022 ಗಾಂಧಾರೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 22

ಸಾರ

ಹತನಾಗಿ ಬಿದ್ದಿದ್ದ ಜಯದ್ರಥನ ಬಳಿ ರೋದಿಸುತ್ತಿದ್ದ ದುಃಶಲೆಯನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-18).

11022001 ಗಾಂಧಾರ್ಯುವಾಚ
11022001a ಆವಂತ್ಯಂ ಭೀಮಸೇನೇನ ಭಕ್ಷಯಂತಿ ನಿಪಾತಿತಮ್।
11022001c ಗೃಧ್ರಗೋಮಾಯವಃ ಶೂರಂ ಬಹುಬಂಧುಮಬಂಧುವತ್।।

ಗಾಂಧಾರಿಯು ಹೇಳಿದಳು: “ಭೀಮಸೇನನು ಕೆಳಗುರುಳಿಸಿದ ಅವಂತಿಯ ಶೂರನನ್ನು, ಅನೇಕ ಬಂಧುಗಳಿದ್ದರೂ ಬಂಧುಗಳ್ಯಾರೂ ಇಲ್ಲವೇನೋ ಎಂಬಂತೆ, ಹದ್ದು-ನರಿಗಳು ತಿನ್ನುತ್ತಿವೆ.

11022002a ತಂ ಪಶ್ಯ ಕದನಂ ಕೃತ್ವಾ ಶತ್ರೂಣಾಂ ಮಧುಸೂದನ।
11022002c ಶಯಾನಂ ವೀರಶಯನೇ ರುಧಿರೇಣ ಸಮುಕ್ಷಿತಮ್।।

ಮಧುಸೂದನ! ಶತ್ರುಗಳೊಡನೆ ಕದನವಾಡಿ ರಕ್ತದಿಂದ ತೋಯ್ದುಹೋಗಿ ವೀರಶಯ್ಯೆಯಲ್ಲಿ ಮಲಗಿರುವ ಅವನನ್ನು ನೋಡು!

11022003a ತಂ ಸೃಗಾಲಾಶ್ಚ ಕಂಕಾಶ್ಚ ಕ್ರವ್ಯಾದಾಶ್ಚ ಪೃಥಗ್ವಿಧಾಃ।
11022003c ತೇನ ತೇನ ವಿಕರ್ಷಂತಿ ಪಶ್ಯ ಕಾಲಸ್ಯ ಪರ್ಯಯಮ್।।

ಅವನನ್ನು ತೋಳಗಳೂ, ಹದ್ದುಗಳೂ, ಇತರ ಮಾಂಸಾಹಾರೀ ಪ್ರಾಣಿಗಳೂ ಎಳೆದು ತಿನ್ನುತ್ತಿವೆ. ಕಾಲದ ವೈಪರೀತ್ಯವನ್ನಾದರೂ ನೋಡು!

11022004a ಶಯಾನಂ ವೀರಶಯನೇ ವೀರಮಾಕ್ರಂದಸಾರಿಣಮ್।
11022004c ಆವಂತ್ಯಮಭಿತೋ ನಾರ್ಯೋ ರುದತ್ಯಃ ಪರ್ಯುಪಾಸತೇ।।

ವೀರತನದಿಂದ ಯುದ್ಧಮಾಡಿ ವೀರಶಯನದಲ್ಲಿ ಮಲಗಿರುವ ಅವಂತಿದೇಶದ ರಾಜನನ್ನು ಅವನ ಪತ್ನಿಯರು ರೋದಿಸುತ್ತಾ ಸುತ್ತುವರೆದಿದ್ದಾರೆ.

11022005a ಪ್ರಾತಿಪೀಯಂ ಮಹೇಷ್ವಾಸಂ ಹತಂ ಭಲ್ಲೇನ ಬಾಹ್ಲಿಕಮ್।
11022005c ಪ್ರಸುಪ್ತಮಿವ ಶಾರ್ದೂಲಂ ಪಶ್ಯ ಕೃಷ್ಣ ಮನಸ್ವಿನಮ್।।

ಕೃಷ್ಣ! ಪ್ರತೀಪನ ಮಗ ಮಹೇಷ್ವಾಸ ಮನಸ್ವಿ ಬಾಹ್ಲಿಕನು ಭಲ್ಲದಿಂದ ಹತನಾಗಿ ಸಿಂಹದಂತೆ ಮಲಗಿರುವುದನ್ನು ನೋಡು!

11022006a ಅತೀವ ಮುಖವರ್ಣೋಽಸ್ಯ ನಿಹತಸ್ಯಾಪಿ ಶೋಭತೇ।
11022006c ಸೋಮಸ್ಯೇವಾಭಿಪೂರ್ಣಸ್ಯ ಪೌರ್ಣಮಾಸ್ಯಾಂ ಸಮುದ್ಯತಃ।।

ಹತನಾಗಿದ್ದರೂ ಇವನ ಮುಖದ ಬಣ್ಣವು ಹುಣ್ಣಿಮೆಯಲ್ಲಿ ಉದಯಿಸುತ್ತಿರುವ ಪೂರ್ಣಚಂದ್ರನಂತೆ ಶೋಭಿಸುತ್ತಿದೆ.

