ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 12
ಸಾರ
ಕೃಷ್ಣ-ಧೃತರಾಷ್ಟ್ರರ ಸಂವಾದ (1-15).
11012001 ವೈಶಂಪಾಯನ ಉವಾಚ
11012001a ತತ ಏನಮುಪಾತಿಷ್ಠನ್ ಶೌಚಾರ್ಥಂ ಪರಿಚಾರಕಾಃ।
11012001c ಕೃತಶೌಚಂ ಪುನಶ್ಚೈನಂ ಪ್ರೋವಾಚ ಮಧುಸೂದನಃ।।
ವೈಶಂಪಾಯನನು ಹೇಳಿದನು: “ಆಗ ಶೌಚಕ್ಕಾಗಿ ಅವನನ್ನು ಅವನ ಪರಿಚಾರಕರು ಮೇಲೆತ್ತಿದರು. ಅವನು ಶೌಚವನ್ನು ಮಾಡಿದ ನಂತರ ಮಧುಸೂದನನು ಪುನಃ ಇದನ್ನು ಹೇಳಿದನು:
11012002a ರಾಜನ್ನಧೀತಾ ವೇದಾಸ್ತೇ ಶಾಸ್ತ್ರಾಣಿ ವಿವಿಧಾನಿ ಚ।
11012002c ಶ್ರುತಾನಿ ಚ ಪುರಾಣಾನಿ ರಾಜಧರ್ಮಾಶ್ಚ ಕೇವಲಾಃ।।
“ರಾಜನ್! ನೀನು ವೇದಗಳನ್ನೂ ವಿವಿಧ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವೆ. ಪುರಾಣಗಳನ್ನೂ ರಾಜಧರ್ಮಗಳನ್ನೂ ಕೇಳಿರುವೆ.
11012003a ಏವಂ ವಿದ್ವಾನ್ಮಹಾಪ್ರಾಜ್ಞ ನಾಕಾರ್ಷೀರ್ವಚನಂ ತದಾ।
11012003c ಪಾಂಡವಾನಧಿಕಾನ್ಜಾನನ್ಬಲೇ ಶೌರ್ಯೇ ಚ ಕೌರವ।।
ಮಹಾಪ್ರಾಜ್ಞ! ಕೌರವ! ಈ ರೀತಿ ವಿಧ್ವಾಂಸನಾಗಿರುವ ನೀನು ಬಲ ಮತ್ತು ಶೌರ್ಯಗಳಲ್ಲಿ ಪಾಂಡವರು ಅಧಿಕರೆಂದು ತಿಳಿದೂ ಆಗ ಋಷಿಗಳ ವಚನವನ್ನು ಕೇಳಲಿಲ್ಲ.
11012004a ರಾಜಾ ಹಿ ಯಃ ಸ್ಥಿರಪ್ರಜ್ಞಃ ಸ್ವಯಂ ದೋಷಾನವೇಕ್ಷತೇ।
11012004c ದೇಶಕಾಲವಿಭಾಗಂ ಚ ಪರಂ ಶ್ರೇಯಃ ಸ ವಿಂದತಿ।।
ಯಾವ ರಾಜನು ಸ್ಥಿರಪ್ರಜ್ಞನಾಗಿದ್ದುಕೊಂಡು ದೇಶ-ಕಾಲಗಳಿಗೆ ತಕ್ಕಂತೆ ತನ್ನ ದೋಷಗಳನ್ನು ತಾನೇ ಅರಿತುಕೊಳ್ಳುತ್ತಾನೋ ಅವನಿಗೆ ಪರಮ ಶ್ರೇಯಸ್ಸುಂಟಾಗುತ್ತದೆ.
11012005a ಉಚ್ಯಮಾನಂ ಚ ಯಃ ಶ್ರೇಯೋ ಗೃಹ್ಣೀತೇ ನೋ ಹಿತಾಹಿತೇ।
11012005c ಆಪದಂ ಸಮನುಪ್ರಾಪ್ಯ ಸ ಶೋಚತ್ಯನಯೇ ಸ್ಥಿತಃ।।
ಶ್ರೇಯಮಾತುಗಳನ್ನು ಹೇಳುತ್ತಿದ್ದರೂ ಅವುಗಳ ಹಿತಾಹಿತವನ್ನು ಗಮನಿಸದೇ ಗ್ರಹಣಮಾಡದಿರುವವನು ಅನ್ಯಾಯಮಾರ್ಗದಲ್ಲಿ ನಡೆದು ಆಪತ್ತನ್ನು ಪಡೆದು ಮುಂದೆ ಶೋಕಿಸುತ್ತಾನೆ.
