006 ಸ್ತ್ರೀಶಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 6

ಸಾರ

ಯುಧಿಷ್ಠಿರನು ಸ್ತ್ರೀಯರಿಗೆ “ರಹಸ್ಯವನ್ನು ಹಿಡಿದಿಟ್ಟುಕೊಳ್ಳಲಾರಿರಿ!” ಎಂದು ಶಪಿಸುವುದು (1-12).

12006001 ವೈಶಂಪಾಯನ ಉವಾಚ।
12006001a ಏತಾವದುಕ್ತ್ವಾ ದೇವರ್ಷಿರ್ವಿರರಾಮ ಸ ನಾರದಃ।
12006001c ಯುಧಿಷ್ಠಿರಸ್ತು ರಾಜರ್ಷಿರ್ದಧ್ಯೌ ಶೋಕಪರಿಪ್ಲುತಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ದೇವರ್ಷಿ ನಾರದನು ಸುಮ್ಮನಾದನು. ರಾಜರ್ಷಿ ಯುಧಿಷ್ಠಿರನಾದರೋ ಶೋಕಸಾಗರದಲ್ಲಿ ಮುಳುಗಿಹೋದನು.

12006002a ತಂ ದೀನಮನಸಂ ವೀರಮಧೋವದನಮಾತುರಮ್।
12006002c ನಿಃಶ್ವಸಂತಂ ಯಥಾ ನಾಗಂ ಪರ್ಯಶ್ರುನಯನಂ ತಥಾ।।
12006003a ಕುಂತೀ ಶೋಕಪರೀತಾಂಗೀ ದುಃಖೋಪಹತಚೇತನಾ।
12006003c ಅಬ್ರವೀನ್ಮಧುರಾಭಾಷಾ ಕಾಲೇ ವಚನಮರ್ಥವತ್।।

ದೀನಮನಸ್ಕನಾಗಿ ಮುಖ ಕೆಳಗೆಮಾಡಿಕೊಂಡು, ಆತುರನಾಗಿ ನಾಗದಂತೆ ನಿಟ್ಟುಸಿರುಬಿಡುತ್ತಾ ಕಣ್ಣೀರನ್ನು ಸುರಿಸುತ್ತಿದ್ದ ಅವನಿಗೆ ಶೋಕದಿಂದ ಸುಡುತ್ತಿದ್ದ, ದುಃಖದಿಂದ ಚೇತನವನ್ನೇ ಕಳೆದುಕೊಂಡಿದ್ದ ಕುಂತಿಯು ಮಧುರಭಾಷೆಯಲ್ಲಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದಳು:

12006004a ಯುಧಿಷ್ಠಿರ ಮಹಾಬಾಹೋ ನೈನಂ ಶೋಚಿತುಮರ್ಹಸಿ।
12006004c ಜಹಿ ಶೋಕಂ ಮಹಾಪ್ರಾಜ್ಞ ಶೃಣು ಚೇದಂ ವಚೋ ಮಮ।।

“ಮಹಾಬಾಹೋ! ಯುಧಿಷ್ಠಿರ! ನೀನು ಈ ರೀತಿ ಶೋಕಿಸಬಾರದು! ಮಹಾಪ್ರಾಜ್ಞ! ಶೋಕವನ್ನು ತೊರೆ! ನನ್ನ ಈ ಮಾತನ್ನು ಕೇಳು!

12006005a ಯತಿತಃ ಸ ಮಯಾ ಪೂರ್ವಂ ಭ್ರಾತ್ರ್ಯಂ ಜ್ಞಾಪಯಿತುಂ ತವ।
12006005c ಭಾಸ್ಕರೇಣ ಚ ದೇವೇನ ಪಿತ್ರಾ ಧರ್ಮಭೃತಾಂ ವರ।।

ಧರ್ಮಭೃತರಲ್ಲಿ ಶ್ರೇಷ್ಠನೇ! ನೀವು ಸಹೋದರರೆಂದು ಮೊದಲೇ ಅವನಿಗೆ ತಿಳಿಸಲು ನಾನೂ ಮತ್ತು ಅವನ ತಂದೆ ದೇವ ಭಾಸ್ಕರರು ಪ್ರಯತ್ನಿಸಿದ್ದೆವು.

12006006a ಯದ್ವಾಚ್ಯಂ ಹಿತಕಾಮೇನ ಸುಹೃದಾ ಭೂತಿಮಿಚ್ಚತಾ।
12006006c ತಥಾ ದಿವಾಕರೇಣೋಕ್ತಃ ಸ್ವಪ್ನಾಂತೇ ಮಮ ಚಾಗ್ರತಃ।।

ಹಿತವನ್ನು ಬಯಸಿ ಸುಹೃದಯರಿಗೆ ಏನನ್ನು ಹೇಳಬೇಕೋ ಅದನ್ನೇ ದಿವಾಕರನು ಸ್ವಪ್ನದಲ್ಲಿ ಮತ್ತು ನನ್ನ ಸಮಕ್ಷಮದಲ್ಲಿ ಕರ್ಣನಿಗೆ ಹೇಳಿದ್ದನು.

