರ್ವಾನಭ್ಯಯಾನ್ಮಹೌಜಾಃ।
12020011c ತೇನೇಂದ್ರತ್ವಂ ಪ್ರಾಪ್ಯ ವಿಭ್ರಾಜತೇಽಸೌ ತಸ್ಮಾದ್ಯಜ್ಞೇ ಸರ್ವಮೇವೋಪಯೋಜ್ಯಮ್।।

ಇಂದ್ರನು ವಿವಿಧ ಅನ್ನಗಳಿಂದ ಕೂಡಿದ ಯಜ್ಞಗಳನ್ನು ಮಾಡಿಯೇ ಎಲ್ಲ ದೇವತೆಗಳಿಗಿಂತಲೂ ಹೆಚ್ಚಿನ ಓಜಸ್ಸುಳ್ಳವನಾದನು. ಅದರಿಂದಲೇ ಅವನು ಇಂದ್ರತ್ವವನ್ನು ಪಡೆದುಕೊಂಡು ರಾರಾಜಿಸುತ್ತಿದ್ದಾನೆ. ಆದುದರಿಂದ ಯಜ್ಞಕ್ಕಾಗಿಯೇ ಸರ್ವ ಸಂಪತ್ತನ್ನೂ ವಿನಿಯೋಜಿಸಬೇಕು.

12020012a ಮಹಾದೇವಃ ಸರ್ವಮೇಧೇ ಮಹಾತ್ಮಾ ಹುತ್ವಾತ್ಮಾನಂ ದೇವದೇವೋ ವಿಭೂತಃ।
12020012c ವಿಶ್ವಾಽಲ್ಲೋಕಾನ್ವ್ಯಾಪ್ಯ ವಿಷ್ಟಭ್ಯ ಕೀರ್ತ್ಯಾ ವಿರೋಚತೇ ದ್ಯುತಿಮಾನ್ಕೃತ್ತಿವಾಸಾಃ।।

ಮಹಾತ್ಮ ಮಹಾದೇವನೂ ಕೂಡ ಸರ್ವಮೇಧದಲ್ಲಿ ತನ್ನನ್ನು ತಾನೇ ಯಜ್ಞೇಶ್ವರನಿಗೆ ಸಮರ್ಪಿಸಿಕೊಂಡು ದೇವತೆಗಳಿಗೂ ದೇವನಾದನು. ಇದರಿಂದಲೇ ಆ ಕೃತ್ತಿವಾಸನು ಉತ್ತಮ ಕೀರ್ತಿಯಿಂದ ವಿಶ್ವಗಳನ್ನೂ ಲೋಕಗಳನ್ನೂ ವ್ಯಾಪಿಸಿ ಕಾಂತಿಮಂತನಾಗಿ ವಿರಾಜಿಸುತ್ತಾನೆ.

12020013a ಆವಿಕ್ಷಿತಃ ಪಾರ್ಥಿವೋ ವೈ ಮರುತ್ತಃ ಸ್ವೃದ್ಧ್ಯಾ ಮರ್ತ್ಯೋ ಯೋಽಜಯದ್ದೇವರಾಜಮ್।
12020013c ಯಜ್ಞೇ ಯಸ್ಯ ಶ್ರೀಃ ಸ್ವಯಂ ಸಂನಿವಿಷ್ಟಾ ಯಸ್ಮಿನ್ಭಾಂಡಂ ಕಾಂಚನಂ ಸರ್ವಮಾಸೀತ್।।

ಅವಿಕ್ಷಿತನ ಮಗ ಪಾರ್ಥಿವ ಮರುತ್ತನು ಯಜ್ಞದಿಂದಲೇ ಮರ್ತ್ಯನಾಗಿದ್ದರೂ ದೇವರಾಜನನ್ನು ಜಯಿಸಿದ್ದನು. ಅವನ ಯಜ್ಞದಲ್ಲಿ ಸ್ವಯಂ ಲಕ್ಷ್ಮಿಯೇ ಸನ್ನಿಹಿತಳಾಗಿದ್ದಳು. ಅವನ ಯಜ್ಞದಲ್ಲಿ ಎಲ್ಲ ಪಾತ್ರೆಗಳೂ ಸ್ವರ್ಣಮಯವಾಗಿದ್ದವು.

12020014a ಹರಿಶ್ಚಂದ್ರಃ ಪಾರ್ಥಿವೇಂದ್ರಃ ಶ್ರುತಸ್ತೇ ಯಜ್ಞೈರಿಷ್ಟ್ವಾ ಪುಣ್ಯಕೃದ್ವೀತಶೋಕಃ।
12020014c ಋದ್ಧ್ಯಾ ಶಕ್ರಂ ಯೋಽಜಯನ್ಮಾನುಷಃ ಸಂಸ್ ತಸ್ಮಾದ್ಯಜ್ಞೇ ಸರ್ವಮೇವೋಪಯೋಜ್ಯಮ್।।

ಪಾರ್ಥಿವೇಂದ್ರ ಹರಿಶ್ಚಂದ್ರನ ಕುರಿತು ನೀನು ಕೇಳಿರುವೆ! ಅವನು ಮನುಷ್ಯನೇ ಆಗಿದ್ದರೂ ಶಕ್ರನನ್ನೂ ಪರಾಜಯಗೊಳಿಸಿದ್ದನು. ಅನೇಕ ಯಜ್ಞ-ಇಷ್ಟಿಗಳಿಂದ ಶೋಕರಹಿತನಾಗಿ ಪುಣ್ಯಗಳನ್ನು ಗಳಿಸಿದನು. ಆದುದರಿಂದ ಎಲ್ಲ ಐಶ್ವರ್ಯವನ್ನೂ ಯಜ್ಞಕ್ಕಾಗಿಯೇ ನಿಯೋಗಿಸಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದೇವಸ್ಥಾನವಾಕ್ಯೇ ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದೇವಸ್ಥಾನವಾಕ್ಯ ಎನ್ನುವ ಇಪ್ಪತ್ತನೇ ಅಧ್ಯಾಯವು.