020 ಗಾಂಧಾರೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 20

ಸಾರ

ಹತನಾಗಿದ್ದ ಅಭಿಮನ್ಯುವನ್ನು ಆಲಂಗಿಸಿ ಪರಿತಪಿಸುತ್ತಿದ್ದ ಉತ್ತರೆಯನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-32).

11020001 ಗಾಂಧಾರ್ಯುವಾಚ
11020001a ಅಧ್ಯರ್ಧಗುಣಮಾಹುರ್ಯಂ ಬಲೇ ಶೌರ್ಯೇ ಚ ಮಾಧವ।
11020001c ಪಿತ್ರಾ ತ್ವಯಾ ಚ ದಾಶಾರ್ಹ ದೃಪ್ತಂ ಸಿಂಹಮಿವೋತ್ಕಟಮ್।।
11020002a ಯೋ ಬಿಭೇದ ಚಮೂಮೇಕೋ ಮಮ ಪುತ್ರಸ್ಯ ದುರ್ಭಿದಾಮ್।
11020002c ಸ ಭೂತ್ವಾ ಮೃತ್ಯುರನ್ಯೇಷಾಂ ಸ್ವಯಂ ಮೃತ್ಯುವಶಂ ಗತಃ।।

ಗಾಂಧಾರಿಯು ಹೇಳಿದಳು: “ಮಾಧವ! ದಾಶಾರ್ಹ! ಬಲ ಮತ್ತು ಶೌರ್ಯಗಳಲ್ಲಿ ತನ್ನ ತಂದೆ ಮತ್ತು ನಿನಗಿಂತಲೂ ಒಂದೂವರೆಯುಷ್ಟು ಗುಣವುಳ್ಳವನೆಂದು ಹೇಳುವ, ಸಿಂಹದ ಬಲವಿದ್ದ, ದರ್ಪನಾಗಿದ್ದ ಅಭಿಮನ್ಯುವು ನನ್ನ ಮಗನ ದುರಾಸದ ಸೇನೆಯನ್ನು ಭೇದಿಸಿ, ಅನ್ಯರ ಮೃತ್ಯುವಿಗೆ ಕಾರಣನಾಗಿ ತಾನೇ ಮೃತ್ಯುವಶನಾಗಿಹೋದನು!

11020003a ತಸ್ಯೋಪಲಕ್ಷಯೇ ಕೃಷ್ಣ ಕಾರ್ಷ್ಣೇರಮಿತತೇಜಸಃ।
11020003c ಅಭಿಮನ್ಯೋರ್ಹತಸ್ಯಾಪಿ ಪ್ರಭಾ ನೈವೋಪಶಾಮ್ಯತಿ।।

ಕೃಷ್ಣ! ಅರ್ಜುನನ ಮಗ ಅಮಿತ ತೇಜಸ್ವಿ ಅಭಿಮನ್ಯುವು ಹತನಾಗಿದ್ದರೂ ಅವನ ಪ್ರಭೆಯು ಕುಂದಿರದೇ ಇರುವುದನ್ನು ನಾನು ನೋಡುತ್ತಿದ್ದೇನೆ!

11020004a ಏಷಾ ವಿರಾಟದುಹಿತಾ ಸ್ನುಷಾ ಗಾಂಡೀವಧನ್ವನಃ।
11020004c ಆರ್ತಾ ಬಾಲಾ ಪತಿಂ ವೀರಂ ಶೋಚ್ಯಾ ಶೋಚತ್ಯನಿಂದಿತಾ।।

ವಿರಾಟನ ಮಗಳು, ಗಾಂಡೀವಧನ್ವಿಯ ಸೊಸೆ ಅನಿಂದಿತೆ ಬಾಲೆಯು ವೀರ ಪತಿಯನ್ನು ನೋಡಿ ಆರ್ತಳಾಗಿ ಶೋಕಿಸುತ್ತಿದ್ದಾಳೆ!

