ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ತ್ರೀ ಪರ್ವ
ವಿಶೋಕ ಪರ್ವ
ಅಧ್ಯಾಯ 1
ಸಾರ
ವಿಲಪಿಸುತ್ತಿದ್ದ ಧೃತರಾಷ್ಟ್ರನನ್ನು ಸಂಜಯನು ಸಂತವಿಸಿದುದು (1-37).
11001001 ಜನಮೇಜಯ ಉವಾಚ।
11001001a ಹತೇ ದುರ್ಯೋಧನೇ ಚೈವ ಹತೇ ಸೈನ್ಯೇ ಚ ಸರ್ವಶಃ।
11001001c ಧೃತರಾಷ್ಟ್ರೋ ಮಹಾರಾಜಃ ಶ್ರುತ್ವಾ ಕಿಮಕರೋನ್ಮುನೇ।।
ಜನಮೇಜಯನು ಹೇಳಿದನು: “ಮುನೇ! ದುರ್ಯೋಧನನು ಹತನಾಗಿದ್ದುದನ್ನು ಮತ್ತು ಸರ್ವ ಸೇನೆಗಳೂ ಹತಗೊಂಡಿದ್ದುದನ್ನು ಕೇಳಿ ಮಹಾರಾಜ ಧೃತರಾಷ್ಟ್ರನು ಏನು ಮಾಡಿದನು?
11001002a ತಥೈವ ಕೌರವೋ ರಾಜಾ ಧರ್ಮಪುತ್ರೋ ಮಹಾಮನಾಃ।
11001002c ಕೃಪಪ್ರಭೃತಯಶ್ಚೈವ ಕಿಮಕುರ್ವತ ತೇ ತ್ರಯಃ।।
ಹಾಗೆಯೇ ಕೌರವ ರಾಜಾ ಮಹಾಮನಸ್ವಿ ಧರ್ಮಪುತ್ರ ಮತ್ತು ಕೃಪನೇ ಮೊದಲಾದ ಆ ಮೂವರು ಏನು ಮಾಡಿದರು?
11001003a ಅಶ್ವತ್ಥಾಮ್ನಃ ಶ್ರುತಂ ಕರ್ಮ ಶಾಪಶ್ಚಾನ್ಯೋನ್ಯಕಾರಿತಃ।
11001003c ವೃತ್ತಾಂತಮುತ್ತರಂ ಬ್ರೂಹಿ ಯದಭಾಷತ ಸಂಜಯಃ।।
ಅಶ್ವತ್ಥಾಮನು ಮಾಡಿದುದನ್ನೂ, ಅನ್ಯೋನ್ಯರು ಶಾಪನೀಡಿದುದನ್ನೂ ಕೇಳಿದೆನು. ಅದರ ನಂತರ ಸಂಜಯನು ಏನು ಹೇಳಿದನೆನ್ನುವುದನ್ನು ಹೇಳು!”
11001004 ವೈಶಂಪಾಯನ ಉವಾಚ।
11001004a ಹತೇ ಪುತ್ರಶತೇ ದೀನಂ ಚಿನ್ನಶಾಖಮಿವ ದ್ರುಮಮ್।
11001004c ಪುತ್ರಶೋಕಾಭಿಸಂತಪ್ತಂ ಧೃತರಾಷ್ಟ್ರಂ ಮಹೀಪತಿಮ್।।
11001005a ಧ್ಯಾನಮೂಕತ್ವಮಾಪನ್ನಂ ಚಿಂತಯಾ ಸಮಭಿಪ್ಲುತಮ್।
11001005c ಅಭಿಗಮ್ಯ ಮಹಾಪ್ರಾಜ್ಞಃ ಸಂಜಯೋ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ಪುತ್ರಶತರನ್ನು ಕಳೆದುಕೊಂಡು ರೆಂಬೆಗಳು ಕಡಿದ ವೃಕ್ಷದಂತೆ ದೀನನಾಗಿದ್ದ, ಪುತ್ರಶೋಕದಿಂದ ಸಂತಪ್ತನಾಗಿದ್ದ, ಧ್ಯಾನ-ಮೂಕತ್ವಗಳನ್ನು ಪಡೆದಿದ್ದ, ಚಿಂತೆಯಲ್ಲಿ ಮುಳುಗಿಹೋಗಿದ್ದ ಮಹೀಪತಿ ಧೃತರಾಷ್ಟ್ರನ ಬಳಿಹೋಗಿ ಮಹಾಪ್ರಾಜ್ಞ ಸಂಜಯನು ಇಂತೆಂದನು:
