ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 16
ಸಾರ
ಗಾಂಧಾರಿಯು ವ್ಯಾಸನು ದಯಪಾಲಿಸಿದ ದಿವ್ಯ ದೃಷ್ಟಿಯಿಂದ ರಣರಂಗವನ್ನು ನೋಡಿದುದು (1-17). ಗಾಂಧಾರಿಯು ರಣರಂಗವನ್ನು ಕೃಷ್ಣನಿಗೆ ತೋರಿಸಿ ರೋದಿಸಿದುದು (18-59).
11016001 ವೈಶಂಪಾಯನ ಉವಾಚ
11016001a ಏವಮುಕ್ತ್ವಾ ತು ಗಾಂಧಾರೀ ಕುರೂಣಾಮಾವಿಕರ್ತನಮ್।
11016001c ಅಪಶ್ಯತ್ತತ್ರ ತಿಷ್ಠಂತೀ ಸರ್ವಂ ದಿವ್ಯೇನ ಚಕ್ಷುಷಾ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಗಾಂಧಾರಿಯು ನಿಂತಲ್ಲಿಂದಲೇ ತನ್ನ ದಿವ್ಯ ದೃಷ್ಟಿಯಿಂದ ಕುರುಗಳ ವಿನಾಶಸ್ಥಳವೆಲ್ಲವನ್ನೂ ನೋಡಿದಳು.
11016002a ಪತಿವ್ರತಾ ಮಹಾಭಾಗಾ ಸಮಾನವ್ರತಚಾರಿಣೀ।
11016002c ಉಗ್ರೇಣ ತಪಸಾ ಯುಕ್ತಾ ಸತತಂ ಸತ್ಯವಾದಿನೀ।।
11016003a ವರದಾನೇನ ಕೃಷ್ಣಸ್ಯ ಮಹರ್ಷೇಃ ಪುಣ್ಯಕರ್ಮಣಃ।
11016003c ದಿವ್ಯಜ್ಞಾನಬಲೋಪೇತಾ ವಿವಿಧಂ ಪರ್ಯದೇವಯತ್।।
ಆ ಸಮಾನವ್ರತಚಾರಿಣೀ, ಪ್ರತಿವ್ರತೆ, ಮಹಾಭಾಗೆ ಸತ್ಯವಾದಿನಿಯು ಸತತವೂ ಉಗ್ರ ತಪೋನಿರತಳಾಗಿದ್ದು, ಪುಣ್ಯಕರ್ಮಿ ಮಹರ್ಷಿ ಕೃಷ್ಣನ ವರದಾನದಿಂದ ಪಡೆದ ದಿವ್ಯಜ್ಞಾನದ ಬಲವನ್ನು ಪಡೆದು ವಿವಿಧ ರೀತಿಗಳಲ್ಲಿ ಶೋಕಿಸಿದಳು.
11016004a ದದರ್ಶ ಸಾ ಬುದ್ಧಿಮತೀ ದೂರಾದಪಿ ಯಥಾಂತಿಕೇ।
11016004c ರಣಾಜಿರಂ ನೃವೀರಾಣಾಮದ್ಭುತಂ ಲೋಮಹರ್ಷಣಮ್।।
ಅಷ್ಟು ದೂರದಿಂದ ಕೂಡ ಆ ಬುದ್ಧಿಮತಿಯು ಅತಿ ಹತ್ತಿರದಿಂದಲೋ ಎಂಬಂತೆ ನರವೀರರ ಲೋಮಹರ್ಷಣ ರಣಭೂಮಿಯನ್ನು ನೋಡಿದಳು.
11016005a ಅಸ್ಥಿಕೇಶಪರಿಸ್ತೀರ್ಣಂ ಶೋಣಿತೌಘಪರಿಪ್ಲುತಮ್।
11016005c ಶರೀರೈರ್ಬಹುಸಾಹಸ್ರೈರ್ವಿನಿಕೀರ್ಣಂ ಸಮಂತತಃ।।
ರಣಭೂಮಿಯು ಮೂಳೆಗಳಿಂದಲೂ, ತಲೆಗೂದಲುಗಳಿಂದಲೂ ವ್ಯಾಪ್ತವಾಗಿತ್ತು. ರಕ್ತದಿಂದ ತುಂಬಿಹೋಗಿತ್ತು. ಅನೇಕ ಸಾವಿರ ಶರೀರಗಳು ಎಲ್ಲಕಡೆ ಚದುರಿಹೋಗಿದ್ದವು.
11016006a ಗಜಾಶ್ವರಥಯೋಧಾನಾಮಾವೃತಂ ರುಧಿರಾವಿಲೈಃ।
11016006c ಶರೀರೈರಶಿರಸ್ಕೈಶ್ಚ ವಿದೇಹೈಶ್ಚ ಶಿರೋಗಣೈಃ।।
ರಕ್ತಸಿಕ್ತವಾಗಿದ್ದ ಆನೆ-ಕುದುರೆ-ರಥ ಮತ್ತು ಯೋಧರ ತಲೆಗಳಿಲ್ಲದ ಶರೀರಗಳಿಂದಲೂ, ಶರೀರಗಳಿಲ್ಲದ ತಲೆಗಳಿಂದಲೂ ರಣಭೂಮಿಯು ಮುಚ್ಚಿಹೋಗಿತ್ತು.
11016007a ಗಜಾಶ್ವನರವೀರಾಣಾಂ ನಿಃಸತ್ತ್ವೈರಭಿಸಂವೃತಮ್।
11016007c ಸೃಗಾಲಬಡಕಾಕೋಲಕಂಕಕಾಕನಿಷೇವಿತಮ್।।
ಆನೆ, ಕುದುರೆ ಮತ್ತು ನರವೀರರ ಹೆಣಗಳಿಂದ ತುಂಬಿಹೋಗಿದ್ದ ಆ ರಣರಂಗದಲ್ಲಿ ನರಿ-ಬಕಪಕ್ಷಿ-ಕಾಗೆ-ಗೂಬೆ ಮತ್ತು ರಣಹದ್ದುಗಳು ಸಂಚರಿಸುತ್ತಿದ್ದವು.
