016 ದ್ರೌಪದೀಸಾಂತ್ವನಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಐಷೀಕ ಪರ್ವ

ಅಧ್ಯಾಯ 16

ಸಾರ

ಕೃಷ್ಣನು ಉತ್ತರೆಯ ಗರ್ಭಕ್ಕೆ 60 ವರ್ಷಗಳ ಆಯುಸ್ಸನ್ನಿತ್ತು ಅಶ್ವತ್ಥಾಮನನ್ನು ಶಪಿಸಿದುದು (1-15). ಅಶ್ವತ್ಥಾಮನು ಪಾಂಡವರಿಗೆ ತನ್ನ ಮಣಿಯನ್ನಿತ್ತು ವನಕ್ಕೆ ತೆರಳಿದುದು (16-19). ಅಶ್ವತ್ಥಾಮನ ಮಣಿಯನ್ನು ದ್ರೌಪದಿಗಿತ್ತು ಸಂತವಿಸಿದುದು (20-36).

10016001 ವೈಶಂಪಾಯನ ಉವಾಚ।
10016001a ತದಾಜ್ಞಾಯ ಹೃಷೀಕೇ ವಿಸೃಷ್ಟಂ ಪಾಪಕರ್ಮಣಾ।
10016001c ಹೃಷ್ಯಮಾಣ ಇದಂ ವಾಕ್ಯಂ ದ್ರೌಣಿಂ ಪ್ರತ್ಯಬ್ರವೀತ್ತದಾ।।

ವೈಶಂಪಾಯನನು ಹೇಳಿದನು: “ಆ ಪಾಪಕರ್ಮಿಯು ಅಸ್ತ್ರವನ್ನು ವಿಸೃಜಿಸುದುದನ್ನು ತಿಳಿದು ಹೃಷೀಕೇಶನು ಹರ್ಷಗೊಂಡು ದ್ರೌಣಿಗೆ ಈ ಮಾತನ್ನಾಡಿದನು:

10016002a ವಿರಾಟಸ್ಯ ಸುತಾಂ ಪೂರ್ವಂ ಸ್ನುಷಾಂ ಗಾಂಡೀವಧನ್ವನಃ।
10016002c ಉಪಪ್ಲವ್ಯಗತಾಂ ದೃಷ್ಟ್ವಾ ವ್ರತವಾನ್ಬ್ರಾಹ್ಮಣೋಽಬ್ರವೀತ್।।

“ಗಾಂಡೀವಧನ್ವಿಯ ಸೊಸೆ ವಿರಾಟನ ಮಗಳು ಹಿಂದೆ ಉಪಪ್ಲವ್ಯಕ್ಕೆ ಹೋದಾಗ ವ್ರತವಂತ ಬ್ರಾಹ್ಮಣನೋರ್ವನು ಅವಳನ್ನು ನೋಡಿ ಹೇಳಿದ್ದನು:

10016003a ಪರಿಕ್ಷೀಣೇಷು ಕುರುಷು ಪುತ್ರಸ್ತವ ಜನಿಷ್ಯತಿ।
10016003c ಏತದಸ್ಯ ಪರಿಕ್ಷಿತ್ತ್ವಂ ಗರ್ಭಸ್ಥಸ್ಯ ಭವಿಷ್ಯತಿ।।

“ಕುರುಗಳು ಕ್ಷೀಣಿಸಿಹೋಗುವಾಗ ನಿನ್ನ ಮಗನು ಹುಟ್ಟುತ್ತಾನೆ. ಗರ್ಭಸ್ಥನಾಗಿರುವ ಇವನ ಹೆಸರು ಪರಿಕ್ಷಿತನೆಂದೇ ಆಗುತ್ತದೆ!”

10016004a ತಸ್ಯ ತದ್ವಚನಂ ಸಾಧೋಃ ಸತ್ಯಮೇವ ಭವಿಷ್ಯತಿ।
10016004c ಪರಿಕ್ಷಿದ್ಭವಿತಾ ಹ್ಯೇಷಾಂ ಪುನರ್ವಂಶಕರಃ ಸುತಃ।।

ಆ ಸಾಧುವಿನ ಮಾತು ಸತ್ಯವೇ ಆಗುತ್ತದೆ. ಅವಳ ಮಗ ಪರಿಕ್ಷಿತನು ಪುನಃ ವಂಶಕರನಾಗುವನು.”

