010 ಕೃಪದ್ರೌಣಿಭೋಜದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ಸ್ತ್ರೀ ಪರ್ವ

ಅಧ್ಯಾಯ 10

ಸಾರ

ಕೃಪ, ಕೃತವರ್ಮ, ಅಶ್ವತ್ಥಾಮರು ಧೃತರಾಷ್ಟ್ರನನ್ನು ದಾರಿಯಲ್ಲಿಯೇ ಭೇಟಿ ಮಾಡಿ ರಣರಂಗದಿಂದ ಪಲಾಯನ ಮಾಡಿದುದು (1-23).

11010001 ವೈಶಂಪಾಯನ ಉವಾಚ।
11010001a ಕ್ರೋಶಮಾತ್ರಂ ತತೋ ಗತ್ವಾ ದದೃಶುಸ್ತಾನ್ಮಹಾರಥಾನ್।
11010001c ಶಾರದ್ವತಂ ಕೃಪಂ ದ್ರೌಣಿಂ ಕೃತವರ್ಮಾಣಮೇವ ಚ।।

ವೈಶಂಪಾಯನನು ಹೇಳಿದನು: “ಕ್ರೋಶಮಾತ್ರ ದೂರ ಹೋಗಿ ಅಲ್ಲಿ ಅವನು ಆ ಮಹಾರಥರನ್ನು – ಶಾರದ್ವತ ಕೃಪ, ದ್ರೌಣಿ ಮತ್ತು ಕೃತವರ್ಮರನ್ನು – ಕಂಡನು.

11010002a ತೇ ತು ದೃಷ್ಟ್ವೈವ ರಾಜಾನಂ ಪ್ರಜ್ಞಾಚಕ್ಷುಷಮೀಶ್ವರಮ್।
11010002c ಅಶ್ರುಕಂಠಾ ವಿನಿಃಶ್ವಸ್ಯ ರುದಂತಮಿದಮಬ್ರುವನ್।।

ಪ್ರಜ್ಞಾಚಕ್ಷು ಒಡೆಯ ರಾಜನನ್ನು ನೋಡಿದೊಡನೆಯೇ ಅವರು ನಿಟ್ಟುಸಿರು ಬಿಡುತ್ತಾ, ಅಳುತ್ತಾ ಗದ್ಗದ ಕಂಠದಿಂದ ಇಂತೆಂದರು:

11010003a ಪುತ್ರಸ್ತವ ಮಹಾರಾಜ ಕೃತ್ವಾ ಕರ್ಮ ಸುದುಷ್ಕರಮ್।
11010003c ಗತಃ ಸಾನುಚರೋ ರಾಜನ್ ಶಕ್ರಲೋಕಂ ಮಹೀಪತಿಃ।।

“ಮಹಾರಾಜ! ರಾಜನ್! ನಿನ್ನ ಮಗ ಮಹೀಪತಿಯು ಸುದುಷ್ಕರ ಕರ್ಮವನ್ನೆಸಗಿ ಅನುಚರರೊಂದಿಗೆ ಶಕ್ರಲೋಕಕ್ಕೆ ಹೋದನು.

11010004a ದುರ್ಯೋಧನಬಲಾನ್ಮುಕ್ತಾ ವಯಮೇವ ತ್ರಯೋ ರಥಾಃ।
11010004c ಸರ್ವಮನ್ಯತ್ಪರಿಕ್ಷೀಣಂ ಸೈನ್ಯಂ ತೇ ಭರತರ್ಷಭ।।

ಭರತರ್ಷಭ! ದುರ್ಯೋಧನನ ಸೇನೆಯಲ್ಲಿ ನಾವು ಮೂವರು ರಥರು ಮಾತ್ರ ಉಳಿದುಕೊಂಡಿದ್ದೇವೆ. ನಿನ್ನ ಸೇನೆಯಲ್ಲಿ ಅನ್ಯರೆಲ್ಲರೂ ನಾಶವಾಗಿದ್ದಾರೆ.”

