ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 18
ಸಾರ
ರೋದಿಸುತ್ತಿರುವ ತನ್ನ ಸೊಸೆಯಂದಿರನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (1-18). ಗಾಂಧಾರಿಯು ಹತನಾಗಿ ಬಿದ್ದಿದ್ದ ದುಃಶಾಸನನನ್ನು ಕೃಷ್ಣನಿಗೆ ತೋರಿಸಿ ವಿಲಪಿಸಿದುದು (19-28).
11018001 ಗಾಂಧಾರ್ಯುವಾಚ
11018001a ಪಶ್ಯ ಮಾಧವ ಪುತ್ರಾನ್ಮೇ ಶತಸಂಖ್ಯಾನ್ಜಿತಕ್ಲಮಾನ್।
11018001c ಗದಯಾ ಭೀಮಸೇನೇನ ಭೂಯಿಷ್ಠಂ ನಿಹತಾನ್ರಣೇ।।
ಗಾಂಧಾರಿಯು ಹೇಳಿದಳು: “ಮಾಧವ! ಆಯಾಸವೇ ಇಲ್ಲದೇ ಯುದ್ಧಮಾಡುತ್ತಿದ್ದ ನನ್ನ ನೂರು ಮಕ್ಕಳು ರಣದಲ್ಲಿ ಭೀಮಸೇನನ ಗದೆಯಿಂದ ಹತರಾಗಿರುವುದನ್ನು ನೋಡು!
11018002a ಇದಂ ದುಃಖತರಂ ಮೇಽದ್ಯ ಯದಿಮಾ ಮುಕ್ತಮೂರ್ಧಜಾಃ।
11018002c ಹತಪುತ್ರಾ ರಣೇ ಬಾಲಾಃ ಪರಿಧಾವಂತಿ ಮೇ ಸ್ನುಷಾಃ।।
ನನ್ನ ಬಾಲ ಸೊಸೆಯರು ಪುತ್ರರನ್ನು ಕಳೆದುಕೊಂಡು ಕೂದಲುಗಳನ್ನು ಕೆದರಿಕೊಂಡು ರಣದಲ್ಲಿ ಓಡಾಡುತ್ತಿರುವುದಕ್ಕಿಂತಲೂ ಹೆಚ್ಚಿನ ದುಃಖವು ಇಂದು ಯಾವುದಿದೆ?
11018003a ಪ್ರಾಸಾದತಲಚಾರಿಣ್ಯಶ್ಚರಣೈರ್ಭೂಷಣಾನ್ವಿತೈಃ।
11018003c ಆಪನ್ನಾ ಯತ್ ಸ್ಪೃಶಂತೀಮಾ ರುಧಿರಾರ್ದ್ರಾಂ ವಸುಂಧರಾಮ್।।
ಭೂಷಣಗಳಿಂದ ಅಲಂಕೃತ ಕಾಲ್ನಡುಗೆಯಲ್ಲಿ ಅರಮನೆಯ ನೆಲವನ್ನು ಸ್ಪರ್ಷಿಸುತ್ತಿದ್ದ ಅವರು ರಕ್ತದಿಂದ ನೆನೆದಿರುವ ಭೂಮಿಯನ್ನು ಅದೇ ಕಾಲುಗಳಿಂದ ಸ್ಪರ್ಷಿಸುತ್ತಿದ್ದಾರೆ!
11018004a ಗೃಧ್ರಾನುತ್ಸಾರಯಂತ್ಯಶ್ಚ ಗೋಮಾಯೂನ್ವಾಯಸಾಂಸ್ತಥಾ।
11018004c ಶೋಕೇನಾರ್ತಾ ವಿಘೂರ್ಣಂತ್ಯೋ ಮತ್ತಾ ಇವ ಚರಂತ್ಯುತ।।
ಶೋಕದಿಂದ ಆರ್ತರಾಗಿ ಅವರು ಅಮಲೇರಿದ ಸ್ತ್ರೀಯರಂತೆ ತೂರಾಡುತ್ತಾ ಹದ್ದು-ನರಿ-ಕಾಗೆಗಳನ್ನು ಬಹಳ ಕಷ್ಟದಿಂದ ಓಡಿಸುತ್ತಿದ್ದಾರೆ!
