015 ಪೃಥಾಪುತ್ರದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 15

ಸಾರ

ತನಗೆ ನಮಸ್ಕರಿಸಲು ಬಾಗಿದ್ದ ಯುಧಿಷ್ಠಿರನ ಅಂಗುಷ್ಠಗಳನ್ನು ತನ್ನ ಕಣ್ಪಟ್ಟಿಯ ಸಂಧಿಯಿಂದ ಗಾಂಧಾರಿಯು ನೋಡಲು ಅವನ ಅಂಗುಷ್ಠಗಳು ವಿಕಾರರೂಪವನ್ನು ತಾಳಿದುದು (1-8). ಕುಂತಿಯು ತನ್ನ ಮಕ್ಕಳು ಮತ್ತು ದ್ರೌಪದಿಯನ್ನು ಸಂದರ್ಶಿಸಿ ರೋದಿಸಿ, ಅವರನ್ನು ಸಂತವಿಸಿದುದು (9-14). ಗಾಂಧಾರಿಯೂ ದ್ರೌಪದಿಯನ್ನು ಸಂತವಿಸಿದುದು (15-20).

11015001 ವೈಶಂಪಾಯನ ಉವಾಚ
11015001a ಏವಮುಕ್ತ್ವಾ ತು ಗಾಂಧಾರೀ ಯುಧಿಷ್ಠಿರಮಪೃಚ್ಚತ।
11015001c ಕ್ವ ಸ ರಾಜೇತಿ ಸಕ್ರೋಧಾ ಪುತ್ರಪೌತ್ರವಧಾರ್ದಿತಾ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಮಕ್ಕಳು-ಮೊಮ್ಮಕ್ಕಳ ವಧೆಯಿಂದ ಪೀಡಿತಳಾಗಿದ್ದ ಗಾಂಧಾರಿಯು ಕ್ರೋಧದಿಂದ “ಆ ರಾಜನೆಲ್ಲಿ?” ಎಂದು ಯುಧಿಷ್ಠಿರನನ್ನು ಕೇಳಿದಳು.

11015002a ತಾಮಭ್ಯಗಚ್ಚದ್ರಾಜೇಂದ್ರೋ ವೇಪಮಾನಃ ಕೃತಾಂಜಲಿಃ।
11015002c ಯುಧಿಷ್ಠಿರ ಇದಂ ಚೈನಾಂ ಮಧುರಂ ವಾಕ್ಯಮಬ್ರವೀತ್।।

ರಾಜೇಂದ್ರ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಅವಳ ಬಳಿಹೋಗಿ ಈ ಮಧುರ ಮಾತನ್ನಾಡಿದನು:

11015003a ಪುತ್ರಹಂತಾ ನೃಶಂಸೋಽಹಂ ತವ ದೇವಿ ಯುಧಿಷ್ಠಿರಃ।
11015003c ಶಾಪಾರ್ಹಃ ಪೃಥಿವೀನಾಶೇ ಹೇತುಭೂತಃ ಶಪಸ್ವ ಮಾಮ್।।

“ದೇವೀ! ನಿನ್ನ ಪುತ್ರರನ್ನು ವಧಿಸಿದ ಮಹಾಕ್ರೂರಿ ಯುಧಿಷ್ಠಿರನು ನಾನು. ಪೃಥ್ವಿಯ ವಿನಾಶಕ್ಕೆ ಕಾರಣನಾಗಿರುವ ನಾನು ಶಾಪಾರ್ಹನಾಗಿದ್ದೇನೆ. ನನ್ನನ್ನು ಶಪಿಸು!

