ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 25
ಸಾರ
ಗಾಂಧಾರಿಯು ಕೃಷ್ಣನಿಗೆ ಶಾಪವನ್ನಿತ್ತಿದುದು (1-46).
11025001 ಗಾಂಧಾರ್ಯುವಾಚ
11025001a ಕಾಂಬೋಜಂ ಪಶ್ಯ ದುರ್ಧರ್ಷಂ ಕಾಂಬೋಜಾಸ್ತರಣೋಚಿತಮ್।
11025001c ಶಯಾನಮೃಷಭಸ್ಕಂಧಂ ಹತಂ ಪಾಂಸುಶು ಮಾಧವ।।
ಗಾಂಧಾರಿಯು ಹೇಳಿದಳು: “ಮಾಧವ! ಕಾಂಬೋಜದ ಮೆತ್ತನೆಯ ಶಯನದಲ್ಲಿ ಮಲಗಲು ಯೋಗ್ಯನಾದ ಋಷಭಸ್ಕಂಧ ದುರ್ಧರ್ಷ ಕಾಂಬೋಜನು ಹತನಾಗಿ ಕೆಸರಿನಲ್ಲಿ ಮಲಗಿರುವುದನ್ನು ನೋಡು!
11025002a ಯಸ್ಯ ಕ್ಷತಜಸಂದಿಗ್ಧೌ ಬಾಹೂ ಚಂದನರೂಷಿತೌ।
11025002c ಅವೇಕ್ಷ್ಯ ಕೃಪಣಂ ಭಾರ್ಯಾ ವಿಲಪತ್ಯತಿದುಃಖಿತಾ।।
ಆ ಕೃಪಣನ ಚಂದನಲೇಪಿತ ಬಾಹುಗಳು ಗಾಯಗೊಂಡು ರಕ್ತದಿಂದ ತೋಯ್ದುಹೋಗಿರುವುದನ್ನು ನೋಡಿ ಅವನ ಭಾರ್ಯೆಯು ದುಃಖಿತಳಾಗಿ ವಿಲಪಿಸುತ್ತಿದ್ದಾಳೆ.
11025003a ಇಮೌ ತೌ ಪರಿಘಪ್ರಖ್ಯೌ ಬಾಹೂ ಶುಭತಲಾಂಗುಲೀ।
11025003c ಯಯೋರ್ವಿವರಮಾಪನ್ನಾಂ ನ ರತಿರ್ಮಾಂ ಪುರಾಜಹತ್।।
“ಶುಭ ಅಂಗೈ-ಬೆರಳುಗಳಿಂದ ಕೂಡಿದ್ದ ಪರಿಘದಂತಿದ್ದ ನಿನ್ನ ಬಾಹುಗಳ ಮಧ್ಯದಲ್ಲಿ ಸೇರಿಕೊಂಡು ಹಿಂದೆ ರಮಿಸುತ್ತಿದ್ದ ನನ್ನನ್ನು ಅನುರಾಗವು ಬಿಟ್ಟುಹೋಗಿಲ್ಲ.
11025004a ಕಾಂ ಗತಿಂ ನು ಗಮಿಷ್ಯಾಮಿ ತ್ವಯಾ ಹೀನಾ ಜನೇಶ್ವರ।
11025004c ದೂರಬಂಧುರನಾಥೇವ ಅತೀವ ಮಧುರಸ್ವರಾ।।
ಜನೇಶ್ವರ! ನೀನಿಲ್ಲದೇ ನಾನು ಯಾವ ಮಾರ್ಗದಲ್ಲಿ ಹೋಗುವೆನೋ!” ಎಂಬುದಾಗಿ ಬಂಧುಗಳಿಲ್ಲದ ಅನಾಥಳಂತೆ ಅವಳು ಮಧುರಸ್ವರದಲ್ಲಿ ರೋದಿಸುತ್ತಿದ್ದಾಳೆ.
11025005a ಆತಪೇ ಕ್ಲಾಮ್ಯಮಾನಾನಾಂ ವಿವಿಧಾನಾಮಿವ ಸ್ರಜಾಮ್।
11025005c ಕ್ಲಾಂತಾನಾಮಪಿ ನಾರೀಣಾಂ ನ ಶ್ರೀರ್ಜಹತಿ ವೈ ತನುಮ್।।
ಬಿಸಿಲಿನಲ್ಲಿ ಬಾಡಿಹೋಗಿರುವ ವಿವಿಧ ಹೂವಿನ ಮಾಲೆಗಳಂತೆ ಬಾಡಿಹೋಗಿದ್ದರೂ ಈ ನಾರಿಯರ ಸೌಂದರ್ಯವು ಅವರ ದೇಹಗಳನ್ನು ಬಿಟ್ಟುಹೋಗಿಲ್ಲ.
11025006a ಶಯಾನಮಭಿತಃ ಶೂರಂ ಕಾಲಿಂಗಂ ಮಧುಸೂದನ।
11025006c ಪಶ್ಯ ದೀಪ್ತಾಂಗದಯುಗಪ್ರತಿಬದ್ಧಮಹಾಭುಜಮ್।।
ಮಧುಸೂದನ! ಇಲ್ಲಿಯೇ ಹತ್ತಿರದಲ್ಲಿ ಬೆಳಗುತ್ತಿರುವ ಅಂಗದಗಳನ್ನು ಕಟ್ಟಿಕೊಂಡಿರುವ ಆ ಮಹಾಭುಜ ಶೂರ ಕಲಿಂಗನು ಮಲಗಿರುವುದನ್ನು ನೋಡು.
