ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 2
ಸಾರ
ಕರ್ಣನು ಹೇಗೆ ಶಪಿತನಾದನೆನ್ನುವುದನ್ನು ನಾರದನು ಯುಧಿಷ್ಠಿರನಿಗೆ ವಿವರಿಸಲು ಪ್ರಾರಂಭಿಸಿದುದು – ಕ್ಷತ್ರಿಯರನ್ನು ಶಸ್ತ್ರಪೂತರನ್ನಾಗಿಸಲು ದೇವತೆಗಳ ಸಂಕಲ್ಪದಂತೆ ಕುಂತಿಯಲ್ಲಿ ದೇವಗರ್ಭನಾಗಿದ್ದ ಕರ್ಣನಿಗೆ ಸೂತಪುತ್ರತ್ವ ಪ್ರಾಪ್ತಿಯಾದುದು (1-5). ಅರ್ಜುನನನ್ನು ಮೀರಿಸಬೇಕೆಂಬ ಆಸೆಯಿಂದ ದ್ರೋಣನಲ್ಲಿ ಬ್ರಹ್ಮಾಸ್ತ್ರವನ್ನು ಕೇಳಿದ ಕರ್ಣನಿಗೆ ದ್ರೋಣನು ನಿರಾಕರಿಸಿದುದು (6-14). ಕರ್ಣನು ಪರಶುರಾಮನಲ್ಲಿಗೆ ಹೋಗಿ ತಾನು ಓರ್ವ ಭಾರ್ಗವನೆಂದು ಹೇಳಿಕೊಂಡು ಅವನ ಶಿಷ್ಯನಾದುದು (15-18). ತಿಳಿಯದೇ ಓರ್ವ ಬ್ರಾಹ್ಮಣನ ಗೋವನ್ನು ಕೊಂದ ಕರ್ಣನಿಗೆ “ನಿನ್ನ ಪ್ರತಿಸ್ಪರ್ಧಿಯೊಡನೆ ಯುದ್ಧಮಾಡುವಾಗ ನಿನ್ನ ರಥಚಕ್ರವನ್ನು ಭೂಮಿಯು ನುಂಗಿಬಿಡುತ್ತದೆ!” ಎಂಬ ಶಾಪ ಬಂದೊದಗಿದುದು (19-29).
12002001 ವೈಶಂಪಾಯನ ಉವಾಚ।
12002001a ಸ ಏವಮುಕ್ತಸ್ತು ಮುನಿರ್ನಾರದೋ ವದತಾಂ ವರಃ।
12002001c ಕಥಯಾಮಾಸ ತತ್ಸರ್ವಂ ಯಥಾ ಶಪ್ತಃ ಸ ಸೂತಜಃ।।
ವೈಶಂಪಾಯನನು ಹೇಳಿದನು: “ಯುಧಿಷ್ಠಿರನು ಹೀಗೆ ಹೇಳಲು ಮಾತನಾಡುವವರಲ್ಲಿ ಶ್ರೇಷ್ಠ ಮುನಿ ನಾರದನು ಸೂತಜನು ಹೇಗೆ ಶಪಿತನಾದನೆನ್ನುವುದೆಲ್ಲವನ್ನೂ ಹೇಳಿದನು.
12002002a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ।
12002002c ನ ಕರ್ಣಾರ್ಜುನಯೋಃ ಕಿಂ ಚಿದವಿಷಹ್ಯಂ ಭವೇದ್ರಣೇ।।
“ಮಹಾಬಾಹೋ! ಭಾರತ! ರಣದಲ್ಲಿ ಕರ್ಣಾರ್ಜುನರು ಜಯಿಸಲಾರದವರು ಯಾರೂ ಇಲ್ಲ ಎಂದು ನೀನು ಹೇಳಿದುದು ಸತ್ಯ.
