ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಜಲಪ್ರದಾನಿಕ ಪರ್ವ
ಅಧ್ಯಾಯ 27
ಸಾರ
11027001 ವೈಶಂಪಾಯನ ಉವಾಚ 11027001a ತೇ ಸಮಾಸಾದ್ಯ ಗಂಗಾಂ ತು ಶಿವಾಂ ಪುಣ್ಯಜನೋಚಿತಾಮ್।
11027001c ಹ್ರದಿನೀಂ ವಪ್ರಸಂಪನ್ನಾಂ ಮಹಾನೂಪಾಂ ಮಹಾವನಾಮ್।।
ವೈಶಂಪಾಯನನು ಹೇಳಿದನು: “ಪುಣ್ಯಜನರಿಗೆ ಉಚಿತವಾದ, ಅನೇಕ ಮಡುಗಳಿದ್ದ, ಮಹಾರಣ್ಯಗಳಿಂದ ಕೂಡಿದ್ದ ಪ್ರಸನ್ನವೂ ವಿಶಾಲವೂ ಆದ ಮಂಗಳಕರ ಗಂಗೆಯನ್ನು ಅವರು ತಲುಪಿದರು.
11027002a ಭೂಷಣಾನ್ಯುತ್ತರೀಯಾಣಿ ವೇಷ್ಟನಾನ್ಯವಮುಚ್ಯ ಚ।
11027002c ತತಃ ಪಿತೄಣಾಂ ಪೌತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಚ।।
11027003a ಪುತ್ರಾಣಾಮಾರ್ಯಕಾಣಾಂ ಚ ಪತೀನಾಂ ಚ ಕುರುಸ್ತ್ರಿಯಃ।
11027003c ಉದಕಂ ಚಕ್ರಿರೇ ಸರ್ವಾ ರುದಂತ್ಯೋ ಭೃಶದುಃಖಿತಾಃ।।
11027003e ಸುಹೃದಾಂ ಚಾಪಿ ಧರ್ಮಜ್ಞಾಃ ಪ್ರಚಕ್ರುಃ ಸಲಿಲಕ್ರಿಯಾಃ।।
ಅತ್ಯಂತ ದುಃಖಿತರಾಗಿದ್ದ ಕುರುಸ್ತ್ರೀಯರು ಎಲ್ಲರೂ ರೋದಿಸುತ್ತಲೇ ಭೂಷಣಗಳನ್ನೂ, ಉತ್ತರೀಯಗಳನ್ನೂ, ಶಿರೋವೇಷ್ಟಿಗಳನ್ನೂ ಕಳಚಿಟ್ಟು ಪಿತೃಗಳಿಗೆ, ಮಕ್ಕಳು-ಮೊಮ್ಮಕ್ಕಳಿಗೆ, ಸಹೋದರರಿಗೆ, ಬಂಧುಗಳಿಗೆ, ಮಾವಂದಿರಿಗೆ, ಮತ್ತು ಪತಿಯಂದಿರಿಗೆ ಉದಕ ಕ್ರಿಯೆಗಳನ್ನು ಮಾಡಿದರು. ಆ ದರ್ಮಜ್ಞರು ಸ್ನೇಹಿತರಿಗೂ ಜಲತರ್ಪಣಗಳನ್ನಿತ್ತರು.
11027004a ಉದಕೇ ಕ್ರಿಯಮಾಣೇ ತು ವೀರಾಣಾಂ ವೀರಪತ್ನಿಭಿಃ।
11027004c ಸೂಪತೀರ್ಥಾಭವದ್ಗಂಗಾ ಭೂಯೋ ವಿಪ್ರಸಸಾರ ಚ।।
ವೀರಪತ್ನಿಯರು ವೀರರಿಗೆ ತರ್ಪಣಗಳನ್ನು ನೀಡುವಾಗ ತೀರ್ಥೆ ಗಂಗೆಯ ತೀರವು ಇನ್ನೂ ವಿಸ್ತಾರವಾಯಿತು.
11027005a ತನ್ಮಹೋದಧಿಸಂಕಾಶಂ ನಿರಾನಂದಮನುತ್ಸವಮ್।
11027005c ವೀರಪತ್ನೀಭಿರಾಕೀರ್ಣಂ ಗಂಗಾತೀರಮಶೋಭತ।।
ಅಲ್ಲಿ ಸೇರಿದ್ದ ವೀರಪತ್ನಿಯರ ಗುಂಪುಗಳಲ್ಲಿ ಆನಂದವಾಗಲೀ ಉತ್ಸವವಾಗಲೀ ಇಲ್ಲದಿದ್ದರೂ ಆ ಗಂಗಾತೀರವು ಮಹಾಸಾಗರದಂತೆ ತೋರಿತು.
