005 ಧೃತರಾಷ್ಟ್ರಶೋಕಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ವಿಶೋಕ ಪರ್ವ

ಅಧ್ಯಾಯ 5

ಸಾರ

ವಿದುರನು ಬುದ್ಧಿಮಾರ್ಗದ ಕುರಿತು ಹೇಳುತ್ತಾ ಸಂಸಾರವನ್ನು ಗಹನ ವನಕ್ಕೆ ಹೋಲಿಸಿ ಧೃತರಾಷ್ಟ್ರನನ್ನು ಸಂತವಿಸಿದುದು (1-22).

11005001 ಧೃತರಾಷ್ಟ್ರ ಉವಾಚ।
11005001a ಯದಿದಂ ಧರ್ಮಗಹನಂ ಬುದ್ಧ್ಯಾ ಸಮನುಗಮ್ಯತೇ।
11005001c ಏತದ್ವಿಸ್ತರಶಃ ಸರ್ವಂ ಬುದ್ಧಿಮಾರ್ಗಂ ಪ್ರಶಂಸ ಮೇ।।

ಧೃತರಾಷ್ಟ್ರನು ಹೇಳಿದನು: “ಗಹನವಾದ ಈ ಧರ್ಮವನ್ನು ಬುದ್ಧಿಯಿಂದಲೇ ಅರ್ಥಮಾಡಿಕೊಳ್ಳಬಹುದಾದರೆ ಬುದ್ಧಿಮಾರ್ಗವನ್ನು ನನಗೆ ವಿಸ್ತಾರವಾಗಿ ಎಲ್ಲವನ್ನೂ ಹೇಳು!”

11005002 ವಿದುರ ಉವಾಚ।
11005002a ಅತ್ರ ತೇ ವರ್ತಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ।
11005002c ಯಥಾ ಸಂಸಾರಗಹನಂ ವದಂತಿ ಪರಮರ್ಷಯಃ।।

ವಿದುರನು ಹೇಳಿದನು: “ಸ್ವಯಂಭುವಿಗೆ ನಮಸ್ಕರಿಸಿ ಪರಮ ಋಷಿಗಳು ಸಂಸಾರವನ್ನು ಗಹನ ಅರಣ್ಯವೆಂದು ವರ್ಣಿಸಿರುವುದನ್ನು ನಿನಗೆ ಹೇಳುತ್ತೇನೆ.

11005003a ಕಶ್ಚಿನ್ಮಹತಿ ಸಂಸಾರೇ ವರ್ತಮಾನೋ ದ್ವಿಜಃ ಕಿಲ।
11005003c ವನಂ ದುರ್ಗಮನುಪ್ರಾಪ್ತೋ ಮಹತ್ಕ್ರವ್ಯಾದಸಂಕುಲಮ್।।

ಈ ಮಹಾಸಂಸಾರದಲ್ಲಿ ವಾಸಿಸುತ್ತಿದ್ದ ಓರ್ವ ದ್ವಿಜನು ಮಾಂಸಾಹಾರೀ ಮೃಗಗಳಿಂದ ತುಂಬಿದ್ದ ದುರ್ಗಮ ವನವೊಂದನ್ನು ಸೇರಿದನು.

11005004a ಸಿಂಹವ್ಯಾಘ್ರಗಜಾಕಾರೈರತಿಘೋರೈರ್ಮಹಾಶನೈಃ।
11005004c ಸಮಂತಾತ್ಸಂಪರಿಕ್ಷಿಪ್ತಂ ಮೃತ್ಯೋರಪಿ ಭಯಪ್ರದಮ್।।

ಎಲ್ಲಕಡೆಗಳಿಂದ ಅತಿ ಘೋರ ಸಿಂಹ, ಹುಲಿ, ಆನೆ ಮತ್ತು ಕರಡಿಗಳ ಮಹಾ ಗರ್ಜನೆಗಳಿಂದ ಕೂಡಿದ್ದ ಆ ವನವು ಮೃತ್ಯುವಿಗೂ ಭಯವನ್ನುಂಟುಮಾಡುವಂತಿತ್ತು.

