004 ಧೃತರಾಷ್ಟ್ರಶೋಕಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ವಿಶೋಕ ಪರ್ವ

ಅಧ್ಯಾಯ 4

ಸಾರ

ಸಂಸಾರತತ್ತ್ವವನ್ನು ಹೇಳಿ ವಿದುರನು ಧೃತರಾಷ್ಟ್ರನನ್ನು ಸಂತವಿಸಿದುದು (1-15).

11004001 ಧೃತರಾಷ್ಟ್ರ ಉವಾಚ।
11004001a ಕಥಂ ಸಂಸಾರಗಹನಂ ವಿಜ್ಞೇಯಂ ವದತಾಂ ವರ।
11004001c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವಮಾಖ್ಯಾಹಿ ಪೃಚ್ಚತಃ।।

ಧೃತರಾಷ್ಟ್ರನು ಹೇಳಿದನು: “ಮಾತುನಾಡುವವರಲ್ಲಿ ಶ್ರೇಷ್ಠ! ಈ ಅಗಾಧ ಸಂಸಾರವನ್ನು ಹೇಗೆ ತಿಳಿದುಕೊಳ್ಳಬೇಕು? ಇದನ್ನು ಕೇಳಲು ಬಯಸುತ್ತೇನೆ. ಕೇಳುತ್ತಿರುವ ನನಗೆ ಈ ತತ್ತ್ವವನ್ನು ಹೇಳು.”

11004002 ವಿದುರ ಉವಾಚ।
11004002a ಜನ್ಮಪ್ರಭೃತಿ ಭೂತಾನಾಂ ಕ್ರಿಯಾಃ ಸರ್ವಾಃ ಶೃಣು ಪ್ರಭೋ।
11004002c ಪೂರ್ವಮೇವೇಹ ಕಲಲೇ ವಸತೇ ಕಿಂ ಚಿದಂತರಮ್।।

ವಿದುರನು ಹೇಳಿದನು: “ಪ್ರಭೋ! ಜನ್ಮಪ್ರಭೃತಿ ಭೂತಗಳ ಕ್ರಿಯೆಗಳೆಲ್ಲವನ್ನೂ ಕೇಳು. ಜನ್ಮಕ್ಕೆ ಮೊದಲು ಸ್ವಲ್ಪಕಾಲ ಗರ್ಭವು ಕಲಲದಲ್ಲಿ ವಾಸಿಸಿರುತ್ತದೆ.

11004003a ತತಃ ಸ ಪಂಚಮೇಽತೀತೇ ಮಾಸೇ ಮಾಂಸಂ ಪ್ರಕಲ್ಪಯೇತ್।
11004003c ತತಃ ಸರ್ವಾಂಗಸಂಪೂರ್ಣೋ ಗರ್ಭೋ ಮಾಸೇ ಪ್ರಜಾಯತೇ।।

ಅನಂತರ ಐದು ತಿಂಗಳು ಕಳೆಯಲು ಮಾಂಸದ ರೂಪವನ್ನು ಪಡೆಯುತ್ತದೆ. ಆಗ ಗರ್ಭವು ಸರ್ವಾಂಗಗಳನ್ನು ಪಡೆದು ಸಂಪೂರ್ಣವಾಗುತ್ತದೆ.

11004004a ಅಮೇಧ್ಯಮಧ್ಯೇ ವಸತಿ ಮಾಂಸಶೋಣಿತಲೇಪನೇ।
11004004c ತತಸ್ತು ವಾಯುವೇಗೇನ ಊರ್ಧ್ವಪಾದೋ ಹ್ಯಧಃಶಿರಾಃ।।

ಮಾಂಸರಕ್ತಗಳಿಂದ ಲೇಪನಗೊಂಡು ಅದು ಅಮೇಧ್ಯದ ಮಧ್ಯದಲ್ಲಿ ವಾಸಮಾಡುತ್ತದೆ. ಅನಂತರ ವಾಯುವೇಗದ ಕಾರಣದಿಂದ ಗರ್ಭವು ತಲೆಕೆಳಗೆ ಕಾಲು ಮೇಲೆ ಮಾಡಿಕೊಳ್ಳುತ್ತದೆ.

11004005a ಯೋನಿದ್ವಾರಮುಪಾಗಮ್ಯ ಬಹೂನ್ ಕ್ಲೇಶಾನ್ಸಮೃಚ್ಚತಿ।
11004005c ಯೋನಿಸಂಪೀಡನಾಚ್ಚೈವ ಪೂರ್ವಕರ್ಮಭಿರನ್ವಿತಃ।।

ಯೋನಿದ್ವಾರಕ್ಕೆ ಬಂದು ಅದು ಅನೇಕ ಕ್ಲೇಶಗಳನ್ನು ಅನುಭವಿಸುತ್ತದೆ. ಪೂರ್ವಕರ್ಮಗಳನ್ನು ಹೊತ್ತುತಂದಿರುವ ಅದು ಯೋನಿಪೀಡನೆಯನ್ನು ಅನುಭವಿಸುತ್ತದೆ.