11016008a ರಕ್ಷಸಾಂ ಪುರುಷಾದಾನಾಂ ಮೋದನಂ ಕುರರಾಕುಲಮ್।
11016008c ಅಶಿವಾಭಿಃ ಶಿವಾಭಿಶ್ಚ ನಾದಿತಂ ಗೃಧ್ರಸೇವಿತಮ್।।
ನರಭಕ್ಷಕ ರಾಕ್ಷಸರು ಅಲ್ಲಿ ವಿನೋದಿಸುತ್ತಿದ್ದರು. ಅಮಂಗಳಕರವಾಗಿ ಕೂಗುತ್ತಿದ್ದ ನರಿಗಳು, ಕಡಲಹದ್ದುಗಳು ಮತ್ತು ರಣಹದ್ದುಗಳಿಂದ ಅದು ತುಂಬಿಹೋಗಿತ್ತು.
11016009a ತತೋ ವ್ಯಾಸಾಭ್ಯನುಜ್ಞಾತೋ ಧೃತರಾಷ್ಟ್ರೋ ಮಹೀಪತಿಃ।
11016009c ಪಾಂಡುಪುತ್ರಾಶ್ಚ ತೇ ಸರ್ವೇ ಯುಧಿಷ್ಠಿರಪುರೋಗಮಾಃ।।
11016010a ವಾಸುದೇವಂ ಪುರಸ್ಕೃತ್ಯ ಹತಬಂಧುಂ ಚ ಪಾರ್ಥಿವಮ್।
11016010c ಕುರುಸ್ತ್ರಿಯಃ ಸಮಾಸಾದ್ಯ ಜಗ್ಮುರಾಯೋಧನಂ ಪ್ರತಿ।।
ಅನಂತರ ಮಹೀಪತಿ ಧೃತರಾಷ್ಟ್ರನು ವ್ಯಾಸನ ಅನುಜ್ಞೆಯನ್ನು ಪಡೆದನು. ಯುಧಿಷ್ಠಿರನನೇ ಮೊದಲಾದ ಪಾಂಡುಪುತ್ರರೆಲ್ಲರೂ ಬಂಧುಗಳನ್ನು ಕಳೆದುಕೊಂಡ ರಾಜ ಮತ್ತು ವಾಸುದೇವನನ್ನು ಮುಂದೆಮಾಡಿಕೊಂಡು, ಕುರುಸ್ತ್ರೀಯರನ್ನು ಜೊತೆಯಲ್ಲಿ ಕರೆದುಕೊಂಡು, ರಣರಂಗದ ಕಡೆ ಹೊರಟರು.
11016011a ಸಮಾಸಾದ್ಯ ಕುರುಕ್ಷೇತ್ರಂ ತಾಃ ಸ್ತ್ರಿಯೋ ನಿಹತೇಶ್ವರಾಃ।
11016011c ಅಪಶ್ಯಂತ ಹತಾಂಸ್ತತ್ರ ಪುತ್ರಾನ್ಭ್ರಾತೄನ್ಪಿತೄನ್ಪತೀನ್।।
ಕುರುಕ್ಷೇತ್ರವನ್ನು ತಲುಪಿ ಪತಿಗಳನ್ನು ಕಳೆದುಕೊಂಡಿದ್ದ ಆ ಸ್ತ್ರೀಯರು ಅಲ್ಲಿ ಹತರಾಗಿದ್ದ ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ, ಪತಿಗಳನ್ನೂ ಕಂಡರು.
11016012a ಕ್ರವ್ಯಾದೈರ್ಭಕ್ಷ್ಯಮಾಣಾನ್ವೈ ಗೋಮಾಯುಬಡವಾಯಸೈಃ।
11016012c ಭೂತೈಃ ಪಿಶಾಚೈ ರಕ್ಷೋಭಿರ್ವಿವಿಧೈಶ್ಚ ನಿಶಾಚರೈಃ।।
11016013a ರುದ್ರಾಕ್ರೀಡನಿಭಂ ದೃಷ್ಟ್ವಾ ತದಾ ವಿಶಸನಂ ಸ್ತ್ರಿಯಃ।
11016013c ಮಹಾರ್ಹೇಭ್ಯೋಽಥ ಯಾನೇಭ್ಯೋ ವಿಕ್ರೋಶಂತ್ಯೋ ನಿಪೇತಿರೇ।।
ಮಾಂಸಾಹಾರಿ ನರಿ, ಕಾಗೆ, ಭೂತ, ಪಿಶಾಚಿ, ರಾಕ್ಷಸರೇ ಮೊದಲಾದ ವಿವಿಧ ನಿಶಾಚರರು ಭಕ್ಷಿಸುತ್ತಿದ್ದ, ರುದ್ರನ ಕ್ರೀಡಾಂಗಣದಂತೆ ತೋರುತ್ತಿದ್ದ ಆ ರಣಭೂಮಿಯನ್ನು ನೋಡಿ ದುಃಖಿತರಾದ ಸ್ತ್ರೀಯರು ಕೂಗುತ್ತಾ ಅತ್ಯಮೂಲ್ಯ ರಥಗಳಿಂದ ಕೆಳಗೆ ಬಿದ್ದರು.
11016014a ಅದೃಷ್ಟಪೂರ್ವಂ ಪಶ್ಯಂತ್ಯೋ ದುಃಖಾರ್ತಾ ಭರತಸ್ತ್ರಿಯಃ।
11016014c ಶರೀರೇಷ್ವಸ್ಖಲನ್ನನ್ಯಾ ನ್ಯಪತಂಶ್ಚಾಪರಾ ಭುವಿ।।
ಹಿಂದೆಂದೂ ಇಂಥದ್ದನ್ನು ನೋಡಿರದ ದುಃಖಾರ್ತ ಭರತಸ್ತ್ರೀಯರು ಅಲ್ಲಿದ್ದ ಶರೀರಗಳ ಮೇಲೆಯೇ ಬಿದ್ದರು. ಅನ್ಯರು ನೆಲದಮೇಲೆ ಬಿದ್ದರು.
11016015a ಶ್ರಾಂತಾನಾಂ ಚಾಪ್ಯನಾಥಾನಾಂ ನಾಸೀತ್ಕಾ ಚನ ಚೇತನಾ।
11016015c ಪಾಂಚಾಲಕುರುಯೋಷಾಣಾಂ ಕೃಪಣಂ ತದಭೂನ್ಮಹತ್।।
ಅನಾಥರಾಗಿ ಬಳಲಿದ್ದ ಅವರಲ್ಲಿ ಚೇತನವೇ ಇರಲಿಲ್ಲ. ಪಾಂಚಾಲ-ಕುರುಸ್ತ್ರೀಯರು ಆಗ ಅತ್ಯಂತ ದೀನರಾಗಿದ್ದರು.
