ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 12
ಸಾರ
ಗೃಹಸ್ಥಧರ್ಮವನ್ನು ಪ್ರಶಂಸಿಸುತ್ತಾ ನಕುಲನು ರಾಜಾ ಯುಧಿಷ್ಠಿರನಿಗೆ ತಿಳಿಯ ಹೇಳುವುದು (1-36).
12012001 ವೈಶಂಪಾಯನ ಉವಾಚ।
12012001a ಅರ್ಜುನಸ್ಯ ವಚಃ ಶ್ರುತ್ವಾ ನಕುಲೋ ವಾಕ್ಯಮಬ್ರವೀತ್।
12012001c ರಾಜಾನಮಭಿಸಂಪ್ರೇಕ್ಷ್ಯ ಸರ್ವಧರ್ಮಭೃತಾಂ ವರಮ್।।
12012002a ಅನುರುಧ್ಯ ಮಹಾಪ್ರಾಜ್ಞೋ ಭ್ರಾತುಶ್ಚಿತ್ತಮರಿಂದಮಃ।
12012002c ವ್ಯೂಢೋರಸ್ಕೋ ಮಹಾಬಾಹುಸ್ತಾಮ್ರಾಸ್ಯೋ ಮಿತಭಾಷಿತಾ।।
ವೈಶಂಪಾಯನನು ಹೇಳಿದನು: “ಅರ್ಜುನನ ಮಾತನ್ನು ಕೇಳಿ ಅರಿಂದಮ ಮಹಾಬಾಹು ವಿಶಾಲವಕ್ಷ ಮಿತಭಾಷೀ ಮಹಾಪ್ರಾಜ್ಞ ನಕುಲನು ಅಣ್ಣನ ಮನಸ್ಸನ್ನು ಬದಲಾಯಿಸಲು ಧರ್ಮಭೃತರಲ್ಲಿ ಶ್ರೇಷ್ಠನಾದ ರಾಜ ಯುಧಿಷ್ಠಿರನನ್ನು ನೋಡಿ ಹೀಗೆ ಹೇಳಿದನು:
12012003a ವಿಶಾಖಯೂಪೇ ದೇವಾನಾಂ ಸರ್ವೇಷಾಮಗ್ನಯಶ್ಚಿತಾಃ।
12012003c ತಸ್ಮಾದ್ವಿದ್ಧಿ ಮಹಾರಾಜ ದೇವಾನ್ಕರ್ಮಪಥಿ ಸ್ಥಿತಾನ್।।
“ಮಹಾರಾಜ! ವಿಶಾಖಯೂಪದಲ್ಲಿ ದೇವತೆಗಳೆಲ್ಲರೂ ಅಗ್ನಿಗಳನ್ನು ಪ್ರತಿಷ್ಠಾಪಿಸಿದ್ದರು. ಇದರಿಂದ ದೇವತೆಗಳೂ ಕರ್ಮಪಥದಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಯಬಹುದು.
12012004a ಅನಾಸ್ತಿಕಾನಾಸ್ತಿಕಾನಾಂ ಪ್ರಾಣದಾಃ ಪಿತರಶ್ಚ ಯೇ।
12012004c ತೇಽಪಿ ಕರ್ಮೈವ ಕುರ್ವಂತಿ ವಿಧಿಂ ಪಶ್ಯಸ್ವ ಪಾರ್ಥಿವ।।
ಪಾರ್ಥಿವ! ಆಸ್ತಿಕ-ಅನಾಸ್ತಿಕರಿಗೆ ಅನ್ನವನ್ನು ದಯಪಾಲಿಸುವ ಪಿತೃಗಳೂ ಕೂಡ ವಿಧಿದೃಷ್ಟವಾದ ಕರ್ಮಗಳನ್ನೇ ಮಾಡುತ್ತಾರೆ ನೋಡು!
12012004e ವೇದವಾದಾಪವಿದ್ಧಾಂಸ್ತು ತಾನ್ವಿದ್ಧಿ ಭೃಶನಾಸ್ತಿಕಾನ್।
12012005a ನ ಹಿ ವೇದೋಕ್ತಮುತ್ಸೃಜ್ಯ ವಿಪ್ರಃ ಸರ್ವೇಷು ಕರ್ಮಸು।
12012005c ದೇವಯಾನೇನ ನಾಕಸ್ಯ ಪೃಷ್ಠಮಾಪ್ನೋತಿ ಭಾರತ।।
ವೇದವಾದಗಳಿಂದ ಮೋಹಗೊಂಡವರು ಹೆಚ್ಚು ನಾಸ್ತಿಕರೆಂದು ತಿಳಿ. ಭಾರತ! ಎಲ್ಲ ಕರ್ಮಗಳಲ್ಲಿ ವೇದೋಕ್ತವಾದವುಗಳನ್ನು ಬಿಟ್ಟುಮಾಡುವ ವಿಪ್ರನು ದೇವಯಾನದ ಮೂಲಕ ಮೇಲಿನ ಸ್ವರ್ಗವನ್ನು ತಲುಪಲಾರ!