11010005a ಇತ್ಯೇವಮುಕ್ತ್ವಾ ರಾಜಾನಂ ಕೃಪಃ ಶಾರದ್ವತಸ್ತದಾ।
11010005c ಗಾಂಧಾರೀಂ ಪುತ್ರಶೋಕಾರ್ತಾಮಿದಂ ವಚನಮಬ್ರವೀತ್।।

ಹೀಗೆ ಹೇಳಿ ಕೃಪ ಶಾರದ್ವತನು ಪುತ್ರಶೋಕಾರ್ತರಾದ ರಾಜ ಮತ್ತು ಗಾಂಧಾರಿಯರಿಗೆ ಈ ಮಾತನ್ನಾಡಿದನು:

11010006a ಅಭೀತಾ ಯುಧ್ಯಮಾನಾಸ್ತೇ ಘ್ನಂತಃ ಶತ್ರುಗಣಾನ್ಬಹೂನ್।
11010006c ವೀರಕರ್ಮಾಣಿ ಕುರ್ವಾಣಾಃ ಪುತ್ರಾಸ್ತೇ ನಿಧನಂ ಗತಾಃ।।

ಅಭೀತರಾಗಿ ಯುದ್ಧ ಮಾಡುತ್ತಿದ್ದ ಅವರು ಶತ್ರುಗಣಗಳಿಂದ ಹತರಾದರು. ಅನೇಕ ವೀರಕರ್ಮಗಳನ್ನು ಮಾಡಿದ ನಿನ್ನ ಪುತ್ರರು ನಿಧನ ಹೊಂದಿದರು.

11010007a ಧ್ರುವಂ ಸಂಪ್ರಾಪ್ಯ ಲೋಕಾಂಸ್ತೇ ನಿರ್ಮಲಾನ್ ಶಸ್ತ್ರನಿರ್ಜಿತಾನ್।
11010007c ಭಾಸ್ವರಂ ದೇಹಮಾಸ್ಥಾಯ ವಿಹರಂತ್ಯಮರಾ ಇವ।।

ನಿಶ್ಚಯವಾಗಿಯೂ ಅವರು ನಿರ್ಮಲ ಶಸ್ತ್ರಗಳಿಂದ ನಿಧನಹೊಂದಿ ಉತ್ತಮ ಲೋಕಗಳನ್ನು ಪಡೆದು ಹೊಳೆಯುವ ದೇಹಗಳನ್ನು ಧರಿಸಿ ಅಮರರಂತೆ ಅಲ್ಲಿ ವಿಹರಿಸುತ್ತಿದ್ದಾರೆ.

11010008a ನ ಹಿ ಕಶ್ಚಿದ್ಧಿ ಶೂರಾಣಾಂ ಯುಧ್ಯಮಾನಃ ಪರಾಙ್ಮುಖಃ।
11010008c ಶಸ್ತ್ರೇಣ ನಿಧನಂ ಪ್ರಾಪ್ತೋ ನ ಚ ಕಶ್ಚಿತ್ಕೃತಾಂಜಲಿಃ।।

ಆ ಶೂರರಲ್ಲಿ ಯಾರೂ ಯುದ್ಧಮಾಡುತ್ತಿರುವಾಗ ಪರಾಙ್ಮುಖರಾಗಲಿಲ್ಲ. ಶಸ್ತ್ರಗಳಿಂದ ಸಾವನ್ನು ಪಡೆದ ಅವರಲ್ಲಿ ಯಾರೂ ಶತ್ರುಗಳ ಮುಂದೆ ಕೈಜೋಡಿಸಿ ನಿಂತಿರಲಿಲ್ಲ.

11010009a ಏತಾಂ ತಾಂ ಕ್ಷತ್ರಿಯಸ್ಯಾಹುಃ ಪುರಾಣಾಂ ಪರಮಾಂ ಗತಿಮ್।
11010009c ಶಸ್ತ್ರೇಣ ನಿಧನಂ ಸಂಖ್ಯೇ ತಾನ್ನ ಶೋಚಿತುಮರ್ಹಸಿ।।

ಈ ರೀತಿ ಯುದ್ಧದಲ್ಲಿ ಶಸ್ತ್ರಗಳಿಂದ ನಿಧನಹೊಂದಿದ ಕ್ಷತ್ರಿಯರು ಪರಮ ಗತಿಯನ್ನು ಹೊಂದುತ್ತಾರೆಂದು ಪುರಾಣಗಳು ಹೇಳುತ್ತವೆ. ಆದುದರಿಂದ ಅದರ ಕುರಿತು ಶೋಕಿಸಬಾರದು.

