ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 19
ಸಾರ
ಯುಧಿಷ್ಠಿರನು ತನ್ನ ಮತವನ್ನು ಯತಾರ್ಥವಾಗಿ ಪ್ರತಿಪಾದಿಸಿದುದು (1-26).
12019001 ಯುಧಿಷ್ಠಿರ ಉವಾಚ।
12019001a ವೇದಾಹಂ ತಾತ ಶಾಸ್ತ್ರಾಣಿ ಅಪರಾಣಿ ಪರಾಣಿ ಚ।
12019001c ಉಭಯಂ ವೇದವಚನಂ ಕುರು ಕರ್ಮ ತ್ಯಜೇತಿ ಚ।।
ಯುಧಿಷ್ಠಿರನು ಹೇಳಿದನು: “ಅಯ್ಯಾ! ನಾನು ಅಪರ ಮತ್ತು ಪರ ಶಾಸ್ತ್ರಗಳೆರಡನ್ನೂ ತಿಳಿದುಕೊಂಡಿದ್ದೇನೆ. ಕರ್ಮವನ್ನು ಮಾಡು ಮತ್ತು ತ್ಯಜಿಸು ಇವೆರಡೂ ವೇದವಚನಗಳೇ!
12019002a ಆಕುಲಾನಿ ಚ ಶಾಸ್ತ್ರಾಣಿ ಹೇತುಭಿಶ್ಚಿತ್ರಿತಾನಿ ಚ।
12019002c ನಿಶ್ಚಯಶ್ಚೈವ ಯನ್ಮಾತ್ರೋ ವೇದಾಹಂ ತಂ ಯಥಾವಿಧಿ।।
ವಿರೋಧಾಭಾಸವಾದಂತೆ ಚಿತ್ರಿತವಾಗಿರುವ ಈ ಶಾಸ್ತ್ರವಾಕ್ಯಗಳನ್ನು ಅವುಗಳ ಕಾರಣ-ನಿಶ್ಚಯಗಳೊಂದಿಗೆ ಯಥಾವಿಧಿಯಾಗಿ ನಾನು ತಿಳಿದುಕೊಂಡಿರುವೆನು.
12019003a ತ್ವಂ ತು ಕೇವಲಮಸ್ತ್ರಜ್ಞೋ ವೀರವ್ರತಮನುಷ್ಠಿತಃ।
12019003c ಶಾಸ್ತ್ರಾರ್ಥಂ ತತ್ತ್ವತೋ ಗಂತುಂ ನ ಸಮರ್ಥಃ ಕಥಂ ಚನ।।
ನೀನಾದರೋ ಕೇವಲ ಅಸ್ತ್ರಗಳನ್ನು ತಿಳಿದವನು. ವೀರವ್ರತಾನುಷ್ಠಾನದಲ್ಲಿರುವವನು. ಶಾಸ್ತ್ರಾರ್ಥವನ್ನು ತತ್ತ್ವತಃ ತಿಳಿದುಕೊಳ್ಳಲು ನೀನು ಎಂದಿಗೂ ಸಮರ್ಥನಲ್ಲ!
12019004a ಶಾಸ್ತ್ರಾರ್ಥಸೂಕ್ಷ್ಮದರ್ಶೀ ಯೋ ಧರ್ಮನಿಶ್ಚಯಕೋವಿದಃ।
12019004c ತೇನಾಪ್ಯೇವಂ ನ ವಾಚ್ಯೋಽಹಂ ಯದಿ ಧರ್ಮಂ ಪ್ರಪಶ್ಯಸಿ।।
ನೀನು ಶಾಸ್ತ್ರಗಳ ಸೂಕ್ಷ್ಮಾರ್ಥಗಳನ್ನು ಕಂಡುಕೊಂಡಿದ್ದರೆ ಮತ್ತು ಧರ್ಮನಿಶ್ಚಯಗಳ ಕೋವಿದನಾಗಿದ್ದರೆ, ಧರ್ಮವನ್ನು ಕಂಡುಕೊಂಡಿದ್ದರೆ ನೀನೂ ಕೂಡ ನನಗೆ ಈ ಮಾತುಗಳನ್ನಾಡುತ್ತಿರಲಿಲ್ಲ!