11012006a ತತೋಽನ್ಯವೃತ್ತಮಾತ್ಮಾನಂ ಸಮವೇಕ್ಷಸ್ವ ಭಾರತ।
11012006c ರಾಜಂಸ್ತ್ವಂ ಹ್ಯವಿಧೇಯಾತ್ಮಾ ದುರ್ಯೋಧನವಶೇ ಸ್ಥಿತಃ।।
ಭಾರತ! ಆಗ ನೀನು ವ್ಯವಹರಿಸಿದುದನ್ನು ನೀನೇ ವಿಮರ್ಶಿಸು. ರಾಜನ್! ಆಗ ನೀನು ನಿನ್ನ ಅಧೀನನಾಗಿರದೇ ದುರ್ಯೋಧನನ ವಶದಲ್ಲಿದ್ದೆ.
11012007a ಆತ್ಮಾಪರಾಧಾದಾಯಸ್ತಸ್ತತ್ಕಿಂ ಭೀಮಂ ಜಿಘಾಂಸಸಿ।
11012007c ತಸ್ಮಾತ್ಸಂಯಚ್ಚ ಕೋಪಂ ತ್ವಂ ಸ್ವಮನುಸ್ಮೃತ್ಯ ದುಷ್ಕೃತಮ್।।
ನಿನ್ನದೇ ಅಪರಾಧದಿಂದ ಆದುದಕ್ಕೆ ಭೀಮಸೇನನನ್ನು ಏಕೆ ಕೊಲ್ಲಲು ಬಯಸುವೆ? ಆದುದರಿಂದ ನೀನು ಮಾಡಿದ ದುಷ್ಕೃತ್ಯಗಳನ್ನು ಸ್ಮರಿಸಿಕೊಂಡು ನಿನ್ನ ಕೋಪವನ್ನು ಹಿಡಿತದಲ್ಲಿಟ್ಟುಕೋ!
11012008a ಯಸ್ತು ತಾಂ ಸ್ಪರ್ಧಯಾ ಕ್ಷುದ್ರಃ ಪಾಂಚಾಲೀಮಾನಯತ್ಸಭಾಮ್।
11012008c ಸ ಹತೋ ಭೀಮಸೇನೇನ ವೈರಂ ಪ್ರತಿಚಿಕೀರ್ಷತಾ।।
ಸ್ಪರ್ಧಾಭಾವದಿಂದ ಪಾಂಚಾಲಿಯನ್ನು ಸಭೆಗೆ ಎಳೆದುತಂದ ಆ ಕ್ಷುದ್ರನು ಭೀಮಸೇನನಿಂದ ಹತನಾಗಿ, ವೈರಕ್ಕೆ ಪ್ರತೀಕಾರವಾಯಿತು.
11012009a ಆತ್ಮನೋಽತಿಕ್ರಮಂ ಪಶ್ಯ ಪುತ್ರಸ್ಯ ಚ ದುರಾತ್ಮನಃ।
11012009c ಯದನಾಗಸಿ ಪಾಂಡೂನಾಂ ಪರಿತ್ಯಾಗಃ ಪರಂತಪ।।
ಪರಂತಪ! ನಿನ್ನ ಮತ್ತು ನಿನ್ನ ಮಗ ಆ ದುರಾತ್ಮನ ಅನ್ಯಾಯಗಳನ್ನು ನೋಡು. ನಿರಪರಾಧಿಗಳಾದ ಪಾಂಡವರನ್ನು ಆಗ ನೀನು ಪರಿತ್ಯಜಿಸಿದೆ.”
11012010a ಏವಮುಕ್ತಃ ಸ ಕೃಷ್ಣೇನ ಸರ್ವಂ ಸತ್ಯಂ ಜನಾಧಿಪ।
11012010c ಉವಾಚ ದೇವಕೀಪುತ್ರಂ ಧೃತರಾಷ್ಟ್ರೋ ಮಹೀಪತಿಃ।।
ಕೃಷ್ಣನಿಂದ ಹೀಗೆ ಸರ್ವ ಸತ್ಯವನ್ನೂ ಹೇಳಿಸಿಕೊಂಡ ಜನಾಧಿಪ ಮಹೀಪತಿ ಧೃತರಾಷ್ಟ್ರನು ದೇವಕೀಪುತ್ರನಿಗೆ ಇಂತೆಂದನು:
11012011a ಏವಮೇತನ್ಮಹಾಬಾಹೋ ಯಥಾ ವದಸಿ ಮಾಧವ।
11012011c ಪುತ್ರಸ್ನೇಹಸ್ತು ಧರ್ಮಾತ್ಮನ್ಧೈರ್ಯಾನ್ಮಾಂ ಸಮಚಾಲಯತ್।।
“ಮಹಾಬಾಹೋ! ಮಾಧವ! ಧರ್ಮಾತ್ಮನ್! ನೀನು ಹೇಳಿದಂತೆಯೇ ನಡೆದುಹೋಯಿತು! ಪುತ್ರಸ್ನೇಹವೇ ನನ್ನ ಧೈರ್ಯವನ್ನು ಕೆಡಿಸಿತು!