12002003a ಗುಹ್ಯಮೇತತ್ತು ದೇವಾನಾಂ ಕಥಯಿಷ್ಯಾಮಿ ತೇ ನೃಪ।
12002003c ತನ್ನಿಬೋಧ ಮಹಾರಾಜ ಯಥಾ ವೃತ್ತಮಿದಂ ಪುರಾ।।
ನೃಪ! ದೇವತೆಗಳ ಈ ರಹಸ್ಯವನ್ನು ನಿನಗೆ ಹೇಳುತ್ತೇನೆ. ಮಹಾರಾಜ! ಹಿಂದೆ ನಡೆದುದನ್ನು ಕೇಳು.
12002004a ಕ್ಷತ್ರಂ ಸ್ವರ್ಗಂ ಕಥಂ ಗಚ್ಚೇಚ್ಛಸ್ತ್ರಪೂತಮಿತಿ ಪ್ರಭೋ।
12002004c ಸಂಘರ್ಷಜನನಸ್ತಸ್ಮಾತ್ಕನ್ಯಾಗರ್ಭೋ ವಿನಿರ್ಮಿತಃ।।
ಪ್ರಭೋ! ಶಸ್ತ್ರಗಳಿಂದ ಪವಿತ್ರರನ್ನಾಗಿಸಿ ಕ್ಷತ್ರಿಯರನ್ನು ಸ್ವರ್ಗಕ್ಕೆ ಹೇಗೆ ಕರೆಯಿಸಿಕೊಳ್ಳಬೇಕೆಂದು ನಿಶ್ಚಯಿಸಿ ಸಂಘರ್ಷವನ್ನು ಹುಟ್ಟಿಸುವುದಕ್ಕೋಸ್ಕರ ಕನ್ಯೆ ಕುಂತಿಯಲ್ಲಿ ಗರ್ಭವನ್ನಿರಸಲಾಯಿತು.
12002005a ಸ ಬಾಲಸ್ತೇಜಸಾ ಯುಕ್ತಃ ಸೂತಪುತ್ರತ್ವಮಾಗತಃ।
12002005c ಚಕಾರಾಂಗಿರಸಾಂ ಶ್ರೇಷ್ಠೇ ಧನುರ್ವೇದಂ ಗುರೌ ತವ।।
ತೇಜಾಯುಕ್ತನಾದ ಆ ಬಾಲಕನು ಸೂತಪುತ್ರತ್ವವನ್ನು ಪಡೆದನು. ನಿನ್ನ ಗುರುವಾದ ಆಂಗಿರಸ ಶ್ರೇಷ್ಠ ದ್ರೋಣನಲ್ಲಿ ಧನುರ್ವೇದವನ್ನು ಕಲಿತನು.
12002006a ಸ ಬಲಂ ಭೀಮಸೇನಸ್ಯ ಫಲ್ಗುನಸ್ಯ ಚ ಲಾಘವಮ್।
12002006c ಬುದ್ಧಿಂ ಚ ತವ ರಾಜೇಂದ್ರ ಯಮಯೋರ್ವಿನಯಂ ತಥಾ।।
12002007a ಸಖ್ಯಂ ಚ ವಾಸುದೇವೇನ ಬಾಲ್ಯೇ ಗಾಂಡಿವಧನ್ವನಃ।
12002007c ಪ್ರಜಾನಾಮನುರಾಗಂ ಚ ಚಿಂತಯಾನೋ ವ್ಯದಹ್ಯತ।।
ಅವನು ಭೀಮಸೇನನ ಬಲವನ್ನೂ, ಫಲ್ಗುನನ ಹಸ್ತಲಾಘವವನ್ನೂ, ರಾಜೇಂದ್ರ! ನಿನ್ನ ಬುದ್ಧಿಯನ್ನೂ, ಯಮಳರ ವಿನಯವನ್ನೂ, ಗಾಂಡೀವಧನ್ವಿಯೊಡನೆ ವಾಸುದೇವನಿಗಿದ್ದ ಸಖ್ಯವನ್ನೂ, ನಿಮ್ಮ ಮೇಲೆ ಪ್ರಜೆಗಳಿಗಿದ್ದ ಅನುರಾಗವನ್ನೂ ನೋಡಿ ಬಾಲ್ಯದಲ್ಲಿಯೇ ಅಸೂಯೆಯಿಂದ ಸುಡುತ್ತಿದ್ದನು.
