007 ಧೃತರಾಷ್ಟ್ರಶೋಕಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ವಿಶೋಕ ಪರ್ವ

ಅಧ್ಯಾಯ 7

ಸಾರ

ವಿದುರನು ಧೃತರಾಷ್ಟ್ರನನ್ನು ತತ್ತ್ವಯುಕ್ತ ಮಾತುಗಳಿಂದ ಸಂತವಿಸಿದುದು (1-20).

11007001 ಧೃತರಾಷ್ಟ್ರ ಉವಾಚ।
11007001a ಅಹೋಽಭಿಹಿತಮಾಖ್ಯಾನಂ ಭವತಾ ತತ್ತ್ವದರ್ಶಿನಾ।
11007001c ಭೂಯ ಏವ ತು ಮೇ ಹರ್ಷಃ ಶ್ರೋತುಂ ವಾಗಮೃತಂ ತವ।।

ಧೃತರಾಷ್ಟ್ರನು ಹೇಳಿದನು: “ಅಯ್ಯಾ! ತತ್ತ್ವದರ್ಶಿಯಾದ ನಿನ್ನಿಂದ ಈ ಅದ್ಭುತ ಆಖ್ಯಾನವನ್ನು ಕೇಳಿದೆನು. ನಿನ್ನ ವಚನಾಮೃತವನ್ನು ಇನ್ನೂ ಕೇಳಲು ನನಗೆ ಹರ್ಷವಾಗುತ್ತದೆ.”

11007002 ವಿದುರ ಉವಾಚ।
11007002a ಶೃಣು ಭೂಯಃ ಪ್ರವಕ್ಷ್ಯಾಮಿ ಮಾರ್ಗಸ್ಯೈತಸ್ಯ ವಿಸ್ತರಮ್।
11007002c ಯಚ್ಚ್ರುತ್ವಾ ವಿಪ್ರಮುಚ್ಯಂತೇ ಸಂಸಾರೇಭ್ಯೋ ವಿಚಕ್ಷಣಾಃ।।

ವಿದುರನು ಹೇಳಿದನು: “ಇದರ ಮಾರ್ಗವನ್ನು ವಿಸ್ತಾರವಾಗಿ ಇನ್ನೊಮ್ಮೆ ಹೇಳುತ್ತೇನೆ. ಕೇಳು. ಇದನ್ನು ಕೇಳಿದ ವಿಚಕ್ಷಣರು ಸಂಸಾರಬಂಧನದಿಂದ ವಿಮುಕ್ತರಾಗುತ್ತಾರೆ.

11007003a ಯಥಾ ತು ಪುರುಷೋ ರಾಜನ್ದೀರ್ಘಮಧ್ವಾನಮಾಸ್ಥಿತಃ।
11007003c ಕ್ವ ಚಿತ್ಕ್ವ ಚಿಚ್ಚ್ರಮಾತ್ ಸ್ಥಾತಾ ಕುರುತೇ ವಾಸಮೇವ ವಾ।।
11007004a ಏವಂ ಸಂಸಾರಪರ್ಯಾಯೇ ಗರ್ಭವಾಸೇಷು ಭಾರತ।
11007004c ಕುರ್ವಂತಿ ದುರ್ಬುಧಾ ವಾಸಂ ಮುಚ್ಯಂತೇ ತತ್ರ ಪಂಡಿತಾಃ।।

ರಾಜನ್! ದೀರ್ಘ ಯಾತ್ರೆಯನ್ನು ಕೈಗೊಂಡಿರುವ ಪುರುಷನು ಹೇಗೆ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಸಮಯ ಕೆಲವೆಡೆಗಳಲ್ಲಿ ತಂಗುತ್ತಾನೋ ಹಾಗೆ ಈ ಸಂಸಾರವೆಂಬ ಪಯಣದಲ್ಲಿ ಅನೇಕ ಗರ್ಭಗಳಲ್ಲಿ ಜೀವನು ತಂಗುತ್ತಾನೆ. ಭಾರತ! ಆದರೆ ತಿಳುವಳಿಕೆಯಿಲ್ಲದವರು ಮಾಡುವ ಈ ವಿಶ್ರಾಂತಿಯ ವಾಸದಿಂದ ಪಂಡಿತರಾದವರು ಮುಕ್ತರಾಗಿರುತ್ತಾರೆ.

