005 ಕರ್ಣವೀರ್ಯಕಥನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 5

ಸಾರ

ಕರ್ಣನು ಜರಾಸಂಧನೊಡನೆ ಯುದ್ಧಮಾಡಿ ಮಾಲಿನೀ ನಗರವನ್ನು ಬಹುಮಾನವನ್ನಾಗಿ ಪಡೆದುದು (1-7). ದೇವೇಂದ್ರನಿಗೆ ತನ್ನ ಸಹಜವಾಗಿದ್ದ ಕವಚ-ಕುಂಡಲಗಳನ್ನಿತ್ತು ಅರ್ಜುನನಿಂದ ಕರ್ಣನು ಹತನಾದುದು (8-15).

12005001 ನಾರದ ಉವಾಚ।
12005001a ಆವಿಷ್ಕೃತಬಲಂ ಕರ್ಣಂ ಜ್ಞಾತ್ವಾ ರಾಜಾ ತು ಮಾಗಧಃ।
12005001c ಆಹ್ವಯದ್ದ್ವೈರಥೇನಾಜೌ ಜರಾಸಂಧೋ ಮಹೀಪತಿಃ।।

ನಾರದನು ಹೇಳಿದನು: “ಸರ್ವತ್ರ ಖ್ಯಾತವಾಗಿದ್ದ ಕರ್ಣನ ಬಲವನ್ನು ಕೇಳಿ ಮಗಧ ದೇಶದ ರಾಜ ಮಹೀಪತಿ ಜರಾಸಂಧನು ಅವನನ್ನು ದ್ವೈರಥಯುದ್ಧಕ್ಕೆ ಆಹ್ವಾನಿಸಿದನು.

12005002a ತಯೋಃ ಸಮಭವದ್ಯುದ್ಧಂ ದಿವ್ಯಾಸ್ತ್ರವಿದುಷೋರ್ದ್ವಯೋಃ।
12005002c ಯುಧಿ ನಾನಾಪ್ರಹರಣೈರನ್ಯೋನ್ಯಮಭಿವರ್ಷತೋಃ।।

ದಿವ್ಯಾಸ್ತ್ರಗಳಲ್ಲಿ ಪರಿಣಿತರಾಗಿದ್ದ ಅವರಿಬ್ಬರ ನಡುವೆ ಯುದ್ಧವು ಪ್ರಾರಂಭವಾಯಿತು. ಯುದ್ಧದಲ್ಲಿ ನಾನಾ ಪ್ರಹಾರಗಳಿಂದ ಅನ್ಯೋನ್ಯರನ್ನು ತೋಯಿಸಿದರು.

12005003a ಕ್ಷೀಣಬಾಣೌ ವಿಧನುಷೌ ಭಗ್ನಖಡ್ಗೌ ಮಹೀಂ ಗತೌ।
12005003c ಬಾಹುಭಿಃ ಸಮಸಜ್ಜೇತಾಮುಭಾವಪಿ ಬಲಾನ್ವಿತೌ।।

ಬಾಣಗಳು ಮುಗಿದುಹೋಗಲು, ಧನುಸ್ಸೂ ಇಲ್ಲವಾಗಲು, ಮತ್ತು ಖಡ್ಗಗಳು ತುಂಡಾಗಲು ಆ ಇಬ್ಬರು ಬಲಾನ್ವಿತರೂ ನೆಲದ ಮೇಲೆ ನಿಂತು ಬಾಹುಯುದ್ಧದಲ್ಲಿ ತೊಡಗಿದರು.

12005004a ಬಾಹುಕಂಟಕಯುದ್ಧೇನ ತಸ್ಯ ಕರ್ಣೋಽಥ ಯುಧ್ಯತಃ।
12005004c ಬಿಭೇದ ಸಂಧಿಂ ದೇಹಸ್ಯ ಜರಯಾ ಶ್ಲೇಷಿತಸ್ಯ ಹ।।

ಬಾಹುಕಂಟಕ1 ಯುದ್ಧದಲ್ಲಿ ತೊಡಗಿದ್ದ ಕರ್ಣನು ಜರೆಯು ಜೋಡಿಸಿದ್ದ ಜರಾಸಂಧನ ಸಂಧಿಬಂಧವನ್ನು ಭೇದಿಸತೊಡಗಿದನು.

12005005a ಸ ವಿಕಾರಂ ಶರೀರಸ್ಯ ದೃಷ್ಟ್ವಾ ನೃಪತಿರಾತ್ಮನಃ।
12005005c ಪ್ರೀತೋಽಸ್ಮೀತ್ಯಬ್ರವೀತ್ಕರ್ಣಂ ವೈರಮುತ್ಸೃಜ್ಯ ಭಾರತ।।

ಭಾರತ! ತನ್ನ ಶರೀರವು ವಿಕಾರವಾಗುತ್ತಿರುವನ್ನು ನೋಡಿ ಆ ನೃಪತಿಯು ವೈರವನ್ನು ತೊರೆದು “ನಿನ್ನಿಂದ ನಾನು ಪ್ರೀತನಾಗಿದ್ದೇನೆ!” ಎಂದು ಕರ್ಣನಿಗೆ ಹೇಳಿದನು.