12019005a ಭ್ರಾತೃಸೌಹೃದಮಾಸ್ಥಾಯ ಯದುಕ್ತಂ ವಚನಂ ತ್ವಯಾ।
12019005c ನ್ಯಾಯ್ಯಂ ಯುಕ್ತಂ ಚ ಕೌಂತೇಯ ಪ್ರೀತೋಽಹಂ ತೇನ ತೇಽರ್ಜುನ।।
ಅರ್ಜುನ! ಕೌಂತೇಯ! ಅಣ್ಣನ ಸುಹೃದಯವನ್ನು ತಾಳಿ ನೀನು ಹೇಳಿದ ನ್ಯಾಯವೂ ಯುಕ್ತವೂ ಆದ ಮಾತಿನಿಂದ ಸಂತೋಷಗೊಂಡಿದ್ದೇನೆ.
12019006a ಯುದ್ಧಧರ್ಮೇಷು ಸರ್ವೇಷು ಕ್ರಿಯಾಣಾಂ ನೈಪುಣೇಷು ಚ।
12019006c ನ ತ್ವಯಾ ಸದೃಶಃ ಕಶ್ಚಿತ್ತ್ರಿಷು ಲೋಕೇಷು ವಿದ್ಯತೇ।।
ಯುದ್ಧಧರ್ಮದ ಸರ್ವ ಕ್ರಿಯೆಗಳಲ್ಲಿ ಮತ್ತು ನೈಪುಣ್ಯತೆಯಲ್ಲಿ ನಿನ್ನ ಸಮನಾಗಿರುವವರು ಮೂರು ಲೋಕಗಳಲ್ಲೇ ಯಾರೂ ಇಲ್ಲವೆಂದು ತಿಳಿಯುತ್ತದೆ.
12019007a ಧರ್ಮಸೂಕ್ಷ್ಮಂ ತು ಯದ್ವಾಕ್ಯಂ ತತ್ರ ದುಷ್ಪ್ರತರಂ ತ್ವಯಾ।
12019007c ಧನಂಜಯ ನ ಮೇ ಬುದ್ಧಿಮಭಿಶಂಕಿತುಮರ್ಹಸಿ।।
ಧನಂಜಯ! ಆದರೆ ನೀನು ಈಗ ಹೇಳಿರುವ ಧರ್ಮಸೂಕ್ಷ್ಮದ ಮಾತುಗಳು ನನ್ನ ಬುದ್ಧಿಗೆ ತಿಳಿಯಲಿಲ್ಲ ಎಂದು ಶಂಕಿಸಬಾರದು.
12019008a ಯುದ್ಧಶಾಸ್ತ್ರವಿದೇವ ತ್ವಂ ನ ವೃದ್ಧಾಃ ಸೇವಿತಾಸ್ತ್ವಯಾ।
12019008c ಸಮಾಸವಿಸ್ತರವಿದಾಂ ನ ತೇಷಾಂ ವೇತ್ಸಿ ನಿಶ್ಚಯಮ್।।
ನೀನು ಯುದ್ಧಶಾಸ್ತ್ರವನ್ನು ಮಾತ್ರವೇ ತಿಳಿದಿರುವೆ. ನೀನೆಂದೂ ವೃದ್ಧರ ಸೇವೆಯನ್ನು ಮಾಡಿದವನಲ್ಲ. ಆದುದರಿಂದ ಸಂಕ್ಷಿಪ್ತವಾಗಿಯೂ ವಿಸ್ತಾರವಾಗಿಯೂ ಇರುವ ಧರ್ಮ ನಿಶ್ಚಯವು ನಿನಗೆ ತಿಳಿಯಲಾರದು!