11007005a ತಸ್ಮಾದಧ್ವಾನಮೇವೈತಮಾಹುಃ ಶಾಸ್ತ್ರವಿದೋ ಜನಾಃ।
11007005c ಯತ್ತು ಸಂಸಾರಗಹನಂ ವನಮಾಹುರ್ಮನೀಷಿಣಃ।।

ಸಂಸಾರವನ್ನು ಗಹನ ವನಕ್ಕೆ ಹೇಗೆ ಮನೀಷಿಣರು ಹೋಲಿಸುತ್ತಾರೋ ಹಾಗೆ ಶಾಸ್ತ್ರಗಳನ್ನು ತಿಳಿದವರು ಗರ್ಭಾವಾಸವನ್ನು ದೀರ್ಘಯಾತ್ರೆಯ ತಂಗುದಾಣವೆಂದು ನಿರೂಪಿಸಿರುತ್ತಾರೆ.

11007006a ಸೋಽಯಂ ಲೋಕಸಮಾವರ್ತೋ ಮರ್ತ್ಯಾನಾಂ ಭರತರ್ಷಭ।
11007006c ಚರಾಣಾಂ ಸ್ಥಾವರಾಣಾಂ ಚ ಗೃಧ್ಯೇತ್ತತ್ರ ನ ಪಂಡಿತಃ।।

ಭರತರ್ಷಭ! ಈ ರೀತಿ ಮರ್ತ್ಯರ, ಸ್ಥಾವರ-ಚರಗಳ ಲೋಕಚಕ್ರವು ತಿರುಗುತ್ತಿರುತ್ತದೆ. ಪಂಡಿತರು ಇದರಲ್ಲಿ ಆಸಕ್ತರಾಗುವುದಿಲ್ಲ.

11007007a ಶಾರೀರಾ ಮಾನಸಾಶ್ಚೈವ ಮರ್ತ್ಯಾನಾಂ ಯೇ ತು ವ್ಯಾಧಯಃ।
11007007c ಪ್ರತ್ಯಕ್ಷಾಶ್ಚ ಪರೋಕ್ಷಾಶ್ಚ ತೇ ವ್ಯಾಲಾಃ ಕಥಿತಾ ಬುಧೈಃ।।

ಮನುಷ್ಯರ ಶಾರೀರಿಕ ಮತ್ತು ಮಾನಸಿಕ, ಪ್ರತ್ಯಕ್ಷ ಮತ್ತು ಪರೋಕ್ಷ ವ್ಯಾಧಿಗಳನ್ನು ವಿಷಸರ್ಪಗಳೆಂದು ತಿಳಿದವರು ಹೇಳುತ್ತಾರೆ.

11007008a ಕ್ಲಿಶ್ಯಮಾನಾಶ್ಚ ತೈರ್ನಿತ್ಯಂ ಹನ್ಯಮಾನಾಶ್ಚ ಭಾರತ।
11007008c ಸ್ವಕರ್ಮಭಿರ್ಮಹಾವ್ಯಾಲೈರ್ನೋದ್ವಿಜಂತ್ಯಲ್ಪಬುದ್ಧಯಃ।।

ಭಾರತ! ಸ್ವಕರ್ಮಗಳ ಫಲಗಳಾಗಿರುವ ಇವುಗಳಿಂದ ನಿತ್ಯವೂ ಪೀಡಿಸಲ್ಪಟ್ಟು ಸಾಯುತ್ತಿದ್ದರೂ ಅಲ್ಪಬುದ್ಧಿಯವರು ಈ ವಿಷಸರ್ಪಗಳಿಂದ ಉದ್ವಿಗ್ನರಾಗುವುದಿಲ್ಲ.

11007009a ಅಥಾಪಿ ತೈರ್ವಿಮುಚ್ಯೇತ ವ್ಯಾಧಿಭಿಃ ಪುರುಷೋ ನೃಪ।
11007009c ಆವೃಣೋತ್ಯೇವ ತಂ ಪಶ್ಚಾಜ್ಜರಾ ರೂಪವಿನಾಶಿನೀ।।

ನೃಪ! ಪುರುಷನು ವ್ಯಾಧಿಗಳಿಂದ ಬಿಡುಗಡೆ ಹೊಂದಿದರೂ, ನಂತರ ಅವನನ್ನು ರೂಪವಿನಾಶಿನೀ ಮುಪ್ಪು ಆವರಿಸುವುದು ನಿಶ್ಚಿತ!