11018005a ಏಷಾನ್ಯಾ ತ್ವನವದ್ಯಾಂಗೀ ಕರಸಂಮಿತಮಧ್ಯಮಾ।
11018005c ಘೋರಂ ತದ್ವೈಶಸಂ ದೃಷ್ಟ್ವಾ ನಿಪತತ್ಯತಿದುಃಖಿತಾ।।
ತೆಳು ಸೊಂಟದ ನನ್ನ ಇನ್ನೊಬ್ಬ ಸೊಸೆಯು ಈ ಘೋರ ವಿನಾಶವನ್ನು ನೋಡಿ ಅತ್ಯಂತ ದುಃಖಿತಳಾಗಿ ಇಗೋ ಕೆಳಗೆ ಬೀಳುತ್ತಿದ್ದಾಳೆ!
11018006a ದೃಷ್ಟ್ವಾ ಮೇ ಪಾರ್ಥಿವಸುತಾಮೇತಾಂ ಲಕ್ಷ್ಮಣಮಾತರಮ್।
11018006c ರಾಜಪುತ್ರೀಂ ಮಹಾಬಾಹೋ ಮನೋ ನ ವ್ಯುಪಶಾಮ್ಯತಿ।।
ಮಹಾಬಾಹೋ! ರಾಜಪುತ್ರಿ, ಲಕ್ಷ್ಮಣನ ತಾಯಿ, ಪಾರ್ಥಿವಸುತೆಯನ್ನು ನೋಡಿ ನನ್ನ ಮನಸ್ಸು ಶಾಂತವಾಗುತ್ತಿಲ್ಲ!
11018007a ಭ್ರಾತೄಂಶ್ಚಾನ್ಯಾಃ ಪತೀಂಶ್ಚಾನ್ಯಾಃ ಪುತ್ರಾಂಶ್ಚ ನಿಹತಾನ್ಭುವಿ।
11018007c ದೃಷ್ಟ್ವಾ ಪರಿಪತಂತ್ಯೇತಾಃ ಪ್ರಗೃಹ್ಯ ಸುಭುಜಾ ಭುಜಾನ್।।
ಹತರಾಗಿ ಭೂಮಿಯ ಮೇಲೆ ಬಿದ್ದಿರುವ ಸಹೋದರರನ್ನು, ಇನ್ನು ಕೆಲವರು ಪತಿಗಳನ್ನು ಮತ್ತು ಇನ್ನು ಕೆಲವರು ಪುತ್ರರನ್ನು ನೋಡಿ ತಮ್ಮ ಸುಂದರ ಬಾಹುಗಳನ್ನು ಮೇಲೆತ್ತಿ ಪರಿತಪಿಸುತ್ತಿದ್ದಾರೆ!
11018008a ಮಧ್ಯಮಾನಾಂ ತು ನಾರೀಣಾಂ ವೃದ್ಧಾನಾಂ ಚಾಪರಾಜಿತ।
11018008c ಆಕ್ರಂದಂ ಹತಬಂಧೂನಾಂ ದಾರುಣೇ ವೈಶಸೇ ಶೃಣು।।
ಅಪರಾಜಿತ! ಬಂಧುಗಳು ಹತರಾಗಿರುವುದನ್ನು ನೋಡಿ ದಾರುಣವಾಗಿ ಕಷ್ಟದಿಂದ ರೋದಿಸುತ್ತಿರುವ ಮಧ್ಯವಯಸ್ಸಿನ ಮತ್ತು ವೃದ್ಧ ನಾರಿಯರ ಆಕ್ರಂದವನ್ನು ಕೇಳು!
11018009a ರಥನೀಡಾನಿ ದೇಹಾಂಶ್ಚ ಹತಾನಾಂ ಗಜವಾಜಿನಾಮ್।
11018009c ಆಶ್ರಿತಾಃ ಶ್ರಮಮೋಹಾರ್ತಾಃ ಸ್ಥಿತಾಃ ಪಶ್ಯ ಮಹಾಬಲ।।
ಮಹಾಬಲ! ಶ್ರಮದಿಂದ ಬಳಲಿದ ಆ ಸ್ತ್ರೀಯರು ರಥದ ನೊಗಗಳನ್ನೂ, ಸತ್ತುಹೋದ ಆನೆ-ಕುದುರೆಗಳ ದೇಹವನ್ನೂ ಆಶ್ರಯಿಸಿ ನಿಂತಿರುವುದನ್ನು ನೋಡು!