10016005a ಏವಂ ಬ್ರುವಾಣಂ ಗೋವಿಂದಂ ಸಾತ್ವತಪ್ರವರಂ ತದಾ।
10016005c ದ್ರೌಣಿಃ ಪರಮಸಂರಬ್ಧಃ ಪ್ರತ್ಯುವಾಚೇದಮುತ್ತರಂ।।

ಹೀಗೆ ಹೇಳಿದ ಸಾತ್ವತಶ್ರೇಷ್ಠ ಗೋವಿಂದನಿಗೆ ಪರಮಕುಪಿತ ದ್ರೌಣಿಯು ಈ ಉತ್ತರವನ್ನಿತ್ತನು:

10016006a ನೈತದೇವಂ ಯಥಾತ್ಥ ತ್ವಂ ಪಕ್ಷಪಾತೇನ ಕೇಶವ।
10016006c ವಚನಂ ಪುಂಡರೀಕಾಕ್ಷ ನ ಚ ಮದ್ವಾಕ್ಯಮನ್ಯಥಾ।।

“ಪುಂಡರೀಕಾಕ್ಷ! ಕೇಶವ! ಪಕ್ಷಪಾತದಿಂದ ಇದೇನು ನೀನು ಹೇಳುತ್ತಿರುವೆಯೋ ಅದು ಹಾಗೆ ಆಗುವುದಿಲ್ಲ! ನನ್ನ ಮಾತು ಅನ್ಯಥಾ ಆಗುವುದಿಲ್ಲ.

10016007a ಪತಿಷ್ಯತ್ಯೇತದಸ್ತ್ರಂ ಹಿ ಗರ್ಭೇ ತಸ್ಯಾ ಮಯೋದ್ಯತಂ।
10016007c ವಿರಾಟದುಹಿತುಃ ಕೃಷ್ಣ ಯಾಂ ತ್ವಂ ರಕ್ಷಿತುಮಿಚ್ಚಸಿ।।

ಕೃಷ್ಣ! ನೀನು ಯಾರನ್ನು ರಕ್ಷಿಸಲು ಇಚ್ಛಿಸುತ್ತಿರುವೆಯೋ ಆ ವಿರಾಟಪುತ್ರಿಯ ಗರ್ಭದ ಮೇಲೆ ನಾನು ಪ್ರಯೋಗಿಸಿದ ಅಸ್ತ್ರವು ಈಗಾಗಲೇ ಬಿದ್ದಿದೆ!”

10016008 ವಾಸುದೇವ ಉವಾಚ।
10016008a ಅಮೋಘಃ ಪರಮಾಸ್ತ್ರಸ್ಯ ಪಾತಸ್ತಸ್ಯ ಭವಿಷ್ಯತಿ।
10016008c ಸ ತು ಗರ್ಭೋ ಮೃತೋ ಜಾತೋ ದೀರ್ಘಮಾಯುರವಾಪ್ಸ್ಯತಿ।।

ವಾಸುದೇವನು ಹೇಳಿದನು: “ಪರಮಾಸ್ತ್ರದ ಪತನವು ಅಮೋಘವಾಗುತ್ತದೆ. ಮೃತನಾಗಿ ಹುಟ್ಟುವ ಆ ಗರ್ಭವು ದೀರ್ಘ ಆಯುಸ್ಸನ್ನು ಪಡೆಯುತ್ತಾನೆ.

10016009a ತ್ವಾಂ ತು ಕಾಪುರುಷಂ ಪಾಪಂ ವಿದುಃ ಸರ್ವೇ ಮನೀಷಿಣಃ।
10016009c ಅಸಕೃತ್ಪಾಪಕರ್ಮಾಣಂ ಬಾಲಜೀವಿತಘಾತಕಂ।।

ನಿನ್ನನ್ನಾದರೋ ಸರ್ವ ಮನೀಷಿಣರು ಕಾಪುರುಷ, ಪಾಪಿ, ಪಾಪಕರ್ಮಗಳನ್ನು ಮಾಡಿದವ ಮತ್ತು ಬಾಲಜೀವಿತಘಾತಕನೆಂದೂ ತಿಳಿಯುತ್ತಾರೆ.

