ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 3
ಸಾರ
ಪರಶುರಾಮನಿಂದ ಬ್ರಹ್ಮಾಸ್ತ್ರವನ್ನು ಕಲಿತುಕೊಂಡ ಕರ್ಣನು ಗುರುವಿನ ಪ್ರೀತಿಪಾತ್ರನಾಗಿದ್ದುದು (1-4). ಪರಶುರಾಮನು ಸೌಹಾರ್ದತೆಯು ಬೆಳೆದಿದ್ದ ಕರ್ಣನ ತೊಡೆಯ ಮೇಲೆ ತನ್ನ ಶಿರವನ್ನಿತ್ತು ವಿಶ್ವಾಸದಿಂದ ಮಲಗಿದ್ದಾಗ ಕ್ರಿಮಿಯೊಂದು ಕರ್ಣನ ತೊಡೆಯನ್ನು ಕೊರೆದು ಹರಿದ ರಕ್ತವು ತಾಗಿ ಪರಶುರಾಮನು ಎಚ್ಚರಗೊಂಡಿದುದು (5-11). ಕ್ರಿಮಿಯ ರೂಪದಲ್ಲಿದ್ದ ರಾಕ್ಷಸನು ಶಾಪವಿಮೋಚನನಾದುದು (12-24). ಕರ್ಣನು ಬ್ರಾಹ್ಮಣನಲ್ಲವೆಂದು ತಿಳಿದುಕೊಂಡ ಪರಶುರಾಮನು ಕೋಪದಿಂದ “ನಿನ್ನ ವಧೆಯ ಕಾಲವಲ್ಲದಾಗ ಮತ್ತು ನಿನ್ನ ಸಮಾನರೊಡನೆ ಯುದ್ಧಮಾಡುವಾಗ ಮಾತ್ರ ಬ್ರಹ್ಮಾಸ್ತ್ರವು ನಿನಗೆ ಹೊಳೆಯುತ್ತದೆ” ಎಂಬ ಶಾಪವನ್ನಿತ್ತಿದುದು (25-33).
12003001 ನಾರದ ಉವಾಚ।
12003001a ಕರ್ಣಸ್ಯ ಬಾಹುವೀರ್ಯೇಣ ಪ್ರಶ್ರಯೇಣ1 ದಮೇನ ಚ।
12003001c ತುತೋಷ ಭೃಗುಶಾರ್ದೂಲೋ ಗುರುಶುಶ್ರೂಷಯಾ ತಥಾ।।
ನಾರದನು ಹೇಳಿದನು: “ಕರ್ಣನ ಬಾಹುವೀರ್ಯ, ಪರಿಶ್ರಮ, ಜಿತೇಂದ್ರಿಯತೆ ಮತ್ತು ಗುರುಶುಶ್ರೂಷೆಗಳಿಂದ ಭೃಗುಶಾರ್ದೂಲನು ಸಂತುಷ್ಟನಾದನು.
12003002a ತಸ್ಮೈ ಸ ವಿಧಿವತ್ಕೃತ್ಸ್ನಂ ಬ್ರಹ್ಮಾಸ್ತ್ರಂ ಸನಿವರ್ತನಮ್।
12003002c ಪ್ರೋವಾಚಾಖಿಲಮವ್ಯಗ್ರಂ ತಪಸ್ವೀ ಸುತಪಸ್ವಿನೇ।।
ಉತ್ತಮ ತಪೋನಿರತನಾಗಿದ್ದ ತಪಸ್ವಿ ರಾಮನು ಅವ್ಯಗ್ರ ಕರ್ಣನಿಗೆ ವಿಧಿವತ್ತಾಗಿ ಸಂಪೂರ್ಣ ಬ್ರಹ್ಮಾಸ್ತ್ರ ಪ್ರಯೋಗ-ಉಪಸಂಹಾರಗಳೊಂದಿಗೆ ಎಲ್ಲವನ್ನೂ ಉಪದೇಶಿಸಿದನು.
