ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 8
ಸಾರ
ಧನದಿಂದಲೇ ಧರ್ಮವು ಸ್ರವಿಸುತ್ತದೆ ಮತ್ತು ರಾಜನಾದವನು ಯಜ್ಞಯಾಗಾದಿಗಳಿಂದ ಪವಿತ್ರನಾಗಬಲ್ಲನು ಎಂದು ಅರ್ಜುನನು ಯುಧಿಷ್ಠಿರನಿಗೆ ಕ್ಷತ್ರಿಯಧರ್ಮವನ್ನು ತೊರೆಯದಿರಲು ಕೇಳಿಕೊಳ್ಳುವುದು (1-37).
12008001 ವೈಶಂಪಾಯನ ಉವಾಚ।
12008001a ಅಥಾರ್ಜುನ ಉವಾಚೇದಮಧಿಕ್ಷಿಪ್ತ ಇವಾಕ್ಷಮೀ।
12008001c ಅಭಿನೀತತರಂ ವಾಕ್ಯಂ ದೃಢವಾದಪರಾಕ್ರಮಃ।।
12008002a ದರ್ಶಯನ್ನೈಂದ್ರಿರಾತ್ಮಾನಮುಗ್ರಮುಗ್ರಪರಾಕ್ರಮಃ।
12008002c ಸ್ಮಯಮಾನೋ ಮಹಾತೇಜಾಃ ಸೃಕ್ಕಿಣೀ ಸಂಲಿಹನ್ಮುಹುಃ।।
ವೈಶಂಪಾಯನನು ಹೇಳಿದನು: “ಆಗ ವಾದದಲ್ಲಿ ದೃಢ ಪರಾಕ್ರಮಿಯಾಗಿದ್ದ ಮಹಾತೇಜಸ್ವೀ ಐಂದ್ರಿ ಅರ್ಜುನನು ತನ್ನ ಉಗ್ರ ಪರಾಕ್ರಮವನ್ನು ತೋರಿಸುತ್ತಾ ಅವಡುಗಳನ್ನು ಕಚ್ಚುತ್ತಾ, ಗಹ-ಗಹಿಸಿ ನಗುತ್ತಾ ಈ ನೀತಿತರ ವಾಕ್ಯಗಳನ್ನಾಡಿದನು:
12008003a ಅಹೋ ದುಃಖಮಹೋ ಕೃಚ್ಚ್ರಮಹೋ ವೈಕ್ಲವ್ಯಮುತ್ತಮಮ್।
12008003c ಯತ್ಕೃತ್ವಾಮಾನುಷಂ ಕರ್ಮ ತ್ಯಜೇಥಾಃ ಶ್ರಿಯಮುತ್ತಮಾಮ್।।
“ಅಯ್ಯೋ! ಅಮಾನುಷ ಕರ್ಮಗಳನ್ನು ಮಾಡಿ ಪಡೆದಿರುವ ಈ ಉತ್ತಮ ರಾಜ್ಯಲಕ್ಷ್ಮಿಯನ್ನು ತ್ಯಜಿಸಬೇಕೆಂದಿರುವ ನಿನ್ನ ಈ ನಿರ್ಧಾರವು ಅತ್ಯಂತ ದುಃಖಕರವೂ, ಕಷ್ಟಕರವೂ, ಮಿತಿಮೀರಿದುದೂ ಆಗಿದೆ.
12008004a ಶತ್ರೂನ್ಹತ್ವಾ ಮಹೀಂ ಲಬ್ಧ್ವಾ ಸ್ವಧರ್ಮೇಣೋಪಪಾದಿತಾಮ್।
12008004c ಹತಾಮಿತ್ರಃ ಕಥಂ ಸರ್ವಂ ತ್ಯಜೇಥಾ ಬುದ್ಧಿಲಾಘವಾತ್।।
ಶತ್ರುಗಳನ್ನು ಸಂಹರಿಸಿ ಸ್ವಧರ್ಮದಿಂದ ಜಯಿಸಲ್ಪಟ್ಟಿರುವ ಈ ಭೂಮಿಯನ್ನು ಪಡೆದುಕೊಂಡ ನಂತರ ಎಲ್ಲ ಶತ್ರುಗಳನ್ನು ಕಳೆದುಕೊಂಡ ನೀನು ನಿನ್ನ ಅಲ್ಪಬುದ್ಧಿಯಿಂದ ಅದನ್ನು ಹೇಗೆ ತಾನೇ ತ್ಯಜಿಸಬಲ್ಲೆ?