11016016a ದುಃಖೋಪಹತಚಿತ್ತಾಭಿಃ ಸಮಂತಾದನುನಾದಿತಮ್।
11016016c ದೃಷ್ಟ್ವಾಯೋಧನಮತ್ಯುಗ್ರಂ ಧರ್ಮಜ್ಞಾ ಸುಬಲಾತ್ಮಜಾ।।
11016017a ತತಃ ಸಾ ಪುಂಡರೀಕಾಕ್ಷಮಾಮಂತ್ರ್ಯ ಪುರುಷೋತ್ತಮಮ್।
11016017c ಕುರೂಣಾಂ ವೈಶಸಂ ದೃಷ್ಟ್ವಾ ದುಃಖಾದ್ವಚನಮಬ್ರವೀತ್।।
ದುಃಖದಿಂದ ಬುದ್ಧಿಕಳೆದುಕೊಂಡು ಕೂಗುತ್ತಿರುವವರ ಧ್ವನಿಯು ಸುತ್ತಲೂ ಕೇಳಿಬರುತ್ತಿರಲು, ಅತಿ ಉಗ್ರವಾಗಿದ್ದ ಆ ರಣಭೂಮಿಯನ್ನು ನೋಡಿ, ಕುರುಗಳ ಆ ಮಹಾಸಂಹಾರವನ್ನು ಕಂಡು ಧರ್ಮಜ್ಞೆ ಸುಬಲಾತ್ಮಜೆಯು ಪುರುಷೋತ್ತಮ ಪುಂಡರೀಕಾಕ್ಷನನ್ನು ಕರೆದು ದುಃಖದಿಂದ ಹೀಗೆ ಹೇಳಿದಳು:
11016018a ಪಶ್ಯೈತಾಃ ಪುಂಡರೀಕಾಕ್ಷ ಸ್ನುಷಾ ಮೇ ನಿಹತೇಶ್ವರಾಃ।
11016018c ಪ್ರಕೀರ್ಣಕೇಶಾಃ ಕ್ರೋಶಂತೀಃ ಕುರರೀರಿವ ಮಾಧವ।।
“ಪುಂಡರೀಕಾಕ್ಷ! ಮಾಧವ! ಪತಿಗಳನ್ನು ಕಳೆದುಕೊಂಡ ನನ್ನ ಸೊಸೆಯಂದಿರು ತಲೆಗೂದಲುಗಳನ್ನು ಕೆದರಿಕೊಂಡು ಕಡಲಹದ್ದುಗಳಂತೆ ಚೀರುತ್ತಿರುವುದನ್ನು ನೋಡು!
11016019a ಅಮೂಸ್ತ್ವಭಿಸಮಾಗಮ್ಯ ಸ್ಮರಂತ್ಯೋ ಭರತರ್ಷಭಾನ್।
11016019c ಪೃಥಗೇವಾಭ್ಯಧಾವಂತ ಪುತ್ರಾನ್ಭ್ರಾತೄನ್ಪಿತೄನ್ಪತೀನ್।।
ಇವರು ಆ ಭರತರ್ಷಭರನ್ನು ಸ್ಮರಿಸಿಕೊಳ್ಳುತ್ತಾ ಅವರ ಪುತ್ರರು, ಸಹೋದರರು, ಪಿತೃಗಳು ಮತ್ತು ಪತಿಗಳನ್ನು ಹುಡುಕುತ್ತಾ ಒಬ್ಬೊಬ್ಬರು ಒಂದೊಂದು ಕಡೆ ಓಡಿಹೋಗುತ್ತಿದ್ದಾರೆ!
11016020a ವೀರಸೂಭಿರ್ಮಹಾಬಾಹೋ ಹತಪುತ್ರಾಭಿರಾವೃತಮ್।
11016020c ಕ್ವ ಚಿಚ್ಚ ವೀರಪತ್ನೀಭಿರ್ಹತವೀರಾಭಿರಾಕುಲಮ್।।
ಮಹಾಬಾಹೋ! ಪುತ್ರರನ್ನು ಕಳೆದುಕೊಂಡ ವೀರಮಾತೆಯರಿಂದಲೂ ವೀರಪತಿಯರನ್ನು ಕಳೆದುಕೊಂಡ ವೀರಪತ್ನಿಯರಿಂದಲೂ ಈ ರಣಭೂಮಿಯು ತುಂಬಿಹೋಗಿದೆ!
11016021a ಶೋಭಿತಂ ಪುರುಷವ್ಯಾಘ್ರೈರ್ಭೀಷ್ಮಕರ್ಣಾಭಿಮನ್ಯುಭಿಃ।
11016021c ದ್ರೋಣದ್ರುಪದಶಲ್ಯೈಶ್ಚ ಜ್ವಲದ್ಭಿರಿವ ಪಾವಕೈಃ।।
ಪ್ರಜ್ವಲಿಸುವ ಪಾವಕರಂತಿರುವ ಭೀಷ್ಮ-ಕರ್ಣ-ಅಭಿಮನ್ಯು-ದ್ರೋಣ-ದ್ರುಪದ-ಶಲ ಮೊದಲಾದ ಪುರುಷವ್ಯಾಘ್ರರಿಂದ ರಣಭೂಮಿಯು ಶೋಭಿಸುತ್ತಿದೆ.
11016022a ಕಾಂಚನೈಃ ಕವಚೈರ್ನಿಷ್ಕೈರ್ಮಣಿಭಿಶ್ಚ ಮಹಾತ್ಮನಾಮ್।
11016022c ಅಂಗದೈರ್ಹಸ್ತಕೇಯೂರೈಃ ಸ್ರಗ್ಭಿಶ್ಚ ಸಮಲಂಕೃತಮ್।।
ಮಹಾತ್ಮರ ಕಾಂಚನ ಕವಚಗಳಿಂದಲೂ, ಮಣಿಗಳ ಹಾರಗಳಿಂದಲೂ, ಅಂಗದ-ಹಸ್ತ ಕೇಯೂರಗಳಿಂದಲೂ, ಮಾಲೆಗಳಿಂದಲೂ ರಣಭೂಮಿಯು ಸಮಲಂಕೃತವಾಗಿದೆ.
