ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ವಿಶೋಕ ಪರ್ವ
ಅಧ್ಯಾಯ 8
ಸಾರ
ಮೂರ್ಛೆಯಿಂದ ಎದ್ದ ಧೃತರಾಷ್ಟ್ರನು ಪ್ರಾಣತ್ಯಾಗಮಾಡುತ್ತೇನೆಂದು ಹೇಳಲು ವ್ಯಾಸನು ಅವನಿಗೆ ದೇವರಹಸ್ಯದ ಕುರಿತು ಹೇಳಿ ಸಂತವಿಸಿದುದು (1-48).
11008001 ವೈಶಂಪಾಯನ ಉವಾಚ।
11008001a ವಿದುರಸ್ಯ ತು ತದ್ವಾಕ್ಯಂ ನಿಶಮ್ಯ ಕುರುಸತ್ತಮಃ।
11008001c ಪುತ್ರಶೋಕಾಭಿಸಂತಪ್ತಃ ಪಪಾತ ಭುವಿ ಮೂರ್ಚಿತಃ।।
ವೈಶಂಪಾಯನನು ಹೇಳಿದನು: “ವಿದುರನ ಆ ಮಾತನ್ನು ಕೇಳಿ ಕುರುಸತ್ತಮನು ಪುತ್ರಶೋಕದಿಂದ ಸಂತಪ್ತನಾಗಿ ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು.
11008002a ತಂ ತಥಾ ಪತಿತಂ ಭೂಮೌ ನಿಃಸಂಜ್ಞಂ ಪ್ರೇಕ್ಷ್ಯ ಬಾಂಧವಾಃ।
11008002c ಕೃಷ್ಣದ್ವೈಪಾಯನಶ್ಚೈವ ಕ್ಷತ್ತಾ ಚ ವಿದುರಸ್ತಥಾ।।
11008003a ಸಂಜಯಃ ಸುಹೃದಶ್ಚಾನ್ಯೇ ದ್ವಾಃಸ್ಥಾ ಯೇ ಚಾಸ್ಯ ಸಂಮತಾಃ।
11008003c ಜಲೇನ ಸುಖಶೀತೇನ ತಾಲವೃಂತೈಶ್ಚ ಭಾರತ।।
ಭಾರತ! ಹಾಗೆ ನಿಃಸಂಜ್ಞನಾಗಿ ಅವನು ನೆಲದ ಮೇಲೆ ಬಿದ್ದುದನ್ನು ನೋಡಿ ಅಲ್ಲಿದ್ದ ಬಾಂಧವರು – ಕೃಷ್ಣದ್ವೈಪಾಯನ, ಕ್ಷತ್ತ ವಿದುರ - ಮತ್ತು ಅನ್ಯ ವಿಶ್ವಸನೀಯ ಸುಹೃದಯರು – ಸಂಜಯ ಮತ್ತು ದ್ವಾರಪಾಲಕರು – ಸುಖಶೀತಲ ನೀರನ್ನು ಚುಮಿಕಿಸಿ ಬೀಸಣಿಗೆಯನ್ನು ಬೀಸಿದರು.
11008004a ಪಸ್ಪೃಶುಶ್ಚ ಕರೈರ್ಗಾತ್ರಂ ವೀಜಮಾನಾಶ್ಚ ಯತ್ನತಃ।
11008004c ಅನ್ವಾಸನ್ಸುಚಿರಂ ಕಾಲಂ ಧೃತರಾಷ್ಟ್ರಂ ತಥಾಗತಮ್।।
ಕೈಗಳಿಂದ ಅವನ ಶರೀರವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದ್ದ ಅವರು ಹಾಗೆಯೇ ಬಹಳ ಹೊತ್ತಿನವರೆಗೆ ಧೃತರಾಷ್ಟ್ರನ ಬಳಿಯೇ ಇದ್ದರು.
11008005a ಅಥ ದೀರ್ಘಸ್ಯ ಕಾಲಸ್ಯ ಲಬ್ಧಸಂಜ್ಞೋ ಮಹೀಪತಿಃ।
11008005c ವಿಲಲಾಪ ಚಿರಂ ಕಾಲಂ ಪುತ್ರಾಧಿಭಿರಭಿಪ್ಲುತಃ।।
ದೀರ್ಘಕಾಲದ ನಂತರ ಎಚ್ಚರಗೊಂಡ ಮಹೀಪತಿಯು ಪುತ್ರವ್ಯಸನದಿಂದ ಮುಳುಗಿಹೋಗಿ ಬಹಳ ಹೊತ್ತು ವಿಲಪಿಸುತ್ತಿದ್ದನು.
11008006a ದಿಗಸ್ತು ಖಲು ಮಾನುಷ್ಯಂ ಮಾನುಷ್ಯೇ ಚ ಪರಿಗ್ರಹಮ್।
11008006c ಯತೋಮೂಲಾನಿ ದುಃಖಾನಿ ಸಂಭವಂತಿ ಮುಹುರ್ಮುಹುಃ।।
“ಮನುಷ್ಯಜನ್ಮಕ್ಕೇ ಧಿಕ್ಕಾರ! ಮನುಷ್ಯನಾಗಿ ಹುಟ್ಟಿದಾಗಿನಿಂದ ಪುನಃ ಪುನಃ ದುಃಖಗಳು ಬರುತ್ತಲೇ ಇರುತ್ತವೆ!
