ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 14
ಸಾರ
ಭೀಮಸೇನ-ಗಾಂಧಾರೀ ಸಂವಾದ (1-22).
11014001 ವೈಶಂಪಾಯನ ಉವಾಚ
11014001a ತಚ್ಚ್ರುತ್ವಾ ವಚನಂ ತಸ್ಯಾ ಭೀಮಸೇನೋಽಥ ಭೀತವತ್।
11014001c ಗಾಂಧಾರೀಂ ಪ್ರತ್ಯುವಾಚೇದಂ ವಚಃ ಸಾನುನಯಂ ತದಾ।।
ವೈಶಂಪಾಯನನು ಹೇಳಿದನು: “ಅವಳ ಆ ಮಾತನ್ನು ಕೇಳಿದ ಭೀಮಸೇನನು ಭಯಗೊಂಡು ಗಾಂಧಾರಿಗೆ ಈ ಅನುನಯ ಮಾತುಗಳನ್ನಾಡಿದನು:
11014002a ಅಧರ್ಮೋ ಯದಿ ವಾ ಧರ್ಮಸ್ತ್ರಾಸಾತ್ತತ್ರ ಮಯಾ ಕೃತಃ।
11014002c ಆತ್ಮಾನಂ ತ್ರಾತುಕಾಮೇನ ತನ್ಮೇ ತ್ವಂ ಕ್ಷಂತುಮರ್ಹಸಿ।।
“ನನ್ನ ಪ್ರಾಣಗಳನ್ನು ಉಳಿಸಿಕೊಳ್ಳಲೋಸುಗ, ಭಯದಿಂದ ನಾನು ಅಲ್ಲಿ ಅಧರ್ಮದ ಅಥವಾ ಧರ್ಮದ ಆ ಕೃತ್ಯವನ್ನು ಮಾಡಿದೆ. ನನ್ನನ್ನು ನೀನು ಕ್ಷಮಿಸಬೇಕು!
11014003a ನ ಹಿ ಯುದ್ಧೇನ ಪುತ್ರಸ್ತೇ ಧರ್ಮೇಣ ಸ ಮಹಾಬಲಃ।
11014003c ಶಕ್ಯಃ ಕೇನ ಚಿದುದ್ಯಂತುಮತೋ ವಿಷಮಮಾಚರಮ್।।
ಧರ್ಮಪೂರ್ವಕವಾಗಿ ನಿನ್ನ ಮಗನೊಂದಿಗೆ ಯುದ್ಧಮಾಡಲು ಮಹಾಬಲಶಾಲಿಗೂ ಶಕ್ಯವಾಗಿರಲಿಲ್ಲ. ಆದುದರಿಂದಲೇ ನಾನು ಧರ್ಮಕ್ಕೆ ವಿಪರೀತವಾಗಿ ನಡೆದುಕೊಂಡೆನು.
11014004a ಸೈನ್ಯಸ್ಯೈಕೋಽವಶಿಷ್ಟೋಽಯಂ ಗದಾಯುದ್ಧೇ ಚ ವೀರ್ಯವಾನ್।
11014004c ಮಾಂ ಹತ್ವಾ ನ ಹರೇದ್ರಾಜ್ಯಮಿತಿ ಚೈತತ್ಕೃತಂ ಮಯಾ।।
ಸೈನ್ಯಗಳಲ್ಲಿ ಉಳಿದುಕೊಂಡಿರುವ ಆ ಒಬ್ಬನೇ ವೀರ್ಯವಾನನು ಗದಾಯುದ್ಧದಲ್ಲಿ ನನ್ನನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಬಹುದು ಎಂದು ನಾನು ಹಾಗೆ ಮಾಡಿದೆ.
11014005a ರಾಜಪುತ್ರೀಂ ಚ ಪಾಂಚಾಲೀಮೇಕವಸ್ತ್ರಾಂ ರಜಸ್ವಲಾಮ್।
11014005c ಭವತ್ಯಾ ವಿದಿತಂ ಸರ್ವಮುಕ್ತವಾನ್ಯತ್ಸುತಸ್ತವ।।
ಏಕವಸ್ತ್ರವನ್ನು ಧರಿಸಿದ್ದ ರಜಸ್ವಲೆ ರಾಜಪುತ್ರೀ ಪಾಂಚಾಲಿಯನ್ನು ಕಾಡಿದಾಗ ನಿನ್ನ ಮಗನಿಗೆ ನಾನು ಹೇಳಿದುದೆಲ್ಲವೂ ನಿನಗೆ ತಿಳಿದೇ ಇದೆ.