11001006a ಕಿಂ ಶೋಚಸಿ ಮಹಾರಾಜ ನಾಸ್ತಿ ಶೋಕೇ ಸಹಾಯತಾ।
11001006c ಅಕ್ಷೌಹಿಣ್ಯೋ ಹತಾಶ್ಚಾಷ್ಟೌ ದಶ ಚೈವ ವಿಶಾಂ ಪತೇ।
11001006e ನಿರ್ಜನೇಯಂ ವಸುಮತೀ ಶೂನ್ಯಾ ಸಂಪ್ರತಿ ಕೇವಲಾ।।
“ಮಹಾರಾಜ! ಏಕೆ ಶೋಕಿಸುತ್ತಿರುವೆ? ಶೋಕದಿಂದ ಯಾವ ಸಹಾಯವೂ ದೊರಕುವುದಿಲ್ಲ! ವಿಶಾಂಪತೇ! ಹದಿನೆಂಟು ಅಕ್ಷೌಹಿಣೀ ಸೇನೆಗಳು ನಾಶವಾದವು. ನಿರ್ಜನವಾಗಿರುವ ಈ ವಸುಮತಿಯು ಕೇವಲ ಶೂನ್ಯವಾಗಿ ತೋರುತ್ತಿದೆ!
11001007a ನಾನಾದಿಗ್ಭ್ಯಃ ಸಮಾಗಮ್ಯ ನಾನಾದೇಶ್ಯಾ ನರಾಧಿಪಾಃ।
11001007c ಸಹಿತಾಸ್ತವ ಪುತ್ರೇಣ ಸರ್ವೇ ವೈ ನಿಧನಂ ಗತಾಃ।।
ನಾನಾ ದಿಕ್ಕುಗಳಿಂದ, ನಾನಾದೇಶಗಳಿಂದ ಬಂದು ಸೇರಿದ್ದ ನರಾಧಿಪರೆಲ್ಲರೂ ನಿನ್ನ ಪುತ್ರರೊಂದಿಗೆ ನಿಧನಹೊಂದಿದರು.
11001008a ಪಿತೄಣಾಂ ಪುತ್ರಪೌತ್ರಾಣಾಂ ಜ್ಞಾತೀನಾಂ ಸುಹೃದಾಂ ತಥಾ।
11001008c ಗುರೂಣಾಂ ಚಾನುಪೂರ್ವ್ಯೇಣ ಪ್ರೇತಕಾರ್ಯಾಣಿ ಕಾರಯ।।
ಪಿತೃಗಳ, ಪುತ್ರ-ಪೌತ್ರರ, ಬಾಂಧವರ, ಸುಹೃದಯರ ಮತ್ತು ಗುರುಜನರ ಪ್ರೇತಕಾರ್ಯಗಳನ್ನು ಯಥಾನುಕ್ರಮವಾಗಿ ಮಾಡಿಸು!””
11001009 ವೈಶಂಪಾಯನ ಉವಾಚ।
11001009a ತಚ್ಚ್ರುತ್ವಾ ಕರುಣಂ ವಾಕ್ಯಂ ಪುತ್ರಪೌತ್ರವಧಾರ್ದಿತಃ।
11001009c ಪಪಾತ ಭುವಿ ದುರ್ಧರ್ಷೋ ವಾತಾಹತ ಇವ ದ್ರುಮಃ।।
ವೈಶಂಪಾಯನನು ಹೇಳಿದನು: “ಆ ಕರುಣ ವಾಕ್ಯವನ್ನು ಕೇಳಿ ಪುತ್ರ-ಪೌತ್ರರ ವಧೆಯಿಂದ ದುಃಖಿತನಾಗಿದ್ದ ದುರ್ಧರ್ಷ ಧೃತರಾಷ್ಟ್ರನು ಭಿರುಗಾಳಿಯು ಬಡಿದ ವೃಕ್ಷದಂತೆ ಭೂಮಿಯಮೇಲೆ ಬಿದ್ದನು.