11015004a ನ ಹಿ ಮೇ ಜೀವಿತೇನಾರ್ಥೋ ನ ರಾಜ್ಯೇನ ಧನೇನ ವಾ।
11015004c ತಾದೃಶಾನ್ಸುಹೃದೋ ಹತ್ವಾ ಮೂಢಸ್ಯಾಸ್ಯ ಸುಹೃದ್ದ್ರುಹಃ।।

ಸುಹೃದರಿಗೆ ದ್ರೋಹವನ್ನೆಸಗಿ ಅಂಥಹ ಸುಹೃದರನ್ನು ಸಂಹರಿಸಿದ ಈ ಮೂಢನಿಗೆ ಜೀವದಲ್ಲಾಗಲೀ, ರಾಜ್ಯದಲ್ಲಾಗಲೀ ಅಥವಾ ಧನದಲ್ಲಾಗಲೀ ಆಗಬೇಕಾದುದೇನೂ ಇಲ್ಲ!”

11015005a ತಮೇವಂವಾದಿನಂ ಭೀತಂ ಸಂನಿಕರ್ಷಗತಂ ತದಾ।
11015005c ನೋವಾಚ ಕಿಂ ಚಿದ್ಗಾಂಧಾರೀ ನಿಃಶ್ವಾಸಪರಮಾ ಭೃಶಮ್।।

ಹತ್ತಿರದಲ್ಲಿಯೇ ಭೀತನಾಗಿ ನಿಂತಿದ್ದ ಆ ಅನಿಂದಿತನಿಗೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದ ಗಾಂಧಾರಿಯು ಏನನ್ನೂ ಹೇಳಲಿಲ್ಲ.

11015006a ತಸ್ಯಾವನತದೇಹಸ್ಯ ಪಾದಯೋರ್ನಿಪತಿಷ್ಯತಃ।
11015006c ಯುಧಿಷ್ಠಿರಸ್ಯ ನೃಪತೇರ್ಧರ್ಮಜ್ಞಾ ಧರ್ಮದರ್ಶಿನೀ।।
11015006e ಅಂಗುಲ್ಯಗ್ರಾಣಿ ದದೃಶೇ ದೇವೀ ಪಟ್ಟಾಂತರೇಣ ಸಾ।।
11015007a ತತಃ ಸ ಕುನಕೀಭೂತೋ ದರ್ಶನೀಯನಖೋ ನೃಪಃ।

ನೃಪತಿ ಯುಧಿಷ್ಠಿರನು ದೇಹವನ್ನು ಬಗ್ಗಿಸಿ ಅವಳ ಪಾದಗಳಲ್ಲಿ ಬೀಳುವುದರಲ್ಲಿದ್ದಾಗ ಧರ್ಮಜ್ಞಾ ಧರ್ಮದರ್ಶಿನೀ ದೇವೀ ಗಾಂಧರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯ ಸಂಧಿಯಿಂದ ಅವನ ಬೆರಳ ತುದಿಗಳನ್ನು ನೋಡಿದಳು. ಕೂಡಲೇ ಆ ನೃಪನ ಸುಂದರ ಉಗುರುಗಳ ಬೆರಳುಗಳು ವಿಕಾರರೂಪವನ್ನು ತಾಳಿದವು.

11015007c ತಂ ದೃಷ್ಟ್ವಾ ಚಾರ್ಜುನೋಽಗಚ್ಚದ್ವಾಸುದೇವಸ್ಯ ಪೃಷ್ಠತಃ।।
11015008a ಏವಂ ಸಂಚೇಷ್ಟಮಾನಾಂಸ್ತಾನಿತಶ್ಚೇತಶ್ಚ ಭಾರತ।
11015008c ಗಾಂಧಾರೀ ವಿಗತಕ್ರೋಧಾ ಸಾಂತ್ವಯಾಮಾಸ ಮಾತೃವತ್।।

ಅದನ್ನು ನೋಡಿ ಅರ್ಜುನನು ವಾಸುದೇವನ ಹಿಂದೆ ಅಡಗಿಕೊಂಡನು. ಭಾರತ! ಅವರೆಲ್ಲರೂ ಕೂಡ ಹೀಗೆ ಅಲ್ಲಿಂದಿಲ್ಲಿಗೆ ಓಡಾಡತೊಡಗಿದರು. ಆಗ ಗಾಂಧಾರಿಯು ಕ್ರೋಧವನ್ನು ತೊರೆದು ತಾಯಿಯಂತೆ ಅವರನ್ನು ಸಂತವಿಸಿದಳು.