11004006a ತಸ್ಮಾನ್ಮುಕ್ತಃ ಸ ಸಂಸಾರಾದನ್ಯಾನ್ಪಶ್ಯತ್ಯುಪದ್ರವಾನ್।
11004006c ಗ್ರಹಾಸ್ತಮುಪಸರ್ಪಂತಿ ಸಾರಮೇಯಾ ಇವಾಮಿಷಮ್।।

ಯೋನಿಪೀಡೆಯಿಂದ ಬಿಡುಗಡೆಹೊಂದಿ ಸಂಸಾರದಲ್ಲಿ ಅನ್ಯ ಉಪದ್ರವಗಳನ್ನು ಕಾಣುತ್ತದೆ. ನಾಯಿಗಳು ಮಾಂಸವನ್ನು ಹುಡುಕಿಕೊಂಡು ಹೋಗುವಂತೆ ಗ್ರಹಗಳು ಹುಟ್ಟಿದ ಮಗುವನ್ನು ಕಾಡುತ್ತವೆ.

11004007a ತತಃ ಪ್ರಾಪ್ತೋತ್ತರೇ ಕಾಲೇ ವ್ಯಾಧಯಶ್ಚಾಪಿ ತಂ ತಥಾ।
11004007c ಉಪಸರ್ಪಂತಿ ಜೀವಂತಂ ಬಧ್ಯಮಾನಂ ಸ್ವಕರ್ಮಭಿಃ।।

ಸಮಯವು ಕಳೆಯುತ್ತಿದ್ದಂತೆ ತನ್ನ ಕರ್ಮಗಳಿಂದಲೇ ಬಂಧಿತನಾದ ಜೀವವನ್ನು ವ್ಯಾಧಿಗಳು ಸಮೀಪಿಸುತ್ತವೆ.

11004008a ಬದ್ಧಮಿಂದ್ರಿಯಪಾಶೈಸ್ತಂ ಸಂಗಸ್ವಾದುಭಿರಾತುರಮ್।
11004008c ವ್ಯಸನಾನ್ಯುಪವರ್ತಂತೇ ವಿವಿಧಾನಿ ನರಾಧಿಪ।
11004008e ಬಧ್ಯಮಾನಶ್ಚ ತೈರ್ಭೂಯೋ ನೈವ ತೃಪ್ತಿಮುಪೈತಿ ಸಃ।।

ನರಾಧಿಪ! ಇಂದ್ರಿಯಗಳೆಂಬ ಹಗ್ಗಗಳಿಂದ ಬಂಧಿತನಾದ ಮತ್ತು ವಿಷಯಗಳಿಗೆ ಅಂಟಿಕೊಂಡಿರುವ ಆ ಜೀವವನ್ನು ವ್ಯಸನಗಳೂ ಕಾಡುತ್ತವೆ. ಅವುಗಳಿಂದ ಬಂಧಿತನಾದ ಅವನು ತೃಪ್ತಿಯನ್ನೇ ಹೊಂದುವುದಿಲ್ಲ.

11004009a ಅಯಂ ನ ಬುಧ್ಯತೇ ತಾವದ್ಯಮಲೋಕಮಥಾಗತಮ್।
11004009c ಯಮದೂತೈರ್ವಿಕೃಷ್ಯಂಶ್ಚ ಮೃತ್ಯುಂ ಕಾಲೇನ ಗಚ್ಚತಿ।।

ಆಗ ಅವನಿಗೆ ಯಮಲೋಕಕ್ಕೆ ಹೋಗುವೆನೆಂಬ ಅರಿವೆಯೇ ಇರುವುದಿಲ್ಲ. ಸಮಯಬಂದಾಗ ಯಮದೂತರಿಂದ ಎಳೆಯಲ್ಪಟ್ಟ ಅವನು ಮೃತ್ಯುವನ್ನು ಹೊಂದುತ್ತಾನೆ.

11004010a ವಾಗ್ಘೀನಸ್ಯ ಚ ಯನ್ಮಾತ್ರಮಿಷ್ಟಾನಿಷ್ಟಂ ಕೃತಂ ಮುಖೇ।
11004010c ಭೂಯ ಏವಾತ್ಮನಾತ್ಮಾನಂ ಬಧ್ಯಮಾನಮುಪೇಕ್ಷತೇ।।

ಮಾತನಾಡಲೂ ಶಕ್ಯನಾಗಿರದ ಅವನ ಮುಂದೆ ತಾನು ಮಾಡಿದ ಇಷ್ಟಾನಿಷ್ಟ ಕರ್ಮಗಳು ನಿಲ್ಲುತ್ತವೆ. ಮತ್ತೊಮ್ಮೆ ಆ ಕರ್ಮಗಳು ಅವನನ್ನು ಬಂಧಿಸುತ್ತಿದ್ದರೂ ಅವನು ಸುಮ್ಮನೇ ನೋಡುತ್ತಿರಬೇಕಾಗುತ್ತದೆ.