11016023a ವೀರಬಾಹುವಿಸೃಷ್ಟಾಭಿಃ ಶಕ್ತಿಭಿಃ ಪರಿಘೈರಪಿ।
11016023c ಖಡ್ಗೈಶ್ಚ ವಿಮಲೈಸ್ತೀಕ್ಷ್ಣೈಃ ಸಶರೈಶ್ಚ ಶರಾಸನೈಃ।।
ವೀರರ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ಶಕ್ತಿ, ಪರಿಘ, ವಿಮಲ ತೀಕ್ಷ್ಣ ಖಡ್ಗ, ಶರಗಳು ಮತ್ತು ಭತ್ತಳಿಕೆಗಳಿಂದ ಈ ರಣಭೂಮಿಯು ತುಂಬಿಹೋಗಿದೆ.
11016024a ಕ್ರವ್ಯಾದಸಂಘೈರ್ಮುದಿತೈಸ್ತಿಷ್ಠದ್ಭಿಃ ಸಹಿತೈಃ ಕ್ವ ಚಿತ್।
11016024c ಕ್ವ ಚಿದಾಕ್ರೀಡಮಾನೈಶ್ಚ ಶಯಾನೈರಪರೈಃ ಕ್ವ ಚಿತ್।।
ಸಂತೋಷಭರಿತ ಮಾಂಸಾಶೀ ಪಕ್ಷಿಗಳು ಕೆಲವೆಡೆ ಗುಂಪುಗುಂಪಾಗಿ ನಿಂತುಕೊಂಡಿವೆ. ಕೆಲವೆಡೆ ಆಟವಾಡುತ್ತಿವೆ. ಮತ್ತು ಇನ್ನು ಕೆಲವೆಡೆ ಮಲಗಿಕೊಂಡಿವೆ!
11016025a ಏತದೇವಂವಿಧಂ ವೀರ ಸಂಪಶ್ಯಾಯೋಧನಂ ವಿಭೋ।
11016025c ಪಶ್ಯಮಾನಾ ಚ ದಹ್ಯಾಮಿ ಶೋಕೇನಾಹಂ ಜನಾರ್ದನ।।
ವಿಭೋ! ಜನಾರ್ದನ! ವೀರ! ಈ ವಿಧದ ಭಯಂಕರ ರಣಭೂಮಿಯನ್ನು ನೋಡಿ ಶೋಕದಿಂದ ನಾನು ಸುಡುತ್ತಿದ್ದೇನೆ.
11016026a ಪಾಂಚಾಲಾನಾಂ ಕುರೂಣಾಂ ಚ ವಿನಾಶಂ ಮಧುಸೂದನ।
11016026c ಪಂಚಾನಾಮಿವ ಭೂತಾನಾಂ ನಾಹಂ ವಧಮಚಿಂತಯಮ್।।
ಪಂಚಭೂತಗಳು ನಾಶವಾಗದಂತೆ ಪಾಂಚಲ-ಕುರುಗಳು ಹೀಗೆ ನಾಶವಾಗುತ್ತಾರೆಂದು ನಾನು ಯೋಚಿಸಿರಲಿಲ್ಲ.
11016027a ತಾನ್ಸುಪರ್ಣಾಶ್ಚ ಗೃಧ್ರಾಶ್ಚ ನಿಷ್ಕರ್ಷಂತ್ಯಸೃಗುಕ್ಷಿತಾನ್।
11016027c ನಿಗೃಹ್ಯ ಕವಚೇಷೂಗ್ರಾ ಭಕ್ಷಯಂತಿ ಸಹಸ್ರಶಃ।।
ಆ ಹದ್ದುಗಳು ಮತ್ತು ಇತರ ಪಕ್ಷಿಗಳು ಸಹಸ್ರಾರು ಸಂಖ್ಯೆಗಳಲ್ಲಿ ಕುಕ್ಕಿ ಕವಚಗಳ ಸಂಧಿನಿಂದ ಎಳೆದು ಮಾಂಸವನ್ನು ಭಕ್ಷಿಸುತ್ತಿವೆ!
11016028a ಜಯದ್ರಥಸ್ಯ ಕರ್ಣಸ್ಯ ತಥೈವ ದ್ರೋಣಭೀಷ್ಮಯೋಃ।
11016028c ಅಭಿಮನ್ಯೋರ್ವಿನಾಶಂ ಚ ಕಶ್ಚಿಂತಯಿತುಮರ್ಹತಿ।।
ಜಯದ್ರಥ, ಕರ್ಣ, ದ್ರೋಣ, ಭೀಷ್ಮ ಮತ್ತು ಅಭಿಮನ್ಯುವಿನ ವಿನಾಶವನ್ನು ಯಾರುತಾನೇ ಆಲೋಚಿಸಿದ್ದರು?
11016029a ಅವಧ್ಯಕಲ್ಪಾನ್ನಿಹತಾನ್ದೃಷ್ಟ್ವಾಹಂ ಮಧುಸೂದನ।
11016029c ಗೃಧ್ರಕಂಕಬಡಶ್ಯೇನಶ್ವಸೃಗಾಲಾದನೀಕೃತಾನ್।।
ನಾವು ಯಾರನ್ನು ಅವಧ್ಯರೆಂದು ತಿಳಿದುಕೊಂಡಿದ್ದೆವೋ ಅವರೇ ಹತರಾಗಿ ಹದ್ದು-ಗಿಡುಗ-ನರಿ-ನಾಯಿ-ತೋಳಗಳಿಗೆ ಆಹಾರವಾಗುತ್ತಿದ್ದುದನ್ನು ನಾನು ನೋಡುತ್ತಿದ್ದೇನೆ!
11016030a ಅಮರ್ಷವಶಮಾಪನ್ನಾನ್ದುರ್ಯೋಧನವಶೇ ಸ್ಥಿತಾನ್।
11016030c ಪಶ್ಯೇಮಾನ್ಪುರುಷವ್ಯಾಘ್ರಾನ್ಸಂಶಾಂತಾನ್ಪಾವಕಾನಿವ।।
ದುರ್ಯೋಧನನ ವಶದಲ್ಲಿ ಬಂದು ಕೋಪಪರವಶರಾಗಿದ್ದ ಪುರುಷವ್ಯಾಘ್ರರು ಆರಿಹೋದ ಅಗ್ನಿಯಂತೆ ತಣ್ಣಗಾಗಿರುವುದನ್ನು ನೋಡು!
