007 ಯುಧಿಷ್ಠಿರಪರಿವೇದನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 7

ಸಾರ

ಯುದ್ಧದಲ್ಲಿ ತನ್ನ ಬಂಧುಬಾಂಧವರು ನಾಶವಾದುದರಿಂದ ಪರಿತಾಪಗೊಂಡ ಯುಧಿಷ್ಠಿರನು ರಾಜ್ಯವನ್ನು ತ್ಯಜಿಸಿ ವನವನ್ನು ಸೇರುತ್ತೇನೆಂದು ನಿಶ್ಚಯಿಸಿ ಅರ್ಜುನನಿಗೆ ಹೇಳಿದುದು (1-41).

12007001 ವೈಶಂಪಾಯನ ಉವಾಚ।
12007001a ಯುಧಿಷ್ಠಿರಸ್ತು ಧರ್ಮಾತ್ಮಾ ಶೋಕವ್ಯಾಕುಲಚೇತನಃ।
12007001c ಶುಶೋಚ ದುಃಖಸಂತಪ್ತಃ ಸ್ಮೃತ್ವಾ ಕರ್ಣಂ ಮಹಾರಥಮ್।।

ವೈಶಂಪಾಯನನು ಹೇಳಿದನು: “ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು.

12007002a ಆವಿಷ್ಟೋ ದುಃಖಶೋಕಾಭ್ಯಾಂ ನಿಃಶ್ವಸಂಶ್ಚ ಪುನಃ ಪುನಃ।
12007002c ದೃಷ್ಟ್ವಾರ್ಜುನಮುವಾಚೇದಂ ವಚನಂ ಶೋಕಕರ್ಶಿತಃ।।

ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು ನೋಡಿ ಹೀಗೆಂದನು:

12007003a ಯದ್ಭೈಕ್ಷಮಾಚರಿಷ್ಯಾಮ ವೃಷ್ಣ್ಯಂಧಕಪುರೇ ವಯಮ್।
12007003c ಜ್ಞಾತೀನ್ನಿಷ್ಪುರುಷಾನ್ಕೃತ್ವಾ ನೇಮಾಂ ಪ್ರಾಪ್ಸ್ಯಾಮ ದುರ್ಗತಿಮ್।।

“ಒಂದು ವೇಳೆ ನಾವು ವೃಷ್ಣಿ-ಅಂಧಕರ ಪುರದಲ್ಲಿ ಭಿಕ್ಷಾಟನೆಯನ್ನೇ ಮಾಡಿದ್ದರೆ ಬಾಂಧವರನ್ನು ನಿರ್ಮೂಲನ ಮಾಡಿ ಈ ದುರ್ಗತಿಯನ್ನು ಪಡೆಯುತ್ತಿರಲಿಲ್ಲ.

12007004a ಅಮಿತ್ರಾ ನಃ ಸಮೃದ್ಧಾರ್ಥಾ ವೃತ್ತಾರ್ಥಾಃ ಕುರವಃ ಕಿಲ।
12007004c ಆತ್ಮಾನಮಾತ್ಮನಾ ಹತ್ವಾ ಕಿಂ ಧರ್ಮಫಲಮಾಪ್ನುಮಃ।।

ನಮ್ಮ ಶತ್ರುಗಳಾದ ಕೌರವರೇ ಸಮೃದ್ಧರೂ ಪರಮಾರ್ಥವುಳ್ಳವರೂ ಆಗಲಿಲ್ಲವೇ? ನಮ್ಮವರನ್ನೇ ಕೊಂದ ನಾವಾದರೋ ಯಾವ ಧರ್ಮಫಲವನ್ನು ಪಡೆದೆವು?

12007005a ಧಿಗಸ್ತು ಕ್ಷಾತ್ರಮಾಚಾರಂ ಧಿಗಸ್ತು ಬಲಮೌರಸಮ್।
12007005c ಧಿಗಸ್ತ್ವಮರ್ಷಂ ಯೇನೇಮಾಮಾಪದಂ ಗಮಿತಾ ವಯಮ್।।

ಯಾವುದರಿಂದಾಗಿ ನಾವು ಈ ಆಪತ್ತನ್ನು ಪಡೆದಿದ್ದೇವೋ ಆ ಕ್ಷತ್ರಿಯ ಆಚಾರಕ್ಕೆ ಧಿಕ್ಕಾರ! ಬಲವಂತಿಕೆಗೆ ಧಿಕ್ಕಾರ! ಕ್ರೋಧಕ್ಕೆ ಧಿಕ್ಕಾರ!

12007006a ಸಾಧು ಕ್ಷಮಾ ದಮಃ ಶೌಚಮವೈರೋಧ್ಯಮಮತ್ಸರಃ।
12007006c ಅಹಿಂಸಾ ಸತ್ಯವಚನಂ ನಿತ್ಯಾನಿ ವನಚಾರಿಣಾಮ್।।

ವನಚಾರಿಗಳಿಗೆ ಕ್ಷಮೆ, ಇಂದ್ರಿಯನಿಗ್ರಹ, ಶುದ್ಧಿ, ವಿರೋಧಿಸದಿರುವುದು, ಅಸೂಯೆಪಡದಿರುವುದು, ಅಹಿಂಸೆ ಮತ್ತು ಸತ್ಯವಚನಗಳೇ ನಿತ್ಯವೂ ಸಾಧುವೆನಿಸಿಕೊಂಡಿರುವ ಧರ್ಮಗಳು.

