017 ಯುಧಿಷ್ಠಿರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 17

ಸಾರ

ಯುಧಿಷ್ಠಿರನು ಭೀಮಸೇನನ ಮಾತನ್ನು ವಿರೋಧಿಸುತ್ತಾ ಮುನಿವೃತ್ತಿಯ ಮತ್ತು ಜ್ಞಾನೀ ಮಹಾತ್ಮರನ್ನು ಪ್ರಶಂಸಿಸುವುದು (1-23).

12017001 ಯುಧಿಷ್ಠಿರ ಉವಾಚ।
12017001a ಅಸಂತೋಷಃ ಪ್ರಮಾದಶ್ಚ ಮದೋ ರಾಗೋಽಪ್ರಶಾಂತತಾ।
12017001c ಬಲಂ ಮೋಹೋಽಭಿಮಾನಶ್ಚ ಉದ್ವೇಗಶ್ಚಾಪಿ ಸರ್ವಶಃ।।
12017002a ಏಭಿಃ ಪಾಪ್ಮಭಿರಾವಿಷ್ಟೋ ರಾಜ್ಯಂ ತ್ವಮಭಿಕಾಂಕ್ಷಸಿ।
12017002c ನಿರಾಮಿಷೋ ವಿನಿರ್ಮುಕ್ತಃ ಪ್ರಶಾಂತಃ ಸುಸುಖೀ ಭವ।।

ಯುಧಿಷ್ಠಿರನು ಹೇಳಿದನು: “ಅಸಂತೋಷ, ಪ್ರಮಾದ, ಮದ, ರಾಗ, ಅಪ್ರಶಾಂತತೆ, ಬಲ, ಮೋಹ, ಅಭಿಮಾನ, ಉದ್ವೇಗ ಈ ಎಲ್ಲ ಪಾಪಗುಣಗಳಿಂದ ನೀನು ಆವಿಷ್ಟನಾಗಿರುವೆ. ಆದುದರಿಂದಲೇ ನೀನು ರಾಜ್ಯದ ಕುರಿತು ಆಸೆಪಡುತ್ತಿದ್ದೀಯೆ! ಆಸೆಗಳನ್ನು ತೊರೆದು ಸಂಸಾರಬಂಧನದಿಂದ1 ವಿಮುಕ್ತನಾಗಿ ಪ್ರಶಾಂತನಾಗಿ ಸುಖದಿಂದ ಬಾಳು!

12017003a ಯ ಇಮಾಮಖಿಲಾಂ ಭೂಮಿಂ ಶಿಷ್ಯಾದೇಕೋ ಮಹೀಪತಿಃ।
12017003c ತಸ್ಯಾಪ್ಯುದರಮೇವೈಕಂ ಕಿಮಿದಂ ತ್ವಂ ಪ್ರಶಂಸಸಿ।।

ಇಡೀ ಭೂಮಂಡಲವನ್ನೆ ಆಳುವ ಮಹೀಪತಿಗೂ ಇರುವುದು ಒಂದೇ ಹೊಟ್ಟೆ. ಹೀಗಿದ್ದರೂ ನೀನು ಏಕೆ ಚಕ್ರಾಧಿಪತ್ಯವನ್ನು ಪ್ರಶಂಸಿಸುತ್ತಿರುವೆ?

12017004a ನಾಹ್ನಾ ಪೂರಯಿತುಂ ಶಕ್ಯಾ ನ ಮಾಸೇನ ನರರ್ಷಭ।
12017004c ಅಪೂರ್ಯಾಂ ಪೂರಯನ್ನಿಚ್ಚಾಮಾಯುಷಾಪಿ ನ ಶಕ್ನುಯಾತ್।।

ನರರ್ಷಭ! ಮನುಷ್ಯನ ಆಸೆಗಳನ್ನು ಒಂದು ದಿನದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಪೂರೈಸಲು ಸಾಧ್ಯವಿಲ್ಲ. ಅಪೂರ್ಣವಾಗಿಯೇ ಇರುವ ಈ ಇಚ್ಛೆಗಳನ್ನು ಪೂರೈಸಲು ಇಡೀ ಜೀವಮಾನವೇ ಸಾಕಾಗುವುದಿಲ್ಲ.

