010 ಭೀಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 10

ಸಾರ

ಭೀಮಸೇನನು ರಾಜನ ಸಂನ್ಯಾಸದ ನಿರ್ಧಾರವನ್ನು ವಿರೋಧಿಸಿ ರಾಜನ ಕರ್ತವ್ಯಪಾಲನೆಯ ಕುರಿತು ಒತ್ತಿ ಹೇಳುವುದು (1-28).

12010001 ಭೀಮ ಉವಾಚ।
12010001a ಶ್ರೋತ್ರಿಯಸ್ಯೇವ ತೇ ರಾಜನ್ಮಂದಕಸ್ಯಾವಿಪಶ್ಚಿತಃ।
12010001c ಅನುವಾಕಹತಾಬುದ್ಧಿರ್ನೈಷಾ ತತ್ತ್ವಾರ್ಥದರ್ಶಿನೀ।।

ಭೀಮಸೇನನು ಹೇಳಿದನು: “ರಾಜನ್! ಶ್ರೋತ್ರಿಯಂತೆಯೇ ನಿನ್ನ ಬುದ್ಧಿಯೂ ಮಂದವಾಗಿಹೋಗಿದೆ! ತತ್ತ್ವಾರ್ಥಗಳನ್ನು ತಿಳಿಯದೇ ಕೇವಲ ಪಠಣಮಾಡುವವನ ಬುದ್ಧಿಯಂತಾಗಿದೆ ನಿನ್ನ ಬುದ್ಧಿಯೂ ಕೂಡ!

12010002a ಆಲಸ್ಯೇ ಕೃತಚಿತ್ತಸ್ಯ ರಾಜಧರ್ಮಾನಸೂಯತಃ।
12010002c ವಿನಾಶೇ ಧಾರ್ತರಾಷ್ಟ್ರಾಣಾಂ ಕಿಂ ಫಲಂ ಭರತರ್ಷಭ।।

ಭರತರ್ಷಭ! ರಾಜಧರ್ಮವನ್ನು ನಿಂದಿಸಿ ಆಲಸ್ಯದ ಜೀವನವನ್ನು ನಡೆಸಲು ಯೋಚಿಸಿರುವ ನಿನಗೆ ಧಾರ್ತರಾಷ್ಟ್ರರ ವಿನಾಶದಿಂದ ಯಾವ ಫಲವುಂಟಾಯಿತು?

12010003a ಕ್ಷಮಾನುಕಂಪಾ ಕಾರುಣ್ಯಮಾನೃಶಂಸ್ಯಂ ನ ವಿದ್ಯತೇ।
12010003c ಕ್ಷಾತ್ರಮಾಚರತೋ ಮಾರ್ಗಮಪಿ ಬಂಧೋಸ್ತ್ವದಂತರೇ।।

ಕ್ಷತ್ರಧರ್ಮವನ್ನು ಆಚರಿಸುವವನ ಮಾರ್ಗದಲ್ಲಿ ಬಂಧುಗಳ ಕುರಿತು ಕ್ಷಮೆ, ಅನುಕಂಪ, ಕಾರುಣ್ಯ, ಮತ್ತು ಮೃದುತ್ವಗಳು ಇರುವುದಿಲ್ಲ.

12010004a ಯದೀಮಾಂ ಭವತೋ ಬುದ್ಧಿಂ ವಿದ್ಯಾಮ ವಯಮೀದೃಶೀಮ್।
12010004c ಶಸ್ತ್ರಂ ನೈವ ಗ್ರಹೀಷ್ಯಾಮೋ ನ ವಧಿಷ್ಯಾಮ ಕಂ ಚನ।।

ನಿನ್ನ ಬುದ್ಧಿಯು ಈ ರೀತಿಯಿದೆಯೆಂದು ಮೊದಲೇ ನಮಗೆ ತಿಳಿದಿದ್ದರೆ ನಾವು ಶಸ್ತ್ರಗಳನ್ನು ಹಿಡಿಯುತ್ತಲೇ ಇರಲಿಲ್ಲ ಮತ್ತು ಯಾರೊಬ್ಬರನ್ನೂ ವಧಿಸುತ್ತಲೂ ಇರಲಿಲ್ಲ.