11022007a ಪುತ್ರಶೋಕಾಭಿತಪ್ತೇನ ಪ್ರತಿಜ್ಞಾಂ ಪರಿರಕ್ಷತಾ।
11022007c ಪಾಕಶಾಸನಿನಾ ಸಂಖ್ಯೇ ವಾರ್ದ್ಧಕ್ಷತ್ರಿರ್ನಿಪಾತಿತಃ।।

ಪುತ್ರಶೋಕದಿಂದ ಸಂತಪ್ತನಾಗಿದ್ದ ಪಾಕಶಾಸನನ ಮಗನು ಪ್ರತಿಜ್ಞೆಯನ್ನು ಪಾಲಿಸುತ್ತಾ ಯುದ್ಧದಲ್ಲಿ ವೃದ್ಧಕ್ಷತ್ರನ ಮಗ ಜಯದ್ರಥನನ್ನು ಕೆಳಗುರುಳಿಸಿದನು.

11022008a ಏಕಾದಶ ಚಮೂರ್ಜಿತ್ವಾ ರಕ್ಷ್ಯಮಾಣಂ ಮಹಾತ್ಮನಾ।
11022008c ಸತ್ಯಂ ಚಿಕೀರ್ಷತಾ ಪಶ್ಯ ಹತಮೇನಂ ಜಯದ್ರಥಮ್।।

ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಮಹಾತ್ಮ ಅರ್ಜುನನು ಜಯದ್ರಥನನ್ನು ರಕ್ಷಿಸುತ್ತಿದ್ದ ಹನ್ನೊಂದು ಅಕ್ಷೌಹಿಣೀ ಸೇನೆಗಳನ್ನೂ ಗೆದ್ದು ಅವನನ್ನು ಸಂಹರಿಸಿದುದನ್ನು ನೋಡು!

11022009a ಸಿಂಧುಸೌವೀರಭರ್ತಾರಂ ದರ್ಪಪೂರ್ಣಂ ಮನಸ್ವಿನಮ್।
11022009c ಭಕ್ಷಯಂತಿ ಶಿವಾ ಗೃಧ್ರಾ ಜನಾರ್ದನ ಜಯದ್ರಥಮ್।।

ಜನಾರ್ದನ! ಸಿಂಧುಸೌವೀರರ ರಾಜ, ದರ್ಪದಿಂದ ತುಂಬಿದ್ದ, ಮನಸ್ವಿ ಜಯದ್ರಥನನ್ನು ಹದ್ದು-ನರಿಗಳು ತಿನ್ನುತ್ತಿವೆ!

11022010a ಸಂರಕ್ಷ್ಯಮಾಣಂ ಭಾರ್ಯಾಭಿರನುರಕ್ತಾಭಿರಚ್ಯುತ।
11022010c ಭಷಂತೋ ವ್ಯಪಕರ್ಷಂತಿ ಗಹನಂ ನಿಮ್ನಮಂತಿಕಾತ್।।

ಅಚ್ಯುತ! ಅವನಲ್ಲಿಯೇ ಅನುರಕ್ತರಾದ ಭಾರ್ಯೆಯರು ಅವನನ್ನು ರಕ್ಷಿಸುತ್ತಿದ್ದರೂ ಅವು ಹತ್ತಿರದಲ್ಲಿಯೇ ಅವನ ದೇಹವನ್ನು ಬಹಳ ಆಳದಿಂದಲೇ ಕಿತ್ತು ತಿನ್ನುತ್ತಿವೆ!

11022011a ತಮೇತಾಃ ಪರ್ಯುಪಾಸಂತೇ ರಕ್ಷಮಾಣಾ ಮಹಾಭುಜಮ್।
11022011c ಸಿಂಧುಸೌವೀರಗಾಂಧಾರಕಾಂಬೋಜಯವನಸ್ತ್ರಿಯಃ।।

ಆ ಮಹಾಭುಜನನ್ನು ರಕ್ಷಿಸುತ್ತಾ ಸಿಂಧು-ಸೌವೀರ-ಗಾಂಧಾರ-ಕಾಂಬೋಜ-ಯವನ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ.

11022012a ಯದಾ ಕೃಷ್ಣಾಮುಪಾದಾಯ ಪ್ರಾದ್ರವತ್ಕೇಕಯೈಃ ಸಹ।
11022012c ತದೈವ ವಧ್ಯಃ ಪಾಂಡೂನಾಂ ಜನಾರ್ದನ ಜಯದ್ರಥಃ।।

ಜನಾರ್ದನ! ಕೇಕಯರೊಂದಿಗೆ ದ್ರೌಪದಿಯನ್ನು ಎತ್ತಿಕೊಂಡು ಓಡಿಹೋದಾಗಲೇ ಜಯದ್ರಥನನ್ನು ಪಾಂಡವರು ವಧಿಸಬೇಕಿತ್ತು!