12008005a ಕ್ಲೀಬಸ್ಯ ಹಿ ಕುತೋ ರಾಜ್ಯಂ ದೀರ್ಘಸೂತ್ರಸ್ಯ ವಾ ಪುನಃ।
12008005c ಕಿಮರ್ಥಂ ಚ ಮಹೀಪಾಲಾನವಧೀಃ ಕ್ರೋಧಮೂರ್ಚಿತಃ।।
ಹೇಡಿಗಾಗಲೀ ಸೋಮಾರಿಗಾಗಲಿ ರಾಜ್ಯವು ಹೇಗೆ ಲಭಿಸೀತು? ನಿನಗೆ ರಾಜ್ಯವು ಬೇಡವಾಗಿದ್ದರೆ ಯಾವಕಾರಣಕ್ಕಾಗಿ ಕ್ರೋಧಮೂರ್ಛಿತನಾಗಿ ಮಹೀಪಾಲರನ್ನು ವಧಿಸಿದೆ?
12008006a ಯೋ ಹ್ಯಾಜಿಜೀವಿಷೇದ್ಭೈಕ್ಷ್ಯಂ ಕರ್ಮಣಾ ನೈವ ಕೇನ ಚಿತ್।
12008006c ಸಮಾರಂಭಾನ್ಬುಭೂಷೇತ ಹತಸ್ವಸ್ತಿರಕಿಂಚನಃ।।
12008006e ಸರ್ವಲೋಕೇಷು ವಿಖ್ಯಾತೋ ನ ಪುತ್ರಪಶುಸಂಹಿತಃ।।
ಎಲ್ಲ ಸಾಧನಗಳೆಲ್ಲವೂ ನಷ್ಟವಾಗಿರುವವನು, ದಟ್ಟ ದರಿದ್ರನು, ಪ್ರಪಂಚದಲ್ಲಿ ಹೇಳಹೆಸರಿಲ್ಲದವನು, ಪುತ್ರ-ಪಶುಗಳಿಲ್ಲದವನು ಭಿಕ್ಷೆಯ ಜೀವನವನ್ನು ನಡೆಸಲು ಅಪೇಕ್ಷಿಸುವುದು ಯೋಗ್ಯವಾಗಿದೆ.
12008007a ಕಾಪಾಲೀಂ ನೃಪ ಪಾಪಿಷ್ಠಾಂ ವೃತ್ತಿಮಾಸ್ಥಾಯ ಜೀವತಃ।
12008007c ಸಂತ್ಯಜ್ಯ ರಾಜ್ಯಮೃದ್ಧಂ ತೇ ಲೋಕೋಽಯಂ ಕಿಂ ವದಿಷ್ಯತಿ।।
ನೃಪ! ಸಮೃದ್ಧ ರಾಜ್ಯವನ್ನು ತೊರೆದು, ಕಪಾಲವನ್ನು ಹಿಡಿದು, ಅತ್ಯಂತ ನೀಚವೃತ್ತಿಯಿಂದ ಜೀವಿಸುವ ನಿನ್ನನ್ನು ನೋಡಿ ಈ ಲೋಕವಾದರೂ ಏನೆಂದೀತು?
12008008a ಸರ್ವಾರಂಭಾನ್ಸಮುತ್ಸೃಜ್ಯ ಹತಸ್ವಸ್ತಿರಕಿಂಚನಃ।
12008008c ಕಸ್ಮಾದಾಶಂಸಸೇ ಭೈಕ್ಷ್ಯಂ ಚರ್ತುಂ ಪ್ರಾಕೃತವತ್ಪ್ರಭೋ।।
ಪ್ರಭೋ! ಎಲ್ಲವನ್ನೂ ಪರಿತ್ಯಜಿಸಿ, ಮಂಗಳಕರ ಕಾರ್ಯಗಳೆಲ್ಲವುಗಳ ವಿಹೀನನಾಗಿ, ಓರ್ವ ಸಾಮಾನ್ಯ ಭಿಕ್ಷುಕನಂತೆ ಏಕೆ ತಿರುಗಲು ಬಯಸುತ್ತಿರುವೆ?
12008009a ಅಸ್ಮಿನ್ರಾಜಕುಲೇ ಜಾತೋ ಜಿತ್ವಾ ಕೃತ್ಸ್ನಾಂ ವಸುಂಧರಾಮ್।
12008009c ಧರ್ಮಾರ್ಥಾವಖಿಲೌ ಹಿತ್ವಾ ವನಂ ಮೌಢ್ಯಾತ್ಪ್ರತಿಷ್ಠಸೇ।।
ಈ ರಾಜಕುಲದಲ್ಲಿ ಹುಟ್ಟಿ, ಇಡೀ ವಸುಂಧರೆಯನ್ನು ಗೆದ್ದು, ಧರ್ಮಾರ್ಥಗಳೆಲ್ಲವನ್ನೂ ತೊರೆದು ಮೂಢನಾಗಿ ವನಕ್ಕೆ ತೆರಳಲು ಸಿದ್ಧನಾಗಿರುವೆಯಲ್ಲ!