12002008a ಸ ಸಖ್ಯಮಗಮದ್ಬಾಲ್ಯೇ ರಾಜ್ಞಾ ದುರ್ಯೋಧನೇನ ವೈ।
12002008c ಯುಷ್ಮಾಭಿರ್ನಿತ್ಯಸಂದ್ವಿಷ್ಟೋ ದೈವಾಚ್ಚಾಪಿ ಸ್ವಭಾವತಃ।।
ಬಾಲ್ಯದಲ್ಲಿಯೇ ಅವನು ರಾಜಾ ದುರ್ಯೋಧನನ ಸಖ್ಯದಲ್ಲಿ ಬಂದನು. ದೈವೇಚ್ಛೆಯಿಂದ ಸ್ವಭಾವತಃ ಅವನು ನಿತ್ಯವೂ ನಿಮ್ಮನ್ನು ದ್ವೇಷಿಸುತ್ತಿದ್ದನು.
12002009a ವಿದ್ಯಾ1ಧಿಕಮಥಾಲಕ್ಷ್ಯ ಧನುರ್ವೇದೇ ಧನಂಜಯಮ್।
12002009c ದ್ರೋಣಂ ರಹಸ್ಯುಪಾಗಮ್ಯ ಕರ್ಣೋ ವಚನಮಬ್ರವೀತ್।।
ಧನಂಜಯನು ಧನುರ್ವೇದವಿಧ್ಯೆಯಲ್ಲಿ ತನ್ನನ್ನೂ ಮೀರಿಸಿರುವುದನ್ನು ನೋಡಿ ಕರ್ಣನು ರಹಸ್ಯದಲ್ಲಿ ದ್ರೋಣನ ಬಳಿಸಾರಿ ಹೀಗೆಂದನು:
12002010a ಬ್ರಹ್ಮಾಸ್ತ್ರಂ ವೇತ್ತುಮಿಚ್ಚಾಮಿ ಸರಹಸ್ಯನಿವರ್ತನಮ್।
12002010c ಅರ್ಜುನೇನ ಸಮೋ ಯುದ್ಧೇ ಭವೇಯಮಿತಿ ಮೇ ಮತಿಃ।।
“ಅದನ್ನು ಹಿಂತೆಗೆದುಕೊಳ್ಳುವ ರಹಸ್ಯದೊಂದಿಗೆ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಯುದ್ಧದಲ್ಲಿ ಅರ್ಜುನನ ಸಮನಾಗಬೇಕೆಂದು ನನ್ನ ನಿಶ್ಚಯ.
12002011a ಸಮಃ ಪುತ್ರೇಷು ಚ ಸ್ನೇಹಃ ಶಿಷ್ಯೇಷು ಚ ತವ ಧ್ರುವಮ್।
12002011c ತ್ವತ್ಪ್ರಸಾದಾನ್ನ ಮಾಂ ಬ್ರೂಯುರಕೃತಾಸ್ತ್ರಂ ವಿಚಕ್ಷಣಾಃ।।
ನಿಮ್ಮ ಸ್ನೇಹವು ನಿಶ್ಚಯವಾಗಿಯೂ ಪುತ್ರರಲ್ಲಿ ಮತ್ತು ಶಿಷ್ಯರಲ್ಲಿ ಸಮನಾಗಿದೆ. ಆದುದರಿಂದ ನನ್ನನ್ನು ಅಸ್ತ್ರಗಳಲ್ಲಿ ಅಸಂಪೂರ್ಣನೆಂದು ತಿಳಿದವರು ಕರೆಯುವಂತಾಗದಂತೆ ಅನುಗ್ರಹಿಸಿ.”