12007007a ವಯಂ ತು ಲೋಭಾನ್ಮೋಹಾಚ್ಚ ಸ್ತಂಭಂ ಮಾನಂ ಚ ಸಂಶ್ರಿತಾಃ।
12007007c ಇಮಾಮವಸ್ಥಾಮಾಪನ್ನಾ ರಾಜ್ಯಲೇಶಬುಭುಕ್ಷಯಾ।।

ನಾವಾದರೋ ರಾಜ್ಯವನ್ನು ಗಳಿಸಿ ಭೋಗಿಸುವ ಸಲುವಾಗಿ ಲೋಭ, ಮೋಹ, ದಂಭ-ದುರಭಿಮಾನಗಳನ್ನಾಶ್ರಯಿಸಿ ಈ ಅವಸ್ಥೆಯನ್ನು ಪಡೆದುಕೊಂಡಿದ್ದೇವೆ.

12007008a ತ್ರೈಲೋಕ್ಯಸ್ಯಾಪಿ ರಾಜ್ಯೇನ ನಾಸ್ಮಾನ್ಕಶ್ಚಿತ್ಪ್ರಹರ್ಷಯೇತ್।
12007008c ಬಾಂಧವಾನ್ನಿಹತಾನ್ದೃಷ್ಟ್ವಾ ಪೃಥಿವ್ಯಾಮಾಮಿಷೈಷಿಣಃ।।

ಭೂಮಿಯ ಆಸೆಯಿಂದಾಗಿ ಬಾಂಧವರು ಹತರಾಗಿರುವುದನ್ನು ನೋಡಿದರೆ ತ್ರೈಲೋಕ್ಯವೇ ನಮ್ಮ ರಾಜ್ಯವಾದರೂ ನಮಗೆ ಎಂದೂ ಸಂತೋಷವೆನಿಸುವುದಿಲ್ಲ!

12007009a ತೇ ವಯಂ ಪೃಥಿವೀಹೇತೋರವಧ್ಯಾನ್ಪೃಥಿವೀಸಮಾನ್।
12007009c ಸಂಪರಿತ್ಯಜ್ಯ ಜೀವಾಮೋ ಹೀನಾರ್ಥಾ ಹತಬಾಂಧವಾಃ।।

ಭೂಮಿಗಾಗಿ ನಾವು ಅವಧ್ಯರಾದ ಪೃಥ್ವೀಶರನ್ನು ಸಂಹರಿಸಿ ಈಗ ಬಾಂಧವರನ್ನು ಕಳೆದುಕೊಂಡು ಅರ್ಥವಿಹೀನರಾಗಿ ಜೀವಿಸಬೇಕಾಗಿದೆ!

12007010a ಆಮಿಷೇ ಗೃಧ್ಯಮಾನಾನಾಮಶುನಾಂ ನಃ ಶುನಾಮಿವ।
12007010c ಆಮಿಷಂ ಚೈವ ನೋ ನಷ್ಟಮಾಮಿಷಸ್ಯ ಚ ಭೋಜಿನಃ।।

ಮಾಂಸದ ತುಂಡಿಗಾಗಿ ಕಚ್ಚಾಡುವ ನಾಯಿಗಳಂತೆ ನಾವು ಆಸೆಪಟ್ಟು ಯುದ್ಧಮಾಡಿದೆವು. ಆ ಮಾಂಸದ ತುಂಡನ್ನು ತಿನ್ನುವವರೇ ಇಲ್ಲವಾದಮೇಲೆ ಅದರ ಪ್ರಯೋಜನವಾದರೂ ಏನು?

12007011a ನ ಪೃಥಿವ್ಯಾ ಸಕಲಯಾ ನ ಸುವರ್ಣಸ್ಯ ರಾಶಿಭಿಃ।
12007011c ನ ಗವಾಶ್ವೇನ ಸರ್ವೇಣ ತೇ ತ್ಯಾಜ್ಯಾ ಯ ಇಮೇ ಹತಾಃ।।

ಈ ಸಕಲ ಭೂಮಿಗಾಗಿಯಾಗಲೀ, ಸುವರ್ಣ ರಾಶಿಗಳಿಗಾಗಿಯಾಗಲೀ, ಸಮಸ್ತ ಗೋವು-ಕುದುರೆಗಳಿಗಾಗಿಯಾಗಲೀ ಇವರನ್ನು ಬಲಿಕೊಡಬಾರದಾಗಿತ್ತು!

