ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 24
ಸಾರ
ಹತನಾಗಿದ್ದ ಭೂರಿಶ್ರವ-ಸೋಮದತ್ತರನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-20). ಶಕುನಿಯ ಮೃತಶರೀರವನ್ನು ತೋರಿಸುತ್ತಾ ಗಾಂಧಾರಿಯು “ಸುಳ್ಳನಾಗಿರುವ ಇವನು ಸ್ವರ್ಗದಲ್ಲಿ ಕೂಡ ಸತ್ಯಪ್ರಜ್ಞರಾಗಿರುವ ನನ್ನ ಮಕ್ಕಳು ಮತ್ತು ಅವರ ಸಹೋದರರ ನಡುವೆ ವಿರೋಧವನ್ನುಂಟುಮಾಡುವನೋ ಹೇಗೆ?” ಎಂದು ಕೃಷ್ಣನನ್ನು ಪ್ರಶ್ನಿಸಿದುದು (21-28).
11024001 ಗಾಂಧಾರ್ಯುವಾಚ
11024001a ಸೋಮದತ್ತಸುತಂ ಪಶ್ಯ ಯುಯುಧಾನೇನ ಪಾತಿತಮ್।
11024001c ವಿತುದ್ಯಮಾನಂ ವಿಹಗೈರ್ಬಹುಭಿರ್ಮಾಧವಾಂತಿಕೇ।।
ಗಾಂಧಾರಿಯು ಹೇಳಿದಳು: “ಯುಯುಧಾನನಿಂದ ಕೆಳಗುರುಳಿಸಲ್ಪಟ್ಟ ಸೋಮದತ್ತನ ಮಗ ಭೂರಿಶ್ರವನನ್ನು ನೋಡು! ಮಾಧವ! ಅನೇಕ ಪಕ್ಷಿಗಳು ಅವನ ಹತ್ತಿರದಲ್ಲಿಯೇ ಕುಳಿತು ಅವನನ್ನು ಕುಕ್ಕುತ್ತಿವೆ!
11024002a ಪುತ್ರಶೋಕಾಭಿಸಂತಪ್ತಃ ಸೋಮದತ್ತೋ ಜನಾರ್ದನ।
11024002c ಯುಯುಧಾನಂ ಮಹೇಷ್ವಾಸಂ ಗರ್ಹಯನ್ನಿವ ದೃಶ್ಯತೇ।।
ಜನಾರ್ದನ! ಪುತ್ರಶೋಕದಿಂದ ಸಂತಪ್ತನಾಗಿರುವ ಸೋಮದತ್ತನು ಮಹೇಷ್ವಾಸ ಯುಯುಧಾನನನ್ನು ನಿಂದಿಸುತ್ತಿರುವಂತೆ ಕಾಣುತ್ತಿದ್ದಾನೆ.
11024003a ಅಸೌ ತು ಭೂರಿಶ್ರವಸೋ ಮಾತಾ ಶೋಕಪರಿಪ್ಲುತಾ।
11024003c ಆಶ್ವಾಸಯತಿ ಭರ್ತಾರಂ ಸೋಮದತ್ತಮನಿಂದಿತಾ।।
ಶೋಕದಲ್ಲಿ ಮುಳುಗಿಹೋಗಿರುವ ಭೂರಿಶ್ರವನ ಅನಿಂದಿತೆ ತಾಯಿಯು ಪತಿ ಸೋಮದತ್ತನನ್ನು ಹೀಗೆಂದು ಸಮಾಧಾನಗೊಳಿಸುತ್ತಿದ್ದಾಳೆ:
11024004a ದಿಷ್ಟ್ಯಾ ನೇದಂ ಮಹಾರಾಜ ದಾರುಣಂ ಭರತಕ್ಷಯಮ್।
11024004c ಕುರುಸಂಕ್ರಂದನಂ ಘೋರಂ ಯುಗಾಂತಮನುಪಶ್ಯಸಿ।।
“ಮಹಾರಾಜ! ಸೌಭಾಗ್ಯವಶಾತ್ ನೀನು ಈ ಭರತರ ದಾರುಣ ನಾಶವನ್ನೂ, ಕುರುಗಳ ಆಕ್ರಂದನಗಳನ್ನೂ, ಘೋರ ಯುಗಾಂತವನ್ನೂ ನೋಡುತ್ತಿಲ್ಲ!
