ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 4
ಸಾರ
ಸ್ವಯಂವರದಲ್ಲಿ ದುರ್ಯೋಧನನು ಕಲಿಂಗ ರಾಜಕುಮಾರಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋದುದು (1-13). ಆಗ ಕರ್ಣನು ಆಕ್ರಮಣಿಸಿದ ರಾಜರನ್ನು ಸೋಲಿಸಿ, ದುರ್ಯೋಧನನನ್ನು ರಕ್ಷಿಸಿದುದು (14-21).
12004001 ನಾರದ ಉವಾಚ।
12004001a ಕರ್ಣಸ್ತು ಸಮವಾಪ್ಯೈತದಸ್ತ್ರಂ ಭಾರ್ಗವನಂದನಾತ್।
12004001c ದುರ್ಯೋಧನೇನ ಸಹಿತೋ ಮುಮುದೇ ಭರತರ್ಷಭ।।
ನಾರದನು ಹೇಳಿದನು: “ಭರತರ್ಷಭ! ಭಾರ್ಗವನಂದನನಿಂದ ಆ ಅಸ್ತ್ರವನ್ನು ಪಡೆದು ಕರ್ಣನು ದುರ್ಯೋಧನನೊಂದಿಗೆ ಆನಂದಿಸಿದನು.
12004002a ತತಃ ಕದಾ ಚಿದ್ರಾಜಾನಃ ಸಮಾಜಗ್ಮುಃ ಸ್ವಯಂವರೇ।
12004002c ಕಲಿಂಗವಿಷಯೇ ರಾಜನ್ರಾಜ್ಞಶ್ಚಿತ್ರಾಂಗದಸ್ಯ ಚ।।
ರಾಜನ್! ಅನಂತರ ಒಮ್ಮೆ ಕಲಿಂಗದೇಶದ ರಾಜ ಚಿತ್ರಾಂಗದನಲ್ಲಿಗೆ ಸ್ವಯಂವರಕ್ಕೆಂದು ರಾಜರು ಬಂದು ಸೇರಿದರು.
12004003a ಶ್ರೀಮದ್ರಾಜಪುರಂ ನಾಮ ನಗರಂ ತತ್ರ ಭಾರತ।
12004003c ರಾಜಾನಃ ಶತಶಸ್ತತ್ರ ಕನ್ಯಾರ್ಥಂ ಸಮುಪಾಗಮನ್।।
ಭಾರತ! ಆ ನಗರದ ಹೆಸರು ಶ್ರೀಮದ್ರಾಜಪುರವೆಂದಿತ್ತು. ಅಲ್ಲಿಗೆ ಕನ್ಯೆಗೋಸ್ಕರವಾಗಿ ನೂರಾರು ರಾಜರು ಆಗಮಿಸಿದರು.
12004004a ಶ್ರುತ್ವಾ ದುರ್ಯೋಧನಸ್ತತ್ರ ಸಮೇತಾನ್ಸರ್ವಪಾರ್ಥಿವಾನ್।
12004004c ರಥೇನ ಕಾಂಚನಾಂಗೇನ ಕರ್ಣೇನ ಸಹಿತೋ ಯಯೌ।।
ಸರ್ವ ಪಾರ್ಥಿವರೂ ಅಲ್ಲಿ ಸೇರಿರುವರೆಂದು ಕೇಳಿದ ದುರ್ಯೋಧನನು ಕರ್ಣನೊಂದಿಗೆ ಕಾಂಚನ ರಥದಲ್ಲಿ ಕುಳಿತು ಹೋದನು.