11007010a ಶಬ್ಧರೂಪರಸಸ್ಪರ್ಶೈರ್ಗಂಧೈಶ್ಚ ವಿವಿಧೈರಪಿ।
11007010c ಮಜ್ಜಮಾನಂ ಮಹಾಪಂಕೇ ನಿರಾಲಂಬೇ ಸಮಂತತಃ।।
11007011a ಸಂವತ್ಸರರ್ತವೋ ಮಾಸಾಃ ಪಕ್ಷಾಹೋರಾತ್ರಸಂಧಯಃ।
11007011c ಕ್ರಮೇಣಾಸ್ಯ ಪ್ರಲುಮ್ಪಂತಿ ರೂಪಮಾಯುಸ್ತಥೈವ ಚ।।

ವಿವಿಧ ಶಬ್ಧ-ರೂಪ-ರಸ-ಸ್ಪರ್ಶ-ಗಂಧಗಳೆಂಬ ಮಹಾ ಕೆಸರಿನಲ್ಲಿ ಸುತ್ತಲೂ ಆಶ್ರಯವಿಲ್ಲದೇ ಮುಳುಗುತ್ತಿರುವವನ ರೂಪ-ವಯಸ್ಸುಗಳನ್ನು ಸಂವತ್ಸರ-ಮಾಸ-ಪಕ್ಷ-ಆಹೋ-ರಾತ್ರಿ-ಸಂಧ್ಯಾಕಾಲಗಳು ಕ್ರಮೇಣವಾಗಿ ಕ್ಷೀಣಿಸುತ್ತಾ ಬರುತ್ತವೆ.

11007012a ಏತೇ ಕಾಲಸ್ಯ ನಿಧಯೋ ನೈತಾನ್ಜಾನಂತಿ ದುರ್ಬುಧಾಃ।
11007012c ಅತ್ರಾಭಿಲಿಖಿತಾನ್ಯಾಹುಃ ಸರ್ವಭೂತಾನಿ ಕರ್ಮಣಾ।।

ಇವೇ ಕಾಲದ ಪ್ರತಿನಿಧಿಗಳು. ದುರ್ಬುಧರು ಇವುಗಳನ್ನು ಅರಿತುಕೊಂಡಿರುವುದಿಲ್ಲ. ಸರ್ವಭೂತಗಳ ಕರ್ಮಗಳನ್ನು ಮೊದಲೇ ಬರೆದಿಡಲಾಗಿದೆ ಎಂದು ಹೇಳುತ್ತಾರೆ.

11007013a ರಥಂ ಶರೀರಂ ಭೂತಾನಾಂ ಸತ್ತ್ವಮಾಹುಸ್ತು ಸಾರಥಿಮ್।
11007013c ಇಂದ್ರಿಯಾಣಿ ಹಯಾನಾಹುಃ ಕರ್ಮ ಬುದ್ಧಿಶ್ಚ ರಶ್ಮಯಃ।।

ಭೂತಗಳ ಶರೀರವನ್ನು ರಥವೆಂದೂ, ಸಾರಥಿಯನ್ನು ಅದರೊಳಗಿರುವ ಸತ್ತ್ವವೆಂದೂ ಹೇಳುತ್ತಾರೆ. ಇಂದ್ರಿಯಗಳನ್ನು ಕುದುರೆಗಳೆಂದೂ ಕರ್ಮಮಾಡುವ ಬುದ್ಧಿಯನ್ನು ಕಡಿವಾಣಗಳೆಂದೂ ಹೇಳುತ್ತಾರೆ.

11007014a ತೇಷಾಂ ಹಯಾನಾಂ ಯೋ ವೇಗಂ ಧಾವತಾಮನುಧಾವತಿ।
11007014c ಸ ತು ಸಂಸಾರಚಕ್ರೇಽಸ್ಮಿಂಶ್ಚಕ್ರವತ್ಪರಿವರ್ತತೇ।।

ಆ ಕುದುರೆಗಳು ಯಾವ ವೇಗದಲ್ಲಿ ಹೋಗುತ್ತಿರುತ್ತವೆಯೋ ಅದೇ ವೇಗದಲ್ಲಿ ಹೋಗುತ್ತಿರುವವನು ಈ ಸಂಸಾರ ಚಕ್ರದಲ್ಲಿ ಚಕ್ರದಂತೆ ತಿರುಗುತ್ತಿರುತ್ತಾನೆ.

11007015a ಯಸ್ತಾನ್ಯಮಯತೇ ಬುದ್ಧ್ಯಾ ಸ ಯಂತಾ ನ ನಿವರ್ತತೇ।
11007015c ಯಾಮ್ಯಮಾಹೂ ರಥಂ ಹ್ಯೇನಂ ಮುಹ್ಯಂತೇ ಯೇನ ದುರ್ಬುಧಾಃ।।

ಬುದ್ಧಿಯಿಂದ ಯಾರು ಇದನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾನೋ ಅವನು ಸಂಸಾರಚಕ್ರಕ್ಕೆ ಹಿಂದಿರುಗುವುದಿಲ್ಲ. ಯಾಮ್ಯರಥವೆಂದು ಕರೆಯಲ್ಪಡುವ ಇದರಿಂದ ಮೂಢರು ವ್ಯಾಮೋಹಿತರಾಗಿರುತ್ತಾರೆ.