11018010a ಅನ್ಯಾ ಚಾಪಹೃತಂ ಕಾಯಾಚ್ಚಾರುಕುಂಡಲಮುನ್ನಸಮ್।
11018010c ಸ್ವಸ್ಯ ಬಂಧೋಃ ಶಿರಃ ಕೃಷ್ಣ ಗೃಹೀತ್ವಾ ಪಶ್ಯ ತಿಷ್ಠತಿ।।
ಕೃಷ್ಣ! ಇನ್ನೊಬ್ಬಳು ಶರೀರದಿಂದ ತುಂಡಾಗಿರುವ ಸುಂದರ ಕುಂಡಲಗಳನ್ನು ಧರಿಸಿದ್ದ ತನ್ನ ಬಂಧುವಿನ ಶಿರವನ್ನು ಹಿಡಿದು ನಿಂತಿರುವುದನ್ನು ನೋಡು!
11018011a ಪೂರ್ವಜಾತಿಕೃತಂ ಪಾಪಂ ಮನ್ಯೇ ನಾಲ್ಪಮಿವಾನಘ।
11018011c ಏತಾಭಿರನವದ್ಯಾಭಿರ್ಮಯಾ ಚೈವಾಲ್ಪಮೇಧಯಾ।।
ಅನಘ! ಹಿಂದಿನ ಜನ್ಮದಲ್ಲಿ ನಾನು ಮಾಡಿದ ಪಾಪಗಳು ಅಲ್ಪವಾಗಿರಲಾರದು. ಆದುದರಿಂದಲೇ ಮಂದಬುದ್ಧಿಯುಳ್ಳ ನಾನು ಇಂತಹ ಕೀಳು ಪರಿಸ್ಥಿತಿಗೆ ಇಳಿದಿದ್ದೇನೆ!
11018012a ತದಿದಂ ಧರ್ಮರಾಜೇನ ಯಾತಿತಂ ನೋ ಜನಾರ್ದನ।
11018012c ನ ಹಿ ನಾಶೋಽಸ್ತಿ ವಾರ್ಷ್ಣೇಯ ಕರ್ಮಣೋಃ ಶುಭಪಾಪಯೋಃ।।
ಜನಾರ್ದನ! ಅದಕ್ಕಾಗಿಯೇ ಧರ್ಮರಾಜನು ನಮಗೆ ಈ ನೋವನ್ನಿತ್ತಿದ್ದಾನೆ! ವಾರ್ಷ್ಣೇಯ! ಶುಭ-ಪಾಪ ಕರ್ಮಗಳು ಎಂದೂ (ಫಲವನ್ನು ಕೊಡದೇ) ನಾಶವಾಗುವುದಿಲ್ಲ!
11018013a ಪ್ರತ್ಯಗ್ರವಯಸಃ ಪಶ್ಯ ದರ್ಶನೀಯಕುಚೋದರಾಃ।
11018013c ಕುಲೇಷು ಜಾತಾ ಹ್ರೀಮತ್ಯಃ ಕೃಷ್ಣಪಕ್ಷಾಕ್ಷಿಮೂರ್ಧಜಾಃ।।
11018014a ಹಂಸಗದ್ಗದಭಾಷಿಣ್ಯೋ ದುಃಖಶೋಕಪ್ರಮೋಹಿತಾಃ।
11018014c ಸಾರಸ್ಯ ಇವ ವಾಶಂತ್ಯಃ ಪತಿತಾಃ ಪಶ್ಯ ಮಾಧವ।।
ಮಾಧವ! ಇನ್ನೂ ಹೆಚ್ಚು ವಯಸ್ಸಾಗಿರದ, ಸುಂದರ ಮುಖ-ಕುಚಗಳುಳ್ಳ, ಸತ್ಕುಲಪ್ರಸೂತೆಯರಾದ, ಲಜ್ಜಾಶೀಲರಾದ, ಕಪ್ಪು ರೆಪ್ಪೆ-ಕಣ್ಣುಗಳುಳ್ಳ, ಹಂಸಪಕ್ಷಿಗಳಂತೆ ಗದ್ಗದಸ್ವರದಲ್ಲಿ ಕೂಗುತ್ತಿರುವ, ದುಃಖಶೋಕಗಳಿಂದ ಮೂರ್ಛಿತರಾಗಿ ಸಾರಸ ಪಕ್ಷಿಗಳಂತೆ ರೋದಿಸುತ್ತಾ ಬೀಳುತ್ತಿರುವವರನ್ನು ನೋಡು!