11025007a ಮಾಗಧಾನಾಮಧಿಪತಿಂ ಜಯತ್ಸೇನಂ ಜನಾರ್ದನ।
11025007c ಪರಿವಾರ್ಯ ಪ್ರರುದಿತಾ ಮಾಗಧ್ಯಃ ಪಶ್ಯ ಯೋಷಿತಃ।।
ಜನಾರ್ದನ! ಅಲ್ಲಿ ಮಾಗಧ ಸ್ತ್ರೀಯರು ಮಾಗಧರ ಅಧಿಪನನ್ನು ಸುತ್ತುವರೆದು ರೋದಿಸುತ್ತಿರುವುದನ್ನು ನೋಡು!
11025008a ಆಸಾಮಾಯತನೇತ್ರಾಣಾಂ ಸುಸ್ವರಾಣಾಂ ಜನಾರ್ದನ।
11025008c ಮನಃಶ್ರುತಿಹರೋ ನಾದೋ ಮನೋ ಮೋಹಯತೀವ ಮೇ।।
ಜನಾರ್ದನ! ಆ ವಿಶಾಲನೇತ್ರೆಯರು ಕೇಳಿದವರ ಮನಸ್ಸನ್ನು ಅಪಹರಿಸುವ ಸುಸ್ವರದಲ್ಲಿ ಕೂಗಿಕೊಳ್ಳುತ್ತಿರುವುದನ್ನು ಕೇಳಿ ನನ್ನ ಮನಸ್ಸು ಅತೀವವಾಗಿ ಮೋಹಗೊಳ್ಳುತ್ತಿದೆ.
11025009a ಪ್ರಕೀರ್ಣಸರ್ವಾಭರಣಾ ರುದಂತ್ಯಃ ಶೋಕಕರ್ಶಿತಾಃ।
11025009c ಸ್ವಾಸ್ತೀರ್ಣಶಯನೋಪೇತಾ ಮಾಗಧ್ಯಃ ಶೇರತೇ ಭುವಿ।।
ಸರ್ವಾಭರಣಗಳನ್ನೂ ಕಿತ್ತು ಹರಡಿ ಸುಂದರ ಹಚ್ಚಡವನ್ನು ಹಾಸಿದ ಹಾಸಿಗೆಯ ಮೇಲೆ ಮಲಗಲು ಯೋಗ್ಯರಾಗಿದ್ದ ಈ ಮಾಗಧ ನಾರಿಯರು ಶೋಕಕರ್ಶಿತರಾಗಿ ರೋದಿಸುತ್ತಾ ನೆಲದ ಮೇಲೆ ಮಲಗಿದ್ದಾರೆ!
11025010a ಕೋಸಲಾನಾಮಧಿಪತಿಂ ರಾಜಪುತ್ರಂ ಬೃಹದ್ಬಲಮ್।
11025010c ಭರ್ತಾರಂ ಪರಿವಾರ್ಯೈತಾಃ ಪೃಥಕ್ಪ್ರರುದಿತಾಃ ಸ್ತ್ರಿಯಃ।।
ಕೋಸಲರ ಅಧಿಪತಿ ರಾಜಪುತ್ರ ಬೃಹದ್ಬಲನನ್ನು ಅವನ ಪತ್ನಿಯರು ಸುತ್ತುವರೆದು ಪ್ರತ್ಯೇಕ-ಪ್ರತ್ಯೇಕವಾಗಿ ರೋದಿಸುತ್ತಿದ್ದಾರೆ.
11025011a ಅಸ್ಯ ಗಾತ್ರಗತಾನ್ಬಾಣಾನ್ಕಾರ್ಷ್ಣಿಬಾಹುಬಲಾರ್ಪಿತಾನ್।
11025011c ಉದ್ಧರಂತ್ಯಸುಖಾವಿಷ್ಟಾ ಮೂರ್ಚಮಾನಾಃ ಪುನಃ ಪುನಃ।।
ಅಭಿಮನ್ಯುವಿನ ಬಲದಿಂದ ಪ್ರಯೋಗಿಸಲ್ಪಟ್ಟು ಅವನ ಶರೀರವನ್ನು ಹೊಕ್ಕಿರುವ ಬಾಣಗಳನ್ನು ಕಷ್ಟದಿಂದ ಕಿತ್ತು ತೆಗೆಯುತ್ತಾ ಅವರು ಪುನಃ ಪುನಃ ಮೂರ್ಛಿತರಾಗುತ್ತಿದ್ದಾರೆ.
11025012a ಆಸಾಂ ಸರ್ವಾನವದ್ಯಾನಾಮಾತಪೇನ ಪರಿಶ್ರಮಾತ್।
11025012c ಪ್ರಮ್ಲಾನನಲಿನಾಭಾನಿ ಭಾಂತಿ ವಕ್ತ್ರಾಣಿ ಮಾಧವ।।
ಮಾಧವ! ಪರಿಶ್ರಮದಿಂದಾಗಿ ಸರ್ವಸುಂದರಿಯರಾದ ಅವರ ಮುಖಗಳು ಬಿಸಿಲಿನಲ್ಲಿ ಬಾಡಿದ ಕಮಲಗಳಂತೆ ಕಾಣುತ್ತಿವೆ.
