ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ಸ್ತ್ರೀ ಪರ್ವ
ಅಧ್ಯಾಯ 9
ಸಾರ
ರೋದಿಸುತ್ತಿದ್ದ ಸ್ತ್ರೀಯರು ಮತ್ತು ಪುರಜನರೊಂದಿಗೆ ಧೃತರಾಷ್ಟ್ರನು ರಣಭೂಮಿಗೆ ಹೊರಟಿದುದು (1-21).
11009001 ಜನಮೇಜಯ ಉವಾಚ।
11009001a ಗತೇ ಭಗವತಿ ವ್ಯಾಸೇ ಧೃತರಾಷ್ಟ್ರೋ ಮಹೀಪತಿಃ।
11009001c ಕಿಮಚೇಷ್ಟತ ವಿಪ್ರರ್ಷೇ ತನ್ಮೇ ವ್ಯಾಖ್ಯಾತುಮರ್ಹಸಿ।।
ಜನಮೇಜಯನು ಹೇಳಿದನು: “ವಿಪ್ರರ್ಷೇ! ಭಗವಾನ್ ವ್ಯಾಸನು ಹೊರಟುಹೋಗಲು ಮಹೀಪತಿ ಧೃತರಾಷ್ಟ್ರನು ಏನು ಮಾಡಿದನು. ಅದನ್ನು ನನಗೆ ಹೇಳಬೇಕು.”
11009002 ವೈಶಂಪಾಯನ ಉವಾಚ।
11009002a ಏತಚ್ಚ್ರುತ್ವಾ ನರಶ್ರೇಷ್ಠ ಚಿರಂ ಧ್ಯಾತ್ವಾ ತ್ವಚೇತನಃ।
11009002c ಸಂಜಯಂ ಯೋಜಯೇತ್ಯುಕ್ತ್ವಾ ವಿದುರಂ ಪ್ರತ್ಯಭಾಷತ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಆ ನರಶ್ರೇಷ್ಠನು ಬಹುಕಾಲ ಧ್ಯಾನಮಗ್ನನೂ ಅಚೇತನನೂ ಆಗಿದ್ದನು. ಅನಂತರ ಸಂಜಯನಿಗೆ ರಥವನ್ನು ಸಿದ್ಧಪಡಿಸಲು ಹೇಳಿ ವಿದುರನೊಡನೆ ಇಂತೆಂದನು:
11009003a ಕ್ಷಿಪ್ರಮಾನಯ ಗಾಂಧಾರೀಂ ಸರ್ವಾಶ್ಚ ಭರತಸ್ತ್ರಿಯಃ।
11009003c ವಧೂಂ ಕುಂತೀಮುಪಾದಾಯ ಯಾಶ್ಚಾನ್ಯಾಸ್ತತ್ರ ಯೋಷಿತಃ।।
“ಬೇಗನೇ ಗಾಂಧಾರಿಯನ್ನೂ ಸರ್ವ ಭರತಸ್ತ್ರೀಯರನ್ನೂ ಕರೆದುಕೊಂಡು ಬಾ! ನಾದಿನಿ ಕುಂತಿಯನ್ನೂ ಅವಳ ಬಳಿಯಿರುವ ಅನ್ಯ ಸ್ತ್ರೀಯರನ್ನು ಕರೆದುಕೊಂಡು ಬಾ!”
11009004a ಏವಮುಕ್ತ್ವಾ ಸ ಧರ್ಮಾತ್ಮಾ ವಿದುರಂ ಧರ್ಮವಿತ್ತಮಮ್।
11009004c ಶೋಕವಿಪ್ರಹತಜ್ಞಾನೋ ಯಾನಮೇವಾನ್ವಪದ್ಯತ।।
ಧರ್ಮಾತ್ಮಾ ಧರ್ಮವಿತ್ತಮ ವಿದುರನಿಗೆ ಹೀಗೆ ಹೇಳಿ ಶೋಕದಿಂದ ಪ್ರಜ್ಞೆಯನ್ನೇ ಕಳೆದುಕೊಂಡಿದ್ದ ಅವನು ರಥವನ್ನೇರಿದನು.