11008007a ಪುತ್ರನಾಶೇಽರ್ಥನಾಶೇ ಚ ಜ್ಞಾತಿಸಂಬಂಧಿನಾಮಪಿ।
11008007c ಪ್ರಾಪ್ಯತೇ ಸುಮಹದ್ದುಃಖಂ ವಿಷಾಗ್ನಿಪ್ರತಿಮಂ ವಿಭೋ।।
ವಿಭೋ! ಪುತ್ರನಾಶ, ಅರ್ಥನಾಶ, ಜ್ಞಾತಿ-ಸಂಬಂಧಿಗಳ ನಾಶಗಳಿಂದ ವಿಷ ಮತ್ತು ಅಗ್ನಿಗಳಿಗೆ ಸಮಾನ ಮಹಾದುಃಖವು ಪ್ರಾಪ್ತವಾಗಿದೆ.
11008008a ಯೇನ ದಹ್ಯಂತಿ ಗಾತ್ರಾಣಿ ಯೇನ ಪ್ರಜ್ಞಾ ವಿನಶ್ಯತಿ।
11008008c ಯೇನಾಭಿಭೂತಃ ಪುರುಷೋ ಮರಣಂ ಬಹು ಮನ್ಯತೇ।।
ಇವುಗಳಿಂದ ದೇಹವು ಸುಡುತ್ತಿದೆ. ಪ್ರಜ್ಞೆಯು ನಾಶವಾಗುತ್ತಿದೆ. ಇದನ್ನು ಅನುಭವಿಸುತ್ತಿರುವ ಮನುಷ್ಯನಿಗೆ ಮರಣವೇ ಲೇಸೆನಿಸುತ್ತದೆ.
11008009a ತದಿದಂ ವ್ಯಸನಂ ಪ್ರಾಪ್ತಂ ಮಯಾ ಭಾಗ್ಯವಿಪರ್ಯಯಾತ್।
11008009c ತಚ್ಚೈವಾಹಂ ಕರಿಷ್ಯಾಮಿ ಅದ್ಯೈವ ದ್ವಿಜಸತ್ತಮ।।
ದ್ವಿಜಸತ್ತಮ! ಭಾಗ್ಯವಿಪರ್ಯಾಸದಿಂದ ನನಗೆ ಈ ವ್ಯಸನವು ಪ್ರಾಪ್ತವಾಗಿದೆ. ಇಂದೇ ನಾನು ಪ್ರಾಣತ್ಯಾಗಮಾಡುತ್ತೇನೆ!”
11008010a ಇತ್ಯುಕ್ತ್ವಾ ತು ಮಹಾತ್ಮಾನಂ ಪಿತರಂ ಬ್ರಹ್ಮವಿತ್ತಮಮ್।
11008010c ಧೃತರಾಷ್ಟ್ರೋಽಭವನ್ಮೂಢಃ ಶೋಕಂ ಚ ಪರಮಂ ಗತಃ।
11008010e ಅಭೂಚ್ಚ ತೂಷ್ಣೀಂ ರಾಜಾಸೌ ಧ್ಯಾಯಮಾನೋ ಮಹೀಪತೇ।।
ಹೀಗೆ ಅವನು ಮಹಾತ್ಮ ಬ್ರಹ್ಮವಿತ್ತಮ ತಂದೆಗೆ ಹೇಳಿ ಮೂಢನಾಗಿ ಪರಮ ಶೋಕಾನ್ವಿತನಾದನು. ಯೋಚನಾಮಗ್ನನಾಗಿದ್ದ ರಾಜ ಮಹೀಪತಿಯು ಸುಮ್ಮನಾದನು.
11008011a ತಸ್ಯ ತದ್ವಚನಂ ಶ್ರುತ್ವಾ ಕೃಷ್ಣದ್ವೈಪಾಯನಃ ಪ್ರಭುಃ।
11008011c ಪುತ್ರಶೋಕಾಭಿಸಂತಪ್ತಂ ಪುತ್ರಂ ವಚನಮಬ್ರವೀತ್।।
ಅವನ ಆ ಮಾತನ್ನು ಕೇಳಿ ಪ್ರಭು ಕೃಷ್ಣದ್ವೈಪಾಯನನು ಪುತ್ರಶೋಕದಿಂದ ಸಂತಪ್ತನಾಗಿದ್ದ ಪುತ್ರನಿಗೆ ಈ ಮಾತನ್ನಾಡಿದನು:
11008012a ಧೃತರಾಷ್ಟ್ರ ಮಹಾಬಾಹೋ ಯತ್ತ್ವಾಂ ವಕ್ಷ್ಯಾಮಿ ತಚ್ಚೃಣು।
11008012c ಶ್ರುತವಾನಸಿ ಮೇಧಾವೀ ಧರ್ಮಾರ್ಥಕುಶಲಸ್ತಥಾ।।
“ಧೃತರಾಷ್ಟ್ರ! ಮಹಾಬಾಹೋ! ನಾನು ನಿನಗೆ ಹೇಳುವುದನ್ನು ಕೇಳು. ನೀನು ವೇದಾಧ್ಯಯನ ಮಾಡಿರುವೆ. ಮೇಧಾವಿಯೂ ಧರ್ಮಾರ್ಥಕುಶಲನೂ ಆಗಿರುವೆ.