11016031a ಶಯನಾನ್ಯುಚಿತಾಃ ಸರ್ವೇ ಮೃದೂನಿ ವಿಮಲಾನಿ ಚ।
11016031c ವಿಪನ್ನಾಸ್ತೇಽದ್ಯ ವಸುಧಾಂ ವಿವೃತಾಮಧಿಶೇರತೇ।।
ಮೃದು-ಶುಭ್ರ ಹಾಸಿಗೆಗಳ ಮೇಲೆ ಮಲಗಲು ಯೋಗ್ಯರಾದ ಎಲ್ಲರೂ ಇಂದು ಹತರಾಗಿ ನೆಲದ ಮೇಲೆ ಮಲಗಿದ್ದಾರೆ!
11016032a ಬಂದಿಭಿಃ ಸತತಂ ಕಾಲೇ ಸ್ತುವದ್ಭಿರಭಿನಂದಿತಾಃ।
11016032c ಶಿವಾನಾಮಶಿವಾ ಘೋರಾಃ ಶೃಣ್ವಂತಿ ವಿವಿಧಾ ಗಿರಃ।।
ಹಿಂದೆ ಸತತವೂ ವಂದಿ-ಮಾಗಧರಿಂದ ಸ್ತುತಿಸಲ್ಪಡುತ್ತಿದ್ದ ಅನಿಂದಿತರು ಈಗ ನರಿಗಳ ವಿವಿಧ ಅಮಂಗಳಕರ, ಘೋರ ಶಬ್ಧಗಳನ್ನು ಕೇಳುತ್ತಿದ್ದಾರೆ!
11016033a ಯೇ ಪುರಾ ಶೇರತೇ ವೀರಾಃ ಶಯನೇಷು ಯಶಸ್ವಿನಃ।
11016033c ಚಂದನಾಗುರುದಿಗ್ಧಾಂಗಾಸ್ತೇಽದ್ಯ ಪಾಂಸುಷು ಶೇರತೇ।।
ಹಿಂದೆ ಚಂದನ-ಅಗರು ಮುಂತಾದವುಗಳನ್ನು ಲೇಪಿಸಿಕೊಂಡು ಹಾಸಿಗೆಯ ಮೇಲೆ ಮಲಗುತ್ತಿದ್ದ ಈ ಯಶಸ್ವೀ ವೀರರು ಇಂದು ಕೆಸರಿನಲ್ಲಿ ಮಲಗಿದ್ದಾರೆ!
11016034a ತೇಷಾಮಾಭರಣಾನ್ಯೇತೇ ಗೃಧ್ರಗೋಮಾಯುವಾಯಸಾಃ।
11016034c ಆಕ್ಷಿಪಂತ್ಯಶಿವಾ ಘೋರಾ ವಿನದಂತಃ ಪುನಃ ಪುನಃ।।
ಹದ್ದು-ನರಿ-ಕಾಗೆಗಳು ಅವರ ಆಭರಣಗಳನ್ನು ಕಿತ್ತು ಎಸೆಯುತ್ತಾ ಅಶುಭವಾಗಿ ಮತ್ತು ಘೋರವಾಗಿ ಪುನಃ ಪುನಃ ಕೂಗುತ್ತಿವೆ!
11016035a ಚಾಪಾನಿ ವಿಶಿಖಾನ್ಪೀತಾನ್ನಿಸ್ತ್ರಿಂಶಾನ್ವಿಮಲಾ ಗದಾಃ।
11016035c ಯುದ್ಧಾಭಿಮಾನಿನಃ ಪ್ರೀತಾ ಜೀವಂತ ಇವ ಬಿಭ್ರತಿ।।
ಆ ಯುದ್ಧಾಭಿಮಾನಿಗಳು ಪ್ರೀತಿಯಿಂದ ಹಿಡಿದಿರುವ ಬಿಲ್ಲುಗಳು, ಪೀತಲ ನಿಶಿತ ವಿಶಿಖಗಳು, ಮತ್ತು ವಿಮಲ ಗದೆಗಳು ಇನ್ನೂ ಜೀವಂತವಾಗಿಯೆವೋ ಎಂಬಂತೆ ಹೊಳೆಯುತ್ತಿವೆ.
11016036a ಸುರೂಪವರ್ಣಾ ಬಹವಃ ಕ್ರವ್ಯಾದೈರವಘಟ್ಟಿತಾಃ।
11016036c ಋಷಭಪ್ರತಿರೂಪಾಕ್ಷಾಃ ಶೇರತೇ ಹರಿತಸ್ರಜಃ।।
ಸುಂದರ ರೂಪ ವರ್ಣಗಳ ಇನ್ನೂ ಮಾಸಿರದ ಮಾಲೆಗಳನ್ನು ತೊಟ್ಟ ಗೂಳಿಗಳ ಕಣ್ಣುಗಳಂಥಹ ಕಣ್ಣುಗಳಿದ್ದ ಅನೇಕರನ್ನು ಕ್ರವ್ಯಾದಗಳು ಛಿದ್ರ-ವಿಛಿದ್ರ ಮಾಡುತ್ತಿವೆ.
11016037a ಅಪರೇ ಪುನರಾಲಿಂಗ್ಯ ಗದಾಃ ಪರಿಘಬಾಹವಃ।
11016037c ಶೇರತೇಽಭಿಮುಖಾಃ ಶೂರಾ ದಯಿತಾ ಇವ ಯೋಷಿತಃ।।
ಪರಿಘದಂಥಹ ಬಾಹುಗಳುಳ್ಳ ಇತರರು ಪ್ರೇಯಸಿಯನ್ನು ತಬ್ಬಿಕೊಂಡಿರುವವರಂತೆ ಗದೆಯನ್ನೇ ತಬ್ಬಿಕೊಂಡು ಮುಖವನ್ನು ಕೆಳಗೆಮಾಡಿಕೊಂಡು ಮಲಗಿದ್ದಾರೆ.
11016038a ಬಿಭ್ರತಃ ಕವಚಾನ್ಯನ್ಯೇ ವಿಮಲಾನ್ಯಾಯುಧಾನಿ ಚ।
11016038c ನ ಧರ್ಷಯಂತಿ ಕ್ರವ್ಯಾದಾ ಜೀವಂತೀತಿ ಜನಾರ್ದನ।।
ಜನಾರ್ದನ! ಅನ್ಯರು ವಿಮಲ ಆಯುಧ-ಕವಚಗಳಿಂದ ಹೊಳೆಯುತ್ತಿರುವುದರಿಂದ ಅವರು ಜೀವಂತವಾಗಿರುವರೆಂದು ಭಾವಿಸಿ ಕ್ರವ್ಯಾದಗಳು ಅವರನ್ನು ತಿನ್ನುತ್ತಿಲ್ಲ!