11015009a ತಯಾ ತೇ ಸಮನುಜ್ಞಾತಾ ಮಾತರಂ ವೀರಮಾತರಮ್।
11015009c ಅಭ್ಯಗಚ್ಚಂತ ಸಹಿತಾಃ ಪೃಥಾಂ ಪೃಥುಲವಕ್ಷಸಃ।।

ಅವಳಿಂದ ಅನುಜ್ಞೆಯನ್ನು ಪಡೆದು ಆ ವಿಶಾಲವಕ್ಷರು ಒಟ್ಟಿಗೇ ವೀರಮಾತೆ ತಾಯಿ ಪೃಥೆಯ ಬಳಿ ಹೋದರು.

11015010a ಚಿರಸ್ಯ ದೃಷ್ಟ್ವಾ ಪುತ್ರಾನ್ಸಾ ಪುತ್ರಾಧಿಭಿರಭಿಪ್ಲುತಾ।
11015010c ಬಾಷ್ಪಮಾಹಾರಯದ್ದೇವೀ ವಸ್ತ್ರೇಣಾವೃತ್ಯ ವೈ ಮುಖಮ್।।

ಬಹಳ ಕಾಲದ ನಂತರ ತನ್ನ ಪುತ್ರರನ್ನು ಕಂಡು ಕುಂತೀದೇವಿಯು ಸೆರಗಿನಿಂದ ಮುಖವನ್ನು ಮುಚ್ಚಿ ಪುತ್ರರೊಂದಿಗೆ ಕಣ್ಣೀರು ಸುರಿಸಿದಳು.

11015011a ತತೋ ಬಾಷ್ಪಂ ಸಮುತ್ಸೃಜ್ಯ ಸಹ ಪುತ್ರೈಸ್ತಥಾ ಪೃಥಾ।
11015011c ಅಪಶ್ಯದೇತಾನ್ ಶಸ್ತ್ರೌಘೈರ್ಬಹುಧಾ ಪರಿವಿಕ್ಷತಾನ್।।

ಅನಂತರ ಕಣ್ಣೀರನ್ನು ಒರೆಸಿಕೊಂಡು ಪೃಥೆಯು ಶಸ್ತ್ರಪ್ರಹಾರಗಳಿಂದ ಗಾಯಗೊಂಡಿದ್ದ ತನ್ನ ಪುತ್ರರನ್ನು ನೋಡಿದಳು.

11015012a ಸಾ ತಾನೇಕೈಕಶಃ ಪುತ್ರಾನ್ಸಂಸ್ಪೃಶಂತೀ ಪುನಃ ಪುನಃ।
11015012c ಅನ್ವಶೋಚಂತ ದುಃಖಾರ್ತಾ ದ್ರೌಪದೀಂ ಚ ಹತಾತ್ಮಜಾಮ್।
11015012e ರುದತೀಮಥ ಪಾಂಚಾಲೀಂ ದದರ್ಶ ಪತಿತಾಂ ಭುವಿ।।

ಒಬ್ಬೊಬ್ಬರನ್ನಾಗಿ ಅವಳು ತನ್ನ ಮಕ್ಕಳನ್ನು ಪುನಃ ಪುನಃ ಮೈದಡವಿದಳು. ಅನಂತರ ಮಕ್ಕಳನ್ನು ಕಳೆದುಕೊಂಡು ದುಃಖಾರ್ತಳಾಗಿ ರೋದಿಸುತ್ತಾ ನೆಲದ ಬೇಲೆ ಬಿದ್ದಿದ್ದ ಪಾಂಚಾಲೀ ದ್ರೌಪದಿಯನ್ನು ನೋಡಿ ಶೋಕಿಸಿದಳು.