11014006a ಸುಯೋಧನಮಸಂಗೃಹ್ಯ ನ ಶಕ್ಯಾ ಭೂಃ ಸಸಾಗರಾ।
11014006c ಕೇವಲಾ ಭೋಕ್ತುಮಸ್ಮಾಭಿರತಶ್ಚೈತತ್ಕೃತಂ ಮಯಾ।।
ದುರ್ಯೋಧನನನ್ನು ಇಲ್ಲವಾಗಿಸದೇ ಸಾಗರಗಳೊಂದಿಗೆ ಈ ಭೂಮಿಯನ್ನು ಭೋಗಿಸಲು ನಾವು ಶಕ್ಯರಾಗಿರಲಿಲ್ಲ. ಆದುದರಿಂದ ನಾನು ಹಾಗೆ ಮಾಡಿದೆ.
11014007a ತಚ್ಚಾಪ್ಯಪ್ರಿಯಮಸ್ಮಾಕಂ ಪುತ್ರಸ್ತೇ ಸಮುಪಾಚರತ್।
11014007c ದ್ರೌಪದ್ಯಾ ಯತ್ಸಭಾಮಧ್ಯೇ ಸವ್ಯಮೂರುಮದರ್ಶಯತ್।।
ಸಭಾಮಧ್ಯದಲ್ಲಿ ದ್ರೌಪದಿಗೆ ತನ್ನ ಎಡತೊಡೆಯನ್ನು ತೋರಿಸಿ ನಿನ್ನ ಮಗನೂ ಕೂಡ ನಮ್ಮೊಡನೆ ಅಪ್ರಿಯವಾಗಿ ನಡೆದುಕೊಂಡಿದ್ದನು.
11014008a ತತ್ರೈವ ವಧ್ಯಃ ಸೋಽಸ್ಮಾಕಂ ದುರಾಚಾರೋಽಂಬ ತೇ ಸುತಃ।
11014008c ಧರ್ಮರಾಜಾಜ್ಞಯಾ ಚೈವ ಸ್ಥಿತಾಃ ಸ್ಮ ಸಮಯೇ ತದಾ।।
ಅಮ್ಮಾ! ಆಗಲೇ ದುರಾಚಾರನಾದ ನಿನ್ನ ಮಗನನ್ನು ನಾವು ಸಂಹರಿಸಬೇಕಾಗಿತ್ತು. ಆದರೆ ಧರ್ಮರಾಜನ ಆಜ್ಞೆಯಂತೆ ನಿಯಮಕ್ಕೆ ಕಟ್ಟುಬಿದ್ದು ಸುಮ್ಮನೇ ಕುಳಿತಿದ್ದೆವು.
11014009a ವೈರಮುದ್ಧುಕ್ಷಿತಂ ರಾಜ್ಞಿ ಪುತ್ರೇಣ ತವ ತನ್ಮಹತ್।
11014009c ಕ್ಲೇಶಿತಾಶ್ಚ ವನೇ ನಿತ್ಯಂ ತತ ಏತತ್ಕೃತಂ ಮಯಾ।।
ರಾಣೀ! ನಿನ್ನ ಮಗನೇ ಈ ವೈರವನ್ನು ಉರಿಸಿ ಬೆಳೆಸಿದನು. ವನದಲ್ಲಿಯೂ ನಿತ್ಯವೂ ಮಹಾ ಕಷ್ಟಗಳನ್ನು ಅನುಭವಿಸುವಂತೆ ಮಾಡಿದನು. ಆದುದರಿಂದಲೇ ನಾನು ಹೀಗೆ ಮಾಡಿದೆ.