12010005a ಭೈಕ್ಷ್ಯಮೇವಾಚರಿಷ್ಯಾಮ ಶರೀರಸ್ಯಾ ವಿಮೋಕ್ಷಣಾತ್।
12010005c ನ ಚೇದಂ ದಾರುಣಂ ಯುದ್ಧಮಭವಿಷ್ಯನ್ಮಹೀಕ್ಷಿತಾಮ್।।

ಈ ಶರೀರದ ವಿಮೋಚನೆಗಾಗಿ ಭಿಕ್ಷಾವೃತ್ತಿಯನ್ನೇ ಅನುಸರಿಸುತ್ತಿದ್ದೆವು. ಮಹೀಕ್ಷಿತರ ಈ ದಾರುಣ ಯುದ್ಧವೇ ನಡೆಯುತ್ತಿರಲಿಲ್ಲ.

12010006a ಪ್ರಾಣಸ್ಯಾನ್ನಮಿದಂ ಸರ್ವಮಿತಿ ವೈ ಕವಯೋ ವಿದುಃ।
12010006c ಸ್ಥಾವರಂ ಜಂಗಮಂ ಚೈವ ಸರ್ವಂ ಪ್ರಾಣಸ್ಯ ಭೋಜನಮ್।।

ಇವೆಲ್ಲವೂ ಬಲಿಷ್ಠನಾದವನ ಅನ್ನವೆಂದು ತಿಳಿದವರು ಹೇಳುತ್ತಾರೆ. ಸ್ಥಾವರ-ಜಂಗಮಗಳೆಲ್ಲವೂ ಬಲಿಷ್ಠನ ಭೋಜನ!

12010007a ಆದದಾನಸ್ಯ ಚೇದ್ರಾಜ್ಯಂ ಯೇ ಕೇ ಚಿತ್ಪರಿಪಂಥಿನಃ।
12010007c ಹಂತವ್ಯಾಸ್ತ ಇತಿ ಪ್ರಾಜ್ಞಾಃ ಕ್ಷತ್ರಧರ್ಮವಿದೋ ವಿದುಃ।।

ರಾಜ್ಯವನ್ನು ಸ್ವೀಕರಿಸುವಾಗ ವಿರೋಧಿಸುವವರನ್ನು ಸಂಹರಿಸಬೇಕೆಂದು ಕ್ಷತ್ರಧರ್ಮವನ್ನು ತಿಳಿದ ಪ್ರಾಜ್ಞರು ಹೇಳುತ್ತಾರೆ.

12010008a ತೇ ಸದೋಷಾ ಹತಾಸ್ಮಾಭೀ ರಾಜ್ಯಸ್ಯ ಪರಿಪಂಥಿನಃ।
12010008c ತಾನ್ಹತ್ವಾ ಭುಂಕ್ತ್ವ ಧರ್ಮೇಣ ಯುಧಿಷ್ಠಿರ ಮಹೀಮಿಮಾಮ್।।

ರಾಜ್ಯವನ್ನು ಪಡೆದುಕೊಳ್ಳಲು ಅಡ್ಡಿಯನ್ನುಂಟುಮಾಡಿದ ವೈರಿಗಳನ್ನು ನಾವು ಸಂಹರಿಸಿದ್ದೇವೆ. ಯುಧಿಷ್ಠಿರ! ಧರ್ಮಪೂರ್ವಕವಾಗಿ ಅವರನ್ನು ಸಂಹರಿಸಿ ಪಡೆದ ಈ ಭೂಮಿಯನ್ನು ಭೋಗಿಸು!

12010009a ಯಥಾ ಹಿ ಪುರುಷಃ ಖಾತ್ವಾ ಕೂಪಮಪ್ರಾಪ್ಯ ಚೋದಕಮ್।
12010009c ಪಂಕದಿಗ್ಧೋ ನಿವರ್ತೇತ ಕರ್ಮೇದಂ ನಸ್ತಥೋಪಮಮ್।।

ಬಾವಿಯನ್ನು ತೋಡಿ ನೀರನ್ನು ಪಡೆಯದೇ ಕೇವಲ ಕೆಸರನ್ನು ಮೈಗೆ ಹಚ್ಚಿಕೊಂಡು ಮೇಲೆ ಬಂದವನಂತೆ ನಮ್ಮ ಈ ಕರ್ಮವು ಆಗಬಾರದು!

12010010a ಯಥಾರುಹ್ಯ ಮಹಾವೃಕ್ಷಮಪಹೃತ್ಯ ತತೋ ಮಧು।
12010010c ಅಪ್ರಾಶ್ಯ ನಿಧನಂ ಗಚ್ಚೇತ್ಕರ್ಮೇದಂ ನಸ್ತಥೋಪಮಮ್।।

ಮಹಾವೃಕ್ಷವನ್ನೇರಿ ಜೇನನ್ನು ಅಪಹರಿಸಿ ಅದನ್ನು ಸವಿಯುವ ಮೊದಲೇ ನಿಧನಹೊಂದಿದವನಂತೆ ನಮ್ಮ ಈ ಕರ್ಮವು ಆಗಬಾರದು!