12007012a ಸಂಯುಕ್ತಾಃ ಕಾಮಮನ್ಯುಭ್ಯಾಂ ಕ್ರೋಧಾಮರ್ಷಸಮನ್ವಿತಾಃ।
12007012c ಮೃತ್ಯುಯಾನಂ ಸಮಾರುಹ್ಯ ಗತಾ ವೈವಸ್ವತಕ್ಷಯಮ್।।

ಕಾಮ-ಕ್ರೋಧಗಳಿಂದ ಕೂಡಿದ್ದ, ಕ್ರೋಧ-ರೋಷಗಳಿಂದ ಕೂಡಿದ್ದ ಅವರು ಮೃತ್ಯುಯಾನಗಳನ್ನೇರಿ ವೈವಸ್ವತಕ್ಷಯಕ್ಕೆ ತೆರಳಿದರು.

12007013a ಬಹು ಕಲ್ಯಾಣಮಿಚ್ಚಂತ ಈಹಂತೇ ಪಿತರಃ ಸುತಾನ್।
12007013c ತಪಸಾ ಬ್ರಹ್ಮಚರ್ಯೇಣ ವಂದನೇನ ತಿತಿಕ್ಷಯಾ।।

ಪಿತೃಗಳು ತಪಸ್ಸು, ಬ್ರಹ್ಮಚರ್ಯೆ, ಸತ್ಯನಿಷ್ಠೆ, ಮತ್ತು ಕ್ಷಮೆಗಳನ್ನು ಆಚರಿಸಿಕೊಂಡು ಕಲ್ಯಾಣಗುಣಸಂಪನ್ನ ಮಕ್ಕಳನ್ನು ಬಯಸುತ್ತಾರೆ.

12007014a ಉಪವಾಸೈಸ್ತಥೇಜ್ಯಾಭಿರ್ವ್ರತಕೌತುಕಮಂಗಲೈಃ।
12007014c ಲಭಂತೇ ಮಾತರೋ ಗರ್ಭಾಂಸ್ತಾನ್ಮಾಸಾನ್ದಶ ಬಿಭ್ರತಿ।।

ಹಾಗೆಯೇ ತಾಯಂದಿರೂ ಉಪವಾಸ, ಯಜ್ಞ, ವ್ರತ ಮತ್ತು ಅನೇಕ ಮಂಗಲ ಕಾರ್ಯಗಳ ಮೂಲಕ ಗುಣಶಾಲೀ ಪುತ್ರರನ್ನು ಪಡೆಯಲೋಸುಗ ಹತ್ತು ತಿಂಗಳ ಗರ್ಭವನ್ನು ಹೊರುತ್ತಾರೆ.

12007015a ಯದಿ ಸ್ವಸ್ತಿ ಪ್ರಜಾಯಂತೇ ಜಾತಾ ಜೀವಂತಿ ವಾ ಯದಿ।
12007015c ಸಂಭಾವಿತಾ ಜಾತಬಲಾಸ್ತೇ ದದ್ಯುರ್ಯದಿ ನಃ ಸುಖಮ್।।
12007015e ಇಹ ಚಾಮುತ್ರ ಚೈವೇತಿ ಕೃಪಣಾಃ ಫಲಹೇತುಕಾಃ।।

ದೀನರಾದ ತಂದೆ-ತಾಯಿಯರು “ಚೆನ್ನಾದ ಮಗುವು ಹುಟ್ಟುವುದೇ? ಹುಟ್ಟಿದ ಮಗು ಜೀವಿಸುತ್ತದೆಯೇ? ಬೆಳೆದ ಮೇಲೆ ಬಲಶಾಲಿಗಳಾಗುತ್ತಾರೆಯೇ? ನಮಗೆ ಸುಖವನ್ನು ನೀಡುತ್ತಾರೆಯೇ?” ಎಂದೆಲ್ಲ ಆಸೆಗಳನ್ನಿಟ್ಟುಕೊಂಡು ಯೋಚಿಸುತ್ತಿರುತ್ತಾರೆ.

12007016a ತಾಸಾಮಯಂ ಸಮಾರಂಭೋ ನಿವೃತ್ತಃ ಕೇವಲೋಽಫಲಃ।
12007016c ಯದಾಸಾಂ ನಿಹತಾಃ ಪುತ್ರಾ ಯುವಾನೋ ಮೃಷ್ಟಕುಂಡಲಾಃ।।

ಅವರ ಪ್ರಯತ್ನ-ಆಕಾಂಕ್ಷೆಗಳು ಈ ಯುದ್ಧದಿಂದಾಗಿ ನಿಷ್ಫಲವಾಗಿಬಿಟ್ಟವು. ಸುವರ್ಣಕುಂಡಲಗಳನ್ನು ಧರಿಸಿದ್ದ ಅವರ ಯುವ ಪುತ್ರರು ಹತರಾದರು!