11016039a ಕ್ರವ್ಯಾದೈಃ ಕೃಷ್ಯಮಾಣಾನಾಮಪರೇಷಾಂ ಮಹಾತ್ಮನಾಮ್।
11016039c ಶಾತಕೌಂಭ್ಯಃ ಸ್ರಜಶ್ಚಿತ್ರಾ ವಿಪ್ರಕೀರ್ಣಾಃ ಸಮಂತತಃ।।
ಕ್ರವ್ಯಾದಗಳಿಂದ ಎಳೆಯಲ್ಪಡುತ್ತಿರುವ ಇತರ ಮಹಾತ್ಮರ ಸುವರ್ಣಮಯ ಚಿತ್ರಿತ ಮಾಲೆಗಳು ಚೆಲ್ಲಾಪಿಲ್ಲಿಯಾಗಿ ಸುತ್ತಲೂ ಹರಡಿವೆ.
11016040a ಏತೇ ಗೋಮಾಯವೋ ಭೀಮಾ ನಿಹತಾನಾಂ ಯಶಸ್ವಿನಾಮ್।
11016040c ಕಂಠಾಂತರಗತಾನ್ ಹಾರಾನಾಕ್ಷಿಪಂತಿ ಸಹಸ್ರಶಃ।।
ಹತರಾಗಿರುವ ಯಶಸ್ವಿಗಳ ಕಂಠಗಳಲ್ಲಿರುವ ಹಾರಗಳನ್ನು ಸಹಸ್ರಾರು ಭಯಂಕರ ನರಿಗಳು ಎಳೆದಾಡುತ್ತಿವೆ!
11016041a ಸರ್ವೇಷ್ವಪರರಾತ್ರೇಷು ಯಾನನಂದಂತ ಬಂದಿನಃ।
11016041c ಸ್ತುತಿಭಿಶ್ಚ ಪರಾರ್ಧ್ಯಾಭಿರುಪಚಾರೈಶ್ಚ ಶಿಕ್ಷಿತಾಃ।।
11016042a ತಾನಿಮಾಃ ಪರಿದೇವಂತಿ ದುಃಖಾರ್ತಾಃ ಪರಮಾಂಗನಾಃ।
11016042c ಕೃಪಣಂ ವೃಷ್ಣಿಶಾರ್ದೂಲ ದುಃಖಶೋಕಾರ್ದಿತಾ ಭೃಶಮ್।।
ವೃಷ್ಣಿಶಾರ್ದೂಲ! ಅಪರರಾತ್ರಿಗಳಲ್ಲಿಯೂ ಯಾರನ್ನು ಪ್ರಶಿಕ್ಷಿತ ಬಂದಿಗಳು ಸ್ತುತಿಗಳಿಂದಲೂ ಉತ್ತಮ ಉಪಚಾರಗಳಿಂದಲೂ ಸೇವಿಸುತ್ತಿದ್ದರೋ ಅವರನ್ನು ಇಂದು ದುಃಖಾರ್ತ ಪರಮಾಂಗನೆಯರು ಕರುಣಾಜನಕ ವಿಲಾಪಗಳಿಂದ ಸಂಸೇವಿಸುತ್ತಿದ್ದಾರೆ!
11016043a ರಕ್ತೋತ್ಪಲವನಾನೀವ ವಿಭಾಂತಿ ರುಚಿರಾಣಿ ವೈ।
11016043c ಮುಖಾನಿ ಪರಮಸ್ತ್ರೀಣಾಂ ಪರಿಶುಷ್ಕಾಣಿ ಕೇಶವ।।
ಕೇಶವ! ಬಾಡಿಹೋಗಿರುವ ಈ ಪರಮಸ್ತ್ರೀಯರ ಮುಖಗಳು ಕೆಂಪು ಕಮಲದ ವನಗಳಂತೆ ಬಹಳ ಸುಂದರವಾಗಿ ಕಾಣುತ್ತಿವೆ.
11016044a ರುದಿತೋಪರತಾ ಹ್ಯೇತಾ ಧ್ಯಾಯಂತ್ಯಃ ಸಂಪರಿಪ್ಲುತಾಃ।
11016044c ಕುರುಸ್ತ್ರಿಯೋಽಭಿಗಚ್ಚಂತಿ ತೇನ ತೇನೈವ ದುಃಖಿತಾಃ।।
ಕೆಲವು ಕುರುಸ್ತ್ರೀಯರು ಅಳುವುದನ್ನು ನಿಲ್ಲಿಸಿ ತಮ್ಮವರು ಎಲ್ಲಿರುವರೆಂದು ಚಿಂತಿಸಿ ಹುಡುಕುತ್ತಾ ಅವರು ಸಿಕ್ಕಿದಾಗ ಪುನಃ ದುಃಖಿತರಾಗುತ್ತಿದ್ದಾರೆ!
11016045a ಏತಾನ್ಯಾದಿತ್ಯವರ್ಣಾನಿ ತಪನೀಯನಿಭಾನಿ ಚ।
11016045c ರೋಷರೋದನತಾಮ್ರಾಣಿ ವಕ್ತ್ರಾಣಿ ಕುರುಯೋಷಿತಾಮ್।।
ಸೂರ್ಯನ ಕಾಂತಿಯನ್ನೂ ಚಿನ್ನದ ಹೊಳಪನ್ನೂ ಹೊಂದಿದ್ದ ಕುರುಸ್ತ್ರೀಯರ ಮುಖಗಳು ರೋಷ-ರೋದನಗಳಿಂದಾಗಿ ಕೆಂಪಾಗಿವೆ!
11016046a ಆಸಾಮಪರಿಪೂರ್ಣಾರ್ಥಂ ನಿಶಮ್ಯ ಪರಿದೇವಿತಮ್।
11016046c ಇತರೇತರಸಂಕ್ರಂದಾನ್ನ ವಿಜಾನಂತಿ ಯೋಷಿತಃ।।
ಇತರೇತರ ಸ್ತ್ರೀಯರ ರೋದನಗಳು ಎಲ್ಲ ಒಂದಾಗಿ ಯಾರು ಹೇಗೆ ರೋದಿಸುತ್ತಿದ್ದಾರೆನ್ನುವುದೂ ತಿಳಿಯುತ್ತಿಲ್ಲ!