12010011a ಯಥಾ ಮಹಾಂತಮಧ್ವಾನಮಾಶಯಾ ಪುರುಷಃ ಪತನ್।
12010011c ಸ ನಿರಾಶೋ ನಿವರ್ತೇತ ಕರ್ಮೇದಂ ನಸ್ತಥೋಪಮಮ್।।

ಯಾವುದೋ ದೊಡ್ಡ ನಿಧಿಯು ಸಿಗುವ ಆಶಯದಿಂದ ಬಹುದೂರ ಹೋಗಿ ನಿರಾಶನಾಗಿ ಹಿಂದಿರುಗಿದವನಂತೆ ನಮ್ಮ ಈ ಕರ್ಮವು ಆಗದಿರಲಿ!

12010012a ಯಥಾ ಶತ್ರೂನ್ಘಾತಯಿತ್ವಾ ಪುರುಷಃ ಕುರುಸತ್ತಮ।
12010012c ಆತ್ಮಾನಂ ಘಾತಯೇತ್ಪಶ್ಚಾತ್ಕರ್ಮೇದಂ ನಸ್ತಥಾವಿಧಮ್।।

ಕುರುಸತ್ತಮ! ಶತ್ರುಗಳನ್ನು ಸಂಹರಿಸಿ ನಂತರ ಆತ್ಮಹತ್ಯೆಯನ್ನು ಮಾಡಿಕೊಂಡವನಂತೆ ನಮ್ಮ ಈ ಕರ್ಮವು ಆಗದಿರಲಿ!

12010013a ಯಥಾನ್ನಂ ಕ್ಷುಧಿತೋ ಲಬ್ಧ್ವಾ ನ ಭುಂಜೀತ ಯದೃಚ್ಚಯಾ।
12010013c ಕಾಮೀ ಚ ಕಾಮಿನೀಂ ಲಬ್ಧ್ವಾ ಕರ್ಮೇದಂ ನಸ್ತಥಾವಿಧಮ್।।

ಹಸಿವಿನಿಂದ ಬಳಲುತ್ತಿದ್ದವನು ಅನ್ನವನ್ನು ಪಡೆದು ತಿನ್ನಲು ಅಶಕ್ಯನಾದವನಂತೆ, ಕಾಮಿಯು ಕಾಮಿನಿಯನ್ನು ಪಡೆದೂ ಅವಳನ್ನು ಭೋಗಿಸಲು ಅಶಕ್ಯನಾದವನಂತೆ ನಮ್ಮ ಈ ಕರ್ಮವು ಆಗದಿರಲಿ!

12010014a ವಯಮೇವಾತ್ರ ಗರ್ಹ್ಯಾ ಹಿ ಯೇ ವಯಂ ಮಂದಚೇತಸಃ।
12010014c ತ್ವಾಂ ರಾಜನ್ನನುಗಚ್ಚಾಮೋ ಜ್ಯೇಷ್ಠೋಽಯಮಿತಿ ಭಾರತ।।

ಭಾರತ! ರಾಜನ್! ಹಿರಿಯವನೆಂದು ತಿಳಿದು ಮಂದಚೇತಸನಾದ ನಿನ್ನನ್ನೇ ಅನುಸರಿಸಿ ಬರುತ್ತಿರುವ ನಾವೇ ನಿಂದನೀಯರು!

12010015a ವಯಂ ಹಿ ಬಾಹುಬಲಿನಃ ಕೃತವಿದ್ಯಾ ಮನಸ್ವಿನಃ।
12010015c ಕ್ಲೀಬಸ್ಯ ವಾಕ್ಯೇ ತಿಷ್ಠಾಮೋ ಯಥೈವಾಶಕ್ತಯಸ್ತಥಾ।।

ಬಾಹುಬಲಿಗಳಾದ, ವಿದ್ಯಾವಂತರಾದ, ಜಿತೇಂದ್ರಿಯರಾದ ನಾವೂ ಕೂಡ ಓರ್ವ ಅಸಮರ್ಥ ನಪುಂಸಕನ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ!