11025013a ದ್ರೋಣೇನ ನಿಹತಾಃ ಶೂರಾಃ ಶೇರತೇ ರುಚಿರಾಂಗದಾಃ।
11025013c ದ್ರೋಣೇನಾಭಿಮುಖಾಃ ಸರ್ವೇ ಭ್ರಾತರಃ ಪಂಚ ಕೇಕಯಾಃ।।
ಸುಂದರ ಅಂಗದಗಳನ್ನು ಧರಿಸಿದ್ದ ಐವರು ಶೂರ ಕೇಕಯ ಸಹೋದರರೆಲ್ಲರೂ ದ್ರೋಣನನ್ನು ಎದುರಿಸಿ ದ್ರೋಣನಿಂದ ಹತರಾಗಿ ಮಲಗಿದ್ದಾರೆ.
111025014a ತಪ್ತಕಾಂಚನವರ್ಮಾಣಸ್ತಾಮ್ರಧ್ವಜರಥಸ್ರಜಃ।
11025014c ಭಾಸಯಂತಿ ಮಹೀಂ ಭಾಸಾ ಜ್ವಲಿತಾ ಇವ ಪಾವಕಾಃ।।
ಅಪ್ಪಟ ಚಿನ್ನದ ಕವಚಗಳನ್ನು ಧರಿಸಿ ತಾಮ್ರಧ್ವಜ ರಥ ಸಮೂಹಗಳನ್ನೇ ಹೊಂದಿದ್ದ ಕೇಕಯರು ಪ್ರಜ್ವಲಿಸುವ ಅಗ್ನಿಗಳೋ ಎಂಬಂತೆ ತಮ್ಮ ಕಾಂತಿಯಿಂದ ಭೂಮಿಯನ್ನೇ ಬೆಳಗಿಸುತ್ತಿದ್ದಾರೆ!
11025015a ದ್ರೋಣೇನ ದ್ರುಪದಂ ಸಂಖ್ಯೇ ಪಶ್ಯ ಮಾಧವ ಪಾತಿತಮ್।
11025015c ಮಹಾದ್ವಿಪಮಿವಾರಣ್ಯೇ ಸಿಂಹೇನ ಮಹತಾ ಹತಮ್।।
ಮಾಧವ! ಅರಣ್ಯದಲ್ಲಿ ಮಹಾಗಜವೊಂದು ಸಿಂಹದಿಂದ ಹತವಾದಂತೆ ರಣದಲ್ಲಿ ದ್ರೋಣನಿಂದ ಹತನಾಗಿ ಬಿದ್ದಿರುವ ದ್ರುಪದನನ್ನು ನೋಡು!
11025016a ಪಾಂಚಾಲರಾಜ್ಞೋ ವಿಪುಲಂ ಪುಂಡರೀಕಾಕ್ಷ ಪಾಂಡುರಮ್।
11025016c ಆತಪತ್ರಂ ಸಮಾಭಾತಿ ಶರದೀವ ದಿವಾಕರಃ।।
ಪುಂಡರೀಕಾಕ್ಷ! ಪಾಂಚಲರಾಜನ ಶ್ವೇತಚ್ಛತ್ರವು ಶರತ್ಕಾಲದ ಚಂದ್ರನಂತೆ ವಿಪುಲವಾಗಿ ಬೆಳಗುತ್ತಿದೆ.
11025017a ಏತಾಸ್ತು ದ್ರುಪದಂ ವೃದ್ಧಂ ಸ್ನುಷಾ ಭಾರ್ಯಾಶ್ಚ ದುಃಖಿತಾಃ।
11025017c ದಗ್ಧ್ವಾ ಗಚ್ಚಂತಿ ಪಾಂಚಾಲ್ಯಂ ರಾಜಾನಮಪಸವ್ಯತಃ।।
ವೃದ್ಧ ಪಾಂಚಾಲ್ಯ ದ್ರುಪದನನ್ನು ಚಿತೆಯೇರಿಸಿ ದುಃಖಿತರಾದ ಅವನ ಭಾರ್ಯೆಯರು ಮತ್ತು ಸೊಸೆಯಂದಿರು ರಾಜನನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದಾರೆ!
11025018a ಧೃಷ್ಟಕೇತುಂ ಮಹೇಷ್ವಾಸಂ ಚೇದಿಪುಂಗವಮಂಗನಾಃ।
11025018c ದ್ರೋಣೇನ ನಿಹತಂ ಶೂರಂ ಹರಂತಿ ಹೃತಚೇತಸಃ।।
ದ್ರೋಣನಿಂದ ಹತನಾದ ಚೇದಿರಾಜ ಮಹೇಷ್ವಾಸ ಶೂರ ಧೃಷ್ಟಕೇತುವನ್ನು ಅವನ ಪತ್ನಿಯರು ಬುದ್ಧಿಯನ್ನೇ ಕಳೆದುಕೊಂಡವರಾಗಿ ದಹನಕ್ಕೆ ಕೊಂಡೊಯ್ಯುತ್ತಿದ್ದಾರೆ!