10016010a ತಸ್ಮಾತ್ತ್ವಮಸ್ಯ ಪಾಪಸ್ಯ ಕರ್ಮಣಃ ಫಲಮಾಪ್ನುಹಿ।
10016010c ತ್ರೀಣಿ ವರ್ಷಸಹಸ್ರಾಣಿ ಚರಿಷ್ಯಸಿ ಮಹೀಮಿಮಾಂ।
10016010e ಅಪ್ರಾಪ್ನುವನ್ಕ್ವ ಚಿತ್ಕಾಂ ಚಿತ್ಸಂವಿದಂ ಜಾತು ಕೇನ ಚಿತ್।।

ಆದುದರಿಂದ ನೀನು ನಿನ್ನ ಪಾಪಕರ್ಮದ ಫಲವನ್ನು ಹೊಂದುತ್ತೀಯೆ. ಮೂರು ಸಾವಿರ ವರ್ಷಗಳು ಈ ಭೂಮಿಯಲ್ಲಿ ಅಲೆಯುತ್ತೀಯೆ. ಆಗ ನಿನ್ನೊಡನೆ ಯಾರೂ ಏನನ್ನೂ ಮಾತನಾಡುವುದಿಲ್ಲ.

10016011a ನಿರ್ಜನಾನಸಹಾಯಸ್ತ್ವಂ ದೇಶಾನ್ಪ್ರವಿಚರಿಷ್ಯಸಿ।
10016011c ಭವಿತ್ರೀ ನ ಹಿ ತೇ ಕ್ಷುದ್ರ ಜನಮಧ್ಯೇಷು ಸಂಸ್ಥಿತಿಃ।।

ನಿರ್ಜನಪ್ರದೇಶಗಳಲ್ಲಿ ಅಸಹಾಯಕನಾಗಿ ನೀನು ಅಲೆದಾಡುತ್ತೀಯೆ. ಕ್ಷುದ್ರ! ಇನ್ನು ಮುಂದೆ ನೀನು ಜನರ ಮಧ್ಯೆ ವಾಸಮಾಡಲಾರೆ!

10016012a ಪೂಯಶೋಣಿತಗಂಧೀ ಚ ದುರ್ಗಕಾಂತಾರಸಂಶ್ರಯಃ।
10016012c ವಿಚರಿಷ್ಯಸಿ ಪಾಪಾತ್ಮನ್ಸರ್ವವ್ಯಾಧಿಸಮನ್ವಿತಃ।।

ಪಾಪಾತ್ಮನ್! ಕೀವು ಮತ್ತು ರಕ್ತದ ದುರ್ಗಂಧದಿಂದ ಕೂಡಿದ ನೀನು ದುರ್ಗ-ಕಾಂತಾರಗಳಲ್ಲಿ ವಾಸಿಸುವೆ. ಸರ್ವವ್ಯಾಧಿಸಮನ್ವಿತನಾಗಿ ಸಂಚರಿಸುತ್ತಿರುತ್ತೀಯೆ.

10016013a ವಯಃ ಪ್ರಾಪ್ಯ ಪರಿಕ್ಷಿತ್ತು ವೇದವ್ರತಮವಾಪ್ಯ ಚ।
10016013c ಕೃಪಾಚ್ಚಾರದ್ವತಾದ್ವೀರಃ ಸರ್ವಾಸ್ತ್ರಾಣ್ಯುಪಲಪ್ಸ್ಯತೇ।।

ವೀರ ಪರಿಕ್ಷಿತನಾದರೋ ವಯಸ್ಕನಾಗಿ ವೇದವ್ರತಗಳನ್ನು ಪಡೆಯುತ್ತಾನೆ. ಶಾರದ್ವತ ಕೃಪನಿಂದ ಸರ್ವಾಸ್ತ್ರಗಳನ್ನು ಪಡೆದುಕೊಳ್ಳುತ್ತಾನೆ.