12017005a ಯಥೇದ್ಧಃ ಪ್ರಜ್ವಲತ್ಯಗ್ನಿರಸಮಿದ್ಧಃ ಪ್ರಶಾಮ್ಯತಿ।
12017005c ಅಲ್ಪಾಹಾರತಯಾ ತ್ವಗ್ನಿಂ ಶಮಯೌದರ್ಯಮುತ್ಥಿತಮ್।।

ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸಮಿದ್ಧವನ್ನು ಹಾಕದೇ ಹೇಗೆ ಪ್ರಶಾಂತಗೊಳಿಸಬಹುದೋ ಹಾಗೆ ಅಲ್ಪಾಹಾರದಿಂದ ಹೊಟ್ಟೆಯಲ್ಲಿ ಉರಿಯುವ ಹಸಿವೆಯೆಂಬ ಅಗ್ನಿಯನ್ನು ಶಮನಗೊಳಿಸಬಹುದು.

12017005e ಜಯೋದರಂ ಪೃಥಿವ್ಯಾ ತೇ ಶ್ರೇಯೋ ನಿರ್ಜಿತಯಾ ಜಿತಮ್।।
12017006a ಮಾನುಷಾನ್ಕಾಮಭೋಗಾಂಸ್ತ್ವಮೈಶ್ವರ್ಯಂ ಚ ಪ್ರಶಂಸಸಿ।
12017006c ಅಭೋಗಿನೋಽಬಲಾಶ್ಚೈವ ಯಾಂತಿ ಸ್ಥಾನಮನುತ್ತಮಮ್।।

ಹೊಟ್ಟೆಯನ್ನು ಗೆಲ್ಲುವುದು ಭೂಮಿಯನ್ನು ಗೆಲ್ಲುವುದಕ್ಕಿಂತಲೂ ಶ್ರೇಯಸ್ಕರವಾದುದು. ಮನುಷ್ಯಲೋಕಕ್ಕೆ ಸಂಬಂಧಿಸಿದ ಭೋಗೈಶ್ವರ್ಯಗಳನ್ನು ನೀನು ಪ್ರಶಂಸಿಸುತ್ತಿರುವೆ! ಆದರೆ ಭೋಗಿಸದಿರುವವರು ಮತ್ತು ಅಬಲರೂ ಕೂಡ ಉತ್ತಮ ಸ್ಥಾನಗಳಿಗೆ ಹೋಗುತ್ತಾರೆ!

12017007a ಯೋಗಕ್ಷೇಮೌ ಚ ರಾಷ್ಟ್ರಸ್ಯ ಧರ್ಮಾಧರ್ಮೌ ತ್ವಯಿ ಸ್ಥಿತೌ।
12017007c ಮುಚ್ಯಸ್ವ ಮಹತೋ ಭಾರಾತ್ತ್ಯಾಗಮೇವಾಭಿಸಂಶ್ರಯ।।

ರಾಷ್ಟ್ರದ ಯೋಗ-ಕ್ಷೇಮಗಳೂ, ಧರ್ಮಾಧರ್ಮಗಳೂ ನಿನ್ನಲ್ಲಿಯೇ ನೆಲಸಿವೆ. ತ್ಯಾಗವನ್ನವಲಂಬಿಸಿ ಈ ಮಹಾಭಾರದ ಹೊರೆಯಿಂದ ಮುಕ್ತಿಹೊಂದು!

12017008a ಏಕೋದರಕೃತೇ ವ್ಯಾಘ್ರಃ ಕರೋತಿ ವಿಘಸಂ ಬಹು।
12017008c ತಮನ್ಯೇಽಪ್ಯುಪಜೀವಂತಿ ಮಂದವೇಗಂಚರಾ ಮೃಗಾಃ।।

ಒಂದೇ ಹೊಟ್ಟೆಯುಳ್ಳದ್ದಾದರೂ ಹುಲಿಯು ಬಹಳಷ್ಟು ಎಂಜಲನ್ನು ಚೆಲ್ಲುತ್ತದೆ. ಅನ್ಯ ಮೃಗಗಳು ನಿಧಾನವಾಗಿ ಅದನ್ನೇ ಅನುಸರಿಸಿ ಹೋಗಿ, ಅದು ಚೆಲ್ಲಿರುವ ಆಹಾರವನ್ನು ತಿಂದು ತಮ್ಮ ಜೀವನವನ್ನು ನಡೆಸಿಕೊಳ್ಳುತ್ತವೆ.

12017009a ವಿಷಯಾನ್ಪ್ರತಿಸಂಹೃತ್ಯ ಸಂನ್ಯಾಸಂ ಕುರುತೇ ಯತಿಃ।
12017009c ನ ಚ ತುಷ್ಯಂತಿ ರಾಜಾನಃ ಪಶ್ಯ ಬುದ್ಧ್ಯಂತರಂ ಯಥಾ।।

ವಿಷಯಗಳಿಂದ ತನ್ನ ಮನಸ್ಸನ್ನು ಸೆಳೆದುಕೊಂಡು ಯತಿಯು ಸಂನ್ಯಾಸದಲ್ಲಿರುತ್ತಾನೆ. ಆದರೆ ರಾಜನು ವಿಷಯಗಳಿಂದ ತೃಪ್ತನೇ ಆಗುವುದಿಲ್ಲ. ಇವರೀರ್ವರ ಬುದ್ಧಿಗಳಲ್ಲಿರುವ ಅಂತರವನ್ನಾದರೂ ನೋಡು!