12012006a ಅತ್ಯಾಶ್ರಮಾನಯಂ ಸರ್ವಾನಿತ್ಯಾಹುರ್ವೇದನಿಶ್ಚಯಾಃ।
12012006c ಬ್ರಾಹ್ಮಣಾಃ ಶ್ರುತಿಸಂಪನ್ನಾಸ್ತಾನ್ನಿಬೋಧ ಜನಾಧಿಪ।।
ವೇದನಿಶ್ಚಯಗಳನ್ನು ತಿಳಿದಿರುವ ಮತ್ತು ಶೃತಿಸಂಪನ್ನರಾದ ಬ್ರಾಹ್ಮಣರು ಈ ಗೃಹಸ್ಥಾಶ್ರಮವು ಎಲ್ಲ ಆಶ್ರಮಗಳಿಗಿಂತ ಅತಿಶಯವಾದುದು ಎನ್ನುತ್ತಾರೆ. ನರಾಧಿಪ! ಅವರು ಹೇಳುವುದನ್ನು ಕೇಳು.
12012007a ವಿತ್ತಾನಿ ಧರ್ಮಲಬ್ಧಾನಿ ಕ್ರತುಮುಖ್ಯೇಷ್ವವಾಸೃಜನ್।
12012007c ಕೃತಾತ್ಮಸು ಮಹಾರಾಜ ಸ ವೈ ತ್ಯಾಗೀ ಸ್ಮೃತೋ ನರಃ।।
ಮಹಾರಾಜ! ಧರ್ಮದಿಂದ ಗಳಿಸಿದ ವಿತ್ತವನ್ನು ಮುಖ್ಯ ಕ್ರತುಗಳಿಗೆ ಉಪಯೋಗಿಸಿ ಕೃತಾತ್ಮನಾದ ನರನನ್ನೇ ತ್ಯಾಗೀ ಎಂದು ಹೇಳುತ್ತಾರೆ.
12012008a ಅನವೇಕ್ಷ್ಯ ಸುಖಾದಾನಂ ತಥೈವೋರ್ಧ್ವಂ ಪ್ರತಿಷ್ಠಿತಃ।
12012008c ಆತ್ಮತ್ಯಾಗೀ ಮಹಾರಾಜ ಸ ತ್ಯಾಗೀ ತಾಮಸಃ ಪ್ರಭೋ।।
ಮಹಾರಾಜ! ಪ್ರಭೋ! ಗೃಹಸ್ಥಾಶ್ರಮದಲ್ಲಿರುವ ಸುಖವನ್ನು ತ್ಯಜಿಸಿ ನಂತರದ ವಾನಪ್ರಸ್ಥ-ಸನ್ಯಾಸ ಆಶ್ರಮಗಳಲ್ಲಿ ನಿಷ್ಠೆಯನ್ನು ಹೊಂದಿ ಆತ್ಮತ್ಯಾಗ ಮಾಡುವವನನ್ನು ತಾಮಸತ್ಯಾಗೀ ಎಂದು ಹೇಳುತ್ತಾರೆ.
12012009a ಅನಿಕೇತಃ ಪರಿಪತನ್ ವೃಕ್ಷಮೂಲಾಶ್ರಯೋ ಮುನಿಃ।
12012009c ಅಪಾಚಕಃ ಸದಾ ಯೋಗೀ ಸ ತ್ಯಾಗೀ ಪಾರ್ಥ ಭಿಕ್ಷುಕಃ।।
ಪಾರ್ಥ! ಮನೆಯಿಲ್ಲದೇ ತನ್ನ ಆಹಾರವನ್ನು ತಾನೇ ತಯಾರಿಸದೇ ಭಿಕ್ಷೆಗಾಗಿ ಎಲ್ಲೆಲ್ಲಿಯೋ ತಿರುಗಾಡುತ್ತಾ ಮರಗಳ ಬುಡವನ್ನೇ ಆಶ್ರಯಿಸಿ ಸದಾ ಯೋಗಯುಕ್ತನಾಗಿ ಸರ್ವಕರ್ಮಗಳನ್ನು ತ್ಯಾಗಮಾಡಿದವನನ್ನು ಭಿಕ್ಷುಕನೆಂದು ಹೇಳುತ್ತಾರೆ.