12004005a ತತಃ ಸ್ವಯಂವರೇ ತಸ್ಮಿನ್ಸಂಪ್ರವೃತ್ತೇ ಮಹೋತ್ಸವೇ।
12004005c ಸಮಾಪೇತುರ್ನೃಪತಯಃ ಕನ್ಯಾರ್ಥೇ ನೃಪಸತ್ತಮ।।
12004006a ಶಿಶುಪಾಲೋ ಜರಾಸಂಧೋ ಭೀಷ್ಮಕೋ ವಕ್ರ ಏವ ಚ।
12004006c ಕಪೋತರೋಮಾ ನೀಲಶ್ಚ ರುಕ್ಮೀ ಚ ದೃಢವಿಕ್ರಮಃ।।
12004007a ಸೃಗಾಲಶ್ಚ ಮಹಾರಾಜ ಸ್ತ್ರೀರಾಜ್ಯಾಧಿಪತಿಶ್ಚ ಯಃ।
12004007c ಅಶೋಕಃ ಶತಧನ್ವಾ ಚ ಭೋಜೋ ವೀರಶ್ಚ ನಾಮತಃ।।
ನೃಪಸತ್ತಮ! ನಡೆಯುತ್ತಿದ್ದ ಆ ಸ್ವಯಂವರ ಮಹೋತ್ಸವಕ್ಕೆ ಕನ್ಯೆಗಾಗಿ ಈ ಎಲ್ಲ ನೃಪತಿಯರು ಸೇರಿದ್ದರು: ಶಿಶುಪಾಲ, ಜರಾಸಂಧ, ಭೀಷ್ಮಕ, ವಕ್ರ, ಕಪೋತರೋಮ, ನೀಲ, ದೃಢವಿಕ್ರಮಿ ರುಕ್ಮಿ, ಸ್ತ್ರೀರಾಜ್ಯಾಧಿಪತಿ ಮಹಾರಾಜ ಸೃಗಾಲ, ಅಶೋಕ, ಶತಧನ್ವ, ಭೋಜ ಮತ್ತು ವೀರನೆನ್ನುವ ರಾಜ.
12004008a ಏತೇ ಚಾನ್ಯೇ ಚ ಬಹವೋ ದಕ್ಷಿಣಾಂ ದಿಶಮಾಶ್ರಿತಾಃ।
12004008c ಮ್ಲೇಚ್ಚಾಚಾರ್ಯಾಶ್ಚ ರಾಜಾನಃ ಪ್ರಾಚ್ಯೋದೀಚ್ಯಾಶ್ಚ ಭಾರತ।।
ಭಾರತ! ಇವರಲ್ಲದೇ ಇನ್ನು ಇತರ ಅನೇಕ ದಕ್ಷಿಣದೇಶದವರು, ಮ್ಲೇಚ್ಛರು, ಆರ್ಯರು, ಪೂರ್ವೋತ್ತರ ದಿಕ್ಕಿನ ರಾಜರು ಬಂದಿದ್ದರು.
12004009a ಕಾಂಚನಾಂಗದಿನಃ ಸರ್ವೇ ಬದ್ಧಜಾಂಬೂನದಸ್ರಜಃ।
12004009c ಸರ್ವೇ ಭಾಸ್ವರದೇಹಾಶ್ಚ ವ್ಯಾಘ್ರಾ ಇವ ಮದೋತ್ಕಟಾಃ।।
ಅವರೆಲ್ಲರೂ ಕಾಂಚನ ಅಂಗದಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ್ದರು. ಎಲ್ಲರ ದೇಹಗಳೂ ಕಾಂತಿಯುಕ್ತವಾಗಿದ್ದವು ಮತ್ತು ಎಲ್ಲರೂ ವ್ಯಾಘ್ರರಂತೆ ಮದೋತ್ಕಟರಾಗಿದ್ದರು.
12004010a ತತಃ ಸಮುಪವಿಷ್ಟೇಷು ತೇಷು ರಾಜಸು ಭಾರತ।
12004010c ವಿವೇಶ ರಂಗಂ ಸಾ ಕನ್ಯಾ ಧಾತ್ರೀವರ್ಷಧರಾನ್ವಿತಾ।।
ಭಾರತ! ಆ ರಾಜರು ಕುಳಿತುಕೊಂಡಿರಲು ಕನ್ಯೆಯು ಅನೇಕ ಸೇವಕಿಯರಿಂದ ಸುತ್ತುವರೆಯಲ್ಪಟ್ಟು ರಂಗವನ್ನು ಪ್ರವೇಶಿಸಿದಳು.
12004011a ತತಃ ಸಂಶ್ರಾವ್ಯಮಾಣೇಷು ರಾಜ್ಞಾಂ ನಾಮಸು ಭಾರತ।
12004011c ಅತ್ಯಕ್ರಾಮದ್ಧಾರ್ತರಾಷ್ಟ್ರಂ ಸಾ ಕನ್ಯಾ ವರವರ್ಣಿನೀ।।
ಭಾರತ! ರಾಜರ ಹೆಸರುಗಳನ್ನು ಹೇಳುತ್ತಿರುವಾಗ ಆ ವರವರ್ಣಿನೀ ಕನ್ಯೆಯು ಧಾರ್ತರಾಷ್ಟ್ರ ದುರ್ಯೋಧನನನ್ನು ದಾಟಿ ಮುಂದುವರೆದಳು.