11014010a ವೈರಸ್ಯಾಸ್ಯ ಗತಃ ಪಾರಂ ಹತ್ವಾ ದುರ್ಯೋಧನಂ ರಣೇ।
11014010c ರಾಜ್ಯಂ ಯುಧಿಷ್ಠಿರಃ ಪ್ರಾಪ್ತೋ ವಯಂ ಚ ಗತಮನ್ಯವಃ।।
ರಣದಲ್ಲಿ ದುರ್ಯೋಧನನನ್ನು ಸಂಹರಿಸಿ ನಾವು ವೈರವನ್ನು ದಾಟಿದ್ದೇವೆ. ಯುಧಿಷ್ಠಿರನು ರಾಜ್ಯವನ್ನು ಪಡೆದು ನಮ್ಮ ಕೋಪವೂ ಹೊರಟುಹೋಗಿದೆ.”
11014011 ಗಾಂಧಾರ್ಯುವಾಚ।
11014011a ನ ತಸ್ಯೈಷ ವಧಸ್ತಾತ ಯತ್ಪ್ರಶಂಸಸಿ ಮೇ ಸುತಮ್।
11014011c ಕೃತವಾಂಶ್ಚಾಪಿ ತತ್ಸರ್ವಂ ಯದಿದಂ ಭಾಷಸೇ ಮಯಿ।।
ಗಾಂಧಾರಿಯು ಹೇಳಿದಳು: “ನನ್ನ ಮಗನನ್ನು ನೀನು ಪ್ರಶಂಸಿಸುತ್ತಿರುವೆಯಾದುದರಿಂದ ಅವನ ವಧೆಯೇ ನಡೆಯಲಿಲ್ಲವೆಂದು ತಿಳಿಯುತ್ತೇನೆ. ನನ್ನಲ್ಲಿ ಹೇಳಿದಂತೆ ನೀನು ಅವೆಲ್ಲವನ್ನೂ ಮಾಡಿದ್ದೀಯೆ ಹೌದು.
11014012a ಹತಾಶ್ವೇ ನಕುಲೇ ಯತ್ತದ್ವೃಷಸೇನೇನ ಭಾರತ।
11014012c ಅಪಿಬಃ ಶೋಣಿತಂ ಸಂಖ್ಯೇ ದುಃಶಾಸನಶರೀರಜಮ್।।
ಭಾರತ! ವೃಷಸೇನನು ನಕುಲನ ಕುದುರೆಗಳನ್ನು ಸಂಹರಿಸಲು ರಣದಲ್ಲಿ ನೀನು ದುಃಶಾಸನನ ಶರೀರದ ರಕ್ತವನ್ನು ಕುಡಿದೆಯಲ್ಲವೇ?
11014013a ಸದ್ಭಿರ್ವಿಗರ್ಹಿತಂ ಘೋರಮನಾರ್ಯಜನಸೇವಿತಮ್।
11014013c ಕ್ರೂರಂ ಕರ್ಮಾಕರೋಃ ಕಸ್ಮಾತ್ತದಯುಕ್ತಂ ವೃಕೋದರ।।
ಸತ್ಪುರುಷರಿಂದ ನಿಂದನೀಯವೂ, ಘೋರವೂ, ಅನಾರ್ಯರು ಮಾಡುವಂಥಹುದೂ ಆದ ಆ ಕ್ರೂರ ಕರ್ಮವನ್ನು ನೀನು ಮಾಡಿದ್ದೀಯೆ. ವೃಕೋದರ! ಅದು ನಿನಗೆ ಹೇಗೆ ಯುಕ್ತವಾದುದು?”
11014014 ಭೀಮಸೇನ ಉವಾಚ
11014014a ಅನ್ಯಸ್ಯಾಪಿ ನ ಪಾತವ್ಯಂ ರುಧಿರಂ ಕಿಂ ಪುನಃ ಸ್ವಕಮ್।
11014014c ಯಥೈವಾತ್ಮಾ ತಥಾ ಭ್ರಾತಾ ವಿಶೇಷೋ ನಾಸ್ತಿ ಕಶ್ಚನ।।
ಭೀಮಸೇನನು ಹೇಳಿದನು: “ಬೇರೆಯವರಿಂದ ಸುರಿಯುತ್ತಿರುವ ರಕ್ತವನ್ನೇ ಕುಡಿಯಬಾರದೆಂದಿರುವಾಗ ನನ್ನದೇ ರಕ್ತವನ್ನು ನಾನೇಕೆ ಕುಡಿಯುತ್ತೇನೆ? ನನ್ನಂತೆಯೇ ನನ್ನ ಸಹೋದರ ದುಃಶಾಸನ ಕೂಡ. ನಮ್ಮಿಬ್ಬರಲ್ಲಿ ವ್ಯತ್ಯಾಸವೇ ಇರಲಿಲ್ಲ.