11007016a ಸ ಚೈತತ್ಪ್ರಾಪ್ನುತೇ ರಾಜನ್ಯತ್ತ್ವಂ ಪ್ರಾಪ್ತೋ ನರಾಧಿಪ।
11007016c ರಾಜ್ಯನಾಶಂ ಸುಹೃನ್ನಾಶಂ ಸುತನಾಶಂ ಚ ಭಾರತ।।

ರಾಜನ್! ನರಾಧಿಪ! ಭಾರತ! ನೀನು ಪಡೆದಿರುವ ರಾಜ್ಯನಾಶ, ಸುಹೃದಯರ ನಾಶ ಮತ್ತು ಮಕ್ಕಳ ನಾಶ ಮೊದಲಾದ ಅವಸ್ಥೆಯನ್ನೇ ಅವರೂ ಪಡೆಯುತ್ತಾರೆ.

11007017a ಅನುತರ್ಷುಲಮೇವೈತದ್ದುಃಖಂ ಭವತಿ ಭಾರತ।
11007017c ಸಾಧುಃ ಪರಮದುಃಖಾನಾಂ ದುಃಖಭೈಷಜ್ಯಮಾಚರೇತ್।।

ಭಾರತ! ಅತಿವ್ಯಾಮೋಹವೇ ದುಃಖಕ್ಕೆ ಕಾರಣವಾಗುತ್ತದೆ. ಸಾಧುವಾದವನು ಪರಮದುಃಖಗಳಿಗೆ ದುಃಖದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು.

11007018a ನ ವಿಕ್ರಮೋ ನ ಚಾಪ್ಯರ್ಥೋ ನ ಮಿತ್ರಂ ನ ಸುಹೃಜ್ಜನಃ।
11007018c ತಥೋನ್ಮೋಚಯತೇ ದುಃಖಾದ್ಯಥಾತ್ಮಾ ಸ್ಥಿರಸಂಯಮಃ।।

ಆತ್ಮದ ಸ್ಥಿರ-ಸಂಯಮಗಳಿಂದ ದೊರೆಯುವ ದುಃಖಾದಿಗಳ ಬಿಡುಗಡೆಯು ವಿಕ್ರಮದಿಂದಾಗಲೀ, ಸಂಪತ್ತಿನಿಂದಾಲೀ, ಮಿತ್ರ-ಸುಹೃಜ್ಜನರಿಂದಾಗಲೀ ದೊರೆಯುವುದಿಲ್ಲ.

11007019a ತಸ್ಮಾನ್ಮೈತ್ರಂ ಸಮಾಸ್ಥಾಯ ಶೀಲಮಾಪದ್ಯ ಭಾರತ।
11007019c ದಮಸ್ತ್ಯಾಗೋಽಪ್ರಮಾದಶ್ಚ ತೇ ತ್ರಯೋ ಬ್ರಹ್ಮಣೋ ಹಯಾಃ।।

ಆದುದರಿಂದ ಭಾರತ! ಸರ್ವತ್ರ ಸರ್ವರಲ್ಲಿಯೂ ಮೈತ್ರೀಭಾವವನ್ನು ಹೊಂದಿ ಶೀಲವನ್ನು ಪಡೆದುಕೋ! ದಮ, ತ್ಯಾಗ ಮತ್ತು ಅಪ್ರಮಾದ ಈ ಮೂರು ಬ್ರಹ್ಮನ ಸ್ಥಾನಕ್ಕೊಯ್ಯುವ ಕುದುರೆಗಳು.

11007020a ಶೀಲರಶ್ಮಿಸಮಾಯುಕ್ತೇ ಸ್ಥಿತೋ ಯೋ ಮಾನಸೇ ರಥೇ।
11007020c ತ್ಯಕ್ತ್ವಾ ಮೃತ್ಯುಭಯಂ ರಾಜನ್ಬ್ರಹ್ಮಲೋಕಂ ಸ ಗಚ್ಚತಿ।।

ರಾಜನ್! ಮನಸ್ಸಿನಲ್ಲಿ ಶೀಲವೆಂಬ ಕಡಿವಾಣವನ್ನು ಹಿಡಿದು ರಥದಲ್ಲಿ ಕುಳಿತಿರುವವನು ಮೃತ್ಯುಭಯವನ್ನು ತ್ಯಜಿಸಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಏಳನೇ ಅಧ್ಯಾಯವು.