12008010a ಯದೀಮಾನಿ ಹವೀಂಷೀಹ ವಿಮಥಿಷ್ಯಂತ್ಯಸಾಧವಃ।
12008010c ಭವತಾ ವಿಪ್ರಹೀಣಾನಿ ಪ್ರಾಪ್ತಂ ತ್ವಾಮೇವ ಕಿಲ್ಬಿಷಮ್।।
ಒಂದು ವೇಳೆ ಈ ಹವಿಸ್ಸು-ಯಜ್ಞಸಾಮಗ್ರಿಗಳನ್ನು ದುಷ್ಟ ಜನರು ನಾಶಗೊಳಿಸಿದರೆ ನಿನ್ನಿಂದಲೇ ವಿಪ್ರರು ನಾಶರಾಗಿ ನಿನಗೇ ಪಾಪವು ತಗಲುತ್ತದೆ.
12008011a ಆಕಿಂಚನ್ಯಮನಾಶಾಸ್ಯಮಿತಿ ವೈ ನಹುಷೋಽಬ್ರವೀತ್।
12008011c ಕೃತ್ಯಾ ನೃಶಂಸಾ ಹ್ಯಧನೇ ಧಿಗಸ್ತ್ವಧನತಾಮಿಹ।।
ನಹುಷನು ನಿರ್ಧನನಾಗಿದ್ದಾಗ ಕ್ರೂರ ಕರ್ಮಗಳನ್ನೆಸಗಿ “ನಿರ್ಧನತ್ವಕ್ಕೆ ಧಿಕ್ಕಾರ! ಸರ್ವವನ್ನೂ ತ್ಯಾಗಮಾಡಿ ದಾರಿದ್ರ್ಯವನ್ನು ಅನುಭವಿಸುವುದು ಮುನಿಗಳ ಧರ್ಮವಾಗಿದೆ. ಅದು ರಾಜನ ಧರ್ಮವಲ್ಲ!” ಎಂದು ಹೇಳಿದ್ದನು.
12008012a ಅಶ್ವಸ್ತನಮೃಷೀಣಾಂ ಹಿ ವಿದ್ಯತೇ ವೇದ ತದ್ ಭವಾನ್।
12008012c ಯಂ ತ್ವಿಮಂ ಧರ್ಮಮಿತ್ಯಾಹುರ್ಧನಾದೇಷ ಪ್ರವರ್ತತೇ।।
ನಾಳೆಗೆಂದು ಸಂಗ್ರಹಿಸದೇ ಆ ದಿನಕ್ಕೆ ಮಾತ್ರ ಭಿಕ್ಷೆಬೇಡುವುದು ಋಷಿಗಳ ಧರ್ಮವೆಂದು ನಿನಗೆ ತಿಳಿದೇ ಇದೆ. ಅದೇ ರೀತಿಯಲ್ಲಿ ಯಾವುದನ್ನು ಕ್ಷತ್ರಿಯ ಧರ್ಮವೆಂದು ಕರೆಯುತ್ತಾರೋ ಅದು ಧನದಿಂದಲೇ ಸಂಪನ್ನವಾಗುತ್ತದೆ.
12008013a ಧರ್ಮಂ ಸಂಹರತೇ ತಸ್ಯ ಧನಂ ಹರತಿ ಯಸ್ಯ ಯಃ।
12008013c ಹ್ರಿಯಮಾಣೇ ಧನೇ ರಾಜನ್ವಯಂ ಕಸ್ಯ ಕ್ಷಮೇಮಹಿ।।
ಯಾರ ಧನವನ್ನು ಅಪಹರಿಸಿದರೂ ಅವರ ಧರ್ಮವನ್ನು ಅಪಹರಿಸಿದಂತೆ. ರಾಜನ್! ಧನವನ್ನೇ ಅಪಹರಿಸಿದರೆ ನಾವು ಯಾವ ಧರ್ಮಾಚರಣೆಯನ್ನು ಮಾಡಲು ಸಮರ್ಥರಾಗಿರುತ್ತೇವೆ?
