ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಐಷೀಕ ಪರ್ವ
ಅಧ್ಯಾಯ 18
ಸಾರ
ರುದ್ರನು ಯಜ್ಞವನ್ನು ಗೆದ್ದಿದುದರ ಕಥೆಯನ್ನು ಕೃಷ್ಣನು ಯುಧಿಷ್ಠಿರನಿಗೆ ಹೇಳಿ “ಎಲ್ಲವೂ ಮಹಾದೇವನ ಪ್ರಸಾದವೆಂದು ಸ್ವೀಕರಿಸು!” ಎಂದು ಸಂತವಿಸಿದುದು (1-26).
10018001 ವಾಸುದೇವ ಉವಾಚ।
10018001a ತತೋ ದೇವಯುಗೇಽತೀತೇ ದೇವಾ ವೈ ಸಮಕಲ್ಪಯನ್।
10018001c ಯಜ್ಞಂ ವೇದಪ್ರಮಾಣೇನ ವಿಧಿವದ್ಯಷ್ಟುಮೀಪ್ಸವಃ।।
ವಾಸುದೇವನು ಹೇಳಿದನು: “ದೇವಯುಗವು ಮುಗಿಯಲು ದೇವತೆಗಳು ವೇದಪ್ರಮಾಣಾನುಸಾರವಾಗಿ ವಿಧಿವತ್ತಾಗಿ ಯಜ್ಞವನ್ನು ಮಾಡಲು ಬಯಸಿ ಸಂಕಲ್ಪಗೊಂಡರು.
10018002a ಕಲ್ಪಯಾಮಾಸುರವ್ಯಗ್ರಾ ದೇಶಾನ್ಯಜ್ಞೋಚಿತಾಂಸ್ತತ।
10018002c ಭಾಗಾರ್ಹಾ ದೇವತಾಶ್ಚೈವ ಯಜ್ಞಿಯಂ ದ್ರವ್ಯಮೇವ ಚ।।
ಅವ್ಯಗ್ರ ದೇವತೆಗಳು ಯಜ್ಞೋಚಿತ ಪ್ರದೇಶವನ್ನೂ, ಹವಿಸ್ಸುಗಳನ್ನೂ, ದ್ರವ್ಯಗಳನ್ನೂ, ಯಜ್ಞಸಾಧನಗಳನ್ನೂ ಸಿದ್ಧಪಡಿಸಿಕೊಂಡರು.
10018003a ತಾ ವೈ ರುದ್ರಮಜಾನಂತ್ಯೋ ಯಾಥಾತಥ್ಯೇನ ದೇವತಾಃ।
10018003c ನಾಕಲ್ಪಯಂತ ದೇವಸ್ಯ ಸ್ಥಾಣೋರ್ಭಾಗಂ ನರಾಧಿಪ।।
ನರಾಧಿಪ! ದೇವತೆಗಳಿಗೆ ರುದ್ರನು ಎಲ್ಲಿರುವನೆಂದು ತಿಳಿಯದೇ ಇದ್ದುದರಿಂದ ಅವರು ದೇವ ಸ್ಥಾಣುವಿಗೆ ಹವಿರ್ಭಾಗವನ್ನು ಕಲ್ಪಿಸಲಿಲ್ಲ.
10018004a ಸೋಽಕಲ್ಪ್ಯಮಾನೇ ಭಾಗೇ ತು ಕೃತ್ತಿವಾಸಾ ಮಖೇಽಮರೈಃ।
10018004c ತರಸಾ ಭಾಗಮನ್ವಿಚ್ಚನ್ಧನುರಾದೌ ಸಸರ್ಜ ಹ।।
ಹಾಗೆ ಅಮರರು ಯಜ್ಞದಲ್ಲಿ ತನಗೆ ಹವಿರ್ಭಾಗವನ್ನು ಕಲ್ಪಿಸದೇ ಇರಲು ಕೃತ್ತಿವಾಸ ಶಿವನು ಅವರನ್ನು ದಂಡಿಸಲು ಬಯಸಿ ಮೊದಲು ಧನುಸ್ಸನ್ನು ಸೃಷ್ಟಿಸಿದನು.