11018015a ಫುಲ್ಲಪದ್ಮಪ್ರಕಾಶಾನಿ ಪುಂಡರೀಕಾಕ್ಷ ಯೋಷಿತಾಮ್।
11018015c ಅನವದ್ಯಾನಿ ವಕ್ತ್ರಾಣಿ ತಪತ್ಯಸುಖರಶ್ಮಿವಾನ್।।
ಪುಂಡರೀಕಾಕ್ಷ! ಅರಳಿದ ಕಮಲದ ಕಾಂತಿಯಿಂದ ಪ್ರಕಾಶಿಸುತ್ತಿರುವ ಸ್ತ್ರೀಯರ ಸುಂದರ ಮುಖಗಳನ್ನು ಸೂರ್ಯನು ತನ್ನ ಪ್ರಖರ ಕಿರಣಗಳಿಂದ ಸುಡುತ್ತಿದ್ದಾನೆ!
11018016a ಈರ್ಷೂಣಾಂ ಮಮ ಪುತ್ರಾಣಾಂ ವಾಸುದೇವಾವರೋಧನಮ್।
11018016c ಮತ್ತಮಾತಂಗದರ್ಪಾಣಾಂ ಪಶ್ಯಂತ್ಯದ್ಯ ಪೃಥಗ್ಜನಾಃ।।
ವಾಸುದೇವ! ಮತ್ತ ಮಾತಂಗದ ದರ್ಪವುಳ್ಳ ನನ್ನ ಪುತ್ರರು ಅಸೂಯೆಪಟ್ಟು ಬೇರೆ ಯಾರೂ ನೋಡಬಾರದೆನ್ನುತ್ತಿದ್ದರೋ ಅವರ ಪತ್ನಿಯರನ್ನು ಇಂದು ಸಾಮಾನ್ಯ ಜನರೂ ನೋಡುತ್ತಿದ್ದಾರೆ!
11018017a ಶತಚಂದ್ರಾಣಿ ಚರ್ಮಾಣಿ ಧ್ವಜಾಂಶ್ಚಾದಿತ್ಯಸಂನಿಭಾನ್।
11018017c ರೌಕ್ಮಾಣಿ ಚೈವ ವರ್ಮಾಣಿ ನಿಷ್ಕಾನಪಿ ಚ ಕಾಂಚನಾನ್।।
11018018a ಶೀರ್ಷತ್ರಾಣಾನಿ ಚೈತಾನಿ ಪುತ್ರಾಣಾಂ ಮೇ ಮಹೀತಲೇ।
11018018c ಪಶ್ಯ ದೀಪ್ತಾನಿ ಗೋವಿಂದ ಪಾವಕಾನ್ಸುಹುತಾನಿವ।।
ಗೋವಿಂದ! ನೂರು ಚಂದ್ರರ ಚಿಹ್ನೆಗಳುಳ್ಳ ನನ್ನ ಪುತ್ರರ ಗುರಾಣಿಗಳು, ಆದಿತ್ಯಸನ್ನಿಭ ಧ್ವಜಗಳು, ಚಿನ್ನದ ಕವಚಗಳು, ಕಾಂಚನ ಪದಕಗಳು ಮತ್ತು ಕಿರೀಟಗಳು ಭೂಮಿಯ ಮೇಲೆ ಬಿದ್ದು ಉರಿಯುತ್ತಿರುವ ಅಗ್ನಿಯಂತೆ ಬೆಳಗುತ್ತಿರುವುದನ್ನು ನೋಡು!
11018019a ಏಷ ದುಃಶಾಸನಃ ಶೇತೇ ಶೂರೇಣಾಮಿತ್ರಘಾತಿನಾ।
11018019c ಪೀತಶೋಣಿತಸರ್ವಾಂಗೋ ಭೀಮಸೇನೇನ ಪಾತಿತಃ।।
ಶತ್ರುಸೂದನ ಶೂರ ಭೀಮಸೇನನು ಸರ್ವಾಂಗಗಳಿಂದ ಸುರಿಯುತ್ತಿದ್ದ ರಕ್ತವನ್ನು ಕುಡಿದು ಕೆಳಗುರುಳಿಸಿದ ದುಃಶಾಸನನು ಇಲ್ಲಿ ಮಲಗಿದ್ದಾನೆ!