12008014a ಅಭಿಶಸ್ತವತ್ಪ್ರಪಶ್ಯಂತಿ ದರಿದ್ರಂ ಪಾರ್ಶ್ವತಃ ಸ್ಥಿತಮ್।
12008014c ದಾರಿದ್ರ್ಯಂ ಪಾತಕಂ ಲೋಕೇ ಕಸ್ತಚ್ಚಂಸಿತುಮರ್ಹತಿ।।
ಪಕ್ಕದಲ್ಲಿ ನಿಂತಿರುವ ದರಿದ್ರನನ್ನು ನೋಡಿ ಜನರು “ಇವನೆಲ್ಲೋ ಶಾಪಗ್ರಸ್ತನಾಗಿ ಹುಟ್ಟಿದ್ದಾನೆ!” ಎಂದು ಭಾವಿಸುತ್ತಾರೆ. ಲೋಕದಲ್ಲಿ ಪಾತಕವೆಂದೇ ತಿಳಿಯಲ್ಪಟ್ಟಿರುವ ದಾರಿದ್ರ್ಯವನ್ನು ನೀನು ಹೇಗೆ ಪ್ರಶಂಸಿಸುತ್ತಿರುವೆ?
12008015a ಪತಿತಃ ಶೋಚ್ಯತೇ ರಾಜನ್ನಿರ್ಧನಶ್ಚಾಪಿ ಶೋಚ್ಯತೇ।
12008015c ವಿಶೇಷಂ ನಾಧಿಗಚ್ಚಾಮಿ ಪತಿತಸ್ಯಾಧನಸ್ಯ ಚ।।
ರಾಜನ್! ಪತಿತನು ಶೋಕದಲ್ಲಿರುತ್ತಾನೆ. ನಿರ್ಧನನೂ ಶೋಕಿಸುತ್ತಿರುತ್ತಾನೆ. ಆದುದರಿಂದ ಪತಿತ ಮತ್ತು ನಿರ್ಧನಿಕನಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ.
12008016a ಅರ್ಥೇಭ್ಯೋ ಹಿ ವಿವೃದ್ಧೇಭ್ಯಃ ಸಂಭೃತೇಭ್ಯಸ್ತತಸ್ತತಃ।
12008016c ಕ್ರಿಯಾಃ ಸರ್ವಾಃ ಪ್ರವರ್ತಂತೇ ಪರ್ವತೇಭ್ಯ ಇವಾಪಗಾಃ।।
ಪರ್ವತಗಳಿಂದ ಅನೇಕ ನದಿಗಳು ಹುಟ್ಟಿ ಹರಿಯುವಂತೆ ಅಲ್ಲಲ್ಲಿಂದ ಕಪ್ಪ-ಕಾಣಿಕೆಗಳ ರೂಪದಲ್ಲಿ ವೃದ್ಧಿಹೊಂದುವ ಐಶ್ವರ್ಯಗಳಿಂದಲೇ ಎಲ್ಲ ಶುಭಕರ್ಮಗಳೂ ಪ್ರವೃತ್ತವಾಗುತ್ತವೆ.
12008017a ಅರ್ಥಾದ್ಧರ್ಮಶ್ಚ ಕಾಮಶ್ಚ ಸ್ವರ್ಗಶ್ಚೈವ ನರಾಧಿಪ।
12008017c ಪ್ರಾಣಯಾತ್ರಾ ಹಿ ಲೋಕಸ್ಯ ವಿನಾರ್ಥಂ ನ ಪ್ರಸಿಧ್ಯತಿ।।
ನರಾಧಿಪ! ಅರ್ಥದಿಂದಲೇ ಧರ್ಮ, ಕಾಮ ಮತ್ತು ಸ್ವರ್ಗಗಳ ಸಾಧ್ಯತೆಗಳಿವೆ. ಅರ್ಥವಿಲ್ಲದೇ ಲೋಕದ ಪ್ರಾಣಯಾತ್ರೆಯೇ ನಡೆಯುವುದಿಲ್ಲ.
12008018a ಅರ್ಥೇನ ಹಿ ವಿಹೀನಸ್ಯ ಪುರುಷಸ್ಯಾಲ್ಪಮೇಧಸಃ।
12008018c ವ್ಯುಚ್ಚಿದ್ಯಂತೇ ಕ್ರಿಯಾಃ ಸರ್ವಾ ಗ್ರೀಷ್ಮೇ ಕುಸರಿತೋ ಯಥಾ।।
ಗ್ರೀಷ್ಮಋತುವಿನಲ್ಲಿ ಚಿಕ್ಕ-ಪುಟ್ಟ ನದಿಗಳು ಒಣಗಿಹೋಗುವಂತೆ ಅಲ್ಪಬುದ್ಧಿಯುಳ್ಳ ಮತ್ತು ಧನವಿಹೀನನಾದ ಪುರುಷನ ಕಾರ್ಯಗಳೆಲ್ಲವೂ ನಾಮಾವಶೇಷವಾಗುತ್ತವೆ.
