011 ಆಯಸಭೀಮಭಂಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 11

ಸಾರ

ಹಸ್ತಿನಾಪುರದಿಂದ ಧೃತರಾಷ್ಟ್ರನು ರಣಭೂಮಿಯ ಕಡೆ ಬರುತ್ತಿದ್ದಾನೆಂದು ತಿಳಿದ ಯುಧಿಷ್ಠಿರನು ತಮ್ಮಂದಿರು, ಕೃಷ್ಣ, ಸಾತ್ಯಕಿ, ದ್ರೌಪದಿ ಮತ್ತು ಇತರ ಸ್ತ್ರೀಯರೊಡನೆ ಹೊರಟು ಮಾರ್ಗದಲ್ಲಿ ಧೃತರಾಷ್ಟ್ರನನ್ನು ಕಂಡು ನಮಸ್ಕರಿಸಿದುದು (1-10). ಕೃಷ್ಣನು ಲೋಹದ ಪ್ರತಿಮೆಯನ್ನು ಮುಂದಿಟ್ಟು ಭೀಮಸೇನನನ್ನು ಧೃತರಾಷ್ಟ್ರನ ಅಪ್ಪುಗೆಯಿಂದ ವಿನಾಶಹೊಂದದಂತೆ ರಕ್ಷಿಸಿದುದು (11-30).

11011001 ವೈಶಂಪಾಯನ ಉವಾಚ
11011001a ಹತೇಷು ಸರ್ವಸೈನ್ಯೇಷು ಧರ್ಮರಾಜೋ ಯುಧಿಷ್ಠಿರಃ।
11011001c ಶುಶ್ರುವೇ ಪಿತರಂ ವೃದ್ಧಂ ನಿರ್ಯಾತಂ ಗಜಸಾಹ್ವಯಾತ್।।

ವೈಶಂಪಾಯನನು ಹೇಳಿದನು: “ಸರ್ವಸೇನೆಗಳೂ ಹತಗೊಳ್ಳಲು ಧರ್ಮರಾಜ ಯುಧಿಷ್ಠಿರನು ತನ್ನ ವೃದ್ಧ ದೊಡ್ಡಪ್ಪನು ಹಸ್ತಿನಾಪುರದಿಂದ ಹೊರಟಿರುವನೆಂದು ಕೇಳಿದನು.

11011002a ಸೋಽಭ್ಯಯಾತ್ಪುತ್ರಶೋಕಾರ್ತಃ ಪುತ್ರಶೋಕಪರಿಪ್ಲುತಮ್।
11011002c ಶೋಚಮಾನೋ ಮಹಾರಾಜ ಭ್ರಾತೃಭಿಃ ಸಹಿತಸ್ತದಾ।।

ಆ ಪುತ್ರಶೋಕಾರ್ತನು ಪುತ್ರಶೋಕದಲ್ಲಿ ಮುಳುಗಿ ಶೋಕಿಸುತ್ತಿದ್ದ ಮಹಾರಾಜನನ್ನು ನೋಡಲು ಭ್ರಾತೃಗಳೊಂದಿಗೆ ಹೊರಟನು.

11011003a ಅನ್ವೀಯಮಾನೋ ವೀರೇಣ ದಾಶಾರ್ಹೇಣ ಮಹಾತ್ಮನಾ।
11011003c ಯುಯುಧಾನೇನ ಚ ತಥಾ ತಥೈವ ಚ ಯುಯುತ್ಸುನಾ।।

ಮಹಾತ್ಮ ವೀರ ದಾಶಾರ್ಹನೂ, ಯುಯುಧಾನ ಮತ್ತು ಯುಯುತ್ಸುವೂ ಅವನನ್ನು ಹಿಂಬಾಲಿಸಿದರು.