11008013a ನ ತೇಽಸ್ತ್ಯವಿದಿತಂ ಕಿಂ ಚಿದ್ವೇದಿತವ್ಯಂ ಪರಂತಪ।
11008013c ಅನಿತ್ಯತಾಂ ಹಿ ಮರ್ತ್ಯಾನಾಂ ವಿಜಾನಾಸಿ ನ ಸಂಶಯಃ।।
ಪರಂತಪ! ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ತಿಳಿಯಬೇಕಾಗಿರುವುದೂ ಯಾವುದೂ ಇಲ್ಲ. ಮನುಷ್ಯರ ಅನಿತ್ಯತೆಯನ್ನು ನೀನು ಅರಿತುಕೊಂಡಿದ್ದೇಯೆ. ಅದರಲ್ಲಿ ಸಂಶಯವಿಲ್ಲ!
11008014a ಅಧ್ರುವೇ ಜೀವಲೋಕೇ ಚ ಸ್ಥಾನೇ ವಾಶಾಶ್ವತೇ ಸತಿ।
11008014c ಜೀವಿತೇ ಮರಣಾಂತೇ ಚ ಕಸ್ಮಾಚ್ಚೋಚಸಿ ಭಾರತ।।
ಭಾರತ! ಜೀವಲೋಕವೇ ಅಶಾಶ್ವತವಾದುದು. ಸತ್ಯರ ಸ್ಥಾನವೇ ಶಾಶ್ವತವಾದುದು. ಜೀವಿಸಿರುವವನಿಗೆ ಮರಣವೇ ಅಂತ್ಯವಾದುದು. ಅದಕ್ಕಾಗಿ ಏಕೆ ದುಃಖಿಸುತ್ತಿರುವೆ?
11008015a ಪ್ರತ್ಯಕ್ಷಂ ತವ ರಾಜೇಂದ್ರ ವೈರಸ್ಯಾಸ್ಯ ಸಮುದ್ಭವಃ।
11008015c ಪುತ್ರಂ ತೇ ಕಾರಣಂ ಕೃತ್ವಾ ಕಾಲಯೋಗೇನ ಕಾರಿತಃ।।
ರಾಜೇಂದ್ರ! ನಿನ್ನ ಪುತ್ರನನ್ನೇ ಕಾರಣವನ್ನಾಗಿಸಿಕೊಂಡು ಕಾಲಯೋಗದಿಂದ ನಿನ್ನ ಪ್ರತ್ಯಕ್ಷದಲ್ಲಿಯೇ ಈ ವೈರವು ಹುಟ್ಟಿಕೊಂಡಿತು.
11008016a ಅವಶ್ಯಂ ಭವಿತವ್ಯೇ ಚ ಕುರೂಣಾಂ ವೈಶಸೇ ನೃಪ।
11008016c ಕಸ್ಮಾಚ್ಚೋಚಸಿ ತಾನ್ ಶೂರಾನ್ಗತಾನ್ಪರಮಿಕಾಂ ಗತಿಮ್।।
ನೃಪ! ಅವಶ್ಯವಾಗಿದ್ದ ಕುರುಗಳ ವಿನಾಶವು ನಡೆದುಹೋಯಿತು. ಪರಮ ಗತಿಯನ್ನು ಸೇರಿದ ಆ ಶೂರರಿಗಾಗಿ ಏಕೆ ನೀನು ಶೋಕಿಸುತ್ತಿರುವೆ?
11008017a ಜಾನತಾ ಚ ಮಹಾಬಾಹೋ ವಿದುರೇಣ ಮಹಾತ್ಮನಾ।
11008017c ಯತಿತಂ ಸರ್ವಯತ್ನೇನ ಶಮಂ ಪ್ರತಿ ಜನೇಶ್ವರ।।
ಜನೇಶ್ವರ! ಇದನ್ನು ತಿಳಿದಿದ್ದ ಮಹಾಬಾಹು ಮಹಾತ್ಮ ವಿದುರನು ಸರ್ವಶಕ್ತಿಗಳಿಂದ ಶಾಂತಿಗಾಗಿ ಪ್ರಯತ್ನಿಸಿದನು.
11008018a ನ ಚ ದೈವಕೃತೋ ಮಾರ್ಗಃ ಶಕ್ಯೋ ಭೂತೇನ ಕೇನ ಚಿತ್।
11008018c ಘಟತಾಪಿ ಚಿರಂ ಕಾಲಂ ನಿಯಂತುಮಿತಿ ಮೇ ಮತಿಃ।।
ಬಹುಕಾಲ ಪ್ರಯತ್ನಿಸಿದರೂ ದೈವವು ಮಾಡಿದ ಮಾರ್ಗವನ್ನು ಇರುವ ಯಾವುದೂ ತಡೆಯಲಾರದೆನ್ನುವುದು ನನ್ನ ಅಭಿಪ್ರಾಯ.