12008019a ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ।
12008019c ಯಸ್ಯಾರ್ಥಾಃ ಸ ಪುಮಾಽಲ್ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ।।
ಧನವಿರುವವನಿಗೆ ಮಿತ್ರರಿರುತ್ತಾರೆ. ಧನವಿರುವವನಿಗೆ ಬಾಂಧವರಿರುತ್ತಾರೆ. ಧನವಿದ್ದರೇ ಲೋಕದಲ್ಲಿ ಪುರುಷನೆನಿಸಿಕೊಳ್ಳುತ್ತಾನೆ. ಐಶ್ವರ್ಯಗಳುಳ್ಳವನನ್ನೇ ಪಂಡಿತನೆಂದೂ ಕರೆಯುವರು.
12008020a ಅಧನೇನಾರ್ಥಕಾಮೇನ ನಾರ್ಥಃ ಶಕ್ಯೋ ವಿವಿತ್ಸತಾ।
12008020c ಅರ್ಥೈರರ್ಥಾ ನಿಬಧ್ಯಂತೇ ಗಜೈರಿವ ಮಹಾಗಜಾಃ।।
ದರಿದ್ರನಾದವನು ಬಯಸಿದರೂ ಅಧಿಕ ಧನವನ್ನು ಸಂಪಾದಿಸಲು ಶಕ್ಯನಾಗುವುದಿಲ್ಲ. ಆನೆಗಳಿಂದ ಮಹಾಗಜಗಳು ಹುಟ್ಟುವಂತೆ ಧನದಿಂದಲೇ ಅಪಾರ ಸಂಪತ್ತನ್ನು ಗಳಿಸಬಲ್ಲೆವು.
12008021a ಧರ್ಮಃ ಕಾಮಶ್ಚ ಸ್ವರ್ಗಶ್ಚ ಹರ್ಷಃ ಕ್ರೋಧಃ ಶ್ರುತಂ ದಮಃ।
12008021c ಅರ್ಥಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ।।
ನರಾಧಿಪ! ಧರ್ಮ, ಕಾಮ, ಸ್ವರ್ಗ, ಹರ್ಷ, ಕ್ರೋಧ, ವಿದ್ಯೆ, ದಮ, ಇವೆಲ್ಲವೂ ಧನದಿಂದಲೇ ಹುಟ್ಟುತ್ತವೆ.
12008022a ಧನಾತ್ಕುಲಂ ಪ್ರಭವತಿ ಧನಾದ್ಧರ್ಮಃ ಪ್ರವರ್ತತೇ।
12008022c ನಾಧನಸ್ಯಾಸ್ತ್ಯಯಂ ಲೋಕೋ ನ ಪರಃ ಪುರುಷೋತ್ತಮ।।
ಪುರುಷೋತ್ತಮ! ಧನದಿಂದ ಕುಲವು ವೃದ್ಧಿಹೊಂದುತ್ತದೆ ಮತ್ತು ಧನದಿಂದ ಧರ್ಮವು ಬೆಳೆಯುತ್ತದೆ. ಧನವಿಲ್ಲದವನಿಗೆ ಈ ಲೋಕದಲ್ಲಿ ಸುಖವಿಲ್ಲ.
12008023a ನಾಧನೋ ಧರ್ಮಕೃತ್ಯಾನಿ ಯಥಾವದನುತಿಷ್ಠತಿ।
12008023c ಧನಾದ್ಧಿ ಧರ್ಮಃ ಸ್ರವತಿ ಶೈಲಾದ್ಗಿರಿನದೀ ಯಥಾ।।
ನಿರ್ಧನನು ಧರ್ಮಕೃತ್ಯಗಳನ್ನು ಯಥಾಶಾಸ್ತ್ರವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಶೈಲದಿಂದ ಗಿರಿನದಿಯು ಸ್ರವಿಸುವಂತೆ ಧನದಿಂದಲೇ ಧರ್ಮವು ಸ್ರವಿಸುತ್ತದೆ.
12008024a ಯಃ ಕೃಶಾಶ್ವಃ ಕೃಶಗವಃ ಕೃಶಭೃತ್ಯಃ ಕೃಶಾತಿಥಿಃ।
12008024c ಸ ವೈ ರಾಜನ್ಕೃಶೋ ನಾಮ ನ ಶರೀರಕೃಶಃ ಕೃಶಃ।।
ರಾಜನ್! ಕೇವಲ ಶರೀರದಲ್ಲಿ ಕೃಶನಾಗಿರುವವನಿಗೆ ಕೃಶನೆಂದು ಕರೆಯುವುದಿಲ್ಲ. ಅಶ್ವಧನವಿಲ್ಲದವನು, ಗೋಧನವಿಲ್ಲದವನು, ಸೇವಕರಿಲ್ಲದವನು ಮತ್ತು ಅತಿಥಿಗಳಿಲ್ಲದವನನ್ನೂ ಕೃಶನೆಂದೇ ಕರೆಯುತ್ತಾರೆ.