11027006a ತತಃ ಕುಂತೀ ಮಹಾರಾಜ ಸಹಸಾ ಶೋಕಕರ್ಶಿತಾ।
11027006c ರುದತೀ ಮಂದಯಾ ವಾಚಾ ಪುತ್ರಾನ್ವಚನಮಬ್ರವೀತ್।।
ಮಹಾರಾಜ! ಆಗ ಒಡನೆಯೇ ಶೋಕಕರ್ಶಿತ ಕುಂತಿಯು ರೋದಿಸುತ್ತಾ ತನ್ನ ಪುತ್ರರಿಗೆ ಮೆಲುದನಿಯಲ್ಲಿ ಈ ಮಾತನ್ನಾಡಿದಳು:
11027007a ಯಃ ಸ ಶೂರೋ ಮಹೇಷ್ವಾಸೋ ರಥಯೂಥಪಯೂಥಪಃ।
11027007c ಅರ್ಜುನೇನ ಹತಃ ಸಂಖ್ಯೇ ವೀರಲಕ್ಷಣಲಕ್ಷಿತಃ।।
11027008a ಯಂ ಸೂತಪುತ್ರಂ ಮನ್ಯಧ್ವಂ ರಾಧೇಯಮಿತಿ ಪಾಂಡವಾಃ।
11027008c ಯೋ ವ್ಯರಾಜಚ್ಚಮೂಮಧ್ಯೇ ದಿವಾಕರ ಇವ ಪ್ರಭುಃ।।
11027009a ಪ್ರತ್ಯಯುಧ್ಯತ ಯಃ ಸರ್ವಾನ್ಪುರಾ ವಃ ಸಪದಾನುಗಾನ್।
11027009c ದುರ್ಯೋಧನಬಲಂ ಸರ್ವಂ ಯಃ ಪ್ರಕರ್ಷನ್ವ್ಯರೋಚತ।।
11027010a ಯಸ್ಯ ನಾಸ್ತಿ ಸಮೋ ವೀರ್ಯೇ ಪೃಥಿವ್ಯಾಮಪಿ ಕಶ್ಚನ।
311027010c ಸತ್ಯಸಂಧಸ್ಯ ಶೂರಸ್ಯ ಸಂಗ್ರಾಮೇಷ್ವಪಲಾಯಿನಃ।।
11027011a ಕುರುಧ್ವಮುದಕಂ ತಸ್ಯ ಭ್ರಾತುರಕ್ಲಿಷ್ಟಕರ್ಮಣಃ।
11027011c ಸ ಹಿ ವಃ ಪೂರ್ವಜೋ ಭ್ರಾತಾ ಭಾಸ್ಕರಾನ್ಮಯ್ಯಜಾಯತ।।
11027011e ಕುಂಡಲೀ ಕವಚೀ ಶೂರೋ ದಿವಾಕರಸಮಪ್ರಭಃ।।
“ಪಾಂಡವರೇ! ರಣದಲ್ಲಿ ಅರ್ಜುನನಿಂದ ಹತನಾದ ಆ ಶೂರ ಮಹೇಷ್ವಾಸ ರಥಯೂಥಪಯೂಥಪ ವೀರಲಕ್ಷಣಗಳಿಂದ ಕೂಡಿದ್ದ, ಯಾರನ್ನು ಸೂತಪುತ್ರನೆಂದೂ ರಾಧೇಯನೆಂದು ತಿಳಿದಿದ್ದರೋ, ಯಾರು ಸೇನೆಗಳ ಮಧ್ಯೆ ಪ್ರಭು ದಿವಾಕರನಂತೆ ಪ್ರಕಾಶಿಸುತ್ತಿದ್ದನೋ, ಅನುಚರರೊಂದಿಗೆ ನಿಮ್ಮೆಲ್ಲರನ್ನೂ ಎದುರಿಸಿ ಯಾರು ಯುದ್ಧಮಾಡಿದನೋ, ದುರ್ಯೋಧನನ ಸರ್ವಸೇನೆಗಳನ್ನೂ ಸೆಳೆದು ಬೆಳಗುತ್ತಿದ್ದ, ವೀರ್ಯದಲ್ಲಿ ಯಾರ ಸಮನಾಗಿರುವವನು ಈ ಭೂಮಿಯಲ್ಲಿಯೇ ಇಲ್ಲವೋ ಆ ಸತ್ಯಸಂಧ ಶೂರ ಸಂಗ್ರಾಮದಲ್ಲಿ ಪಲಯಾನಮಾಡದಿದ್ದ ನಿಮ್ಮ ಸಹೋದರ ಅಕ್ಲಿಷ್ಟಕರ್ಮಿಗೆ ಉದಕ ಕಾರ್ಯಗಳನ್ನು ಮಾಡಿ. ಕುಂಡಲ-ಕವಚಗಳನ್ನು ಧರಿಸಿಯೇ ದಿವಾಕರಸಮ ಪ್ರಭೆಯನ್ನು ಹೊಂದಿ ಹುಟ್ಟಿದ್ದ ಅವನು ನಿಮಗಿಂತಲೂ ಮೊದಲು ಭಾಸ್ಕರನಿಂದ ನನ್ನಲ್ಲಿ ಹುಟ್ಟಿದ್ದ ನಿಮ್ಮ ಹಿರಿಯಣ್ಣ!”