11025019a ದ್ರೋಣಾಸ್ತ್ರಮಭಿಹತ್ಯೈಷ ವಿಮರ್ದೇ ಮಧುಸೂದನ।
11025019c ಮಹೇಷ್ವಾಸೋ ಹತಃ ಶೇತೇ ನದ್ಯಾ ಹೃತ ಇವ ದ್ರುಮಃ।।
ಮಧುಸೂದನ! ದ್ರೋಣನ ಅಸ್ತ್ರಗಳಿಂದ ಪ್ರಹರಿಸಲ್ಪಟ್ಟ ಆ ಮಹೇಷ್ವಾಸನು ನದಿಯ ಪ್ರವಾಹದಿಂದ ಕೆಳಗುರುಳಿಸಲ್ಪಟ್ಟ ವೃಕ್ಷದಂತೆ ಹತನಾಗಿ ಮಲಗಿದ್ದಾನೆ.
11025020a ಏಷ ಚೇದಿಪತಿಃ ಶೂರೋ ಧೃಷ್ಟಕೇತುರ್ಮಹಾರಥಃ।
11025020c ಶೇತೇ ವಿನಿಹತಃ ಸಂಖ್ಯೇ ಹತ್ವಾ ಶತ್ರೂನ್ಸಹಸ್ರಶಃ।।
ಈ ಚೇದಿಪತಿ ಶೂರ ಮಹಾರಥ ಧೃಷ್ಟಕೇತುವು ಯುದ್ಧದಲ್ಲಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ತಾನೇ ಹತನಾಗಿ ಮಲಗಿದ್ದಾನೆ!
11025021a ವಿತುದ್ಯಮಾನಂ ವಿಹಗೈಸ್ತಂ ಭಾರ್ಯಾಃ ಪ್ರತ್ಯುಪಸ್ಥಿತಾಃ।
11025021c ಚೇದಿರಾಜಂ ಹೃಷೀಕೇಶ ಹತಂ ಸಬಲಬಾಂಧವಮ್।।
ಹೃಷೀಕೇಶ! ಸೇನೆ-ಬಾಂಧವರೊಂದಿಗೆ ಹತನಾಗಿ, ಪಕ್ಷಿಗಳಿಂದ ಕುಕ್ಕಲ್ಪಟ್ಟಿರುವ ಚೇದಿರಾಜನನ್ನು ಅವನ ಭಾರ್ಯೆಯರು ಸುತ್ತುವರೆದು ಕುಳಿತಿದ್ದಾರೆ!
11025022a ದಾಶಾರ್ಹೀಪುತ್ರಜಂ ವೀರಂ ಶಯಾನಂ ಸತ್ಯವಿಕ್ರಮಮ್।
11025022c ಆರೋಪ್ಯಾಂಕೇ ರುದಂತ್ಯೇತಾಶ್ಚೇದಿರಾಜವರಾಂಗನಾಃ।।
ಮಲಗಿರುವ ವೀರ, ಸತ್ಯವಿಕ್ರಮ, ದಾಶಾರ್ಹೀ ಶ್ರುತಶ್ರವಳ ಮೊಮ್ಮಗನನ್ನು ತೊಡೆಯಮೇಲೆ ಇಟ್ಟುಕೊಂಡು ಚೇದಿರಾಜನ ವರಾಂಗನೆಯರು ರೋದಿಸುತ್ತಿದ್ದಾರೆ!
11025023a ಅಸ್ಯ ಪುತ್ರಂ ಹೃಷೀಕೇಶ ಸುವಕ್ತ್ರಂ ಚಾರುಕುಂಡಲಮ್।
11025023c ದ್ರೋಣೇನ ಸಮರೇ ಪಶ್ಯ ನಿಕೃತ್ತಂ ಬಹುಧಾ ಶರೈಃ।।
ಹೃಷೀಕೇಶ! ಸುಂದರವದನ, ಸುಂದರ ಕುಂಡಲಗಳನ್ನು ಧರಿಸಿರುವ ಧೃಷ್ಟಕೇತುವಿನ ಮಗನನ್ನು ಸಮರದಲ್ಲಿ ದ್ರೋಣನು ಅನೇಕ ಶರಗಳಿಂದ ಗಾಯಗೊಳಿಸಿರುವುದನ್ನು ನೋಡು!
11025024a ಪಿತರಂ ನೂನಮಾಜಿಸ್ಥಂ ಯುಧ್ಯಮಾನಂ ಪರೈಃ ಸಹ।
11025024c ನಾಜಹಾತ್ಪೃಷ್ಠತೋ ವೀರಮದ್ಯಾಪಿ ಮಧುಸೂದನ।।
ಮಧುಸೂದನ! ಶತ್ರುಗಳೊಂದಿಗೆ ಯುದ್ಧಮಾಡುತ್ತಿದ್ದ ತನ್ನ ತಂದೆಯನ್ನು ಬಿಟ್ಟುಹೋಗದೇ ಇದ್ದ ಈ ವೀರನು ಹತನಾದ ಮೇಲೂ ಅವನ ಜೊತೆಯೇ ಮಲಗಿದ್ದಾನೆ!