12005006a ಪ್ರೀತ್ಯಾ ದದೌ ಸ ಕರ್ಣಾಯ ಮಾಲಿನೀಂ ನಗರೀಮಥ।
12005006c ಅಂಗೇಷು ನರಶಾರ್ದೂಲ ಸ ರಾಜಾಸೀತ್ಸಪತ್ನಜಿತ್।।

ಅವನು ಪ್ರೀತಿಯಿಂದ ಕರ್ಣನಿಗೆ ಮಾಲಿನೀ ನಗರವನ್ನು ಕೊಟ್ಟನು. ನರಶಾರ್ದೂಲ! ಶತ್ರುವಿಜಯಿ ಅಂಗದ ರಾಜನು ಅದನ್ನು ಆಳಿದನು.

12005007a ಪಾಲಯಾಮಾಸ ಚಂಪಾಂ ತು ಕರ್ಣಃ ಪರಬಲಾರ್ದನಃ।
12005007c ದುರ್ಯೋಧನಸ್ಯಾನುಮತೇ ತವಾಪಿ ವಿದಿತಂ ತಥಾ।।

ಪರಬಲಾರ್ದನ ಕರ್ಣನು ದುರ್ಯೋಧನನ ಅನುಮತಿಯಂತೆ ಚಂಪಾಪುರವನ್ನೂ ಆಳುತ್ತಿದ್ದನು. ಅದು ನಿನಗೆ ತಿಳಿದೇ ಇದೆ.

12005008a ಏವಂ ಶಸ್ತ್ರಪ್ರತಾಪೇನ ಪ್ರಥಿತಃ ಸೋಽಭವತ್ಕ್ಷಿತೌ।
12005008c ತ್ವದ್ಧಿತಾರ್ಥಂ ಸುರೇಂದ್ರೇಣ ಭಿಕ್ಷಿತೋ ವರ್ಮಕುಂಡಲೇ।।

ಹೀಗೆ ಶಸ್ತ್ರಪ್ರತಾಪದಿಂದ ಅವನು ಭೂಮಿಯಲ್ಲಿ ಖ್ಯಾತನಾದನು. ನಿನ್ನ ಹಿತಕ್ಕಾಗಿ ಸುರೇಂದ್ರನು ಅವನ ಕವಚ-ಕುಂಡಲಗಳನ್ನು ಭಿಕ್ಷೆಯಾಗಿ ಬೇಡಿದನು.

12005009a ಸ ದಿವ್ಯೇ ಸಹಜೇ ಪ್ರಾದಾತ್ಕುಂಡಲೇ ಪರಮಾರ್ಚಿತೇ।
12005009c ಸಹಜಂ ಕವಚಂ ಚೈವ ಮೋಹಿತೋ ದೇವಮಾಯಯಾ।।

ದೇವಮಾಯೆಯಿಂದ ಮೋಹಿತನಾದ ಅವನು ಹುಟ್ಟುವಾಗಲೇ ಇದ್ದಿದ್ದ ಕುಂಡಲಗಳನ್ನೂ ಹುಟ್ಟುವಾಗಲೇ ಇದ್ದಿದ್ದ ಕವಚವನ್ನೂ ಇಂದ್ರನಿಗೆ ಕೊಟ್ಟುಬಿಟ್ಟನು.

12005010a ವಿಮುಕ್ತಃ ಕುಂಡಲಾಭ್ಯಾಂ ಚ ಸಹಜೇನ ಚ ವರ್ಮಣಾ।
12005010c ನಿಹತೋ ವಿಜಯೇನಾಜೌ ವಾಸುದೇವಸ್ಯ ಪಶ್ಯತಃ।।

ಸಹಜ ಕವಚ-ಕುಂಡಲಗಳಿಂದ ವಿಹೀನನಾಗಿದ್ದ ಅವನನ್ನು ವಿಜಯ ಅರ್ಜುನನು ವಾಸುದೇವನ ಸಮಕ್ಷಮದಲ್ಲಿಯೇ ಸಂಹರಿಸಿದನು.