12008025a ಅವೇಕ್ಷಸ್ವ ಯಥಾನ್ಯಾಯಂ ಪಶ್ಯ ದೇವಾಸುರಂ ಯಥಾ।
12008025c ರಾಜನ್ಕಿಮನ್ಯನ್ಜ್ಞಾತೀನಾಂ ವಧಾದೃಧ್ಯಂತಿ ದೇವತಾಃ।।
ರಾಜನ್! ಯಥಾನ್ಯಾಯವಾಗಿ ದೇವಾಸುರರನ್ನು ನೋಡು! ದೇವತೆಗಳು ವೃದ್ಧಿಗಾಗಿ ತಮ್ಮ ದಾಯಾದಿಗಳಾದ ಅಸುರರ ವಧೆಯನ್ನಲ್ಲದೇ ಬೇರೆ ಏನನ್ನು ಬಯಸುತ್ತಾರೆ?
12008026a ನ ಚೇದ್ಧರ್ತವ್ಯಮನ್ಯಸ್ಯ ಕಥಂ ತದ್ಧರ್ಮಮಾರಭೇತ್।
12008026c ಏತಾವಾನೇವ ವೇದೇಷು ನಿಶ್ಚಯಃ ಕವಿಭಿಃ ಕೃತಃ।।
ರಾಜನಾದವನು ಇನ್ನೊಬ್ಬರ ಧನವನ್ನು ತೆಗೆದುಕೊಳ್ಳದೇ ಧರ್ಮಕಾರ್ಯಗಳನ್ನು ಹೇಗೆ ಮಾಡಬಹುದು? ಇದನ್ನೇ ರಾಜಧರ್ಮವೆಂದು ತಿಳಿದವರು ವೇದಗಳಲ್ಲಿ ನಿಶ್ಚಯಿಸಿದ್ದಾರೆ.
12008027a ಅಧ್ಯೇತವ್ಯಾ ತ್ರಯೀ ವಿದ್ಯಾ ಭವಿತವ್ಯಂ ವಿಪಶ್ಚಿತಾ।
12008027c ಸರ್ವಥಾ ಧನಮಾಹಾರ್ಯಂ ಯಷ್ಟವ್ಯಂ ಚಾಪಿ ಯತ್ನತಃ।।
ರಾಜನಾದವನು ವೇದಾಧ್ಯಯನ ಮಾಡುತ್ತಿರಬೇಕು. ವಿದ್ವಾಂಸನಾಗಿರಬೇಕು. ಸರ್ವಪ್ರಕಾರಗಳಿಂದಲೂ ಧನವನ್ನು ಸಂಗ್ರಹಿಸಬೇಕು ಮತ್ತು ಪ್ರಯತ್ನಪಟ್ಟು ಯಜ್ಞಗಳನ್ನು ಮಾಡಬೇಕು.
12008028a ದ್ರೋಹಾದ್ದೇವೈರವಾಪ್ತಾನಿ ದಿವಿ ಸ್ಥಾನಾನಿ ಸರ್ವಶಃ।
12008028c ಇತಿ ದೇವಾ ವ್ಯವಸಿತಾ ವೇದವಾದಾಶ್ಚ ಶಾಶ್ವತಾಃ।।
ದ್ರೋಹದಿಂದಲೇ ದೇವತೆಗಳು ದಿವಿಯಲ್ಲಿ ಎಲ್ಲ ಸ್ಥಾನಗಳನ್ನೂ ಪಡೆದಿದ್ದಾರೆ. ಇದನ್ನೇ ದೇವತೆಗಳು ಲೋಕವ್ಯವಸ್ಥೆಯನ್ನಾಗಿ ಮಾಡಿರುತ್ತಾರೆ. ಶಾಶ್ವತ ವೇದಗಳೂ ಇವನ್ನೇ ಹೇಳುತ್ತವೆ.