12019009a ತಪಸ್ತ್ಯಾಗೋ ವಿಧಿರಿತಿ ನಿಶ್ಚಯಸ್ತಾತ ಧೀಮತಾಮ್।
12019009c ಪರಂ ಪರಂ ಜ್ಯಾಯ ಏಷಾಂ ಸೈಷಾ ನೈಃಶ್ರೇಯಸೀ ಗತಿಃ।।
ಅಯ್ಯಾ! ತಪಸ್ಸು-ತ್ಯಾಗ ಮತ್ತು ಬ್ರಹ್ಮಜ್ಞಾನ ಇವು ಶ್ರೇಯಸ್ಕರವೆಂದು ತಿಳಿದವರ ನಿಶ್ಚಯ. ಈ ಮೂರರಲ್ಲಿ ಮೊದಲನೆಯದಕ್ಕಿಂತಲೂ ಎರಡನೆಯದು ಶ್ರೇಷ್ಠವು ಮತ್ತು ಎರಡನೆಯದಕ್ಕಿಂತಲೂ ಮೂರನೆಯದು ಶ್ರೇಷ್ಠವು.
12019010a ನ ತ್ವೇತನ್ಮನ್ಯಸೇ ಪಾರ್ಥ ನ ಜ್ಯಾಯೋಽಸ್ತಿ ಧನಾದಿತಿ।
12019010c ಅತ್ರ ತೇ ವರ್ತಯಿಷ್ಯಾಮಿ ಯಥಾ ನೈತತ್ಪ್ರಧಾನತಃ।।
ಪಾರ್ಥ! ಧನಕ್ಕಿಂತಲೂ ಮಿಗಿಲಾದುದು ಇಲ್ಲವೆಂದು ನಿನ್ನ ಅಭಿಪ್ರಾಯವಾಗಿದೆ. ಆದರೆ, ಅದು ಪ್ರಧಾನವಾದುದಲ್ಲವೆನ್ನುವುದನ್ನು ನಾನು ನಿನಗೆ ಹೇಳುತ್ತಿದ್ದೇನೆ.
12019011a ತಪಃಸ್ವಾಧ್ಯಾಯಶೀಲಾ ಹಿ ದೃಶ್ಯಂತೇ ಧಾರ್ಮಿಕಾ ಜನಾಃ।
12019011c ಋಷಯಸ್ತಪಸಾ ಯುಕ್ತಾ ಯೇಷಾಂ ಲೋಕಾಃ ಸನಾತನಾಃ।।
ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರಾದ ಧಾರ್ಮಿಕ ಜನರು ಕಾಣಸಿಗುತ್ತಾರೆ. ತಪಸ್ಸಿನಿಂದ ಯುಕ್ತರಾದ ಋಷಿಗಳಿಗೆ ಸನಾತನ ಲೋಕಗಳು ದೊರೆಯುತ್ತವೆ.
12019012a ಅಜಾತಶ್ಮಶ್ರವೋ1 ಧೀರಾಸ್ತಥಾನ್ಯೇ ವನವಾಸಿನಃ।
12019012c ಅನಂತಾ ಅಧನಾ ಏವ ಸ್ವಾಧ್ಯಾಯೇನ ದಿವಂ ಗತಾಃ।।
ಶತ್ರುಗಳೇ ಇಲ್ಲದ ಅನ್ಯ ಧೀರ ವನವಾಸಿಗಳು ಬಹಳ ಕಾಲ ಧನವಿಲ್ಲದೇ ಸ್ವಾಧ್ಯಾಯದಲ್ಲಿ ನಿರತರಾಗಿದ್ದುಕೊಂಡು ಸ್ವರ್ಗಕ್ಕೆ ಹೋಗುತ್ತಾರೆ.
12019013a ಉತ್ತರೇಣ ತು ಪಂಥಾನಮಾರ್ಯಾ ವಿಷಯನಿಗ್ರಹಾತ್।
12019013c ಅಬುದ್ಧಿಜಂ ತಮಸ್ತ್ಯಕ್ತ್ವಾ ಲೋಕಾಂಸ್ತ್ಯಾಗವತಾಂ ಗತಾಃ।।
ಅನೇಕ ಆರ್ಯರು ವಿಷಯನಿಗ್ರಹದ ಮೂಲಕ ಮೌಢ್ಯದ ಕತ್ತಲೆಯನ್ನು ತ್ಯಜಿಸಿ ಉತ್ತರ2 ಮಾರ್ಗವಾಗಿ ಉತ್ತಮ ಲೋಕಗಳಿಗೆ ಹೋಗಿದ್ದಾರೆ.