10016014a ವಿದಿತ್ವಾ ಪರಮಾಸ್ತ್ರಾಣಿ ಕ್ಷತ್ರಧರ್ಮವ್ರತೇ ಸ್ಥಿತಃ।
10016014c ಷಷ್ಟಿಂ ವರ್ಷಾಣಿ ಧರ್ಮಾತ್ಮಾ ವಸುಧಾಂ ಪಾಲಯಿಷ್ಯತಿ।।

ಪರಮಾಸ್ತ್ರಗಳನ್ನು ತಿಳಿದುಕೊಂಡು ಕ್ಷತ್ರಧರ್ಮದಲ್ಲಿದ್ದುಕೊಂಡು ಆ ಧರ್ಮಾತ್ಮನು ಅರವತ್ತು ವರ್ಷಗಳು ವಸುಧೆಯನ್ನು ಪಾಲಿಸುತ್ತಾನೆ.

10016015a ಇತಶ್ಚೋರ್ಧ್ವಂ ಮಹಾಬಾಹುಃ ಕುರುರಾಜೋ ಭವಿಷ್ಯತಿ।
10016015c ಪರಿಕ್ಷಿನ್ನಾಮ ನೃಪತಿರ್ಮಿಷತಸ್ತೇ ಸುದುರ್ಮತೇ।
10016015e ಪಶ್ಯ ಮೇ ತಪಸೋ ವೀರ್ಯಂ ಸತ್ಯಸ್ಯ ಚ ನರಾಧಮ।।

ಇನ್ನುಮುಂದೆ ಆ ಮಹಾಬಾಹುವೇ ಕುರುರಾಜನಾಗುತ್ತಾನೆ. ಸುದುರ್ಮತೇ! ನೀನು ನೋಡುತ್ತಿರುವಂತೆಯೇ ಇವನು ಪರಿಕ್ಷಿತನೆಂಬ ಹೆಸರಿನ ನೃಪತಿಯಾಗುತ್ತಾನೆ. ನರಾಧಮ! ನನ್ನ ತಪಸ್ಸಿನ ಮತ್ತು ಸತ್ಯದ ವೀರ್ಯವನ್ನು ನೋಡು!”

10016016 ವ್ಯಾಸ ಉವಾಚ।
10016016a ಯಸ್ಮಾದನಾದೃತ್ಯ ಕೃತಂ ತ್ವಯಾಸ್ಮಾನ್ಕರ್ಮ ದಾರುಣಂ।
10016016c ಬ್ರಾಹ್ಮಣಸ್ಯ ಸತಶ್ಚೈವ ಯಸ್ಮಾತ್ತೇ ವೃತ್ತಮೀದೃಶಂ।।

ವ್ಯಾಸನು ಹೇಳಿದನು: “ನಮ್ಮೆಲ್ಲರನ್ನು ಅನಾದರಿಸಿ ನೀನು ಈ ದಾರುಣಕರ್ಮವನ್ನೆಸಗಿದೆ! ಸದ್ಬ್ರಾಹ್ಮಣನಾಗಿದ್ದು ನೀನು ಈ ರೀತಿ ನಡೆದುಕೊಂಡೆ!

10016017a ತಸ್ಮಾದ್ಯದ್ದೇವಕೀಪುತ್ರ ಉಕ್ತವಾನುತ್ತಮಂ ವಚಃ।
10016017c ಅಸಂಶಯಂ ತೇ ತದ್ಭಾವಿ ಕ್ಷುದ್ರಕರ್ಮನ್ವ್ರಜಾಶ್ವಿತಃ।।

ಕ್ಷುದ್ರಕರ್ಮಿಯೇ! ಆದುದರಿಂದ ದೇವಕೀಪುತ್ರನಾಡಿದ ಉತ್ತಮ ವಚನದಂತೆಯೇ ನಡೆಯುತ್ತದೆ. ಅದರಲ್ಲಿ ಸಂಶಯವೇ ಇಲ್ಲ.”