12003003a ವಿದಿತಾಸ್ತ್ರಸ್ತತಃ ಕರ್ಣೋ ರಮಮಾಣೋಽಽಶ್ರಮೇ ಭೃಗೋಃ।
12003003c ಚಕಾರ ವೈ ಧನುರ್ವೇದೇ ಯತ್ನಮದ್ಭುತವಿಕ್ರಮಃ।।
ಬ್ರಹ್ಮಾಸ್ತ್ರವನ್ನು ಕಲಿತುಕೊಂಡ ಅದ್ಭುತವಿಕ್ರಮಿ ಕರ್ಣನು ಭೃಗುವಿನ ಆ ಆಶ್ರಮದಲ್ಲಿ ಸಂತೋಷದಿಂದಲೇ ಇದ್ದುಕೊಂಡು ಧನುರ್ವೇದವನ್ನು ಹಸ್ತಗತಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದನು.
12003004a ತತಃ ಕದಾ ಚಿದ್ರಾಮಸ್ತು ಚರನ್ನಾಶ್ರಮಮಂತಿಕಾತ್।
12003004c ಕರ್ಣೇನ ಸಹಿತೋ ಧೀಮಾನುಪವಾಸೇನ ಕರ್ಶಿತಃ।।
12003005a ಸುಷ್ವಾಪ ಜಾಮದಗ್ನ್ಯೋ ವೈ ವಿಸ್ರಂಭೋತ್ಪನ್ನಸೌಹೃದಃ।
12003005c ಕರ್ಣಸ್ಯೋತ್ಸಂಗ ಆಧಾಯ ಶಿರಃ ಕ್ಲಾಂತಮನಾ ಗುರುಃ।।
ಅನಂತರ ಒಮ್ಮೆ ರಾಮನು ಕರ್ಣನ ಸಹಿತ ಆಶ್ರಮದ ಬಳಿಯಲ್ಲಿಯೇ ತಿರುಗಾಡುತ್ತಿದ್ದನು. ಆ ಧೀಮಂತನು ಉಪವಾಸದಿಂದ ಕೃಶನಾಗಿದ್ದನು. ಅವನ ಮನಸ್ಸೂ ಕೂಡ ಬಹಳವಾಗಿ ಆಯಾಸಗೊಂಡಿತ್ತು. ಆಗ ಗುರು ಜಾಮದಗ್ನಿಯು ಸೌಹಾರ್ದತೆಯು ಬೆಳೆದಿದ್ದ ಕರ್ಣನ ತೊಡೆಯ ಮೇಲೆ ತನ್ನ ಶಿರವನ್ನಿತ್ತು ವಿಶ್ವಾಸದಿಂದ ಮಲಗಿದನು.
12003006a ಅಥ ಕೃಮಿಃ ಶ್ಲೇಷ್ಮಮಯೋ ಮಾಂಸಶೋಣಿತಭೋಜನಃ।
12003006c ದಾರುಣೋ ದಾರುಣಸ್ಪರ್ಶಃ ಕರ್ಣಸ್ಯಾಭ್ಯಾಶಮಾಗಮತ್।।
ಅದೇ ಸಮಯದಲ್ಲಿ ಕಫ, ಮೇಧಸ್ಸು, ಮಾಂಸ-ರಕ್ತಗಳನ್ನೇ ಭುಂಜಿಸುವ, ದಾರುಣವಾಗಿ ಕಚ್ಚಬಲ್ಲ, ದಾರುಣ ಕ್ರಿಮಿಯೊಂದು ಕರ್ಣನ ಬಳಿ ಬಂದಿತು.