11024005a ದಿಷ್ಟ್ಯಾ ಯೂಪಧ್ವಜಂ ವೀರಂ ಪುತ್ರಂ ಭೂರಿಸಹಸ್ರದಮ್।
11024005c ಅನೇಕಕ್ರತುಯಜ್ವಾನಂ ನಿಹತಂ ನಾದ್ಯ ಪಶ್ಯಸಿ।।
ಸೌಭಾಗ್ಯವಶಾತ್ ನೀನು ಯೂಪಧ್ವಜ, ಸಾವಿರಾರು ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಕೊಡುತ್ತಿದ್ದ, ಅನೇಕ ಯಾಗಗಳನ್ನು ಮಾಡಿದ ನಿನ್ನ ಆ ವೀರ ಪುತ್ರ ಭೂರಿಶ್ರವನು ಹತನಾದುದನ್ನು ನೋಡುತ್ತಿಲ್ಲ!
11024006a ದಿಷ್ಟ್ಯಾ ಸ್ನುಷಾಣಾಮಾಕ್ರಂದೇ ಘೋರಂ ವಿಲಪಿತಂ ಬಹು।
11024006c ನ ಶೃಣೋಷಿ ಮಹಾರಾಜ ಸಾರಸೀನಾಮಿವಾರ್ಣವೇ।।
ಮಹಾರಾಜ! ಒಳ್ಳೆಯದಾಯಿತು! ಕಡಲ ಹದ್ದುಗಳಂತೆ ಘೋರವಾಗಿ ಬಹಳವಾಗಿ ವಿಲಪಿಸುತ್ತಿರುವ ನಿನ್ನ ಸೊಸೆಯಂದಿರ ಆಕ್ರಂದನವನ್ನು ನೀನು ಕೇಳುತ್ತಿಲ್ಲ!
11024007a ಏಕವಸ್ತ್ರಾನುಸಂವೀತಾಃ ಪ್ರಕೀರ್ಣಾಸಿತಮೂರ್ಧಜಾಃ।
11024007c ಸ್ನುಷಾಸ್ತೇ ಪರಿಧಾವಂತಿ ಹತಾಪತ್ಯಾ ಹತೇಶ್ವರಾಃ।।
ಪತಿಗಳನ್ನು ಕಳೆದುಕೊಂಡು ಹತೇಶ್ವರರಾಗಿರುವ ನಿನ್ನ ಸೊಸೆಯಂದಿರು ಒಂದು ವಸ್ತ್ರವನ್ನೋ ಅಥವಾ ಅರ್ಧ ವಸ್ತ್ರವನ್ನೋ ಉಟ್ಟುಕೊಂಡು ಕಪ್ಪು ಕೂದಲುಗಳನ್ನು ಕೆದರಿಕೊಂಡು ಸುತ್ತುತ್ತಿದ್ದಾರೆ.
11024008a ಶ್ವಾಪದೈರ್ಭಕ್ಷ್ಯಮಾಣಂ ತ್ವಮಹೋ ದಿಷ್ಟ್ಯಾ ನ ಪಶ್ಯಸಿ।
11024008c ಚಿನ್ನಬಾಹುಂ ನರವ್ಯಾಘ್ರಮರ್ಜುನೇನ ನಿಪಾತಿತಮ್।।
ಅರ್ಜುನನಿಂದ ಬಾಹುಗಳು ಕತ್ತರಿಸಲ್ಪಟ್ಟು ಬಿದ್ದಿರುವ ನರವ್ಯಾಘ್ರನನ್ನು ಮಾಂಸಾಹಾರಿ ಪ್ರಾಣಿಗಳು ತಿನ್ನುತ್ತಿರುವುದನ್ನು ನೀನು ನೋಡುತ್ತಿಲ್ಲವೆನ್ನುವುದು ಅದೃಷ್ಠವೇ ಸರಿ!
11024009a ಶಲಂ ವಿನಿಹತಂ ಸಂಖ್ಯೇ ಭೂರಿಶ್ರವಸಮೇವ ಚ।
11024009c ಸ್ನುಷಾಶ್ಚ ವಿಧವಾಃ ಸರ್ವಾ ದಿಷ್ಟ್ಯಾ ನಾದ್ಯೇಹ ಪಶ್ಯಸಿ।।
ಒಳ್ಳೆಯದಾಯಿತು! ನೀನು ಯುದ್ಧದಲ್ಲಿ ಶಲ ಮತ್ತು ಭೂರಿಶ್ರವರು ಹತರಾದುದನ್ನಾಗಲೀ ಮತ್ತು ವಿಧವೆಯರಾದ ಸೊಸೆಯಂದಿರೆಲ್ಲರನ್ನೂ ಇಂದು ನೋಡುತ್ತಿಲ್ಲ!