10016018 ಅಶ್ವತ್ಥಾಮೋವಾಚ।
10016018a ಸಹೈವ ಭವತಾ ಬ್ರಹ್ಮನ್ ಸ್ಥಾಸ್ಯಾಮಿ ಪುರುಷೇಷ್ವಹಂ।
10016018c ಸತ್ಯವಾಗಸ್ತು ಭಗವಾನಯಂ ಚ ಪುರುಷೋತ್ತಮಃ।।

ಅಶ್ವತ್ಥಾಮನು ಹೇಳಿದನು: “ಬ್ರಹ್ಮನ್! ನಾನು ಇನ್ನು ಮುಂದೆ ಮನುಷ್ಯರಲ್ಲಿ ನಿನ್ನೊಡನೆ ಮಾತ್ರ ಇದ್ದುಬಿಡುತ್ತೇನೆ. ಭಗವಾನ್ ಪುರುಷೋತ್ತಮನು ಹೇಳಿದುದು ಸತ್ಯವಾಗಲಿ!””

10016019 ವೈಶಂಪಾಯನ ಉವಾಚ।
10016019a ಪ್ರದಾಯಾಥ ಮಣಿಂ ದ್ರೌಣಿಃ ಪಾಂಡವಾನಾಂ ಮಹಾತ್ಮನಾಂ।
10016019c ಜಗಾಮ ವಿಮನಾಸ್ತೇಷಾಂ ಸರ್ವೇಷಾಂ ಪಶ್ಯತಾಂ ವನಂ।।

ವೈಶಂಪಾಯನನು ಹೇಳಿದನು: “ಆಗ ದ್ರೌಣಿಯು ಮಹಾತ್ಮ ಪಾಂಡವರಿಗೆ ಮಣಿಯನ್ನಿತ್ತು, ಅವರೆಲ್ಲರೂ ನೋಡುತ್ತಿರಲು ವಿಮನಸ್ಕನಾಗಿ ವನಕ್ಕೆ ತೆರಳಿದನು.

10016020a ಪಾಂಡವಾಶ್ಚಾಪಿ ಗೋವಿಂದಂ ಪುರಸ್ಕೃತ್ಯ ಹತದ್ವಿಷಃ।
10016020c ಕೃಷ್ಣದ್ವೈಪಾಯನಂ ಚೈವ ನಾರದಂ ಚ ಮಹಾಮುನಿಂ।।
10016021a ದ್ರೋಣಪುತ್ರಸ್ಯ ಸಹಜಂ ಮಣಿಮಾದಾಯ ಸತ್ವರಾಃ।
10016021c ದ್ರೌಪದೀಮಭ್ಯಧಾವಂತ ಪ್ರಾಯೋಪೇತಾಂ ಮನಸ್ವಿನೀಂ।।

ಪಾಂಡವರಾದರೋ ಶತ್ರುವನ್ನು ನಾಶಪಡಿಸಿ, ದ್ರೋಣಪುತ್ರನ ಸಹಜ ಮಣಿಯನ್ನು ತೆಗೆದುಕೊಂಡು, ಗೋವಿಂದನನ್ನು ಮುಂದಿರಿಸಿಕೊಂಡು ಕೃಷ್ಣದ್ವೈಪಾಯನ ಮತ್ತು ಮಹಾಮುನಿ ನಾರದರೊಂದಿಗೆ, ಪ್ರಾಯೋಪವೇಶಮಾಡಿದ್ದ ದ್ರೌಪದಿಯ ಬಳಿಗೆ ತ್ವರೆಮಾಡಿ ಧಾವಿಸಿದರು.

10016022a ತತಸ್ತೇ ಪುರುಷವ್ಯಾಘ್ರಾಃ ಸದಶ್ವೈರನಿಲೋಪಮೈಃ।
10016022c ಅಭ್ಯಯುಃ ಸಹದಾಶಾರ್ಹಾಃ ಶಿಬಿರಂ ಪುನರೇವ ಹ।।

ಆಗ ಆ ಪುರುಷವ್ಯಾಘ್ರರು ಅನಿಲೋಪಮ ಅಶ್ವಗಳೊಂದಿಗೆ ದಾಶಾರ್ಹನೊಡಗೂಡಿ ಪುನಃ ಶಿಬಿರಕ್ಕೆ ಬಂದರು.

