ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 23
ಸಾರ
ಹತರಾಗಿ ಬಿದ್ದಿದ್ದ ಶಲ್ಯ, ಭಗದತ್ತ, ಭೀಷ್ಮರನ್ನು ಮತ್ತು ದ್ರೋಣನ ಅಂತಿಮಸಂಸ್ಕಾರವನ್ನೂ ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-42).
11023001 ಗಾಂಧಾರ್ಯುವಾಚ
11023001a ಏಷ ಶಲ್ಯೋ ಹತಃ ಶೇತೇ ಸಾಕ್ಷಾನ್ನಕುಲಮಾತುಲಃ।
11023001c ಧರ್ಮಜ್ಞೇನ ಸತಾ ತಾತ ಧರ್ಮರಾಜೇನ ಸಂಯುಗೇ।।
ಗಾಂಧಾರಿಯು ಹೇಳಿದಳು: “ಅಯ್ಯಾ! ಸತ್ಯ ಧರ್ಮಜ್ಞ ಧರ್ಮರಾಜನಿಂದ ಯುದ್ಧದಲ್ಲಿ ಹತನಾಗಿ ಇಗೋ ಇಲ್ಲಿ ನಕುಲನ ಸೋದರಮಾವ ಸಾಕ್ಷಾತ್ ಶಲ್ಯನು ಮಲಗಿದ್ದಾನೆ!
11023002a ಯಸ್ತ್ವಯಾ ಸ್ಪರ್ಧತೇ ನಿತ್ಯಂ ಸರ್ವತ್ರ ಪುರುಷರ್ಷಭ।
11023002c ಸ ಏಷ ನಿಹತಃ ಶೇತೇ ಮದ್ರರಾಜೋ ಮಹಾರಥಃ।।
ಪುರುಷರ್ಷಭ! ಯಾವಾಗಲೂ ಎಲ್ಲಕಡೆ ನಿನ್ನೊಡನೆ ಸ್ಪರ್ಧಿಸುತ್ತಿದ್ದ ಮಹಾರಥ ಮದ್ರರಾಜನು ಹತನಾಗಿ ಇಗೋ ಮಲಗಿದ್ದಾನೆ!
11023003a ಯೇನ ಸಂಗೃಹ್ಣತಾ ತಾತ ರಥಮಾಧಿರಥೇರ್ಯುಧಿ।
11023003c ಜಯಾರ್ಥಂ ಪಾಂಡುಪುತ್ರಾಣಾಂ ತಥಾ ತೇಜೋವಧಃ ಕೃತಃ।।
ಅಯ್ಯಾ! ಆಧಿರಥ ಕರ್ಣನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿಯುವಾಗ ಇವನು ಪಾಂಡುಪುತ್ರರಿಗೆ ಜಯವಾಗಲೆಂದು ಅವನ ತೇಜೋವಧೆಯನ್ನು ಮಾಡಿದನು.
11023004a ಅಹೋ ಧಿಕ್ಪಶ್ಯ ಶಲ್ಯಸ್ಯ ಪೂರ್ಣಚಂದ್ರಸುದರ್ಶನಮ್।
11023004c ಮುಖಂ ಪದ್ಮಪಲಾಶಾಕ್ಷಂ ವಡೈರಾದಷ್ಟಮವ್ರಣಮ್।।
ಅಯ್ಯೋ ಧಿಕ್ಕಾರವೇ! ಪೂರ್ಣಚಂದ್ರನಂತೆ ಸುಂದರವಾಗಿರುವ ಶಲ್ಯನ ಮುಖವನ್ನು ನೋಡು! ಪದ್ಮದಳಗಳಂಥಹ ಕಣ್ಣುಗಳುಳ್ಳ ಅವನ ಮುಖದಲ್ಲಿ ಸ್ವಲ್ಪವಾದರೂ ಗಾಯದ ಚಿಹ್ನೆಗಳಿಲ್ಲ!
11023005a ಏಷಾ ಚಾಮೀಕರಾಭಸ್ಯ ತಪ್ತಕಾಂಚನಸಪ್ರಭಾ।
11023005c ಆಸ್ಯಾದ್ವಿನಿಃಸೃತಾ ಜಿಹ್ವಾ ಭಕ್ಷ್ಯತೇ ಕೃಷ್ಣ ಪಕ್ಷಿಭಿಃ।।
ಪುಟಕ್ಕೆ ಹಾಕಿದ ಚಿನ್ನದಂತೆ ಕಾಂತಿಯುಕ್ತವಾದ ಇವನ ನಾಲಿಗೆಯು ಬಾಯಿಯಿಂದ ಹೊರಬಂದಿದೆ, ಮತ್ತು ಅದನ್ನು ಕಾಗೆಗಳು ಕುಕ್ಕಿ ತಿನ್ನುತ್ತಿವೆ!