11024010a ದಿಷ್ಟ್ಯಾ ತತ್ಕಾಂಚನಂ ಚತ್ರಂ ಯೂಪಕೇತೋರ್ಮಹಾತ್ಮನಃ।
11024010c ವಿನಿಕೀರ್ಣಂ ರಥೋಪಸ್ಥೇ ಸೌಮದತ್ತೇರ್ನ ಪಶ್ಯಸಿ।।
ಒಳ್ಳೆಯದಾಯಿತು! ನೀನು ಮಹಾತ್ಮ ಸೌಮದತ್ತಿಯ ರಥಯೂಪದ ಮೇಲೆ ಹಾರಾಡುತ್ತಿದ್ದ ಕಾಂಚನ ಚತ್ರವು ತುಂಡಾಗಿ ಕೆಳಗೆ ಬಿದ್ದುದನ್ನು ನೀನು ನೋಡುತ್ತಿಲ್ಲ!
11024011a ಅಮೂಸ್ತು ಭೂರಿಶ್ರವಸೋ ಭಾರ್ಯಾಃ ಸಾತ್ಯಕಿನಾ ಹತಮ್।
11024011c ಪರಿವಾರ್ಯಾನುಶೋಚಂತಿ ಭರ್ತಾರಮಸಿತೇಕ್ಷಣಾಃ।।
ಸಾತ್ಯಕಿಯಿಂದ ಹತನಾದ ಭೂರಿಶ್ರವನ ಕಪ್ಪುಕಣ್ಣಿನ ಭಾರ್ಯೆಯರು ಅವನ ಮೃತದೇಹವನ್ನು ಸುತ್ತುವರೆದು ಅಳುತ್ತಿದ್ದಾರೆ!”
11024012a ಏತಾ ವಿಲಪ್ಯ ಬಹುಲಂ ಭರ್ತೃಶೋಕೇನ ಕರ್ಶಿತಾಃ।
11024012c ಪತಂತ್ಯಭಿಮುಖಾ ಭೂಮೌ ಕೃಪಣಂ ಬತ ಕೇಶವ।।
ಕೇಶವ! ಪತಿಶೋಕದಿಂದ ಬಹಳವಾಗಿ ಸೋತುಹೋಗಿರುವ ಇವರು ವಿಲಪಿಸುತ್ತಾ ನೆಲದ ಮೇಲೆ ಬಿದ್ದಿದ್ದಾರೆ.
11024013a ಬೀಭತ್ಸುರತಿಬೀಭತ್ಸಂ ಕರ್ಮೇದಮಕರೋತ್ಕಥಮ್।
11024013c ಪ್ರಮತ್ತಸ್ಯ ಯದಚ್ಚೈತ್ಸೀದ್ಬಾಹುಂ ಶೂರಸ್ಯ ಯಜ್ವನಃ।।
ಯಾಗಗಳನ್ನು ಮಾಡಿದ್ದ ಅವನು ಪ್ರಮತ್ತನಾಗಿದ್ದಾಗ ಆ ಶೂರನ ಬಾಹುವನ್ನು ಕತ್ತರಿಸುವಂಥಹ ಬೀಭತ್ಸಕ್ಕಿಂತಲೂ ಅತಿ ಬೀಭತ್ಸವಾಗಿರುವ ಕೃತ್ಯವನ್ನು ಅವರು ಹೇಗೆ ಮಾಡಿದರು?
11024014a ತತಃ ಪಾಪತರಂ ಕರ್ಮ ಕೃತವಾನಪಿ ಸಾತ್ಯಕಿಃ।
11024014c ಯಸ್ಮಾತ್ಪ್ರಾಯೋಪವಿಷ್ಟಸ್ಯ ಪ್ರಾಹಾರ್ಷೀತ್ಸಂಶಿತಾತ್ಮನಃ।।
ಅದಕ್ಕಿಂತಲೂ ಹೆಚ್ಚಿನ ಪಾಪಕರ್ಮವನ್ನು ಸಾತ್ಯಕಿಯು ಪ್ರಾಯೋಪವಿಷ್ಟನಾದ ಆ ಸಂಶಿತಾತ್ಮನ ಶಿರವನ್ನು ಅಪಹರಿಸಿ ಮಾಡಿದನು!