11009005a ಗಾಂಧಾರೀ ಚೈವ ಶೋಕಾರ್ತಾ ಭರ್ತುರ್ವಚನಚೋದಿತಾ।
11009005c ಸಹ ಕುಂತ್ಯಾ ಯತೋ ರಾಜಾ ಸಹ ಸ್ತ್ರೀಭಿರುಪಾದ್ರವತ್।।
ಶೋಕಾರ್ತಳಾದ ಗಾಂಧಾರಿಯೂ ಕೂಡ ಪತಿಯ ಮಾತಿನಂತೆ ಕುಂತಿ ಮತ್ತು ಇತರ ಸ್ತ್ರೀಯರೊಂದಿಗೆ ರಾಜನಿದ್ದಲ್ಲಿಗೆ ಆಗಮಿಸಿದಳು.
11009006a ತಾಃ ಸಮಾಸಾದ್ಯ ರಾಜಾನಂ ಭೃಶಂ ಶೋಕಸಮನ್ವಿತಾಃ।
11009006c ಆಮಂತ್ರ್ಯಾನ್ಯೋನ್ಯಮೀಯುಃ ಸ್ಮ ಭೃಶಮುಚ್ಚುಕ್ರುಶುಸ್ತತಃ।।
ರಾಜನ ಬಳಿಬಂದೊಡನೆಯೇ ಶೋಕಸಮನ್ವಿತರಾದ ಅವರೆಲ್ಲರೂ ಅನ್ಯೋನ್ಯರ ಹೆಸರನ್ನು ಕೂಗಿಕೊಳ್ಳುತ್ತಾ ಅನ್ಯೋನ್ಯರ ಕುತ್ತಿಗೆಯನ್ನು ತಬ್ಬಿಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದರು.
11009007a ತಾಃ ಸಮಾಶ್ವಾಸಯತ್ ಕ್ಷತ್ತಾ ತಾಭ್ಯಶ್ಚಾರ್ತತರಃ ಸ್ವಯಮ್।
11009007c ಅಶ್ರುಕಂಠೀಃ ಸಮಾರೋಪ್ಯ ತತೋಽಸೌ ನಿರ್ಯಯೌ ಪುರಾತ್।।
ಅವರನ್ನು ಸಮಾಧಾನಗೊಳಿಸುತ್ತಿದ್ದ ಕ್ಷತ್ತ ವಿದುರನು ಅವರಿಂದಾಗಿ ಸ್ವಯಂ ತಾನೇ ದುಃಖಿತನಾದನು. ಕಂಬನಿಯಿಂದ ಮಾತುಕಟ್ಟಿದ್ದ ಅವರೆಲ್ಲರನ್ನೂ ರಥದಲ್ಲಿ ಕುಳ್ಳಿರಿಸಿಕೊಂಡು ವಿದುರನು ಹಸ್ತಿನಾಪುರದಿಂದ ಹೊರಟನು.
11009008a ತತಃ ಪ್ರಣಾದಃ ಸಂಜಜ್ಞೇ ಸರ್ವೇಷು ಕುರುವೇಶ್ಮಸು।
11009008c ಆಕುಮಾರಂ ಪುರಂ ಸರ್ವಮಭವಚ್ಚೋಕಕರ್ಶಿತಮ್।।
ಕುರುಗಳ ಎಲ್ಲರ ಮನೆಯಲ್ಲಿಯೂ ಆಗ ಹೃದಯವನ್ನೇ ಸೀಳಿಬಿಡುವ ದೊಡ್ಡ ಆರ್ತನಾದವು ಕೇಳಿಬರುತ್ತಿತ್ತು. ಕುಮಾರರಿಂದ ಹಿಡಿದು ಹಸ್ತಿನಾಪುರದಲ್ಲಿ ಎಲ್ಲರೂ ಶೋಕಪೀಡಿತರಾಗಿದ್ದರು.