11004011a ಅಹೋ ವಿನಿಕೃತೋ ಲೋಕೋ ಲೋಭೇನ ಚ ವಶೀಕೃತಃ।
11004011c ಲೋಭಕ್ರೋಧಮದೋನ್ಮತ್ತೋ ನಾತ್ಮಾನಮವಬುಧ್ಯತೇ।।

ಅಯ್ಯೋ! ಲೋಭಕ್ಕೆ ಅಧೀನವಾಗಿ ಲೋಕವು ಮೋಸಹೋಗಿಬಿಟ್ಟಿದೆ! ಲೋಭ-ಕ್ರೋಧ-ಮದೋನ್ಮತ್ತವಾಗಿ ತನ್ನನ್ನು ತಾನೇ ತಿಳಿದುಕೊಳ್ಳದಾಗಿದೆ.

11004012a ಕುಲೀನತ್ವೇನ ರಮತೇ ದುಷ್ಕುಲೀನಾನ್ವಿಕುತ್ಸಯನ್।
11004012c ಧನದರ್ಪೇಣ ದೃಪ್ತಶ್ಚ ದರಿದ್ರಾನಪರಿಕುತ್ಸಯನ್।।

ಉತ್ತಮ ಕುಲದಲ್ಲಿ ಹುಟ್ಟಿದವನು ಕೀಳುಕುಲದಲ್ಲಿ ಹುಟ್ಟಿದವನನ್ನು ನಿಂದಿಸುತ್ತಾ ರಮಿಸುತ್ತಾನೆ. ಧನದ ದರ್ಪದಿಂದ ಗರ್ವಿತರಾಗಿ ದರಿದ್ರರನ್ನು ಅಪಹಾಸ್ಯಮಾಡುತ್ತಾರೆ.

11004013a ಮೂರ್ಖಾನಿತಿ ಪರಾನಾಹ ನಾತ್ಮಾನಂ ಸಮವೇಕ್ಷತೇ।
11004013c ಶಿಕ್ಷಾಂ ಕ್ಷಿಪತಿ ಚಾನ್ಯೇಷಾಂ ನಾತ್ಮಾನಂ ಶಾಸ್ತುಮಿಚ್ಚತಿ।।

ಇತರರು ಮೂರ್ಖರೆಂದು ಹೇಳುತ್ತಾನೆಯೇ ಹೊರತು ತನ್ನನ್ನು ತಾನು ಪರೀಕ್ಷಿಸಿಕೊಳ್ಳುವುದಿಲ್ಲ. ಇತರರ ಮೇಲೆ ದೋಷಗಳನ್ನು ಹೊರಿಸುತ್ತಾನೆಯೇ ಹೊರತು ತನ್ನನ್ನು ತಾನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ.

11004014a ಅಧ್ರುವೇ ಜೀವಲೋಕೇಽಸ್ಮಿನ್ಯೋ ಧರ್ಮಮನುಪಾಲಯನ್।
11004014c ಜನ್ಮಪ್ರಭೃತಿ ವರ್ತೇತ ಪ್ರಾಪ್ನುಯಾತ್ಪರಮಾಂ ಗತಿಮ್।।

ಅಶಾಶ್ವತವಾದ ಈ ಜಗತ್ತಿನಲ್ಲಿ ಯಾರು ಜನ್ಮಪ್ರಭೃತಿ ಧರ್ಮವನ್ನು ಅನುಸರಿಸಿ ಜೀವನ ನಡೆಸುತ್ತಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ.

11004015a ಏವಂ ಸರ್ವಂ ವಿದಿತ್ವಾ ವೈ ಯಸ್ತತ್ತ್ವಮನುವರ್ತತೇ।
11004015c ಸ ಪ್ರಮೋಕ್ಷಾಯ ಲಭತೇ ಪಂಥಾನಂ ಮನುಜಾಧಿಪ।।

ಮನುಜಾಧಿಪ! ಹೀಗೆ ಸರ್ವವನ್ನೂ ತಿಳಿದುಕೊಂಡು ಆ ತತ್ತ್ವದಂತೆಯೇ ವರ್ತಿಸುವವನು ಮೋಕ್ಷದ ದಾರಿಯನ್ನು ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ನಾಲ್ಕನೇ ಅಧ್ಯಾಯವು.