11014015a ರುಧಿರಂ ನ ವ್ಯತಿಕ್ರಾಮದ್ದಂತೋಷ್ಠಂ ಮೇಽಂಬ ಮಾ ಶುಚಃ।
11014015c ವೈವಸ್ವತಸ್ತು ತದ್ವೇದ ಹಸ್ತೌ ಮೇ ರುಧಿರೋಕ್ಷಿತೌ।।
ಅಮ್ಮಾ! ಅವನ ರಕ್ತವು ನನ್ನ ತುಟಿ ಮತ್ತು ಹಲ್ಲುಗಳನ್ನು ದಾಟಿ ಒಳಗೆ ಹೋಗಲೇ ಇಲ್ಲ. ಶೋಕಿಸಬೇಡ! ಇದಕ್ಕೆ ಸೂರ್ಯಪುತ್ರ ಯಮನೇ ಸಾಕ್ಷಿ! ನನ್ನೆರಡು ಕೈಗಳೂ ರಕ್ತದಿಂದ ತೋಯ್ದುಹೋಗಿದ್ದವು.
11014016a ಹತಾಶ್ವಂ ನಕುಲಂ ದೃಷ್ಟ್ವಾ ವೃಷಸೇನೇನ ಸಂಯುಗೇ।
11014016c ಭ್ರಾತೄಣಾಂ ಸಂಪ್ರಹೃಷ್ಟಾನಾಂ ತ್ರಾಸಃ ಸಂಜನಿತೋ ಮಯಾ।।
ಯುದ್ಧದಲ್ಲಿ ವೃಷಸೇನನಿಂದ ನಕುಲನ ಕುದುರೆಗಳು ಹತವಾದುದನ್ನು ಕಂಡು ಸಂಪ್ರಹೃಷ್ಟರಾದ ಸಹೋದರರು ನನ್ನಲ್ಲಿ ಭಯವನ್ನುಂಟುಮಾಡಿದರು.
11014017a ಕೇಶಪಕ್ಷಪರಾಮರ್ಶೇ ದ್ರೌಪದ್ಯಾ ದ್ಯೂತಕಾರಿತೇ।
11014017c ಕ್ರೋಧಾದ್ಯದಬ್ರುವಂ ಚಾಹಂ ತಚ್ಚ ಮೇ ಹೃದಿ ವರ್ತತೇ।।
ದ್ಯೂತವಾಡುವಾಗ ದ್ರೌಪದಿಯ ಕೇಶಗಳನ್ನು ಹಿಡಿದು ಎಳೆದುತರುವಾಗ ನಾನು ಕ್ರೋಧದಿಂದ ಆಡಿದ ಮಾತು ನನ್ನ ಹೃದಯದಲ್ಲಿ ತಿರುಗುತ್ತಲೇ ಇತ್ತು.
11014018a ಕ್ಷತ್ರಧರ್ಮಾಚ್ಚ್ಯುತೋ ರಾಜ್ಞಿ ಭವೇಯಂ ಶಾಸ್ವತೀಃ ಸಮಾಃ।
11014018c ಪ್ರತಿಜ್ಞಾಂ ತಾಮನಿಸ್ತೀರ್ಯ ತತಸ್ತತ್ಕೃತವಾನಹಮ್।।
ರಾಣೀ! ಆ ಪ್ರತಿಜ್ಞೆಯನ್ನು ಪೂರೈಸದಿದ್ದರೆ ಶಾಶ್ವತವಾಗಿ ಕ್ಷತ್ರಧರ್ಮದಿಂದ ಚ್ಯುತನಾಗುವೆನೆಂಬ ಭಯದಿಂದ ನಾನು ಹಾಗೆ ಮಾಡಿದೆ.