11023006a ಯುಧಿಷ್ಠಿರೇಣ ನಿಹತಂ ಶಲ್ಯಂ ಸಮಿತಿಶೋಭನಮ್।
11023006c ರುದಂತ್ಯಃ ಪರ್ಯುಪಾಸಂತೇ ಮದ್ರರಾಜಕುಲಸ್ತ್ರಿಯಃ।।
ಯುಧಿಷ್ಠಿರನಿಂದ ಹತನಾದ ಸಮಿತಿಶೋಭನ ಶಲ್ಯನನ್ನು ಮದ್ರರಾಜ ಕುಲದ ಸ್ತ್ರೀಯರು ಸುತ್ತುವರೆದು ರೋದಿಸುತ್ತಿದ್ದಾರೆ.
11023007a ಏತಾಃ ಸುಸೂಕ್ಷ್ಮವಸನಾ ಮದ್ರರಾಜಂ ನರರ್ಷಭಮ್।
11023007c ಕ್ರೋಶಂತ್ಯಭಿಸಮಾಸಾದ್ಯ ಕ್ಷತ್ರಿಯಾಃ ಕ್ಷತ್ರಿಯರ್ಷಭಮ್।।
ಅತ್ಯಂತ ಸೂಕ್ಷ್ಮ ವಸ್ತ್ರಗಳನ್ನು ಧರಿಸಿದ ಕ್ಷತ್ರಿಯ ಸ್ತ್ರೀಯರು ಕ್ಷತ್ರಿಯರ್ಷಭ ನರರ್ಷಭ ಮದ್ರರಾಜನ ಬಳಿಯಲ್ಲಿ ಸಂಕಟದಿಂದ ಕೂಗಿಕೊಳ್ಳುತ್ತಿದ್ದಾರೆ.
11023008a ಶಲ್ಯಂ ನಿಪತಿತಂ ನಾರ್ಯಃ ಪರಿವಾರ್ಯಾಭಿತಃ ಸ್ಥಿತಾಃ।
11023008c ವಾಶಿತಾ ಗೃಷ್ಟಯಃ ಪಂಕೇ ಪರಿಮಗ್ನಮಿವರ್ಷಭಮ್।।
ಚೊಚ್ಚಲ ಮರಿಹಾಕಿದ ಹೆಣ್ಣಾನೆಗಳು ಕೆಸರಿನಲ್ಲಿ ಹುಗಿದುಹೋಗಿರುವ ಗಂಡಾನೆಯನ್ನು ಕಾತರದಿಂದ ನೋಡುವಂತೆ ರಣದಲ್ಲಿ ಬಿದ್ದಿರುವ ಶಲ್ಯನನ್ನು ನಾರಿಯರು ಸುತ್ತುವರೆದು ನೋಡುತ್ತಿದ್ದಾರೆ!
11023009a ಶಲ್ಯಂ ಶರಣದಂ ಶೂರಂ ಪಶ್ಯೈನಂ ರಥಸತ್ತಮಮ್।
11023009c ಶಯಾನಂ ವೀರಶಯನೇ ಶರೈರ್ವಿಶಕಲೀಕೃತಮ್।।
ಶರಣ್ಯನೂ, ಶೂರನೂ, ರಥಸತ್ತಮನೂ ಆದ ಶಲ್ಯನನ್ನು ನೋಡು! ಅವನು ಶರಗಳಿಂದ ವಿಭಿನ್ನನಾಗಿ ವೀರಶಯ್ಯೆಯಲ್ಲಿ ಮಲಗಿದ್ದಾನೆ!
11023010a ಏಷ ಶೈಲಾಲಯೋ ರಾಜಾ ಭಗದತ್ತಃ ಪ್ರತಾಪವಾನ್।
11023010c ಗಜಾಂಕುಶಧರಃ ಶ್ರೇಷ್ಠಃ ಶೇತೇ ಭುವಿ ನಿಪಾತಿತಃ।।
ಇಗೋ ಇಲ್ಲಿ ಪರ್ವತದೇಶಗಳ ರಾಜ, ಆನೆಯ ಅಂಕುಶವನ್ನು ಹಿಡಿದಿರುವ ಶ್ರೇಷ್ಠ ಪ್ರತಾಪವಾನ್ ಭಗದತ್ತನು ಕೆಳಗುರುಳಿ ಭೂಮಿಯ ಮೇಲೆ ಮಲಗಿದ್ದಾನೆ!