12019014a ದಕ್ಷಿಣೇನ ತು ಪಂಥಾನಂ ಯಂ ಭಾಸ್ವಂತಂ ಪ್ರಪಶ್ಯಸಿ।
12019014c ಏತೇ ಕ್ರಿಯಾವತಾಂ ಲೋಕಾ ಯೇ ಶ್ಮಶಾನಾನಿ ಭೇಜಿರೇ।।
ದಕ್ಷಿಣ3 ಮಾರ್ಗದಲ್ಲಿ ತೋರುವ ಪ್ರಕಾಶಮಾನ ಲೋಕಗಳು ಸದಾ ಶ್ಮಶಾನ ಯಾತ್ರೆಗಳನ್ನು ಮಾಡುತ್ತಿರುವ ಕ್ರಿಯಾವಂತರಿಗಿರುವವು.
12019015a ಅನಿರ್ದೇಶ್ಯಾ ಗತಿಃ ಸಾ ತು ಯಾಂ ಪ್ರಪಶ್ಯಂತಿ ಮೋಕ್ಷಿಣಃ।
12019015c ತಸ್ಮಾತ್ತ್ಯಾಗಃ4 ಪ್ರಧಾನೇಷ್ಟಃ ಸ ತು ದುಃಖಃ ಪ್ರವೇದಿತುಮ್।।
ಮೋಕ್ಷಿಣಿಗಳು ಯಾವ ಮಾರ್ಗದಲ್ಲಿ ಹೋದರೆನ್ನುವುದನ್ನು ನಿರ್ಧಿಷ್ಠವಾಗಿ ಹೇಳುವುದು ಕಷ್ಟ. ಆದುದರಿಂದ ತ್ಯಾಗವು ಪ್ರಧಾನವಾದುದು. ಆದರೆ ಅದನ್ನು ತಿಳಿದುಕೊಳ್ಳುವುದು ಕಷ್ಟ.
12019016a ಅನುಸೃತ್ಯ ತು ಶಾಸ್ತ್ರಾಣಿ ಕವಯಃ ಸಮವಸ್ಥಿತಾಃ।
12019016c ಅಪೀಹ ಸ್ಯಾದಪೀಹ ಸ್ಯಾತ್ಸಾರಾಸಾರದಿದೃಕ್ಷಯಾ।।
ವಿದ್ವಾಂಸರು ಒಂದೆಡೆ ಸೇರಿ ಶಾಸ್ತ್ರಗಳ ಸಾರಾಸಾರಗಳನ್ನು ಪರಿಶೀಲಿಸಿ ಇವುಗಳಲ್ಲಿ ಯಾವುದರಿಂದ ಬ್ರಹ್ಮಸಾಕ್ಷಾತ್ಕಾರವು ಸಾಧ್ಯ ಎನ್ನುವುದನ್ನು ಅವಲೋಕಿಸಿದ್ದಾರೆ.
12019017a ವೇದವಾದಾನತಿಕ್ರಮ್ಯ ಶಾಸ್ತ್ರಾಣ್ಯಾರಣ್ಯಕಾನಿ ಚ।
12019017c ವಿಪಾಟ್ಯ ಕದಲೀಸ್ಕಂಧಂ ಸಾರಂ ದದೃಶಿರೇ ನ ತೇ।।
ಕಡಿದುರುಳಿಸಿದ ಬಾಳೆಯ ದಿಂಡಿನಲ್ಲಿ ಸಾರವನ್ನು ಕಾಣದಂತೆ ವೇದವಾದಗಳನ್ನೂ ದಾಟಿ ಮುಂದೆ ಹೋಗಿ ಶಾಸ್ತ್ರ-ಅರಣ್ಯಕಗಳನ್ನು ಪರಿಶೀಲಿಸಿದರೂ ಅವುಗಳಲ್ಲಿ ಅವರು ಸಾರವನ್ನು ಕಾಣಲಿಲ್ಲ.