11020005a ತಮೇಷಾ ಹಿ ಸಮಾಸಾದ್ಯ ಭಾರ್ಯಾ ಭರ್ತಾರಮಂತಿಕೇ।
11020005c ವಿರಾಟದುಹಿತಾ ಕೃಷ್ಣ ಪಾಣಿನಾ ಪರಿಮಾರ್ಜತಿ।।

ಕೃಷ್ಣ! ಅವನ ಭಾರ್ಯೆ ವಿರಾಟಸುತೆಯು ತನ್ನ ಪತಿಯ ಬಳಿಸಾರಿ ಕೈಗಳಿಂದ ಅವನನ್ನು ನೇವರಿಸುತ್ತಿದ್ದಾಳೆ!

11020006a ತಸ್ಯ ವಕ್ತ್ರಮುಪಾಘ್ರಾಯ ಸೌಭದ್ರಸ್ಯ ಯಶಸ್ವಿನೀ।
11020006c ವಿಬುದ್ಧಕಮಲಾಕಾರಂ ಕಂಬುವೃತ್ತಶಿರೋಧರಮ್।।
11020007a ಕಾಮ್ಯರೂಪವತೀ ಚೈಷಾ ಪರಿಷ್ವಜತಿ ಭಾಮಿನೀ।
11020007c ಲಜ್ಜಮಾನಾ ಪುರೇವೈನಂ ಮಾಧ್ವೀಕಮದಮೂರ್ಚಿತಾ।।

ಅರಳಿದ ಕಮಲದಂತಿರುವ ಮತ್ತು ಶಂಖದಂತೆ ದುಂಡಾಗಿರುವ ಕತ್ತುಳ್ಳ ಸೌಭದ್ರನ ಶಿರವನ್ನು ಕಮನೀಯ ರೂಪವತಿ ಯಶಸ್ವಿನೀ ಭಾಮಿನೀ ಉತ್ತರೆಯು ಆಘ್ರಾಣಿಸಿ ಆಲಂಗಿಸಿಕೊಂಡಿದ್ದಾಳೆ. ಹಿಂದೆ ಅವಳು ಮಧುಪಾನದಿಂದ ಉನ್ಮತ್ತಳಾಗಿ ಲಜ್ಜೆಯಿಂದ ಅಭಿಮನ್ಯುವನ್ನು ಆಲಂಗಿಸುತ್ತಿದ್ದಳು.

11020008a ತಸ್ಯ ಕ್ಷತಜಸಂದಿಗ್ಧಂ ಜಾತರೂಪಪರಿಷ್ಕೃತಮ್।
11020008c ವಿಮುಚ್ಯ ಕವಚಂ ಕೃಷ್ಣ ಶರೀರಮಭಿವೀಕ್ಷತೇ।।

ಕೃಷ್ಣ! ರಕ್ತದಿಂದ ಅಂಟಿಕೊಂಡಿದ್ದ ಸುವರ್ಣಮಯ ಕವಚವನ್ನು ಬಿಚ್ಚಿ ಅವಳು ಅವನ ಶರೀರವನ್ನು ವೀಕ್ಷಿಸುತ್ತಿದ್ದಾಳೆ!

11020009a ಅವೇಕ್ಷಮಾಣಾ ತಂ ಬಾಲಾ ಕೃಷ್ಣ ತ್ವಾಮಭಿಭಾಷತೇ।
11020009c ಅಯಂ ತೇ ಪುಂಡರೀಕಾಕ್ಷ ಸದೃಶಾಕ್ಷೋ ನಿಪಾತಿತಃ।।

ಕೃಷ್ಣ! ಅವನನ್ನು ನೋಡುತ್ತಾ ಆ ಬಾಲೆಯು ನಿನಗೆ ಹೇಳುತ್ತಿದ್ದಾಳೆ: “ಪುಂಡರೀಕಾಕ್ಷ! ನಿನ್ನಂತೆಯೇ ಇದ್ದ ಇವನು ಹತನಾಗಿ ಕೆಳಗುರುಳಿದ್ದಾನೆ!

