019 ಗಾಂಧಾರೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 19

ಸಾರ

ಹತರಾಗಿದ್ದ ತನ್ನ ಮಕ್ಕಳು ವಿಕರ್ಣ, ದುರ್ಮುಖ, ಚಿತ್ರಸೇನ, ವಿವಿಂಶತಿ, ಮತ್ತು ದುಃಸ್ಸಹರನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-21).

11019001 ಗಾಂಧಾರ್ಯುವಾಚ
11019001a ಏಷ ಮಾಧವ ಪುತ್ರೋ ಮೇ ವಿಕರ್ಣಃ ಪ್ರಾಜ್ಞಸಂಮತಃ।
11019001c ಭೂಮೌ ವಿನಿಹತಃ ಶೇತೇ ಭೀಮೇನ ಶತಧಾ ಕೃತಃ।।

ಗಾಂಧಾರಿಯು ಹೇಳಿದಳು: “ಮಾಧವ! ಪ್ರಾಜ್ಞಸಮ್ಮತನಾಗಿದ್ದ ನನ್ನ ಮಗ ಈ ವಿಕರ್ಣನೂ ಕೂಡ ಭೀಮನಿಂದ ನೂರು ಚೂರಾಗಿಸಲ್ಪಟ್ಟು ಇಲ್ಲಿ ನೆಲದ ಮೇಲೆ ಮಲಗಿದ್ದಾನೆ!

11019002a ಗಜಮಧ್ಯಗತಃ ಶೇತೇ ವಿಕರ್ಣೋ ಮಧುಸೂದನ।
11019002c ನೀಲಮೇಘಪರಿಕ್ಷಿಪ್ತಃ ಶರದೀವ ದಿವಾಕರಃ।।

ಮಧುಸೂದನ! ಆನೆಗಳ ಮಧ್ಯ ಮಲಗಿರುವ ವಿಕರ್ಣನು ಶರತ್ಕಾಲದಲ್ಲಿ ಕಪ್ಪುಮೋಡಗಳಿಂದ ಮುಚ್ಚಲ್ಪಟ್ಟ ದಿವಾಕರನಂತೆ ತೋರುತ್ತಿದ್ದಾನೆ.

11019003a ಅಸ್ಯ ಚಾಪಗ್ರಹೇಣೈಷ ಪಾಣಿಃ ಕೃತಕಿಣೋ ಮಹಾನ್।
11019003c ಕಥಂ ಚಿಚ್ಚಿದ್ಯತೇ ಗೃಧ್ರೈರತ್ತುಕಾಮೈಸ್ತಲತ್ರವಾನ್।।

ಧನುಸ್ಸನ್ನು ಹಿಡಿಯುತ್ತಿದ್ದುದರಿಂದ ಅವನ ಕೈಯು ಜಡ್ಡುಗಟ್ಟಿಹೋಗಿದೆ. ಕೈಚೀಲವನ್ನು ಧರಿಸಿದ್ದ ಅವನ ಕೈಗಳನ್ನು ತಿನ್ನಲು ಬಯಸಿ ಹದ್ದುಗಳು ಕುಕ್ಕಲು ಪ್ರಯತ್ನಿಸುತ್ತಿವೆ.

11019004a ಅಸ್ಯ ಭಾರ್ಯಾಮಿಷಪ್ರೇಪ್ಸೂನ್ಗೃಧ್ರಾನೇತಾಂಸ್ತಪಸ್ವಿನೀ।
11019004c ವಾರಯತ್ಯನಿಶಂ ಬಾಲಾ ನ ಚ ಶಕ್ನೋತಿ ಮಾಧವ।।

ಮಾಧವ! ಮಾಂಸವನ್ನು ತಿನ್ನಲು ಬಯಸುತ್ತಿರುವ ಹದ್ದುಗಳನ್ನು ಓಡಿಸಲು ಅವನ ಪತ್ನಿ ಬಾಲ ತಪಸ್ವಿನಿಯು ಪ್ರಯತ್ನಿಸುತ್ತಿದ್ದರೂ ಅವಳಿಗೆ ಅದು ಸಾಧ್ಯವಾಗುತ್ತಿಲ್ಲ!

11019005a ಯುವಾ ವೃಂದಾರಕಃ ಶೂರೋ ವಿಕರ್ಣಃ ಪುರುಷರ್ಷಭ।
11019005c ಸುಖೋಚಿತಃ ಸುಖಾರ್ಹಶ್ಚ ಶೇತೇ ಪಾಂಸುಷು ಮಾಧವ।।

ಪುರುಷರ್ಷಭ! ಮಾಧವ! ದೇವತೆಗಳಂತೆ ಕಾಂತಿಯುಕ್ತನಾಗಿದ್ದ ಯುವಕ ಶೂರ ವಿಕರ್ಣನು ಸುಖದಿಂದಲೇ ಬೆಳೆದವನು. ಸುಖದಿಂದಿರಲು ಯೋಗ್ಯನಾದ ಅವನು ಕೆಸರಿನಲ್ಲಿ ಮಲಗಿದ್ದಾನೆ!