11011004a ತಮನ್ವಗಾತ್ಸುದುಃಖಾರ್ತಾ ದ್ರೌಪದೀ ಶೋಕಕರ್ಶಿತಾ।
11011004c ಸಹ ಪಾಂಚಾಲಯೋಷಿದ್ಭಿರ್ಯಾಸ್ತತ್ರಾಸನ್ಸಮಾಗತಾಃ।।

ಅಲ್ಲಿ ಬಂದು ಸೇರಿದ್ದ ಅತೀವ ದುಃಖಾರ್ತಳೂ ಶೋಕಕರ್ಶಿತಳೂ ಆಗಿದ್ದ ದ್ರೌಪದಿಯು ಪಾಂಚಾಲ ಸಖಿಯರೊಂದಿಗೆ ಅವರನ್ನು ಅನುಸರಿಸಿದಳು.

11011005a ಸ ಗಂಗಾಮನು ವೃಂದಾನಿ ಸ್ತ್ರೀಣಾಂ ಭರತಸತ್ತಮ।
11011005c ಕುರರೀಣಾಮಿವಾರ್ತಾನಾಂ ಕ್ರೋಶಂತೀನಾಂ ದದರ್ಶ ಹ।।

ಭರತಸತ್ತಮ! ಅವನು ಗಂಗಾನದೀ ತೀರದಲ್ಲಿ ಕುರರೀ ಪಕ್ಷಿಗಳಂತೆ ಕೂಗಿಕೊಳ್ಳುತ್ತಾ ರೋದಿಸುತ್ತಿದ್ದ ಕುರುಸ್ತ್ರೀಯರ ಗುಂಪುಗಳನ್ನು ಕಂಡನು.

11011006a ತಾಭಿಃ ಪರಿವೃತೋ ರಾಜಾ ರುದತೀಭಿಃ ಸಹಸ್ರಶಃ।
11011006c ಊರ್ಧ್ವಬಾಹುಭಿರಾರ್ತಾಭಿರ್ಬ್ರುವತೀಭಿಃ ಪ್ರಿಯಾಪ್ರಿಯೇ।।

ಪ್ರಿಯ ಮತ್ತು ಅಪ್ರಿಯ ಮಾತುಗಳನ್ನಾಡುತ್ತಾ ತೋಳುಗಳನ್ನು ಮೇಲೆತ್ತಿ ಬಹಳವಾಗಿ ಆರ್ತನಾದಗೈದು ರೋದಿಸುತ್ತಿದ್ದ ಸಹಸ್ರಾರು ಸ್ತ್ರೀಯರು ರಾಜಾ ಯುಧಿಷ್ಠಿರನನ್ನು ಮುತ್ತಿಕೊಂಡರು.

11011007a ಕ್ವ ನು ಧರ್ಮಜ್ಞತಾ ರಾಜ್ಞಃ ಕ್ವ ನು ಸಾದ್ಯಾನೃಶಂಸತಾ।
11011007c ಯದಾವಧೀತ್ಪಿತೄನ್ಭ್ರಾತೄನ್ಗುರೂನ್ಪುತ್ರಾನ್ಸಖೀನಪಿ।।

“ಪಿತೃಗಳನ್ನೂ, ಭ್ರಾತೃಗಳನ್ನೂ, ಗುರುಗಳನ್ನೂ, ಪುತ್ರರನ್ನೂ, ಸ್ನೇಹಿತರನ್ನೂ ವಧಿಗೀಡುಮಾಡಿದ ರಾಜನ ಆ ಧರ್ಮಜ್ಞತೆ, ದಯೆ ಮತ್ತು ಅಹಿಂಸೆಗಳು ಈಗ ಎಲ್ಲಿಹೋದವು?