12012010a ಕ್ರೋಧಹರ್ಷಾವನಾದೃತ್ಯ ಪೈಶುನ್ಯಂ ಚ ವಿಶಾಂ ಪತೇ।
12012010c ವಿಪ್ರೋ ವೇದಾನಧೀತೇ ಯಃ ಸ ತ್ಯಾಗೀ ಗುರುಪೂಜಕಃ।।
ವಿಶಾಂಪತೇ! ಕ್ರೋಧ-ಹರ್ಷಗಳನ್ನು ಅನಾದರಿಸಿ, ಅದರಲ್ಲೂ ವಿಶೇಷವಾಗಿ, ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಟ್ಟು, ವೇದಾಧ್ಯಯನದಲ್ಲಿ ನಿರತನಾಗಿ ಗುರುಪೂಜಕನಾದ ವಿಪ್ರನೇ ತ್ಯಾಗಿ.
12012011a ಆಶ್ರಮಾಂಸ್ತುಲಯಾ ಸರ್ವಾನ್ಧೃತಾನಾಹುರ್ಮನೀಷಿಣಃ।
12012011c ಏಕತಸ್ತೇ ತ್ರಯೋ ರಾಜನ್ಗೃಹಸ್ಥಾಶ್ರಮ ಏಕತಃ।।
ರಾಜನ್! ಒಮ್ಮೆ ವಿದ್ವಾಂಸರು ಒಂದು ಕಡೆ ಗೃಹಸ್ಥಾಶ್ರಮವನ್ನೂ ಮತ್ತೊಂದು ಕಡೆ ಉಳಿದ – ಬ್ರಹ್ಮಚರ್ಯ, ವಾನಪ್ರಸ್ಥ ಮತ್ತು ಸನ್ಯಾಸ – ಈ ಮೂರು ಆಶ್ರಮಗಳನ್ನು ಇಟ್ಟು ಸರ್ವ ಆಶ್ರಮಗಳನ್ನೂ ತುಲನೆಮಾಡಿದರೆಂದು ಹೇಳುತ್ತಾರೆ.
12012012a ಸಮೀಕ್ಷತೇ ತು ಯೋಽರ್ಥಂ ವೈ ಕಾಮಂ ಸ್ವರ್ಗಂ ಚ ಭಾರತ।
12012012c ಅಯಂ ಪಂಥಾ ಮಹರ್ಷೀಣಾಮಿಯಂ ಲೋಕವಿದಾಂ ಗತಿಃ।।
ಭಾರತ! ಸಮೀಕ್ಷಿಸಿದಾಗ ಗೃಹಸ್ಥಾಶ್ರಮವೇ ಹೆಚ್ಚಿನದೆಂದು ತಿಳಿಯುತ್ತದೆ. ಏಕೆಂದರೆ ಈ ಆಶ್ರಮದಿಂದ ಇಹದಲ್ಲಿ ಕಾಮಭೋಗಗಳನ್ನೂ ನಂತರ ಸ್ವರ್ಗವನ್ನೂ ಪಡೆಯಬಹುದು. ಇದೇ ಮಹರ್ಷಿಗಳೂ ಲೋಕವಿದರೂ ಬಳಸುವ ಮಾರ್ಗ.
12012013a ಇತಿ ಯಃ ಕುರುತೇ ಭಾವಂ ಸ ತ್ಯಾಗೀ ಭರತರ್ಷಭ।
12012013c ನ ಯಃ ಪರಿತ್ಯಜ್ಯ ಗೃಹಾನ್ವನಮೇತಿ ವಿಮೂಢವತ್।।
ಭರತರ್ಷಭ! ಈ ಭಾವದಂತೆ ಮಾಡುವವನೇ ತ್ಯಾಗೀ. ಮನೆಗಳನ್ನು ಪರಿತ್ಯಜಿಸಿ ವಿಮೂಢನಾಗಿ ವನಕ್ಕೆ ಹೋಗುವವನಲ್ಲ!
12012014a ಯದಾ ಕಾಮಾನ್ಸಮೀಕ್ಷೇತ ಧರ್ಮವೈತಂಸಿಕೋಽನೃಜುಃ।
12012014c ಅಥೈನಂ ಮೃತ್ಯುಪಾಶೇನ ಕಂಠೇ ಬಧ್ನಾತಿ ಮೃತ್ಯುರಾಟ್।।
ಧರ್ಮದ ಸೋಗಿನಿಂದ ಅರಣ್ಯದಲ್ಲಿ ವಾಸಮಾಡುವವನು ಕಾಮಾಸಕ್ತನಾದರೆ ಮೃತ್ಯುರಾಜನು ಕೂಡಲೇ ಅವನ ಕುತ್ತಿಗೆಯನ್ನು ಮೃತ್ಯುಪಾಶದಿಂದ ಬಂಧಿಸುತ್ತಾನೆ.