11023011a ಯಸ್ಯ ರುಕ್ಮಮಯೀ ಮಾಲಾ ಶಿರಸ್ಯೇಷಾ ವಿರಾಜತೇ।
11023011c ಶ್ವಾಪದೈರ್ಭಕ್ಷ್ಯಮಾಣಸ್ಯ ಶೋಭಯಂತೀವ ಮೂರ್ಧಜಾನ್।।
ಶ್ವಾಪದಗಳಿಂದ ಭಕ್ಷಿಸಲ್ಪಡುತ್ತಿರುವ ಅವನ ಶರೀರದಲ್ಲಿರುವ ಚಿನ್ನದ ಮಾಲೆಯು ಅವನ ತಲೆಗೂದಲುಗಳನ್ನು ಬೆಳಗಿಸುವಂತೆ ವಿರಾಜಿಸುತ್ತಿದೆ!
11023012a ಏತೇನ ಕಿಲ ಪಾರ್ಥಸ್ಯ ಯುದ್ಧಮಾಸೀತ್ಸುದಾರುಣಮ್।
11023012c ಲೋಮಹರ್ಷಣಮತ್ಯುಗ್ರಂ ಶಕ್ರಸ್ಯ ಬಲಿನಾ ಯಥಾ।।
ಬಲಿ ಮತ್ತು ಶಕ್ರರ ನಡುವೆ ಹೇಗೋ ಹಾಗೆ ಇವನ ಮತ್ತು ಪಾರ್ಥರ ನಡುವೆ ಉಗ್ರವಾದ ಸುದಾರುಣ ಯುದ್ಧವು ನಡೆಯಿತಲ್ಲವೇ?
11023013a ಯೋಧಯಿತ್ವಾ ಮಹಾಬಾಹುರೇಷ ಪಾರ್ಥಂ ಧನಂಜಯಮ್।
11023013c ಸಂಶಯಂ ಗಮಯಿತ್ವಾ ಚ ಕುಂತೀಪುತ್ರೇಣ ಪಾತಿತಃ।।
ಈ ಮಹಾಬಾಹುವು ಪಾರ್ಥ ಧನಂಜಯನೊಡನೆ ಯುದ್ಧಮಾಡಿ, ಯಾರು ಗೆಲ್ಲುವರು ಎನ್ನುವ ಸಂಶಯವನ್ನುಂಟುಮಾಡಿ, ಕೊನೆಯಲ್ಲಿ ಕುಂತೀಪುತ್ರನಿಂದ ಕೆಳಗುರುಳಿಸಲ್ಪಟ್ಟನು!
11023014a ಯಸ್ಯ ನಾಸ್ತಿ ಸಮೋ ಲೋಕೇ ಶೌರ್ಯೇ ವೀರ್ಯೇ ಚ ಕಶ್ಚನ।
11023014c ಸ ಏಷ ನಿಹತಃ ಶೇತೇ ಭೀಷ್ಮೋ ಭೀಷ್ಮಕೃದಾಹವೇ।।
ಶೌರ್ಯ ಮತ್ತು ವೀರ್ಯಗಳಲ್ಲಿ ಯಾರ ಸಮನು ಲೋಕಗಳಲ್ಲಿಯೇ ಇಲ್ಲವೋ ಅಂತಹ ಭೀಷ್ಮನು ಭಯಂಕರ ಯುದ್ಧಮಾಡಿ ಇಲ್ಲಿ ಹತನಾಗಿ ಮಲಗಿದ್ದಾನೆ!
11023015a ಪಶ್ಯ ಶಾಂತನವಂ ಕೃಷ್ಣ ಶಯಾನಂ ಸೂರ್ಯವರ್ಚಸಮ್।
11023015c ಯುಗಾಂತ ಇವ ಕಾಲೇನ ಪಾತಿತಂ ಸೂರ್ಯಮಂಬರಾತ್।।
ಕೃಷ್ಣ! ಯುಗಾಂತದಲ್ಲಿ ಅಂಬರದಿಂದ ಕಾಲನು ಕೆಳಗುರುಳಿಸಿದ ಸೂರ್ಯನಂತೆ ಮಲಗಿರುವ ಸೂರ್ಯವರ್ಚಸ ಶಾಂತನವನನ್ನು ನೋಡು!