11020010a ಬಲೇ ವೀರ್ಯೇ ಚ ಸದೃಶಸ್ತೇಜಸಾ ಚೈವ ತೇಽನಘ।
11020010c ರೂಪೇಣ ಚ ತವಾತ್ಯರ್ಥಂ ಶೇತೇ ಭುವಿ ನಿಪಾತಿತಃ।।

ಅನಘ! ಬಲ-ವೀರ್ಯ-ತೇಜಸ್ಸು-ರೂಪಗಳಲ್ಲಿ ನಿನ್ನಂತೆಯೇ ಇದ್ದ ಇವನು ಕೆಳಗುರುಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ!

11020011a ಅತ್ಯಂತಸುಕುಮಾರಸ್ಯ ರಾಂಕವಾಜಿನಶಾಯಿನಃ।
11020011c ಕಚ್ಚಿದದ್ಯ ಶರೀರಂ ತೇ ಭೂಮೌ ನ ಪರಿತಪ್ಯತೇ।।

ರಂಕುಮೃಗದ ಚರ್ಮದ ಮೇಲೆ ಮಲಗುತ್ತಿದ್ದ ನಿನ್ನ ಈ ಅತ್ಯಂತ ಸುಕುಮಾರ ಶರೀರವು ಇಂದು ಭೂಮಿಯ ಮೇಲೆ ಬಿದ್ದು ಪರಿತಪಿಸುತ್ತಿಲ್ಲವೇ?

11020012a ಮಾತಂಗಭುಜವರ್ಷ್ಮಾಣೌ ಜ್ಯಾಕ್ಷೇಪಕಠಿನತ್ವಚೌ।
11020012c ಕಾಂಚನಾಂಗದಿನೌ ಶೇಷೇ ನಿಕ್ಷಿಪ್ಯ ವಿಪುಲೌ ಭುಜೌ।।

ಮೌರ್ವಿಯನ್ನು ಸೆಳೆದು ಜಡ್ಡುಗಟ್ಟಿದ ಚರ್ಮಯುಕ್ತವಾದ, ಕಾಂಚನ ಅಂಗದಗಳನ್ನು ಧರಿಸಿರುವ, ಆನೆಯ ಸೊಂಡಿಲಿನಂತಿರುವ ಎರಡೂ ವಿಪುಲ ಭುಜಗಳನ್ನು ಚಾಚಿ ಮಲಗಿರುವೆಯಲ್ಲ!

11020013a ವ್ಯಾಯಮ್ಯ ಬಹುಧಾ ನೂನಂ ಸುಖಸುಪ್ತಃ ಶ್ರಮಾದಿವ।
11020013c ಏವಂ ವಿಲಪತೀಮಾರ್ತಾಂ ನ ಹಿ ಮಾಮಭಿಭಾಷಸೇ।।

ಬಹಳ ಶ್ರಮದಿಂದ ಯುದ್ಧಮಾಡಿ ಆಯಾಸಕಳೆಯಲೆಂದು ಸುಖವಾಗಿ ನೀನು ಮಲಗಿರುವಂತಿದೆ! ಆದುದರಿಂದಲೇ ನೀನು ಆರ್ತಳಾಗಿ ವಿಲಪಿಸುತ್ತಿರುವ ನನ್ನೊಡನೆ ಮಾತನಾಡುತ್ತಿಲ್ಲ!

11020014a ಆರ್ಯಾಮಾರ್ಯ ಸುಭದ್ರಾಂ ತ್ವಮಿಮಾಂಶ್ಚ ತ್ರಿದಶೋಪಮಾನ್।
11020014c ಪಿತೄನ್ಮಾಂ ಚೈವ ದುಃಖಾರ್ತಾಂ ವಿಹಾಯ ಕ್ವ ಗಮಿಷ್ಯಸಿ।।

ಆರ್ಯ! ಆರ್ಯಳಾದ ಸುಭದ್ರೆಯನ್ನೂ, ದೇವೋಪಮರಾದ ನಿನ್ನ ಪಿತೃಗಳನ್ನೂ ಮತ್ತು ದುಃಖಾರ್ತಳಾಗಿರುವ ನನ್ನನ್ನೂ ತೊರೆದು ನೀನು ಎಲ್ಲಿಗೆ ಹೋಗುವೆ?”