11009009a ಅದೃಷ್ಟಪೂರ್ವಾ ಯಾ ನಾರ್ಯಃ ಪುರಾ ದೇವಗಣೈರಪಿ।
11009009c ಪೃಥಗ್ಜನೇನ ದೃಶ್ಯಂತ ತಾಸ್ತದಾ ನಿಹತೇಶ್ವರಾಃ।।
ಹಿಂದೆ ದೇವತೆಗಳಿಗೂ ನೋಡಲು ದೊರೆಯದಿದ್ದ ಕುರುನಾರಿಯರು ತಮ್ಮ ಪತಿಗಳನ್ನು ಕಳೆದು ನಗರದ ಸಾಮಾನ್ಯ ಜನರ ದೃಷ್ಟಿಗೂ ಬೀಳುವಂತಾದರು!
11009010a ಪ್ರಕೀರ್ಯ ಕೇಶಾನ್ಸುಶುಭಾನ್ಭೂಷಣಾನ್ಯವಮುಚ್ಯ ಚ।
11009010c ಏಕವಸ್ತ್ರಧರಾ ನಾರ್ಯಃ ಪರಿಪೇತುರನಾಥವತ್।।
ಸುಂದರ ಕೇಶರಾಶಿಗಳನ್ನು ಕೆದರಿ, ಆಭರಣಗಳನ್ನು ಕಳಚಿ, ಏಕವಸ್ತ್ರಧಾರಿಯರಾಗಿ ಕುರು ನಾರಿಯರು ಅನಾಥರಂತೆ ಹೋಗುತ್ತಿದ್ದರು.
11009011a ಶ್ವೇತಪರ್ವತರೂಪೇಭ್ಯೋ ಗೃಹೇಭ್ಯಸ್ತಾಸ್ತ್ವಪಾಕ್ರಮನ್।
11009011c ಗುಹಾಭ್ಯ ಇವ ಶೈಲಾನಾಂ ಪೃಷತ್ಯೋ ಹತಯೂಥಪಾಃ।।
ಹಿಂಡಿನ ನಾಯಕನನ್ನು ಕಳೆದುಕೊಂಡ ಹೆಣ್ಣುಜಿಂಕೆಗಳು ಪರ್ವತದ ಗುಹೆಗಳಿಂದ ಹೊರಬರುವಂತೆ ಶ್ವೇತಪರ್ವತಗಳಂತಿದ್ದ ಭವನಗಳಿಂದ ಅವರು ಹೊರಬರುತ್ತಿದ್ದರು.
11009012a ತಾನ್ಯುದೀರ್ಣಾನಿ ನಾರೀಣಾಂ ತದಾ ವೃಂದಾನ್ಯನೇಕಶಃ।
11009012c ಶೋಕಾರ್ತಾನ್ಯದ್ರವನ್ರಾಜನ್ಕಿಶೋರೀಣಾಮಿವಾಂಗನೇ।।
ರಾಜನ್! ಅಂಗಳದಲ್ಲಿ ಸೇರಿದ್ದ ಕಿಶೋರಿಯರ ಗುಂಪಿನಂತಿದ್ದ ಶೋಕಾರ್ತ ನಾರಿಯರ ಅನೇಕ ಗುಂಪುಗಳು ರಣಭೂಮಿಯ ಕಡೆ ಹೊರಟವು.