10018005a ಲೋಕಯಜ್ಞಃ ಕ್ರಿಯಾಯಜ್ಞೋ ಗೃಹಯಜ್ಞಃ ಸನಾತನಃ।
10018005c ಪಂಚಭೂತಮಯೋ ಯಜ್ಞೋ ನೃಯಜ್ಞಶ್ಚೈವ ಪಂಚಮಃ।।
ಲೋಕಯಜ್ಞ, ಕ್ರಿಯಾಯಜ್ಞ, ಸನಾತನ ಗೃಹಯಜ್ಞ, ಪಂಚಭೂತಮಯ ಯಜ್ಞ ಮತ್ತು ಐದನೆಯದು ಮನುಷ್ಯ ಯಜ್ಞ.
10018006a ಲೋಕಯಜ್ಞೇನ ಯಜ್ಞೈಷೀ ಕಪರ್ದೀ ವಿದಧೇ ಧನುಃ।
10018006c ಧನುಃ ಸೃಷ್ಟಮಭೂತ್ತಸ್ಯ ಪಂಚಕಿಷ್ಕುಪ್ರಮಾಣತಃ।।
ಯಜ್ಞೈಷೀ ಕಪರ್ದಿಯು ಲೋಕಯಜ್ಞದಿಂದ ಧನುಸ್ಸನ್ನು ನಿರ್ಮಿಸಿದನು. ಅವನು ಸೃಷ್ಟಿಸಿದ ಧನುಸ್ಸು ಐದು ಮಾರುಗಳಷ್ಟು ಉದ್ದವಾಗಿತ್ತು.
10018007a ವಷಟ್ಕಾರೋಽಭವಜ್ಜ್ಯಾ ತು ಧನುಷಸ್ತಸ್ಯ ಭಾರತ।
10018007c ಯಜ್ಞಾಂಗಾನಿ ಚ ಚತ್ವಾರಿ ತಸ್ಯ ಸಂಹನನೇಽಭವನ್।।
ಭಾರತ! ವಷಟ್ಕಾರವೇ ಅವನ ಧನುಸ್ಸಿನ ಮೌರ್ವಿಯಾಯಿತು. ನಾಲ್ಕು ಯಜ್ಞಾಂಗಗಳು ಅವನ ಕವಚಗಳಾದವು.
10018008a ತತಃ ಕ್ರುದ್ಧೋ ಮಹಾದೇವಸ್ತದುಪಾದಾಯ ಕಾರ್ಮುಕಂ।
10018008c ಆಜಗಾಮಾಥ ತತ್ರೈವ ಯತ್ರ ದೇವಾಃ ಸಮೀಜಿರೇ।।
ಆಗ ಕ್ರುದ್ಧನಾದ ಮಹಾದೇವನು ಕಾರ್ಮುಕವನ್ನೆತ್ತಿಕೊಂಡು ದೇವತೆಗಳು ಎಲ್ಲಿ ಸೇರಿದ್ದರೋ ಅಲ್ಲಿಗೆ ಬಂದನು.
10018009a ತಮಾತ್ತಕಾರ್ಮುಕಂ ದೃಷ್ಟ್ವಾ ಬ್ರಹ್ಮಚಾರಿಣಮವ್ಯಯಮ್।
10018009c ವಿವ್ಯಥೇ ಪೃಥಿವೀ ದೇವೀ ಪರ್ವತಾಶ್ಚ ಚಕಂಪಿರೇ।।
ಆ ಬ್ರಹ್ಮಚಾರಿ ಅವ್ಯಯನು ಹಿಡಿದ ಕಾರ್ಮುಕವನ್ನು ನೋಡಿ ದೇವೀ ಪೃಥ್ವಿಯು ವ್ಯಥೆಪಟ್ಟಳು ಮತ್ತು ಪರ್ವತಗಳು ನಡುಗಿದವು.
10018010a ನ ವವೌ ಪವನಶ್ಚೈವ ನಾಗ್ನಿರ್ಜಜ್ವಾಲ ಚೈಧಿತಃ।
10018010c ವ್ಯಭ್ರಮಚ್ಚಾಪಿ ಸಂವಿಗ್ನಂ ದಿವಿ ನಕ್ಷತ್ರಮಂಡಲಮ್।।
ಪವನನು ಬೀಸಲಿಲ್ಲ. ಅಗ್ನಿಯು ಪ್ರಜ್ವಲಿಸಲಿಲ್ಲ. ಆಕಾಶದಲ್ಲಿ ನಕ್ಷತ್ರಮಂಡಲವು ಸಂವಿಗ್ನಗೊಂಡು ಸುತ್ತತೊಡಗಿತು.