11023016a ಏಷ ತಪ್ತ್ವಾ ರಣೇ ಶತ್ರೂನ್ ಶಸ್ತ್ರತಾಪೇನ ವೀರ್ಯವಾನ್।
11023016c ನರಸೂರ್ಯೋಽಸ್ತಮಭ್ಯೇತಿ ಸೂರ್ಯೋಽಸ್ತಮಿವ ಕೇಶವ।।
ಕೇಶವ! ನರಸೂರ್ಯನಂತಿದ್ದ ಭೀಷ್ಮನು ತನ್ನ ಶಸ್ತ್ರಗಳ ತಾಪದಿಂದ ರಣದಲ್ಲಿ ಶತ್ರುಗಳನ್ನು ಸುಟ್ಟು ಸೂರ್ಯನು ಅಸ್ತಂಗತನಾಗುವಂತೆ ಅಸ್ತಂಗತನಾಗಿದ್ದಾನೆ!
11023017a ಶರತಲ್ಪಗತಂ ವೀರಂ ಧರ್ಮೇ ದೇವಾಪಿನಾ ಸಮಮ್।
11023017c ಶಯಾನಂ ವೀರಶಯನೇ ಪಶ್ಯ ಶೂರನಿಷೇವಿತೇ।।
ಧರ್ಮದಲ್ಲಿ ದೇವತೆಗಳಿಗೂ ಸಮನಾದ ವೀರನು ಶೂರರು ಬಯಸುವ ಶರತಲ್ಪದ ವೀರಶಯನದಲ್ಲಿ ಮಲಗಿರುವುದನ್ನು ನೋಡು!
11023018a ಕರ್ಣಿನಾಲೀಕನಾರಾಚೈರಾಸ್ತೀರ್ಯ ಶಯನೋತ್ತಮಮ್।
11023018c ಆವಿಶ್ಯ ಶೇತೇ ಭಗವಾನ್ಸ್ಕಂದಃ ಶರವಣಂ ಯಥಾ।।
ಭಗವಾನ್ ಸ್ಕಂದನು ಜೊಂಬುಹುಲ್ಲಿನ ಮೇಲೆ ಮಲಗಿರುವಂತೆ ಕರ್ಣಿ-ನಾಲೀಕ-ನಾರಾಚಗಳನ್ನೇ ಹರಡಿ ಕಲ್ಪಿಸಿರುವ ಶ್ರೇಷ್ಠ ಹಾಸಿಗೆಯ ಮೇಲೆ ಮಲಗಿರುವ ಭೀಷ್ಮನನ್ನು ನೋಡು!
11023019a ಅತೂಲಪೂರ್ಣಂ ಗಾಂಗೇಯಸ್ತ್ರಿಭಿರ್ಬಾಣೈಃ ಸಮನ್ವಿತಮ್।
11023019c ಉಪಧಾಯೋಪಧಾನಾಗ್ರ್ಯಂ ದತ್ತಂ ಗಾಂಡೀವಧನ್ವನಾ।।
ಹತ್ತಿಯಿಂದ ತುಂಬಿದ್ದ ತಲೆದಿಂಬನ್ನು ಇಷ್ಟಪಡದ ಗಾಂಗೇಯನು ಗಾಂಡೀವಧನ್ವಿಯು ಮೂರು ಬಾಣಗಳಿಂದ ಇತ್ತ ಶ್ರೇಷ್ಠ ತಲೆದಿಂಬನ್ನು ಸ್ವೀಕರಿಸಿದನು.
11023020a ಪಾಲಯಾನಃ ಪಿತುಃ ಶಾಸ್ತ್ರಮೂರ್ಧ್ವರೇತಾ ಮಹಾಯಶಾಃ।
11023020c ಏಷ ಶಾಂತನವಃ ಶೇತೇ ಮಾಧವಾಪ್ರತಿಮೋ ಯುಧಿ।।
ಮಾಧವ! ತಂದೆಯನ್ನು ಪರಿಪಾಲಿಸಲು ಶಾಸ್ತ್ರೋಕ್ತವಾಗಿ ಬ್ರಹ್ಮಚಾರಿಯಾಗಿರುವ ಮಹಾಯಶಸ್ವಿ, ಯೋಧರಲ್ಲಿ ಅಪ್ರತಿಮ ಶಾಂತನವನು ಇಲ್ಲಿ ಮಲಗಿದ್ದಾನೆ!
11023021a ಧರ್ಮಾತ್ಮಾ ತಾತ ಧರ್ಮಜ್ಞಃ ಪಾರಂಪರ್ಯೇಣ ನಿರ್ಣಯೇ।
11023021c ಅಮರ್ತ್ಯ ಇವ ಮರ್ತ್ಯಃ ಸನ್ನೇಷ ಪ್ರಾಣಾನಧಾರಯತ್।।
ಅಯ್ಯಾ! ಮನುಷ್ಯನಾಗಿದ್ದರೂ ಅಮರರಂತಿರುವ, ಪರಂಪರೆಗಳನ್ನು ನಿರ್ಣಯಿಸುವ, ಧರ್ಮಾತ್ಮಾ ಧರ್ಮಜ್ಞ ಭೀಷ್ಮನು ತನ್ನ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತಾನೆ.