11008019a ದೇವತಾನಾಂ ಹಿ ಯತ್ಕಾರ್ಯಂ ಮಯಾ ಪ್ರತ್ಯಕ್ಷತಃ ಶ್ರುತಮ್।
11008019c ತತ್ತೇಽಹಂ ಸಂಪ್ರವಕ್ಷ್ಯಾಮಿ ಕಥಂ ಸ್ಥೈರ್ಯಂ ಭವೇತ್ತವ।।
ದೇವತೆಗಳ ಕಾರ್ಯವನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ ಮತ್ತು ಕೇಳಿದ್ದೇನೆ. ಅದನ್ನು ನಿನಗೆ ಹೇಳುತ್ತೇನೆ. ಅದರಿಂದ ನಿನಗೆ ಸ್ಥೈರ್ಯವುಂಟಾಗಬಹುದು.
11008020a ಪುರಾಹಂ ತ್ವರಿತೋ ಯಾತಃ ಸಭಾಮೈಂದ್ರೀಂ ಜಿತಕ್ಲಮಃ।
11008020c ಅಪಶ್ಯಂ ತತ್ರ ಚ ತದಾ ಸಮವೇತಾನ್ ದಿವೌಕಸಃ।
11008020e ನಾರದಪ್ರಮುಖಾಂಶ್ಚಾಪಿ ಸರ್ವಾನ್ದೇವಋಷೀಂಸ್ತಥಾ।।
ಶ್ರಮವನ್ನು ಜಯಿಸಿರುವ ನಾನು ಹಿಂದೆ ತ್ವರೆಮಾಡಿ ಇಂದ್ರನ ಸಭೆಗೆ ಹೋಗಿದ್ದೆನು. ಅಲ್ಲಿ ದಿವೌಕಸರು, ಮತ್ತು ನಾರದನೇ ಮೊದಲಾದ ಸರ್ವ ದೇವಋಷಿಗಳು ನೆರೆದಿರುವುದನ್ನು ನೋಡಿದೆನು.
11008021a ತತ್ರ ಚಾಪಿ ಮಯಾ ದೃಷ್ಟಾ ಪೃಥಿವೀ ಪೃಥಿವೀಪತೇ।
11008021c ಕಾರ್ಯಾರ್ಥಮುಪಸಂಪ್ರಾಪ್ತಾ ದೇವತಾನಾಂ ಸಮೀಪತಃ।।
ಪೃಥಿವೀಪತೇ! ಅಲ್ಲಿ ಕಾರ್ಯಾರ್ಥವಾಗಿ ದೇವತೆಗಳ ಸಮೀಪ ಬಂದಿದ್ದ ಪೃಥ್ವಿಯನ್ನೂ ನೋಡಿದೆ.
11008022a ಉಪಗಮ್ಯ ತದಾ ಧಾತ್ರೀ ದೇವಾನಾಹ ಸಮಾಗತಾನ್।
11008022c ಯತ್ಕಾರ್ಯಂ ಮಮ ಯುಷ್ಮಾಭಿರ್ಬ್ರಹ್ಮಣಃ ಸದನೇ ತದಾ।
11008022e ಪ್ರತಿಜ್ಞಾತಂ ಮಹಾಭಾಗಾಸ್ತಚ್ಚೀಘ್ರಂ ಸಂವಿಧೀಯತಾಮ್।।
ಆಗ ಧರಿತ್ರಿಯು ಬಳಿಸಾರಿ ನೆರೆದಿದ್ದ ದೇವತೆಗಳಿಗೆ ಹೇಳಿದಳು: “ಮಹಾಭಾಗರೇ! ಬ್ರಹ್ಮಸದನದಲ್ಲಿ ನೀವು ಪ್ರತಿಜ್ಞೆಮಾಡಿದ್ದ ನನ್ನ ಕಾರ್ಯವನ್ನು ಶೀಘ್ರವಾಗಿ ನಡೆಸಿಕೊಡಿರಿ!”
11008023a ತಸ್ಯಾಸ್ತದ್ವಚನಂ ಶ್ರುತ್ವಾ ವಿಷ್ಣುರ್ಲೋಕನಮಸ್ಕೃತಃ।
11008023c ಉವಾಚ ಪ್ರಹಸನ್ವಾಕ್ಯಂ ಪೃಥಿವೀಂ ದೇವಸಂಸದಿ।।
ಅವಳ ಆ ಮಾತನ್ನು ಕೇಳಿ ಲೋಕನಮಸ್ಕೃತ ವಿಷ್ಣುವು ನಗುತ್ತಾ ದೇವಸಂಸದಿಯಲ್ಲಿ ಪೃಥ್ವಿಗೆ ಈ ಮಾತನ್ನಾಡಿದನು:
11008024a ಧೃತರಾಷ್ಟ್ರಸ್ಯ ಪುತ್ರಾಣಾಂ ಯಸ್ತು ಜ್ಯೇಷ್ಠಃ ಶತಸ್ಯ ವೈ।
11008024c ದುರ್ಯೋಧನ ಇತಿ ಖ್ಯಾತಃ ಸ ತೇ ಕಾರ್ಯಂ ಕರಿಷ್ಯತಿ।
11008024e ತಂ ಚ ಪ್ರಾಪ್ಯ ಮಹೀಪಾಲಂ ಕೃತಕೃತ್ಯಾ ಭವಿಷ್ಯಸಿ।।
“ಧೃತರಾಷ್ಟ್ರನ ನೂರು ಪುತ್ರರಲ್ಲಿ ಜ್ಯೇಷ್ಠನಾದ ದುರ್ಯೋಧನನೆಂದು ಖ್ಯಾತನಾಗಿರುವ ಅವನು ನಿನ್ನ ಕಾರ್ಯವನ್ನು ಮಾಡಿಕೊಡುತ್ತಾನೆ. ಆ ಮಹೀಪಾಲನನ್ನು ಹೊಂದಿದ ನೀನು ಕೃತಕೃತ್ಯಳಾಗುವೆ!