11020015a ತಸ್ಯ ಶೋಣಿತಸಂದಿಗ್ಧಾನ್ಕೇಶಾನುನ್ನಾಮ್ಯ ಪಾಣಿನಾ।
11020015c ಉತ್ಸಂಗೇ ವಕ್ತ್ರಮಾಧಾಯ ಜೀವಂತಮಿವ ಪೃಚ್ಚತಿ।।

ಅಭಿಮನ್ಯುವಿನ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು ಉತ್ತರೆಯು ಅವನ ಮುಖದ ಮೇಲೆ ರಕ್ತದಿಂದ ತೋಯ್ದು ಅಂಟಿಕೊಂಡಿರುವ ತಲೆಗೂದಲುಗಳನ್ನು ಮೆಲ್ಲಗೆ ಬಿಡಿಸುತ್ತಾ, ಅವನಿನ್ನೂ ಜೀವಂತನಾಗಿರುವನೆಂದೇ ಭಾವಿಸಿ, ಅವನನ್ನು ಪ್ರಶ್ನಿಸುತ್ತಿದ್ದಾಳೆ!

11020015e ಸ್ವಸ್ರೀಯಂ ವಾಸುದೇವಸ್ಯ ಪುತ್ರಂ ಗಾಂಡೀವಧನ್ವನಃ।।
11020016a ಕಥಂ ತ್ವಾಂ ರಣಮಧ್ಯಸ್ಥಂ ಜಘ್ನುರೇತೇ ಮಹಾರಥಾಃ।

“ವಾಸುದೇವನ ಅಳಿಯನೂ ಗಾಂಡೀವಧನ್ವಿಯ ಪುತ್ರನೂ ಆದ ನಿನ್ನನ್ನು ರಣರಂಗದ ಮಧ್ಯದಲ್ಲಿ ಆ ಮಹಾರಥರು ಹೇಗೆ ತಾನೇ ಸಂಹರಿಸಿದರು?

11020016c ಧಿಗಸ್ತು ಕ್ರೂರಕರ್ತೄಂಸ್ತಾನ್ಕೃಪಕರ್ಣಜಯದ್ರಥಾನ್।।
11020017a ದ್ರೋಣದ್ರೌಣಾಯನೀ ಚೋಭೌ ಯೈರಸಿ ವ್ಯಸನೀಕೃತಃ।

ನನ್ನನ್ನು ಹೀಗೆ ವಿಧವೆಯನ್ನಾಗಿ ಮಾಡಿದ ಆ ಕ್ರೂರಕರ್ಮಿ ಕೃಪ-ಕರ್ಣ-ಜಯದ್ರಥ-ದ್ರೋಣ-ದ್ರೌಣಿಗಳಿಗೆ ಧಿಕ್ಕಾರ!

11020017c ರಥರ್ಷಭಾಣಾಂ ಸರ್ವೇಷಾಂ ಕಥಮಾಸೀತ್ತದಾ ಮನಃ।।
11020018a ಬಾಲಂ ತ್ವಾಂ ಪರಿವಾರ್ಯೈಕಂ ಮಮ ದುಃಖಾಯ ಜಘ್ನುಷಾಮ್।

ನನಗೆ ದುಃಖವನ್ನುಂಟುಮಾಡುವುದಕ್ಕಾಗಿಯೇ ಬಾಲಕನಾದ ನಿನ್ನನ್ನೊಬ್ಬನನ್ನೇ ಸುತ್ತುವರೆದಾಗ ಆ ಎಲ್ಲ ರಥರ್ಷಭರ ಮನಸ್ಸು ಹೇಗಿದ್ದೀತು?

11020018c ಕಥಂ ನು ಪಾಂಡವಾನಾಂ ಚ ಪಾಂಚಾಲಾನಾಂ ಚ ಪಶ್ಯತಾಮ್।।
11020018e ತ್ವಂ ವೀರ ನಿಧನಂ ಪ್ರಾಪ್ತೋ ನಾಥವಾನ್ಸನ್ನನಾಥವತ್।।

ವೀರ! ಪಾಂಡವರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ, ರಕ್ಷಕರನ್ನು ಪಡೆದಿದ್ದ ನೀನು ಅನಾಥನಂತೆ, ಹೇಗೆ ನಿಧನ ಹೊಂದಿದೆ?