11010010a ನ ಚಾಪಿ ಶತ್ರವಸ್ತೇಷಾಮ್ರುಧ್ಯಂತೇ ರಾಜ್ಞಿ ಪಾಂಡವಾಃ।
11010010c ಶೃಣು ಯತ್ಕೃತಮಸ್ಮಾಭಿರಶ್ವತ್ಥಾಮಪುರೋಗಮೈಃ।।

ಅವರ ಶತ್ರುವಾದ ಪಾಂಡವರು ಮತ್ತು ಅವರ ರಾಣಿಯೂ ರೋದಿಸುತ್ತಿದ್ದಾರೆ. ಅಶ್ವತ್ಥಾಮನ ನಾಯಕತ್ವದಲ್ಲಿ ನಾವೇನು ಮಾಡಿದೆವೆನ್ನುವುದನ್ನು ಕೇಳು.

11010011a ಅಧರ್ಮೇಣ ಹತಂ ಶ್ರುತ್ವಾ ಭೀಮಸೇನೇನ ತೇ ಸುತಮ್।
11010011c ಸುಪ್ತಂ ಶಿಬಿರಮಾವಿಶ್ಯ ಪಾಂಡೂನಾಂ ಕದನಂ ಕೃತಮ್।।

ನಿನ್ನ ಮಗನು ಭೀಮಸೇನನಿಂದ ಅಧರ್ಮರೀತಿಯಿಂದ ಹತನಾದನೆಂದು ಕೇಳಿ ನಾವು ಮಲಗಿದ್ದ ಪಾಂಡವರ ಶಿಬಿರವನ್ನು ಪ್ರವೇಶಿಸಿ ಕದನವಾಡಿದೆವು.

11010012a ಪಾಂಚಾಲಾ ನಿಹತಾಃ ಸರ್ವೇ ಧೃಷ್ಟದ್ಯುಮ್ನಪುರೋಗಮಾಃ।
11010012c ದ್ರುಪದಸ್ಯಾತ್ಮಜಾಶ್ಚೈವ ದ್ರೌಪದೇಯಾಶ್ಚ ಪಾತಿತಾಃ।।

ಧೃಷ್ಟದ್ಯುಮ್ನನನ್ನು ಮೊದಲ್ಗೊಂಡು ಪಾಂಚಾಲರೆಲ್ಲರೂ ಹತರಾದರು. ದ್ರುಪದನ ಮಕ್ಕಳೂ ದ್ರೌಪದೇಯರೂ ಕೆಳಗುರುಳಿದರು.

11010013a ತಥಾ ವಿಶಸನಂ ಕೃತ್ವಾ ಪುತ್ರಶತ್ರುಗಣಸ್ಯ ತೇ।
11010013c ಪ್ರಾದ್ರವಾಮ ರಣೇ ಸ್ಥಾತುಂ ನ ಹಿ ಶಕ್ಯಾಮಹೇ ತ್ರಯಃ।।

ಹಾಗೆ ನಿನ್ನ ಪುತ್ರನ ಶತ್ರುಗಣವನ್ನು ನಾಶಮಾಡಿ ನಾವು ಓಡಿ ಬಂದಿದ್ದೇವೆ. ನಾವು ಮೂವರು ರಣದಲ್ಲಿ ಅವರನ್ನು ಎದುರಿಸಿ ನಿಲ್ಲಲಾರೆವು.

11010014a ತೇ ಹಿ ಶೂರಾ ಮಹೇಷ್ವಾಸಾಃ ಕ್ಷಿಪ್ರಮೇಷ್ಯಂತಿ ಪಾಂಡವಾಃ।
11010014c ಅಮರ್ಷವಶಮಾಪನ್ನಾ ವೈರಂ ಪ್ರತಿಜಿಹೀರ್ಷವಃ।।

ಕ್ರೋಧವಶರಾದ ಆ ಶೂರ ಮಹೇಷ್ವಾಸ ಪಾಂಡವರು, ವೈರಕ್ಕೆ ಪ್ರತೀಕಾರವನ್ನು ಮಾಡಲು ಬಯಸಿ ವೇಗದಿಂದ ಬರುತ್ತಿದ್ದಾರೆ.