12002012a ದ್ರೋಣಸ್ತಥೋಕ್ತಃ ಕರ್ಣೇನ ಸಾಪೇಕ್ಷಃ ಫಲ್ಗುನಂ ಪ್ರತಿ।
12002012c ದೌರಾತ್ಮ್ಯಂ ಚಾಪಿ ಕರ್ಣಸ್ಯ ವಿದಿತ್ವಾ ತಮುವಾಚ ಹ।।
ಕರ್ಣನು ಹಾಗೆ ಹೇಳಲು ಕರ್ಣನ ದುರಾತ್ಮತೆಯನ್ನು ತಿಳಿದು, ಫಲ್ಗುನನ ಕುರಿತು ಪಕ್ಷಪಾತವಿದ್ದ ದ್ರೋಣನು ಅವನಿಗೆ ಹೇಳಿದನು:
12002013a ಬ್ರಹ್ಮಾಸ್ತ್ರಂ ಬ್ರಾಹ್ಮಣೋ ವಿದ್ಯಾದ್ಯಥಾವಚ್ಚರಿತವ್ರತಃ।
12002013c ಕ್ಷತ್ರಿಯೋ ವಾ ತಪಸ್ವೀ ಯೋ ನಾನ್ಯೋ ವಿದ್ಯಾತ್ಕಥಂ ಚನ।।
“ವ್ರತನಿರತನಾಗಿರುವ ಬ್ರಾಹ್ಮಣನಾಗಲೀ ತಪಸ್ವಿಯಾದ ಕ್ಷತ್ರಿಯನಾಗಲೀ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಬಹುದು. ಬೇರೆ ಯಾರೂ ಎಂದೂ ಅದನ್ನು ತಿಳಿದುಕೊಳ್ಳಲಾರರು!”
12002014a ಇತ್ಯುಕ್ತೋಽಂಗಿರಸಾಂ ಶ್ರೇಷ್ಠಮಾಮಂತ್ರ್ಯ ಪ್ರತಿಪೂಜ್ಯ ಚ।
12002014c ಜಗಾಮ ಸಹಸಾ ರಾಮಂ ಮಹೇಂದ್ರಂ ಪರ್ವತಂ ಪ್ರತಿ।।
ಆಂಗಿರಸ ಶ್ರೇಷ್ಠನು ಹೀಗೆ ಹೇಳಲು ಅವನನ್ನು ಪ್ರತಿಪೂಜಿಸಿ ಅನುಮತಿಯನ್ನು ಪಡೆದು ಕೂಡಲೇ ಮಹೇಂದ್ರ ಪರ್ವತದಲ್ಲಿದ್ದ ರಾಮನ ಬಳಿ ನಡೆದನು.
12002015a ಸ ತು ರಾಮಮುಪಾಗಮ್ಯ ಶಿರಸಾಭಿಪ್ರಣಮ್ಯ ಚ।
12002015c ಬ್ರಾಹ್ಮಣೋ ಭಾರ್ಗವೋಽಸ್ಮೀತಿ ಗೌರವೇಣಾಭ್ಯಗಚ್ಚತ।।
ಅವನು ರಾಮನ ಬಳಿಸಾರಿ ಗೌರವದಿಂದ ಶಿರಸಾ ಸಮಸ್ಕರಿಸಿ “ನಾನು ಭಾರ್ಗವ ವಂಶದ ಬ್ರಾಹ್ಮಣ!” ಎಂದು ಹೇಳಿದನು.
12002016a ರಾಮಸ್ತಂ ಪ್ರತಿಜಗ್ರಾಹ ಪೃಷ್ಟ್ವಾ ಗೋತ್ರಾದಿ ಸರ್ವಶಃ।
12002016c ಉಷ್ಯತಾಂ ಸ್ವಾಗತಂ ಚೇತಿ ಪ್ರೀತಿಮಾಂಶ್ಚಾಭವದ್ಭೃಶಮ್।।
ಗೋತ್ರ ಮೊದಲಾದ ಎಲ್ಲವನ್ನೂ ಕೇಳಿ ತಿಳಿದುಕೊಂಡು ರಾಮನು ಅವನನ್ನು “ಸ್ವಾಗತ! ಇಲ್ಲಿಯೇ ಇರು!” ಎಂದು ಅವನನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದನು.