11012012a ದಿಷ್ಟ್ಯಾ ತು ಪುರುಷವ್ಯಾಘ್ರೋ ಬಲವಾನ್ಸತ್ಯವಿಕ್ರಮಃ।
11012012c ತ್ವದ್ಗುಪ್ತೋ ನಾಗಮತ್ಕೃಷ್ಣ ಭೀಮೋ ಬಾಹ್ವಂತರಂ ಮಮ।।
ಕೃಷ್ಣ! ಒಳ್ಳೆಯದಾಯಿತು ನಿನ್ನಿಂದ ರಕ್ಷಿತನಾದ ಪುರುಷವ್ಯಾಘ್ರ ಬಲವಾನ್ ಸತ್ಯವಿಕ್ರಮಿ ಭೀಮನು ನನ್ನ ಬಾಹುಗಳ ಮಧ್ಯೆ ಬರಲಿಲ್ಲ!
11012013a ಇದಾನೀಂ ತ್ವಹಮೇಕಾಗ್ರೋ ಗತಮನ್ಯುರ್ಗತಜ್ವರಃ।
11012013c ಮಧ್ಯಮಂ ಪಾಂಡವಂ ವೀರಂ ಸ್ಪ್ರಷ್ಟುಮಿಚ್ಚಾಮಿ ಕೇಶವ।।
ಈಗ ನಾನು ಏಕಾಗ್ರಚಿತ್ತನಾಗಿದ್ದೇನೆ. ಸಿಟ್ಟು ಹೊರಟುಹೋಗಿದೆ. ತಾಪವೂ ಇಲ್ಲವಾಗಿದೆ. ಕೇಶವ! ಮಧ್ಯಮ ಪಾಂಡವ ವೀರನನ್ನು ಮುಟ್ಟಲು ಬಯಸುತ್ತೇನೆ.
11012014a ಹತೇಷು ಪಾರ್ಥಿವೇಂದ್ರೇಷು ಪುತ್ರೇಷು ನಿಹತೇಷು ಚ।
11012014c ಪಾಂಡುಪುತ್ರೇಷು ಮೇ ಶರ್ಮ ಪ್ರೀತಿಶ್ಚಾಪ್ಯವತಿಷ್ಠತೇ।।
ಪಾರ್ಥಿವೇಂದ್ರರು ಮತ್ತು ಪುತ್ರರು ಹತರಾದ ಮೇಲೆ ಪಾಂಡುಪುತ್ರರ ಮೇಲೆಯೇ ನನ್ನ ಸುಖ ಮತ್ತು ಪ್ರೀತಿಗಳು ಪ್ರತಿಷ್ಠಿತವಾಗಿರುತ್ತವೆ.”
11012015a ತತಃ ಸ ಭೀಮಂ ಚ ಧನಂಜಯಂ ಚ ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ।
11012015c ಪಸ್ಪರ್ಶ ಗಾತ್ರೈಃ ಪ್ರರುದನ್ಸುಗಾತ್ರಾನ್ ಆಶ್ವಾಸ್ಯ ಕಲ್ಯಾಣಮುವಾಚ ಚೈನಾನ್।।
ಅನಂತರ ಅವನು ಭೀಮ, ಧನಂಜಯ, ಮತ್ತು ಪುರುಷಪ್ರವೀರ ಮಾದ್ರೀಪುತ್ರರ ಅಂಗಾಂಗಗಳನ್ನು ಮುಟ್ಟಿ ನೇವರಿಸಿದನು. ಅವರನ್ನು ಸಂತಯಿಸಿ ಮಂಗಳವಾಗಲೆಂದು ಆಶೀರ್ವಾದಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಧೃತರಾಷ್ಟ್ರಕೋಪವಿಮೋಚನೇ ಪಾಂಡವಪರಿಶ್ವಂಗೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಧೃತರಾಷ್ಟ್ರಕೋಪವಿಮೋಚನೇ ಪಾಂಡವಪರಿಶ್ವಂಗ ಎನ್ನುವ ಹನ್ನೆರಡನೇ ಅಧ್ಯಾಯವು.