12003007a ಸ ತಸ್ಯೋರುಮಥಾಸಾದ್ಯ ಬಿಭೇದ ರುಧಿರಾಶನಃ।
12003007c ನ ಚೈನಮಶಕತ್ಕ್ಷೇಪ್ತುಂ ಹಂತುಂ ವಾಪಿ ಗುರೋರ್ಭಯಾತ್।।
ರಕ್ತಾಹಾರಿಯಾದ ಆ ಕ್ರಿಮಿಯು ಅವನ ತೊಡೆಯ ಮೇಲೆ ಕುಳಿತು ತೊಡೆಯನ್ನು ಕೊರೆಯ ತೊಡಗಿತು. ಗುರುವಿನ ಭಯದಿಂದ ಅದನ್ನು ಎತ್ತಿ ಒಗೆಯಲು ಅಥವಾ ಕೊಲ್ಲಲು ಅವನಿಗೆ ಸಾಧ್ಯವಾಗಲಿಲ್ಲ.
12003008a ಸಂದಶ್ಯಮಾನೋಽಪಿ ತಥಾ ಕೃಮಿಣಾ ತೇನ ಭಾರತ।
12003008c ಗುರುಪ್ರಬೋಧಶಂಕೀ ಚ ತಮುಪೈಕ್ಷತ ಸೂತಜಃ।।
ಭಾರತ! ಆ ಕ್ರಿಮಿಯು ತನ್ನನ್ನು ಕೊರೆಯುತ್ತಿದ್ದರೂ ಗುರುವಿಗೆ ಎಚ್ಚರವಾಗಬಹುದೆಂಬ ಶಂಕೆಯಿಂದ ಸೂತಜನು ಅದನ್ನು ಉಪೇಕ್ಷಿಸಿದನು.
12003009a ಕರ್ಣಸ್ತು ವೇದನಾಂ ಧೈರ್ಯಾದಸಹ್ಯಾಂ ವಿನಿಗೃಹ್ಯ ತಾಮ್।
12003009c ಅಕಂಪನ್ನವ್ಯಥಂಶ್ಚೈವ ಧಾರಯಾಮಾಸ ಭಾರ್ಗವಮ್।।
ವೇದನೆಯು ಸಹಿಸಲಸಾಧ್ಯವಾಗಿದ್ದರೂ ಕರ್ಣನು ಧೈರ್ಯದಿಂದ ಅದನ್ನು ಸಹಿಸಿಕೊಂಡು, ತನ್ನ ದೇಹವನ್ನು ಕಂಪಿಸದೇ ಭಾರ್ಗವನನ್ನು ತೊಡೆಯಮೇಲೆ ಮಲಗಿಸಿಕೊಂಡೇ ಇದ್ದನು.
12003010a ಯದಾ ತು ರುಧಿರೇಣಾಂಗೇ ಪರಿಸ್ಪೃಷ್ಟೋ ಭೃಗೂದ್ವಹಃ।
12003010c ತದಾಬುಧ್ಯತ ತೇಜಸ್ವೀ ಸಂತಪ್ತಶ್ಚೇದಮಬ್ರವೀತ್।।
ಕರ್ಣನ ತೊಡೆಯಿಂದ ಹರಿಯುತ್ತಿದ್ದ ರಕ್ತವು ಭೃಗೂದ್ವಹನನ್ನು ಸ್ಪರ್ಷಿಸಲು ಆ ತೇಜಸ್ವಿಯು ಎಚ್ಚೆದ್ದು ಸಂತಪ್ತನಾಗಿ ಹೇಳಿದನು:
12003011a ಅಹೋಽಸ್ಮ್ಯಶುಚಿತಾಂ ಪ್ರಾಪ್ತಃ ಕಿಮಿದಂ ಕ್ರಿಯತೇ ತ್ವಯಾ।
12003011c ಕಥಯಸ್ವ ಭಯಂ ತ್ಯಕ್ತ್ವಾ ಯಾಥಾತಥ್ಯಮಿದಂ ಮಮ।।
“ಅಯ್ಯೋ! ರಕ್ತಸ್ಪರ್ಷದಿಂದ ನಾನು ಅಶುಚಿಯಾಗಿಬಿಟ್ಟೆನು! ನೀನೇನು ಮಾಡಿಬಿಟ್ಟೆ? ಭಯವನ್ನು ತೊರೆದು ಯಥಾವತ್ತಾಗಿ ಏನಾಯಿತೆಂದು ನನ್ನೊಡನೆ ಹೇಳು!”