11020019a ದೃಷ್ಟ್ವಾ ಬಹುಭಿರಾಕ್ರಂದೇ ನಿಹತಂ ತ್ವಾಮನಾಥವತ್।
11020019c ವೀರಃ ಪುರುಷಶಾರ್ದೂಲಃ ಕಥಂ ಜೀವತಿ ಪಾಂಡವಃ।।

ಆನೇಕರ ಆಕ್ರಮಣಕ್ಕೊಳಪಟ್ಟು ಅನಾಥನಂತೆ ನೀನು ಹತನಾದುದನ್ನು ನೋಡಿ ವೀರ ಪುರುಷಶಾರ್ದೂಲ ಪಾಂಡವ ಅರ್ಜುನನು ಹೇಗೆ ಜೀವಿಸಿರುತ್ತಾನೆ?

11020020a ನ ರಾಜ್ಯಲಾಭೋ ವಿಪುಲಃ ಶತ್ರೂಣಾಂ ವಾ ಪರಾಭವಃ।
11020020c ಪ್ರೀತಿಂ ದಾಸ್ಯತಿ ಪಾರ್ಥಾನಾಂ ತ್ವಾಮೃತೇ ಪುಷ್ಕರೇಕ್ಷಣ।।

ಪುಂಡರೀಕಾಕ್ಷ! ನೀನಿಲ್ಲದೇ ವಿಪುಲ ರಾಜ್ಯಲಾಭವಾಗಲೀ ಶತ್ರುಗಳ ಪರಾಭವವಾಗಲೀ ಪಾರ್ಥರಿಗೆ ಸಂತೋಷವನ್ನು ಕೊಡುವುದಿಲ್ಲ!

11020021a ತವ ಶಸ್ತ್ರಜಿತಾಽಲ್ಲೋಕಾನ್ಧರ್ಮೇಣ ಚ ದಮೇನ ಚ।
11020021c ಕ್ಷಿಪ್ರಮನ್ವಾಗಮಿಷ್ಯಾಮಿ ತತ್ರ ಮಾಂ ಪ್ರತಿಪಾಲಯ।।

ಶಸ್ತ್ರಗಳಿಂದ ನೀನು ಜಯಿಸಿದ ಲೋಕಗಳನ್ನು ಬೇಗನೇ ನಾನು ಧರ್ಮ-ದಮಗಳಿಂದ ಪಡೆದುಕೊಂಡು ಬರುತ್ತೇನೆ. ಅಲ್ಲಿ ನನ್ನನ್ನು ಪ್ರತಿಪಾಲಿಸು!

11020022a ದುರ್ಮರಂ ಪುನರಪ್ರಾಪ್ತೇ ಕಾಲೇ ಭವತಿ ಕೇನ ಚಿತ್।
11020022c ಯದಹಂ ತ್ವಾಂ ರಣೇ ದೃಷ್ಟ್ವಾ ಹತಂ ಜೀವಾಮಿ ದುರ್ಭಗಾ।।

ಮರಣಕಾಲವು ಸನ್ನಿಹಿತವಾಗದೇ ಯಾರಿಗೂ ಮರಣಹೊಂದಲು ಸಾಧ್ಯವಿಲ್ಲ. ಏಕೆಂದರೆ ರಣದಲ್ಲಿ ಹತನಾಗಿರುವ ನಿನ್ನನ್ನು ನೋಡಿಯೂ ಕೂಡ ದುರ್ಭಾಗ್ಯಳಾದ ನಾನು ಜೀವಿಸಿರುವೆನಲ್ಲಾ!

11020023a ಕಾಮಿದಾನೀಂ ನರವ್ಯಾಘ್ರ ಶ್ಲಕ್ಷ್ಣಯಾ ಸ್ಮಿತಯಾ ಗಿರಾ।
11020023c ಪಿತೃಲೋಕೇ ಸಮೇತ್ಯಾನ್ಯಾಂ ಮಾಮಿವಾಮಂತ್ರಯಿಷ್ಯಸಿ।।

ನರವ್ಯಾಘ್ರ! ಇಲ್ಲಿ ನನ್ನನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸುತ್ತಿದ್ದಂತೆ ಪಿತೃಲೋಕದಲ್ಲಿ ಬೇರೆ ಯಾರನ್ನು ಸುಮಧುರವಾಗಿ ಸ್ಮಿತಪೂರ್ವಕವಾಗಿ ಮಾತನಾಡಿಸುವೆ?