12002017a ತತ್ರ ಕರ್ಣಸ್ಯ ವಸತೋ ಮಹೇಂದ್ರೇ ಪರ್ವತೋತ್ತಮೇ।
12002017c ಗಂಧರ್ವೈ ರಾಕ್ಷಸೈರ್ಯಕ್ಷೈರ್ದೇವೈಶ್ಚಾಸೀತ್ಸಮಾಗಮಃ।।
ಉತ್ತಮ ಮಹೇಂದ್ರಪರ್ವತದಲ್ಲಿ ವಾಸಿಸುತ್ತಿರುವಾಗ ಗಂಧರ್ವ-ರಾಕ್ಷಸ-ಯಕ್ಷ-ದೇವತೆಗಳೊಂದಿಗೆ ಕರ್ಣನ ಸಂದರ್ಶನವೂ ಆಯಿತು.
12002018a ಸ ತತ್ರೇಷ್ವಸ್ತ್ರಮಕರೋದ್ ಭೃಗುಶ್ರೇಷ್ಠಾದ್ಯಥಾವಿಧಿ।
12002018c ಪ್ರಿಯಶ್ಚಾಭವದತ್ಯರ್ಥಂ ದೇವಗಂಧರ್ವರಕ್ಷಸಾಮ್।।
ಅಲ್ಲಿ ಅವನು ಭೃಗುಶ್ರೇಷ್ಠನಿಂದ ಯಥಾವಿಧಿಯಾಗಿ ಅಸ್ತ್ರಗಳನ್ನು ಕಲಿತುಕೊಂಡನು ಮತ್ತು ದೇವ-ಗಂಧರ್ವ-ರಾಕ್ಷಸರ ಪ್ರಿಯಪಾತ್ರನೂ ಆದನು.
12002019a ಸ ಕದಾ ಚಿತ್ಸಮುದ್ರಾಂತೇ ವಿಚರನ್ನಾಶ್ರಮಾಂತಿಕೇ।
12002019c ಏಕಃ ಖಡ್ಗಧನುಷ್ಪಾಣಿಃ ಪರಿಚಕ್ರಾಮ ಸೂತಜಃ।।
ಒಮ್ಮೆ ಸೂತಜ ಕರ್ಣನು ಆಶ್ರಮ ಸಮೀಪದಲ್ಲಿ ಸಮುದ್ರತೀರದಲ್ಲಿ ಖಡ್ಗ-ಧನುಷ್ಪಾಣಿಯಾಗಿ ಒಬ್ಬನೇ ಸಂಚರಿಸುತ್ತಿದ್ದನು.
12002020a ಸೋಽಗ್ನಿಹೋತ್ರಪ್ರಸಕ್ತಸ್ಯ ಕಸ್ಯ ಚಿದ್ಬ್ರಹ್ಮವಾದಿನಃ।
12002020c ಜಘಾನಾಜ್ಞಾನತಃ ಪಾರ್ಥ ಹೋಮಧೇನುಂ ಯದೃಚ್ಚಯಾ।।
ಪಾರ್ಥ! ಅಲ್ಲಿ ಅವನು ಅಗ್ನಿಹೋತ್ರದಲ್ಲಿ ತೊಡಗಿದ್ದ ಯಾರೋ ಒಬ್ಬ ಬ್ರಹ್ಮವಾದಿನಿಯ ಹೋಮಧೇನುವನ್ನು ತಿಳಿಯದೇ ಆಕಸ್ಮಿಕವಾಗಿ ಕೊಂದುಬಿಟ್ಟನು. 12002021a ತದಜ್ಞಾನಕೃತಂ ಮತ್ವಾ ಬ್ರಾಹ್ಮಣಾಯ ನ್ಯವೇದಯತ್।
12002021c ಕರ್ಣಃ ಪ್ರಸಾದಯಂಶ್ಚೈನಮಿದಮಿತ್ಯಬ್ರವೀದ್ವಚಃ।।
ತಾನು ತಿಳಿಯದೇ ಮಾಡಿದ ಆ ಕೃತ್ಯವನ್ನು ಬ್ರಾಹ್ಮಣನಿಗೆ ಹೇಳಿಕೊಂಡನು. ಅವನನ್ನು ಪ್ರಸನ್ನಗೊಳಿಸಲು ಕರ್ಣನು ಈ ಮಾತನ್ನಾಡಿದನು:
12002022a ಅಬುದ್ಧಿಪೂರ್ವಂ ಭಗವನ್ ಧೇನುರೇಷಾ ಹತಾ ತವ।
12002022c ಮಯಾ ತತ್ರ ಪ್ರಸಾದಂ ಮೇ ಕುರುಷ್ವೇತಿ ಪುನಃ ಪುನಃ।।
“ಭಗವನ್! ಮೊದಲೇ ತಿಳಿದುಕೊಳ್ಳದೇ ಅಜ್ಞಾನದಿಂದ ನಿನ್ನ ಈ ಹಸುವನ್ನು ಕೊಂದುಬಿಟ್ಟೆನು! ನನ್ನ ಮೇಲೆ ಕರುಣೆ ತೋರಬೇಕು” ಎಂದು ಪುನಃ ಪುನಃ ಕೇಳಿಕೊಂಡನು.
12002023a ತಂ ಸ ವಿಪ್ರೋಽಬ್ರವೀತ್ಕೃದ್ಧೋ ವಾಚಾ ನಿರ್ಭರ್ತ್ಸಯನ್ನಿವ।
12002023c ದುರಾಚಾರ ವಧಾರ್ಹಸ್ತ್ವಂ ಫಲಂ ಪ್ರಾಪ್ನುಹಿ ದುರ್ಮತೇ।।
ಆ ವಿಪ್ರನಾದರೋ ಕ್ರುದ್ಧನಾಗಿ ಅವನನ್ನು ಹೆದರಿಸುವನೋ ಎನ್ನುವಂತೆ ಹೀಗೆ ಹೇಳಿದನು: “ದುರ್ಮತೇ! ನಿನ್ನ ಈ ದುರಾಚಾರವು ವಧಾರ್ಹವು. ಇದರ ಫಲವನ್ನು ನೀನು ಪಡೆಯುತ್ತೀಯೆ!
12002024a ಯೇನ ವಿಸ್ಪರ್ಧಸೇ ನಿತ್ಯಂ ಯದರ್ಥಂ ಘಟಸೇಽನಿಶಮ್।
12002024c ಯುಧ್ಯತಸ್ತೇನ ತೇ ಪಾಪ ಭೂಮಿಶ್ಚಕ್ರಂ ಗ್ರಸಿಷ್ಯತಿ।।
ಯಾರೊಂದಿಗೆ ನೀನು ನಿತ್ಯವೂ ಸ್ಪರ್ಧಿಸುತ್ತೀಯೋ ಮತ್ತು ಯಾರನ್ನು ಕೊಲ್ಲಲು ನೀನು ಅಹೋರಾತ್ರಿ ಪ್ರಯತ್ನಿಸುವೆಯೋ ಅವನೊಡನೆ ಯುದ್ಧಮಾಡುವಾಗ ಪಾಪಿಯಾದ ನಿನ್ನ ರಥಚಕ್ರವನ್ನು ಭೂಮಿಯು ನುಂಗಿಬಿಡುತ್ತದೆ!
12002025a ತತಶ್ಚಕ್ರೇ ಮಹೀಗ್ರಸ್ತೇ ಮೂರ್ಧಾನಂ ತೇ ವಿಚೇತಸಃ।
12002025c ಪಾತಯಿಷ್ಯತಿ ವಿಕ್ರಮ್ಯ ಶತ್ರುರ್ಗಚ್ಚ ನರಾಧಮ।।
ನೆಲದಲ್ಲಿ ಹುಗಿದುಹೋದ ಚಕ್ರವನ್ನು ನೋಡಿ ಕಂಗಾಲಾದ ನಿನ್ನ ಶಿರವನ್ನು ಶತ್ರುವು ವಿಕ್ರಮದಿಂದ ಕೆಳಗುರುಳಿಸುತ್ತಾನೆ! ಹೊರಟುಹೋಗು ನರಾಧಮ!