11023022a ನಾಸ್ತಿ ಯುದ್ಧೇ ಕೃತೀ ಕಶ್ಚಿನ್ನ ವಿದ್ವಾನ್ನ ಪರಾಕ್ರಮೀ।
11023022c ಯತ್ರ ಶಾಂತನವೋ ಭೀಷ್ಮಃ ಶೇತೇಽದ್ಯ ನಿಹತಃ ಪರೈಃ।।
ಶತ್ರುಗಳಿಂದ ಹತನಾಗಿ ಶಾಂತನವ ಭೀಷ್ಮನು ಮಲಗಿದ್ದಾನೆಂದರೆ ಇನ್ನು ಮುಂದೆ ಯುದ್ಧಕುಶಲಿಯೂ, ಪರಾಕ್ರಮಿಯೂ, ವಿದ್ವಾಂಸನೂ ಇಲ್ಲವೆಂದಾಯಿತು!
11023023a ಸ್ವಯಮೇತೇನ ಶೂರೇಣ ಪೃಚ್ಚ್ಯಮಾನೇನ ಪಾಂಡವೈಃ।
11023023c ಧರ್ಮಜ್ಞೇನಾಹವೇ ಮೃತ್ಯುರಾಖ್ಯಾತಃ ಸತ್ಯವಾದಿನಾ।।
ಪಾಂಡವರು ಕೇಳಲು ಈ ಶೂರ ಸತ್ಯವಾದಿ ಧರ್ಮಜ್ಞನು ತಾನೇ ಯುದ್ಧದಲ್ಲಿ ಅವನ ಮೃತ್ಯುವು ಹೇಗಾಗಬಹುದೆಂದು ಅವರಿಗೆ ಹೇಳಿದನು.
11023024a ಪ್ರನಷ್ಟಃ ಕುರುವಂಶಶ್ಚ ಪುನರ್ಯೇನ ಸಮುದ್ಧೃತಃ।
11023024c ಸ ಗತಃ ಕುರುಭಿಃ ಸಾರ್ಧಂ ಮಹಾಬುದ್ಧಿಃ ಪರಾಭವಮ್।।
ಕುರುವಂಶವನ್ನು ನಷ್ಟವಾಗುವುದರಿಂದ ಯಾರು ರಕ್ಷಿಸುತ್ತಿದ್ದನೋ ಆ ಮಹಾಬುದ್ಧಿಯೇ ಕುರುಗಳೊಡನೆ ಪರಾಭವವನ್ನು ಹೊಂದಿದನು.
11023025a ಧರ್ಮೇಷು ಕುರವಃ ಕಂ ನು ಪರಿಪ್ರಕ್ಷ್ಯಂತಿ ಮಾಧವ।
11023025c ಗತೇ ದೇವವ್ರತೇ ಸ್ವರ್ಗಂ ದೇವಕಲ್ಪೇ ನರರ್ಷಭೇ।।
ಮಾಧವ! ದೇವತುಲ್ಯನಾದ ನರರ್ಷಭ ದೇವವ್ರತನು ಸ್ವರ್ಗಕ್ಕೆ ಹೋದನಂತರ ಧರ್ಮದ ವಿಷಯದಲ್ಲಿ ಕುರುಗಳು ಬೇರೆ ಯಾರನ್ನು ಪ್ರಶ್ನಿಸುತ್ತಾರೆ?
11023026a ಅರ್ಜುನಸ್ಯ ವಿನೇತಾರಮಾಚಾರ್ಯಂ ಸಾತ್ಯಕೇಸ್ತಥಾ।
11023026c ತಂ ಪಶ್ಯ ಪತಿತಂ ದ್ರೋಣಂ ಕುರೂಣಾಂ ಗುರುಸತ್ತಮಮ್।।
ಅರ್ಜುನನ ಶಿಕ್ಷಕನೂ, ಸಾತ್ಯಕಿಯ ಆಚಾರ್ಯನೂ, ಕುರುಗಳ ಗುರುಸತ್ತಮನೂ ಆದ ದ್ರೋಣನು ಕೆಳಗುರುಳಿದುದನ್ನು ನೋಡು!