12007017a ಅಭುಕ್ತ್ವಾ ಪಾರ್ಥಿವಾನ್ಭೋಗಾನೃಣಾನ್ಯನವದಾಯ ಚ।
12007017c ಪಿತೃಭ್ಯೋ ದೇವತಾಭ್ಯಶ್ಚ ಗತಾ ವೈವಸ್ವತಕ್ಷಯಮ್।।

ಪಾರ್ಥಿವರು ಭೋಗಗಳನ್ನು ಭೋಗಿಸದೇ, ಪಿತೃ-ದೇವತೆಗಳ ಋಣಗಳನ್ನು ತೀರಿಸದೆಯೇ ವೈವಸ್ವತಕ್ಷಯಕ್ಕೆ ಹೋಗಿಬಿಟ್ಟರು!

12007018a ಯದೈಷಾಮಂಗ ಪಿತರೌ ಜಾತೌ ಕಾಮಮಯಾವಿವ।
12007018c ಸಂಜಾತಬಲರೂಪೇಷು ತದೈವ ನಿಹತಾ ನೃಪಾಃ।।

ತಂದೆ-ತಾಯಿಗಳು ಹುಟ್ಟಿದ ಮಕ್ಕಳ ಬಲ-ರೂಪಗಳನ್ನು ಅನುಭವಿಸಿ ಸಂತೋಷಪಡಬೇಕೆಂದಿರುವಾಗಲೇ ನೃಪರು ಹತರಾಗಿ ಹೋದರು.

12007019a ಸಂಯುಕ್ತಾಃ ಕಾಮಮನ್ಯುಭ್ಯಾಂ ಕ್ರೋಧಹರ್ಷಾಸಮಂಜಸಾಃ।
12007019c ನ ತೇ ಜನ್ಮಫಲಂ1 ಕಿಂ ಚಿದ್ಭೋಕ್ತಾರೋ ಜಾತು ಕರ್ಹಿ ಚಿತ್।।

ಕಾಮ-ಕ್ರೋಧಗಳಿಂದ ಕೂಡಿರುವವರು ಮತ್ತು ಕ್ರೋಧ-ಹರ್ಷಗಳಲ್ಲಿ ಸಮತೋಲನವನ್ನಿಟ್ಟುಕೊಂಡಿರದೇ ಇದ್ದವರು ಜನ್ಮಫಲವನ್ನು ಎಂದೂ ಯಾವಕಾರಣಕ್ಕೂ ಭೋಗಿಸಲಾರರು.

12007020a ಪಾಂಚಾಲಾನಾಂ ಕುರೂಣಾಂ ಚ ಹತಾ ಏವ ಹಿ ಯೇಽಹತಾಃ।
12007020c ತೇ ವಯಂ ತ್ವಧಮಾಽಲ್ಲೋಕಾನ್ಪ್ರಪದ್ಯೇಮ ಸ್ವಕರ್ಮಭಿಃ।।

ಕುರು-ಪಾಂಚಾಲರು ಹತರಾದರೂ ಹತರಾಗಿಲ್ಲ2 ಆದರೆ ನಮ್ಮ ಕರ್ಮಗಳಿಂದ3 ನಾವು ಮಾತ್ರ ಅಧಮ ಲೋಕಗಳನ್ನು ಪಡೆದುಕೊಳ್ಳುತ್ತೇವೆ.

12007021a ವಯಮೇವಾಸ್ಯ ಲೋಕಸ್ಯ ವಿನಾಶೇ ಕಾರಣಂ ಸ್ಮೃತಾಃ।
12007021c ಧೃತರಾಷ್ಟ್ರಸ್ಯ ಪುತ್ರೇಣ ನಿಕೃತ್ಯಾ ಪ್ರತ್ಯಪತ್ಸ್ಮಹಿ।।

ಲೋಕದ ವಿನಾಶಕ್ಕೇ ನಾವೇ ಕಾರಣವೆಂದು ಹೇಳುತ್ತಾರೆ. ಆದರೆ ಇದಕ್ಕೆಲ್ಲ ಧೃತರಾಷ್ಟ್ರಪುತ್ರನ ದುಷ್ಟಕರ್ಮಗಳೇ ಸಂಪೂರ್ಣ ಕಾರಣವು.

12007022a ಸದೈವ ನಿಕೃತಿಪ್ರಜ್ಞೋ ದ್ವೇಷ್ಟಾ ಮಾಯೋಪಜೀವನಃ।
12007022c ಮಿಥ್ಯಾವೃತ್ತಃ ಸ ಸತತಮಸ್ಮಾಸ್ವನಪಕಾರಿಷು।।

ದ್ವೇಷದಿಂದ ಅವನು ಸದೈವವೂ ವಂಚನೆಮಾಡುವುದನ್ನೇ ಯೋಚಿಸುತ್ತಿದ್ದನು. ಮಾಯೆಗಳನ್ನು ಬಳಸುತ್ತಿದ್ದನು. ಮಿಥ್ಯಾಚಾರಿಯಾಗಿದ್ದನು. ಸತತವೂ ನಮಗೆ ಅಪಕಾರ ಮಾಡುತ್ತಿದ್ದನು.