12012015a ಅಭಿಮಾನಕೃತಂ ಕರ್ಮ ನೈತತ್ಫಲವದುಚ್ಯತೇ।
12012015c ತ್ಯಾಗಯುಕ್ತಂ ಮಹಾರಾಜ ಸರ್ವಮೇವ ಮಹಾಫಲಮ್।।
ಮಹಾರಾಜ! ಅಭಿಮಾನದಿಂದ ಮಾಡಿದ ಕರ್ಮಗಳು ಎಂದಿಗೂ ಫಲವನ್ನು ಕೊಡುವುದಿಲ್ಲವೆಂದು ಹೇಳುತ್ತಾರೆ. ತ್ಯಾಗಬುದ್ಧಿಯಿಂದ ಮಾಡಿದುದೆಲ್ಲವೂ ಮಹಾಫಲಗಳನ್ನು ಕೊಡುತ್ತವೆ.
12012016a ಶಮೋ ದಮಸ್ತಪೋ ದಾನಂ ಸತ್ಯಂ ಶೌಚಮಥಾರ್ಜವಮ್।
12012016c ಯಜ್ಞೋ ಧೃತಿಶ್ಚ ಧರ್ಮಶ್ಚ ನಿತ್ಯಮಾರ್ಷೋ ವಿಧಿಃ ಸ್ಮೃತಃ।।
ಶಮ, ದಮ, ತಪಸ್ಸು, ದಾನ, ಸತ್ಯ, ಶೌಚ, ಸರಳತೆ, ಯಜ್ಞ, ಧೃತಿ, ಧರ್ಮ – ಇವು ಋಷಿಗಳ ನಿತ್ಯವಿಧಿಯೆಂದು ಹೇಳುತ್ತಾರೆ.
12012017a ಪಿತೃದೇವಾತಿಥಿಕೃತೇ ಸಮಾರಂಭೋಽತ್ರ ಶಸ್ಯತೇ।
12012017c ಅತ್ರೈವ ಹಿ ಮಹಾರಾಜ ತ್ರಿವರ್ಗಃ ಕೇವಲಂ ಫಲಮ್।।
ಮಹಾರಾಜ! ಗೃಹಸ್ಥಾಶ್ರಮದಲ್ಲಿ ಪಿತೃ-ದೇವತೆಗಳು ಮತ್ತು ಅತಿಥಿಗಳ ಪೂಜೆಗಳು ಕೂಡಿಕೊಂಡಿರುವುದರಿಂದ ಅದನ್ನು ಪ್ರಶಂಸಿಸಿದ್ದಾರೆ. ಇದರಲ್ಲಿಯೇ ಧರ್ಮ-ಅರ್ಥ-ಕಾಮಗಳೆಂಬ ಮೂರು ಫಲಗಳು ಪ್ರಾಪ್ತವಾಗುತ್ತವೆ.
12012018a ಏತಸ್ಮಿನ್ವರ್ತಮಾನಸ್ಯ ವಿಧೌ ವಿಪ್ರನಿಷೇವಿತೇ।
12012018c ತ್ಯಾಗಿನಃ ಪ್ರಸೃತಸ್ಯೇಹ ನೋಚ್ಚಿತ್ತಿರ್ವಿದ್ಯತೇ ಕ್ವ ಚಿತ್।।
ಗೃಹಸ್ಥಾಶ್ರಮದಲ್ಲಿಯೇ ಇದ್ದುಕೊಂಡು ವೇದವಿಹಿತ ವಿಪ್ರಕರ್ಮಗಳನ್ನು ಫಲಾಪೇಕ್ಷೆಗಳಿಲ್ಲದೇ ನಿಷ್ಠೆಯಿಂದ ಮಾಡುತ್ತಿರುವ ತ್ಯಾಗಿಗೆ ಪರಲೌಕಿಕ ಉನ್ನತಿಯೂ ಕಡಿದುಹೋಗುವುದಿಲ್ಲ.