11019006a ಕರ್ಣಿನಾಲೀಕನಾರಾಚೈರ್ಭಿನ್ನಮರ್ಮಾಣಮಾಹವೇ।
11019006c ಅದ್ಯಾಪಿ ನ ಜಹಾತ್ಯೇನಂ ಲಕ್ಷ್ಮೀರ್ಭರತಸತ್ತಮಮ್।।

ಕರ್ಣಿ-ನಾಲೀಕ-ನಾರಾಚ ಬಾಣಗಳಿಂದ ಯುದ್ಧದಲ್ಲಿ ಮರ್ಮಸ್ಥಾನಗಳೆಲ್ಲವೂ ಗಾಯಗೊಂಡು ಹತನಾಗಿದ್ದರೂ ಶರೀರಕಾಂತಿಯು ಆ ಭರತಸತ್ತಮನನ್ನು ಇನ್ನೂ ಬಿಟ್ಟುಹೋಗಿಲ್ಲ!

11019007a ಏಷ ಸಂಗ್ರಾಮಶೂರೇಣ ಪ್ರತಿಜ್ಞಾಂ ಪಾಲಯಿಷ್ಯತಾ।
11019007c ದುರ್ಮುಖೋಽಭಿಮುಖಃ ಶೇತೇ ಹತೋಽರಿಗಣಹಾ ರಣೇ।।

ರಣದಲ್ಲಿ ಶತ್ರುಗಣಗಳನ್ನು ಸಂಹರಿಸುತ್ತಿದ್ದ ದುರ್ಮುಖನೂ ಕೂಡ ಪ್ರತಿಜ್ಞೆಯನ್ನು ಪಾಲಿಸಿದ ಸಂಗ್ರಾಮ ಶೂರ ಭೀಮನಿಂದ ಹತನಾಗಿ ಇದೋ ಇಲ್ಲಿ ಅಂಗಾತನಾಗಿ ಮಲಗಿದ್ದಾನೆ!

11019008a ತಸ್ಯೈತದ್ವದನಂ ಕೃಷ್ಣ ಶ್ವಾಪದೈರರ್ಧಭಕ್ಷಿತಮ್।
11019008c ವಿಭಾತ್ಯಭ್ಯಧಿಕಂ ತಾತ ಸಪ್ತಮ್ಯಾಮಿವ ಚಂದ್ರಮಾಃ।।

ಅಯ್ಯಾ ಕೃಷ್ಣ! ಕ್ರೂರಮೃಗಗಳಿಂದ ತಿನ್ನಲ್ಪಟ್ಟ ಅವನ ಮುಖವು ಸಪ್ತಮಿಯ ಚಂದ್ರನಂತೆ ಅಧಿಕವಾಗಿ ಬೆಳಗುತ್ತಿದೆ!

11019009a ಶೂರಸ್ಯ ಹಿ ರಣೇ ಕೃಷ್ಣ ಯಸ್ಯಾನನಮಥೇದೃಶಮ್।
11019009c ಸ ಕಥಂ ನಿಹತೋಽಮಿತ್ರೈಃ ಪಾಂಸೂನ್ಗ್ರಸತಿ ಮೇ ಸುತಃ।।

ಕೃಷ್ಣ! ರಣದಲ್ಲಿ ಆ ಶೂರನ ಮುಖವು ಈ ರೀತಿ ತೇಜಸ್ಸಿನಿಂದ ಕೂಡಿರುವುದನ್ನು ನೋಡಿದರೆ ಇವನು ಶತ್ರುಗಳಿಂದ ಹೇಗೆ ಹತನಾಗಿರಬಹುದು ಎಂದೆನಿಸುತ್ತದೆ. ಹೇಗೆ ನನ್ನ ಮಗನು ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ!

11019010a ಯಸ್ಯಾಹವಮುಖೇ ಸೌಮ್ಯ ಸ್ಥಾತಾ ನೈವೋಪಪದ್ಯತೇ।
11019010c ಸ ಕಥಂ ದುರ್ಮುಖೋಽಮಿತ್ರೈರ್ಹತೋ ವಿಬುಧಲೋಕಜಿತ್।।

ಸೌಮ್ಯ! ಯುದ್ಧದಲ್ಲಿ ಇವನನ್ನು ಎದುರಿಸಿ ಹೋರಾಡುವವರು ಯಾರೂ ಇರಲಿಲ್ಲ. ದೇವಲೋಕವನ್ನೇ ಜಯಿಸಲು ಸಮರ್ಥನಾಗಿದ್ದ ಈ ದುರ್ಮುಖನು ಹೇಗೆ ತಾನೇ ಶತ್ರುಗಳಿಂದ ಹತನಾದನು?