11001010 ಧೃತರಾಷ್ಟ್ರ ಉವಾಚ।
11001010a ಹತಪುತ್ರೋ ಹತಾಮಾತ್ಯೋ ಹತಸರ್ವಸುಹೃಜ್ಜನಃ।
11001010c ದುಃಖಂ ನೂನಂ ಭವಿಷ್ಯಾಮಿ ವಿಚರನ್ಪೃಥಿವೀಮಿಮಾಮ್।।
ಧೃತರಾಷ್ಟ್ರನು ಹೇಳಿದನು: “ಪುತ್ರರನ್ನು ಕಳೆದುಕೊಂಡ, ಅಮಾತ್ಯರನ್ನು ಕಳೆದುಕೊಂಡ ಮತ್ತು ಸರ್ವ ಸುಹೃಜ್ಜನರನ್ನು ಕಳೆದುಕೊಂಡ ನಾನು ಈ ಭೂಮಿಯಲ್ಲಿ ಸಂಚರಿಸುವ ದುಃಖವೇ ಆಗಿಬಿಟ್ಟಿದ್ದೇನೆ!
11001011a ಕಿಂ ನು ಬಂಧುವಿಹೀನಸ್ಯ ಜೀವಿತೇನ ಮಮಾದ್ಯ ವೈ।
11001011c ಲೂನಪಕ್ಷಸ್ಯ ಇವ ಮೇ ಜರಾಜೀರ್ಣಸ್ಯ ಪಕ್ಷಿಣಃ।।
ರೆಕ್ಕೆಗಳನ್ನು ಕಳೆದುಕೊಂಡು ಮುಪ್ಪಿನಿಂದ ಜೀರ್ಣವಾದ ಪಕ್ಷಿಯಂತಿರುವ ನನಗೆ ಇಂದು ಜೀವಿತವಿರುವುದರಿಂದ ಆಗಬೇಕಾದುದಾದರೂ ಏನಿದೆ?
11001012a ಹೃತರಾಜ್ಯೋ ಹತಸುಹೃದ್ಧತಚಕ್ಷುಶ್ಚ ವೈ ತಥಾ।
11001012c ನ ಭ್ರಾಜಿಷ್ಯೇ ಮಹಾಪ್ರಾಜ್ಞ ಕ್ಷೀಣರಶ್ಮಿರಿವಾಂಶುಮಾನ್।।
ಮಹಾಪ್ರಾಜ್ಞ! ಸುಹೃದ್ ಜನರು ಹತರಾಗಿ ರಾಜ್ಯದಿಂದ ಅಪಹೃತನಾದ ನಾನು ಕಿರಣಗಳನ್ನು ಕಳೆದುಕೊಂಡ ಸೂರ್ಯನಂತೆ ಇನ್ನು ಬೆಳಗಲಾರೆ!
11001013a ನ ಕೃತಂ ಸುಹೃದಾಂ ವಾಕ್ಯಂ ಜಾಮದಗ್ನ್ಯಸ್ಯ ಜಲ್ಪತಃ।
11001013c ನಾರದಸ್ಯ ಚ ದೇವರ್ಷೇಃ ಕೃಷ್ಣದ್ವೈಪಾಯನಸ್ಯ ಚ।।
ಬಾರಿಬಾರಿ ಹೇಳುತ್ತಿದ್ದ ಸುಹೃದರಾಗಿದ್ದ ಜಾಮದಗ್ನಿ ಪರಶುರಾಮ, ದೇವರ್ಷಿ ನಾರದ ಮತ್ತು ಕೃಷ್ಣದ್ವೈಪಾಯನರ ಮಾತುಗಳಂತೆ ನಾನು ಮಾಡಲಿಲ್ಲ.
11001014a ಸಭಾಮಧ್ಯೇ ತು ಕೃಷ್ಣೇನ ಯಚ್ಚ್ರೇಯೋಽಭಿಹಿತಂ ಮಮ।
11001014c ಅಲಂ ವೈರೇಣ ತೇ ರಾಜನ್ಪುತ್ರಃ ಸಂಗೃಹ್ಯತಾಮಿತಿ।।
11001015a ತಚ್ಚ ವಾಕ್ಯಮಕೃತ್ವಾಹಂ ಭೃಶಂ ತಪ್ಯಾಮಿ ದುರ್ಮತಿಃ।
ಸಭಾಮಧ್ಯದಲ್ಲಿ ಕೃಷ್ಣನು “ರಾಜನ್! ಈ ವೈರವನ್ನು ಸಾಕುಮಾಡಿ ನಿನ್ನ ಮಗನನ್ನು ಹತೋಟಿಯಲ್ಲಿಟ್ಟುಕೋ!” ಎಂದು ನನಗೆ ಹೇಳಿದ ಶ್ರೇಯ-ಹಿತ ವಚನವನ್ನು ದುರ್ಮತಿಯಾದ ನಾನು ಮಾಡದೇ ಇದ್ದುದಕ್ಕೆ ಈಗ ತುಂಬಾ ಪರಿತಪಿಸುತ್ತಿದ್ದೇನೆ!