12002026a ಯಥೇಯಂ ಗೌರ್ಹತಾ ಮೂಢ ಪ್ರಮತ್ತೇನ ತ್ವಯಾ ಮಮ।
12002026c ಪ್ರಮತ್ತಸ್ಯೈವಮೇವಾನ್ಯಃ ಶಿರಸ್ತೇ ಪಾತಯಿಷ್ಯತಿ।।
ಮೂಢ! ಹೇಗೆ ನೀನು ಪ್ರಮತ್ತತೆಯಿಂದ ನನ್ನ ಗೋವನ್ನು ಸಂಹರಿಸಿದೆಯೋ ಹಾಗೆ ನೀನು ಪ್ರಮತ್ತನಾಗಿದ್ದಾಗ ಅನ್ಯನು ನಿನ್ನ ಶಿರವನ್ನು ಕೆಳಗುರುಳಿಸುತ್ತಾನೆ!”
12002027a ತತಃ ಪ್ರಸಾದಯಾಮಾಸ ಪುನಸ್ತಂ ದ್ವಿಜಸತ್ತಮಮ್।
12002027c ಗೋಭಿರ್ಧನೈಶ್ಚ ರತ್ನೈಶ್ಚ ಸ ಚೈನಂ ಪುನರಬ್ರವೀತ್।।
ಅನಂತರ ಕರ್ಣನು ಆ ದ್ವಿಜಸತ್ತಮನನ್ನು ಪುನಃ ಗೋವು-ಧನ-ರತ್ನಗಳಿಂದ ಪ್ರಸನ್ನಗೊಳಿಸಲು ಪ್ರಯತ್ನಿಸಲು, ಅವನು ಪುನಃ ಹೀಗೆ ಹೇಳಿದನು:
12002028a ನೇದಂ ಮದ್ವ್ಯಾಹೃತಂ ಕುರ್ಯಾತ್ಸರ್ವಲೋಕೋಽಪಿ ವೈ ಮೃಷಾ।
12002028c ಗಚ್ಚ ವಾ ತಿಷ್ಠ ವಾ ಯದ್ವಾ ಕಾರ್ಯಂ ತೇ ತತ್ಸಮಾಚರ।।
“ಸರ್ವಲೋಕಗಳಿಗೂ ಇದನ್ನು ಸುಳ್ಳನ್ನಾಗಿಸಲು ಸಾಧ್ಯವಿಲ್ಲ! ಹೋಗು ಅಥವಾ ಇಲ್ಲಿಯೇ ಇರು! ನೀನು ಏನು ಮಾಡಿದರೂ ವ್ಯರ್ಥವೇ ಸರಿ!”
12002029a ಇತ್ಯುಕ್ತೋ ಬ್ರಾಹ್ಮಣೇನಾಥ ಕರ್ಣೋ ದೈನ್ಯಾದಧೋಮುಖಃ।
12002029c ರಾಮಮಭ್ಯಾಗಮದ್ ಭೀತಸ್ತದೇವ ಮನಸಾ ಸ್ಮರನ್।।
ಬ್ರಾಹ್ಮಣನು ಹೀಗೆ ಹೇಳಲು ಕರ್ಣನು ದೈನ್ಯದಿಂದ ಅಧೋಮುಖನಾಗಿ ಅದನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾ ಭಯಗೊಂಡವನಾಗಿ ರಾಮನ ಬಳಿ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕರ್ಣಶಾಪೋ ನಾಮ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕರ್ಣಶಾಪವೆನ್ನುವ ಎರಡನೇ ಅಧ್ಯಾಯವು.
-
ವೀರ್ಯಾ (ಗೀತಾ ಪ್ರೆಸ್). ↩︎