10018011a ನ ಬಭೌ ಭಾಸ್ಕರಶ್ಚಾಪಿ ಸೋಮಃ ಶ್ರೀಮುಕ್ತಮಂಡಲಃ।
10018011c ತಿಮಿರೇಣಾಕುಲಂ ಸರ್ವಮಾಕಾಶಂ ಚಾಭವದ್ವೃತಮ್।।
ಭಾಸ್ಕರನು ಹೊಳೆಯಲಿಲ್ಲ. ಚಂದ್ರನು ತನ್ನ ಮಂಡಲವನ್ನೇ ಬಿಟ್ಟು ಬಂದನು. ಸರ್ವ ಆಕಾಶವೂ ಕತ್ತಲೆಯಿಂದ ತುಂಬಿಕೊಂಡಿತು.
10018012a ಅಭಿಭೂತಾಸ್ತತೋ ದೇವಾ ವಿಷಯಾನ್ನ ಪ್ರಜಜ್ಞಿರೇ।
10018012c ನ ಪ್ರತ್ಯಭಾಚ್ಚ ಯಜ್ಞಸ್ತಾನ್ವೇದಾ ಬಭ್ರಂಶಿರೇ ತದಾ।।
ಉದ್ವಿಗ್ನರಾದ ದೇವತೆಗಳಿಗೆ ವಿಷಯವೇನೆಂದೇ ತಿಳಿಯಲಿಲ್ಲ. ಅವರಿಗೆ ಯಜ್ಞವೇ ಕಾಣುತ್ತಿರಲಿಲ್ಲ. ವೇದಗಳು ಹೊಳೆಯಲಿಲ್ಲ.
10018013a ತತಃ ಸ ಯಜ್ಞಂ ರೌದ್ರೇಣ ವಿವ್ಯಾಧ ಹೃದಿ ಪತ್ರಿಣಾ।
10018013c ಅಪಕ್ರಾನ್ತಸ್ತತೋ ಯಜ್ಞೋ ಮೃಗೋ ಭೂತ್ವಾ ಸಪಾವಕಃ।।
ಆಗ ರುದ್ರನು ಆ ಯಜ್ಞದ ಹೃದಯಕ್ಕೆ ಬಾಣದಿಂದ ಹೊಡೆದನು. ಯಜ್ಞನಾದರೋ ಜಿಂಕೆಯ ರೂಪತಾಳಿ ಅಗ್ನಿಯೊಂದಿಗೆ ಪಲಾಯನಮಾಡಿದನು.
10018014a ಸ ತು ತೇನೈವ ರೂಪೇಣ ದಿವಂ ಪ್ರಾಪ್ಯ ವ್ಯರೋಚತ।
10018014c ಅನ್ವೀಯಮಾನೋ ರುದ್ರೇಣ ಯುಧಿಷ್ಠಿರ ನಭಸ್ತಲೇ।।
ಯುಧಿಷ್ಠಿರ! ಅವನು ಅದೇರೂಪದಿಂದ ಆಕಾಶವನ್ನು ಸೇರಿ ಪ್ರಕಾಶಿಸಿದನು. ರುದ್ರನೂ ನಭಸ್ತಲದಲ್ಲಿ ಅದನ್ನು ಹಿಂಬಾಲಿಸಿ ಹೋದನು.
10018015a ಅಪಕ್ರಾಂತೇ ತತೋ ಯಜ್ಞೇ ಸಂಜ್ಞಾ ನ ಪ್ರತ್ಯಭಾತ್ಸುರಾನ್।
10018015c ನಷ್ಟಸಂಜ್ಞೇಷು ದೇವೇಷು ನ ಪ್ರಜ್ಞಾಯತ ಕಿಂಚನ।।
ಯಜ್ಞನು ಹೊರಟುಹೋಗಲು ಏನೂ ತಿಳಿಯದ ಸುರರು ಸಂಜ್ಞಾಹೀನರಾದರು. ಸಂಜ್ಞೆಗಳನ್ನು ಕಳೆದುಕೊಂಡ ದೇವತೆಗಳಿಗೆ ಏನೂ ತಿಳಿಯದಾಯಿತು.
10018016a ತ್ರ್ಯಂಬಕಃ ಸವಿತುರ್ಬಾಹೂ ಭಗಸ್ಯ ನಯನೇ ತಥಾ।
10018016c ಪೂಷ್ಣಶ್ಚ ದಶನಾನ್ಕ್ರುದ್ಧೋ ಧನುಷ್ಕೋಟ್ಯಾ ವ್ಯಶಾತಯತ್।।
ಕ್ರುದ್ಧ ತ್ರ್ಯಂಬಕನು ಧನುಸ್ಸಿನ ತುದಿಯಿಂದ ಸವಿತುವಿನ ಬಾಹುಗಳನ್ನೂ, ಭಗನ ಕಣ್ಣುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಕಿತ್ತುಹಾಕಿದನು.