12012019a ಅಸೃಜದ್ಧಿ ಪ್ರಜಾ ರಾಜನ್ಪ್ರಜಾಪತಿರಕಲ್ಮಷಃ।
12012019c ಮಾಂ ಯಕ್ಷ್ಯಂತೀತಿ ಶಾಂತಾತ್ಮಾ ಯಜ್ಞೈರ್ವಿವಿಧದಕ್ಷಿಣೈಃ।।
12012020a ವೀರುಧಶ್ಚೈವ ವೃಕ್ಷಾಂಶ್ಚ ಯಜ್ಞಾರ್ಥಂ ಚ ತಥೌಷಧೀಃ।
12012020c ಪಶೂಂಶ್ಚೈವ ತಥಾ ಮೇಧ್ಯಾನ್ಯಜ್ಞಾರ್ಥಾನಿ ಹವೀಂಷಿ ಚ।।
ರಾಜನ್! ವಿವಿಧ ದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳಿಂದ ನನ್ನನ್ನು ಆರಾಧಿಸುತ್ತಾರೆ ಎಂದೇ ಶಾಂತಾತ್ಮಾ ಅಕಲ್ಮಷ ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿದನು. ಯಜ್ಞಕ್ಕಾಗಿಯೇ ಅವನು ಔಷಧಿ-ಲತೆಗಳನ್ನೂ, ವೃಕ್ಷಗಳನ್ನೂ, ಪಶುಗಳನ್ನೂ ಮತ್ತು ಮೇಧ-ಅನ್ನಗಳನ್ನೂ, ಹವಿಸ್ಸುಗಳನ್ನೂ ಸೃಷ್ಟಿಸಿದನು.
12012021a ಗೃಹಸ್ಥಾಶ್ರಮಿಣಸ್ತಚ್ಚ ಯಜ್ಞಕರ್ಮ ವಿರೋಧಕಮ್।
12012021c ತಸ್ಮಾದ್ಗಾರ್ಹಸ್ಥ್ಯಮೇವೇಹ ದುಷ್ಕರಂ ದುರ್ಲಭಂ ತಥಾ।।
ಗೃಹಸ್ಥಾಶ್ರಮಿಗೆ ಯಜ್ಞಕರ್ಮಗಳು ಮಾಡಲೇ ಬೇಕಾದ ಒಂದು ಬಂಧನ1. ಇದರಿಂದಾಗಿ ಗೃಹಸ್ಥಾಶ್ರಮವು ದುಷ್ಕರವೂ ದುರ್ಲಭವೂ ಆಗಿರುತ್ತದೆ.
12012022a ತತ್ಸಂಪ್ರಾಪ್ಯ ಗೃಹಸ್ಥಾ ಯೇ ಪಶುಧಾನ್ಯಸಮನ್ವಿತಾಃ।
12012022c ನ ಯಜಂತೇ ಮಹಾರಾಜ ಶಾಶ್ವತಂ ತೇಷು ಕಿಲ್ಬಿಷಮ್।।
ಮಹಾರಾಜ! ಪಶುಧಾನ್ಯಗಳನ್ನು ಸಂಪಾದಿಸಿದ ಯಾವ ಗೃಹಸ್ಥನು ಯಜ್ಞ ಮಾಡುವುದಿಲ್ಲವೋ ಅವನು ಶಾಶ್ವತ ಪಾಪಿಯಾಗುತ್ತಾನೆ.
12012023a ಸ್ವಾಧ್ಯಾಯಯಜ್ಞಾ ಋಷಯೋ ಜ್ಞಾನಯಜ್ಞಾಸ್ತಥಾಪರೇ।
12012023c ಅಥಾಪರೇ ಮಹಾಯಜ್ಞಾನ್ಮನಸೈವ ವಿತನ್ವತೇ।।
ಋಷಿಗಳು ಸ್ವಾಧ್ಯಾಯವೆಂಬ ಯಜ್ಞವನ್ನು ಮಾಡುತ್ತಾರೆ. ಇನ್ನು ಕೆಲವರು ಜ್ಞಾನಯಜ್ಞವನ್ನು ಮಾಡುತ್ತಾರೆ. ಇನ್ನೂ ಇತರರು ಮನಸ್ಸಿನಲ್ಲಿಯೇ ಮಹಾಯಜ್ಞಗಳನ್ನು ಮಾಡುತ್ತಿರುತ್ತಾರೆ.
12012024a ಏವಂ ದಾನಸಮಾಧಾನಂ ಮಾರ್ಗಮಾತಿಷ್ಠತೋ ನೃಪ।
12012024c ದ್ವಿಜಾತೇರ್ಬ್ರಹ್ಮಭೂತಸ್ಯ ಸ್ಪೃಹಯಂತಿ ದಿವೌಕಸಃ।।
ನೃಪ! ಹೀಗೆ ದಾನ-ಸಮಾಧಾನಗಳ ಮಾರ್ಗವನ್ನು ಹಿಡಿದಿರುವ ಬ್ರಹ್ಮಭೂತ ದ್ವಿಜರನ್ನು ನೋಡಲು ದೇವತೆಗಳೂ ಅಪೇಕ್ಷಿಸುತ್ತಾರೆ.