12010016a ಅಗತೀನ್ಕಾಗತೀನಸ್ಮಾನ್ನಷ್ಟಾರ್ಥಾನರ್ಥಸಿದ್ಧಯೇ।
12010016c ಕಥಂ ವೈ ನಾನುಪಶ್ಯೇಯುರ್ಜನಾಃ ಪಶ್ಯಂತಿ ಯಾದೃಶಮ್।।

ಅನಾಥರಕ್ಷಕರಾದ ನಾವು ಅರ್ಥಹೀನರಾಗಿರುವುದನ್ನು ಜನಗಳು ಹೇಗೆತಾನೇ ನೋಡದೇ ಇರುತ್ತಾರೆ? ಆದುದರಿಂದ ನಾನು ಹೇಳುವುದು ಯುಕ್ತವೋ ಅಯುಕ್ತವೋ ಎನ್ನುವುದನ್ನು ಎಲ್ಲರೂ ಯೋಚಿಸಿರಿ. ಸಮರ್ಥರಾದವರು ಸ್ವಾರ್ಥಸಿದ್ಧಿಗಾಗಿ ಪ್ರಯತ್ನಿಸಲೇ ಬೇಕೆಂದು ನನ್ನ ಅಭಿಪ್ರಾಯ!

12010017a ಆಪತ್ಕಾಲೇ ಹಿ ಸಂನ್ಯಾಸಃ ಕರ್ತವ್ಯ ಇತಿ ಶಿಷ್ಯತೇ।
12010017c ಜರಯಾಭಿಪರೀತೇನ ಶತ್ರುಭಿರ್ವ್ಯಂಸಿತೇನ ಚ।।

ಆಪತ್ಕಾಲದಲ್ಲಿ ಮಾತ್ರ ಸಂನ್ಯಾಸವನ್ನು ತೆಗೆದುಕೊಳ್ಳಬೇಕೆಂದು ಉಪದೇಶವಿದೆ. ಮುಪ್ಪಿನಿಂದ ಗಲಿತ ಶರೀರವುಳ್ಳವನೂ, ಶತ್ರುಗಳಿಂದ ವಂಚಿತನಾದವನೂ ಸಂನ್ಯಾಸವನ್ನು ತೆಗೆದುಕೊಳ್ಳಬಹುದು.

12010018a ತಸ್ಮಾದಿಹ ಕೃತಪ್ರಜ್ಞಾಸ್ತ್ಯಾಗಂ ನ ಪರಿಚಕ್ಷತೇ।
12010018c ಧರ್ಮವ್ಯತಿಕ್ರಮಂ ಚೇದಂ ಮನ್ಯಂತೇ ಸೂಕ್ಷ್ಮದರ್ಶಿನಃ।।

ಆದುದರಿಂದ ಕೃತಪ್ರಜ್ಞರು ಇದನ್ನು ತ್ಯಾಗವೆಂದು ಪರಿಗಣಿಸುವುದಿಲ್ಲ. ಸೂಕ್ಷ್ಮದರ್ಶಿಗಳು ಇದನ್ನು ಧರ್ಮದ ಅತಿಕ್ರಮವೆಂದೇ ತಿಳಿಯುತ್ತಾರೆ.

12010019a ಕಥಂ ತಸ್ಮಾತ್ಸಮುತ್ಪನ್ನಸ್ತನ್ನಿಷ್ಠಸ್ತದುಪಾಶ್ರಯಃ।
12010019c ತದೇವ ನಿಂದನ್ನಾಸೀತ ಶ್ರದ್ಧಾ ವಾನ್ಯತ್ರ ಗೃಹ್ಯತೇ।।

ಅದರಲ್ಲಿಯೇ ಹುಟ್ಟಿ, ಅದರಲ್ಲಿಯೇ ನಿರತನಾಗಿದ್ದುಕೊಂಡಿರುವ, ಮತ್ತು ಅದನ್ನು ಆಶ್ರಯಿಸಿಯೇ ಜೀವಿಸುತ್ತಿರುವ ಯಾರು ತಾನೇ ಕ್ಷತ್ರಿಯ ಧರ್ಮವನ್ನು ನಿಂದಿಸಬಹುದು? ಅವನಲ್ಲಿ ಶ್ರದ್ಧೆಯಿಲ್ಲವೆಂದಾಯಿತಲ್ಲವೇ?