11023027a ಅಸ್ತ್ರಂ ಚತುರ್ವಿಧಂ ವೇದ ಯಥೈವ ತ್ರಿದಶೇಶ್ವರಃ।
11023027c ಭಾರ್ಗವೋ ವಾ ಮಹಾವೀರ್ಯಸ್ತಥಾ ದ್ರೋಣೋಽಪಿ ಮಾಧವ।।
ಮಾಧವ! ತ್ರಿದಶೇಶ್ವರ ಇಂದ್ರನಂತೆ ಅಥವಾ ಭಾರ್ಗವ ಪರಶುರಾಮನಂತೆ ಮಹಾವೀರ್ಯ ದ್ರೋಣನೂ ಕೂಡ ನಾಲ್ಕು ವಿಧದ ಅಸ್ತ್ರವಿದ್ಯೆಯನ್ನು ತಿಳಿದವನಾಗಿದ್ದನು.
11023028a ಯಸ್ಯ ಪ್ರಸಾದಾದ್ಬೀಭತ್ಸುಃ ಪಾಂಡವಃ ಕರ್ಮ ದುಷ್ಕರಮ್।
11023028c ಚಕಾರ ಸ ಹತಃ ಶೇತೇ ನೈನಮಸ್ತ್ರಾಣ್ಯಪಾಲಯನ್।।
ಯಾರ ಪ್ರಸಾದದಿಂದ ಪಾಂಡವ ಬೀಭತ್ಸುವು ದುಷ್ಕರ ಕರ್ಮಗಳನ್ನೆಸಗಿದನೋ ಆ ದ್ರೋಣನೇ ಇಂದು ಹತನಾಗಿ ಮಲಗಿದ್ದಾನೆ! ಅವನ ಅಸ್ತ್ರಗಳ್ಯಾವುವೂ ಅವನನ್ನು ರಕ್ಷಿಸಲಿಲ್ಲ!
11023029a ಯಂ ಪುರೋಧಾಯ ಕುರವ ಆಹ್ವಯಂತಿ ಸ್ಮ ಪಾಂಡವಾನ್।
11023029c ಸೋಽಯಂ ಶಸ್ತ್ರಭೃತಾಂ ಶ್ರೇಷ್ಠೋ ದ್ರೋಣಃ ಶಸ್ತ್ರೈಃ ಪೃಥಕ್ಕೃತಃ।।
ಯಾರನ್ನು ಮುಂದಿಟ್ಟುಕೊಂಡು ಕೌರವರು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದರೋ ಆ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನೇ ಶಸ್ತ್ರಗಳಿಂದ ಗಾಯಗೊಂಡು ಮಲಗಿದ್ದಾನೆ!
11023030a ಯಸ್ಯ ನಿರ್ದಹತಃ ಸೇನಾಂ ಗತಿರಗ್ನೇರಿವಾಭವತ್।
11023030c ಸ ಭೂಮೌ ನಿಹತಃ ಶೇತೇ ಶಾಂತಾರ್ಚಿರಿವ ಪಾವಕಃ।।
ಅಗ್ನಿಯಂತೆ ಸಂಚರಿಸಿ ಸೇನೆಗಳನ್ನು ದಹಿಸುತ್ತಿದ್ದ ದ್ರೋಣನೇ ಆರಿಹೋದ ಅಗ್ನಿಯಂತೆ ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ!
11023031a ಧನುರ್ಮುಷ್ಟಿರಶೀರ್ಣಶ್ಚ ಹಸ್ತಾವಾಪಶ್ಚ ಮಾಧವ।
11023031c ದ್ರೋಣಸ್ಯ ನಿಹತಸ್ಯಾಪಿ ದೃಶ್ಯತೇ ಜೀವತೋ ಯಥಾ।।
ಮಾಧವ! ದ್ರೋಣನು ಹತನಾಗಿದ್ದರೂ ಅವನು ಧನುಸ್ಸನ್ನು ಹಿಡಿದಿರುವುದನ್ನು ಮತ್ತು ಕೈಚೀಲವನ್ನು ನೋಡಿದರೆ ಇನ್ನೂ ಜೀವಿತನಾಗಿರುವನೋ ಎನ್ನುವಂತೆ ತೋರುತ್ತಿದ್ದಾನೆ!
11023032a ವೇದಾ ಯಸ್ಮಾಚ್ಚ ಚತ್ವಾರಃ ಸರ್ವಾಸ್ತ್ರಾಣಿ ಚ ಕೇಶವ।
11023032c ಅನಪೇತಾನಿ ವೈ ಶೂರಾದ್ಯಥೈವಾದೌ ಪ್ರಜಾಪತೇಃ।।
ಕೇಶವ! ವೇದಗಳು ಪ್ರಜಾಪತಿಯನ್ನು ಹೇಗೆ ಬಿಟ್ಟಿರಲಾರವೋ ಹಾಗೆ ನಾಲ್ಕೂ ವೇದಗಳೂ, ಸರ್ವ ಅಸ್ತ್ರಗಳೂ ಇವನನ್ನು ಬಿಟ್ಟಿರಲಿಲ್ಲ!