12008029a ಅಧೀಯಂತೇ ತಪಸ್ಯಂತಿ ಯಜಂತೇ ಯಾಜಯಂತಿ ಚ।
12008029c ಕೃತ್ಸ್ನಂ ತದೇವ ಚ ಶ್ರೇಯೋ ಯದಪ್ಯಾದದತೇಽನ್ಯತಃ।।
ಧನದಿಂದಲೇ ಬ್ರಾಹ್ಮಣರು ಅಧ್ಯಯನಮಾಡುತ್ತಾರೆ. ತಪಸ್ಸನ್ನಾಚರಿಸುತ್ತಾರೆ. ಯಜ್ಞಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಇವೆಲ್ಲವೂ ಮತ್ತು ಶ್ರೇಯಸ್ಸೂ ಧನದಿಂದಲೇ ದೊರೆಯುತ್ತದೆ. ಬೇರೆಯಾವುದರಿಂದಲೂ ಅಲ್ಲ.
12008030a ನ ಪಶ್ಯಾಮೋಽನಪಹೃತಂ ಧನಂ ಕಿಂ ಚಿತ್ಕ್ವ ಚಿದ್ವಯಮ್।
12008030c ಏವಮೇವ ಹಿ ರಾಜಾನೋ ಜಯಂತಿ ಪೃಥಿವೀಮಿಮಾಮ್।।
ಇನ್ನೊಬ್ಬನಿಂದ ಅಪಹರಿಸದೇ ಸಂಪಾದಿಸಿರುವ ಕಿಂಚಿತ್ತು ಧನವನ್ನೂ ನಾವು ಕಾಣುವುದಿಲ್ಲ. ಇದೇ ರೀತಿಯಲ್ಲಿ ರಾಜರು ಈ ಭೂಮಿಯನ್ನು ಜಯಿಸುತ್ತಾರೆ.
12008031a ಜಿತ್ವಾ ಮಮತ್ವಂ ಬ್ರುವತೇ ಪುತ್ರಾ ಇವ ಪಿತುರ್ಧನೇ।
12008031c ರಾಜರ್ಷಯೋ ಜಿತಸ್ವರ್ಗಾ ಧರ್ಮೋ ಹ್ಯೇಷಾಂ ನಿಗದ್ಯತೇ।।
ಮಕ್ಕಳು ತಂದೆಯ ಆಸ್ತಿಯನ್ನು ತಮ್ಮದೆಂದೇ ಹೇಳಿಕೊಳ್ಳುವಂತೆ ಶತ್ರುವಿನಿಂದ ಗೆದ್ದ ಭೂಮಿಯನ್ನೂ ರಾಜರು ತಮ್ಮದೆಂದೇ ಹೇಳಿಕೊಳ್ಳುತ್ತಾರೆ. ಈ ರೀತಿ ಧರ್ಮಮಾರ್ಗದಲ್ಲಿ ನಡೆದು ರಾಜರ್ಷಿಗಳು ಸ್ವರ್ಗಗಳನ್ನು ಗೆದ್ದಿದ್ದಾರೆ.
12008032a ಯಥೈವ ಪೂರ್ಣಾದುದಧೇಃ ಸ್ಯಂದಂತ್ಯಾಪೋ ದಿಶೋ ದಶ।
12008032c ಏವಂ ರಾಜಕುಲಾದ್ವಿತ್ತಂ ಪೃಥಿವೀಂ ಪ್ರತಿತಿಷ್ಠತಿ।।
ಮೋಡಗಳ ಮೂಲಕ ಸಮುದ್ರದ ನೀರು ಹತ್ತು ದಿಕ್ಕುಗಳಿಗೂ ಪಸರಿಸುವಂತೆ ರಾಜಕುಲದಿಂದ ವಿತ್ತವು ಪೃಥ್ವಿಯಲ್ಲಿ ಪಸರಿಸಿಕೊಳ್ಳುತ್ತದೆ.
12008033a ಆಸೀದಿಯಂ ದಿಲೀಪಸ್ಯ ನೃಗಸ್ಯ ನಹುಷಸ್ಯ ಚ।
12008033c ಅಂಬರೀಷಸ್ಯ ಮಾಂಧಾತುಃ ಪೃಥಿವೀ ಸಾ ತ್ವಯಿ ಸ್ಥಿತಾ।।
ಈ ಪೃಥ್ವಿಯು ಹಿಂದೆ ದಿಲೀಪನದಾಗಿತ್ತು. ನೃಗ, ನಹುಷ, ಅಂಬರೀಷ ಮತ್ತು ಮಾಂಧಾತರದ್ದಾಗಿತ್ತು. ಅದೇ ಭೂಮಿಯು ಈಗ ನಿನ್ನನ್ನು ಅವಲಂಬಿಸಿದೆ.