11025025a ಏವಂ ಮಮಾಪಿ ಪುತ್ರಸ್ಯ ಪುತ್ರಃ ಪಿತರಮನ್ವಗಾತ್।
11025025c ದುರ್ಯೋಧನಂ ಮಹಾಬಾಹೋ ಲಕ್ಷ್ಮಣಃ ಪರವೀರಹಾ।।
ಮಹಾಬಾಹೋ! ಹಾಗೆಯೇ ನನ್ನ ಮಗನ ಮಗ ಪರವೀರಹ ಲಕ್ಷ್ಮಣನು ತಂದೆ ದುರ್ಯೋಧನನನ್ನು ಅಸುಸರಿಸಿಯೇ ಹೋಗುತ್ತಿದ್ದನು.
11025026a ವಿಂದಾನುವಿಂದಾವಾವಂತ್ಯೌ ಪತಿತೌ ಪಶ್ಯ ಮಾಧವ।
11025026c ಹಿಮಾಂತೇ ಪುಷ್ಪಿತೌ ಶಾಲೌ ಮರುತಾ ಗಲಿತಾವಿವ।।
ಮಾಧವ! ಹೇಮಂತಋತುವಿನ ಕೊನೆಯಲ್ಲಿ ಪುಷ್ಪಿತ ಶಾಲವೃಕ್ಷಗಳು ಭಿರುಗಾಳಿಯ ಬಡಿತಕ್ಕೆ ಕೆಳಗೆ ಬಿದ್ದಿರುವಂತೆ ಅವಂತಿಯ ವಿಂದಾನುವಿಂದರು ಬಿದ್ದಿರುವುದನ್ನು ನೋಡು!
11025027a ಕಾಂಚನಾಂಗದವರ್ಮಾಣೌ ಬಾಣಖಡ್ಗಧನುರ್ಧರೌ।
11025027c ಋಷಭಪ್ರತಿರೂಪಾಕ್ಷೌ ಶಯಾನೌ ವಿಮಲಸ್ರಜೌ।।
ವೃಷಭದ ಕಣ್ಣುಗಳಂತಹ ಕಣ್ಣುಗಳುಳ್ಳ ಅವರಿಬ್ಬರೂ ಕಾಂಚನದ ಅಂಗದ-ಕವಚಗಳನ್ನು ಧರಿಸಿ, ಬಾಣ-ಖಡ್ಗಗಳನ್ನು ಹಿಡಿದು ಮಲಗಿದ್ದಾರೆ.
11025028a ಅವಧ್ಯಾಃ ಪಾಂಡವಾಃ ಕೃಷ್ಣ ಸರ್ವ ಏವ ತ್ವಯಾ ಸಹ।
11025028c ಯೇ ಮುಕ್ತಾ ದ್ರೋಣಭೀಷ್ಮಾಭ್ಯಾಂ ಕರ್ಣಾದ್ವೈಕರ್ತನಾತ್ಕೃಪಾತ್।।
11025029a ದುರ್ಯೋಧನಾದ್ದ್ರೋಣಸುತಾತ್ಸೈಂಧವಾಚ್ಚ ಮಹಾರಥಾತ್।
11025029c ಸೋಮದತ್ತಾದ್ವಿಕರ್ಣಾಚ್ಚ ಶೂರಾಚ್ಚ ಕೃತವರ್ಮಣಃ।।
11025029e ಯೇ ಹನ್ಯುಃ ಶಸ್ತ್ರವೇಗೇನ ದೇವಾನಪಿ ನರರ್ಷಭಾಃ।।
ಕೃಷ್ಣ! ನಿನ್ನ ರಕ್ಷಣೆಯಲ್ಲಿರುವ ಪಾಂಡವರೆಲ್ಲರೂ ಅವಧ್ಯರೇ ಸರಿ! ಅವರು ಮಹಾರಥರೂ ಶೂರರೂ ಆದ ದ್ರೋಣ, ಭೀಷ್ಮ, ವೈಕರ್ತನ ಕರ್ಣ, ಕೃಪ, ದುರ್ಯೋಧನ, ದ್ರೋಣಸುತ, ಸೈಂಧವ, ಸೋಮದತ್ತ, ವಿಕರ್ಣ ಮತ್ತು ಕೃತವರ್ಮರಿಂದ ಮುಕ್ತರಾಗಿದ್ದಾರೆ. ಈ ನರರ್ಷಭರು ದೇವತೆಗಳ ಶಸ್ತ್ರವೇಗದಿಂದಲೂ ಹತರಾಗುತ್ತಿರಲಿಲ್ಲ.
11025030a ತ ಇಮೇ ನಿಹತಾಃ ಸಂಖ್ಯೇ ಪಶ್ಯ ಕಾಲಸ್ಯ ಪರ್ಯಯಮ್।
11025030c ನಾತಿಭಾರೋಽಸ್ತಿ ದೈವಸ್ಯ ಧ್ರುವಂ ಮಾಧವ ಕಶ್ಚನ।।
ಮಾಧವ! ಇವರೆಲ್ಲರೂ ಯುದ್ಧದಲ್ಲಿ ಹತರಾಗಿದ್ದಾರೆಂದರೆ ಕಾಲದ ಮಹಿಮೆಯನ್ನು ನೋಡು! ದೈವಕ್ಕೆ ಭಾರವಾದುದು ಯಾವುದೂ ಇಲ್ಲವೆನ್ನುವುದು ಸತ್ಯ!