12007023a ಅಂಶಕಾಮಾ4 ವಯಂ ತೇ ಚ ನ ಚಾಸ್ಮಾಭಿರ್ನ ತೈರ್ಜಿತಮ್।
12007023c ನ ತೈರ್ಭುಕ್ತೇಯಮವನಿರ್ನ ನಾರ್ಯೋ ಗೀತವಾದಿತಮ್।।

ಬಯಸಿದ್ದಿದು ನಮಗೂ ಸಿಗಲಿಲ್ಲ, ಅವರಿಗೂ ದೊರಕಲಿಲ್ಲ. ನಾವೂ ಗೆಲ್ಲಲಿಲ್ಲ, ಅವರೂ ಗೆಲ್ಲಲಿಲ್ಲ. ಅವರು ಈ ಭೂಮಿಯನ್ನೂ, ನಾರಿಯರನ್ನೂ, ಗೀತವಾದ್ಯಗಳನ್ನೂ ಭೋಗಿಸಲಿಲ್ಲ.

12007024a ನಾಮಾತ್ಯಸಮಿತೌ ಕಥ್ಯಂ ನ ಚ ಶ್ರುತವತಾಂ ಶ್ರುತಮ್।
12007024c ನ ರತ್ನಾನಿ ಪರಾರ್ಧ್ಯಾನಿ ನ ಭೂರ್ನ ದ್ರವಿಣಾಗಮಃ।।

ಅವರು ಅಮಾತ್ಯರ ಸಲಹೆಗಳನ್ನಾಗಲೀ ತಿಳಿದವರ ಹಿತವಚನಗಳನ್ನಾಗಲೀ ಕೇಳಲೇ ಇಲ್ಲ. ರತ್ನಗಳಾಗಲೀ, ಭೂಮಿಯಾಗಲೀ, ಕಪ್ಪ-ಕಾಣಿಕೆಗಳಾಗಲೀ ಅವರಿಗೆ ಸಂತೋಷವನ್ನು ನೀಡಲಿಲ್ಲ.

12007025a 5ಋದ್ಧಿಮಸ್ಮಾಸು ತಾಂ ದೃಷ್ಟ್ವಾ ವಿವರ್ಣೋ ಹರಿಣಃ ಕೃಶಃ। 12007025c ಧೃತರಾಷ್ಟ್ರಸ್ಯ ನೃಪತೇಃ ಸೌಬಲೇನ ನಿವೇದಿತಃ।।

ನಮ್ಮ ಸಮೃದ್ಧಿಯನ್ನು ನೋಡಿ ದುರ್ಯೋಧನನು ಬಿಳಿಚಿಕೊಂಡು ವಿವರ್ಣನಾಗಿ ಕೃಶನಾಗಿಬಿಟ್ಟಿದ್ದನು. ಅದನ್ನು ಸೌಬಲನು ನೃಪತಿ ಧೃತರಾಷ್ಟ್ರನಿಗೆ ನಿವೇದಿಸಿದನು.

12007026a ತಂ ಪಿತಾ ಪುತ್ರಗೃದ್ಧಿತ್ವಾದನುಮೇನೇಽನಯೇ ಸ್ಥಿತಮ್।
12007026c ಅನವೇಕ್ಷ್ಯೈವ ಪಿತರಂ ಗಾಂಗೇಯಂ ವಿದುರಂ ತಥಾ।।
12007026e ಅಸಂಶಯಂ ಧೃತರಾಷ್ಟ್ರೋ ಯಥೈವಾಹಂ ತಥಾ ಗತಃ।।

ತಂದೆಯು ಮಗನ ಮೇಲಿನ ಪ್ರೀತಿಯಿಂದಾಗಿ ಅವನ ದುಷ್ಟಯೋಜನೆಗಳಿಗೆ ಅನುಮತಿಯನ್ನಿತ್ತನು. ತಂದೆ ಗಾಂಗೇಯ ಮತ್ತು ವಿದುರರ ಮಾತುಗಳನ್ನೂ ತಿರಸ್ಕರಿಸಿದನು. ಇದರಿಂದಾಗಿಯೇ ಇಂದು ಧೃತರಾಷ್ಟ್ರನು ನನ್ನಂತೆಯೇ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ.

12007027a ಅನಿಯಮ್ಯಾಶುಚಿಂ ಲುಬ್ಧಂ ಪುತ್ರಂ ಕಾಮವಶಾನುಗಮ್।
12007027c ಪತಿತೋ ಯಶಸೋ ದೀಪ್ತಾದ್ಘಾತಯಿತ್ವಾ ಸಹೋದರಾನ್।।

ಅಶುಚಿಯೂ, ಲುಬ್ಧನೂ, ಕಾಮವಶನಾಗಿ ನಡೆದುಕೊಳ್ಳುತ್ತಿದ್ದವನೂ ಆಗಿದ್ದ ಪುತ್ರನನ್ನು ನಿಯಂತ್ರಿಸದೇ ಧೃತರಾಷ್ಟ್ರನು ಆ ಸಹೋದರರ ಸಾವಿಗೆ ಕಾರಣನಾಗಿ ಉಜ್ವಲ ಯಶಸ್ಸಿನಿಂದ ಭ್ರಷ್ಟನಾಗಿದ್ದಾನೆ.