10016023a ಅವತೀರ್ಯ ರಥಾಭ್ಯಾಂ ತು ತ್ವರಮಾಣಾ ಮಹಾರಥಾಃ।
10016023c ದದೃಶುರ್ದ್ರೌಪದೀಂ ಕೃಷ್ಣಾಮಾರ್ತಾಮಾರ್ತತರಾಃ ಸ್ವಯಂ।।

ತ್ವರೆಮಾಡಿ ಆ ಎರಡೂ ರಥಗಳಿಂದಿಳಿದು ಸ್ವಯಂ ಆರ್ತರಾಗಿದ್ದ ಮಹಾರಥರು ಅತ್ಯಂತ ಆರ್ತಳಾಗಿದ್ದ ದ್ರೌಪದಿ ಕೃಷ್ಣೆಯನ್ನು ನೋಡಿದರು.

10016024a ತಾಮುಪೇತ್ಯ ನಿರಾನಂದಾಂ ದುಃಖಶೋಕಸಮನ್ವಿತಾಂ।
10016024c ಪರಿವಾರ್ಯ ವ್ಯತಿಷ್ಠಂತ ಪಾಂಡವಾಃ ಸಹಕೇಶವಾಃ।।

ಆನಂದರಹಿತಳಾಗಿ ದುಃಖಶೋಖಸಮನ್ವಿತಳಾಗಿದ್ದ ಅವಳನ್ನು ಸುತ್ತುವರೆದು ಪಾಂಡವರು ಕೇಶವನೊಂದಿಗೆ ಕುಳಿತುಕೊಂಡರು.

10016025a ತತೋ ರಾಜ್ಞಾಭ್ಯನುಜ್ಞಾತೋ ಭೀಮಸೇನೋ ಮಹಾಬಲಃ।
10016025c ಪ್ರದದೌ ತು ಮಣಿಂ ದಿವ್ಯಂ ವಚನಂ ಚೇದಮಬ್ರವೀತ್।।

ಆಗ ರಾಜನ ಅನುಜ್ಞೆಯಂತೆ ಮಹಾಬಲ ಭೀಮಸೇನನು ಅವಳಿಗೆ ಆ ದಿವ್ಯ ಮಣಿಯನ್ನಿತ್ತು ಈ ಮಾತನ್ನಾಡಿದನು:

10016026a ಅಯಂ ಭದ್ರೇ ತವ ಮಣಿಃ ಪುತ್ರಹಂತಾ ಜಿತಃ ಸ ತೇ।
10016026c ಉತ್ತಿಷ್ಠ ಶೋಕಮುತ್ಸೃಜ್ಯ ಕ್ಷತ್ರಧರ್ಮಮನುಸ್ಮರ।।

“ಭದ್ರೇ! ಪುತ್ರಹಂತಕನನ್ನು ಗೆದ್ದು ನಿನಗೋಸ್ಕರ ತಂದಿರುವ ಇದೋ ಈ ಮಣಿ! ಶೋಕವನ್ನು ತೊರೆದು ಎದ್ದೇಳು! ಕ್ಷತ್ರಧರ್ಮವನ್ನು ಸ್ಮರಿಸಿಕೋ!