10018017a ಪ್ರಾದ್ರವಂತ ತತೋ ದೇವಾ ಯಜ್ಞಾಂಗಾನಿ ಚ ಸರ್ವಶಃ।
10018017c ಕೇ ಚಿತ್ತತ್ರೈವ ಘೂರ್ಣಂತೋ ಗತಾಸವ ಇವಾಭವನ್।।
ಆಗ ಎಲ್ಲ ದೇವತೆಗಳೂ ಯಜ್ಞಾಂಗಗಳೂ ಓಡಿ ಹೋದರು. ಕೆಲವರು ಅಲ್ಲಿಯೇ ತಲೆತಿರುಗಿ ಪ್ರಾಣಹೋದವರಂತೆ ಬಿದ್ದರು.
10018018a ಸ ತು ವಿದ್ರಾವ್ಯ ತತ್ಸರ್ವಂ ಶಿತಿಕಂಠೋಽವಹಸ್ಯ ಚ।
10018018c ಅವಷ್ಟಭ್ಯ ಧನುಷ್ಕೋಟಿಂ ರುರೋಧ ವಿಬುಧಾಂಸ್ತತಃ।।
ಓಡಿಹೋಗುತ್ತಿದ್ದ ಅವರೆಲ್ಲರನ್ನೂ ಶಿತಿಕಂಠನು ಅವಹೇಳನ ಮಾಡುತ್ತಾ ಧನುಸ್ಸಿನ ತುದಿಯನ್ನು ಮುಂದೆ ಚಾಚಿ ದೇವತೆಗಳನ್ನು ತಡೆದನು.
10018019a ತತೋ ವಾಗಮರೈರುಕ್ತಾ ಜ್ಯಾಂ ತಸ್ಯ ಧನುಷೋಽಚ್ಚಿನತ್।
10018019c ಅಥ ತತ್ಸಹಸಾ ರಾಜಂಶ್ಚಿನ್ನಜ್ಯಂ ವಿಸ್ಫುರದ್ಧನುಃ।।
ಆಗ ಅಮರರಿಂದ ಪ್ರೇರಿತಳಾದ ವಾಣಿಯು ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದಳು. ರಾಜನ್! ಮೌರ್ವಿಯು ತುಂಡಾಗಲು ಆ ಧನುಸ್ಸು ಒಡನೆಯೇ ಮೇಲಕ್ಕೆ ಚಿಮ್ಮಿ ನೆಟ್ಟನೆ ನಿಂತಿತು.
10018020a ತತೋ ವಿಧನುಷಂ ದೇವಾ ದೇವಶ್ರೇಷ್ಠಮುಪಾಗಮನ್।
10018020c ಶರಣಂ ಸಹ ಯಜ್ಞೇನ ಪ್ರಸಾದಂ ಚಾಕರೋತ್ಪ್ರಭುಃ।।
ಧನುಸ್ಸಿನಿಂದ ವಿಹೀನನಾದ ದೇವಶ್ರೇಷ್ಠನನ್ನು ಆಗ ದೇವತೆಗಳು ಯಜ್ಞನೊಂದಿಗೆ ಶರಣು ಹೊಕ್ಕರು. ಪ್ರಭುವು ಅವರನ್ನು ಕ್ಷಮಿಸಿದನು.
10018021a ತತಃ ಪ್ರಸನ್ನೋ ಭಗವಾನ್ಪ್ರಾಸ್ಯತ್ಕೋಪಂ ಜಲಾಶಯೇ।
10018021c ಸ ಜಲಂ ಪಾವಕೋ ಭೂತ್ವಾ ಶೋಷಯತ್ಯನಿಶಂ ಪ್ರಭೋ।।
ಆಗ ಪ್ರಸನ್ನನಾದ ಭಗವಾನನು ತನ್ನ ಕೋಪವನ್ನು ಜಲಾಶಯದಲ್ಲಿ ಬಿಸುಟನು. ಪ್ರಭೋ! ಅದು ಬಡವಾಗ್ನಿಯಾಗಿ ನಿತ್ಯವೂ ಸಮುದ್ರವನ್ನು ಒಣಗಿಸುತ್ತಿರುತ್ತದೆ.