12007028a ಇಮೌ ವೃದ್ಧೌ ಚ ಶೋಕಾಗ್ನೌ ಪ್ರಕ್ಷಿಪ್ಯ ಸ ಸುಯೋಧನಃ।
12007028c ಅಸ್ಮತ್ಪ್ರದ್ವೇಷಸಂಯುಕ್ತಃ ಪಾಪಬುದ್ಧಿಃ ಸದೈವ ಹಿ।।

ನಮ್ಮೊಡನೆ ಸದೈವವೂ ದ್ವೇಷಯುಕ್ತನಾಗಿದ್ದ ಆ ಪಾಪಬುದ್ಧಿ ಸುಯೋಧನನು ಈ ಇಬ್ಬರು ವೃದ್ಧರನ್ನೂ ಶೋಕಾಗ್ನಿಯಲ್ಲಿ ನೂಕಿ ಬೀಳಿಸಿ ಹೊರಟು ಹೋದನು!

12007029a ಕೋ ಹಿ ಬಂಧುಃ ಕುಲೀನಃ ಸಂಸ್ತಥಾ ಬ್ರೂಯಾತ್ಸುಹೃಜ್ಜನೇ।
12007029c ಯಥಾಸಾವುಕ್ತವಾನ್ಕ್ಷುದ್ರೋ ಯುಯುತ್ಸುರ್ವೃಷ್ಣಿಸಂನಿಧೌ।।

ವೃಷ್ಣಿವೀರರಾದ ಕೃಷ್ಣ ಮತ್ತು ಸಾತ್ಯಕಿಯರ ಸನ್ನಿಧಿಯಲ್ಲಿ ಯುದ್ಧೋತ್ಸುಕನಾಗಿ ಆ ಕ್ಷುದ್ರ ದುರ್ಯೋಧನನು ಹೇಳಿದ ಮಾತನ್ನು ಕುಲೀನನಾದ ಯಾವ ಬಂಧುವು ತಾನೇ ಸುಹೃದಯರ ವಿಷಯದಲ್ಲಿ ಆಡುತ್ತಾನೆ?

12007030a ಆತ್ಮನೋ ಹಿ ವಯಂ ದೋಷಾದ್ವಿನಷ್ಟಾಃ ಶಾಶ್ವತೀಃ ಸಮಾಃ।
12007030c ಪ್ರದಹಂತೋ ದಿಶಃ ಸರ್ವಾಸ್ತೇಜಸಾ ಭಾಸ್ಕರಾ ಇವ।।

ಭಾಸ್ಕರನು ತೇಜಸ್ಸಿನಿಂದ ಸರ್ವ ದಿಕ್ಕುಗಳನ್ನೂ ಸುಡುವಂತೆ ನಮ್ಮದೇ ದೋಷದಿಂದಾಗಿ ನಾವು ಶಾಶ್ವತವಾಗಿ ವಿನಾಶಹೊಂದಿದೆವು.

12007031a ಸೋಽಸ್ಮಾಕಂ ವೈರಪುರುಷೋ ದುರ್ಮಂತ್ರಿಪ್ರಗ್ರಹಂ ಗತಃ।
12007031c ದುರ್ಯೋಧನಕೃತೇ ಹ್ಯೇತತ್ಕುಲಂ ನೋ ವಿನಿಪಾತಿತಮ್।।

ದುಷ್ಟಮಂತ್ರಿಗಳ ಹಿಡಿತದಲ್ಲಿದ್ದ ನಮ್ಮ ಆ ವೈರಪುರುಷ ದುರ್ಯೋಧನನು ಮಾಡಿದ ಕರ್ಮಗಳಿಂದಾಗಿಯೇ ನಮ್ಮ ಈ ಕುಲವು ವಿನಾಶವಾಗಿಹೋಯಿತು.

12007031e ಅವಧ್ಯಾನಾಂ ವಧಂ ಕೃತ್ವಾ ಲೋಕೇ ಪ್ರಾಪ್ತಾಃ ಸ್ಮ ವಾಚ್ಯತಾಮ್।।
12007032a ಕುಲಸ್ಯಾಸ್ಯಾಂತಕರಣಂ ದುರ್ಮತಿಂ ಪಾಪಕಾರಿಣಮ್।
12007032c ರಾಜಾ ರಾಷ್ಟ್ರೇಶ್ವರಂ ಕೃತ್ವಾ ಧೃತರಾಷ್ಟ್ರೋಽದ್ಯ ಶೋಚತಿ।।

ಅವಧ್ಯರ ವಧೆಗೈದು ನಾವು ಲೋಕನಿಂದೆಗೆ ಪಾತ್ರರಾದೆವು. ಕುಲದ ಅಂತಕನಂತಿದ್ದ ದುರ್ಮತಿ ಪಾಪಕಾರಿಣಿ ದುರ್ಯೋಧನನನ್ನು ರಾಷ್ಟ್ರೇಶ್ವರನನ್ನಾಗಿ ಮಾಡಿ ರಾಜಾ ಧೃತರಾಷ್ಟ್ರನು ಇಂದು ಶೋಕಿಸುತ್ತಿದ್ದಾನೆ.