11023033a ವಂದನಾರ್ಹಾವಿಮೌ ತಸ್ಯ ಬಂದಿಭಿರ್ವಂದಿತೌ ಶುಭೌ।
11023033c ಗೋಮಾಯವೋ ವಿಕರ್ಷಂತಿ ಪಾದೌ ಶಿಷ್ಯಶತಾರ್ಚಿತೌ।।
ಶಿಷ್ಯರಿಂದ ಅರ್ಚಿತಗೊಳ್ಳುತ್ತಿದ್ದ, ಬಂದಿಗಳು ವಂದಿಸುತ್ತಿದ್ದ, ವಂದನಾರ್ಹವಾದ ಅವನ ಶುಭ ಪಾದಗಳನ್ನು ಇಂದು ಗುಳ್ಳೇ ನರಿಗಳು ಎಳೆದಾಡುತ್ತಿವೆ!
11023034a ದ್ರೋಣಂ ದ್ರುಪದಪುತ್ರೇಣ ನಿಹತಂ ಮಧುಸೂದನ।
11023034c ಕೃಪೀ ಕೃಪಣಮನ್ವಾಸ್ತೇ ದುಃಖೋಪಹತಚೇತನಾ।।
ಮಧುಸೂದನ! ದ್ರುಪದಪುತ್ರನಿಂದ ಹತನಾದ ದ್ರೋಣನ ಬಳಿ ದುಃಖದಿಂದ ಹತಚೇತನಳಾದ ಕೃಪಿಯು ದೀನಳಾಗಿ ಕುಳಿತಿದ್ದಾಳೆ!
11023035a ತಾಂ ಪಶ್ಯ ರುದತೀಮಾರ್ತಾಂ ಮುಕ್ತಕೇಶೀಮಧೋಮುಖೀಮ್।
11023035c ಹತಂ ಪತಿಮುಪಾಸಂತೀಂ ದ್ರೋಣಂ ಶಸ್ತ್ರಭೃತಾಂ ವರಮ್।।
ಹತನಾಗಿರುವ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನ ಬಳಿ ಕೂದಲು ಕೆದರಿಕೊಂಡು ಮುಖ ಕೆಳಗೆಮಾಡಿಕೊಂಡು ಆರ್ತಳಾಗಿ ರೋದಿಸುತ್ತಿರುವ ಅವಳನ್ನು ನೋಡು!
11023036a ಬಾಣೈರ್ಭಿನ್ನತನುತ್ರಾಣಂ ಧೃಷ್ಟದ್ಯುಮ್ನೇನ ಕೇಶವ।
11023036c ಉಪಾಸ್ತೇ ವೈ ಮೃಧೇ ದ್ರೋಣಂ ಜಟಿಲಾ ಬ್ರಹ್ಮಚಾರಿಣೀ।।
ಕೇಶವ! ಧೃಷ್ಟದ್ಯುಮ್ನನ ಬಾಣಗಳಿಂದ ತುಂಡಾಗಿರುವ ಕವಚವನ್ನು ಧರಿಸಿರುವ ದ್ರೋಣನ ಬಳಿ ರಣರಂಗದಲ್ಲಿ ಜಟಾಧಾರಿಯಾಗಿರುವ ಬ್ರಹ್ಮಚಾರಿಣೀ ಕೃಪಿಯು ಕುಳಿತಿದ್ದಾಳೆ!
11023037a ಪ್ರೇತಕೃತ್ಯೇ ಚ ಯತತೇ ಕೃಪೀ ಕೃಪಣಮಾತುರಾ।
11023037c ಹತಸ್ಯ ಸಮರೇ ಭರ್ತುಃ ಸುಕುಮಾರೀ ಯಶಸ್ವಿನೀ।।
ದೀನಳಾಗಿರುವ, ಆತುರಳಾಗಿರುವ ಸುಕುಮಾರೀ ಯಶಸ್ವಿನೀ ಕೃಪಿಯು ಸಮರದಲ್ಲಿ ಹತನಾಗಿರುವ ಪತಿಯ ಪ್ರೇತಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾಳೆ.