11009013a ಪ್ರಗೃಹ್ಯ ಬಾಹೂನ್ಕ್ರೋಶಂತ್ಯಃ ಪುತ್ರಾನ್ಭ್ರಾತೄನ್ಪಿತೄನಪಿ।
11009013c ದರ್ಶಯಂತೀವ ತಾ ಹ ಸ್ಮ ಯುಗಾಂತೇ ಲೋಕಸಂಕ್ಷಯಮ್।।
ಪರಸ್ಪರರ ತೋಳನ್ನು ಹಿಡಿದು ತಮ್ಮ ಪುತ್ರರು, ಸಹೋದರರು ಮತ್ತು ತಂದೆಯರ ಹೆಸರನ್ನು ಹೇಳಿ ಕೂಗಿಕೊಳ್ಳುತ್ತಿದ್ದ ಅವರು ಯುಗಾಂತದ ಲೋಕವಿನಾಶವು ಹೇಗಿರುತ್ತದೆಯೆಂದು ತೋರಿಸುವಂತಿದ್ದರು.
11009014a ವಿಲಪಂತ್ಯೋ ರುದಂತ್ಯಶ್ಚ ಧಾವಮಾನಾಸ್ತತಸ್ತತಃ।
11009014c ಶೋಕೇನಾಭ್ಯಾಹತಜ್ಞಾನಾಃ ಕರ್ತವ್ಯಂ ನ ಪ್ರಜಜ್ಞಿರೇ।।
ವಿಲಪಿಸುತ್ತಿದ್ದ, ರೋದಿಸುತ್ತಿದ್ದ, ಮತ್ತು ಅಲ್ಲಿಂದಿಲ್ಲಿಗೆ ಓಡುತ್ತಾ ಶೋಕದಿಂದ ಪೀಡಿತರಾದ ಅವರು ಬುದ್ಧಿಯನ್ನೇ ಕಳೆದುಕೊಂಡು ಏನು ಮಾಡಬೇಕೆಂದು ತಿಳಿಯದಾಗಿದ್ದರು.
11009015a ವ್ರೀಡಾಂ ಜಗ್ಮುಃ ಪುರಾ ಯಾಃ ಸ್ಮ ಸಖೀನಾಮಪಿ ಯೋಷಿತಃ।
11009015c ತಾ ಏಕವಸ್ತ್ರಾ ನಿರ್ಲಜ್ಜಾಃ ಶ್ವಶ್ರೂಣಾಂ ಪುರತೋಽಭವನ್।।
ಇದಕ್ಕೆ ಮೊದಲು ತಮ್ಮ ದಾಸಿ ಮತ್ತು ಸಖಿಯರ ಮುಂದೆ ಬರಲೂ ನಾಚಿಕೊಳ್ಳುತ್ತಿದ್ದ ಅವರು ಈಗ ಏಕವಸ್ತ್ರರಾಗಿ ನಿರ್ಲಜ್ಜೆಯಿಂದ ತಮ್ಮ ಅತ್ತೆಯರ ಮುಂದೆ ನಿಂತಿದ್ದರು.
11009016a ಪರಸ್ಪರಂ ಸುಸೂಕ್ಷ್ಮೇಷು ಶೋಕೇಷ್ವಾಶ್ವಾಸಯನ್ಸ್ಮ ಯಾಃ।
11009016c ತಾಃ ಶೋಕವಿಹ್ವಲಾ ರಾಜನ್ನುಪೈಕ್ಷಂತ ಪರಸ್ಪರಮ್।।
ರಾಜನ್! ಮೊದಲು ಸಣ್ಣಪುಟ್ಟ ವ್ಯಸನಗಳಲ್ಲಿಯೂ ಪರಸ್ಪರರನ್ನು ಸಮಾಧಾನಪಡಿಸುತ್ತಿದ್ದ ಆ ಶೋಕವಿಹ್ವಲರು ಈಗ ಪರಸ್ಪರರನ್ನು ನೋಡುತ್ತಿದ್ದರು.
11009017a ತಾಭಿಃ ಪರಿವೃತೋ ರಾಜಾ ರುದತೀಭಿಃ ಸಹಸ್ರಶಃ।
11009017c ನಿರ್ಯಯೌ ನಗರಾದ್ದೀನಸ್ತೂರ್ಣಮಾಯೋಧನಂ ಪ್ರತಿ।।
ರೋದಿಸುತ್ತಿದ್ದ ಸಹಸ್ರಾರು ನಾರಿಯರಿಂದ ಪರಿವೃತನಾಗಿ ದೀನ ರಾಜನು ನಗರದಿಂದ ರಣಭೂಮಿಯ ಕಡೆ ಬೇಗನೇ ಪ್ರಯಾಣಮಾಡಿದನು.