12003012a ತಸ್ಯ ಕರ್ಣಸ್ತದಾಚಷ್ಟ ಕೃಮಿಣಾ ಪರಿಭಕ್ಷಣಮ್।
12003012c ದದರ್ಶ ರಾಮಸ್ತಂ ಚಾಪಿ ಕೃಮಿಂ ಸೂಕರಸಂನಿಭಮ್।।
ಕರ್ಣನು ಅವನಿಗೆ ಕ್ರಿಮಿಯು ತನ್ನ ತೊಡೆಯನ್ನು ಕೊರೆದು ತಿನ್ನುತ್ತಿದ್ದುದನ್ನು ಹೇಳಿದನು. ರಾಮನೂ ಕೂಡ ಹಂದಿಯಂತಿದ್ದ ಆ ಕ್ರಿಮಿಯನ್ನು ನೋಡಿದನು.
12003013a ಅಷ್ಟಪಾದಂ ತೀಕ್ಷ್ಣದಂಷ್ಟ್ರಂ ಸೂಚೀಭಿರಿವ ಸಂವೃತಮ್।
12003013c ರೋಮಭಿಃ ಸಂನಿರುದ್ಧಾಂಗಮಲರ್ಕಂ ನಾಮ ನಾಮತಃ।।
ಎಂಟು ಕಾಲುಗಳಿದ್ದ, ತೀಕ್ಷ್ಣ ಹಲ್ಲುಗಳಿದ್ದ, ಸೂಜಿಗಳಂಥ ರೋಮಗಳಿಂದ ಆವೃತವಾಗಿದ್ದ, ಅಂಗಾಂಗಗಳನ್ನು ಸಂಕೋಚಿಸಿಕೊಂಡಿದ್ದ ಆ ಕ್ರಿಮಿಯು ಅಲರ್ಕ ಎಂಬ ನಾಮದಿಂದ ತಿಳಿಯಲ್ಪಟ್ಟಿತ್ತು.
12003014a ಸ ದೃಷ್ಟಮಾತ್ರೋ ರಾಮೇಣ ಕೃಮಿಃ ಪ್ರಾಣಾನವಾಸೃಜತ್।
12003014c ತಸ್ಮಿನ್ನೇವಾಸೃಕ್ಸಂಕ್ಲಿನ್ನೇ ತದದ್ಭುತಮಿವಾಭವತ್।।
ರಾಮನ ದೃಷ್ಟಿಮಾತ್ರದಿಂದಲೇ ಕರ್ಣನ ರಕ್ತದಿಂದ ತೋಯ್ದುಹೋಗಿದ್ದ ಆ ಕ್ರಿಮಿಯು ಪ್ರಾಣವನ್ನು ತೊರೆಯಿತು. ಅದೊಂದು ಅದ್ಭುತವಾಗಿತ್ತು.
12003015a ತತೋಽಂತರಿಕ್ಷೇ ದದೃಶೇ ವಿಶ್ವರೂಪಃ ಕರಾಲವಾನ್।
12003015c ರಾಕ್ಷಸೋ ಲೋಹಿತಗ್ರೀವಃ ಕೃಷ್ಣಾಂಗೋ ಮೇಘವಾಹನಃ।।
ಆಗ ಅಂತರಿಕ್ಷದಲ್ಲಿ ಕರಾಲ ರೂಪಧರಿಸಿದ್ದ, ಕೆಂಪುಕುತ್ತಿಗೆಯ, ಕಪ್ಪು ದೇಹದ, ಮೇಘವಾಹನ ರಾಕ್ಷಸನು ಕಾಣಿಸಿಕೊಂಡನು.