12005011a ಬ್ರಾಹ್ಮಣಸ್ಯಾಭಿಶಾಪೇನ ರಾಮಸ್ಯ ಚ ಮಹಾತ್ಮನಃ।
12005011c ಕುಂತ್ಯಾಶ್ಚ ವರದಾನೇನ ಮಾಯಯಾ ಚ ಶತಕ್ರತೋಃ।।
12005012a ಭೀಷ್ಮಾವಮಾನಾತ್ಸಂಖ್ಯಾಯಾಂ ರಥಾನಾಮರ್ಧಕೀರ್ತನಾತ್।
12005012c ಶಲ್ಯಾತ್ತೇಜೋವಧಾಚ್ಚಾಪಿ ವಾಸುದೇವನಯೇನ ಚ।।
12005013a ರುದ್ರಸ್ಯ ದೇವರಾಜಸ್ಯ ಯಮಸ್ಯ ವರುಣಸ್ಯ ಚ।
12005013c ಕುಬೇರದ್ರೋಣಯೋಶ್ಚೈವ ಕೃಪಸ್ಯ ಚ ಮಹಾತ್ಮನಃ।।
12005014a ಅಸ್ತ್ರಾಣಿ ದಿವ್ಯಾನ್ಯಾದಾಯ ಯುಧಿ ಗಾಂಡೀವಧನ್ವನಾ।
12005014c ಹತೋ ವೈಕರ್ತನಃ ಕರ್ಣೋ ದಿವಾಕರಸಮದ್ಯುತಿಃ।।

ಬ್ರಾಹ್ಮಣನ ಮತ್ತು ಮಹಾತ್ಮ ರಾಮನ ಶಾಪದಿಂದ, ಕುಂತಿಯ ಮತ್ತು ಶತುಕ್ರತುವಿಗೆ ಮೋಸಹೋಗಿ ನೀಡಿದ ವರದಿಂದ, ರಥಾಥಿರಥರನ್ನು ಎಣಿಸುವಾಗ ಭೀಷ್ಮನು ಅವನನ್ನು ಅರ್ಧರಥನೆಂದು ಹೇಳಿದುದರಿಂದ, ಶಲ್ಯನ ತೇಜೋವಧೆಯಿಂದ, ವಾಸುದೇವನ ನೀತಿ, ಮತ್ತು ರುದ್ರ-ದೇವರಾಜ-ಯಮ-ವರುಣ-ಕುಬೇರ-ದ್ರೋಣ ಮತ್ತು ಮಹಾತ್ಮಕೃಪರಿಂದ ದಿವ್ಯಾಸ್ತ್ರಗಳನ್ನು ಪಡೆದಿದ್ದ ಗಾಂಡೀವ ಧನ್ವಿ - ಇವೆಲ್ಲ ಕಾರಣಗಳಿಂದ ದಿವಾಕರ ಸಮಾನ ಕಾಂತಿಯಿದ್ದ ವೈಕರ್ತನ ಕರ್ಣನು ಯುದ್ಧದಲ್ಲಿ ಹತನಾದನು.

12005015a ಏವಂ ಶಪ್ತಸ್ತವ ಭ್ರಾತಾ ಬಹುಭಿಶ್ಚಾಪಿ ವಂಚಿತಃ।
12005015c ನ ಶೋಚ್ಯಃ ಸ ನರವ್ಯಾಘ್ರೋ ಯುದ್ಧೇ ಹಿ ನಿಧನಂ ಗತಃ।।

ಹೀಗೆ ಅನೇಕರಿಂದ ಶಾಪಗ್ರಸ್ತನಾಗಿ ಮತ್ತು ಅನೇಕರಿಂದ ವಂಚಿತನಾಗಿ ನಿನ್ನ ಅಣ್ಣ ನರವ್ಯಾಘ್ರನು ಯುದ್ಧದಲ್ಲಿ ನಿಧನಹೊಂದಿದನು. ಅವನಿಗಾಗಿ ಶೋಕಿಸಬೇಡ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕರ್ಣವೀರ್ಯಕಥನಂ ನಾಮ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕರ್ಣವೀರ್ಯಕಥನವೆನ್ನುವ ಐದನೇ ಅಧ್ಯಾಯವು.


  1. ಬಾಹುಕಂಟಕ ಯುದ್ಧವನ್ನು ಈ ರೀತಿ ವರ್ಣಿಸಿದ್ದಾರೆ: ಏಕಾಂ ಜಂಘಾಂ ಪದಾಕ್ರಮ್ಯ ಪರಾಮುದ್ಯಮ್ಯ ಪಾಟ್ಯತೇ| ಕೇತಕೀಪತ್ರವಚ್ಚತ್ರೋರ್ಯುದ್ಧಂ ತದ್ಬಾಹುಕಂಟಕಂ|| ಅರ್ಥಾತ್ ಕೇದಗೆಯ ಗರಿಯನ್ನು ಎರಡಾಗಿ ಸೀಳುವಂತೆ ಶತ್ರುವಿನ ಒಂದು ಮೊಣಕಾಲನ್ನು ಮೆಟ್ಟಿಕೊಂಡು ಮತ್ತೊಂದು ಮೊಣಕಾಲನ್ನು ಮೇಲಕ್ಕೆತ್ತಿ ಸೀಳುವುದಕ್ಕೆ ಬಾಹುಕಂಟಕಯುದ್ಧವೆಂದು ಹೆಸರು. (ಭಾರತ ದರ್ಶನ/ಗೀತಾ ಪ್ರೆಸ್) ↩︎