11010015a ನಿಹತಾನಾತ್ಮಜಾನ್ ಶ್ರುತ್ವಾ ಪ್ರಮತ್ತಾನ್ಪುರುಷರ್ಷಭಾಃ।
11010015c ನಿನೀಷಂತಃ ಪದಂ ಶೂರಾಃ ಕ್ಷಿಪ್ರಮೇವ ಯಶಸ್ವಿನಿ।।

ಮಕ್ಕಳು ಹತರಾದರೆಂದು ಕೇಳಿ ಪ್ರಮತ್ತರಾದ ಆ ಶೂರ ಪುರುಷರ್ಷಭರು ನಮ್ಮ ದಾರಿಯನ್ನೇ ಹಿಡಿದು ಬೇಗ ಬಂದುಬಿಡುತ್ತಾರೆ.

11010016a ಪಾಂಡೂನಾಂ ಕಿಲ್ಬಿಷಂ ಕೃತ್ವಾ ಸಂಸ್ಥಾತುಂ ನೋತ್ಸಹಾಮಹೇ।
11010016c ಅನುಜಾನೀಹಿ ನೋ ರಾಜ್ಞಿ ಮಾ ಚ ಶೋಕೇ ಮನಃ ಕೃಥಾಃ।।

ಪಾಂಡವರಿಗೆ ಕೆಟ್ಟದ್ದನ್ನು ಮಾಡಿ ಇಲ್ಲಿ ನಿಂತುಕೊಳ್ಳಲು ಇಚ್ಛಿಸುವುದಿಲ್ಲ. ನಮಗೆ ಅನುಮತಿಯನ್ನು ನೀಡು. ರಾಣಿ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ!

11010017a ರಾಜಂಸ್ತ್ವಮನುಜಾನೀಹಿ ಧೈರ್ಯಮಾತಿಷ್ಠ ಚೋತ್ತಮಮ್।
11010017c ನಿಷ್ಠಾಂತಂ ಪಶ್ಯ ಚಾಪಿ ತ್ವಂ ಕ್ಷತ್ರಧರ್ಮಂ ಚ ಕೇವಲಮ್।।

ರಾಜನ್! ನೀನೂ ಕೂಡ ಅನುಮತಿಯನ್ನು ನೀಡು. ಉತ್ತಮ ಧೈರ್ಯವನ್ನು ತಂದುಕೋ! ಕೇವಲ ಕ್ಷತ್ರಧರ್ಮವನ್ನು ಗಮನದಲ್ಲಿಟ್ಟುಕೊಂಡು ಆಗಿಹೋದುದನ್ನು ಕಾಣು.”

11010018a ಇತ್ಯೇವಮುಕ್ತ್ವಾ ರಾಜಾನಂ ಕೃತ್ವಾ ಚಾಭಿಪ್ರದಕ್ಷಿಣಮ್।
11010018c ಕೃಪಶ್ಚ ಕೃತವರ್ಮಾ ಚ ದ್ರೋಣಪುತ್ರಶ್ಚ ಭಾರತ।।
11010019a ಅವೇಕ್ಷಮಾಣಾ ರಾಜಾನಂ ಧೃತರಾಷ್ಟ್ರಂ ಮನೀಷಿಣಮ್।
11010019c ಗಂಗಾಮನು ಮಹಾತ್ಮಾನಸ್ತೂರ್ಣಮಶ್ವಾನಚೋದಯನ್।।

ಹೀಗೆ ಹೇಳಿ, ರಾಜನಿಗೆ ಪ್ರದಕ್ಷಿಣೆ ಹಾಕಿ, ಕೃಪ, ಕೃತವರ್ಮ ಮತ್ತು ದ್ರೋಣಪುತ್ರರು ಮಹಾತ್ಮ ಮನೀಷಿಣಿ ರಾಜ ಧೃತರಾಷ್ಟ್ರನನ್ನು ತಿರುಗಿ ನೋಡುತ್ತಲೇ ಗಂಗಾನದಿಯ ಕಡೆ ಶೀಘ್ರವಾಗಿ ಅಶ್ವಗಳನ್ನು ಓಡಿಸಿದರು.