12019018a ಅಥೈಕಾಂತವ್ಯುದಾಸೇನ ಶರೀರೇ ಪಂಚಭೌತಿಕೇ।
12019018c ಇಚ್ಚಾದ್ವೇಷಸಮಾಯುಕ್ತಮಾತ್ಮಾನಂ ಪ್ರಾಹುರಿಂಗಿತೈಃ।।
ಕೆಲವರು ಪಂಚಭೌತಿಕವಾದ ಈ ಶರೀರದಲ್ಲಿರುವ ಆತ್ಮನು ಸ್ವಭಾವತಃ ಇಚ್ಛೆ-ದ್ವೇಷಗಳಿಂದ ಕೂಡಿದವನು ಎಂದು ಹೇಳುತ್ತಾರೆ.
12019019a ಅಗ್ರಾಹ್ಯಶ್ಚಕ್ಷುಷಾ ಸೋಽಪಿ ಅನಿರ್ದೇಶ್ಯಂ ಚ ತದ್ ಗಿರಾ।
12019019c ಕರ್ಮಹೇತುಪುರಸ್ಕಾರಂ ಭೂತೇಷು ಪರಿವರ್ತತೇ।।
ಆದರೆ ಈ ಆತ್ಮವು ಕಣ್ಣಿಗೆ ಕಾಣಿಸುವುದಿಲ್ಲ. ಮಾತಿನ ಮೂಲಕ ವರ್ಣಿಸಲಾಗುವುದಿಲ್ಲ. ಅದರ ಎದುರಿರುವ ಕರ್ಮಕಾರಣಗಳು ಜೀವಿಗಳಲ್ಲಿ ಪರಿವರ್ತನೆ ಹೊಂದುತ್ತಿರುತ್ತವೆಯೇ ಹೊರತು ಆತ್ಮವು ಪರಿವರ್ತಿತವಾಗದಕ್ಕುದಲ್ಲ.
12019020a ಕಲ್ಯಾಣಗೋಚರಂ ಕೃತ್ವಾ ಮನಸ್ತೃಷ್ಣಾಂ ನಿಗೃಹ್ಯ ಚ।
12019020c ಕರ್ಮಸಂತತಿಮುತ್ಸೃಜ್ಯ ಸ್ಯಾನ್ನಿರಾಲಂಬನಃ ಸುಖೀ।।
ಮನಸ್ಸನ್ನು ಕಲ್ಯಾಣಮಾರ್ಗದಲ್ಲಿ ತೊಡಗಿಸಿ, ಮನಸ್ಸಿನ ಬಾಯಾರಿಕೆಯನ್ನು ನಿಗ್ರಹಿಸಿಕೊಂಡು ಕರ್ಮಗಳ ಪರಂಪರೆಯನ್ನು ತ್ಯಜಿಸಿ ನಿರಾಲಂಬನಾಗಿರುವವನೇ ಪರಮ ಸುಖಿಯು.
12019021a ಅಸ್ಮಿನ್ನೇವಂ ಸೂಕ್ಷ್ಮಗಮ್ಯೇ ಮಾರ್ಗೇ ಸದ್ಭಿರ್ನಿಷೇವಿತೇ।
12019021c ಕಥಮರ್ಥಮನರ್ಥಾಢ್ಯಮರ್ಜುನ ತ್ವಂ ಪ್ರಶಂಸಸಿ।।
ಅರ್ಜುನ! ಸಾಧುಗಳು ಬಳಸುವ ಈ ಸೂಕ್ಷ್ಮಗಮ್ಯ ಮಾರ್ಗವಿರುವಾಗ ಅನರ್ಥವಾಗಿರುವ ಅರ್ಥವನ್ನೇಕೆ ನೀನು ಪ್ರಶಂಸಿಸುತ್ತಿರುವೆ?