11001015c ನ ಹಿ ಶ್ರೋತಾಸ್ಮಿ ಭೀಷ್ಮಸ್ಯ ಧರ್ಮಯುಕ್ತಂ ಪ್ರಭಾಷಿತಮ್।।
11001016a ದುರ್ಯೋಧನಸ್ಯ ಚ ತಥಾ ವೃಷಭಸ್ಯೇವ ನರ್ದತಃ।
11001016c ದುಃಶಾಸನವಧಂ ಶ್ರುತ್ವಾ ಕರ್ಣಸ್ಯ ಚ ವಿಪರ್ಯಯಮ್।
11001016e ದ್ರೋಣಸೂರ್ಯೋಪರಾಗಂ ಚ ಹೃದಯಂ ಮೇ ವಿದೀರ್ಯತೇ।।
ಭೀಷ್ಮನು ಹೇಳಿದ್ದ ಧರ್ಮಯುಕ್ತ ಮಾತುಗಳನ್ನೂ, ದುರ್ಯೋಧನನ ಗೂಳಿಯಂಥಹ ಕೂಗನ್ನೂ ನಾನು ಕೇಳಲಿಲ್ಲ! ಇಂದು ದುಃಶಾಸನನು ಹತನಾದುದನ್ನು, ಕರ್ಣನು ವಿನಾಶಗೊಂಡಿದುದನ್ನು ಮತ್ತು ಸೂರ್ಯನಂತಹ ದ್ರೋಣನಿಗೂ ಗ್ರಹಣವಾದುದನ್ನು ಕೇಳಿ ನನ್ನ ಹೃದಯವು ಸೀಳಿಹೋಗುತ್ತಿದೆ!
11001017a ನ ಸ್ಮರಾಮ್ಯಾತ್ಮನಃ ಕಿಂ ಚಿತ್ಪುರಾ ಸಂಜಯ ದುಷ್ಕೃತಮ್।
11001017c ಯಸ್ಯೇದಂ ಫಲಮದ್ಯೇಹ ಮಯಾ ಮೂಢೇನ ಭುಜ್ಯತೇ।।
ಸಂಜಯ! ಮೂಢನಾದ ನಾನು ಯಾವುದರ ಫಲವೆಂದು ಇದನ್ನು ಅನುಭವಿಸುತ್ತಿದ್ದೇನೋ ಅಂತಹ ದುಷ್ಕೃತವನ್ನು ಈ ಹಿಂದೆ ಮಾಡಿದುದು ನನ್ನ ನೆನಪಿಗೇ ಬರುತ್ತಿಲ್ಲ!
11001018a ನೂನಂ ಹ್ಯಪಕೃತಂ ಕಿಂ ಚಿನ್ಮಯಾ ಪೂರ್ವೇಷು ಜನ್ಮಸು।
11001018c ಯೇನ ಮಾಂ ದುಃಖಭಾಗೇಷು ಧಾತಾ ಕರ್ಮಸು ಯುಕ್ತವಾನ್।।
ನನ್ನ ಹಿಂದಿನ ಜನ್ಮದಲ್ಲಿ ನಾನು ಏನಾದರೂ ಅಪಕೃತವನ್ನು ಮಾಡಿರಬೇಕು. ಅದರಿಂದಾಗಿಯೇ ಧಾತನು ನನ್ನನ್ನು ಈ ದುಃಖವನ್ನು ತರುವ ಕರ್ಮಗಳಲ್ಲಿ ನನ್ನನ್ನು ತೊಡಗಿಸಿದ್ದಾನೆ!
11001019a ಪರಿಣಾಮಶ್ಚ ವಯಸಃ ಸರ್ವಬಂಧುಕ್ಷಯಶ್ಚ ಮೇ।
11001019c ಸುಹೃನ್ಮಿತ್ರವಿನಾಶಶ್ಚ ದೈವಯೋಗಾದುಪಾಗತಃ।
ದೈವಯೋಗದ ಪರಿಣಾಮವಾಗಿಯೇ ವೃದ್ಧನಾಗಿರುವ ನನಗೆ ಸರ್ವಬಂಧುಗಳ ನಾಶ ಮತ್ತು ಸುಹೃದಯರ ವಿನಾಶವು ಬಂದೊದಗಿದೆ!