11027012a ಶ್ರುತ್ವಾ ತು ಪಾಂಡವಾಃ ಸರ್ವೇ ಮಾತುರ್ವಚನಮಪ್ರಿಯಮ್।
11027012c ಕರ್ಣಮೇವಾನುಶೋಚಂತ ಭೂಯಶ್ಚಾರ್ತತರಾಭವನ್।।
ತಾಯಿಯ ಆ ಅಪ್ರಿಯ ಮಾತನ್ನು ಕೇಳಿ ಪಾಂಡವರೆಲ್ಲರೂ ಕರ್ಣನ ಕುರಿತು ಶೋಕಿಸುತ್ತಾ ಇನ್ನೂ ಹೆಚ್ಚು ಆರ್ತರಾದರು.
11027013a ತತಃ ಸ ಪುರುಷವ್ಯಾಘ್ರಃ ಕುಂತೀಪುತ್ರೋ ಯುಧಿಷ್ಠಿರಃ।
11027013c ಉವಾಚ ಮಾತರಂ ವೀರೋ ನಿಃಶ್ವಸನ್ನಿವ ಪನ್ನಗಃ।।
ಆಗ ಆ ಪುರುಷವ್ಯಾಘ್ರ ವೀರ ಕುಂತೀಪುತ್ರ ಯುಧಿಷ್ಠಿರನು ಹಾವಿನಂತೆ ದೀರ್ಘ ನಿಟ್ಟುಸಿರು ಬಿಡುತ್ತಾ ತಾಯಿಗೆ ಹೇಳಿದನು: 411027014a ಯಸ್ಯೇಷುಪಾತಮಾಸಾದ್ಯ ನಾನ್ಯಸ್ತಿಷ್ಠೇದ್ಧನಂಜಯಾತ್।
11027014c ಕಥಂ ಪುತ್ರೋ ಭವತ್ಯಾಂ ಸ ದೇವಗರ್ಭಃ ಪುರಾಭವತ್।।
“ಯಾರ ಬಾಣಗಳನ್ನು ಧನಂಜಯನಲ್ಲದೇ ಬೇರೆ ಯಾರೂ ಎದುರಿಸಬಲ್ಲವರಾಗಿದ್ದರೋ ಅಂಥಹ ದೇವಗರ್ಭನು ಹಿಂದೆ ಹೇಗೆ ನಿನ್ನ ಪುತ್ರನಾಗಿ ಜನಿಸಿದನು?