11011008a ಘಾತಯಿತ್ವಾ ಕಥಂ ದ್ರೋಣಂ ಭೀಷ್ಮಂ ಚಾಪಿ ಪಿತಾಮಹಮ್।
11011008c ಮನಸ್ತೇಽಭೂನ್ಮಹಾಬಾಹೋ ಹತ್ವಾ ಚಾಪಿ ಜಯದ್ರಥಮ್।।

ಮಹಾಬಾಹೋ! ದ್ರೋಣ, ಪಿತಾಮಹ ಭೀಷ್ಮ ಮತ್ತು ಜಯದ್ರಥರನ್ನು ಸಂಹರಿಸಿ ನಿನ್ನ ಮನಸ್ಸು ಈಗ ಹೇಗಿದೆ?

11011009a ಕಿಂ ನು ರಾಜ್ಯೇನ ತೇ ಕಾರ್ಯಂ ಪಿತೄನ್ಭ್ರಾತೄನಪಶ್ಯತಃ।
11011009c ಅಭಿಮನ್ಯುಂ ಚ ದುರ್ಧರ್ಷಂ ದ್ರೌಪದೇಯಾಂಶ್ಚ ಭಾರತ।।

ಭಾರತ! ಪಿತೃಗಳನ್ನೂ, ಭ್ರಾತೃಗಳನ್ನೂ, ದುರ್ಧರ್ಷ ಅಭಿಮನ್ಯುವನ್ನೂ ಮತ್ತು ದ್ರೌಪದೇಯರನ್ನು ಇನ್ನು ನೋಡಲಿಕ್ಕಾಗದಿರುವಾಗ ಈ ರಾಜ್ಯವನ್ನಿಟ್ಟುಕೊಂಡು ನೀನು ಏನು ಮಾಡುವೆ?”

11011010a ಅತೀತ್ಯ ತಾ ಮಹಾಬಾಹುಃ ಕ್ರೋಶಂತೀಃ ಕುರರೀರಿವ।
11011010c ವವಂದೇ ಪಿತರಂ ಜ್ಯೇಷ್ಠಂ ಧರ್ಮರಾಜೋ ಯುಧಿಷ್ಠಿರಃ।।

ಕುರರೀ ಪಕ್ಷಿಗಳಂತೆ ಅಳುತ್ತಿರುವ ಆ ಸ್ತ್ರೀಯರನ್ನು ಸರಿಸಿ ಮುಂದೆಹೋಗಿ ಮಹಾಬಾಹು ಧರ್ಮರಾಜ ಯುಧಿಷ್ಠಿರನು ತನ್ನ ದೊಡ್ಡಪ್ಪನಿಗೆ ವಂದಿಸಿದನು.

11011011a ತತೋಽಭಿವಾದ್ಯ ಪಿತರಂ ಧರ್ಮೇಣಾಮಿತ್ರಕರ್ಶನಾಃ।
11011011c ನ್ಯವೇದಯಂತ ನಾಮಾನಿ ಪಾಂಡವಾಸ್ತೇಽಪಿ ಸರ್ವಶಃ।।

ಆಗ ಆ ಅಮಿತ್ರಕರ್ಶನ ಪಾಂಡವರೆಲ್ಲರೂ ತಮ್ಮ ತಮ್ಮ ನಾಮಧೇಯಗಳನ್ನು ಹೇಳಿಕೊಂಡು ದೊಡ್ಡಪ್ಪನಿಗೆ ನಮಸ್ಕರಿಸಿದರು.

11011012a ತಮಾತ್ಮಜಾಂತಕರಣಂ ಪಿತಾ ಪುತ್ರವಧಾರ್ದಿತಃ।
11011012c ಅಪ್ರೀಯಮಾಣಃ ಶೋಕಾರ್ತಃ ಪಾಂಡವಂ ಪರಿಷಸ್ವಜೇ।।

ಪುತ್ರವಧೆಯಿಂದ ಪೀಡಿತನಾಗಿ ಶೋಕಾರ್ತನಾಗಿದ್ದ ಆ ತಂದೆಯು ಅಂತಃಕರಣದಲ್ಲಿ ಪ್ರೀತಿಸದಿದ್ದರೂ ಪಾಂಡವನನ್ನು ಆಲಂಗಿಸಿದನು.