12019022a ಪೂರ್ವಶಾಸ್ತ್ರವಿದೋ ಹ್ಯೇವಂ ಜನಾಃ ಪಶ್ಯಂತಿ ಭಾರತ।
12019022c ಕ್ರಿಯಾಸು ನಿರತಾ ನಿತ್ಯಂ ದಾನೇ ಯಜ್ಞೇ ಚ ಕರ್ಮಣಿ।।
ಭಾರತ! ನಿತ್ಯವೂ ಯಜ್ಞ-ದಾನ ಕರ್ಮಗಳಲ್ಲಿ ನಿರತರಾಗಿದ್ದ ಹಿಂದಿನ ಶಾಸ್ತ್ರವಿದ್ವಾಂಸ ಜನರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವನ್ನು ತಾಳಿದ್ದರು.
12019023a ಭವಂತಿ ಸುದುರಾವರ್ತಾ ಹೇತುಮಂತೋಽಪಿ ಪಂಡಿತಾಃ।
12019023c ದೃಢಪೂರ್ವಶ್ರುತಾ ಮೂಢಾ ನೈತದಸ್ತೀತಿ ವಾದಿನಃ।।
ಆದರೆ ಕಾರಣಗಳನ್ನು ತಿಳಿದುಕೊಂಡಿರುವ ಪಂಡಿತರೂ ಕೂಡ ತಮ್ಮ ಹಿಂದಿನ ದೃಢಸಂಸ್ಕಾರದಿಂದ ಪ್ರಭಾವಿತರಾಗಿ ದುರಾವರ್ತ ಮೂಢರಾಗಿ ಇದು ಹಾಗಲ್ಲ ಎಂದು ವಾದಿಸುತ್ತಾರೆ.
12019024a ಅಮೃತಸ್ಯಾವಮಂತಾರೋ ವಕ್ತಾರೋ ಜನಸಂಸದಿ।
12019024c ಚರಂತಿ ವಸುಧಾಂ ಕೃತ್ಸ್ನಾಂ ವಾವದೂಕಾ ಬಹುಶ್ರುತಾಃ।।
ಆತ್ಮನ ಅಮೃತತ್ವವನ್ನು ಒಪ್ಪಿಕೊಳ್ಳದೇ ಬಹುವಿದ್ವಾಂಸರೂ ಜನಸಂಸದಿಗಳಲ್ಲಿ ಅನೃತವಾದಿಗಳಾಗಿ ಇಡೀ ಭೂಮಿಯನ್ನು ಸಂಚರಿಸುತ್ತಿರುತ್ತಾರೆ.
12019025a ಯಾನ್ವಯಂ ನಾಭಿಜಾನೀಮಃ ಕಸ್ತಾನ್ ಜ್ಞಾತುಮಿಹಾರ್ಹತಿ।
12019025c ಏವಂ ಪ್ರಾಜ್ಞಾನ್ಸತಶ್ಚಾಪಿ ಮಹತಃ ಶಾಸ್ತ್ರವಿತ್ತಮಾನ್।।
ಅಂಥವರನ್ನು ನಾವೇ ತಿಳಿಯಲಾರೆವು ಎಂದಾದಮೇಲೆ ಸಾಧಾರಣ ಮನುಷ್ಯರು ತಾನೇ ಹೇಗೆ ತಿಳಿದುಕೊಳ್ಳುತ್ತಾರೆ? ಮಹಾ ಪ್ರಾಜ್ಞರಾದ ಸಾಧು ಶಾಸ್ತ್ರಪಂಡಿತರೂ ಇದ್ದಾರೆ.
12019026a ತಪಸಾ ಮಹದಾಪ್ನೋತಿ ಬುದ್ಧ್ಯಾ ವೈ ವಿಂದತೇ ಮಹತ್।
12019026c ತ್ಯಾಗೇನ ಸುಖಮಾಪ್ನೋತಿ ಸದಾ ಕೌಂತೇಯ ಧರ್ಮವಿತ್।।
ಕೌಂತೇಯ! ಬುದ್ಧಿಯಿಂದ ಮಹತ್ತನ್ನು ತಿಳಿದುಕೊಂಡವನು ಮಹಾ ತಪಸ್ಸಿನ ಫಲವನ್ನು ಪಡೆಯುತ್ತಾನೆ. ತತ್ತ್ವವಿದನು ಸದಾ ತ್ಯಾಗದಿಂದ ಸುಖವನ್ನು ಹೊಂದುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.