12017010a ಪತ್ರಾಹಾರೈರಶ್ಮಕುಟ್ಟೈರ್ದಂತೋಲೂಖಲಿಕೈಸ್ತಥಾ।
12017010c ಅಬ್ಭಕ್ಷೈರ್ವಾಯುಭಕ್ಷೈಶ್ಚ ತೈರಯಂ ನರಕೋ ಜಿತಃ।।

ಎಲೆಗಳನ್ನು ತಿನ್ನುವವರು, ಕಲ್ಲಮೇಲಿಟ್ಟು ಕುಟ್ಟಿದ ಧಾನ್ಯವನ್ನು ತಿನ್ನುವವರು, ಹಲ್ಲಿನಿಂದ ಕಚ್ಚಿ ತಿನ್ನುವುದನ್ನು ಮಾತ್ರ ತಿನ್ನುವವರು, ನೀರನ್ನೇ ಕುಡಿದು ಜೀವಿಸಿರುವವರು, ಮತ್ತು ಗಾಳಿಯನ್ನೇ ಸೇವಿಸಿ ಜೀವಿಸಿರುವವರು ಇವರು ನರಕವನ್ನು ಗೆದ್ದವರು.

12017011a ಯಶ್ಚೇಮಾಂ ವಸುಧಾಂ ಕೃತ್ಸ್ನಾಂ ಪ್ರಶಾಸೇದಖಿಲಾಂ ನೃಪಃ।
12017011c ತುಲ್ಯಾಶ್ಮಕಾಂಚನೋ ಯಶ್ಚ ಸ ಕೃತಾರ್ಥೋ ನ ಪಾರ್ಥಿವಃ।।

ಅಖಿಲ ಭೂಮಂಡಲವನ್ನೂ ಆಳುವ ನೃಪ ಮತ್ತು ಕಲ್ಲು-ಕಾಂಚನಗಳನ್ನು ಒಂದಾಗಿಯೇ ಕಾಣುವ ಯತಿ ಇವರಿಬ್ಬರಲ್ಲಿ ರಾಜನು ಎಂದೂ ಕೃತಾರ್ಥನೆನಿಸಿಕೊಳ್ಳಲಾರ!

12017012a ಸಂಕಲ್ಪೇಷು ನಿರಾರಂಭೋ ನಿರಾಶೋ ನಿರ್ಮಮೋ ಭವ।
12017012c ವಿಶೋಕಂ ಸ್ಥಾನಮಾತಿಷ್ಠ ಇಹ ಚಾಮುತ್ರ ಚಾವ್ಯಯಮ್।।

ಸಂಕಲ್ಪಗಳನ್ನು ಆರಂಭಿಸಬೇಡ. ಆಸೆ ಮತ್ತು ಮಮತೆಗಳಿಲ್ಲದವನಾಗು. ಶೋಕವಿಲ್ಲದ ಅವ್ಯಯವಾದ ಪರಲೋಕದ ಸ್ಥಾನವನ್ನು ಹೊಂದು.

12017013a ನಿರಾಮಿಷಾ ನ ಶೋಚಂತಿ ಶೋಚಸಿ ತ್ವಂ ಕಿಮಾಮಿಷಮ್।
12017013c ಪರಿತ್ಯಜ್ಯಾಮಿಷಂ ಸರ್ವಂ ಮೃಷಾವಾದಾತ್ಪ್ರಮೋಕ್ಷ್ಯಸೇ।।

ಆಸೆಗಳಿಲ್ಲದವರು ಶೋಕಿಸುವುದಿಲ್ಲ. ನೀನೇಕೆ ಆಸೆಗಳಿಗಾಗಿ ಶೋಕಿಸುತ್ತಿರುವೆ? ಆಸೆಗಳೆಲ್ಲವನ್ನೂ ತ್ಯಜಿಸಿದರೆ ಮಿಥ್ಯಾವಾದದಿಂದ ಮುಕ್ತನಾಗುವೆ.