11011013a ಧರ್ಮರಾಜಂ ಪರಿಷ್ವಜ್ಯ ಸಾಂತ್ವಯಿತ್ವಾ ಚ ಭಾರತ।
11011013c ದುಷ್ಟಾತ್ಮಾ ಭೀಮಮನ್ವೈಚ್ಚದ್ದಿಧಕ್ಷುರಿವ ಪಾವಕಃ।।

ಭಾರತ! ಧರ್ಮರಾಜನನ್ನು ಬಿಗಿದಪ್ಪಿ ಸಂತವಿಸಿದ ಆ ದುಷ್ಟಾತ್ಮನು ಭಸ್ಮೀಭೂತನನ್ನಾಗಿಸುವ ಪಾವಕನಂತೆ ಭೀಮನನ್ನು ಆಲಂಗಿಸಲು ಬಯಸಿದನು.

11011014a ಸ ಕೋಪಪಾವಕಸ್ತಸ್ಯ ಶೋಕವಾಯುಸಮೀರಿತಃ।
11011014c ಭೀಮಸೇನಮಯಂ ದಾವಂ ದಿಧಕ್ಷುರಿವ ದೃಶ್ಯತೇ।।

ಶೋಕವೆಂಬ ವಾಯುವಿನಿಂದ ಭುಗಿಲೆದ್ದ ಅವನ ಕೋಪಾಗ್ನಿಯು ಭೀಮಸೇನನನ್ನು ಸುಟ್ಟುಬಿಡುತ್ತದೆಯೋ ಎನ್ನುವಂತೆ ಕಾಣುತ್ತಿತ್ತು.

11011015a ತಸ್ಯ ಸಂಕಲ್ಪಮಾಜ್ಞಾಯ ಭೀಮಂ ಪ್ರತ್ಯಶುಭಂ ಹರಿಃ।
11011015c ಭೀಮಮಾಕ್ಷಿಪ್ಯ ಪಾಣಿಭ್ಯಾಂ ಪ್ರದದೌ ಭೀಮಮಾಯಸಮ್।।

ಅವನ ಸಂಕಲ್ಪವನ್ನು ತಿಳಿದ ಹರಿಯು ಕೈಗಳಿಂದ ಭೀಮನನ್ನು ಹಿಂದಕ್ಕೆಳೆದುಕೊಂಡು ಭೀಮನ ಆಕಾರದ ಲೋಹದ ಮೂರ್ತಿಯೊಂದನ್ನು ಮುಂದಿಟ್ಟನು.

11011016a ಪ್ರಾಗೇವ ತು ಮಹಾಬುದ್ಧಿರ್ಬುದ್ಧ್ವಾ ತಸ್ಯೇಂಗಿತಂ ಹರಿಃ।
11011016c ಸಂವಿಧಾನಂ ಮಹಾಪ್ರಾಜ್ಞಸ್ತತ್ರ ಚಕ್ರೇ ಜನಾರ್ದನಃ।।

ಮೊದಲೇ ಅವನ ಇಂಗಿತವನ್ನು ಅರಿತಿದ್ದ ಮಹಾಬುದ್ಧಿ ಮಹಾಪ್ರಾಜ್ಞ ಹರಿ ಜನಾರ್ದನನು ಅದರ ವ್ಯವಸ್ಥೆಯನ್ನು ಮಾಡಿದ್ದನು.

11011017a ತಂ ತು ಗೃಹ್ಯೈವ ಪಾಣಿಭ್ಯಾಂ ಭೀಮಸೇನಮಯಸ್ಮಯಮ್।
11011017c ಬಭಂಜ ಬಲವಾನ್ರಾಜಾ ಮನ್ಯಮಾನೋ ವೃಕೋದರಮ್।।

ವೃಕೋದರನೆಂದು ತಿಳಿದು ಭೀಮಸೇನನ ಆ ಲೋಹದ ಮೂರ್ತಿಯನ್ನು ತೋಳುಗಳಿಂದ ಹಿಡಿಯುತ್ತಲೇ ಆ ಬಲವಾನ್ ರಾಜನು ಅದನ್ನು ಪುಡಿಪುಡಿ ಮಾಡಿದನು.