10016027a ಪ್ರಯಾಣೇ ವಾಸುದೇವಸ್ಯ ಶಮಾರ್ಥಮಸಿತೇಕ್ಷಣೇ।
10016027c ಯಾನ್ಯುಕ್ತಾನಿ ತ್ವಯಾ ಭೀರು ವಾಕ್ಯಾನಿ ಮಧುಘಾತಿನಃ।।

ಅಸಿತೇಕ್ಷಣೇ! ಭೀರು! ಸಂಧಿಗಾಗಿ ವಾಸುದೇವನು ಪ್ರಯಾಣಮಾಡುವಾಗ ನೀನು ಮಧುಘಾತಿನಿಗೆ ಈ ಮಾತುಗಳನ್ನು ಹೇಳಿದ್ದೆ:

10016028a ನೈವ ಮೇ ಪತಯಃ ಸಂತಿ ನ ಪುತ್ರಾ ಭ್ರಾತರೋ ನ ಚ।
10016028c ನೈವ ತ್ವಮಪಿ ಗೋವಿಂದ ಶಮಮಿಚ್ಚತಿ ರಾಜನಿ।।
10016029a ಉಕ್ತವತ್ಯಸಿ ಧೀರಾಣಿ ವಾಕ್ಯಾನಿ ಪುರುಷೋತ್ತಮಂ।
10016029c ಕ್ಷತ್ರಧರ್ಮಾನುರೂಪಾಣಿ ತಾನಿ ಸಂಸ್ಮರ್ತುಮರ್ಹಸಿ।।

“ನನಗೆ ಪತಿಗಳಿಲ್ಲ! ಪುತ್ರರಿಲ್ಲ! ಸಹೋದರರೂ ಇಲ್ಲ! ರಾಜನೊಂದಿಗೆ ಶಾಂತಿಯನ್ನು ಬಯಸುವ ಗೋವಿಂದ ನೀನೂ ಕೂಡ ನನ್ನ ಪಾಲಿಗಿಲ್ಲ!” ಕ್ಷತ್ರಧರ್ಮಕ್ಕೆ ಅನುರೂಪ ಈ ಧೀರ ವಾಕ್ಯಗಳನ್ನು ನೀನು ಪುರುಷೋತ್ತಮನೊಡನೆ ಹೇಳಿದ್ದೆ. ಅದನ್ನು ಸ್ಮರಿಸಿಕೋ!

10016030a ಹತೋ ದುರ್ಯೋಧನಃ ಪಾಪೋ ರಾಜ್ಯಸ್ಯ ಪರಿಪಂಥಕಃ।
10016030c ದುಃಶಾಸನಸ್ಯ ರುಧಿರಂ ಪೀತಂ ವಿಸ್ಫುರತೋ ಮಯಾ।।

ರಾಜ್ಯವನ್ನು ಅಪಹರಿಸಿದ್ದ ಪಾಪಿ ದುರ್ಯೋಧನನು ಹತನಾಗಿದ್ದಾನೆ. ಚಡಪಡಿಸುತ್ತಿದ್ದ ದುಃಶಾಸನನ ರಕ್ತವನ್ನು ನಾನು ಕುಡಿದಿದ್ದೇನೆ.

10016031a ವೈರಸ್ಯ ಗತಮಾನೃಣ್ಯಂ ನ ಸ್ಮ ವಾಚ್ಯಾ ವಿವಕ್ಷತಾಂ।
10016031c ಜಿತ್ವಾ ಮುಕ್ತೋ ದ್ರೋಣಪುತ್ರೋ ಬ್ರಾಹ್ಮಣ್ಯಾದ್ಗೌರವೇಣ ಚ।।

ವೈರದ ಋಣವನ್ನು ನಾವು ಪೂರೈಸಿದ್ದೇವೆ. ನಮ್ಮ ಮೇಲೆ ನಿಂದನೀಯ ಮಾತುಗಳ್ಯಾವುವೂ ಇಲ್ಲ. ದ್ರೋಣಪುತ್ರನನ್ನು ಗೆದ್ದು ಬ್ರಾಹ್ಮಣನೆನ್ನುವ ಗೌರವದಿಂದ ಅವನನ್ನು ಬಿಟ್ಟುಬಿಟ್ಟೆವು.

10016032a ಯಶೋಽಸ್ಯ ಪಾತಿತಂ ದೇವಿ ಶರೀರಂ ತ್ವವಶೇಷಿತಂ।
10016032c ವಿಯೋಜಿತಶ್ಚ ಮಣಿನಾ ನ್ಯಾಸಿತಶ್ಚಾಯುಧಂ ಭುವಿ।।

ದೇವೀ! ಮಣಿಯನ್ನು ತ್ಯಜಿಸಿದ ಮತ್ತು ಆಯುಧವನ್ನು ಭೂಮಿಯಮೇಲಿಟ್ಟ ಅವನ ಯಶಸ್ಸು ಬಿದ್ದುಹೋಗಿ ಶರೀರಮಾತ್ರ ಉಳಿದುಕೊಂಡಿದೆ.”