11005005a ತದಸ್ಯ ದೃಷ್ಟ್ವಾ ಹೃದಯಮುದ್ವೇಗಮಗಮತ್ಪರಮ್।
11005005c ಅಭ್ಯುಚ್ಚ್ರಯಶ್ಚ ರೋಮ್ಣಾಂ ವೈ ವಿಕ್ರಿಯಾಶ್ಚ ಪರಂತಪ।।

ಪರಂತಪ! ಅದನ್ನು ನೋಡಿ ಪರಮ ಉದ್ವೇಗವು ಅವನ ಹೃದಯವನ್ನು ಆವರಿಸಿತು. ರೋಮಗಳು ನಿಮಿರಿ ನಿಂತು ಅನೇಕ ವಿಕಾರಗಳನ್ನು ಅವನು ಅನುಭವಿಸಿದನು.

11005006a ಸ ತದ್ವನಂ ವ್ಯನುಸರನ್ವಿಪ್ರಧಾವನಿತಸ್ತತಃ।
11005006c ವೀಕ್ಷಮಾಣೋ ದಿಶಃ ಸರ್ವಾಃ ಶರಣಂ ಕ್ವ ಭವೇದಿತಿ।।

ಆ ವನದಲ್ಲಿ ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಆ ವಿಪ್ರನು ಎಲ್ಲಿಯಾದರೂ ರಕ್ಷಣೆಯು ಸಿಕ್ಕೀತೇ ಎಂದು ಎಲ್ಲ ದಿಕ್ಕುಗಳಲ್ಲಿಯೂ ನೋಡತೊಡಗಿದನು.

11005007a ಸ ತೇಷಾಂ ಚಿದ್ರಮನ್ವಿಚ್ಚನ್ಪ್ರದ್ರುತೋ ಭಯಪೀಡಿತಃ।
11005007c ನ ಚ ನಿರ್ಯಾತಿ ವೈ ದೂರಂ ನ ಚ ತೈರ್ವಿಪ್ರಯುಜ್ಯತೇ।।

ಭಯಪೀಡಿತನಾದ ಅವನು ಭಯಗಳಿಲ್ಲದ ಒಂದು ದಾರಿಯನ್ನೇ ಹಿಡಿದು ಓಡತೊಡಗಿದನು. ಆದರೆ ಆ ವಿಪ್ರನಿಗೆ ಬಹಳ ದೂರ ಓಡಲಿಕ್ಕಾಗಲಿಲ್ಲ.

11005008a ಅಥಾಪಶ್ಯದ್ವನಂ ಘೋರಂ ಸಮಂತಾದ್ವಾಗುರಾವೃತಮ್।
11005008c ಬಾಹುಭ್ಯಾಂ ಸಂಪರಿಷ್ವಕ್ತಂ ಸ್ತ್ರಿಯಾ ಪರಮಘೋರಯಾ।।

ಕೂಡಲೇ ಆ ಘೋರ ವನವು ಸುತ್ತಲೂ ಬಲೆಯಿಂದ ಆವೃತವಾಗಿರುವುದನ್ನೂ, ಪರಮ ಘೋರ ಸ್ತ್ರೀಯೊಬ್ಬಳು ತನ್ನೆರಡು ಕೈಗಳಿಂದ ಬಲೆಯನ್ನು ಎಳೆದು ವನವನ್ನು ಮುಚ್ಚುತ್ತಿರುವುದನ್ನು ಅವನು ನೋಡಿದನು.

11005009a ಪಂಚಶೀರ್ಷಧರೈರ್ನಾಗೈಃ ಶೈಲೈರಿವ ಸಮುನ್ನತೈಃ।
11005009c ನಭಃಸ್ಪೃಶೈರ್ಮಹಾವೃಕ್ಷೈಃ ಪರಿಕ್ಷಿಪ್ತಂ ಮಹಾವನಮ್।।

ಆ ಮಹಾವನವು ಪರ್ವತಗಳಷ್ಟು ಎತ್ತರವಾಗಿರುವ ಐದು ಹೆಡೆಗಳ ನಾಗಗಳಿಂದಲೂ ಆಕಾಶವನ್ನು ಮುಟ್ಟುವ ಮಹಾ ವೃಕ್ಷಗಳಿಂದಲೂ ವ್ಯಾಪ್ತವಾಗಿತ್ತು.