12012025a ಸ ರತ್ನಾನಿ ವಿಚಿತ್ರಾಣಿ ಸಂಭೃತಾನಿ ತತಸ್ತತಃ।
12012025c ಮಖೇಷ್ವನಭಿಸಂತ್ಯಜ್ಯ ನಾಸ್ತಿಕ್ಯಮಭಿಜಲ್ಪಸಿ।।
12012025e ಕುಟುಂಬಮಾಸ್ಥಿತೇ ತ್ಯಾಗಂ ನ ಪಶ್ಯಾಮಿ ನರಾಧಿಪ।।
ಅಲ್ಲಲ್ಲಿಂದ ಸಂಗ್ರಹಿಸಿರುವ ವಿಚಿತ್ರ ರತ್ನಗಳನ್ನು ನಾವು ಯಜ್ಞಗಳ ಮೂಲಕವಾಗಿ ಹಂಚಬೇಕಾಗಿದೆ. ಹೀಗಿರುವಾಗ ನೀನು ನಾಸ್ತಿಕನಂತೆ ಮಾತನಾಡುತ್ತಿರುವೆ! ನರಾಧಿಪ! ಕುಟುಂಬದಲ್ಲಿದ್ದುಕೊಂಡು ಸರ್ವಸಂಗಪರಿತ್ಯಾಗಿಯಾಗುವುದನ್ನು ನಾನೆಲ್ಲೂ ನೋಡಿಲ್ಲ.
12012026a ರಾಜಸೂಯಾಶ್ವಮೇಧೇಷು ಸರ್ವಮೇಧೇಷು ವಾ ಪುನಃ।
12012026c ಯ ಚಾನ್ಯೇ ಕ್ರತವಸ್ತಾತ ಬ್ರಾಹ್ಮಣೈರಭಿಪೂಜಿತಾಃ।।
12012026e ತೈರ್ಯಜಸ್ವ ಮಹಾರಾಜ ಶಕ್ರೋ ದೇವಪತಿರ್ಯಥಾ।।
ಮಹಾರಾಜ! ದೇವಪತಿ ಶಕ್ರನಂತೆ ರಾಜಸೂಯ, ಅಶ್ವಮೇಧ, ಸರ್ವಮೇಧ ಅಥವಾ ಬ್ರಾಹ್ಮಣರಿಂದ ಪೂಜಿತವಾದ ಇನ್ನು ಬೇರೆ ಯಾವುದೇ ಕ್ರತುಗಳನ್ನು ಯಾಜಿಸು.
12012027a ರಾಜ್ಞಃ ಪ್ರಮಾದದೋಷೇಣ ದಸ್ಯುಭಿಃ ಪರಿಮುಷ್ಯತಾಮ್।
12012027c ಅಶರಣ್ಯಃ ಪ್ರಜಾನಾಂ ಯಃ ಸ ರಾಜಾ ಕಲಿರುಚ್ಯತೇ।।
ಪ್ರಮಾದದೋಷದಿಂದ ಯಾವ ರಾಜನು ಪ್ರಜೆಗಳಿಗೆ ಕಳ್ಳ-ಕಾಕರಿಂದ ರಕ್ಷಣೆಯನ್ನು ನೀಡುವುದಿಲ್ಲವೋ ಅಂತಹ ರಾಜನಿಗೆ ಕಲಿ ಎಂದು ಕರೆಯುತ್ತಾರೆ.
12012028a ಅಶ್ವಾನ್ಗಾಶ್ಚೈವ ದಾಸೀಶ್ಚ ಕರೇಣೂಶ್ಚ ಸ್ವಲಂಕೃತಾಃ।
12012028c ಗ್ರಾಮಾನ್ಜನಪದಾಂಶ್ಚೈವ ಕ್ಷೇತ್ರಾಣಿ ಚ ಗೃಹಾಣಿ ಚ।।
12012029a ಅಪ್ರದಾಯ ದ್ವಿಜಾತಿಭ್ಯೋ ಮಾತ್ಸರ್ಯಾವಿಷ್ಟಚೇತಸಃ।
12012029c ವಯಂ ತೇ ರಾಜಕಲಯೋ ಭವಿಷ್ಯಾಮೋ ವಿಶಾಂ ಪತೇ।।
ವಿಶಾಂಪತೇ! ಕುದುರೆಗಳು, ಗೋವುಗಳು, ದಾಸಿಯರು, ಅಲಂಕೃತ ಆನೆಗಳು, ಗ್ರಾಮಗಳು, ಜನಪದಗಳು, ಕ್ಷೇತ್ರಗಳು ಮತ್ತು ಗೃಹಗಳನ್ನು ಮಾತ್ಸರ್ಯವಿಲ್ಲದೇ ದ್ವಿಜರಿಗೆ ಕೊಡದೇ ಇದ್ದರೆ ನಾವೂ ಕೂಡ ಕಲಿರಾಜರಾಗುತ್ತೇವೆ.