12003016a ಸ ರಾಮಂ ಪ್ರಾಂಜಲಿರ್ಭೂತ್ವಾ ಬಭಾಷೇ ಪೂರ್ಣಮಾನಸಃ।
12003016c ಸ್ವಸ್ತಿ ತೇ ಭೃಗುಶಾರ್ದೂಲ ಗಮಿಷ್ಯಾಮಿ ಯಥಾಗತಮ್।।
ಪೂರ್ಣಮನಸ್ಕನಾದ ಅವನು ರಾಮನಿಗೆ ಕೈಮುಗಿದು ಹೇಳಿದನು: “ಭೃಗುಶಾರ್ದೂಲ! ನಿನಗೆ ಮಂಗಳವಾಗಲಿ! ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟು ಹೋಗುತ್ತೇನೆ!
12003017a ಮೋಕ್ಷಿತೋ ನರಕಾದಸ್ಮಿ ಭವತಾ ಮುನಿಸತ್ತಮ।
12003017c ಭದ್ರಂ ಚ ತೇಽಸ್ತು ನಂದಿಶ್ಚ ಪ್ರಿಯಂ ಮೇ ಭವತಾ ಕೃತಮ್।।
ಮುನಿಸತ್ತಮ! ಈ ನರಕದಿಂದ ನೀನು ನನಗೆ ಬಿಡುಗಡೆಯನ್ನು ನೀಡಿರುವೆ! ನಿನಗೆ ಮಂಗಳವಾಗಲಿ! ನೀನು ನನಗೆ ಪ್ರಿಯವಾದುದನ್ನೇ ಮಾಡಿ ಸಂತೋಷವನ್ನಿತ್ತಿರುವೆ!”
12003018a ತಮುವಾಚ ಮಹಾಬಾಹುರ್ಜಾಮದಗ್ನ್ಯಃ ಪ್ರತಾಪವಾನ್।
12003018c ಕಸ್ತ್ವಂ ಕಸ್ಮಾಚ್ಚ ನರಕಂ ಪ್ರತಿಪನ್ನೋ ಬ್ರವೀಹಿ ತತ್।।
ಮಹಾಬಾಹು ಜಾಮದಗ್ನ್ಯ ಪ್ರತಾಪವಾನನು ಅವನಿಗೆ ಹೇಳಿದನು: “ನೀನು ಯಾರು? ಯಾವ ಕಾರಣದಿಂದ ಈ ನರಕದಲ್ಲಿ ಬಿದ್ದಿರುವೆ? ಅದನ್ನು ಹೇಳು!”
12003019a ಸೋಽಬ್ರವೀದಹಮಾಸಂ ಪ್ರಾಗ್ಗೃತ್ಸೋ ನಾಮ ಮಹಾಸುರಃ।
12003019c ಪುರಾ ದೇವಯುಗೇ ತಾತ ಭೃಗೋಸ್ತುಲ್ಯವಯಾ ಇವ।।
ಅವನು ಹೇಳಿದನು: “ಅಯ್ಯಾ! ನಾನು ಹಿಂದೆ ಸತ್ಯಯುಗದಲ್ಲಿ ಗೃತ್ಸ ಎಂಬ ಹೆಸರಿನ ಮಹಾಸುರನಾಗಿದ್ದೆನು. ವಯಸ್ಸಿನಲ್ಲಿ ನಾನು ಭೃಗುವಿನ ಸಮನಾಗಿದ್ದೆನು.
12003020a ಸೋಽಹಂ ಭೃಗೋಃ ಸುದಯಿತಾಂ ಭಾರ್ಯಾಮಪಹರಂ ಬಲಾತ್।
12003020c ಮಹರ್ಷೇರಭಿಶಾಪೇನ ಕೃಮಿಭೂತೋಽಪತಂ ಭುವಿ।।
ಭೃಗುವಿನ ಪ್ರಿಯ ಭಾರ್ಯೆಯನ್ನು ನಾನು ಬಲಾತ್ಕಾರದಿಂದ ಅಪಹರಿಸಿದ್ದೆನು. ಆ ಮಹರ್ಷಿಯ ಶಾಪದಿಂದ ಕ್ರಿಮಿಯಾಗಿ ಭೂಮಿಯ ಮೇಲೆ ಬಿದ್ದೆನು.