11014019a ನ ಮಾಮರ್ಹಸಿ ಗಾಂಧಾರಿ ದೋಷೇಣ ಪರಿಶಂಕಿತುಮ್।
11014019c ಅನಿಗೃಹ್ಯ ಪುರಾ ಪುತ್ರಾನಸ್ಮಾಸ್ವನಪಕಾರಿಷು।।
ಗಾಂಧಾರೀ! ನಮಗೆ ಅಪಕಾರವನ್ನೆಸಗಿದ ಪುತ್ರರನ್ನು ಮೊದಲೇ ನಿಯಂತ್ರಿಸಿಟ್ಟುಕೊಳ್ಳದೇ ಈಗ ನನ್ನನ್ನು ದೋಷಿತನೆಂದು ಪರಿಶಂಕಿಸುವುದು ಸರಿಯಲ್ಲ.”
11014020 ಗಾಂಧಾರ್ಯುವಾಚ।
11014020a ವೃದ್ಧಸ್ಯಾಸ್ಯ ಶತಂ ಪುತ್ರಾನ್ನಿಘ್ನಂಸ್ತ್ವಮಪರಾಜಿತಃ।
11014020c ಕಸ್ಮಾನ್ನ ಶೇಷಯಃ ಕಂ ಚಿದ್ಯೇನಾಲ್ಪಮಪರಾಧಿತಮ್।।
ಗಾಂಧಾರಿಯು ಹೇಳಿದಳು: “ಈ ವೃದ್ಧರ ನೂರು ಮಕ್ಕಳನ್ನೂ ಸಂಹರಿಸಿ ಅಪರಾಜಿತನಾಗಿರುವ ನೀನು ಅಲ್ಪ ಅಪರಾಧಮಾಡಿದ್ದ ಒಬ್ಬನನ್ನಾದರೂ ಏಕೆ ಉಳಿಸಲಿಲ್ಲ?
11014021a ಸಂತಾನಮಾವಯೋಸ್ತಾತ ವೃದ್ಧಯೋರ್ಹೃತರಾಜ್ಯಯೋಃ।
11014021c ಕಥಮಂಧದ್ವಯಸ್ಯಾಸ್ಯ ಯಷ್ಟಿರೇಕಾ ನ ವರ್ಜಿತಾ।।
ಮಗನೇ! ರಾಜ್ಯವನ್ನು ಕಳೆದುಕೊಂಡ ಈ ವೃದ್ಧರಿಗೆ ಒಂದು ಸಂತಾನವೂ ಇಲ್ಲವಾಗಿದೆ. ಈ ಅಂಧರಿಬ್ಬರಿಗೆ ಊರುಗೋಲಾಗಿರಲು ಒಬ್ಬನನ್ನಾದರೂ ನೀನು ಏಕೆ ಜೀವಸಹಿತ ಬಿಡಲಿಲ್ಲ?
11014022a ಶೇಷೇ ಹ್ಯವಸ್ಥಿತೇ ತಾತ ಪುತ್ರಾಣಾಮಂತಕೇ ತ್ವಯಿ।
11014022c ನ ಮೇ ದುಃಖಂ ಭವೇದೇತದ್ಯದಿ ತ್ವಂ ಧರ್ಮಮಾಚರಃ।।
ಮಗನೇ! ಪುತ್ರರನ್ನು ಕೊಲ್ಲುವಾಗ ನೀನು ಧರ್ಮವನ್ನಾಚರಿಸಿ ಒಬ್ಬನನ್ನಾದರೂ ಉಳಿಸಿದ್ದರೆ ನನಗೆ ಇಷ್ಟೊಂದು ದುಃಖವಾಗುತ್ತಿರಲಿಲ್ಲ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀಸಾಂತ್ವನಾಯಾಂ ಚತುರ್ದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀಸಾಂತ್ವನ ಎನ್ನುವ ಹದಿನಾಲ್ಕನೇ ಅಧ್ಯಾಯವು.