11008025a ತಸ್ಯಾರ್ಥೇ ಪೃಥಿವೀಪಾಲಾಃ ಕುರುಕ್ಷೇತ್ರೇ ಸಮಾಗತಾಃ।
11008025c ಅನ್ಯೋನ್ಯಂ ಘಾತಯಿಷ್ಯಂತಿ ದೃಢೈಃ ಶಸ್ತ್ರೈಃ ಪ್ರಹಾರಿಣಃ।।
ಅವನಿಗೋಸ್ಕರವಾಗಿ ಪೃಥ್ವೀಪಾಲರು ಕುರುಕ್ಷೇತ್ರದಲ್ಲಿ ಸೇರಿ ದೃಢ ಶಸ್ತ್ರ ಪ್ರಹಾರಗಳಿಂದ ಅನ್ಯೋನ್ಯರನ್ನು ಸಂಹರಿಸುತ್ತಾರೆ.
11008026a ತತಸ್ತೇ ಭವಿತಾ ದೇವಿ ಭಾರಸ್ಯ ಯುಧಿ ನಾಶನಮ್।
11008026c ಗಚ್ಚ ಶೀಘ್ರಂ ಸ್ವಕಂ ಸ್ಥಾನಂ ಲೋಕಾನ್ಧಾರಯ ಶೋಭನೇ।।
ದೇವೀ! ಆ ಯುದ್ಧದಲ್ಲಿ ನೀನು ಹೊತ್ತಿರುವ ಭಾರವು ನಾಶವಾಗುತ್ತದೆ. ಶೋಭನೇ! ಶೀಘ್ರವಾಗಿ ನಿನ್ನ ಸ್ವಸ್ಥಾನಕ್ಕೆ ತೆರಳಿ ಲೋಕಗಳನ್ನು ಧರಿಸು!”
11008027a ಸ ಏಷ ತೇ ಸುತೋ ರಾಜಽಲ್ಲೋಕಸಂಹಾರಕಾರಣಾತ್।
11008027c ಕಲೇರಂಶಃ ಸಮುತ್ಪನ್ನೋ ಗಾಂಧಾರ್ಯಾ ಜಠರೇ ನೃಪ।।
ರಾಜನ್! ನೃಪ! ಲೋಕಸಂಹಾರದ ಕಾರಣಾರ್ಥವಾಗಿ ಕಲಿಯ ಅಂಶದಿಂದ ಅವನು ಗಾಂಧಾರಿಯ ಜಠರದಲ್ಲಿ ನಿನ್ನ ಸುತನಾಗಿ ಹುಟ್ಟಿದನು.
11008028a ಅಮರ್ಷೀ ಚಪಲಶ್ಚಾಪಿ ಕ್ರೋಧನೋ ದುಷ್ಪ್ರಸಾಧನಃ।
11008028c ದೈವಯೋಗಾತ್ಸಮುತ್ಪನ್ನಾ ಭ್ರಾತರಶ್ಚಾಸ್ಯ ತಾದೃಶಾಃ।।
ದೈವಯೋಗದಿಂದ ಅಸಹನಶೀಲನೂ, ಚಪಲನೂ, ಕೋಪಿಷ್ಠನೂ, ಅಸಂತುಷ್ಟನೂ ಆಗಿದ್ದ ಅವನಂತೆಯೇ ಅವನ ಸಹೋದರರೂ ಹುಟ್ಟಿಕೊಂಡರು.
11008029a ಶಕುನಿರ್ಮಾತುಲಶ್ಚೈವ ಕರ್ಣಶ್ಚ ಪರಮಃ ಸಖಾ।
11008029c ಸಮುತ್ಪನ್ನಾ ವಿನಾಶಾರ್ಥಂ ಪೃಥಿವ್ಯಾಂ ಸಹಿತಾ ನೃಪಾಃ।
11008029e ಏತಮರ್ಥಂ ಮಹಾಬಾಹೋ ನಾರದೋ ವೇದ ತತ್ತ್ವತಃ।।
ಪೃಥ್ವಿಯ ನೃಪರನ್ನು ಒಟ್ಟಾಗಿ ವಿನಾಶಗೊಳಿಸಲಿಕ್ಕಾಗಿಯೇ ಅವನ ಮಾವ ಶಕುನಿಯೂ ಪರಮ ಸಖ ಕರ್ಣನೂ ಹುಟ್ಟಿದ್ದರು. ಮಹಾಬಾಹೋ! ಇದರ ಅರ್ಥವನ್ನು ನಾರದನು ತತ್ತ್ವತಃ ತಿಳಿದುಕೊಂಡಿದ್ದಾನೆ.