12003021a ಅಬ್ರವೀತ್ತು ಸ ಮಾಂ ಕ್ರೋಧಾತ್ತವ ಪೂರ್ವಪಿತಾಮಹಃ।
12003021c ಮೂತ್ರಶ್ಲೇಷ್ಮಾಶನಃ ಪಾಪ ನಿರಯಂ ಪ್ರತಿಪತ್ಸ್ಯಸೇ।।
ಕ್ರೋಧಿತನಾದ ನಿನ್ನ ಮುತ್ತಜ್ಜನು ನನಗೆ “ಮೂತ್ರ-ಕಫಗಳನ್ನು ತಿನ್ನುತ್ತಾ ನೀನು ಪಾಪ ನರಕದಲ್ಲಿ ಬೀಳುವೆ!” ಎಂದು ಹೇಳಿದನು.
12003022a ಶಾಪಸ್ಯಾಂತೋ ಭವೇದ್ಬ್ರಹ್ಮನ್ನಿತ್ಯೇವಂ ತಮಥಾಬ್ರುವಮ್।
12003022c ಭವಿತಾ ಭಾರ್ಗವೇ ರಾಮ ಇತಿ ಮಾಮಬ್ರವೀದ್ಭೃಗುಃ।।
“ಬ್ರಹ್ಮನ್! ಈ ಶಾಪವು ಅಂತ್ಯವಾಗುವಂತೆ ಅನುಗ್ರಹಿಸು!” ಎಂದು ನಾನು ಕೇಳಿಕೊಳ್ಳಲು “ಭಾರ್ಗವ ರಾಮನಿಂದ ಶಾಪವಿಮೋಚನೆಯಾಗುತ್ತದೆ” ಎಂದು ಭೃಗುವು ಹೇಳಿದನು.
12003023a ಸೋಽಹಮೇತಾಂ ಗತಿಂ ಪ್ರಾಪ್ತೋ ಯಥಾ ನಕುಶಲಂ ತಥಾ।
12003023c ತ್ವಯಾ ಸಾಧೋ ಸಮಾಗಮ್ಯ ವಿಮುಕ್ತಃ ಪಾಪಯೋನಿತಃ।।
ಯಾವರೀತಿಯ ಕುಶಲವನ್ನೂ ಕಾಣದೇ ನಾನು ಈ ದುರ್ಗತಿಯನ್ನು ಅನುಭವಿಸಿದೆನು. ಸಾಧುವೇ! ನಿನ್ನ ಸಮಾಗಮದಿಂದಾಗಿ ನಾನು ಈ ಪಾಪಜನ್ಮದಿಂದ ಮುಕ್ತನಾಗಿದ್ದೇನೆ!”
12003024a ಏವಮುಕ್ತ್ವಾ ನಮಸ್ಕೃತ್ಯ ಯಯೌ ರಾಮಂ ಮಹಾಸುರಃ।
12003024c ರಾಮಃ ಕರ್ಣಂ ತು ಸಕ್ರೋಧಮಿದಂ ವಚನಮಬ್ರವೀತ್।।
ಹೀಗೆ ಹೇಳಿ ರಾಮನಿಗೆ ನಮಸ್ಕರಿಸಿ ಮಹಾಸುರನು ಹೊರಟುಹೋದನು. ರಾಮನಾದರೋ ಕ್ರೋಧದಿಂದ ಕರ್ಣನಿಗೆ ಹೀಗೆ ಹೇಳಿದನು:
12003025a ಅತಿದುಃಖಮಿದಂ ಮೂಢ ನ ಜಾತು ಬ್ರಾಹ್ಮಣಃ ಸಹೇತ್।
12003025c ಕ್ಷತ್ರಿಯಸ್ಯೈವ ತೇ ಧೈರ್ಯಂ ಕಾಮಯಾ ಸತ್ಯಮುಚ್ಯತಾಮ್।।
“ಮೂಢ! ಇಂಥಹ ಅತಿದುಃಖವನ್ನು ಬ್ರಾಹ್ಮಣನಾದವನು ಎಂದಿಗೂ ಸಹಿಸಿಕೊಳ್ಳಲಾರ! ನಿನ್ನ ಈ ಧೈರ್ಯವು ಕ್ಷತ್ರಿಯನದ್ದೇ! ನೀನಾಗಿಯೇ ಸತ್ಯವನ್ನು ಹೇಳು!”