11027015a ಯಸ್ಯ ಬಾಹುಪ್ರತಾಪೇನ ತಾಪಿತಾಃ ಸರ್ವತೋ ವಯಮ್।
11027015c ತಮಗ್ನಿಮಿವ ವಸ್ತ್ರೇಣ ಕಥಂ ಚಾದಿತವತ್ಯಸಿ।।
11027015e ಯಸ್ಯ ಬಾಹುಬಲಂ ಘೋರಂ ಧಾರ್ತರಾಷ್ಟ್ರೈರುಪಾಸಿತಮ್।।
ಅವನ ಬಾಹುಪ್ರತಾಪದಿಂದ ನಾವು ಎಲ್ಲಕಡೆಗಳಿಂದ ಸುಟ್ಟುಹೋಗುತ್ತಿದ್ದರೂ ಹೇಗೆ ತಾನೇ ನೀನು ಅಗ್ನಿಯನ್ನು ಬಟ್ಟೆಯಲ್ಲಿ ಮುಚ್ಚಿಟ್ಟುಕೊಳ್ಳುವಂತೆ ಅದನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದೆ? ಧಾರ್ತರಾಷ್ಟ್ರರು ಅವನ ಘೋರ ಬಾಹುಬಲವನ್ನು ಆಶ್ರಯಿಸಿದ್ದರು. 511027016a ನಾನ್ಯಃ ಕುಂತೀಸುತಾತ್ಕರ್ಣಾದಗೃಹ್ಣಾದ್ರಥಿನಾಂ ರಥೀ।
11027016c ಸ ನಃ ಪ್ರಥಮಜೋ ಭ್ರಾತಾ ಸರ್ವಶಸ್ತ್ರಭೃತಾಂ ವರಃ।।
11027016e ಅಸೂತ ತಂ ಭವತ್ಯಗ್ರೇ ಕಥಮದ್ಭುತವಿಕ್ರಮಮ್।।
ರಥಿಗಳಲ್ಲಿ ಶ್ರೇಷ್ಠನಾಗಿದ್ದ ಕುಂತೀಸುತ ಕರ್ಣನಲ್ಲದೇ ಬೇರೆ ಯಾರೂ ಸೇನೆಯನ್ನು ಎದುರಿಸಿ ನಿಲ್ಲುತ್ತಿರಲಿಲ್ಲ! ಆ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನು ಮೊದಲು ಹುಟ್ಟಿದ್ದ ನಮ್ಮ ಅಣ್ಣ! ಅಂಥಹ ಅದ್ಭುತವಿಕ್ರಮಿಯನ್ನು ನಮ್ಮೆಲ್ಲರಿಗೆ ಮೊದಲೇ ನೀನು ಹೇಗೆ ಹೆತ್ತೆ?
11027017a ಅಹೋ ಭವತ್ಯಾ ಮಂತ್ರಸ್ಯ ಪಿಧಾನೇನ ವಯಂ ಹತಾಃ।
11027017c ನಿಧನೇನ ಹಿ ಕರ್ಣಸ್ಯ ಪೀಡಿತಾಃ ಸ್ಮ ಸಬಾಂಧವಾಃ।।
ಅಯ್ಯೋ! ನೀನು ಈ ರಹಸ್ಯವನ್ನು ಮುಚ್ಚಿಟ್ಟಿದುದರಿಂದ ನಾವೆಲ್ಲರೂ ಹತರಾದಂತೆಯೇ! ಕರ್ಣನ ನಿಧನದಿಂದ ಬಾಂಧವರೊಂದಿಗೆ ನಾವೆಲ್ಲರೂ ಪೀಡಿತರಾಗಿದ್ದೇವೆ!
11027018a ಅಭಿಮನ್ಯೋರ್ವಿನಾಶೇನ ದ್ರೌಪದೇಯವಧೇನ ಚ।
11027018c ಪಾಂಚಾಲಾನಾಂ ಚ ನಾಶೇನ ಕುರೂಣಾಂ ಪತನೇನ ಚ।।
11027019a ತತಃ ಶತಗುಣಂ ದುಃಖಮಿದಂ ಮಾಮಸ್ಪೃಶದ್ ಭೃಶಮ್।
11027019c ಕರ್ಣಮೇವಾನುಶೋಚನ್ ಹಿ ದಹ್ಯಾಮ್ಯಗ್ನಾವಿವಾಹಿತಃ।।
ಈ ದುಃಖವು ಅಭಿಮನ್ಯುವಿನ ವಿನಾಶ, ದ್ರೌಪದೇಯರ ವಧೆ, ಪಾಂಚಾಲರ ನಾಶ ಮತ್ತು ಕುರುಗಳ ಪತನಕ್ಕಿಂತಲೂ ನೂರು ಪಟ್ಟು ಹೆಚ್ಚಾಗಿ ನನ್ನನ್ನು ಸಂಕಟಕ್ಕೀಡುಮಾಡಿದೆ. ಕರ್ಣನ ಕುರಿತೇ ದುಃಖಿಸಿ ನಾನು ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದವನಂತಾಗಿದ್ದೇನೆ!