12012030a ಅದಾತಾರೋಽಶರಣ್ಯಾಶ್ಚ ರಾಜಕಿಲ್ಬಿಷಭಾಗಿನಃ।
12012030c ದುಃಖಾನಾಮೇವ ಭೋಕ್ತಾರೋ ನ ಸುಖಾನಾಂ ಕದಾ ಚನ।।
ದಾನಮಾಡದಿರುವವರು ಮತ್ತು ರಕ್ಷಣೆನೀಡದಿರುವವರು ರಾಜಕಿಲ್ಬಿಷಗಳಿಗೆ ಭಾಗಿಗಳಾಗುತ್ತಾರೆ ಮತ್ತು ದುಃಖವನ್ನೇ ಅನುಭವಿಸುತ್ತಾರೆಯೇ ಹೊರತು ಎಂದೂ ಸುಖಿಗಳಾಗುವುದಿಲ್ಲ.
12012031a ಅನಿಷ್ಟ್ವಾ ಚ ಮಹಾಯಜ್ಞೈರಕೃತ್ವಾ ಚ ಪಿತೃಸ್ವಧಾಮ್।
12012031c ತೀರ್ಥೇಷ್ವನಭಿಸಂತ್ಯಜ್ಯ ಪ್ರವ್ರಜಿಷ್ಯಸಿ ಚೇದಥ।।
12012032a ಚಿನ್ನಾಭ್ರಮಿವ ಗಂತಾಸಿ ವಿಲಯಂ ಮಾರುತೇರಿತಮ್।
12012032c ಲೋಕಯೋರುಭಯೋರ್ಭ್ರಷ್ಟೋ ಹ್ಯಂತರಾಲೇ ವ್ಯವಸ್ಥಿತಃ।।
ಇಷ್ಟಿಗಳನ್ನು ಮತ್ತು ಮಹಾಯಜ್ಞಗಳನ್ನು ಮಾಡದೇ, ಪಿತೃಗಳನ್ನು ಪೂಜಿಸದೇ, ತೀರ್ಥಗಳಲ್ಲಿ ಮೀಯದೇ ನೀನು ಅರಣ್ಯಕ್ಕೆ ಹೊರಟೆಯೆಂದಾದರೆ ಭಿರುಗಾಳಿಯ ಹೊಡೆತಕ್ಕೆ ಸಿಲುಕಿ ಒಡೆದು ಚದುರಿಹೋಗುವ ಮೋಡದಂತೆ ನಾಶವಾಗುವೆ. ಇಹ-ಪರ ಲೋಕಗಳೆರಡರಿಂದಲೂ ಭ್ರಷ್ಟನಾಗಿ ಮಧ್ಯದಲ್ಲಿಯೇ ಸಿಲುಕಿಗೊಳ್ಳುವೆ!
12012033a ಅಂತರ್ಬಹಿಶ್ಚ ಯತ್ಕಿಂ ಚಿನ್ಮನೋವ್ಯಾಸಂಗಕಾರಕಮ್।
12012033c ಪರಿತ್ಯಜ್ಯ ಭವೇತ್ತ್ಯಾಗೀ ನ ಯೋ ಹಿತ್ವಾ ಪ್ರತಿಷ್ಠತೇ।।
ಬಹಿರಂಗವಾಗಿ ಮತ್ತು ಅಂತರಂಗವಾಗಿ ಮನಸ್ಸನ್ನು ಯಾವಾಗಲೂ ಸಂಗದಲ್ಲಿ ತೊಡಗಿಸುವಂತಹ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಮಾತ್ರ ತ್ಯಾಗೀ ಎನಿಸಿಕೊಳ್ಳುತ್ತಾನೆಯೇ ಹೊರತು ಕೇವಲ ಗೃಹಸ್ಥಾಶ್ರಮವನ್ನು ತೊರೆಯುವುದರಿಂದಲ್ಲ.
12012034a ಏತಸ್ಮಿನ್ವರ್ತಮಾನಸ್ಯ ವಿಧೌ ವಿಪ್ರನಿಷೇವಿತೇ।
12012034c ಬ್ರಾಹ್ಮಣಸ್ಯ ಮಹಾರಾಜ ನೋಚ್ಚಿತ್ತಿರ್ವಿದ್ಯತೇ ಕ್ವ ಚಿತ್।।
ಮಹಾರಾಜ! ಇಂತಹ ಗೃಹಸ್ಥಾಶ್ರಮದಲ್ಲಿದ್ದುಕೊಂಡು ವೇದಪ್ರಣೀತವಾದ ಮತ್ತು ವಿಪ್ರರು ಗೌರವಿಸುವ ರೀತಿಯಲ್ಲಿ ನಡೆದುಕೊಂಡ ಬ್ರಾಹ್ಮಣನಿಗೆ ಎಂದೂ ಪತನವೆನ್ನುವುದಿರುವುದಿಲ್ಲ.