11001019e ಕೋಽನ್ಯೋಽಸ್ತಿ ದುಃಖಿತತರೋ ಮಯಾ ಲೋಕೇ ಪುಮಾನಿಹ।।
11001020a ತನ್ಮಾಮದ್ಯೈವ ಪಶ್ಯಂತು ಪಾಂಡವಾಃ ಸಂಶಿತವ್ರತಮ್।
11001020c ವಿವೃತಂ ಬ್ರಹ್ಮಲೋಕಸ್ಯ ದೀರ್ಘಮಧ್ವಾನಮಾಸ್ಥಿತಮ್।।
ನನಗಿಂಥಲೂ ಹೆಚ್ಚು ದುಃಖಿತನಾಗಿರುವ ಇನ್ನೊಬ್ಬ ಪುರುಷನು ಈ ಲೋಕದಲ್ಲಿ ಬೇರೆ ಯಾರಿದ್ದಾರೆ? ಸಂಶಿತವ್ರತನಾಗಿ ನಾನು ಇಂದು ತೆರೆದಿರುವ ಈ ಬ್ರಹ್ಮಲೋಕದ ದೀರ್ಘಮಾರ್ಗವನ್ನೇ ಆಶ್ರಯಿಸುವುದನ್ನು ಪಾಂಡವರು ನೋಡಲಿ!””
11001021 ವೈಶಂಪಾಯನ ಉವಾಚ।
11001021a ತಸ್ಯ ಲಾಲಪ್ಯಮಾನಸ್ಯ ಬಹುಶೋಕಂ ವಿಚಿನ್ವತಃ।
11001021c ಶೋಕಾಪಹಂ ನರೇಂದ್ರಸ್ಯ ಸಂಜಯೋ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ಹೀಗೆ ಬಹುಶೋಕಿತನಾಗಿ ಒಂದೇ ಸಮನೆ ಪ್ರಲಪಿತ್ತಿದ್ದ ನರೇಂದ್ರನ ಶೋಕವನ್ನು ಹೋಗಲಾಡಿಸುವಂತಹ ಈ ಮಾತುಗಳನ್ನು ಸಂಜಯನು ಹೇಳಿದನು:
11001022a ಶೋಕಂ ರಾಜನ್ವ್ಯಪನುದ ಶ್ರುತಾಸ್ತೇ ವೇದನಿಶ್ಚಯಾಃ।
11001022c ಶಾಸ್ತ್ರಾಗಮಾಶ್ಚ ವಿವಿಧಾ ವೃದ್ಧೇಭ್ಯೋ ನೃಪಸತ್ತಮ।।
11001022e ಸೃಂಜಯೇ ಪುತ್ರಶೋಕಾರ್ತೇ ಯದೂಚುರ್ಮುನಯಃ ಪುರಾ।।
ರಾಜನ್! ಶೋಕವನ್ನು ತೊರೆ! ನೃಪಸತ್ತಮ! ನೀನು ವೃದ್ಧರು ಹೇಳಿದ ವೇದನಿಶ್ಚಯಗಳನ್ನೂ, ವಿವಿಧ ಶಾಸ್ತ್ರ-ಆಗಮಗಳನ್ನೂ ಕೇಳಿದ್ದೀಯೆ. ಹಿಂದೆ ಪುತ್ರಶೋಕಾರ್ತನಾಗಿದ್ದ ಸೃಂಜಯನಿಗೆ ಮುನಿಗಳು ಹೇಳಿದುದನ್ನೂ ಕೇಳಿದ್ದೀಯೆ.
11001023a ತಥಾ ಯೌವನಜಂ ದರ್ಪಮಾಸ್ಥಿತೇ ತೇ ಸುತೇ ನೃಪ।
11001023c ನ ತ್ವಯಾ ಸುಹೃದಾಂ ವಾಕ್ಯಂ ಬ್ರುವತಾಮವಧಾರಿತಮ್।
11001023e ಸ್ವಾರ್ಥಶ್ಚ ನ ಕೃತಃ ಕಶ್ಚಿಲ್ಲುಬ್ಧೇನ ಫಲಗೃದ್ಧಿನಾ।।
ನೃಪ! ಯೌವನದಿಂದುಂಟಾದ ದರ್ಪವನ್ನು ನಿನ್ನ ಮಗನು ಆಶ್ರಯಿಸಿದ್ದಾಗ ನೀನು ಆಡುತ್ತಿರುವ ಸುಹೃದಯರ ಮಾತುಗಳನ್ನು ಗಮನಿಸಲಿಲ್ಲ. ಸ್ವಾರ್ಥ ಮತ್ತು ಫಲವನ್ನು ಭೋಗಿಸಲು ಇಚ್ಛಿಸಿದ್ದ ಅವನು ಲುಬ್ಧನಾಗಿ ಯಾವ ಪುರುಷಾರ್ಥ ಸಾಧನೆಯನ್ನೂ ಮಾಡಲಿಲ್ಲ.