11008030a ಆತ್ಮಾಪರಾಧಾತ್ಪುತ್ರಾಸ್ತೇ ವಿನಷ್ಟಾಃ ಪೃಥಿವೀಪತೇ।
11008030c ಮಾ ತಾನ್ ಶೋಚಸ್ವ ರಾಜೇಂದ್ರ ನ ಹಿ ಶೋಕೇಽಸ್ತಿ ಕಾರಣಮ್।।
ಪೃಥಿವೀಪತೇ! ತಾವೇ ಮಾಡಿದ ಅಪರಾಧಗಳಿಂದ ನಿನ್ನ ಪುತ್ರರು ವಿನಾಶಹೊಂದಿದ್ದಾರೆ. ರಾಜೇಂದ್ರ! ಅವರ ಕುರಿತು ಶೋಕಿಸಬೇಡ! ಇದರಲ್ಲಿ ಶೋಕಿಸುವ ಕಾರಣವೇ ಇಲ್ಲ!
11008031a ನ ಹಿ ತೇ ಪಾಂಡವಾಃ ಸ್ವಲ್ಪಮಪರಾಧ್ಯಂತಿ ಭಾರತ।
11008031c ಪುತ್ರಾಸ್ತವ ದುರಾತ್ಮಾನೋ ಯೈರಿಯಂ ಘಾತಿತಾ ಮಹೀ।।
ಭಾರತ! ಪಾಂಡವರೂ ಕೂಡ ನಿನ್ನನ್ನು ಅಪರಾಧಿಯೆಂದು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ದುರಾತ್ಮರಾದ ನಿನ್ನ ಮಕ್ಕಳೇ ಈ ಮಹಿಯನ್ನು ವಿನಾಶಮಾಡಿದರು.
11008032a ನಾರದೇನ ಚ ಭದ್ರಂ ತೇ ಪೂರ್ವಮೇವ ನ ಸಂಶಯಃ।
11008032c ಯುಧಿಷ್ಠಿರಸ್ಯ ಸಮಿತೌ ರಾಜಸೂಯೇ ನಿವೇದಿತಮ್।।
ನಿನಗೆ ಮಂಗಳವಾಗಲಿ! ನಾರದನು ಹಿಂದೆಯೇ ಯುಧಿಷ್ಠಿರನ ರಾಜಸೂಯದ ಸಭೆಯಲ್ಲಿ ಇದನ್ನು ಹೇಳಿದ್ದನು. ಅದರಲ್ಲಿ ಸಂಶಯವೇ ಇಲ್ಲ.
11008033a ಪಾಂಡವಾಃ ಕೌರವಾಶ್ಚೈವ ಸಮಾಸಾದ್ಯ ಪರಸ್ಪರಮ್।
11008033c ನ ಭವಿಷ್ಯಂತಿ ಕೌಂತೇಯ ಯತ್ತೇ ಕೃತ್ಯಂ ತದಾಚರ।।
“ಕೌಂತೇಯ! ಪಾಂಡವರು ಮತ್ತು ಕೌರವರು ಪರಸ್ಪರರನ್ನು ಎದುರಿಸಿ ಇಲ್ಲವಾಗುತ್ತಾರೆ. ನೀನು ಮಾಡಬೇಕಾದ ಕರ್ತವ್ಯವನ್ನು ಮಾಡು!”
11008034a ನಾರದಸ್ಯ ವಚಃ ಶ್ರುತ್ವಾ ತದಾಶೋಚಂತ ಪಾಂಡವಾಃ।
11008034c ಏತತ್ತೇ ಸರ್ವಮಾಖ್ಯಾತಂ ದೇವಗುಹ್ಯಂ ಸನಾತನಮ್।।
ನಾರದನ ಮಾತನ್ನು ಕೇಳಿ ಪಾಂಡವರು ವ್ಯಥೆಪಟ್ಟಿದ್ದರು. ಇಗೋ ಸನಾತನವಾಗಿರುವ ಈ ದೇವರಹಸ್ಯವೆಲ್ಲವನ್ನೂ ಹೇಳಿದ್ದೇನೆ.
11008035a ಕಥಂ ತೇ ಶೋಕನಾಶಃ ಸ್ಯಾತ್ಪ್ರಾಣೇಷು ಚ ದಯಾ ಪ್ರಭೋ।
11008035c ಸ್ನೇಹಶ್ಚ ಪಾಂಡುಪುತ್ರೇಷು ಜ್ಞಾತ್ವಾ ದೈವಕೃತಂ ವಿಧಿಮ್।।
ಪ್ರಭೋ! ಇದನ್ನು ಕೇಳಿದ ನಂತರವಾದರೂ ದೈವವು ನಡೆಸಿದ ವಿಧಿಯನ್ನು ತಿಳಿದು ನಿನ್ನ ಶೋಕವು ನಾಶವಾಗಲಿ. ಪ್ರಾಣಗಳ ಮೇಲೆ ದಯೆವುಂಟಾಗಲಿ. ಮತ್ತು ಪಾಂಡುಪುತ್ರರೊಡನೆ ಸ್ನೇಹವು ಬೆಳೆಯಲಿ.