11015013 ದ್ರೌಪದ್ಯುವಾಚ
11015013a ಆರ್ಯೇ ಪೌತ್ರಾಃ ಕ್ವ ತೇ ಸರ್ವೇ ಸೌಭದ್ರಸಹಿತಾ ಗತಾಃ।
11015013c ನ ತ್ವಾಂ ತೇಽದ್ಯಾಭಿಗಚ್ಚಂತಿ ಚಿರದೃಷ್ಟಾಂ ತಪಸ್ವಿನೀಮ್।
11015013e ಕಿಂ ನು ರಾಜ್ಯೇನ ವೈ ಕಾರ್ಯಂ ವಿಹೀನಾಯಾಃ ಸುತೈರ್ಮಮ।।

ದ್ರೌಪದಿಯು ಹೇಳಿದಳು: “ಆರ್ಯೇ! ಸೌಭದ್ರ ಅಭಿಮನ್ಯು ಸಹಿತರಾಗಿ ನಿನ್ನ ಮೊಮ್ಮಕ್ಕಳೆಲ್ಲಾ ಎಲ್ಲಿ ಹೋದರು? ಬಹಳ ಕಾಲ ನೋಡದಿದ್ದ ತಪಸ್ವಿನೀ ನಿನ್ನನ್ನು ನೋಡಲು ಅವರು ಏಕೆ ಬಂದಿಲ್ಲ? ಮಕ್ಕಳನ್ನು ಕಳೆದುಕೊಂಡ ನನಗೆ ಈ ರಾಜ್ಯದಿಂದ ಏನಾಗಬೇಕಾಗಿದೆ?””

11015014 ವೈಶಂಪಾಯನ ಉವಾಚ
11015014a ತಾಂ ಸಮಾಶ್ವಾಸಯಾಮಾಸ ಪೃಥಾ ಪೃಥುಲಲೋಚನಾ।
11015014c ಉತ್ಥಾಪ್ಯ ಯಾಜ್ಞಸೇನೀಂ ತು ರುದತೀಂ ಶೋಕಕರ್ಶಿತಾಮ್।।

ವೈಶಂಪಾಯನನು ಹೇಳಿದನು: “ವಿಶಾಲಲೋಚನೆ ಕುಂತಿಯು ಶೋಕಕರ್ಶಿತಳಾಗಿ ರೋದಿಸುತ್ತಿರುವ ಯಾಜ್ಞಸೇನೆಯನ್ನು ಮೇಲಕ್ಕೆತ್ತಿ ಸಮಾಧಾನಗೊಳಿಸತೊಡಗಿದಳು.

11015015a ತಯೈವ ಸಹಿತಾ ಚಾಪಿ ಪುತ್ರೈರನುಗತಾ ಪೃಥಾ।
11015015c ಅಭ್ಯಗಚ್ಚತ ಗಾಂಧಾರೀಮಾರ್ತಾಮಾರ್ತತರಾ ಸ್ವಯಮ್।।

ಅವಳನ್ನೂ ತನ್ನ ಪುತ್ರರನ್ನೂ ಜೊತೆಯಲ್ಲಿ ಕರೆದುಕೊಂಡು ಪೃಥೆಯು ತನಗಿಂತಲೂ ಆರ್ತಳಾಗಿದ್ದ ಮಾತೆ ಗಾಂಧಾರಿಯ ಬಳಿ ಹೋದಳು.

11015016a ತಾಮುವಾಚಾಥ ಗಾಂಧಾರೀ ಸಹ ವಧ್ವಾ ಯಶಸ್ವಿನೀಮ್।
11015016c ಮೈವಂ ಪುತ್ರೀತಿ ಶೋಕಾರ್ತಾ ಪಶ್ಯ ಮಾಮಪಿ ದುಃಖಿತಾಮ್।।

ಯಶಸ್ವಿನೀ ಕುಂತಿಯೊಡನಿದ್ದ ಸೊಸೆಗೆ ಗಾಂಧಾರಿಯು ಹೇಳಿದಳು: “ಪುತ್ರೀ! ಹೀಗೆ ಶೋಕಾರ್ತಳಾಗಬೇಡ! ದುಃಖಿತಳಾಗಿರುವ ನನ್ನನ್ನೂ ನೋಡು!