11025030e ಯದಿಮೇ ನಿಹತಾಃ ಶೂರಾಃ ಕ್ಷತ್ರಿಯೈಃ ಕ್ಷತ್ರಿಯರ್ಷಭಾಃ।।
11025031a ತದೈವ ನಿಹತಾಃ ಕೃಷ್ಣ ಮಮ ಪುತ್ರಾಸ್ತರಸ್ವಿನಃ।
11025031c ಯದೈವಾಕೃತಕಾಮಸ್ತ್ವಮುಪಪ್ಲವ್ಯಂ ಗತಃ ಪುನಃ।।
ಈ ಶೂರ ಕ್ಷತ್ರಿಯರ್ಷಭರು ಕ್ಷತ್ರಿಯರಿಂದಲೇ ನಿಹತರಾದರು. ಕೃಷ್ಣ! ಯಾವಾಗ ನೀನು ನಿನ್ನ ಕಾರ್ಯವು ಸಫಲವಾಗದೇ ಪುನಃ ಉಪಪ್ಲವ್ಯಕ್ಕೆ ಹೋದೆಯೋ ಅಂದೇ ನನ್ನ ತರಸ್ವೀ ಪುತ್ರರು ಹತರಾದರು.
11025032a ಶಂತನೋಶ್ಚೈವ ಪುತ್ರೇಣ ಪ್ರಾಜ್ಞೇನ ವಿದುರೇಣ ಚ।
11025032c ತದೈವೋಕ್ತಾಸ್ಮಿ ಮಾ ಸ್ನೇಹಂ ಕುರುಷ್ವಾತ್ಮಸುತೇಷ್ವಿತಿ।।
ಶಂತನು ಪುತ್ರ ಮತ್ತು ಪ್ರಾಜ್ಞ ವಿದುರರು ನಿನ್ನ ಮಕ್ಕಳೊಂದಿಗೆ ಸ್ನೇಹವನ್ನಿಟ್ಟುಕೊಳ್ಳಬೇಡವೆಂದು ಆಗಲೇ ನನಗೆ ಹೇಳಿದ್ದರು.
11025033a ತಯೋರ್ನ ದರ್ಶನಂ ತಾತ ಮಿಥ್ಯಾ ಭವಿತುಮರ್ಹತಿ।
11025033c ಅಚಿರೇಣೈವ ಮೇ ಪುತ್ರಾ ಭಸ್ಮೀಭೂತಾ ಜನಾರ್ದನ।।
ಜನಾರ್ದನ! ಮಗೂ! ಅವರು ಕಂಡಿದ್ದುದು ಮಿಥ್ಯವಾಗಲು ಸಾಧ್ಯವಿಲ್ಲ. ಅಲ್ಪಕಾಲದಲ್ಲಿಯೇ ನನ್ನ ಪುತ್ರರು ಭಸ್ಮೀಭೂತರಾದರು!””
11025034 ವೈಶಂಪಾಯನ ಉವಾಚ
11025034a ಇತ್ಯುಕ್ತ್ವಾ ನ್ಯಪತದ್ಭೂಮೌ ಗಾಂಧಾರೀ ಶೋಕಕರ್ಶಿತಾ।
11025034c ದುಃಖೋಪಹತವಿಜ್ಞಾನಾ ಧೈರ್ಯಮುತ್ಸೃಜ್ಯ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿ ಶೋಕಕರ್ಶಿತ ಗಾಂಧಾರಿಯು ನೆಲದ ಮೇಲೆ ಬಿದ್ದಳು. ದುಃಖದಿಂದ ಅವಳ ವಿಶೇಷ ಜ್ಞಾನವೇ ಹೊರಟುಹೋಗಿತ್ತು. ಧೈರ್ಯವು ತೊಲಗಿಹೋಗಿತ್ತು.
11025035a ತತಃ ಕೋಪಪರೀತಾಂಗೀ ಪುತ್ರಶೋಕಪರಿಪ್ಲುತಾ।
11025035c ಜಗಾಮ ಶೌರಿಂ ದೋಷೇಣ ಗಾಂಧಾರೀ ವ್ಯಥಿತೇಂದ್ರಿಯಾ।।
ಆಗ ಕೋಪದಿಂದ ಅವಳ ಅಂಗಾಂಗಗಳು ಉರಿಯುತ್ತಿರಲು, ಇಂದ್ರಿಯಗಳು ವ್ಯಥೆಗೊಂಡಿರಲು ಪುತ್ರಶೋಕದಲ್ಲಿ ಮುಳುಗಿಹೋಗಿದ್ದ ಗಾಂಧಾರಿಯು ಇವಕ್ಕೆಲ್ಲಾ ಶೌರಿಯನ್ನೇ ದೋಷಿತನೆಂದು ಪರಿಗಣಿಸಿದಳು.