10018022a ಭಗಸ್ಯ ನಯನೇ ಚೈವ ಬಾಹೂ ಚ ಸವಿತುಸ್ತಥಾ।
10018022c ಪ್ರಾದಾತ್ಪೂಷ್ಣಶ್ಚ ದಶನಾನ್ಪುನರ್ಯಜ್ಞಂ ಚ ಪಾಂಡವ।।
ಪಾಂಡವ! ಭಾರತ! ಅವನು ಭಗನ ಕಣ್ಣುಗಳನ್ನೂ, ಸವಿತುವಿನ ಬಾಹುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಮತ್ತು ಯಜ್ಞನನ್ನೂ ಹಿಂದಿರುಗಿಸಿದನು.
10018023a ತತಃ ಸರ್ವಮಿದಂ ಸ್ವಸ್ಥಂ ಬಭೂವ ಪುನರೇವ ಹ।
10018023c ಸರ್ವಾಣಿ ಚ ಹವೀಂಷ್ಯಸ್ಯ ದೇವಾ ಭಾಗಮಕಲ್ಪಯನ್।।
ಅನಂತರ ಸರ್ವವೂ ಪುನಃ ಸ್ವಸ್ಥವಾಯಿತು. ಎಲ್ಲ ಯಜ್ಞಗಳಲ್ಲಿಯೂ ದೇವತೆಗಳು ಮಹಾದೇವನಿಗೆ ಹವಿಸ್ಸಿನ ಭಾಗವನ್ನು ಕಲ್ಪಿಸಿದರು.
10018024a ತಸ್ಮಿನ್ಕ್ರುದ್ಧೇಽಭವತ್ಸರ್ವಮಸ್ವಸ್ಥಂ ಭುವನಂ ವಿಭೋ।
10018024c ಪ್ರಸನ್ನೇ ಚ ಪುನಃ ಸ್ವಸ್ಥಂ ಸ ಪ್ರಸನ್ನೋಽಸ್ಯ ವೀರ್ಯವಾನ್।।
ವಿಭೋ! ಅವನು ಕ್ರುದ್ಧನಾದರೆ ಸರ್ವ ಭುವನಗಳೂ ಅಸ್ವಸ್ಥವಾಗುತ್ತವೆ. ಅವನು ಪ್ರಸನ್ನನಾದರೆ ಪುನಃ ಸ್ವಸ್ಥವಾಗುತ್ತವೆ. ವೀರ್ಯವಾನ್ ದ್ರೌಣಿಯ ಮೇಲೆ ಅವನು ಪ್ರಸನ್ನನಾಗಿದ್ದನು.
10018025a ತತಸ್ತೇ ನಿಹತಾಃ ಸರ್ವೇ ತವ ಪುತ್ರಾ ಮಹಾರಥಾಃ।
10018025c ಅನ್ಯೇ ಚ ಬಹವಃ ಶೂರಾಃ ಪಾಂಚಾಲಾಶ್ಚ ಸಹಾನುಗಾಃ।।
ಆದುದರಿಂದಲೇ ನಿನ್ನ ಮಹಾರಥ ಪುತ್ರರೆಲ್ಲರೂ, ಅನ್ಯ ಅನೇಕ ಶೂರರೂ, ಅನುಯಾಯಿಗಳೊಂದಿಗೆ ಪಾಂಚಾಲರೂ ಅವನಿಂದ ಹತರಾದರು.
10018026a ನ ತನ್ಮನಸಿ ಕರ್ತವ್ಯಂ ನ ಹಿ ತದ್ದ್ರೌಣಿನಾ ಕೃತಮ್।
10018026c ಮಹಾದೇವಪ್ರಸಾದಃ ಸ ಕುರು ಕಾರ್ಯಮನಂತರಮ್।।
ದ್ರೌಣಿಯು ತನ್ನ ಪರಾಕ್ರಮದಿಂದ ಇದನ್ನು ಮಾಡಲಿಲ್ಲ. ಆದುದರಿಂದ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಮಹಾದೇವನ ಪ್ರಸಾದವೆಂದು ತಿಳಿದು ಅನಂತರದ ಕಾರ್ಯಗಳನ್ನು ಮಾಡು!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಅಷ್ಟಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಹದಿನೆಂಟನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವವು.
ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-10/18, ಉಪಪರ್ವಗಳು-79/100, ಅಧ್ಯಾಯಗಳು-1301/1995, ಶ್ಲೋಕಗಳು-49280/73784.