11015017a ಮನ್ಯೇ ಲೋಕವಿನಾಶೋಽಯಂ ಕಾಲಪರ್ಯಾಯಚೋದಿತಃ।
11015017c ಅವಶ್ಯಭಾವೀ ಸಂಪ್ರಾಪ್ತಃ ಸ್ವಭಾವಾಲ್ಲೋಮಹರ್ಷಣಃ।।

ಈ ಲೋಕವಿನಾಶವು ಕಾಲಚಕ್ರದಿಂದ ಪ್ರಚೋದಿತವಾದುದೆಂತು ನನಗನ್ನಿಸುತ್ತದೆ. ಅವಶ್ಯವಾಗಿ ಆಗಬೇಗಾಗಿದ್ದುದು ಆಗಿಹೋಯಿತು. ಸ್ವಾಭಾವಿಕವಾಗಿಯೇ ಇದು ರೋಮಹರ್ಷಣವಾದುದು.

11015018a ಇದಂ ತತ್ಸಮನುಪ್ರಾಪ್ತಂ ವಿದುರಸ್ಯ ವಚೋ ಮಹತ್।
11015018c ಅಸಿದ್ಧಾನುನಯೇ ಕೃಷ್ಣೇ ಯದುವಾಚ ಮಹಾಮತಿಃ।।

ಕೃಷ್ಣನು ಶಾಂತಿಗಾಗಿ ಬಂದಾಗ ಮಹಾಮತಿ ವಿದುರನು ಯಾವ ಮಹಾ ಮಾತುಗಳನ್ನಾಡಿದ್ದನೋ ಅದರಂತೆಯೇ ಆಗಿಹೋಯಿತು.

11015019a ತಸ್ಮಿನ್ನಪರಿಹಾರ್ಯೇಽರ್ಥೇ ವ್ಯತೀತೇ ಚ ವಿಶೇಷತಃ।
11015019c ಮಾ ಶುಚೋ ನ ಹಿ ಶೋಚ್ಯಾಸ್ತೇ ಸಂಗ್ರಾಮೇ ನಿಧನಂ ಗತಾಃ।।

ಯಾವುದಕ್ಕೆ ಪರಿಹಾರವೇ ಇಲ್ಲವೋ, ಅದರಲ್ಲೂ ವಿಶೇಷವಾಗಿ ಯಾವುದು ಆಗಿ ಮುಗಿದು ಹೋಗಿದೆಯೋ ಅದರ ಕುರಿತು ಶೋಕಿಸಬೇಡ! ಸಂಗ್ರಾಮದಲ್ಲಿ ನಿಧನಹೊಂದಿದವರ ಸಲುವಾಗಿ ನೀನು ಶೋಕಿಸಬೇಕಾಗಿಲ್ಲ.

11015020a ಯಥೈವ ತ್ವಂ ತಥೈವಾಹಂ ಕೋ ವಾ ಮಾಶ್ವಾಸಯಿಷ್ಯತಿ।
11015020c ಮಮೈವ ಹ್ಯಪರಾಧೇನ ಕುಲಮಗ್ರ್ಯಂ ವಿನಾಶಿತಮ್।।

ನಿನ್ನಂತೆ ನಾನೂ ಕೂಡ. ಯಾರು ಯಾರನ್ನು ಸಮಾಧಾನಗೊಳಿಸಬಲ್ಲರು? ನನ್ನ ಅಪರಾಧದಿಂದಲೇ ಈ ಉಚ್ಛ ಕುಲವು ನಾಶವಾಯಿತು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಪೃಥಾಪುತ್ರದರ್ಶನೇ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಪೃಥಾಪುತ್ರದರ್ಶನ ಎನ್ನುವ ಹದಿನೈದನೇ ಅಧ್ಯಾಯವು.