12003026a ತಮುವಾಚ ತತಃ ಕರ್ಣಃ ಶಾಪಭೀತಃ ಪ್ರಸಾದಯನ್।
12003026c ಬ್ರಹ್ಮಕ್ಷತ್ರಾಂತರೇ ಸೂತಂ ಜಾತಂ ಮಾಂ ವಿದ್ಧಿ ಭಾರ್ಗವ।।
ಶಾಪಕ್ಕೆ ಹೆದರಿದ ಕರ್ಣನು ಅವನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಭಾರ್ಗವ! ಬ್ರಾಹ್ಮಣ-ಕ್ಷತ್ರಿಯರಿಗೆ ಭಿನ್ನರಾದ ಸೂತರಲ್ಲಿ ಹುಟ್ಟಿದವನೆಂದು ತಿಳಿ.
12003027a ರಾಧೇಯಃ ಕರ್ಣ ಇತಿ ಮಾಂ ಪ್ರವದಂತಿ ಜನಾ ಭುವಿ।
12003027c ಪ್ರಸಾದಂ ಕುರು ಮೇ ಬ್ರಹ್ಮನ್ನಸ್ತ್ರಲುಬ್ಧಸ್ಯ ಭಾರ್ಗವ।।
ರಾಧೇಯ ಕರ್ಣನೆಂದು ಭುವಿಯಲ್ಲಿ ಜನರು ನನ್ನನ್ನು ಕರೆಯುತ್ತಾರೆ. ಬ್ರಹ್ಮನ್! ಭಾರ್ಗವ! ಅಸ್ತ್ರಲೋಭಿಯಾದ ನನ್ನ ಮೇಲೆ ಕುರುಣೆತೋರಿಸು!
12003028a ಪಿತಾ ಗುರುರ್ನ ಸಂದೇಹೋ ವೇದವಿದ್ಯಾಪ್ರದಃ ಪ್ರಭುಃ।
12003028c ಅತೋ ಭಾರ್ಗವ ಇತ್ಯುಕ್ತಂ ಮಯಾ ಗೋತ್ರಂ ತವಾಂತಿಕೇ।।
ವೇದವಿದ್ಯೆಗಳನ್ನು ನೀಡುವ ಪ್ರಭು ಗುರುವು ತಂದೆಯಂತೆ ಎಂದು ನನಗೆ ಸಂದೇಹವಿರಲಿಲ್ಲ. ಆದುದರಿಂದ ನನ್ನದು ಭಾರ್ಗವ ಗೋತ್ರವೆಂದು ಹೇಳಿ ನಿನ್ನ ಬಳಿ ಬಂದೆ!”