10016033 ದ್ರೌಪದ್ಯುವಾಚ।
10016033a ಕೇವಲಾನೃಣ್ಯಮಾಪ್ತಾಸ್ಮಿ ಗುರುಪುತ್ರೋ ಗುರುರ್ಮಮ।
10016033c ಶಿರಸ್ಯೇತಂ ಮಣಿಂ ರಾಜಾ ಪ್ರತಿಬಧ್ನಾತು ಭಾರತ।।

ದ್ರೌಪದಿಯು ಹೇಳಿದಳು: “ಪುತ್ರ‌ಋಣದಿಂದ ಮುಕ್ತಳಾಗಿದ್ದೇನೆ. ಆ ಗುರುಪುತ್ರನು ನನಗೂ ಗುರುವೇ. ಭಾರತ! ರಾಜನು ಈ ಮಣಿಯನ್ನು ಧರಿಸಲಿ!””

10016034 ವೈಶಂಪಾಯನ ಉವಾಚ।
10016034a ತಂ ಗೃಹೀತ್ವಾ ತತೋ ರಾಜಾ ಶಿರಸ್ಯೇವಾಕರೋತ್ತದಾ।
10016034c ಗುರೋರುಚ್ಚಿಷ್ಟಮಿತ್ಯೇವ ದ್ರೌಪದ್ಯಾ ವಚನಾದಪಿ।।

ವೈಶಂಪಾಯನನು ಹೇಳಿದನು: “ಆಗ ರಾಜನು ದ್ರೌಪದಿಯ ವಚನದಂತೆ ಗುರುವಿನ ಪ್ರಸಾದವೆಂದು ಅದನ್ನು ಸ್ವೀಕರಿಸಿ ತನ್ನ ಶಿರದಲ್ಲಿ ಧರಿಸಿಕೊಂಡನು.

10016035a ತತೋ ದಿವ್ಯಂ ಮಣಿವರಂ ಶಿರಸಾ ಧಾರಯನ್ ಪ್ರಭುಃ।
10016035c ಶುಶುಭೇ ಸ ಮಹಾರಾಜಃ ಸಚಂದ್ರ ಇವ ಪರ್ವತಃ।।

ಪ್ರಭು ಮಹಾರಾಜನು ಆ ದಿವ್ಯ ಶ್ರೇಷ್ಠ ಮಣಿಯನ್ನು ಶಿರದಲ್ಲಿ ಧರಿಸಿ ಮೇಲೆ ಚಂದ್ರನಿರುವ ಪರ್ವತದಂತೆ ಶೋಭಿಸಿದನು.

10016036a ಉತ್ತಸ್ಥೌ ಪುತ್ರಶೋಕಾರ್ತಾ ತತಃ ಕೃಷ್ಣಾ ಮನಸ್ವಿನೀ।
10016036c ಕೃಷ್ಣಂ ಚಾಪಿ ಮಹಾಬಾಹುಂ ಪರ್ಯಪೃಚ್ಚತ ಧರ್ಮರಾಟ್।।

ಆಗ ಪುತ್ರಶೋಕಾರ್ತಳಾಗಿದ್ದ ಮನಸ್ವಿನೀ ಕೃಷ್ಣೆಯು ಮೇಲೆದ್ದಳು. ಧರ್ಮರಾಜನಾದರೋ ಮಹಾಬಾಹು ಕೃಷ್ಣನನ್ನು ಪ್ರಶ್ನಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ದ್ರೌಪದೀಸಾಂತ್ವನಾಯಾಂ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ದ್ರೌಪದೀಸಾಂತ್ವನ ಎನ್ನುವ ಹದಿನಾರನೇ ಅಧ್ಯಾಯವು.