12008034a ಸ ತ್ವಾಂ ದ್ರವ್ಯಮಯೋ ಯಜ್ಞಃ ಸಂಪ್ರಾಪ್ತಃ ಸರ್ವದಕ್ಷಿಣಃ।
12008034c ತಂ ಚೇನ್ನ ಯಜಸೇ ರಾಜನ್ಪ್ರಾಪ್ತಸ್ತ್ವಂ ದೇವಕಿಲ್ಬಿಷಮ್।।
ರಾಜನ್! ಸರ್ವದಕ್ಷಿಣೆಗಳಿಂದ ಕೂಡಿದ ದ್ರವ್ಯಮಯ ಯಜ್ಞಗಳನ್ನು ನೀನು ಯಜಿಸದೇ ಇದ್ದರೆ ದೇವತೆಗಳಿಗೆಸಗುವ ಪಾಪವನ್ನು ಪಡೆದುಕೊಳ್ಳುವೆ.
12008035a ಯೇಷಾಂ ರಾಜಾಶ್ವಮೇಧೇನ ಯಜತೇ ದಕ್ಷಿಣಾವತಾ।
12008035c ಉಪೇತ್ಯ ತಸ್ಯಾವಭೃಥಂ ಪೂತಾಃ ಸರ್ವೇ ಭವಂತಿ ತೇ।।
ರಾಜನು ದಕ್ಷಿಣೆಗಳಿಂದ ಕೂಡಿದ ಅಶ್ವಮೇಧಯಜ್ಞವನ್ನು ಯಜಿಸಿದರೆ ಅದರ ಅವಭೃಥಕ್ಕೆ ಸೇರಿದ ಎಲ್ಲರೂ ಪವಿತ್ರರಾಗುತ್ತಾರೆ.
12008036a ವಿಶ್ವರೂಪೋ ಮಹಾದೇವಃ ಸರ್ವಮೇಧೇ ಮಹಾಮಖೇ।
12008036c ಜುಹಾವ ಸರ್ವಭೂತಾನಿ ತಥೈವಾತ್ಮಾನಮಾತ್ಮನಾ।।
ವಿಶ್ವರೂಪೀ ಮಹಾದೇವನು ಸರ್ವಮೇಧವೆಂಬ ಮಹಾ ಯಜ್ಞದಲ್ಲಿ ಸರ್ವಭೂತಗಳನ್ನೂ ಆಹುತಿಯನ್ನಾಗಿತ್ತು ಅತ್ಮಾರ್ಪಣೆಯನ್ನೂ ಮಾಡಿಕೊಂಡನು.
12008037a ಶಾಶ್ವತೋಽಯಂ ಭೂತಿಪಥೋ ನಾಸ್ಯಾಂತಮನುಶುಶ್ರುಮ।
12008037c ಮಹಾನ್ದಾಶರಥಃ ಪಂಥಾ1 ಮಾ ರಾಜನ್ಕಾಪಥಂ ಗಮಃ।।
ರಾಜನ್! ಇದೊಂದು ಶಾಶ್ವತ ಮಾರ್ಗವಾಗಿರುವುದು. ಇದು ಕೊನೆಗೊಂಡಿದುದರ ಕುರಿತು ನಾವು ಕೇಳೇ ಇಲ್ಲ. ಹತ್ತು ರಥಗಳುಳ್ಳ ಈ ಯಜ್ಞಗಳ ಮಹಾ ಮಾರ್ಗವನ್ನು ಬಿಟ್ಟು ಕೆಟ್ಟದಾರಿಯಲ್ಲಿ ಹೋಗಬೇಡ!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ಅಷ್ಠಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನ ವಾಕ್ಯ ಎನ್ನುವ ಎಂಟನೇ ಅಧ್ಯಾಯವು.
-
ದಾಶರಥಃ ಪಂಥಾಃ ಎನ್ನುವುದಕ್ಕೆ ಹತ್ತು ರಥಗಳಿರುವ ಯಜ್ಞ ಎಂದು ವ್ಯಾಖ್ಯಾನಮಾಡಿರುತ್ತಾರೆ. ಈ ಹತ್ತು ರಥಗಳು – ಪಶು, ಪತ್ನಿ, ಯಜಮಾನ, ಋಗ್ಯಜುಸ್ಸಾಮವೆಂಬ ಮೂರು ವೇದಗಳು, ಮತ್ತು ನಾಲ್ವರು ಋತ್ವಿಜರು. ದಶರಥಾಶ್ಚ ಪ್ರಚರಂತಿ ಯಸ್ಮಿನ್ ಸಃ ದಶರಥಃ ಸ ಏವ ದಾಶರಥಃ|| (ಭಾರತ ದರ್ಶನ). ↩︎