11023038a ಅಗ್ನೀನಾಹೃತ್ಯ ವಿಧಿವಚ್ಚಿತಾಂ ಪ್ರಜ್ವಾಲ್ಯ ಸರ್ವಶಃ।
11023038c ದ್ರೋಣಮಾಧಾಯ ಗಾಯಂತಿ ತ್ರೀಣಿ ಸಾಮಾನಿ ಸಾಮಗಾಃ।।
ವಿಧಿವತ್ತಾಗಿ ಅಗ್ನಿಯನ್ನು ಆಹ್ವಾನಿಸಿ, ವಿಧಿವತ್ತಾಗಿ ಸುತ್ತಲೂ ಚಿತೆಯನ್ನು ಹೊತ್ತಿಸಿ, ದ್ರೋಣನನ್ನು ಇಟ್ಟು ಸಾಮಗರು ಮೂರು ಸಾಮಗಳನ್ನೂ ಹಾಡುತ್ತಿದ್ದಾರೆ.
11023039a ಕಿರಂತಿ ಚ ಚಿತಾಮೇತೇ ಜಟಿಲಾ ಬ್ರಹ್ಮಚಾರಿಣಃ।
11023039c ಧನುರ್ಭಿಃ ಶಕ್ತಿಭಿಶ್ಚೈವ ರಥನೀಡೈಶ್ಚ ಮಾಧವ।।
ಮಾಧವ! ಜಟಾಧಾರೀ ಬ್ರಹ್ಮಚಾರೀ ದ್ರೋಣಶಿಷ್ಯರು ಧನುಸ್ಸುಗಳನ್ನೂ, ಶಕ್ತಿಗಳನ್ನೂ, ರಥನೀಡುಗಳನ್ನೂ ಚಿತೆಯ ಮೇಲೆ ಇಡುತ್ತಿದ್ದಾರೆ.
11023040a ಶಸ್ತ್ರೈಶ್ಚ ವಿವಿಧೈರನ್ಯೈರ್ಧಕ್ಷ್ಯಂತೇ ಭೂರಿತೇಜಸಮ್।
11023040c ತ ಏತೇ ದ್ರೋಣಮಾಧಾಯ ಶಂಸಂತಿ ಚ ರುದಂತಿ ಚ।।
ಅನ್ಯ ವಿವಿಧ ಶಸ್ತ್ರಗಳನ್ನೂ ಇಟ್ಟು ಭೂರಿತೇಜಸ ದ್ರೋಣನನ್ನು ದಹಿಸುತ್ತಾ ಅವನನ್ನು ಪ್ರಶಂಸಿಸುತ್ತಿದ್ದಾರೆ ಮತ್ತು ರೋದಿಸುತ್ತಿದ್ದಾರೆ ಕೂಡ!
11023041a ಸಾಮಭಿಸ್ತ್ರಿಭಿರಂತಃಸ್ಥೈರನುಶಂಸಂತಿ ಚಾಪರೇ।
11023041c ಅಗ್ನಾವಗ್ನಿಮಿವಾಧಾಯ ದ್ರೋಣಂ ಹುತ್ವಾ ಹುತಾಶನೇ।।
11023042a ಗಚ್ಚಂತ್ಯಭಿಮುಖಾ ಗಂಗಾಂ ದ್ರೋಣಶಿಷ್ಯಾ ದ್ವಿಜಾತಯಃ।
11023042c ಅಪಸವ್ಯಾಂ ಚಿತಿಂ ಕೃತ್ವಾ ಪುರಸ್ಕೃತ್ಯ ಕೃಪೀಂ ತದಾ।।
ಇತರರು ಕಡೆಯಲ್ಲಿ ಹೇಳಬೇಕಾದ ಮೂರು ಸಾಮಗಳನ್ನೂ ಹಾಡುತ್ತಿದ್ದಾರೆ. ಚಿತೆಯ ಅಗ್ನಿಯಲ್ಲಿ ದ್ರೋಣನನ್ನು ಹವಿಸ್ಸನ್ನಾಗಿ ಹೋಮಮಾಡಿ, ಕೃಪಿಯನ್ನು ಮುಂದಿಟ್ಟುಕೊಂಡು ಚಿತೆಯನ್ನು ಎಡಭಾಗಕ್ಕೆ ಬಿಟ್ಟುಕೊಂಡು ಪರದಕ್ಷಿಣವಾಗಿ ಸುತ್ತಿಬಂದು ಬ್ರಾಹ್ಮಣ ಶೇಷ್ಠ ದ್ರೋಣ ಶಿಷ್ಯರು ಗಂಗಾನದಿಯ ಕಡೆ ಹೋಗುತ್ತಿದ್ದಾರೆ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಚನೇ ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಚನ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.