11018020a ಗದಯಾ ವೀರಘಾತಿನ್ಯಾ ಪಶ್ಯ ಮಾಧವ ಮೇ ಸುತಮ್।
11018020c ದ್ಯೂತಕ್ಲೇಶಾನನುಸ್ಮೃತ್ಯ ದ್ರೌಪದ್ಯಾ ಚೋದಿತೇನ ಚ।।
ಮಾಧವ! ದ್ಯೂತದ ಸಮಯದಲ್ಲಿ ದ್ರೌಪದಿಗೆ ಕೊಟ್ಟ ಕ್ಲೇಶಗಳ ಸ್ಮರಣೆಯಿಂದ ಪ್ರೇರಿತನಾದ ವೀರಘಾತೀ ಭೀಮನ ಗದೆಯಿಂದ ಕೆಳಗುರುಳಿಸಲ್ಪಟ್ಟು ಬಿದ್ದಿರುವ ನನ್ನ ಮಗನನ್ನು ನೋಡು!
11018021a ಉಕ್ತಾ ಹ್ಯನೇನ ಪಾಂಚಾಲೀ ಸಭಾಯಾಂ ದ್ಯೂತನಿರ್ಜಿತಾ।
11018021c ಪ್ರಿಯಂ ಚಿಕೀರ್ಷತಾ ಭ್ರಾತುಃ ಕರ್ಣಸ್ಯ ಚ ಜನಾರ್ದನ।।
ಜನಾರ್ದನ! ಇವನು ತನ್ನ ಅಣ್ಣ ಮತ್ತು ಕರ್ಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ದ್ಯೂತದಲ್ಲಿ ಸೋತ ಪಾಂಚಾಲಿಯೊಡನೆ ಸಭೆಯಲ್ಲಿ ಹೀಗೆ ಹೇಳಿದ್ದನು:
11018022a ಸಹೈವ ಸಹದೇವೇನ ನಕುಲೇನಾರ್ಜುನೇನ ಚ।
11018022c ದಾಸಭಾರ್ಯಾಸಿ ಪಾಂಚಾಲಿ ಕ್ಷಿಪ್ರಂ ಪ್ರವಿಶ ನೋ ಗೃಹಾನ್।।
“ಪಾಂಚಾಲೀ! ದಾಸರಾದ ಸಹದೇವ-ನಕುಲ-ಅರ್ಜುನರ ಪತ್ನಿಯಾದ ನೀನೂ ಕೂಡ ದಾಸಿಯಂತೆ. ಆದುದರಿಂದ ಬೇಗನೇ ನೀನು ನಮ್ಮ ಮನೆಗಳನ್ನು ಪ್ರವೇಶಿಸು!”
11018023a ತತೋಽಹಮಬ್ರುವಂ ಕೃಷ್ಣ ತದಾ ದುರ್ಯೋಧನಂ ನೃಪಮ್।
11018023c ಮೃತ್ಯುಪಾಶಪರಿಕ್ಷಿಪ್ತಂ ಶಕುನಿಂ ಪುತ್ರ ವರ್ಜಯ।।
ಕೃಷ್ಣ! ಆಗ ನಾನು ನೃಪ ದುರ್ಯೋಧನನಿಗೆ ಹೀಗೆ ಹೇಳಿದ್ದೆನು: “ಮಗನೇ! ಮೃತ್ಯುಪಾಶದಿಂದ ಬಂಧಿಸಲ್ಪಟ್ಟಿರುವ ಶಕುನಿಯನ್ನು ಪರಿತ್ಯಜಿಸು!