11024015a ಏಕೋ ದ್ವಾಭ್ಯಾಂ ಹತಃ ಶೇಷೇ ತ್ವಮಧರ್ಮೇಣ ಧಾರ್ಮಿಕಃ।
11024015c ಇತಿ ಯೂಪಧ್ವಜಸ್ಯೈತಾಃ ಸ್ತ್ರಿಯಃ ಕ್ರೋಶಂತಿ ಮಾಧವ।।
ಮಾಧವ! “ಯೂಪಧ್ವಜನೇ! ಇಬ್ಬರು ಅಧರ್ಮಪೂರ್ವಕವಾಗಿ ಒಬ್ಬನನ್ನೇ ಕೊಂದುದರಿಂದ ಧಾರ್ಮಿಕನಾದ ನೀನು ಹತನಾಗಿ ಮಲಗಿರುವೆ!” ಎಂದು ಅವನ ಸ್ತ್ರೀಯರು ದುಃಖದಿಂದ ಕೂಗಿಕೊಳ್ಳುತ್ತಿದ್ದಾರೆ.
11024016a ಭಾರ್ಯಾ ಯೂಪಧ್ವಜಸ್ಯೈಷಾ ಕರಸಂಮಿತಮಧ್ಯಮಾ।
11024016c ಕೃತ್ವೋತ್ಸಂಗೇ ಭುಜಂ ಭರ್ತುಃ ಕೃಪಣಂ ಪರ್ಯದೇವಯತ್।।
ಮುಷ್ಟಿಮಾತ್ರ ಪರಿಮಿತವಾಗಿರುವ ಸೊಂಟವುಳ್ಳ ಯೂಪಧ್ವಜನ ಪತ್ನಿಯು ಗಂಡನ ಭುಜವನ್ನು ತೊಡೆಯ ಮೇಲಿಟ್ಟುಕೊಂಡು ದೀನಳಾಗಿ ವಿಲಪಿಸುತ್ತಿದ್ದಾಳೆ.
11024017a ಅಯಂ ಸ ರಶನೋತ್ಕರ್ಷೀ ಪೀನಸ್ತನವಿಮರ್ದನಃ।
11024017c ನಾಭ್ಯೂರುಜಘನಸ್ಪರ್ಶೀ ನೀವೀವಿಸ್ರಂಸನಃ ಕರಃ।।
“ಈ ಹಸ್ತವು ನಮ್ಮ ಒಡ್ಯಾಣಗಳನ್ನು ಬಿಚ್ಚುತ್ತಿತ್ತು. ಪುಷ್ಟ ಮೊಲೆಗಳನ್ನು ಹಿಸುಕುತ್ತಿತ್ತು. ಹೊಕ್ಕಳು-ತೊಡೆ-ಕಟಿಪ್ರದೇಶಗಳನ್ನು ಮುಟ್ಟುತ್ತಿತ್ತು. ಸೊಂಟದಲ್ಲಿರುವ ಸೀರೆಯ ಗಂಟನ್ನು ಬಿಚ್ಚುತ್ತಿತ್ತು!
11024018a ವಾಸುದೇವಸ್ಯ ಸಾಂನಿಧ್ಯೇ ಪಾರ್ಥೇನಾಕ್ಲಿಷ್ಟಕರ್ಮಣಾ।
11024018c ಯುಧ್ಯತಃ ಸಮರೇಽನ್ಯೇನ ಪ್ರಮತ್ತಸ್ಯ ನಿಪಾತಿತಃ।।
ಅಂತಹ ಕೈಯನ್ನು ವಾಸುದೇವನ ಸಾನ್ನಿಧ್ಯದಲ್ಲಿ ಅಕ್ಲಿಷ್ಟಕರ್ಮಿ ಪಾರ್ಥನು ಸಮರದಲ್ಲಿ ಬೇರೆಯವರೊಡನೆ ಯುದ್ಧದಲ್ಲಿ ಮಗ್ನನಾಗಿರುವಾಗ ಕತ್ತರಿಸಿಬಿಟ್ಟನಲ್ಲ!