11016047a ಏತಾ ದೀರ್ಘಮಿವೋಚ್ಚ್ವಸ್ಯ ವಿಕ್ರುಶ್ಯ ಚ ವಿಲಪ್ಯ ಚ।
11016047c ವಿಸ್ಪಂದಮಾನಾ ದುಃಖೇನ ವೀರಾ ಜಹತಿ ಜೀವಿತಮ್।।
ಈರ ವೀರಸ್ತ್ರೀಯರು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ, ಜೋರಾಗಿ ವಿಲಪಿಸುತ್ತಾ, ದುಃಖದಿಂದ ಚಡಪಡಿಸುತ್ತಾ ಕೊನೆಯಲ್ಲಿ ಜೀವವನ್ನೇ ತೊರೆಯುತ್ತಾರೆ!
11016048a ಬಹ್ವ್ಯೋ ದೃಷ್ಟ್ವಾ ಶರೀರಾಣಿ ಕ್ರೋಶಂತಿ ವಿಲಪಂತಿ ಚ।
11016048c ಪಾಣಿಭಿಶ್ಚಾಪರಾ ಘ್ನಂತಿ ಶಿರಾಂಸಿ ಮೃದುಪಾಣಯಃ।।
ಅನೇಕ ಸ್ತ್ರೀಯರು ಶರೀರಗಳನ್ನು ನೋಡಿ ಜೋರಾಗಿ ಕೂಗಿ ವಿಲಪಿಸುತ್ತಿದ್ದರೆ ಇತರರು ತಮ್ಮ ಮೃದು ಕೈಗಳಿಂದ ತಲೆಯನ್ನು ಹೊಡೆದುಕೊಳ್ಳುತ್ತಿದ್ದಾರೆ.
11016049a ಶಿರೋಭಿಃ ಪತಿತೈರ್ಹಸ್ತೈಃ ಸರ್ವಾಂಗೈರ್ಯೂಥಶಃ ಕೃತೈಃ।
11016049c ಇತರೇತರಸಂಪೃಕ್ತೈರಾಕೀರ್ಣಾ ಭಾತಿ ಮೇದಿನೀ।।
ಬಿದ್ದಿರುವ ಶಿರಗಳಿಂದಲೂ, ಕೈಗಳಿಂದಲೂ, ಗುಂಪು ಗುಂಪಾಗಿ ಬಿದ್ದಿರುವ ಸರ್ವಾಂಗಗಳಿಂದಲೂ ರಣಭೂಮಿಯು ಇತರೇತರರ ಅವಯವಗಳಿಂದ ತುಂಬಿಹೋಗಿರುವಂತೆ ಕಾಣುತ್ತಿದೆ.
11016050a ವಿಶಿರಸ್ಕಾನಥೋ ಕಾಯಾನ್ದೃಷ್ಟ್ವಾ ಘೋರಾಭಿನಂದಿನಃ।
11016050c ಮುಹ್ಯಂತ್ಯನುಚಿತಾ ನಾರ್ಯೋ ವಿದೇಹಾನಿ ಶಿರಾಂಸಿ ಚ।।
ಶಿರಗಳಿಲ್ಲದ ಕಾಯಗಳನ್ನೂ ಶರೀರಗಳಿಲ್ಲದ ಶಿರಗಳನ್ನೂ ನೋಡಿ ಘೋರದೃಶ್ಯವನ್ನು ನೋಡಿದವರಂತೆ ನಾರಿಯರು ಮೂರ್ಛೆಹೋಗುತ್ತಿದ್ದಾರೆ.
11016051a ಶಿರಃ ಕಾಯೇನ ಸಂಧಾಯ ಪ್ರೇಕ್ಷಮಾಣಾ ವಿಚೇತಸಃ।
11016051c ಅಪಶ್ಯಂತ್ಯೋ ಪರಂ ತತ್ರ ನೇದಮಸ್ಯೇತಿ ದುಃಖಿತಾಃ।।
ಶಿರವನ್ನು ಶರೀರಕ್ಕೆ ಜೋಡಿಸಿ ಅದು ಸರಿಯಾಗದೇ ತಕ್ಕ ಶಿರವು ಇಲ್ಲಿ ಕಾಣುತ್ತಿಲ್ಲವೆಂದು ಹೇಳುತ್ತಾ ಬುದ್ಧಿಕಳೆದುಕೊಂಡು ದುಃಖಿಸುತ್ತಿದ್ದಾರೆ.
11016052a ಬಾಹೂರುಚರಣಾನನ್ಯಾನ್ವಿಶಿಖೋನ್ಮಥಿತಾನ್ಪೃಥಕ್।
11016052c ಸಂದಧತ್ಯೋಽಸುಖಾವಿಷ್ಟಾ ಮೂರ್ಚಂತ್ಯೇತಾಃ ಪುನಃ ಪುನಃ।।
ಕತ್ತರಿಸಿದ ಬಾಹುಗಳನ್ನೂ, ಕಾಲುಗಳನ್ನೂ ಮತ್ತು ಅನ್ಯ ಅವಯವಗಳನ್ನು ಕಷ್ಟಪಟ್ಟು ಜೋಡಿಸುತ್ತಾ ತಮ್ಮ ವ್ಯರ್ಥಪ್ರಯತ್ನಕ್ಕಾಗಿ ಪುನಃ ಪುನಃ ಮೂರ್ಛೆಹೋಗುತ್ತಿದ್ದಾರೆ.
11016053a ಉತ್ಕೃತ್ತಶಿರಸಶ್ಚಾನ್ಯಾನ್ವಿಜಗ್ಧಾನ್ಮೃಗಪಕ್ಷಿಭಿಃ।
11016053c ದೃಷ್ಟ್ವಾ ಕಾಶ್ಚಿನ್ನ ಜಾನಂತಿ ಭರ್ತೄನ್ಭರತಯೋಷಿತಃ।।
ಶಿರಗಳು ಕತ್ತರಿಸಲ್ಪಟ್ಟಿರುವುದರಿಂದ ಮತ್ತು ಮೃಗ-ಪಕ್ಷಿಗಳು ಕಿತ್ತು ತಿಂದಿರುವುದರಿಂದ ಈ ಭರತಸ್ತ್ರೀಯರು ತಮ್ಮ ಪತಿಯಂದಿರು ಯಾರೆಂದೂ ಗುರುತಿಸಲಾಗುತ್ತಿಲ್ಲ!