12012035a ನಿಹತ್ಯ ಶತ್ರೂಂಸ್ತರಸಾ ಸಮೃದ್ಧಾನ್
ಶಕ್ರೋ ಯಥಾ ದೈತ್ಯಬಲಾನಿ ಸಂಖ್ಯೇ।
12012035c ಕಃ ಪಾರ್ಥ ಶೋಚೇನ್ನಿರತಃ ಸ್ವಧರ್ಮೇ
ಪೂರ್ವೈಃ ಸ್ಮೃತೇ ಪಾರ್ಥಿವ ಶಿಷ್ಟಜುಷ್ಟೇ।।
ಪಾರ್ಥ! ಯುದ್ಧದಲ್ಲಿ ಶಕ್ರನು ಹೇಗೆ ದೈತ್ಯಬಲಗಳನ್ನೋ ಹಾಗೆ ಸಮೃದ್ಧರಾಗಿದ್ದ ಶತ್ರುಗಳನ್ನು ಬೇಗನೆ ಸಂಹರಿಸಿ ಶೋಕಿಸುತ್ತಿರುವ ನಿನ್ನಂತೆ ಈ ಹಿಂದೆ ರಾಜರಿಗೆ ತಕ್ಕದೆನಿಸಿದ ಸ್ವಧರ್ಮದಲ್ಲಿ ನಿರತನಾಗಿದ್ದ ಯಾವ ರಾಜನು ತಾನೇ ಶೋಕಿಸಿದ್ದನು?
12012036a ಕ್ಷಾತ್ರೇಣ ಧರ್ಮೇಣ ಪರಾಕ್ರಮೇಣ
ಜಿತ್ವಾ ಮಹೀಂ ಮಂತ್ರವಿದ್ಭ್ಯಃ ಪ್ರದಾಯ।
12012036c ನಾಕಸ್ಯ ಪೃಷ್ಠೇಽಸಿ ನರೇಂದ್ರ ಗಂತಾ
ನ ಶೋಚಿತವ್ಯಂ ಭವತಾದ್ಯ ಪಾರ್ಥ।।
ಪಾರ್ಥ! ನರೇಂದ್ರ! ಕ್ಷಾತ್ರಧರ್ಮದ ಪ್ರಕಾರ ಪರಾಕ್ರಮದಿಂದ ಈ ಮಹಿಯನ್ನು ಗೆದ್ದು, ಮಂತ್ರವತ್ತಾಗಿ ಅದನ್ನು ದ್ವಿಜರಿಗೆ ದಾನಮಾಡಿ, ನಾಕಕ್ಕಿಂತಲೂ ಮೇಲಿರುವ ಲೋಕಗಳಿಗೆ ಹೋಗುತ್ತೀಯೆ. ಆದುದರಿಂದ ನೀನು ಶೋಕಿಸುವ ಅವಶ್ಯಕತೆಯಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ನಕುಲವಾಕ್ಯೇ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ನಕುಲವಾಕ್ಯ ಎನ್ನುವ ಹನ್ನೆರಡನೇ ಅಧ್ಯಾಯವು.
-
ಸಾಧಾರಣವಾಗಿ ವಿರೋಧಕಂ ಎಂಬ ಶಬ್ಧಕ್ಕೆ ವಿರೋಧ ಅಥವಾ ತೊಂದರೆಯನ್ನುಂಟುಮಾಡುವುದು ಎಂಬ ಅರ್ಥವಿದೆ. ಆದರೆ ಈ ಶ್ಲೋಕದಲ್ಲಿ ಈ ಶಬ್ಧಕ್ಕೆ ವ್ಯಾಖ್ಯಾನಕಾರರು – ನಿಗಡಂ ವಿಶೇಷಣಂ ರೋಧಕಂ – ಸರಪಳಿಯಂತೆ ವಿಶೇಷವಾಗಿ ಬಂಧಿಸತಕ್ಕುದು – ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಗೃಹಸ್ಥನಿಗೆ ಯಜ್ಞಕರ್ಮವು ಒಂದು ಬಂಧನ. ಮಾಡಲೇ ಬೇಕಾದ ಕರ್ಮ ಎಂದು ಅರ್ಥೈಸಿದ್ದಾರೆ. ↩︎