12003029a ತಮುವಾಚ ಭೃಗುಶ್ರೇಷ್ಠಃ ಸರೋಷಃ ಪ್ರಹಸನ್ನಿವ।
12003029c ಭೂಮೌ ನಿಪತಿತಂ ದೀನಂ ವೇಪಮಾನಂ ಕೃತಾಂಜಲಿಮ್।।
ನೆಲದ ಮೇಲೆ ಬಿದ್ದು ದೀನನಾಗಿ ಕೈಮುಗಿದು ನಡುಗುತ್ತಿದ್ದ ಅವನಿಗೆ ರೋಷದಿಂದ ನಗುತ್ತಿರುವನೋ ಎನ್ನುವಂತೆ ಆ ಭೃಗುಶ್ರೇಷ್ಠನು ಹೇಳಿದನು:
12003030a ಯಸ್ಮಾನ್ಮಿಥ್ಯೋಪಚರಿತೋ ಅಸ್ತ್ರಲೋಭಾದಿಹ ತ್ವಯಾ।
12003030c ತಸ್ಮಾದೇತದ್ಧಿ ತೇ ಮೂಢ ಬ್ರಹ್ಮಾಸ್ತ್ರಂ ಪ್ರತಿಭಾಸ್ಯತಿ।।
12003031a ಅನ್ಯತ್ರ ವಧಕಾಲಾತ್ತೇ ಸದೃಶೇನ ಸಮೇಯುಷಃ।
12003031c ಅಬ್ರಾಹ್ಮಣೇ ನ ಹಿ ಬ್ರಹ್ಮ ಧ್ರುವಂ ತಿಷ್ಠೇತ್ಕದಾ ಚನ।।
“ಮೂಢ! ಅಸ್ತ್ರಲೋಭದಿಂದ ನೀನು ನನ್ನೊಡನೆ ಸುಳ್ಳಾಗಿ ನಡೆದುಕೊಂಡಿದುದರಿಂದ ನಿನ್ನ ವಧೆಯ ಕಾಲವಲ್ಲದಾಗ ಮತ್ತು ನಿನ್ನ ಸಮಾನರೊಡನೆ ಯುದ್ಧಮಾಡುವಾಗ ಮಾತ್ರ ಬ್ರಹ್ಮಾಸ್ತ್ರವು ನಿನಗೆ ಹೊಳೆಯುತ್ತದೆಯೆಂದು ತಿಳಿದುಕೋ! ಅಬ್ರಾಹ್ಮನಲ್ಲಿ ಬ್ರಹ್ಮಾಸ್ತ್ರವು ಎಂದೂ ನಿಲ್ಲುವುದಿಲ್ಲವೆನ್ನುವುದು ಸತ್ಯ!
12003032a ಗಚ್ಚೇದಾನೀಂ ನ ತೇ ಸ್ಥಾನಮನೃತಸ್ಯೇಹ ವಿದ್ಯತೇ।
12003032c ನ ತ್ವಯಾ ಸದೃಶೋ ಯುದ್ಧೇ ಭವಿತಾ ಕ್ಷತ್ರಿಯೋ ಭುವಿ।।
ಅನೃತವಾದಿಗೆ ಇಲ್ಲಿ ಯಾವ ಸ್ಥಾನವೂ ಇಲ್ಲ. ಕೂಡಲೇ ಇಲ್ಲಿಂದ ಹೊರಟು ಹೋಗು! ಯುದ್ಧದಲ್ಲಿ ನಿನ್ನ ಸಮಾನನಾದ ಕ್ಷತ್ರಿಯನು ಭುವಿಯಲ್ಲಿಯೇ ಇರುವುದಿಲ್ಲ!”
12003033a ಏವಮುಕ್ತಸ್ತು ರಾಮೇಣ ನ್ಯಾಯೇನೋಪಜಗಾಮ ಸಃ।
12003033c ದುರ್ಯೋಧನಮುಪಾಗಮ್ಯ ಕೃತಾಸ್ತ್ರೋಽಸ್ಮೀತಿ ಚಾಬ್ರವೀತ್।।
ರಾಮನು ಹೀಗೆ ಹೇಳಲು ನ್ಯಾಯರೀತಿಯಲ್ಲಿ ಅವನಿಂದ ಬೀಳ್ಕೊಂಡು ದುರ್ಯೋಧನನ ಬಳಿಸಾರಿ “ನಾನು ಅಸ್ತ್ರವಿದ್ಯಾಪಾರಂಗತನಾಗಿದ್ದೇನೆ!” ಎಂದು ಹೇಳಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕರ್ಣಾಸ್ತ್ರಪ್ರಾಪ್ತಿರ್ನಾಮ ತೃತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕರ್ಣಾಸ್ತ್ರಪ್ರಾಪ್ತಿ ಎನ್ನುವ ಮೂರನೇ ಅಧ್ಯಾಯವು.
-
ಪ್ರಣಯೇನ (ಗೀತಾ ಪ್ರೆಸ್). ↩︎