11025036 ಗಾಂಧಾರ್ಯುವಾಚ
11025036a ಪಾಂಡವಾ ಧಾರ್ತರಾಷ್ಟ್ರಾಶ್ಚ ದ್ರುಗ್ಧಾಃ ಕೃಷ್ಣ ಪರಸ್ಪರಮ್।
11025036c ಉಪೇಕ್ಷಿತಾ ವಿನಶ್ಯಂತಸ್ತ್ವಯಾ ಕಸ್ಮಾಜ್ಜನಾರ್ದನ।।
ಗಾಂಧಾರಿಯು ಹೇಳಿದಳು: “ಕೃಷ್ಣ! ಜನಾರ್ದನ! ಪಾಂಡವರು ಮತ್ತು ಧಾರ್ತರಾಷ್ಟ್ರರು ಪರಸ್ಪರ ಹೋರಾಡಿ ಸುಟ್ಟು ಭಸ್ಮವಾದರು. ನೀನೇಕೆ ಅವರು ವಿನಾಶವಾಗುತ್ತಿರುವುದನ್ನು ನೋಡುತ್ತಿದ್ದಂತೆಯೂ ಉಪೇಕ್ಷಿಸಿದೆ?
11025037a ಶಕ್ತೇನ ಬಹುಭೃತ್ಯೇನ ವಿಪುಲೇ ತಿಷ್ಠತಾ ಬಲೇ।
11025037c ಉಭಯತ್ರ ಸಮರ್ಥೇನ ಶ್ರುತವಾಕ್ಯೇನ ಚೈವ ಹ।।
ನಿನ್ನಲ್ಲಿ ಶಕ್ತಿ, ಅನೇಕ ಸೇವಕರು ಮತ್ತು ಅಪಾರ ಸೇನೆಯು ಇತ್ತು. ಹೀಗೆಯೆ ನಡೆದುಕೊಳ್ಳಬೇಕೆಂದು ಎರಡೂ ಪಕ್ಷಗಳಿಗೆ ಆಜ್ಞಾಪಿಸಲೂ ನೀನು ಸಮರ್ಥನಾಗಿದ್ದೆ.
11025038a ಇಚ್ಚತೋಪೇಕ್ಷಿತೋ ನಾಶಃ ಕುರೂಣಾಂ ಮಧುಸೂದನ।
11025038c ಯಸ್ಮಾತ್ತ್ವಯಾ ಮಹಾಬಾಹೋ ಫಲಂ ತಸ್ಮಾದವಾಪ್ನುಹಿ।।
ಮಧುಸೂದನ! ಮಹಾಬಾಹೋ! ಉದ್ದೇಶಪೂರ್ವಕವಾಗಿಯೇ ನೀನು ಕುರುಗಳ ನಾಶವನ್ನು ಉಪೇಕ್ಷಿಸಿದೆ! ಇದರ ಫಲವನ್ನು ನೀನು ಪಡೆಯುತ್ತೀಯೆ.
11025039a ಪತಿಶುಶ್ರೂಷಯಾ ಯನ್ಮೇ ತಪಃ ಕಿಂ ಚಿದುಪಾರ್ಜಿತಮ್।
11025039c ತೇನ ತ್ವಾಂ ದುರವಾಪಾತ್ಮನ್ ಶಪ್ಸ್ಯೇ ಚಕ್ರಗದಾಧರ।।
ಚಕ್ರಗದಾಧರ! ಪತಿಶುಶ್ರೂಷೆಯಿಂದಾಗಿ ನಾನು ಯಾವ ಸ್ವಲ್ಪ ತಪಸ್ಸನ್ನು ಸಂಪಾದಿಸಿರುತ್ತೇನೆಯೋ ಆ ದುರ್ಲಭ ತಪಃಫಲದಿಂದ ನಾನು ನಿನ್ನನ್ನು ಶಪಿಸುತ್ತೇನೆ.
11025040a ಯಸ್ಮಾತ್ಪರಸ್ಪರಂ ಘ್ನಂತೋ ಜ್ಞಾತಯಃ ಕುರುಪಾಂಡವಾಃ।
11025040c ಉಪೇಕ್ಷಿತಾಸ್ತೇ ಗೋವಿಂದ ತಸ್ಮಾಜ್ಞಾತೀನ್ವಧಿಷ್ಯಸಿ।।
ಗೋವಿಂದ! ನೀನು ತಡೆಯದೇ ಉಪೇಕ್ಷಿಸಿದುದಕ್ಕಾಗಿ ಹೇಗೆ ಕುರುಪಾಂಡವ ದಾಯಾದಿಗಳು ಪರಸ್ಪರರನ್ನು ಸಂಹರಿಸಿದರೋ ಹಾಗೆ ನಿನ್ನ ಬಾಂಧವರನ್ನೂ ನೀನು ವಧಿಸುತ್ತೀಯೆ.
11025041a ತ್ವಮಪ್ಯುಪಸ್ಥಿತೇ ವರ್ಷೇ ಷಟ್ತ್ರಿಂಶೇ ಮಧುಸೂದನ।
11025041c ಹತಜ್ಞಾತಿರ್ಹತಾಮಾತ್ಯೋ ಹತಪುತ್ರೋ ವನೇಚರಃ।।
11025041e ಕುತ್ಸಿತೇನಾಭ್ಯುಪಾಯೇನ ನಿಧನಂ ಸಮವಾಪ್ಸ್ಯಸಿ।।
ಮಧುಸೂದನ! ಇಂದಿನಿಂದ ಮೂವತ್ತಾರನೇ ವರ್ಷದಲ್ಲಿ ನಿನ್ನ ಬಾಂಧವ-ಅಮಾತ್ಯ-ಪುತ್ರರನ್ನು ಕಳೆದುಕೊಂಡು ನೀನು ವನದಲ್ಲಿ ಸಂಚರಿಸುತ್ತಿರುವಾಗ ಯಾವುದೋ ಒಂದು ಹೀನರೀತಿಯಲ್ಲಿ ನಿಧನವನ್ನು ಹೊಂದುತ್ತೀಯೆ!