12017014a ಪಂಥಾನೌ ಪಿತೃಯಾನಶ್ಚ ದೇವಯಾನಶ್ಚ ವಿಶ್ರುತೌ।
12017014c ಈಜಾನಾಃ ಪಿತೃಯಾನೇನ ದೇವಯಾನೇನ ಮೋಕ್ಷಿಣಃ।।

ಪಿತೃಯಾನ ಮಾತು ದೇವಯಾನಗಳೆಂಬ ಎರಡು ದಾರಿಗಳಿವೆ ಎಂದು ಕೇಳಿದ್ದೇವೆ. ಯಜ್ಞಗಳನ್ನು ಮಾಡಿದವರು ಪಿತೃಯಾನದಲ್ಲಿಯೂ, ಮೋಕ್ಷವನ್ನು ಪಡೆದವರು ದೇವಯಾನದಲ್ಲಿಯೂ ಹೋಗುತ್ತಾರೆ.

12017015a ತಪಸಾ ಬ್ರಹ್ಮಚರ್ಯೇಣ ಸ್ವಾಧ್ಯಾಯೇನ ಚ ಪಾವಿತಾಃ।
12017015c ವಿಮುಚ್ಯ ದೇಹಾನ್ವೈ ಭಾಂತಿ ಮೃತ್ಯೋರವಿಷಯಂ ಗತಾಃ।।

ತಪಸ್ಸು, ಬ್ರಹ್ಮಚರ್ಯ ಮತ್ತು ಸ್ವಾಧ್ಯಾಯಗಳಿಂದ ಪವಿತ್ರರಾದವರು ದೇಹಗಳನ್ನು ತೊರೆದು ಮೃತ್ಯುವಿಗೆ ತುತ್ತಾಗದೇ ಹೊಳೆಯುತ್ತಾ ಬ್ರಹ್ಮಲೋಕವನ್ನು ಸೇರುತ್ತಾರೆ.

12017016a ಆಮಿಷಂ ಬಂಧನಂ ಲೋಕೇ ಕರ್ಮೇಹೋಕ್ತಂ ತಥಾಮಿಷಮ್।
12017016c ತಾಭ್ಯಾಂ ವಿಮುಕ್ತಃ ಪಾಶಾಭ್ಯಾಂ ಪದಮಾಪ್ನೋತಿ ತತ್ಪರಮ್।।

ಲೋಕದಲ್ಲಿ ಆಸೆಯು ಒಂದು ಬಂಧನ. ಫಲಸಂಬಂಧಿತ ಕರ್ಮಗಳೂ ಆಸೆಗಳೇ. ಈ ಎರಡರ ಪಾಶಗಳಿಂದ ವಿಮುಕ್ತನಾದವನು ಶ್ರೇಷ್ಠ ಪರಮಪದವನ್ನು ಪಡೆಯುತ್ತಾನೆ.

12017017a ಅಪಿ ಗಾಥಾಮಿಮಾಂ ಗೀತಾಂ ಜನಕೇನ ವದಂತ್ಯುತ।
12017017c ನಿರ್ದ್ವಂದ್ವೇನ ವಿಮುಕ್ತೇನ ಮೋಕ್ಷಂ ಸಮನುಪಶ್ಯತಾ।।

ದ್ವಂದ್ವಗಳಿಂದ ಮುಕ್ತನಾಗಿ, ಮೋಕ್ಷವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಜನಕನು ಇದರ ಕುರಿತು ಹೇಳಿದ ಈ ಶ್ಲೋಕಗಳನ್ನು ಉದಾಹರಿಸುತ್ತಾರೆ.

12017018a ಅನಂತಂ ಬತ ಮೇ ವಿತ್ತಂ ಯಸ್ಯ ಮೇ ನಾಸ್ತಿ ಕಿಂ ಚನ।
12017018c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ।।

“ನನ್ನಲ್ಲಿರುವ ಸಂಪತ್ತು ಅನಂತವಾದುದು ಎಂದು ಹೇಳುತ್ತಾರೆ. ಆದರೆ ನನ್ನಲ್ಲಿ ಏನೂ ಇಲ್ಲ. ಮಿಥಿಲೆಯೇ ಹತ್ತಿ ಉರಿದುಹೋದರೂ ಯಾವುದೂ ನನ್ನನ್ನು ಸುಡುವುದಿಲ್ಲ!