11020024a ನೂನಮಪ್ಸರಸಾಂ ಸ್ವರ್ಗೇ ಮನಾಂಸಿ ಪ್ರಮಥಿಷ್ಯಸಿ।
11020024c ಪರಮೇಣ ಚ ರೂಪೇಣ ಗಿರಾ ಚ ಸ್ಮಿತಪೂರ್ವಯಾ।।

ನಿನ್ನ ಪರಮ ರೂಪದಿಂದ ಮತ್ತು ಮುಗುಳ್ನಗೆಯ ಮಾತುಗಳಿಂದ ನೀನು ನಿಜವಾಗಿಯೂ ಸ್ವರ್ಗದಲ್ಲಿ ಅಪ್ಸರೆಯರ ಮನಸ್ಸನ್ನು ಕಲಕಿಬಿಡುತ್ತೀಯೆ!

11020025a ಪ್ರಾಪ್ಯ ಪುಣ್ಯಕೃತಾಽಲ್ಲೋಕಾನಪ್ಸರೋಭಿಃ ಸಮೇಯಿವಾನ್।
11020025c ಸೌಭದ್ರ ವಿಹರನ್ಕಾಲೇ ಸ್ಮರೇಥಾಃ ಸುಕೃತಾನಿ ಮೇ।।

ಸೌಭದ್ರ! ಪುಣ್ಯಕೃತರ ಲೋಕಗಳನ್ನೂ ಅಪ್ಸರೆಯರನ್ನೂ ಸೇರಿಕೊಂಡು ವಿಹರಿಸುತ್ತಿರುವಾಗ ನೀನು ಖಂಡಿತವಾಗಿಯೂ ನನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತೀಯೆ!

11020026a ಏತಾವಾನಿಹ ಸಂವಾಸೋ ವಿಹಿತಸ್ತೇ ಮಯಾ ಸಹ।
11020026c ಷಣ್ಮಾಸಾನ್ಸಪ್ತಮೇ ಮಾಸಿ ತ್ವಂ ವೀರ ನಿಧನಂ ಗತಃ।।

ವೀರ! ನನ್ನೊಡನೆ ನಿನ್ನ ಸಹವಾಸವು ಕೇವಲ ಆರು ತಿಂಗಳುಗಳು ಮಾತ್ರವೇ ವಿಹಿತವಾಗಿತ್ತು! ಏಳನೆಯ ತಿಂಗಳಿನಲ್ಲಿಯೇ ನೀನು ನಿಧನ ಹೊಂದಿದೆ!”

11020027a ಇತ್ಯುಕ್ತವಚನಾಮೇತಾಮಪಕರ್ಷಂತಿ ದುಃಖಿತಾಮ್।
11020027c ಉತ್ತರಾಂ ಮೋಘಸಂಕಲ್ಪಾಂ ಮತ್ಸ್ಯರಾಜಕುಲಸ್ತ್ರಿಯಃ।।

ಹೀಗೆ ಹೇಳಿಕೊಂಡು ವ್ಯರ್ಥಮನೋರಥಳಾಗಿ ಶೋಕಿಸುತ್ತಿರುವ ಉತ್ತರೆಯನ್ನು ಮತ್ಸ್ಯರಾಜಕುಲದ ಸ್ತ್ರೀಯರು ಹಿಂದಕ್ಕೆ ಎಳೆಯುತ್ತಿದ್ದಾರೆ!