11005010a ವನಮಧ್ಯೇ ಚ ತತ್ರಾಭೂದುದಪಾನಃ ಸಮಾವೃತಃ।
11005010c ವಲ್ಲೀಭಿಸ್ತೃಣಚನ್ನಾಭಿರ್ಗೂಢಾಭಿರಭಿಸಂವೃತಃ।।

ಆ ವನದ ಮಧ್ಯದಲ್ಲಿ ಹುಲ್ಲು ಮತ್ತು ಬಳ್ಳಿಗಳಿಂದ ಮುಚ್ಚಿ ಕಾಣದಂತಿದ್ದ ಬಾವಿಯೊಂದಿದ್ದಿತು.

11005011a ಪಪಾತ ಸ ದ್ವಿಜಸ್ತತ್ರ ನಿಗೂಢೇ ಸಲಿಲಾಶಯೇ।
11005011c ವಿಲಗ್ನಶ್ಚಾಭವತ್ತಸ್ಮಿಽಲ್ಲತಾಸಂತಾನಸಂಕಟೇ।।

ನಿಗೂಢವಾಗಿದ್ದ ಆ ಬಾವಿಯಲ್ಲಿ ದ್ವಿಜನು ಬಿದ್ದನು. ಆದರೆ ಗಟ್ಟಿಯಾದ ಬಳ್ಳಿಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡನು.

11005012a ಪನಸಸ್ಯ ಯಥಾ ಜಾತಂ ವೃಂತಬದ್ಧಂ ಮಹಾಫಲಮ್।
11005012c ಸ ತಥಾ ಲಂಬತೇ ತತ್ರ ಊರ್ಧ್ವಪಾದೋ ಹ್ಯಧಃಶಿರಾಃ।।

ದೊಡ್ಡ ಹಲಸಿನ ಹಣ್ಣು ತನ್ನ ತೊಟ್ಟಿನಿಂದ ಹಿಡಿಯಲ್ಪಟ್ಟು ಮರದಲ್ಲಿ ನೇತಾಡುವಂತೆ ಅವನು ಕಾಲು ಮೇಲೆ ಮತ್ತು ತಲೆ ಕೆಳಗಾಗಿ ನೇತಾಡುತ್ತಿದ್ದನು.

11005013a ಅಥ ತತ್ರಾಪಿ ಚಾನ್ಯೋಽಸ್ಯ ಭೂಯೋ ಜಾತ ಉಪದ್ರವಃ।
11005013c ಕೂಪವೀನಾಹವೇಲಾಯಾಮಪಶ್ಯತ ಮಹಾಗಜಮ್।।

ಆ ಪರಿಸ್ಥಿತಿಯಲ್ಲಿ ಕೂಡ ಅವನಿಗೆ ಇನ್ನೊಂದು ಉಪದ್ರವವು ಒದಗಿ ಬಂದಿತು. ಬಾವಿಯ ದಡದ ಮೇಲೆ ದೊಡ್ಡ ಆನೆಯೊಂದನ್ನು ನೋಡಿದನು.

11005014a ಷಡ್ವಕ್ತ್ರಂ ಕೃಷ್ಣಶಬಲಂ ದ್ವಿಷಟ್ಕಪದಚಾರಿಣಮ್।
11005014c ಕ್ರಮೇಣ ಪರಿಸರ್ಪಂತಂ ವಲ್ಲೀವೃಕ್ಷಸಮಾವೃತಮ್।।

ಅದಕ್ಕೆ ಆರು ಮುಖಗಳಿದ್ದವು. ಕಪ್ಪಾಗಿಯೂ ಬಿಳುಪಾಗಿಯೂ ಇತ್ತು. ಅದಕ್ಕೆ ಹನ್ನೆರಡು ಕಾಲುಗಳಿದ್ದವು. ಅದು ಬಳ್ಳಿ-ಮರಗಳಿಂದ ತುಂಬಿದ್ದ ಆ ಬಾವಿಯ ಕಡೆ ಕ್ರಮೇಣ ಬರುತ್ತಿತ್ತು.