11008036a ಏಷ ಚಾರ್ಥೋ ಮಹಾಬಾಹೋ ಪೂರ್ವಮೇವ ಮಯಾ ಶ್ರುತಃ।
11008036c ಕಥಿತೋ ಧರ್ಮರಾಜಸ್ಯ ರಾಜಸೂಯೇ ಕ್ರತೂತ್ತಮೇ।।
11008037a ಯತಿತಂ ಧರ್ಮಪುತ್ರೇಣ ಮಯಾ ಗುಹ್ಯೇ ನಿವೇದಿತೇ।
11008037c ಅವಿಗ್ರಹೇ ಕೌರವಾಣಾಂ ದೈವಂ ತು ಬಲವತ್ತರಮ್।।
ಮಹಾಬಾಹೋ! ಇದರ ಅರ್ಥವನ್ನು ನಾನು ಬಹಳ ಹಿಂದೆಯೇ ಕೇಳಿದ್ದೆ. ಉತ್ತಮ ಕ್ರತು ರಾಜಸೂಯದಲ್ಲಿ ಧರ್ಮರಾಜನಿಗೂ ಇದನ್ನು ಹೇಳಿದ್ದೆ. ಈ ಗುಟ್ಟನ್ನು ನನ್ನಿಂದ ಕೇಳಿದ ಧರ್ಮಪುತ್ರನೂ ಕೌರವರೊಂದಿಗೆ ಕಲಹವಾಗದಂತೆ ಬಹಳವಾಗಿ ಪ್ರಯತ್ನಿಸಿದನು. ಆದರೆ ದೈವವೇ ಬಲವತ್ತರವಾದುದು.
11008038a ಅನತಿಕ್ರಮಣೀಯೋ ಹಿ ವಿಧೀ ರಾಜನ್ಕಥಂ ಚನ।
11008038c ಕೃತಾಂತಸ್ಯ ಹಿ ಭೂತೇನ ಸ್ಥಾವರೇಣ ತ್ರಸೇನ ಚ।।
ರಾಜನ್! ಕೃತಾಂತನ ಈ ವಿಧಿಯನ್ನು ಚರಾಚರ ಪ್ರಾಣಿಗಳಲ್ಲಿ ಯಾರಿಗೂ ಎಂದೂ ಅತಿಕ್ರಮಿಸಲಾಗುವುದಿಲ್ಲ.
11008039a ಭವಾನ್ಕರ್ಮಪರೋ ಯತ್ರ ಬುದ್ಧಿಶ್ರೇಷ್ಠಶ್ಚ ಭಾರತ।
11008039c ಮುಹ್ಯತೇ ಪ್ರಾಣಿನಾಂ ಜ್ಞಾತ್ವಾ ಗತಿಂ ಚಾಗತಿಮೇವ ಚ।।
ನೀನು ಕರ್ಮಪರನಾಗಿರುವೆ! ಭಾರತ! ಬುದ್ಧಿಶ್ರೇಷ್ಠನೂ ಆಗಿರುವೆ. ಪ್ರಾಣಿಗಳ ಆಗಮನ-ನಿರ್ಗಮನಗಳ ಕುರಿತು ತಿಳಿದಿರುವ ನೀನು ಏಕೆ ಮೋಹಿತನಾಗುವೆ?
11008040a ತ್ವಾಂ ತು ಶೋಕೇನ ಸಂತಪ್ತಂ ಮುಹ್ಯಮಾನಂ ಮುಹುರ್ಮುಹುಃ।
11008040c ಜ್ಞಾತ್ವಾ ಯುಧಿಷ್ಠಿರೋ ರಾಜಾ ಪ್ರಾಣಾನಪಿ ಪರಿತ್ಯಜೇತ್।।
ನೀನು ಶೋಕಸಂತಪ್ತನಾಗಿ ಪುನಃ ಪುನಃ ಮೂರ್ಛಿತನಾಗುತ್ತಿರುವೆ ಎಂದು ತಿಳಿದು ರಾಜಾ ಯುಧಿಷ್ಠಿರನು ಪ್ರಾಣಗಳನ್ನೂ ತ್ಯಜಿಸಿಯಾನು!
11008041a ಕೃಪಾಲುರ್ನಿತ್ಯಶೋ ವೀರಸ್ತಿರ್ಯಗ್ಯೋನಿಗತೇಷ್ವಪಿ।
11008041c ಸ ಕಥಂ ತ್ವಯಿ ರಾಜೇಂದ್ರ ಕೃಪಾಂ ವೈ ನ ಕರಿಷ್ಯತಿ।।
ರಾಜೇಂದ್ರ! ತಿರ್ಯಗ್ಯೋನಿಗಳಲ್ಲಿ ಜನಿಸಿರುವ ಪಶು-ಪಕ್ಷಿಗಳ ಮೇಲೂ ಕೃಪಾಲುವಾಗಿರುವ ಆ ವೀರನು ನಿನ್ನ ಮೇಲೆ ಏಕೆ ಕೃಪೆಯಿಂದ ನಡೆದುಕೊಳ್ಳುವುದಿಲ್ಲ?
11008042a ಮಮ ಚೈವ ನಿಯೋಗೇನ ವಿಧೇಶ್ಚಾಪ್ಯನಿವರ್ತನಾತ್।
11008042c ಪಾಂಡವಾನಾಂ ಚ ಕಾರುಣ್ಯಾತ್ಪ್ರಾಣಾನ್ಧಾರಯ ಭಾರತ।।
ಭಾರತ! ನನ್ನ ನಿಯೋಗದಿಂದ ವಿಧಿಯು ಅನತಿಕ್ರಮಣೀಯವೆಂದು ತಿಳಿದು ಪಾಂಡವರ ಮೇಲಿನ ಕಾರುಣ್ಯದಿಂದ ಪ್ರಾಣಧಾರಣೆಯನ್ನು ಮಾಡಿಕೊಂಡಿರು!