12010020a ಶ್ರಿಯಾ ವಿಹೀನೈರಧನೈರ್ನಾಸ್ತಿಕೈಃ ಸಂಪ್ರವರ್ತಿತಮ್।
12010020c ವೇದವಾದಸ್ಯ ವಿಜ್ಞಾನಂ ಸತ್ಯಾಭಾಸಮಿವಾನೃತಮ್।।

ಶ್ರೀಯಿಂದ ವಿಹೀನರಾದವರು, ನಿರ್ಧನರು ಮತ್ತು ನಾಸ್ತಿಕರಿಂದ ಸುತ್ತುವರೆಯಲ್ಪಟ್ಟವರು ವೇದವಾಕ್ಯವಾದ ವಿಜ್ಞಾನವನ್ನು ಸತ್ಯದ ಅಭಾಸವೆಂದೂ ಸುಳ್ಳೆಂದೂ ಪ್ರಚಾರಮಾಡುತ್ತಾರೆ.

12010021a ಶಕ್ಯಂ ತು ಮೌಂಡ್ಯಮಾಸ್ಥಾಯ ಬಿಭ್ರತಾತ್ಮಾನಮಾತ್ಮನಾ।
12010021c ಧರ್ಮಚ್ಚದ್ಮ ಸಮಾಸ್ಥಾಯ ಆಸಿತುಂ ನ ತು ಜೀವಿತುಮ್।।

ಮುಂಡನಾಗಿ ಧರ್ಮದ ಸೋಗನ್ನು ಹಾಕಿಕೊಂಡು ತನ್ನ ಹೊಟ್ಟೆಯನ್ನು ಮಾತ್ರ ಹೊರೆದುಕೊಳ್ಳುತ್ತಾ ಇರಬಹುದು. ಆದರೆ ಇದರಿಂದ ಕಾಲಕಳೆಯಬಹುದೇ ಹೊರತು ಜೀವನದ ಸಾರ್ಥಕ್ಯವನ್ನು ಹೊಂದಲು ಸಾಧ್ಯವಾಗುವುದಿಲ್ಲ.

12010022a ಶಕ್ಯಂ ಪುನರರಣ್ಯೇಷು ಸುಖಮೇಕೇನ ಜೀವಿತುಮ್।
12010022c ಅಬಿಭ್ರತಾ ಪುತ್ರಪೌತ್ರಾನ್ದೇವರ್ಷೀನತಿಥೀನ್ಪಿತೃನ್।।

ಪುತ್ರ-ಪೌತ್ರರನ್ನು ಸಾಕಲಾಗದವನು ಮತ್ತು ದೇವರ್ಷಿ-ಅತಿಥಿ-ಪಿತೃಗಳನ್ನು ತೃಪ್ತಿಪಡಿಸಲಾಗದವನು ಏಕಾಕಿಯಾಗಿ ಅರಣ್ಯದಲ್ಲಿ ಸುಖವಾಗಿ ಜೀವಿಸಬಹುದು.

12010023a ನೇಮೇ ಮೃಗಾಃ ಸ್ವರ್ಗಜಿತೋ ನ ವರಾಹಾ ನ ಪಕ್ಷಿಣಃ।
12010023c ಅಥೈತೇನ ಪ್ರಕಾರೇಣ ಪುಣ್ಯಮಾಹುರ್ನ ತಾನ್ಜನಾಃ।।

ಅರಣ್ಯದಲ್ಲಿ ಜೀವಿಸುವುದರಿಂದ ಮಾತ್ರಕ್ಕೆ ಸ್ವರ್ಗವು ದೊರೆಯುವುದಿಲ್ಲ. ಹಾಗಿದ್ದರೆ ಅರಣ್ಯದಲ್ಲಿ ವಾಸಿಸುವ ಜಿಂಕೆ-ಹಂದಿ-ಪಕ್ಷಿಗಳು ಅದೇ ಪ್ರಕಾರವಾಗಿ ಪುಣ್ಯವಂತರೆಂದು ಜನರು ಹೇಳುತ್ತಿದ್ದರು.

12010024a ಯದಿ ಸಂನ್ಯಾಸತಃ ಸಿದ್ಧಿಂ ರಾಜನ್ಕಶ್ಚಿದವಾಪ್ನುಯಾತ್।
12010024c ಪರ್ವತಾಶ್ಚ ದ್ರುಮಾಶ್ಚೈವ ಕ್ಷಿಪ್ರಂ ಸಿದ್ಧಿಮವಾಪ್ನುಯುಃ।।

ರಾಜನ್! ಒಂದು ವೇಳೆ ಸಂನ್ಯಾಸದಿಂದ ಸಿದ್ಧಿಯು ದೊರಕುತ್ತದೆಯೆಂತಾದರೆ ಪರ್ವತ-ವೃಕ್ಷಗಳು ಕ್ಷಿಪ್ರವಾಗಿ ಸಿದ್ಧಿಯನ್ನು ಪಡೆದುಕೊಂಡು ಬಿಡುತ್ತಿದ್ದವು!