12017019a ಪ್ರಜ್ಞಾಪ್ರಾಸಾದಮಾರುಹ್ಯ ನಶೋಚ್ಯಾನ್ಶೋಚತೋ ಜನಾನ್।
12017019c ಜಗತೀಸ್ಥಾನಿವಾದ್ರಿಸ್ಥೋ ಮಂದಬುದ್ಧೀನವೇಕ್ಷತೇ।।

ಪರ್ವತದ ಮೇಲೆ ನಿಂತು ಕೆಳಗಿನ ಜಗತ್ತನ್ನು ನೋಡುವಂತೆ ಪ್ರಜ್ಞೆಯೆಂಬ ಪ್ರಾಸಾದವನ್ನೇರಿ ಶೋಕರಹಿತನಾದ ಜ್ಞಾನಿಯು ಶೋಕಿಸುತ್ತಿರುವ ಮಂದಬುದ್ಧಿಯ ಜನರನ್ನು ನೋಡುತ್ತಿರುತ್ತಾನೆ.

12017020a ದೃಶ್ಯಂ ಪಶ್ಯತಿ ಯಃ ಪಶ್ಯನ್ಸ ಚಕ್ಷುಷ್ಮಾನ್ಸ ಬುದ್ಧಿಮಾನ್।
12017020c ಅಜ್ಞಾತಾನಾಂ ಚ ವಿಜ್ಞಾನಾತ್ಸಂಬೋಧಾದ್ಬುದ್ಧಿರುಚ್ಯತೇ।।

ನೋಡಿ ಅದನ್ನು ಅರ್ಥಮಾಡಿಕೊಂಡವನೇ ಕಣ್ಣುಗಳುಳ್ಳವನು ಮತ್ತು ಬುದ್ಧಿವಂತನು. ತಿಳಿಯದೇ ಇರುವುದನ್ನು ಅನುಭವ ಪೂರ್ವಕವಾಗಿ ತಿಳಿಸುವುದೇ ಬುದ್ಧಿ ಎಂದೆನಿಸಿಕೊಳ್ಳುತ್ತದೆ.

12017021a ಯಸ್ತು ವಾಚಂ ವಿಜಾನಾತಿ ಬಹುಮಾನಮಿಯಾತ್ಸ ವೈ।
12017021c ಬ್ರಹ್ಮಭಾವಪ್ರಸೂತಾನಾಂ ವೈದ್ಯಾನಾಂ ಭಾವಿತಾತ್ಮನಾಮ್।।

ಯಾರು ಬ್ರಹ್ಮಭಾವವನ್ನು ಹೊಂದಿರುವ, ವೈದ್ಯರ ಮತ್ತು ಭಾವಿತಾತ್ಮರ ಮಾತುಗಳನ್ನು ತಿಳಿದುಕೊಳ್ಳುತ್ತಾರೋ ಅವರು ಹೆಚ್ಚು ಗೌರವಕ್ಕೆ ಪಾತ್ರರು.

12017022a ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ।
12017022c ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ।।

ಯಾವಾಗ ಇರುವವುಗಳ ಪ್ರತ್ಯೇಕತೆಗಳು ಒಂದರಲ್ಲಿಯೇ ನೆಲೆಗೊಂಡಿವೆಯೆನ್ನುವುದನ್ನು ಕಾಣುತ್ತಾನೋ ಆಗಲೇ ವಿಸ್ತಾರವಾದ ಬ್ರಹ್ಮದ ಅನುಭವವುಂಟಾಗುತ್ತದೆ.

12017023a ತೇ ಜನಾಸ್ತಾಂ ಗತಿಂ ಯಾಂತಿ ನಾವಿದ್ವಾಂಸೋಽಲ್ಪಚೇತಸಃ।
12017023c ನಾಬುದ್ಧಯೋ ನಾತಪಸಃ ಸರ್ವಂ ಬುದ್ಧೌ ಪ್ರತಿಷ್ಠಿತಮ್।।

ವಿದ್ವಾಂಸನಲ್ಲದವನು, ಸಣ್ಣಬುದ್ಧಿಯುಳ್ಳವನು, ತಿಳಿಯದವನು, ತಪಸ್ಸು ಮಾಡದವನು ಆ ಗತಿಯನ್ನು ಹೊಂದಲಾರ. ಎಲ್ಲವೂ ಬುದ್ಧಿಯಲ್ಲಿಯೇ ಪ್ರತಿಷ್ಠಿತವಾಗಿವೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಸಪ್ತದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಹದಿನೇಳನೇ ಅಧ್ಯಾಯವು.


  1. ಆಮಿಷಂ ಬಂಧನಂ ಲೋಕೇ ಕರ್ಮೇಹೋಕ್ತಂ ತಥಾಮಿಷಮ್। ತಾಭ್ಯಾಂ ವಿಮುಕ್ತಃ ಪಾಪಾಭ್ಯಾಂ ಪದಮಾಪ್ನೋತಿ ತತ್ಪರಮ್।। (ಗೀತಾ ಪ್ರೆಸ್). ↩︎