11011018a ನಾಗಾಯುತಬಲಪ್ರಾಣಃ ಸ ರಾಜಾ ಭೀಮಮಾಯಸಮ್।
11011018c ಭಂಕ್ತ್ವಾ ವಿಮಥಿತೋರಸ್ಕಃ ಸುಸ್ರಾವ ರುಧಿರಂ ಮುಖಾತ್।।

ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದರೂ ಭೀಮನ ಲೋಹದ ಮೂರ್ತಿಯನ್ನು ತೋಳಿನಿಂದ ಅಪ್ಪಿಕೊಂಡು ಒಡೆದು ಹಾಕಿದುದರಿಂದ ಅವನ ಮುಖದಿಂದ ರಕ್ತವು ಸೋರತೊಡಗಿತು.

11011019a ತತಃ ಪಪಾತ ಮೇದಿನ್ಯಾಂ ತಥೈವ ರುಧಿರೋಕ್ಷಿತಃ।
11011019c ಪ್ರಪುಷ್ಪಿತಾಗ್ರಶಿಖರಃ ಪಾರಿಜಾತ ಇವ ದ್ರುಮಃ।।

ರಕ್ತದಿಂದ ತೋಯ್ದು ಹೋಗಿದ್ದ ಅವನು ಪುಷ್ಪಗಳಿಂದ ತುಂಬಿಹೋಗಿದ್ದ ಪಾರಿಜಾತ ವೃಕ್ಷದಂತೆ ಭೂಮಿಯ ಮೇಲೆ ಬಿದ್ದನು.

11011020a ಪರ್ಯಗೃಹ್ಣತ ತಂ ವಿದ್ವಾನ್ಸೂತೋ ಗಾವಲ್ಗಣಿಸ್ತದಾ।
11011020c ಮೈವಮಿತ್ಯಬ್ರವೀಚ್ಚೈನಂ ಶಮಯನ್ಸಾಂತ್ವಯನ್ನಿವ।।

ಆಗ ವಿದ್ವಾನ್ ಸೂತ ಗಾವಲ್ಗಣಿಯು ಅವನನ್ನು ಹಿಡಿದೆತ್ತಿ ಸಂತವಿಸುತ್ತಾ, ಶಾಂತಗೊಳಿಸುತ್ತಾ “ಹೀಗೆ ಮಾಡಬಾರದಾಗಿತ್ತು!” ಎಂದು ಹೇಳಿದನು.

11011021a ಸ ತು ಕೋಪಂ ಸಮುತ್ಸೃಜ್ಯ ಗತಮನ್ಯುರ್ಮಹಾಮನಾಃ।
11011021c ಹಾ ಹಾ ಭೀಮೇತಿ ಚುಕ್ರೋಶ ಭೂಯಃ ಶೋಕಸಮನ್ವಿತಃ।।

ಮಹಾಮನಸ್ವಿ ಧೃತರಾಷ್ಟ್ರನು ಕೋಪವನ್ನು ತೊರೆದು ಸಿಟ್ಟಿಲ್ಲದವನಾಗಿ “ಅಯ್ಯೋ ಭೀಮ!” ಎಂದು ಪುನಃ ಶೋಕಸಮನ್ವಿತನಾಗಿ ಕೂಗಿದನು.