11020028a ಉತ್ತರಾಮಪಕೃಷ್ಯೈನಾಮಾರ್ತಾಮಾರ್ತತರಾಃ ಸ್ವಯಮ್।
11020028c ವಿರಾಟಂ ನಿಹತಂ ದೃಷ್ಟ್ವಾ ಕ್ರೋಶಂತಿ ವಿಲಪಂತಿ ಚ।।

ಉತ್ತರೆಯನ್ನು ಹಿಂದಕ್ಕೆಳೆದ ಆ ಸ್ತ್ರೀಯರು ಸ್ವಯಂ ತಾವೇ ಅತ್ಯಂತ ಆರ್ತರಾಗಿದ್ದಾರೆ. ವಿರಾಟನು ಹತನಾದುದನ್ನು ನೋಡಿ ವಿಲಪಿಸುತ್ತಾ ಕೂಗಿಕೊಳ್ಳುತ್ತಿದ್ದರೆ!

11020029a ದ್ರೋಣಾಸ್ತ್ರಶರಸಂಕೃತ್ತಂ ಶಯಾನಂ ರುಧಿರೋಕ್ಷಿತಮ್।
11020029c ವಿರಾಟಂ ವಿತುದಂತ್ಯೇತೇ ಗೃಧ್ರಗೋಮಾಯುವಾಯಸಾಃ।।

ದ್ರೋಣನ ಅಸ್ತ್ರ-ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಮಲಗಿರುವ ವಿರಾಟನನ್ನು ಹದ್ದು-ನರಿ-ಕಾಗೆಗಳು ಕಿತ್ತು ತಿನ್ನುತ್ತಿವೆ!

11020030a ವಿತುದ್ಯಮಾನಂ ವಿಹಗೈರ್ವಿರಾಟಮಸಿತೇಕ್ಷಣಾಃ।
11020030c ನ ಶಕ್ನುವಂತಿ ವಿವಶಾ ನಿವರ್ತಯಿತುಮಾತುರಾಃ।।

ವಿರಾಟನನ್ನು ಕುಕ್ಕುತ್ತಿರುವ ಪಕ್ಷಿಗಳನ್ನು ಕಪ್ಪುಕಣ್ಣಿನ ಆತುರ ವಿವಶ ಸ್ತ್ರೀಯರು ಓಡಿಸಲು ಪ್ರಯತ್ನಿಸಿದರೂ ಅಶಕ್ಯರಾಗಿದ್ದಾರೆ.

11020031a ಆಸಾಮಾತಪತಪ್ತಾನಾಮಾಯಾಸೇನ ಚ ಯೋಷಿತಾಮ್।
11020031c ಶ್ರಮೇಣ ಚ ವಿವರ್ಣಾನಾಂ ರೂಪಾಣಾಂ ವಿಗತಂ ವಪುಃ।।

ಬಿಸಿಲಿನಿಂದಲೂ ಆಯಾಸದಿಂದಲೂ ಪರಿತಪ್ತರಾಗಿರುವ ಸ್ತ್ರೀಯರು ವಿವರ್ಣರಾಗಿ ಅವರ ಸುಂದರ ಮುಖಗಳು ಬಾಡಿಹೋಗಿವೆ!

11020032a ಉತ್ತರಂ ಚಾಭಿಮನ್ಯುಂ ಚ ಕಾಂಬೋಜಂ ಚ ಸುದಕ್ಷಿಣಮ್।
11020032c ಶಿಶೂನೇತಾನ್ ಹತಾನ್ಪಶ್ಯ ಲಕ್ಷ್ಮಣಂ ಚ ಸುದರ್ಶನಮ್।।
11020032e ಆಯೋಧನಶಿರೋಮಧ್ಯೇ ಶಯಾನಂ ಪಶ್ಯ ಮಾಧವ।।

ಮಾಧವ! ರಣರಂಗದ ಮಧ್ಯದಲ್ಲಿ ಹತರಾಗಿ ಮಲಗಿರುವ ಬಾಲಕರಾಗಿದ್ದ ಉತ್ತರ, ಅಭಿಮನ್ಯು, ಕಾಂಬೋಜದ ಸುದಕ್ಷಿಣ, ಮತ್ತು ಸುಂದರ ಲಕ್ಷ್ಮಣ ಇವರನ್ನು ನೋಡು!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ವಿಂಶತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಇಪ್ಪತ್ತನೇ ಅಧ್ಯಾಯವು.