11005015a ತಸ್ಯ ಚಾಪಿ ಪ್ರಶಾಖಾಸು ವೃಕ್ಷಶಾಖಾವಲಂಬಿನಃ।
11005015c ನಾನಾರೂಪಾ ಮಧುಕರಾ ಘೋರರೂಪಾ ಭಯಾವಹಾಃ।
11005015e ಆಸತೇ ಮಧು ಸಂಭೃತ್ಯ ಪೂರ್ವಮೇವ ನಿಕೇತಜಾಃ।।

ಅವನು ನೇತುಬಿದ್ದಿದ್ದ ಮರದ ರೆಂಬೆಗಳ ಶಾಪೋಪಶಾಖೆಗಳಲ್ಲಿ ನಾನಾರೂಪದ, ಘೋರರೂಪದ, ಭಯವನ್ನುಂಟುಮಾಡುವ ಜೇನುಹುಳುಗಳು ಗೂಡುಕಟ್ಟಿದ್ದವು. ಮೊದಲೇ ಸಂಗ್ರಹಿಸಿದ್ದ ಜೇನುತುಪ್ಪವನ್ನು ಅವುಗಳು ಸವಿಯುತ್ತಿದ್ದವು.

11005016a ಭೂಯೋ ಭೂಯಃ ಸಮೀಹಂತೇ ಮಧೂನಿ ಭರತರ್ಷಭ।
11005016c ಸ್ವಾದನೀಯಾನಿ ಭೂತಾನಾಂ ನ ಯೈರ್ಬಾಲೋಽಪಿ ತೃಪ್ಯತೇ।।

ಭರತರ್ಷಭ! ಜೀವಿಗಳಿಗೆ ಸ್ವಾದನೀಯವಾದ ಮತ್ತು ಬಾಲಕರಿಗೆ ತೃಪ್ತಿಯನ್ನೀಡುವ ಆ ಜೇನುತುಪ್ಪವನ್ನು ಅವುಗಳು ಪುನಃ ಪುನಃ ಹೀರುತ್ತಿದ್ದವು.

11005017a ತೇಷಾಂ ಮಧೂನಾಂ ಬಹುಧಾ ಧಾರಾ ಪ್ರಸ್ರವತೇ ಸದಾ।
11005017c ತಾಂ ಲಂಬಮಾನಃ ಸ ಪುಮಾನ್ಧಾರಾಂ ಪಿಬತಿ ಸರ್ವದಾ।
11005017e ನ ಚಾಸ್ಯ ತೃಷ್ಣಾ ವಿರತಾ ಪಿಬಮಾನಸ್ಯ ಸಂಕಟೇ।।

ಆ ಜೇನುಗೂಡುಗಳಿಂದ ಧಾರಾಕಾರವಾಗಿ ಬಹಳಷ್ಟು ಜೇನುತುಪ್ಪವು ಸುರಿಯುತ್ತಿದ್ದು. ಅಲ್ಲಿ ನೇತಾಡುತ್ತಿದ್ದ ಆ ಬ್ರಾಹ್ಮಣನು ಜೇನುತುಪ್ಪಿನ ಧಾರೆಯನ್ನು ಕುಡಿಯುತ್ತಿದ್ದನು. ಸಂಕಟದಲ್ಲಿದ್ದರೂ ಜೇನುತುಪ್ಪವನ್ನು ಕುಡಿಯುತ್ತಿದ್ದ ಅವನಿಗೆ ತೃಪ್ತಿಯೇ ಆಗಲಿಲ್ಲ.