11024019a ಕಿಂ ನು ವಕ್ಷ್ಯಸಿ ಸಂಸತ್ಸು ಕಥಾಸು ಚ ಜನಾರ್ದನ।
11024019c ಅರ್ಜುನಸ್ಯ ಮಹತ್ಕರ್ಮ ಸ್ವಯಂ ವಾ ಸ ಕಿರೀಟವಾನ್।।
ಜನಾರ್ದನ! ಸಂಸದಿಗಳಲ್ಲಿ ಮಾತನಾಡುವಾಗ ಸ್ವಯಂ ನೀನಾಗಲೀ ಕಿರೀಟಿಯಾಗಲೀ ಅರ್ಜುನನ ಈ ಮಹಾಕಾರ್ಯದ ಕುರಿತು ಹೇಗೆ ಹೇಳುವಿರಿ?”
11024020a ಇತ್ಯೇವಂ ಗರ್ಹಯಿತ್ವೈಷಾ ತೂಷ್ಣೀಮಾಸ್ತೇ ವರಾಂಗನಾ।
11024020c ತಾಮೇತಾಮನುಶೋಚಂತಿ ಸಪತ್ನ್ಯಃ ಸ್ವಾಮಿವ ಸ್ನುಷಾಮ್।।
ಹೀಗೆ ನಿಂದಿಸುತ್ತಾ ಆ ವರಾಂಗನೆಯು ಸುಮ್ಮನಾದಳು. ಅತ್ತೆಯು ಸೊಸೆಗಾಗಿ ಶೋಕಪಡುವಂತೆ ಅವಳ ಸವತಿಯರೂ ಅವಳಿಗಾಗಿ ಶೋಕಿಸುತ್ತಿದ್ದಾರೆ.
11024021a ಗಾಂಧಾರರಾಜಃ ಶಕುನಿರ್ಬಲವಾನ್ಸತ್ಯವಿಕ್ರಮಃ।
11024021c ನಿಹತಃ ಸಹದೇವೇನ ಭಾಗಿನೇಯೇನ ಮಾತುಲಃ।।
ಸೋದರಳಿಯ ಸಹದೇವನಿಂದ ಸೋದರ ಮಾವ ಗಾಂಧಾರರಾಜ, ಬಲವಾನ್, ಸತ್ಯವಿಕ್ರಮ ಶಕುನಿಯು ಹತನಾಗಿದ್ದಾನೆ.
11024022a ಯಃ ಪುರಾ ಹೇಮದಂಡಾಭ್ಯಾಂ ವ್ಯಜನಾಭ್ಯಾಂ ಸ್ಮ ವೀಜ್ಯತೇ।
11024022c ಸ ಏಷ ಪಕ್ಷಿಭಿಃ ಪಕ್ಷೈಃ ಶಯಾನ ಉಪವೀಜ್ಯತೇ।।
ಹೇಮದಂಡವುಳ್ಳ ವ್ಯಜನಗಳಿಂದ ಹಿಂದೆ ಯಾರಿಗೆ ಗಾಳಿಬೀಸಲಾಗುತ್ತಿತ್ತೋ ಅವನಿಗೆ ಈಗ ರಣಭೂಮಿಯಲ್ಲಿ ಮಲಗಿರುವಾಗ ಪಕ್ಷಿಗಳೇ ತಮ್ಮ ರೆಕ್ಕೆಗಳಿಂದ ಗಾಳಿ ಬೀಸುತ್ತಿವೆ!
11024023a ಯಃ ಸ್ಮ ರೂಪಾಣಿ ಕುರುತೇ ಶತಶೋಽಥ ಸಹಸ್ರಶಃ।
11024023c ತಸ್ಯ ಮಾಯಾವಿನೋ ಮಾಯಾ ದಗ್ಧಾಃ ಪಾಂಡವತೇಜಸಾ।।
ನೂರಾರು ಸಹಸ್ರಾರು ರೂಪಗಳನ್ನು ಮಾಡುತ್ತಿದ್ದ ಆ ಮಾಯವಿಯು ಮಾಯೆಯಿಂದಲೇ ಪಾಂಡವನ ತೇಜಸ್ಸಿನಿಂದ ಸುಟ್ಟು ಭಸ್ಮವಾಗಿದ್ದಾನೆ!