11025042a ತವಾಪ್ಯೇವಂ ಹತಸುತಾ ನಿಹತಜ್ಞಾತಿಬಾಂಧವಾಃ।
11025042c ಸ್ತ್ರಿಯಃ ಪರಿಪತಿಷ್ಯಂತಿ ಯಥೈತಾ ಭರತಸ್ತ್ರಿಯಃ।।
ಭರತಸ್ತ್ರೀಯರಂತೆ ನಿನ್ನ ಕುಲದ ಸ್ತ್ರೀಯರೂ ಪುತ್ರರನ್ನೂ, ಜ್ಞಾತಿ-ಬಾಂಧವರನ್ನೂ ಕಳೆದುಕೊಂಡು ಪರಿತಪಿಸುತ್ತಾರೆ!”
11025043 ವೈಶಂಪಾಯನ ಉವಾಚ
11025043a ತಚ್ಚ್ರುತ್ವಾ ವಚನಂ ಘೋರಂ ವಾಸುದೇವೋ ಮಹಾಮನಾಃ।
11025043c ಉವಾಚ ದೇವೀಂ ಗಾಂಧಾರೀಮೀಷದಭ್ಯುತ್ಸ್ಮಯನ್ನಿವ।।
ವೈಶಂಪಾಯನನು ಹೇಳಿದನು: “ಆ ಘೋರ ಮಾತನ್ನು ಕೇಳಿ ಮಹಾಮನಸ್ವಿ ವಾಸುದೇವನು ನಸುನಗುತ್ತಿರುವನೋ ಎನ್ನುವಂತೆ ದೇವೀ ಗಾಂಧಾರಿಗೆ ಇಂತೆಂದನು:
11025044a ಸಂಹರ್ತಾ ವೃಷ್ಣಿಚಕ್ರಸ್ಯ ನಾನ್ಯೋ ಮದ್ವಿದ್ಯತೇ ಶುಭೇ।
11025044c ಜಾನೇಽಹಮೇತದಪ್ಯೇವಂ ಚೀರ್ಣಂ ಚರಸಿ ಕ್ಷತ್ರಿಯೇ2।।
“ಕ್ಷತ್ರಿಯೇ! ಶುಭೇ! ವೃಷ್ಣಿಚಕ್ರವನ್ನು ಬೇರೆ ಯಾರೂ ಸಂಹರಿಸಲಾರದೆಂದು ನನಗೆ ತಿಳಿದಿದೆ. ಇದು ಹೀಗೆಯೇ ಆಗುತ್ತದೆಯೆಂದು ನನಗೆ ತಿಳಿದಿತ್ತು. ಅದನ್ನೇ ನೀನು ಮಾಡಿರುವೆ!
11025045a ಅವಧ್ಯಾಸ್ತೇ ನರೈರನ್ಯೈರಪಿ ವಾ ದೇವದಾನವೈಃ।
11025045c ಪರಸ್ಪರಕೃತಂ ನಾಶಮತಃ ಪ್ರಾಪ್ಸ್ಯಂತಿ ಯಾದವಾಃ।।
ಅನ್ಯ ನರರಿಂದಾಗಲೀ ಅಥವಾ ದೇವದಾನವರಿಂದಾಗಲೀ ಅವರು ಅವಧ್ಯರು. ಆದುದರಿಂದ ಯಾದವರು ಪರಸ್ಪರರೊಡನೆಯೇ ಕಾದಾಡಿ ನಾಶಹೊಂದುತ್ತಾರೆ!”
11025046a ಇತ್ಯುಕ್ತವತಿ ದಾಶಾರ್ಹೇ ಪಾಂಡವಾಸ್ತ್ರಸ್ತಚೇತಸಃ।
11025046c ಬಭೂವುರ್ಭೃಶಸಂವಿಗ್ನಾ ನಿರಾಶಾಶ್ಚಾಪಿ ಜೀವಿತೇ।।
ದಾಶಾರ್ಹನು ಹೀಗೆ ಹೇಳಲು ಭಯಭೀತರಾದ ಪಾಂಡವರು ತುಂಬಾ ಉದ್ವೇಗಗೊಂಡು ತಮ್ಮ ಜೀವಿತದಲ್ಲಿಯೇ ನಿರಾಶೆಹೊಂದಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀಶಾಪದಾನೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀಶಾಪದಾನ ಎನ್ನುವ ಇಪ್ಪತ್ತೈದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ಸ್ತ್ರೀಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಸ್ತ್ರೀಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು – 10/18, ಉಪಪರ್ವಗಳು-81/100, ಅಧ್ಯಾಯಗಳು-1326/1995, ಶ್ಲೋಕಗಳು-49942/73784.