11001024a ತವ ದುಃಶಾಸನೋ ಮಂತ್ರೀ ರಾಧೇಯಶ್ಚ ದುರಾತ್ಮವಾನ್।
11001024c ಶಕುನಿಶ್ಚೈವ ದುಷ್ಟಾತ್ಮಾ ಚಿತ್ರಸೇನಶ್ಚ ದುರ್ಮತಿಃ।
11001024e ಶಲ್ಯಶ್ಚ ಯೇನ ವೈ ಸರ್ವಂ ಶಲ್ಯಭೂತಂ ಕೃತಂ ಜಗತ್।।
ದುಃಶಾಸನ, ದುರಾತ್ಮ ರಾಧೇಯ, ದುಷ್ಟಾತ್ಮ ಶಕುನಿ, ದುರ್ಮತಿ ಚಿತ್ರಸೇನ ಮತ್ತು ಇಡೀ ಜಗತ್ತಿಗೇ ಮುಳ್ಳಿನಂತಿದ್ದ ಶಲ್ಯರು ನಿನ್ನ ಮಂತ್ರಿಗಳಾಗಿದ್ದರು.
11001025a ಕುರುವೃದ್ಧಸ್ಯ ಭೀಷ್ಮಸ್ಯ ಗಾಂಧಾರ್ಯಾ ವಿದುರಸ್ಯ ಚ।
11001025c ನ ಕೃತಂ ವಚನಂ ತೇನ ತವ ಪುತ್ರೇಣ ಭಾರತ।।
ಭಾರತ! ಕುರುವೃದ್ಧ ಭೀಷ್ಮ, ಗಾಂಧಾರೀ, ಮತ್ತು ವಿದುರರ ಮಾತಿನಂತೆ ನಿನ್ನ ಪುತ್ರನು ನಡೆದುಕೊಳ್ಳಲಿಲ್ಲ.
11001026a ನ ಧರ್ಮಃ ಸತ್ಕೃತಃ ಕಶ್ಚಿನ್ನಿತ್ಯಂ ಯುದ್ಧಮಿತಿ ಬ್ರುವನ್।
11001026c ಕ್ಷಪಿತಾಃ ಕ್ಷತ್ರಿಯಾಃ ಸರ್ವೇ ಶತ್ರೂಣಾಂ ವರ್ಧಿತಂ ಯಶಃ।।
ನಿತ್ಯವೂ ಯುದ್ಧಮಾಡಬೇಕೆಂದು ಹೇಳುತ್ತಿದ್ದನೇ ಹೊರತು ಉತ್ತಮವಾಗಿ ಯಾವ ಧರ್ಮಾಚರಣೆಯನ್ನೂ ಅವನು ಮಾಡಲಿಲ್ಲ. ಅವನು ಸರ್ವ ಕ್ಷತ್ರಿಯರನ್ನೂ ವಿನಾಶಗೊಳಿಸಿದನು ಮತ್ತು ಶತ್ರುಗಳ ಯಶಸ್ಸನ್ನು ವರ್ಧಿಸಿದನು.
11001027a ಮಧ್ಯಸ್ಥೋ ಹಿ ತ್ವಮಪ್ಯಾಸೀರ್ನ ಕ್ಷಮಂ ಕಿಂ ಚಿದುಕ್ತವಾನ್।
11001027c ಧೂರ್ಧರೇಣ ತ್ವಯಾ ಭಾರಸ್ತುಲಯಾ ನ ಸಮಂ ಧೃತಃ।।
ನೀನು ಮಧ್ಯಸ್ಥನಾಗಿದ್ದರೂ ತಕ್ಕುದಾದ ಯಾವ ಮಾತುಗಳನ್ನೂ ಆಡಲಿಲ್ಲ. ನೀನು ದುರ್ಧರನಾಗಿದ್ದೆ. ಆದರೂ ನೀನು ತಕ್ಕಡಿಯಂತೆ ಸಮನಾಗಿರಲಿಲ್ಲ. ಒಂದೇ ಕಡೆ ಭಾರವನ್ನು ಹೆಚ್ಚಿಸಿದೆ.