12007033a ಹತಾಃ ಶೂರಾಃ ಕೃತಂ ಪಾಪಂ ವಿಷಯಃ ಸ್ವೋ ವಿನಾಶಿತಃ।
12007033c ಹತ್ವಾ ನೋ ವಿಗತೋ ಮನ್ಯುಃ ಶೋಕೋ ಮಾಂ ರುಂಧಯತ್ಯಯಮ್।।

ಶೂರರು ಹತರಾದರು. ಪಾಪಕರ್ಮವು ನಡೆದುಹೋಯಿತು. ರಾಷ್ಟ್ರವೂ ವಿನಾಶವಾಯಿತು. ಶತ್ರುಗಳನ್ನು ಸಂಹರಿಸಿ ಕ್ರೋಧವೇನೋ ಹೊರಟುಹೋಯಿತು. ಆದರೆ ಈ ಶೋಕವು ನನ್ನನ್ನು ಪೀಡಿಸುತ್ತಿದೆ.

12007034a ಧನಂಜಯ ಕೃತಂ ಪಾಪಂ ಕಲ್ಯಾಣೇನೋಪಹನ್ಯತೇ। 12007034c 6ತ್ಯಾಗವಾಂಶ್ಚ ಪುನಃ ಪಾಪಂ ನಾಲಂ ಕರ್ತುಮಿತಿ ಶ್ರುತಿಃ।।
ಧನಂಜಯ! ಮಾಡಿದ ಪಾಪವನ್ನು ಕಲ್ಯಾಣಕರ್ಮಗಳಿಂದ ಉಪಶಮನಗೊಳಿಸಬಹುದು. ಆದರೆ ತ್ಯಾಗಮಾಡಿದವನು ಪುನಃ ಪಾಪವನ್ನೇ ಮಾಡುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ.

12007035a ತ್ಯಾಗವಾನ್ಜನ್ಮಮರಣೇ ನಾಪ್ನೋತೀತಿ ಶ್ರುತಿರ್ಯದಾ।
12007035c ಪ್ರಾಪ್ತವರ್ತ್ಮಾ ಕೃತಮತಿರ್ಬ್ರಹ್ಮ ಸಂಪದ್ಯತೇ ತದಾ।।

ತ್ಯಾಗಿಯು ಜನನ-ಮರಣಗಳನ್ನೂ ಹೊಂದುವುದಿಲ್ಲವೆಂದು ಶ್ರುತಿಗಳು ಹೇಳುತ್ತವೆ. ತ್ಯಾಗಿಯು ನಿಯತ ಬುದ್ಧಿಯುಳ್ಳವನಾಗಿ ಬ್ರಹ್ಮಸಾಕ್ಷಾತ್ಕಾರವನ್ನು ಸುಲಭವಾಗಿ ಪಡೆದುಕೊಳ್ಳುತ್ತಾನೆ.

12007036a ಸ ಧನಂಜಯ ನಿರ್ದ್ವಂದ್ವೋ ಮುನಿರ್ಜ್ಞಾನಸಮನ್ವಿತಃ।
12007036c ವನಮಾಮಂತ್ರ್ಯ ವಃ ಸರ್ವಾನ್ಗಮಿಷ್ಯಾಮಿ ಪರಂತಪ।।

ಧನಂಜಯ! ಜ್ಞಾನಸಮನ್ವಿತನಾದ ಮುನಿಯು ನಿರ್ದ್ವಂದ್ವನಾಗಿರುತ್ತಾನೆ. ಪರಂತಪ! ನಿಮ್ಮೆಲ್ಲರ ಅನುಮತಿಯನ್ನು ಪಡೆದು ನಾನು ವನಕ್ಕೆ ಹೋಗುತ್ತೇನೆ.

12007037a ನ ಹಿ ಕೃತ್ಸ್ನತಮೋ ಧರ್ಮಃ ಶಕ್ಯಃ ಪ್ರಾಪ್ತುಮಿತಿ ಶ್ರುತಿಃ।
12007037c ಪರಿಗ್ರಹವತಾ ತನ್ಮೇ ಪ್ರತ್ಯಕ್ಷಮರಿಸೂದನ।।

ತ್ಯಾಗಿಯಲ್ಲದವನಿಗೆ ಸಂಪೂರ್ಣ ಧರ್ಮಾಚರಣೆಯು ಶಕ್ಯವಿಲ್ಲವೆಮ್ದು ಶ್ರುತಿಗಳು ಹೇಳುತ್ತವೆ. ಅರಿಸೂದನ! ಅದನ್ನು ನಾನು ಪ್ರತ್ಯಕ್ಷ್ಯವಾಗಿ ಕಂಡುಕೊಂಡಿದ್ದೇನೆ ಕೂಡ.