11027020a ನ ಹಿ ಸ್ಮ ಕಿಂ ಚಿದಪ್ರಾಪ್ಯಂ ಭವೇದಪಿ ದಿವಿ ಸ್ಥಿತಮ್।
11027020c ನ ಚ ಸ್ಮ ವೈಶಸಂ ಘೋರಂ ಕೌರವಾಂತಕರಂ ಭವೇತ್।।
ಅವನು ನಮ್ಮ ಅಣ್ಣನೆಂದು ಮೊದಲೇ ತಿಳಿದಿದ್ದರೆ ನಮಗೆ ಪ್ರಾಪ್ತವಾಗದಿರುವುದು ಯಾವುದೂ ಇರಲಿಲ್ಲ, ಸ್ವರ್ಗದಲ್ಲಿಯೇ ಇದ್ದರೂ ಅದನ್ನು ನಾವು ಪಡೆದುಕೊಳ್ಳುತ್ತಿದ್ದೆವು. ಈ ಘೋರ ದುಃಖಕರ ಕೌರವರ ಅಂತ್ಯವೂ ನಡೆಯುತ್ತಿರಲಿಲ್ಲ!”
11027021a ಏವಂ ವಿಲಪ್ಯ ಬಹುಲಂ ಧರ್ಮರಾಜೋ ಯುಧಿಷ್ಠಿರಃ।
11027021c ವಿನದನ್ ಶನಕೈ ರಾಜಂಶ್ಚಕಾರಾಸ್ಯೋದಕಂ ಪ್ರಭುಃ।।
ಹೀಗೆ ಧರ್ಮರಾಜ ಯುಧಿಷ್ಠಿರನು ಬಹಳವಾಗಿ ವಿಲಪಿಸಿದನು. ರಾಜನ್! ಮೆಲ್ಲನೇ ಅಳುತ್ತಲೇ ಆ ಪ್ರಭುವು ಕರ್ಣನಿಗೆ ಉದಕ ಕ್ರಿಯೆಗಳನ್ನು ಮಾಡಿದನು.
11027022a ತತೋ ವಿನೇದುಃ ಸಹಸಾ ಸ್ತ್ರೀಪುಂಸಾಸ್ತತ್ರ ಸರ್ವಶಃ।
11027022c ಅಭಿತೋ ಯೇ ಸ್ಥಿತಾಸ್ತತ್ರ ತಸ್ಮಿನ್ನುದಕಕರ್ಮಣಿ।।
ಅವನು ಉದಕಕ್ರಿಯೆಗಳನ್ನು ಮಾಡುವಾಗ ಸುತ್ತಲೂ ನಿಂತಿದ್ದ ಸ್ತ್ರೀ-ಪುರುಷರೆಲ್ಲರೂ ಒಡನೆಯೇ ಜೋರಾಗಿ ರೋದಿಸಿದರು.
11027023a ತತ ಆನಾಯಯಾಮಾಸ ಕರ್ಣಸ್ಯ ಸಪರಿಚ್ಚದಮ್।
11027023c ಸ್ತ್ರಿಯಃ ಕುರುಪತಿರ್ಧೀಮಾನ್ಭ್ರಾತುಃ ಪ್ರೇಮ್ಣಾ ಯುಧಿಷ್ಠಿರಃ6।।
ಅನಂತರ ಭ್ರಾತೃ ಪ್ರೇಮದಿಂದ ಕುರುಪತಿ ಯುಧಿಷ್ಠಿರನು ಕರ್ಣನ ಸ್ತ್ರೀಯರನ್ನು ಅವರ ಪರಿವಾರಸಮೇತರಾಗಿ ಕರೆಯಿಸಿಕೊಂಡನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಜಲಪ್ರದಾನಿಕಪರ್ವಣಿ ಕರ್ಣಗೂಢಜತ್ವಕಥನೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಜಲಪ್ರದಾನಿಕಪರ್ವದಲ್ಲಿ ಕರ್ಣಗೂಢಜತ್ವಕಥನ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ಜಲಪ್ರದಾನಿಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಜಲಪ್ರದಾನಿಕಪರ್ವವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳೂ – 11/18, ಉಪಪರ್ವಗಳು-83/100, ಅಧ್ಯಾಯಗಳು-1328/1995, ಶ್ಲೋಕಗಳು-50010/73784.