11022013a ದುಃಶಲಾಂ ಮಾನಯದ್ಭಿಸ್ತು ಯದಾ ಮುಕ್ತೋ ಜಯದ್ರಥಃ।
11022013c ಕಥಮದ್ಯ ನ ತಾಂ ಕೃಷ್ಣ ಮಾನಯಂತಿ ಸ್ಮ ತೇ ಪುನಃ।।

ಆಗ ದುಃಶಲೆಯನ್ನು ಗೌರವಿಸುತ್ತಾ ಜಯದ್ರಥನನ್ನು ಬಿಟ್ಟುಬಿಟ್ಟಿದ್ದರು. ಆದರೆ ಕೃಷ್ಣ! ಈಗ ಏಕೆ ಅವರು ಪುನಃ ಅವಳನ್ನು ಗೌರವಿಸಲಿಲ್ಲ?

11022014a ಸೈಷಾ ಮಮ ಸುತಾ ಬಾಲಾ ವಿಲಪಂತೀ ಸುದುಃಖಿತಾ।
11022014c ಪ್ರಮಾಪಯತಿ ಚಾತ್ಮಾನಮಾಕ್ರೋಶತಿ ಚ ಪಾಂಡವಾನ್।।

ನನ್ನ ಮಗಳು ಬಾಲಕಿಯು ತುಂಬಾ ದುಃಖಿತಳಾಗಿ ವಿಲಪಿಸುತ್ತಿದ್ದಾಳೆ. ಪಾಂಡವರನ್ನು ನಿಂದಿಸುತ್ತಾ ತನ್ನ ಎದೆಯನ್ನು ಬಡಿದುಕೊಳ್ಳುತ್ತಿದ್ದಾಳೆ.

11022015a ಕಿಂ ನು ದುಃಖತರಂ ಕೃಷ್ಣ ಪರಂ ಮಮ ಭವಿಷ್ಯತಿ।
11022015c ಯತ್ಸುತಾ ವಿಧವಾ ಬಾಲಾ ಸ್ನುಷಾಶ್ಚ ನಿಹತೇಶ್ವರಾಃ।।

ಕೃಷ್ಣ! ನನ್ನ ಮಗಳು ಬಾಲಕಿಯು ವಿಧವೆಯಾಗಿ ಹೋದಳು. ನನ್ನ ಸೊಸೆಯಂದಿರು ಗಂಡಂದಿರನ್ನು ಕಳೆದುಕೊಂಡರು. ನನಗೆ ಇದಕ್ಕಿಂತಲೂ ಹೆಚ್ಚಿನ ದುಃಖವು ಬೇರೆ ಯಾವುದಿದೆ?

11022016a ಅಹೋ ಧಿಗ್ದುಃಶಲಾಂ ಪಶ್ಯ ವೀತಶೋಕಭಯಾಮಿವ।
11022016c ಶಿರೋ ಭರ್ತುರನಾಸಾದ್ಯ ಧಾವಮಾನಾಮಿತಸ್ತತಃ।।

ಅಯ್ಯೋ ಧಿಕ್ಕಾರವೇ! ನೋಡು! ದುಃಶಲೆಯು ತನ್ನ ಪತಿಯ ಶಿರವನ್ನು ಕಾಣದೇ ಶೋಕ-ಭಯಗಳನ್ನು ತೊರೆದಿರುವಳೋ ಎನ್ನುವಂತೆ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಾಳೆ!

11022017a ವಾರಯಾಮಾಸ ಯಃ ಸರ್ವಾನ್ಪಾಂಡವಾನ್ಪುತ್ರಗೃದ್ಧಿನಃ।
11022017c ಸ ಹತ್ವಾ ವಿಪುಲಾಃ ಸೇನಾಃ ಸ್ವಯಂ ಮೃತ್ಯುವಶಂ ಗತಃ।।

ಮಗ ಅಭಿಮನ್ಯುವನ್ನು ಅನುಸರಿಸಿಬಂದ ಎಲ್ಲ ಪಾಂಡವರನ್ನೂ ತಡೆದು, ವಿಶಾಲ ಸೇನೆಯನ್ನು ಸಂಹರಿಸಿ ಜಯದ್ರಥನು ಸ್ವಯಂ ಮೃತ್ಯುವಶನಾದನು.

11022018a ತಂ ಮತ್ತಮಿವ ಮಾತಂಗಂ ವೀರಂ ಪರಮದುರ್ಜಯಮ್।
11022018c ಪರಿವಾರ್ಯ ರುದಂತ್ಯೇತಾಃ ಸ್ತ್ರಿಯಶ್ಚಂದ್ರೋಪಮಾನನಾಃ।।

ಮದಿಸಿದ ಮಾತಂಗದಂತಿರುವ, ಚಂದ್ರನಂಥಹ ಮುಖವಿದ್ದ ಆ ಪರಮದುರ್ಜಯ ವೀರನನ್ನು ಸ್ತ್ರೀಯರು ಸುತ್ತುವರೆದು ರೋದಿಸುತ್ತಿದ್ದಾರೆ!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.