11011022a ತಂ ವಿದಿತ್ವಾ ಗತಕ್ರೋಧಂ ಭೀಮಸೇನವಧಾರ್ದಿತಮ್।
11011022c ವಾಸುದೇವೋ ವರಃ ಪುಂಸಾಮಿದಂ ವಚನಮಬ್ರವೀತ್।।

ಭೀಮಸೇನನನ್ನು ಕೊಂದೆನೆಂಬ ಕಾರಣದಿಂದ ರಾಜನು ಸಂಕಟಪಡುತ್ತಿರುವುದನ್ನೂ ಮತ್ತು ಅವನ ಕ್ರೋಧವು ಹೊರಟುಹೋದುದನ್ನೂ ನೋಡಿದ ಪುರುಷಶ್ರೇಷ್ಠ ವಾಸುದೇವನು ಇಂತೆಂದನು:

11011023a ಮಾ ಶುಚೋ ಧೃತರಾಷ್ಟ್ರ ತ್ವಂ ನೈಷ ಭೀಮಸ್ತ್ವಯಾ ಹತಃ।
11011023c ಆಯಸೀ ಪ್ರತಿಮಾ ಹ್ಯೇಷಾ ತ್ವಯಾ ರಾಜನ್ನಿಪಾತಿತಾ।।

“ರಾಜನ್! ಧೃತರಾಷ್ಟ್ರ! ಶೋಕಿಸದಿರು! ನೀನು ಭೀಮನನ್ನು ಕೊಲ್ಲಲಿಲ್ಲ! ನೀನು ಕೆಳಗುರುಳಿಸಿದುದು ಒಂದು ಲೋಹದ ಪ್ರತಿಮೆ!

11011024a ತ್ವಾಂ ಕ್ರೋಧವಶಮಾಪನ್ನಂ ವಿದಿತ್ವಾ ಭರತರ್ಷಭ।
11011024c ಮಯಾಪಕೃಷ್ಟಃ ಕೌಂತೇಯೋ ಮೃತ್ಯೋರ್ದಂಷ್ಟ್ರಾಂತರಂ ಗತಃ।।

ಭರತರ್ಷಭ! ನೀನು ಕ್ರೋಧವಶನಾಗಿದ್ದೀಯೆ ಎಂದು ತಿಳಿದು ನಾನು ಮೃತ್ಯುವಿನ ದವಡೆಗಳ ಮಧ್ಯೆ ಹೋಗುತ್ತಿದ್ದ ಕೌಂತೇಯ ಭೀಮನನ್ನು ಹಿಂದಕ್ಕೆಳೆದುಕೊಂಡೆನು.

11011025a ನ ಹಿ ತೇ ರಾಜಶಾರ್ದೂಲ ಬಲೇ ತುಲ್ಯೋಽಸ್ತಿ ಕಶ್ಚನ।
11011025c ಕಃ ಸಹೇತ ಮಹಾಬಾಹೋ ಬಾಹ್ವೋರ್ನಿಗ್ರಹಣಂ ನರಃ।।

ರಾಜಶಾರ್ದೂಲ! ಮಹಾಬಾಹೋ! ಬಲದಲ್ಲಿ ನಿನ್ನ ಸಮಾನರು ಯಾರೂ ಇಲ್ಲ. ನಿನ್ನ ಬಾಹುಬಂಧನವನ್ನು ಯಾರು ತಾನೇ ಸಹಿಸಿಕೊಳ್ಳಬಲ್ಲರು?

11011026a ಯಥಾಂತಕಮನುಪ್ರಾಪ್ಯ ಜೀವನ್ಕಶ್ಚಿನ್ನ ಮುಚ್ಯತೇ।
11011026c ಏವಂ ಬಾಹ್ವಂತರಂ ಪ್ರಾಪ್ಯ ತವ ಜೀವೇನ್ನ ಕಶ್ಚನ।।

ಯಮನ ಬಳಿಹೋದವನು ಎಂದೂ ಜೀವಂತ ಬಿಡುಗಡೆಹೊಂದದಂತೆ ನಿನ್ನ ಬಾಹುಗಳ ಮಧ್ಯೆ ಸಿಲುಕಿದವರು ಯಾರೂ ಜೀವಿತರಾಗಿರುವುದಿಲ್ಲ.