12004012a ದುರ್ಯೋಧನಸ್ತು ಕೌರವ್ಯೋ ನಾಮರ್ಷಯತ ಲಂಘನಮ್।
12004012c ಪ್ರತ್ಯಷೇಧಚ್ಚ ತಾಂ ಕನ್ಯಾಮಸತ್ಕೃತ್ಯ ನರಾಧಿಪಾನ್।।
ಆ ರೀತಿ ಅವಳು ತನ್ನನ್ನು ದಾಟಿಹೋದುದನ್ನು ಕೌರವ್ಯ ದುರ್ಯೋಧನನು ಸಹಿಸಿಕೊಳ್ಳಲಿಲ್ಲ. ಅಲ್ಲಿದ್ದ ನರಾಧಿಪರನ್ನು ಕಡೆಗಣಿಸಿ ಅವನು ಆ ಕನ್ಯೆಯನ್ನು ತಡೆದನು.
12004013a ಸ ವೀರ್ಯಮದಮತ್ತತ್ವಾದ್ಭೀಷ್ಮದ್ರೋಣಾವುಪಾಶ್ರಿತಃ।
12004013c ರಥಮಾರೋಪ್ಯ ತಾಂ ಕನ್ಯಾಮಾಜುಹಾವ ನರಾಧಿಪಾನ್।।
12004014a ತಮನ್ವಯಾದ್ರಥೀ ಖಡ್ಗೀ ಭದ್ಧಗೋಧಾಂಗುಲಿತ್ರವಾನ್।
12004014c ಕರ್ಣಃ ಶಸ್ತ್ರಭೃತಾಂ ಶ್ರೇಷ್ಠಃ ಪೃಷ್ಠತಃ ಪುರುಷರ್ಷಭ।।
ಭೀಷ್ಮ-ದ್ರೋಣರ ಆಶ್ರಯವನ್ನು ಪಡೆದಿದ್ದ ವೀರ್ಯಮದದಿಂದ ಮತ್ತನಾಗಿದ್ದ ಅವನು ಆ ಕನ್ಯೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಪಹರಿಸಿದನು. ಭರತರ್ಷಭ! ಆಗ ಗೋಧಾಂಗುಲಿಗಳನ್ನು ಕಟ್ಟಿಕೊಂಡು ಖಡ್ಗಧಾರಿಯಾಗಿ ರಥವೇರಿ ಶಸ್ತ್ರಭೃತರಲ್ಲಿ ಶ್ರೇಷ್ಠ ಕರ್ಣನು ಅವನನ್ನು ಅನುಸರಿಸಿ ಹೋದನು.
12004015a ತತೋ ವಿಮರ್ದಃ ಸುಮಹಾನ್ರಾಜ್ಞಾಮಾಸೀದ್ಯುಧಿಷ್ಠಿರ।
12004015c ಸಂನಹ್ಯತಾಂ ತನುತ್ರಾಣಿ ರಥಾನ್ಯೋಜಯತಾಮಪಿ।।
ಯುಧಿಷ್ಠಿರ! ಆಗ ರಾಜರ ಮಹಾ ಯುದ್ಧವೇ ನಡೆಯಿತು. ಕುಪಿತರಾದ ರಾಜರು ಕವಚಗಳನ್ನು ಧರಿಸಿ ರಥಗಳನ್ನು ಸಿದ್ಧಗೊಳಿಸಿದರು.
12004016a ತೇಽಭ್ಯಧಾವಂತ ಸಂಕ್ರುದ್ಧಾಃ ಕರ್ಣದುರ್ಯೋಧನಾವುಭೌ।
12004016c ಶರವರ್ಷಾಣಿ ಮುಂಚಂತೋ ಮೇಘಾಃ ಪರ್ವತಯೋರಿವ।।
ಮೇಘಗಳು ಪರ್ವತಗಳ ಮೇಲೆ ಹೇಗೋ ಹಾಗೆ ಸಂಕ್ರುದ್ಧರಾದ ಅವರು ಕರ್ಣ-ದುರ್ಯೋಧನರ ಮೇಲೆ ಶರವರ್ಷಗಳನ್ನು ಸುರಿಸಿದರು.