12010025a ಏತೇ ಹಿ ನಿತ್ಯಸಂನ್ಯಾಸಾ ದೃಶ್ಯಂತೇ ನಿರುಪದ್ರವಾಃ।
12010025c ಅಪರಿಗ್ರಹವಂತಶ್ಚ ಸತತಂ ಚಾತ್ಮಚಾರಿಣಃ।।

ಇವುಗಳು ನಿತ್ಯ ಸಂನ್ಯಾಸಿಗಳಂತೆಯೇ ತೋರುತ್ತವೆ. ಯಾರಿಗೂ ಉಪದ್ರವವನ್ನು ಕೊಡುವುದಿಲ್ಲ. ಯಾರಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಸತತವೂ ಆತ್ಮವ್ರತದಲ್ಲಿಯೇ ಇರುತ್ತವೆ.

12010026a ಅಥ ಚೇದಾತ್ಮಭಾಗ್ಯೇಷು ನಾನ್ಯೇಷಾಂ ಸಿದ್ಧಿಮಶ್ನುತೇ।
12010026c ತಸ್ಮಾತ್ಕರ್ಮೈವ ಕರ್ತವ್ಯಂ ನಾಸ್ತಿ ಸಿದ್ಧಿರಕರ್ಮಣಃ।।

ನಮ್ಮ ಭಾಗ್ಯಗಳಲ್ಲಿ ಅನ್ಯರ ಸಿದ್ಧಿಗಳು ಪಾಲ್ಗೊಳ್ಳುವುದಿಲ್ಲ. ಆದುದರಿಂದ ಕರ್ಮ-ಕರ್ತವ್ಯಗಳಿಂದಲೇ ಸಿದ್ಧಿಯು ನಮಗೆ ದೊರೆಯುತ್ತದೆ. ಕರ್ಮಗಳನ್ನು ತ್ಯಜಿಸುವುದರಿಂದಲ್ಲ!

12010027a ಔದಕಾಃ ಸೃಷ್ಟಯಶ್ಚೈವ ಜಂತವಃ ಸಿದ್ಧಿಮಾಪ್ನುಯುಃ।
12010027c ಯೇಷಾಮಾತ್ಮೈವ ಭರ್ತವ್ಯೋ ನಾನ್ಯಃ ಕಶ್ಚನ ವಿದ್ಯತೇ।।

ಅನ್ಯರ ಭರಣ-ಪೋಷಣ ಮಾಡದೇ ತನ್ನನ್ನೇ ನೋಡಿಕೊಳ್ಳುವುದರಿಂದ ಸಿದ್ಧಿಯು ದೊರೆಯುತ್ತದೆ ಎಂತಾದರೆ ಭೂಮಿಯ ಮೇಲಿರುವ ಎಲ್ಲ ಜಲಚರ ಪ್ರಾಣಿಗಳೂ ಸಿದ್ಧಿಯನ್ನು ಪಡೆಯಬೇಕಾಗಿದ್ದಿತು.

12010028a ಅವೇಕ್ಷಸ್ವ ಯಥಾ ಸ್ವೈಃ ಸ್ವೈಃ ಕರ್ಮಭಿರ್ವ್ಯಾಪೃತಂ ಜಗತ್।
12010028c ತಸ್ಮಾತ್ಕರ್ಮೈವ ಕರ್ತವ್ಯಂ ನಾಸ್ತಿ ಸಿದ್ಧಿರಕರ್ಮಣಃ।।

ತಮ್ಮ ತಮ್ಮ ಕರ್ಮಗಳಿಂದ ಈ ಅಖಂಡ ವಿಶ್ವವೂ ಬಂಧಿಸಿಕೊಂಡಿರುವುದನ್ನು ನೋಡು. ಆದುದರಿಂದ ಕರ್ಮವೇ ಕರ್ತವ್ಯ. ಕರ್ಮಗಳನ್ನು ಮಾಡದೇ ಇರುವುದರಿಂದ ಸಿದ್ಧಿಯು ಇಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮವಾಕ್ಯೇ ದಶಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮವಾಕ್ಯ ಎನ್ನುವ ಹತ್ತನೇ ಅಧ್ಯಾಯವು.