11001028a ಆದಾವೇವ ಮನುಷ್ಯೇಣ ವರ್ತಿತವ್ಯಂ ಯಥಾ ಕ್ಷಮಮ್।
11001028c ಯಥಾ ನಾತೀತಮರ್ಥಂ ವೈ ಪಶ್ಚಾತ್ತಾಪೇನ ಯುಜ್ಯತೇ।।
ನಡೆದುಹೋದ ನಂತರ ಪಶ್ಚಾತ್ತಾಪ ಪಡಬೇಕಾಗದಂತೆ, ಮನುಷ್ಯನು ಮೊದಲೇ ಯೋಗ್ಯರೀತಿಯಲ್ಲಿ ವರ್ತಿಸಬೇಕು.
11001029a ಪುತ್ರಗೃದ್ಧ್ಯಾ ತ್ವಯಾ ರಾಜನ್ಪ್ರಿಯಂ ತಸ್ಯ ಚಿಕೀರ್ಷತಾ।
11001029c ಪಶ್ಚಾತ್ತಾಪಮಿದಂ ಪ್ರಾಪ್ತಂ ನ ತ್ವಂ ಶೋಚಿತುಮರ್ಹಸಿ।।
ರಾಜನ್! ಪುತ್ರನ ಮೇಲಿನ ವ್ಯಾಮೋಹದಿಂದ ನೀನು ಅವನಿಗೆ ಪ್ರಿಯವಾಗುವಂತೆ ಮಾಡಿಕೊಂಡು ಬಂದೆ. ಈಗ ಪಶ್ಚಾತ್ತಾಪ ಪಡುವ ಕಾಲವು ಬಂದಿದೆ. ನೀನು ಶೋಕಿಸಬಾರದು!
11001030a ಮಧು ಯಃ ಕೇವಲಂ ದೃಷ್ಟ್ವಾ ಪ್ರಪಾತಂ ನಾನುಪಶ್ಯತಿ।
11001030c ಸ ಭ್ರಷ್ಟೋ ಮಧುಲೋಭೇನ ಶೋಚತ್ಯೇವ ಯಥಾ ಭವಾನ್।।
ಮಧುವಿನ ಆಸೆಯಿಂದ ಕೇವಲ ಮಧುವನ್ನು ನೋಡಿಕೊಂಡು ಕೆಳಗಿರುವ ಪ್ರಪಾತವನ್ನು ಕಾಣದೇ ಭ್ರಷ್ಟನಾದವನಂತೆ ನೀನು ಈಗ ಶೋಕಿಸುತ್ತಿರುವೆ!
11001031a ಅರ್ಥಾನ್ನ ಶೋಚನ್ಪ್ರಾಪ್ನೋತಿ ನ ಶೋಚನ್ವಿಂದತೇ ಸುಖಮ್।
11001031c ನ ಶೋಚನ್ ಶ್ರಿಯಮಾಪ್ನೋತಿ ನ ಶೋಚನ್ವಿಂದತೇ ಪರಮ್।।
ಶೋಕಿಸುವುದರಿಂದ ಯಾವ ಫಲವೂ ದೊರಕುವುದಿಲ್ಲ. ಶೋಕಿಸುವವನಿಗೆ ಸುಖವೂ ಇಲ್ಲ. ಶೋಕಿಸುವವನಿಗೆ ಸಂಪತ್ತು ದೊರಕುವುದಿಲ್ಲ. ಶೋಕಿಸಿದರೆ ಪರಮ ಗತಿಯೂ ದೊರಕುವುದಿಲ್ಲ.
11001032a ಸ್ವಯಮುತ್ಪಾದಯಿತ್ವಾಗ್ನಿಂ ವಸ್ತ್ರೇಣ ಪರಿವೇಷ್ಟಯೇತ್।
11001032c ದಹ್ಯಮಾನೋ ಮನಸ್ತಾಪಂ ಭಜತೇ ನ ಸ ಪಂಡಿತಃ।।
ಬೆಂಕಿಯನ್ನು ತಾನೇ ಹೊತ್ತಿಸಿ, ಬಟ್ಟೆಯಲ್ಲಿ ಅದನ್ನು ಕಟ್ಟಿಕೊಂಡು, ಅದು ಪ್ರಜ್ವಲಿಸಿ ತನ್ನನ್ನೇ ಸುಡುವಾಗ ಪರಿತಾಪ ಪಡುವವನು ಖಂಡಿತವಾಗಿಯೂ ಪಂಡಿತನೆಂದೆನಿಸಿಕೊಳ್ಳುವುದಿಲ್ಲ.