11019011a ಚಿತ್ರಸೇನಂ ಹತಂ ಭೂಮೌ ಶಯಾನಂ ಮಧುಸೂದನ।
11019011c ಧಾರ್ತರಾಷ್ಟ್ರಮಿಮಂ ಪಶ್ಯ ಪ್ರತಿಮಾನಂ ದನುಷ್ಮತಾಮ್।।

ಮಧುಸೂದನ! ಧನುಷ್ಮತರಿಗೇ ಆದರ್ಶಪ್ರಾಯನಾದ ಧೃತರಾಷ್ಟ್ರನ ಮಗ ಚಿತ್ರಸೇನನು ಹತನಾಗಿ ಭೂಮಿಯ ಮೇಲೆ ಮಲಗಿರುವುದನ್ನು ನೋಡು!

11019012a ತಂ ಚಿತ್ರಮಾಲ್ಯಾಭರಣಂ ಯುವತ್ಯಃ ಶೋಕಕರ್ಶಿತಾಃ।
11019012c ಕ್ರವ್ಯಾದಸಂಘೈಃ ಸಹಿತಾ ರುದಂತ್ಯಃ ಪರ್ಯುಪಾಸತೇ।।

ಚಿತ್ರತರ ಮಾಲ್ಯಾಭರಣಗಳನ್ನು ಧರಿಸಿರುವ ಅವನನ್ನು ಶೋಕಕರ್ಶಿತ ಯುವತಿಯರು ಮಾಂಸಾಶಿ ಪ್ರಾಣಿಗಳ ಮಧ್ಯೆ ರೋದಿಸುತ್ತಾ ಸುತ್ತುವರೆದಿದ್ದಾರೆ.

11019013a ಸ್ತ್ರೀಣಾಂ ರುದಿತನಿರ್ಘೋಷಃ ಶ್ವಾಪದಾನಾಂ ಚ ಗರ್ಜಿತಮ್।
11019013c ಚಿತ್ರರೂಪಮಿದಂ ಕೃಷ್ಣ ವಿಚಿತ್ರಂ ಪ್ರತಿಭಾತಿ ಮೇ।।

ಕೃಷ್ಣ! ಸ್ತ್ರೀಯರ ರೋದನದ ಶಬ್ಧ ಮತ್ತು ಮಾಂಸಾಶಿ ಪ್ರಾಣಿಗಳ ಗರ್ಜನೆಗಳು ನನಗೆ ನೋಡಲು ಅದ್ಭುತವಾಗಿಯೂ ವಿಚಿತ್ರವಾಗಿಯೂ ಕಾಣುತ್ತಿವೆ!

11019014a ಯುವಾ ವೃಂದಾರಕೋ ನಿತ್ಯಂ ಪ್ರವರಸ್ತ್ರೀನಿಷೇವಿತಃ।
11019014c ವಿವಿಂಶತಿರಸೌ ಶೇತೇ ಧ್ವಸ್ತಃ ಪಾಂಸುಷು ಮಾಧವ।।

ಮಾಧವ! ನಿತ್ಯವೂ ಶ್ರೇಷ್ಠ ಸ್ತ್ರೀಯರಿಂದ ಸೇವಿಸಲ್ಪಡುತ್ತಿದ್ದ, ದೇವಸದೃಶ ಯುವಕ ವಿವಿಂಶತಿಯು ವಿಧ್ವಸ್ತನಾಗಿ ಇಗೋ ಇಲ್ಲಿ ಧೂಳಿನಲ್ಲಿ ಮಲಗಿಕೊಂಡಿದ್ದಾನೆ!

11019015a ಶರಸಂಕೃತ್ತವರ್ಮಾಣಂ ವೀರಂ ವಿಶಸನೇ ಹತಮ್।
11019015c ಪರಿವಾರ್ಯಾಸತೇ ಗೃಧ್ರಾಃ ಪರಿವಿಂಶಾ ವಿವಿಂಶತಿಮ್।।

ಶರಗಳಿಂದ ಕತ್ತರಿಸಲ್ಪಟ್ಟ ಕವಚವುಳ್ಳ, ಯುದ್ಧದಲ್ಲಿ ಹತನಾದ ವೀರ ವಿವಿಂಶತಿಯನ್ನು ಸುತ್ತುವರೆದು ಹದ್ದುಗಳು ಕುಳಿತುಕೊಂಡಿವೆ!