11010020a ಅಪಕ್ರಮ್ಯ ತು ತೇ ರಾಜನ್ಸರ್ವ ಏವ ಮಹಾರಥಾಃ।
11010020c ಆಮಂತ್ರ್ಯಾನ್ಯೋನ್ಯಮುದ್ವಿಗ್ನಾಸ್ತ್ರಿಧಾ ತೇ ಪ್ರಯಯುಸ್ತತಃ।।

ರಾಜನ್! ಗಂಗಾನದಿಯನ್ನು ದಾಟಿ ಉದ್ವಿಗ್ನರಾಗಿ ಮಂತ್ರಾಲೋಚನೆಮಾಡಿ ಆ ಮೂವರು ಮಹಾರಥರೂ ಪ್ರತ್ಯೇಕ ಮೂರುದಾರಿಗಳನ್ನು ಹಿಡಿದು ಹೊರಟುಹೋದರು.

11010021a ಜಗಾಮ ಹಾಸ್ತಿನಪುರಂ ಕೃಪಃ ಶಾರದ್ವತಸ್ತದಾ।
11010021c ಸ್ವಮೇವ ರಾಷ್ಟ್ರಂ ಹಾರ್ದಿಕ್ಯೋ ದ್ರೌಣಿರ್ವ್ಯಾಸಾಶ್ರಮಂ ಯಯೌ।।

ಕೃಪ ಶಾರದ್ವತನು ಹಸ್ತಿನಾಪುರಕ್ಕೆ ಹೋದನು. ಹಾರ್ದಿಕ್ಯನು ತನ್ನ ದೇಶಕ್ಕೆ ಹೊರಟುಹೋದನು. ಮತ್ತು ದ್ರೌಣಿಯು ವ್ಯಾಸಾಶ್ರಮಕ್ಕೆ ಹೋದನು.

11010022a ಏವಂ ತೇ ಪ್ರಯಯುರ್ವೀರಾ ವೀಕ್ಷಮಾಣಾಃ ಪರಸ್ಪರಮ್।
11010022c ಭಯಾರ್ತಾಃ ಪಾಂಡುಪುತ್ರಾಣಾಮಾಗಸ್ಕೃತ್ವಾ ಮಹಾತ್ಮನಾಮ್।।

ಮಹಾತ್ಮ ಪಾಂಡುಪುತ್ರರಿಗೆ ಮಹಾಪರಾಧವನ್ನೆಸಗಿದ್ದ ಆ ವೀರರು ಭಯಾರ್ತರಾಗಿ ಪರಸ್ಪರರನ್ನೇ ನೋಡುತ್ತಾ ಹೀಗೆ ಹೊರಟುಹೋದರು.

11010023a ಸಮೇತ್ಯ ವೀರಾ ರಾಜಾನಂ ತದಾ ತ್ವನುದಿತೇ ರವೌ।
11010023c ವಿಪ್ರಜಗ್ಮುರ್ಮಹಾರಾಜ ಯಥೇಚ್ಚಕಮರಿಂದಮಾಃ।।

ಮಹಾರಾಜ! ರಾಜ ಧೃತರಾಷ್ಟ್ರನನ್ನು ಭೇಟಿಯಾಗಿ ಆ ವೀರ ಅರಿಂದಮರು ಸೂರ್ಯೋದಯವಾಗುವುದರೊಳಗಾಗಿ ಇಚ್ಛಿಸಿದ್ದ ಸ್ಥಳಗಳನ್ನು ಸೇರಿದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಕೃಪದ್ರೌಣಿಭೋಜದರ್ಶನೇ ದಶಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಕೃಪದ್ರೌಣಿಭೋಜದರ್ಶನ ಎನ್ನುವ ಹತ್ತನೇ ಅಧ್ಯಾಯವು.