11011027a ತಸ್ಮಾತ್ಪುತ್ರೇಣ ಯಾ ಸಾ ತೇ ಪ್ರತಿಮಾ ಕಾರಿತಾಯಸೀ।
11011027c ಭೀಮಸ್ಯ ಸೇಯಂ ಕೌರವ್ಯ ತವೈವೋಪಹೃತಾ ಮಯಾ।।

ಕೌರವ್ಯ! ಆದುದರಿಂದ ಭೀಮಸೇನನೊಡನೆ ಯುದ್ಧದ ಅಭ್ಯಾಸಕ್ಕಾಗಿ ನಿನ್ನ ಪುತ್ರನು ಮಾಡಿಸಿಟ್ಟುಕೊಂಡಿದ್ದ ಉಕ್ಕಿನ ಪ್ರತಿಮೆಯನ್ನು ನಾನು ಅಪಹರಿಸಿದ್ದೆ.

11011028a ಪುತ್ರಶೋಕಾಭಿಸಂತಾಪಾದ್ಧರ್ಮಾದಪಹೃತಂ ಮನಃ।
11011028c ತವ ರಾಜೇಂದ್ರ ತೇನ ತ್ವಂ ಭೀಮಸೇನಂ ಜಿಘಾಂಸಸಿ।।

ರಾಜೇಂದ್ರ! ಪುತ್ರಶೋಕದಿಂದ ಸಂತಪ್ತನಾದ ನಿನ್ನ ಮನಸ್ಸು ಧರ್ಮದಿಂದ ವಿಚಲಿತಗೊಂಡಿದೆ. ಆದುದರಿಂದಲೇ ನೀನು ಭೀಮಸೇನನನ್ನು ಕೊಲ್ಲಲು ಬಯಸಿದೆ.

11011029a ನ ಚ ತೇ ತತ್ ಕ್ಷಮಂ ರಾಜನ್ ಹನ್ಯಾಸ್ತ್ವಂ ಯದ್ವೃಕೋದರಮ್।
11011029c ನ ಹಿ ಪುತ್ರಾ ಮಹಾರಾಜ ಜೀವೇಯುಸ್ತೇ ಕಥಂ ಚನ।।

ರಾಜನ್! ನಿನ್ನಂಥವನಿಗೆ ಅದು ಸರಿಯೆನಿಸುವುದಿಲ್ಲ! ಒಂದು ವೇಳೆ ನೀನು ವೃಕೋದರನನ್ನು ಕೊಂದಿದ್ದರೂ ನಿನ್ನ ಪುತ್ರರು ಯಾವುದೇ ಕಾರಣದಿಂದಲೂ ಜೀವಂತರಾಗಿ ಹಿಂದೆ ಬರುತ್ತಿರಲಿಲ್ಲ!

11011030a ತಸ್ಮಾದ್ಯತ್ಕೃತಮಸ್ಮಾಭಿರ್ಮನ್ಯಮಾನೈಃ ಕ್ಷಮಂ ಪ್ರತಿ।
11011030c ಅನುಮನ್ಯಸ್ವ ತತ್ಸರ್ವಂ ಮಾ ಚ ಶೋಕೇ ಮನಃ ಕೃಥಾಃ।।

ಆದುದರಿಂದ ಶಾಂತಿಯ ಸಲುವಾಗಿ ನಾವು ಮಾಡಿದುದೆಲ್ಲಕ್ಕೂ ನೀನು ಅನುಮತಿನೀಡು. ವೃಥಾ ನಿನ್ನ ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಆಯಸಭೀಮಭಂಗೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಆಯಸಭೀಮಭಂಗ ಎನ್ನುವ ಹನ್ನೊಂದನೇ ಅಧ್ಯಾಯವು.