11008043a ಏವಂ ತೇ ವರ್ತಮಾನಸ್ಯ ಲೋಕೇ ಕೀರ್ತಿರ್ಭವಿಷ್ಯತಿ।
11008043c ಧರ್ಮಶ್ಚ ಸುಮಹಾಂಸ್ತಾತ ತಪ್ತಂ ಸ್ಯಾಚ್ಚ ತಪಶ್ಚಿರಾತ್।।
ಹೀಗೆ ನಡೆದುಕೊಂಡರೆ ಲೋಕದಲ್ಲಿ ಕೀರ್ತಿಯುಂಟಾಗುತ್ತದೆ. ಮಗೂ! ಮಹಾ ಧರ್ಮವನ್ನೂ ದೀರ್ಘಕಾಲದ ತಪಸ್ಸನ್ನೂ ಪಡೆದುಕೊಳ್ಳಬಹುದು.
11008044a ಪುತ್ರಶೋಕಸಮುತ್ಪನ್ನಂ ಹುತಾಶಂ ಜ್ವಲಿತಂ ಯಥಾ।
11008044c ಪ್ರಜ್ಞಾಂಭಸಾ ಮಹಾರಾಜ ನಿರ್ವಾಪಯ ಸದಾ ಸದಾ।।
ಮಹಾರಾಜ! ಪುತ್ರಶೋಕದಿಂದ ಹುಟ್ಟಿ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ಪ್ರಜ್ಞೆಯೆಂಬ ನೀರಿನಿಂದ ಸದಾಕಾಲಕ್ಕಾಗಿ ಆರಿಸು!”
11008045a ಏತಚ್ಚ್ರುತ್ವಾ ತು ವಚನಂ ವ್ಯಾಸಸ್ಯಾಮಿತತೇಜಸಃ।
11008045c ಮುಹೂರ್ತಂ ಸಮನುಧ್ಯಾಯ ಧೃತರಾಷ್ಟ್ರೋಽಭ್ಯಭಾಷತ।।
ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಕೇಳಿ ಮುಹೂರ್ತಕಾಲ ಯೋಚಿಸಿ ಧೃತರಾಷ್ಟ್ರನು ಹೇಳಿದನು:
11008046a ಮಹತಾ ಶೋಕಜಾಲೇನ ಪ್ರಣುನ್ನೋಽಸ್ಮಿ ದ್ವಿಜೋತ್ತಮ।
11008046c ನಾತ್ಮಾನಮವಬುಧ್ಯಾಮಿ ಮುಹ್ಯಮಾನೋ ಮುಹುರ್ಮುಹುಃ।।
“ದ್ವಿಜೋತ್ತಮ! ಮಹಾ ಶೋಕಜಾಲದಲ್ಲಿ ಸಿಲುಕಿಬಿಟ್ಟಿದ್ದೇನೆ! ಪುನಃಪುನಃ ಮೂರ್ಛಿತನಾಗಿ ನನ್ನನ್ನು ನಾನೇ ತಿಳಿಯದಂತಾಗಿದ್ದೇನೆ.
11008047a ಇದಂ ತು ವಚನಂ ಶ್ರುತ್ವಾ ತವ ದೈವನಿಯೋಗಜಮ್।
11008047c ಧಾರಯಿಷ್ಯಾಮ್ಯಹಂ ಪ್ರಾಣಾನ್ಯತಿಷ್ಯೇ ಚ ನಶೋಚಿತುಮ್।।
ದೈವವು ನಿಶ್ಚಯಿಸಿದುದು ಎಂಬ ನಿನ್ನ ಮಾತನ್ನು ಕೇಳಿ ಪ್ರಾಣಗಳನ್ನು ಹಿಡಿದುಕೊಳ್ಳುತ್ತೇನೆ ಮತ್ತು ಶೋಕಿಸದಿರಲು ಪ್ರಯತ್ನಿಸುತ್ತೇನೆ.”
11008048a ಏತಚ್ಚ್ರುತ್ವಾ ತು ವಚನಂ ವ್ಯಾಸಃ ಸತ್ಯವತೀಸುತಃ।
11008048c ಧೃತರಾಷ್ಟ್ರಸ್ಯ ರಾಜೇಂದ್ರ ತತ್ರೈವಾಂತರಧೀಯತ।।
ರಾಜೇಂದ್ರ ಧೃತರಾಷ್ಟ್ರನ ಆ ಮಾತನ್ನು ಕೇಳಿ ಸತ್ಯವತೀಸುತ ವ್ಯಾಸನು ಅಲ್ಲಿತೇ ಅಂತರ್ಧಾನನಾದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಅಷ್ಟಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಎಂಟನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳೂ – 10/18, ಉಪಪರ್ವಗಳು-80/100, ಅಧ್ಯಾಯಗಳು-1309/1995, ಶ್ಲೋಕಗಳು-49474/73784.