11018024a ನಿಬೋಧೈನಂ ಸುದುರ್ಬುದ್ಧಿಂ ಮಾತುಲಂ ಕಲಹಪ್ರಿಯಮ್।
11018024c ಕ್ಷಿಪ್ರಮೇನಂ ಪರಿತ್ಯಜ್ಯ ಪುತ್ರ ಶಾಮ್ಯಸ್ವ ಪಾಂಡವೈಃ।।
ಈ ನಿನ್ನ ಮಾವ ದುರ್ಬುದ್ಧಿಯು ಕಲಹಪ್ರಿಯನೆನ್ನುವುದನ್ನು ತಿಳಿದುಕೋ. ಮಗನೇ! ಬೇಗನೇ ಇವನನ್ನು ಪರಿತ್ಯಜಿಸಿ ಪಾಂಡವರೊಂದಿಗೆ ಸಂಧಿಮಾಡಿಕೋ!
11018025a ನ ಬುಧ್ಯಸೇ ತ್ವಂ ದುರ್ಬುದ್ಧೇ ಭೀಮಸೇನಮಮರ್ಷಣಮ್।
11018025c ವಾಙ್ನಾರಾಚೈಸ್ತುದಂಸ್ತೀಕ್ಷ್ಣೈರುಲ್ಕಾಭಿರಿವ ಕುಂಜರಮ್।।
ದುರ್ಬುದ್ಧೇ! ಕೋಪಿಷ್ಟ ಭೀಮಸೇನನನ್ನು ನೀನು ಅರಿತಿಲ್ಲ! ಉರಿಯುತ್ತಿರುವ ಕೊಳ್ಳಿಗಳಿಂದ ಆನೆಯನ್ನು ತಿವಿದು ಕೆರಳಿಸುವಂತೆ ನೀನು ಮಾತುಗಳೆಂಬ ತೀಕ್ಷ್ಣ ಬಾಣಗಳಿಂದ ಚುಚ್ಚುತ್ತಿರುವೆ!”
11018026a ತಾನೇಷ ರಭಸಃ ಕ್ರೂರೋ ವಾಕ್ಶಲ್ಯಾನವಧಾರಯನ್।
11018026c ಉತ್ಸಸರ್ಜ ವಿಷಂ ತೇಷು ಸರ್ಪೋ ಗೋವೃಷಭೇಷ್ವಿವ।।
ರಭಸದಿಂದಾಡಿದ ಆ ಕ್ರೂರ ಮಾತಿನ ಮುಳ್ಳುಗಳನ್ನು ಸಹಿಸಿಟ್ಟುಕೊಂಡಿದ್ದ ಭೀಮಸೇನನು ಸರ್ಪವು ಗೂಳಿಗಳ ಮೇಲೆ ಹೇಗೋ ಹಾಗೆ ನನ್ನ ಮಕ್ಕಳ ಮೇಲೆ ವಿಷವನ್ನು ಕಾರಿದ್ದಾನೆ!
11018027a ಏಷ ದುಃಶಾಸನಃ ಶೇತೇ ವಿಕ್ಷಿಪ್ಯ ವಿಪುಲೌ ಭುಜೌ।
11018027c ನಿಹತೋ ಭೀಮಸೇನೇನ ಸಿಂಹೇನೇವ ಮಹರ್ಷಭಃ।।
ಸಿಂಹದಿಂದ ಹತವಾದ ಮಹಾಸಲಗದಂತೆ ಭೀಮಸೇನನಿಂದ ಹತನಾದ ದುಃಶಾಸನನು ಇಗೋ ಇಲ್ಲಿ ತನ್ನ ಎರಡು ವಿಪುಲ ಭುಜಗಳನ್ನೂ ಚಾಚಿ ಮಲಗಿದ್ದಾನೆ!
11018028a ಅತ್ಯರ್ಥಮಕರೋದ್ರೌದ್ರಂ ಭೀಮಸೇನೋಽತ್ಯಮರ್ಷಣಃ।
11018028c ದುಃಶಾಸನಸ್ಯ ಯತ್ಕ್ರುದ್ಧೋಽಪಿಬಚ್ಚೋಣಿತಮಾಹವೇ।।
ಅತ್ಯಂತ ಅಸಹನಶೀಲನಾದ ಭೀಮಸೇನನು ಕ್ರುದ್ಧನಾಗಿ ರಣದಲ್ಲಿ ದುಃಶಾಸನನ ರಕ್ತವನ್ನು ಕುಡಿದು ರೌದ್ರಕರ್ಮವನ್ನೇ ಎಸಗಿದನು!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ಅಷ್ಟಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಹದಿನೆಂಟನೇ ಅಧ್ಯಾಯವು.