013 ಸಹದೇವವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 13

ಸಾರ

ಸಹದೇವನು ಯುಧಿಷ್ಠಿರನಿಗೆ ಮಮತೆ ಮತ್ತು ಆಸಕ್ತಿರಹಿತನಾಗಿ ರಾಜ್ಯಾಭಾರಮಾಡಲು ಸಲಹೆಯನ್ನು ನೀಡುವುದು (1-13).

12013001 ಸಹದೇವ ಉವಾಚ।
12013001a ನ ಬಾಹ್ಯಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ಭಾರತ।
12013001c ಶಾರೀರಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ವಾ ನ ವಾ।।

ಸಹದೇವನು ಹೇಳಿದನು: “ಭಾರತ! ಬಾಹ್ಯದ್ರವ್ಯಗಳನ್ನು ತ್ಯಜಿಸುವುದರಿಂದ ಸಿದ್ಧಿಯಾಗುವುದಿಲ್ಲ. ಶಾರೀರಿಕ ದ್ರವ್ಯಗಳಾದ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಸಿದ್ಧಿಯುಂಟಾಗಬಹುದು ಅಥವಾ ಆಗದೆಯೂ ಇರಬಹುದು.

12013002a ಬಾಹ್ಯದ್ರವ್ಯವಿಮುಕ್ತಸ್ಯ ಶಾರೀರೇಷು ಚ ಗೃಧ್ಯತಃ।
12013002c ಯೋ ಧರ್ಮೋ ಯತ್ಸುಖಂ ವಾ ಸ್ಯಾದ್ದ್ವಿಷತಾಂ ತತ್ತಥಾಸ್ತು ನಃ।।

ಬಾಹ್ಯದ್ರವ್ಯಗಳಿಂದ ವಿಹೀನನಾಗಿ ಶಾರೀರಿಕ ದ್ರವ್ಯಗಳಲ್ಲಿ ಆಸಕ್ತಿಯಿರುವವನ ಧರ್ಮವು ಯಾವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಅದು ನಮ್ಮ ಶತ್ರುಗಳ ಧರ್ಮ-ಸುಖಗಳಾಗಲಿ.

12013003a ಶಾರೀರಂ ದ್ರವ್ಯಮುತ್ಸೃಜ್ಯ ಪೃಥಿವೀಮನುಶಾಸತಃ।
12013003c ಯೋ ಧರ್ಮೋ ಯತ್ಸುಖಂ ವಾ ಸ್ಯಾತ್ಸುಹೃದಾಂ ತತ್ತಥಾಸ್ತು ನಃ।।

ಶಾರೀರಿಕ ದ್ರವ್ಯಗಳನ್ನು ತ್ಯಜಿಸಿ ಪೃಥ್ವಿಯನ್ನು ಆಳುವವನ ಧರ್ಮವು ಯಾವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಆ ಧರ್ಮ-ಸುಖಗಳು ನಮ್ಮ ಆತ್ಮೀಯರದ್ದಾಗಲಿ.

12013004a ದ್ವ್ಯಕ್ಷರಸ್ತು ಭವೇನ್ಮೃತ್ಯುಸ್ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್।
12013004c ಮಮೇತಿ ಚ ಭವೇನ್ಮೃತ್ಯುರ್ನ ಮಮೇತಿ ಚ ಶಾಶ್ವತಮ್।।

“ಮಮ” ಎನ್ನುವ ಎರಡಕ್ಷರಗಳನ್ನು ಅನುಸಂಧಾನ ಮಾಡುವುದರಿಂದ ಮೃತ್ಯುವುಂಟಾಗುತ್ತದೆ. “ನ ಮಮ” ಎಂಬ ಮೂರಕ್ಷರಗಳನ್ನು ಅನುಸಂಧಾನಮಾಡುವುದರಿಂದ ಶಾಶ್ವತ ಬ್ರಹ್ಮಲೋಕವು ಪ್ರಾಪ್ತವಾಗುತ್ತದೆ.