12007038a ಮಯಾ ನಿಸೃಷ್ಟಂ ಪಾಪಂ ಹಿ ಪರಿಗ್ರಹಮಭೀಪ್ಸತಾ।
12007038c ಜನ್ಮಕ್ಷಯನಿಮಿತ್ತಂ ಚ ಶಕ್ಯಂ ಪ್ರಾಪ್ತುಮಿತಿ ಶ್ರುತಿಃ।।

ಪಡೆದುಕೊಳ್ಳಲು ಬಯಸುತ್ತಿದ್ದ ನಾನು ಪಾಪದ ರಾಶಿಯನ್ನೇ ಕೂಡಿಕೊಂಡೆನು. ಜನ್ಮ-ಮೃತ್ಯುಗಳಿಗೆ ಕಾರಣವಾದ ಇದು ಮುಕ್ತಿಯನ್ನು ನೀಡಲು ಶಕ್ಯವಿಲ್ಲವೆಂದು ಶ್ರುತಿಗಳು ಹೇಳುತ್ತವೆ.

12007039a ಸ ಪರಿಗ್ರಹಮುತ್ಸೃಜ್ಯ ಕೃತ್ಸ್ನಂ ರಾಜ್ಯಂ ತಥೈವ ಚ।
12007039c ಗಮಿಷ್ಯಾಮಿ ವಿನಿರ್ಮುಕ್ತೋ ವಿಶೋಕೋ ವಿಜ್ವರಸ್ತಥಾ।।

ಆ ಪಡೆದುಕೊಳ್ಳಬೇಕೆಂಬ ಆಸೆಯನ್ನು ಮತ್ತು ಸಂಪೂರ್ಣ ರಾಜ್ಯವನ್ನು ತೊರೆದು ವಿಮುಕ್ತನಾಗಿ, ಶೋಕರಹಿತನಾಗಿ, ಮಮತಾರಹಿತನಾಗಿ ಕಾಡಿಗೆ ಹೊರಟುಹೋಗುತ್ತೇನೆ!

12007040a ಪ್ರಶಾಧಿ ತ್ವಮಿಮಾಮುರ್ವೀಂ ಕ್ಷೇಮಾಂ ನಿಹತಕಂಟಕಾಮ್।
12007040c ನ ಮಮಾರ್ಥೋಽಸ್ತಿ ರಾಜ್ಯೇನ ನ ಭೋಗೈರ್ವಾ ಕುರೂತ್ತಮ।।

ಕುರೂತ್ತಮ! ಕಂಟಕರನ್ನು ಕಳೆದುಕೊಂಡು ಕ್ಷೇಮದಿಂದಿರುವ ಈ ಭೂಮಿಯನ್ನು ನೀನು ಆಳು. ನನಗೆ ಈ ರಾಜ್ಯವಾಗಲೀ ಭೋಗವಾಗಲೀ ಯಾವ ಪ್ರಯೋಜನಕ್ಕೂ ಇಲ್ಲ.”

12007041a ಏತಾವದುಕ್ತ್ವಾ ವಚನಂ ಧರ್ಮರಾಜೋ ಯುಧಿಷ್ಠಿರಃ।
12007041c ವ್ಯುಪಾರಮತ್ತತಃ ಪಾರ್ಥಃ ಕನೀಯಾನ್ಪ್ರತ್ಯಭಾಷತ।।

ಹೀಗೆ ಹೇಳಿ ಧರ್ಮರಾಜ ಯುಧಿಷ್ಠಿರನು ಸುಮ್ಮನಾದನು. ಅನಂತರ ಕುಂತಿಯ ಮಕ್ಕಳಲ್ಲಿ ಕಡೆಯವನಾದ ಪಾರ್ಥನು ಅದಕ್ಕುತ್ತರವಾಗಿ ಮಾತನಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಯುಧಿಷ್ಠಿರಪರಿವೇದನಂ ನಾಮ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಯುಧಿಷ್ಠಿರಪರಿವೇದನೆಯೆನ್ನುವ ಏಳನೇ ಅಧ್ಯಾಯವು.


  1. ಜಯಫಲಂ (ಭಾರತದರ್ಶನ). ↩︎

  2. ಕೀರ್ತಿ-ಸ್ವರ್ಗಗಳನ್ನು ಪಡೆದು ಅಮರರೇ ಆಗಿದ್ದಾರೆ. ↩︎

  3. ಅವರ ಸಾವಿಗೆ ಕಾರಣರಾದುದರಿಂದ ↩︎

  4. ನ ಸಕಾಮಾ (ಗೀತಾ ಪ್ರೆಸ್). ↩︎

  5. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅಸ್ಮಾದ್ದ್ವೇಷೇನ ಸಂತಪ್ತಃ ಸುಖಂ ನ ಸ್ಮೇಹ ವಿಂದತಿ| (ಗೀತಾ ಪ್ರೆಸ್). ↩︎

  6. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಖ್ಯಾಪನೇನಾನುತಾಪೇನ ದಾನೇನ ತಪಸಾಪಿ ವಾ| ನಿವೃತ್ಯಾ ತೀರ್ಥಗಾನಾಚ್ಛ್ರುತಿಸ್ಮೃತಿಜಪೇನ ವಾ|| (ಗೀತಾ ಪ್ರೆಸ್). ↩︎