11019016a ಪ್ರವಿಶ್ಯ ಸಮರೇ ವೀರಃ ಪಾಂಡವಾನಾಮನೀಕಿನೀಮ್।
11019016c ಆವಿಶ್ಯ ಶಯನೇ ಶೇತೇ ಪುನಃ ಸತ್ಪುರುಷೋಚಿತಮ್।।

ಆ ವೀರನು ಸಮರದಲ್ಲಿ ಪಾಂಡವರ ಸೇನೆಯನ್ನು ಪ್ರವೇಶಿಸಿ ಪುನಃ ಸತ್ಪುರುಷರಿಗೆ ಉಚಿತವಾದ ವೀರಶಯದಲ್ಲಿ ಮಲಗಿದ್ದಾನೆ!

11019017a ಸ್ಮಿತೋಪಪನ್ನಂ ಸುನಸಂ ಸುಭ್ರು ತಾರಾಧಿಪೋಪಮಮ್।
11019017c ಅತೀವ ಶುಭ್ರಂ ವದನಂ ಪಶ್ಯ ಕೃಷ್ಣ ವಿವಿಂಶತೇಃ।।

ಕೃಷ್ಣ! ಮಂದಹಾಸವನ್ನು ಬೀರುತ್ತಿರುವ, ಸುಂದರ ಮುಖ ಮತ್ತು ಹುಬ್ಬುಗಳುಳ್ಳ, ತಾರಾಧಿಪ ಚಂದ್ರನಂತಿರುವ ವಿವಿಂಶತಿಯ ಶುಭ್ರ ವದನವನ್ನು ನೋಡು!

11019018a ಯಂ ಸ್ಮ ತಂ ಪರ್ಯುಪಾಸಂತೇ ವಸುಂ ವಾಸವಯೋಷಿತಃ।
11019018c ಕ್ರೀಡಂತಮಿವ ಗಂಧರ್ವಂ ದೇವಕನ್ಯಾಃ ಸಹಸ್ರಶಃ।।

ಕ್ರೀಡಿಸುತ್ತಿರುವ ಗಂಧರ್ವನನ್ನು ಸಹಸ್ರಾರು ದೇವಕನ್ಯೆಯರು ಹೇಗೋ ಹಾಗೆ ವಿವಿಂಶತಿಯನ್ನು ಅನೇಕ ಸುಂದರ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ!

11019019a ಹಂತಾರಂ ವೀರಸೇನಾನಾಂ ಶೂರಂ ಸಮಿತಿಶೋಭನಮ್।
11019019c ನಿಬರ್ಹಣಮಮಿತ್ರಾಣಾಂ ದುಃಸಹಂ ವಿಷಹೇತ ಕಃ।।

ವೀರಸೇನೆಗಳನ್ನು ಸಂಹರಿಸುತ್ತಿದ್ದ, ಸಮಿತಿ ಶೋಭನ ಶೂರ ದುಃಸಹನನ್ನು ಯಾರುತಾನೇ ಎದುರಿಸಿ ನಿಲ್ಲುತ್ತಿದ್ದರು?

11019020a ದುಃಸಹಸ್ಯೈತದಾಭಾತಿ ಶರೀರಂ ಸಂವೃತಂ ಶರೈಃ।
11019020c ಗಿರಿರಾತ್ಮರುಹೈಃ ಫುಲ್ಲೈಃ ಕರ್ಣಿಕಾರೈರಿವಾವೃತಃ।।

ಶರಗಳಿಂದ ಮುಚ್ಚಿಹೋಗಿರುವ ದುಃಸಹನ ಶರೀರವು ಹೂಬಿಟ್ಟಿರುವ ಕರ್ಣಿಕೆ ಗಿಡಗಳಿಂದ ತುಂಬಿಹೋಗಿರುವ ಪರ್ವತದಂತೆ ತೋರುತ್ತಿದೆ!

11019021a ಶಾತಕೌಂಭ್ಯಾ ಸ್ರಜಾ ಭಾತಿ ಕವಚೇನ ಚ ಭಾಸ್ವತಾ।
11019021c ಅಗ್ನಿನೇವ ಗಿರಿಃ ಶ್ವೇತೋ ಗತಾಸುರಪಿ ದುಃಸಹಃ।।

ಶ್ವೇತಪರ್ವತವು ಅಗ್ನಿಯಿಂದ ಶೋಭಾಯಮಾನವಾಗಿ ಕಾಣುವಂತೆ ಪ್ರಾಣಹೋಗಿದ್ದರೂ ದುಃಸಹನು ಚಿನ್ನದ ಹಾರಗಳು ಮತ್ತು ಕವಚದಿಂದ ಹೊಳೆಯುತ್ತಿದ್ದಾನೆ!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.