12006007a ನ ಚೈನಮಶಕದ್ಭಾನುರಹಂ ವಾ ಸ್ನೇಹಕಾರಣೈಃ।
12006007c ಪುರಾ ಪ್ರತ್ಯನುನೇತುಂ ವಾ ನೇತುಂ ವಾಪ್ಯೇಕತಾಂ ತ್ವಯಾ।।

ದುರ್ಯೋಧನನೊಂದಿಗೆ ಅವನಿಗಿದ್ದ ಸ್ನೇಹದ ಕಾರಣದಿಂದಾಗಿ ಭಾನುವಾಗಲೀ ನಾನಾಗಲೀ ಕರ್ಣನು ನಿನ್ನೊಡನೆ ಸೇರುವಂತೆ ಅಥವಾ ಒಂದಾಗಿರುವಂತೆ ಮಾಡಲು ಶಕ್ಯರಾಗಲಿಲ್ಲ.

12006008a ತತಃ ಕಾಲಪರೀತಃ ಸ ವೈರಸ್ಯೋದ್ಧುಕ್ಷಣೇ ರತಃ।
12006008c ಪ್ರತೀಪಕಾರೀ ಯುಷ್ಮಾಕಮಿತಿ ಚೋಪೇಕ್ಷಿತೋ ಮಯಾ।।

ಅನಂತರ ಕಾಲವಶದಿಂದಾಗಿ ಅವನು ನಿಮ್ಮೊಡನೆ ವೈರವನ್ನು ಬೆಳೆಸುವುದರಲ್ಲಿಯೇ ನಿರತನಾಗಿದ್ದನು ಮತ್ತು ನಿಮಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದನು. ಆದುದರಿಂದ ನಾನು ಅವನನ್ನು ಉಪೇಕ್ಷಿಸಿದೆ!”

12006009a ಇತ್ಯುಕ್ತೋ ಧರ್ಮರಾಜಸ್ತು ಮಾತ್ರಾ ಬಾಷ್ಪಾಕುಲೇಕ್ಷಣಃ।
12006009c ಉವಾಚ ವಾಕ್ಯಂ ಧರ್ಮಾತ್ಮಾ ಶೋಕವ್ಯಾಕುಲಚೇತನಃ।।
12006010a ಭವತ್ಯಾ ಗೂಢಮಂತ್ರತ್ವಾತ್ಪೀಡಿತೋಽಸ್ಮೀತ್ಯುವಾಚ ತಾಮ್।

ತಾಯಿಯು ಹೀಗೆ ಹೇಳಲು ಕಣ್ಣಿರುತುಂಬಿದ ಶೋಕವ್ಯಾಕುಲಚೇತನನಾಗಿದ್ದ ಧರ್ಮಾತ್ಮ ಧರ್ಮರಾಜನು “ನೀನು ಈ ವಿಷಯವನ್ನು ರಹಸ್ಯವಾಗಿಯೇ ಇಟ್ಟಿದುದರಿಂದ ನಾನು ಬಹಳ ಪೀಡಿತನಾಗಿದ್ದೇನೆ!” ಎಂದು ತಾಯಿಗೆ ಹೇಳಿದನು.

12006010c ಶಶಾಪ ಚ ಮಹಾತೇಜಾಃ ಸರ್ವಲೋಕೇಷು ಚ ಸ್ತ್ರಿಯಃ।।
12006010e ನ ಗುಹ್ಯಂ ಧಾರಯಿಷ್ಯಂತೀತ್ಯತಿದುಃಖಸಮನ್ವಿತಃ।।

ಅತಿ ದುಃಖ ಸಮನ್ವಿತನಾದ ಆ ಮಹಾತೇಜಸ್ವಿಯು ಸರ್ವಲೋಕಗಳಲ್ಲಿನ ಸ್ತ್ರೀಯರಿಗೆ “ರಹಸ್ಯವನ್ನು ಹಿಡಿದಿಟ್ಟುಕೊಳ್ಳಲಾರಿರಿ!” ಎಂದು ಶಪಿಸಿದನು.

12006011a ಸ ರಾಜಾ ಪುತ್ರಪೌತ್ರಾಣಾಂ ಸಂಬಂಧಿಸುಹೃದಾಂ ತಥಾ।
12006011c ಸ್ಮರನ್ನುದ್ವಿಗ್ನಹೃದಯೋ ಬಭೂವಾಸ್ವಸ್ಥಚೇತನಃ।।

ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು.

12006012a ತತಃ ಶೋಕಪರೀತಾತ್ಮಾ ಸಧೂಮ ಇವ ಪಾವಕಃ।
12006012c ನಿರ್ವೇದಮಕರೋದ್ಧೀಮಾನ್ ರಾಜಾ ಸಂತಾಪಪೀಡಿತಃ।।

ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸ್ತ್ರೀಶಾಪೇ ಷಷ್ಠೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸ್ತ್ರೀಶಾಪವೆನ್ನುವ ಆರನೇ ಅಧ್ಯಾಯವು.