11024024a ಮಾಯಯಾ ನಿಕೃತಿಪ್ರಜ್ಞೋ ಜಿತವಾನ್ಯೋ ಯುಧಿಷ್ಠಿರಮ್।
11024024c ಸಭಾಯಾಂ ವಿಪುಲಂ ರಾಜ್ಯಂ ಸ ಪುನರ್ಜೀವಿತಂ ಜಿತಃ।।
ಮೋಸಗಾರನಾಗಿ ಮಾಯೆಯಿಂದ ಸಭೆಯಲ್ಲಿ ಯುಧಿಷ್ಠಿರನ ವಿಪುಲ ರಾಜ್ಯವನ್ನು ಗೆದ್ದ ಅವನೇ ಈಗ ಜೀವವನ್ನು ಪಣವನ್ನಾಗಿಟ್ಟು ಸೋತುಹೋಗಿದ್ದಾನೆ!
11024025a ಶಕುಂತಾಃ ಶಕುನಿಂ ಕೃಷ್ಣ ಸಮಂತಾತ್ಪರ್ಯುಪಾಸತೇ।
11024025c ಕಿತವಂ ಮಮ ಪುತ್ರಾಣಾಂ ವಿನಾಶಾಯೋಪಶಿಕ್ಷಿತಮ್।।
ಕೃಷ್ಣ! ನನ್ನ ಪುತ್ರರ ವಿನಾಶಕ್ಕಾಗಿಯೇ ದ್ಯೂತವನ್ನು ಕಲಿತಿದ್ದ ಶಕುನಿಯನ್ನು ಪಕ್ಷಿಗಳು ಮುತ್ತಿಕೊಂಡಿವೆ!
11024026a ಏತೇನೈತನ್ಮಹದ್ವೈರಂ ಪ್ರಸಕ್ತಂ ಪಾಂಡವೈಃ ಸಹ।
11024026c ವಧಾಯ ಮಮ ಪುತ್ರಾಣಾಮಾತ್ಮನಃ ಸಗಣಸ್ಯ ಚ।।
ನನ್ನ ಮಕ್ಕಳ ಮತ್ತು ತನ್ನವರೊಂದಿಗೆ ತನ್ನ ವಧೆಗೋಸ್ಕರವಾಗಿಯೇ ಇವನು ನನ್ನ ಮಕ್ಕಳು ಪಾಂಡವರೊಂದಿಗೆ ಮಹಾವೈರವನ್ನು ಕಟ್ಟಿಕೊಳ್ಳುವಂತೆ ಮಾಡಿದನು.
11024027a ಯಥೈವ ಮಮ ಪುತ್ರಾಣಾಂ ಲೋಕಾಃ ಶಸ್ತ್ರಜಿತಾಃ ಪ್ರಭೋ।
11024027c ಏವಮಸ್ಯಾಪಿ ದುರ್ಬುದ್ಧೇರ್ಲೋಕಾಃ ಶಸ್ತ್ರೇಣ ವೈ ಜಿತಾಃ।।
ಪ್ರಭೋ! ಶಸ್ತ್ರಗಳಿಂದ ನನ್ನ ಪುತ್ರರು ಉತ್ತಮ ಲೋಕಗಳನ್ನು ಪಡೆದಿರುವಂತೆ ಈ ದುರ್ಬುದ್ಧಿಯೂ ಕೂಡ ಶಸ್ತ್ರಗಳಿಂದಲೇ ನಿಧನಹೊಂದಿ ಉತ್ತಮ ಲೋಕಗಳನ್ನು ಪಡೆದಿದ್ದಾನೆ.
11024028a ಕಥಂ ಚ ನಾಯಂ ತತ್ರಾಪಿ ಪುತ್ರಾನ್ಮೇ ಭ್ರಾತೃಭಿಃ ಸಹ।
11024028c ವಿರೋಧಯೇದೃಜುಪ್ರಜ್ಞಾನನೃಜುರ್ಮಧುಸೂದನ।।
ಮಧುಸೂದನ! ಸುಳ್ಳನಾಗಿರುವ ಇವನು ಅಲ್ಲಿಕೂಡ ಸತ್ಯಪ್ರಜ್ಞರಾಗಿರುವ ನನ್ನ ಮಕ್ಕಳು ಮತ್ತು ಅವರ ಸಹೋದರರ ನಡುವೆ ವಿರೋಧವನ್ನುಂಟುಮಾಡುವನೋ ಹೇಗೆ?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.