11016054a ಪಾಣಿಭಿಶ್ಚಾಪರಾ ಘ್ನಂತಿ ಶಿರಾಂಸಿ ಮಧುಸೂದನ।
11016054c ಪ್ರೇಕ್ಷ್ಯ ಭ್ರಾತೄನ್ಪಿತೄನ್ಪುತ್ರಾನ್ಪತೀಂಶ್ಚ ನಿಹತಾನ್ಪರೈಃ।।
ಮಧುಸೂದನ! ಅನ್ಯರು ಶತ್ರುಗಳಿಂದ ಹತರಾಗಿರುವ ಸಹೋದರರನ್ನೂ, ತಂದೆಯರನ್ನೂ, ಪುತ್ರರನ್ನೂ, ಪತಿಗಳನ್ನೂ ನೋಡಿ ಕೈಗಳಿಂದ ತಮ್ಮ ತಲೆಗಳನ್ನು ಬಡಿದುಕೊಳ್ಳುತ್ತಿದ್ದಾರೆ!
11016055a ಬಾಹುಭಿಶ್ಚ ಸಖಡ್ಗೈಶ್ಚ ಶಿರೋಭಿಶ್ಚ ಸಕುಂಡಲೈಃ।
11016055c ಅಗಮ್ಯಕಲ್ಪಾ ಪೃಥಿವೀ ಮಾಂಸಶೋಣಿತಕರ್ದಮಾ।।
ಖಡ್ಗಗಳನ್ನು ಹಿಡಿದಿರುವ ಬಾಹುಗಳಿಂದಲೂ, ಕುಂಡಲಗಳನ್ನು ಧರಿಸಿದ್ದ ಶಿರಗಳಿಂದಲೂ, ಮಾಂಸ-ರಕ್ತಗಳ ಕೆಸರಿನಿಂದ ತುಂಬಿಹೋಗಿರುವ ಈ ರಣಭೂಮಿಯಲ್ಲಿ ಓಡಾಡಲೂ ಕಷ್ಟವಾಗುತ್ತಿದೆ!
11016056a ನ ದುಃಖೇಷೂಚಿತಾಃ ಪೂರ್ವಂ ದುಃಖಂ ಗಾಹಂತ್ಯನಿಂದಿತಾಃ।
11016056c ಭ್ರಾತೃಭಿಃ ಪಿತೃಭಿಃ ಪುತ್ರೈರುಪಕೀರ್ಣಾಂ ವಸುಂಧರಾಮ್।।
ಹಿಂದೆಂದೂ ಈ ವಿಧವಾದ ದುಃಖವನ್ನು ಅನುಭವಿಸಿರದಿದ್ದ ಈ ಅನಿಂದಿತೆಯರು ಸಹೋದರರು, ತಂದೆಯರು ಮತ್ತು ಪುತ್ರರಿಂದ ತುಂಬಿಹೋಗಿರುವ ಈ ವಸುಂಧರೆಯನ್ನು ನೋಡಿ ದುಃಖದಲ್ಲಿ ಮುಳುಗಿಹೋಗಿದ್ದಾರೆ!
11016057a ಯೂಥಾನೀವ ಕಿಶೋರೀಣಾಂ ಸುಕೇಶೀನಾಂ ಜನಾರ್ದನ।
11016057c ಸ್ನುಷಾಣಾಂ ಧೃತರಾಷ್ಟ್ರಸ್ಯ ಪಶ್ಯ ವೃಂದಾನ್ಯನೇಕಶಃ।।
ಜನಾರ್ದನ! ಸುಂದರ ಕೇಶರಾಶಿಗಳ ಧೃತರಾಷ್ಟ್ರನ ಈ ಕಿಶೋರೀ ಸೊಸೆಯರು ಹೆಣ್ಣು ಕುದುರೆ ಮರಿಗಳ ಹಿಂಡಿನಂತೆ ಗೋಳಿಡುತ್ತಿರುವುದನ್ನು ನೋಡು!
11016058a ಅತೋ ದುಃಖತರಂ ಕಿಂ ನು ಕೇಶವ ಪ್ರತಿಭಾತಿ ಮೇ।
11016058c ಯದಿಮಾಃ ಕುರ್ವತೇ ಸರ್ವಾ ರೂಪಮುಚ್ಚಾವಚಂ ಸ್ತ್ರಿಯಃ।।
ಎಲ್ಲ ಸ್ತ್ರೀಯರು ಇಲ್ಲಿಗೆ ಬಂದು ಜೋರಾಗಿ ಕೂಗಿಕೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಕೇಶವ! ಇದಕ್ಕಿಂತಲೂ ಹೆಚ್ಚಿನ ದುಃಖವು ನನ್ನ ನೆನಪಿಗೆ ಬರುತ್ತಿಲ್ಲ!
11016059a ನೂನಮಾಚರಿತಂ ಪಾಪಂ ಮಯಾ ಪೂರ್ವೇಷು ಜನ್ಮಸು।
11016059c ಯಾ ಪಶ್ಯಾಮಿ ಹತಾನ್ಪುತ್ರಾನ್ಪೌತ್ರಾನ್ಭ್ರಾತೄಂಶ್ಚ ಕೇಶವ।
11016059e ಏವಮಾರ್ತಾ ವಿಲಪತೀ ದದರ್ಶ ನಿಹತಂ ಸುತಮ್।।
ಕೇಶವ! ಹತರಾದ ಪುತ್ರರನ್ನೂ, ಪೌತ್ರರನ್ನೂ, ಸಹೋದರರನ್ನೂ ನಾನು ನೋಡುತ್ತಿದ್ದೇನೆಂದರೆ ನನ್ನ ಪೂರ್ವ ಜನ್ಮದಲ್ಲಿ ನಿಶ್ಚಯವಾಗಿಯೂ ನಾನು ಪಾಪವನ್ನೆಸಗಿರಬೇಕು!” ಹೀಗೆ ವಿಲಪಿಸುತ್ತಾ ಆರ್ತಳಾಗಿದ್ದ ಗಾಂಧಾರಿಯು ಹತನಾಗಿದ್ದ ತನ್ನ ಮಗನನ್ನು ನೋಡಿದಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಆಯೋಧನದರ್ಶನೇ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಆಯೋಧನದರ್ಶನ ಎನ್ನುವ ಹದಿನಾರನೇ ಅಧ್ಯಾಯವು.