11005018a ಅಭೀಪ್ಸತಿ ಚ ತಾಂ ನಿತ್ಯಮತೃಪ್ತಃ ಸ ಪುನಃ ಪುನಃ।
11005018c ನ ಚಾಸ್ಯ ಜೀವಿತೇ ರಾಜನ್ನಿರ್ವೇದಃ ಸಮಜಾಯತ।।

ರಾಜನ್! ಆಗಲೂ ಕೂಡ ಅವನು ನಿತ್ಯವೂ ಅತೃಪ್ತನಾಗಿ ಪುನಃ ಪುನಃ ಜೇನುತುಪ್ಪವನ್ನು ಬಯಸುತ್ತಿದ್ದನು. ಆಗಲೂ ಕೂಡ ಅವನಿಗೆ ಜೀವನದಲ್ಲಿ ವೈರಾಗ್ಯವುಂಟಾಗಲಿಲ್ಲ.

11005019a ತತ್ರೈವ ಚ ಮನುಷ್ಯಸ್ಯ ಜೀವಿತಾಶಾ ಪ್ರತಿಷ್ಠಿತಾ।
11005019c ಕೃಷ್ಣಾಃ ಶ್ವೇತಾಶ್ಚ ತಂ ವೃಕ್ಷಂ ಕುಟ್ಟಯಂತಿ ಸ್ಮ ಮೂಷಕಾಃ।।

ಅಲ್ಲಿ ಕೂಡ ಮನುಷ್ಯನ ಜೀವಿತದ ಆಸೆಯು ದೃಢವಾಗಿತ್ತು. ಬಿಳಿ ಮತ್ತು ಕಪ್ಪು ಬಣ್ಣದ ಇಲಿಗಳು ಆ ಮರವನ್ನು ಕಡಿಯುತ್ತಿದ್ದವು.

11005020a ವ್ಯಾಲೈಶ್ಚ ವನದುರ್ಗಾಂತೇ ಸ್ತ್ರಿಯಾ ಚ ಪರಮೋಗ್ರಯಾ।
11005020c ಕೂಪಾಧಸ್ತಾಚ್ಚ ನಾಗೇನ ವೀನಾಹೇ ಕುಂಜರೇಣ ಚ।।
11005021a ವೃಕ್ಷಪ್ರಪಾತಾಚ್ಚ ಭಯಂ ಮೂಷಕೇಭ್ಯಶ್ಚ ಪಂಚಮಮ್।
11005021c ಮಧುಲೋಭಾನ್ಮಧುಕರೈಃ ಷಷ್ಠಮಾಹುರ್ಮಹದ್ಭಯಮ್।।

ದುರ್ಗಮ ವನದಲ್ಲಿದ್ದ ಕ್ರೂರ ಮೃಗಗಳು, ಪರಮ ಉಗ್ರರೂಪದ ಸ್ತ್ರೀ, ಬಾವಿಯೊಳಗಿದ್ದ ನಾಗ ಮತ್ತು ಬಾವಿಯ ಮೇಲಿದ್ದ ಆನೆ, ಐದನೆಯದು ಇಲಿಗಳಿಂದ ಕಡಿಯಲ್ಪಡುತ್ತಿದ್ದ ಮರವು ಬೀಳುವ ಭಯ, ಮತ್ತು ಆರನೆಯದಾಗಿ ಜೇನುತುಪ್ಪವನ್ನು ಸವಿಯುತ್ತಿದ್ದ ತನ್ನನ್ನು ಜೇನುಹುಳುಗಳು ಕಡಿಯುವ ಮಹಾಭಯ!

11005022a ಏವಂ ಸ ವಸತೇ ತತ್ರ ಕ್ಷಿಪ್ತಃ ಸಂಸಾರಸಾಗರೇ।
11005022c ನ ಚೈವ ಜೀವಿತಾಶಾಯಾಂ ನಿರ್ವೇದಮುಪಗಚ್ಚತಿ।।

ಈ ರೀತಿ ಸಂಸಾರವೆಂಬ ಮಹಾಸಾಗರದಲ್ಲಿ ಮುಳುಗಿದವನು ಜೀವಿಸಿರುತ್ತಾನೆ. ಜೀವದ ಆಸೆಯಿಂದ ಅವನು ಖಂಡಿತವಾಗಿಯೂ ವೈರಾಗ್ಯವನ್ನು ಹೊಂದುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಐದನೇ ಅಧ್ಯಾಯವು.