12004017a ಕರ್ಣಸ್ತೇಷಾಮಾಪತತಾಮೇಕೈಕೇನ ಕ್ಷುರೇಣ ಹ।
12004017c ಧನೂಂಷಿ ಸಶರಾವಾಪಾನ್ಯಪಾತಯತ ಭೂತಲೇ।।
ಕರ್ಣನು ತನ್ನ ಮೇಲೆ ಬೀಳುತ್ತಿದ್ದ ಅವರ ಬಾಣಗಳನ್ನು ಒಂದೊಂದಾಗಿ ಕ್ಷುರದಿಂದ ಕತ್ತರಿಸಿ ಅವರ ಧನುಸ್ಸು-ಬತ್ತಳಿಕೆಗಳನ್ನೂ ಭೂಮಿಯ ಮೇಲೆ ಬೀಳಿಸಿದನು.
12004018a ತತೋ ವಿಧನುಷಃ ಕಾಂಶ್ಚಿತ್ಕಾಂಶ್ಚಿದುದ್ಯತಕಾರ್ಮುಕಾನ್।
12004018c ಕಾಂಶ್ಚಿದುದ್ವಹತೋ ಬಾಣಾನ್ರಥಶಕ್ತಿಗದಾಸ್ತಥಾ।।
ಆಗ ಕೆಲವರು ಧನುಸ್ಸುಗಳನ್ನು ಕಳೆದುಕೊಂಡಿದ್ದರು. ಕೆಲವರು ಬಾಣಗಳಿಲ್ಲದೇ ಕೇವಲ ಧನುಸ್ಸುಗಳನ್ನು ಎತ್ತಿ ಹಿಡಿದಿದ್ದರು. ಕೆಲವರು ಬಾಣಗಳನ್ನೂ, ರಥ-ಶಕ್ತಿ-ಗದೆಗಳನ್ನೂ ಕಳೆದುಕೊಂಡಿದ್ದರು.
12004019a ಲಾಘವಾದಾಕುಲೀಕೃತ್ಯ ಕರ್ಣಃ ಪ್ರಹರತಾಂ ವರಃ।
12004019c ಹತಸೂತಾಂಶ್ಚ ಭೂಯಿಷ್ಠಾನವಜಿಗ್ಯೇ ನರಾಧಿಪಾನ್।।
ಪ್ರಹರಿಗಳಲ್ಲಿ ಶ್ರೇಷ್ಠ ಕರ್ಣನು ತನ್ನ ಹಸ್ತಲಾಘವದಿಂದ ಅವರನ್ನು ಆಯುಧಹೀನರನ್ನಾಗಿಸಿ, ಅವರ ಸಾರಥಿಗಳನ್ನೂ ಸಂಹರಿಸಿ, ಆ ನರಾಧಿಪರನ್ನು ಇನ್ನೂ ಹೆಚ್ಚಿನ ಕಷ್ಟಗಳಿಗೀಡುಮಾಡಿದನು.
12004020a ತೇ ಸ್ವಯಂ ತ್ವರಯಂತೋಽಶ್ವಾನ್ಯಾಹಿ ಯಾಹೀತಿ ವಾದಿನಃ।
12004020c ವ್ಯಪೇಯುಸ್ತೇ ರಣಂ ಹಿತ್ವಾ ರಾಜಾನೋ ಭಗ್ನಮಾನಸಾಃ।।
ಸ್ವಯಂ ರಾಜರೇ ಹೋಗು ಹೋಗೆಂದು ಕುದುರೆಗಳನ್ನು ಓಡಿಸುತ್ತಾ, ಭಗ್ನಮಾನಸರಾಗಿ ರಣವನ್ನು ತೊರೆದು ಹೊರಟು ಹೋದರು.
12004021a ದುರ್ಯೋಧನಸ್ತು ಕರ್ಣೇನ ಪಾಲ್ಯಮಾನೋಽಭ್ಯಯಾತ್ತದಾ।
12004021c ಹೃಷ್ಟಃ ಕನ್ಯಾಮುಪಾದಾಯ ನಗರಂ ನಾಗಸಾಹ್ವಯಮ್।।
ದುರ್ಯೋಧನನಾದರೋ ಕರ್ಣನಿಂದ ರಕ್ಷಿಸಲ್ಪಟ್ಟು ಸಂತೋಷದಿಂದ ಕನ್ಯೆಯನ್ನು ಕರೆದುಕೊಂದು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದುರ್ಯೋಧನಸ್ವಯಂವರೇ ಕನ್ಯಾಹರಣಂ ನಾಮ ಚತುರ್ಥೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದುರ್ಯೋಧನನ ಸ್ವಯಂವರದಲ್ಲಿ ಕನ್ಯಾಹರಣ ಎನ್ನುವ ನಾಲ್ಕನೇ ಅಧ್ಯಾಯವು.