12013005a ಬ್ರಹ್ಮಮೃತ್ಯೂ ಚ ತೌ ರಾಜನ್ನಾತ್ಮನ್ಯೇವ ಸಮಾಶ್ರಿತೌ।
12013005c ಅದೃಶ್ಯಮಾನೌ ಭೂತಾನಿ ಯೋಧಯೇತಾಮಸಂಶಯಮ್।।

ರಾಜನ್! ಈ ಬ್ರಹ್ಮ-ಮೃತ್ಯುಗಳು ಭೂತಗಳ ಆತ್ಮದಲ್ಲಿಯೇ ಅದೃಶ್ಯರಾಗಿ ಇದ್ದುಕೊಂಡು ಪರಸ್ಪರರ ವಿರುದ್ಧವಾಗಿ ಹೋರಾಡುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

12013006a ಅವಿನಾಶೋಽಸ್ಯ ಸತ್ತ್ವಸ್ಯ ನಿಯತೋ ಯದಿ ಭಾರತ।
12013006c ಭಿತ್ತ್ವಾ ಶರೀರಂ ಭೂತಾನಾಂ ನ ಹಿಂಸಾ ಪ್ರತಿಪತ್ಸ್ಯತೇ।।

ಭಾರತ! ಈ ಸತ್ತ್ವವು ಅವಿನಾಶೀ ಎಂದು ನಿಯಮವಿರುವುದರಿಂದ ಜೀವಿಗಳ ಶರೀರವನ್ನು ಕತ್ತರಿಸಿದರೂ ಆ ಸತ್ತ್ವಕ್ಕೆ ಹಿಂಸೆಯಾಗುವುದಿಲ್ಲ ಎಂದಲ್ಲವೇ?

12013007a ಅಥಾಪಿ ಚ ಸಹೋತ್ಪತ್ತಿಃ ಸತ್ತ್ವಸ್ಯ ಪ್ರಲಯಸ್ತಥಾ।
12013007c ನಷ್ಟೇ ಶರೀರೇ ನಷ್ಟಂ ಸ್ಯಾದ್ವೃಥಾ ಚ ಸ್ಯಾತ್ಕ್ರಿಯಾಪಥಃ।।

ಆದರೆ ಶರೀರದೊಂದಿಗೆ ಸತ್ತ್ವವು ಹುಟ್ಟುತ್ತದೆ ಮತ್ತು ಅದರೊಂದಿಗೆ ವಿನಾಶವೂ ಆಗುತ್ತದೆ ಎಂದು ತಿಳಿದುಕೊಂಡರೆ ನಾವು ಮಾಡುವ ಕ್ರಿಯೆಗಳೆಲ್ಲವೂ ವ್ಯರ್ಥವೇ ಎಂದಾಯಿತಲ್ಲವೇ?

12013008a ತಸ್ಮಾದೇಕಾಂತಮುತ್ಸೃಜ್ಯ ಪೂರ್ವೈಃ ಪೂರ್ವತರೈಶ್ಚ ಯಃ।
12013008c ಪಂಥಾ ನಿಷೇವಿತಃ ಸದ್ಭಿಃ ಸ ನಿಷೇವ್ಯೋ ವಿಜಾನತಾ।।

ಆದುದರಿಂದ ತಿಳಿದವನು ಏಕಾಂತವನ್ನು ತ್ಯಜಿಸಿ ನಮ್ಮ ಪೂರ್ವಜರು ಮತ್ತು ಅವರ ಪೂರ್ವಜರು ಹಾಗೂ ಸತ್ಪುರುಷರು ಅನುಸರಿಸುವ ಮಾರ್ಗವನ್ನೇ ಅನುಸರಿಸಬೇಕು.

12013009a 1ಲಬ್ಧ್ವಾಪಿ ಪೃಥಿವೀಂ ಕೃತ್ಸ್ನಾಂ ಸಹಸ್ಥಾವರಜಂಗಮಾಮ್। 12013009c ನ ಭುಂಕ್ತೇ ಯೋ ನೃಪಃ ಸಮ್ಯಗ್ನಿಷ್ಫಲಂ ತಸ್ಯ ಜೀವಿತಮ್।।

ಸ್ಥಾವರ-ಜಂಗಮಗಳೊಡನೆ ಇಡೀ ಪೃಥ್ವಿಯನ್ನು ಪಡೆದರೂ ಯಾವ ನೃಪನು ಅದನ್ನು ಭೋಗಿಸುವುದಿಲ್ಲವೋ ಅಂಥವನ ಜೀವನವು ಸಂಪೂರ್ಣವಾಗಿ ನಿಷ್ಫಲವೇ ಸರಿ.