11009018a ಶಿಲ್ಪಿನೋ ವಣಿಜೋ ವೈಶ್ಯಾಃ ಸರ್ವಕರ್ಮೋಪಜೀವಿನಃ।
11009018c ತೇ ಪಾರ್ಥಿವಂ ಪುರಸ್ಕೃತ್ಯ ನಿರ್ಯಯುರ್ನಗರಾದ್ ಬಹಿಃ।।
ಆ ರಾಜನನ್ನು ಹಿಂಬಾಲಿಸುತ್ತಾ ಶಿಲ್ಪಿಗಳು, ವರ್ತಕರು, ವೈಶ್ಯರು ಮತ್ತು ಸರ್ವ ಕರ್ಮಗಳಿಂದ ಉಪಜೀವನವನ್ನು ಮಾಡುತ್ತಿದ್ದವರು ನಗರದಿಂದ ಹೊರಟರು.
11009019a ತಾಸಾಂ ವಿಕ್ರೋಶಮಾನಾನಾಮಾರ್ತಾನಾಂ ಕುರುಸಂಕ್ಷಯೇ।
11009019c ಪ್ರಾದುರಾಸೀನ್ಮಹಾನ್ ಶಬ್ದೋ ವ್ಯಥಯನ್ಭುವನಾನ್ಯುತ।।
ಕುರುಸಂಕ್ಷಯದಿಂದುಂಟಾದ ಶೋಕದಿಂದ ಕೂಗಿಕೊಳ್ಳುತ್ತಿದ್ದ ಅವರ ಮಹಾಶಬ್ಧವು ಮೇಲೇರಿ ಭುವನಗಳನ್ನೂ ವ್ಯಥೆಗೊಳಿಸಿತು.
11009020a ಯುಗಾಂತಕಾಲೇ ಸಂಪ್ರಾಪ್ತೇ ಭೂತಾನಾಂ ದಹ್ಯತಾಮಿವ।
11009020c ಅಭಾವಃ ಸ್ಯಾದಯಂ ಪ್ರಾಪ್ತ ಇತಿ ಭೂತಾನಿ ಮೇನಿರೇ।।
ಇರುವವೆಲ್ಲವನ್ನೂ ಸುಟ್ಟುಬಿಡುವ ಯುಗಾಂತದ ಸಮಯವು ಈಗಲೇ ಒದಗಿಬಂದಿತೋ ಎಂದು ಭೂತಗಳು ತಿಳಿದುಕೊಂಡವು.
11009021a ಭೃಶಮುದ್ವಿಗ್ನಮನಸಸ್ತೇ ಪೌರಾಃ ಕುರುಸಂಕ್ಷಯೇ।
11009021c ಪ್ರಾಕ್ರೋಶಂತ ಮಹಾರಾಜ ಸ್ವನುರಕ್ತಾಸ್ತದಾ ಭೃಶಮ್।।
ಮಹಾರಾಜ! ಕುರುನಾಶದಿಂದ ತುಂಬಾ ಉದ್ವಿಗ್ನಮನಸ್ಕರಾಗಿದ್ದ ತಮ್ಮಲ್ಲಿಯೇ ಅನುರಕ್ತರಾಗಿದ್ದ ಪೌರರು ಗಟ್ಟಿಯಾಗಿ ಅಳತೊಡಗಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಧೃತರಾಷ್ಟ್ರನಿರ್ಗಮನೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಧೃತರಾಷ್ಟ್ರನಿರ್ಗಮನ ಎನ್ನುವ ಒಂಭತ್ತನೇ ಅಧ್ಯಾಯವು.