11001033a ತ್ವಯೈವ ಸಸುತೇನಾಯಂ ವಾಕ್ಯವಾಯುಸಮೀರಿತಃ।
11001033c ಲೋಭಾಜ್ಯೇನ ಚ ಸಂಸಿಕ್ತೋ ಜ್ವಲಿತಃ ಪಾರ್ಥಪಾವಕಃ।।
ನೀನೇ ನಿನ್ನ ಮಕ್ಕಳೊಂದಿಗೆ ಕಠೋರ ಮಾತೆಂಬ ಗಾಳಿಯನ್ನು ಬೀಸಿ, ಲೋಭವೆಂಬ ತುಪ್ಪವನ್ನು ಸುರಿದು ಪಾರ್ಥನೆಂಬ ಅಗ್ನಿಯನ್ನು ಪ್ರಜ್ವಲಿಸಿದ್ದೆ.
11001034a ತಸ್ಮಿನ್ಸಮಿದ್ಧೇ ಪತಿತಾಃ ಶಲಭಾ ಇವ ತೇ ಸುತಾಃ।
11001034c ತಾನ್ಕೇಶವಾರ್ಚಿರ್ನಿರ್ದಗ್ಧಾನ್ನ ತ್ವಂ ಶೋಚಿತುಮರ್ಹಸಿ।।
ಉರಿಯುತ್ತಿರುವ ಆ ಅಗ್ನಿಯಲ್ಲಿ ಶಲಭಗಳಂತೆ ನಿನ್ನ ಪುತ್ರರು ಬೀಳಲು, ಕೇಶವನೆಂಬ ಜ್ವಾಲೆಯು ಅವರನ್ನು ಸುಟ್ಟುಹಾಕಿತು. ಅದರ ಕುರಿತು ನೀನು ಶೋಕಿಸುವುದು ಸರಿಯಲ್ಲ!
11001035a ಯಚ್ಚಾಶ್ರುಪಾತಕಲಿಲಂ ವದನಂ ವಹಸೇ ನೃಪ।
11001035c ಅಶಾಸ್ತ್ರದೃಷ್ಟಮೇತದ್ಧಿ ನ ಪ್ರಶಂಸಂತಿ ಪಂಡಿತಾಃ।।
ನೃಪ! ಕಣ್ಣೀರು ಬಿದ್ದು ಕಲುಷವಾದ ಮುಖವು ಅಶಾಸ್ತ್ರವಾದುದು. ಪಂಡಿತರು ಇದನ್ನು ಪ್ರಶಂಸಿಸುವುದಿಲ್ಲ.
11001036a ವಿಸ್ಫುಲಿಂಗಾ ಇವ ಹ್ಯೇತಾನ್ದಹಂತಿ ಕಿಲ ಮಾನವಾನ್।
11001036c ಜಹೀಹಿ ಮನ್ಯುಂ ಬುದ್ಧ್ಯಾ ವೈ ಧಾರಯಾತ್ಮಾನಮಾತ್ಮನಾ।।
ಕಣ್ಣೀರು ಬೆಂಕಿಯ ಕಿಡಿಗಳಂತೆ ಮನುಷ್ಯರನ್ನು ಸುಡುತ್ತದೆ. ಆದುದರಿಂದ ಬುದ್ಧಿಯಿಂದ ಮನಸ್ಸನ್ನು ಗೆಲ್ಲು! ನಿನ್ನನ್ನು ನೀನೇ ಸ್ಥಿರಗೊಳಿಸಿಕೋ!”
11001037a ಏವಮಾಶ್ವಾಸಿತಸ್ತೇನ ಸಂಜಯೇನ ಮಹಾತ್ಮನಾ।
11001037c ವಿದುರೋ ಭೂಯ ಏವಾಹ ಬುದ್ಧಿಪೂರ್ವಂ ಪರಂತಪ।।
ಮಹಾತ್ಮ ಸಂಜಯನು ಹೀಗೆ ಅವನನ್ನು ಸಂತವಿಸಲು ಪರಂತಪ ವಿದುರನು ಈ ಬುದ್ಧಿಪೂರ್ವಕ ಮಾತುಗಳನ್ನಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಒಂದನೇ ಅಧ್ಯಾಯವು.