12013010a ಅಥ ವಾ ವಸತೋ ರಾಜನ್ವನೇ ವನ್ಯೇನ ಜೀವತಃ।
12013010c ದ್ರವ್ಯೇಷು ಯಸ್ಯ ಮಮತಾ ಮೃತ್ಯೋರಾಸ್ಯೇ ಸ ವರ್ತತೇ।।

ರಾಜನ್! ವನದಲ್ಲಿ ವಾಸವಾಗಿರಲಿ ಅಥವಾ ವನ್ಯಪದಾರ್ಥಗಳಿಂದ ಜೀವನ ನಡೆಸುತ್ತಿರಲಿ – ಯಾರ ಮಮತೆಯು ದ್ರವ್ಯಗಳ ಮೇಲಿರುವುದೋ ಅವನು ಮೃತ್ಯುವಶನಾದಂತೆಯೇ ಸರಿ.

12013011a ಬಾಹ್ಯಾಭ್ಯಂತರಭೂತಾನಾಂ ಸ್ವಭಾವಂ ಪಶ್ಯ ಭಾರತ।
12013011c ಯೇ ತು ಪಶ್ಯಂತಿ ತದ್ಭಾವಂ ಮುಚ್ಯಂತೇ ಮಹತೋ ಭಯಾತ್।।

ಭಾರತ! ಜೀವಿಗಳ ಹೊರಗಿನ ಮತ್ತು ಒಳಗಿನ ಸ್ವಭಾವವನ್ನು ನೋಡು. ಅವುಗಳ ಭಾವಗಳನ್ನು ತಿಳಿದವನು ಮಹಾಭಯದಿಂದ ಮುಕ್ತನಾಗುತ್ತಾನೆ.

12013012a ಭವಾನ್ಪಿತಾ ಭವಾನ್ಮಾತಾ ಭವಾನ್ಭ್ರಾತಾ ಭವಾನ್ಗುರುಃ।
12013012c ದುಃಖಪ್ರಲಾಪಾನಾರ್ತಸ್ಯ ತಸ್ಮಾನ್ಮೇ ಕ್ಷಂತುಮರ್ಹಸಿ।।

ನೀನೇ ನನ್ನ ತಂದೆ, ತಾಯಿ, ಅಣ್ಣ ಮತ್ತು ಗುರು. ದುಃಖದಿಂದ ಪ್ರಲಪಿಸುತ್ತಿರುವ ಈ ಆರ್ತನನ್ನು ನೀನು ಕ್ಷಮಿಸಬೇಕು.

12013013a ತಥ್ಯಂ ವಾ ಯದಿ ವಾತಥ್ಯಂ ಯನ್ಮಯೈತತ್ಪ್ರಭಾಷಿತಮ್।
12013013c ತದ್ವಿದ್ಧಿ ಪೃಥಿವೀಪಾಲ ಭಕ್ತ್ಯಾ ಭರತಸತ್ತಮ।।

ಭರತಸತ್ತಮ! ಪೃಥ್ವೀಪಾಲಕ! ಕೇವಲ ಭಕ್ತಿಯಿಂದ ನಾನು ನಿಜವಾಗಿರುವ ಅಥವಾ ಸುಳ್ಳಾಗಿರುವ ಈ ಮಾತುಗಳನ್ನಾಡಿದ್ದೇನೆಂದು ನೀನು ತಿಳಿದುಕೊಳ್ಳಬೇಕು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಹದೇವವಾಕ್ಯೇ ತ್ರಯೋದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸಹದೇವವಾಕ್ಯ ಎನ್ನುವ ಹದಿಮೂರನೇ ಅಧ್ಯಾಯವು.


  1. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಸ್ವಾಯಂಭುವೇನ ಮನುನಾ ತಥಾನ್ಯೈಶ್ಚಕ್ರವರ್ತಿಭಿಃ। ಯದ್ಯಯಂ ಹ್ಯಧಮಃ ಪಂಥಾಃ ಕಸ್ಮಾತ್ತೈಸ್ತೈರ್ನಿಷೇವಿತಃ।। ಕೃತತ್ರೇತಾದಿಯುಕ್ತಾನಿ ಗಣವಂತಿ ಚ ಭಾರತ। ಯುಗಾನಿ ಬಹುಶಸ್ತೈಶ್ಚ ಭುಕ್ತಯಮವನೀ ನೃಪ।। (ಗೀತಾ ಪ್ರೆಸ್). ↩︎