015 ಬ್ರಹ್ಮಶಿರೋಽಸ್ತ್ರಸ್ಯ ಪಾಂಡವೇಯಗರ್ಭಪ್ರವೇಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಐಷೀಕ ಪರ್ವ

ಅಧ್ಯಾಯ 15

ಸಾರ

ಮಹರ್ಷಿಗಳೀರ್ವರನ್ನು ಕಂಡ ಅರ್ಜುನನು ಕೂಡಲೇ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಹಿಂತೆಗೆದುಕೊಂಡಿದುದು (1-10). ಅಶ್ವತ್ಥಾಮ-ವ್ಯಾಸರ ಸಂವಾದ (11-32). ಅಶ್ವತ್ಥಾಮನು ಅಸ್ತ್ರವನ್ನು ಪಾಂಡವರ ಗರ್ಭದ ಮೇಲೆ ಅಭಿಮಂತ್ರಿಸಿದುದು (33).

10015001 ವೈಶಂಪಾಯನ ಉವಾಚ।
10015001a ದೃಷ್ಟ್ವೈವ ನರಶಾರ್ದೂಲಸ್ತಾವಗ್ನಿಸಮತೇಜಸೌ।
10015001c ಸಂಜಹಾರ ಶರಂ ದಿವ್ಯಂ ತ್ವರಮಾಣೋ ಧನಂಜಯಃ।।

ವೈಶಂಪಾಯನನು ಹೇಳಿದನು: “ಅಗ್ನಿಸಮತೇಜಸ್ಸಿನ ಅವರೀರ್ವರನ್ನು ನೋಡಿದೊಡನೆಯೇ ತ್ವರೆಮಾಡಿ ನರಶಾರ್ದೂಲ ಧನಂಜಯನು ತನ್ನ ದಿವ್ಯ ಶರವನ್ನು ಉಪಸಂಹಾರಗೊಳಿಸಿದನು.

10015002a ಉವಾಚ ವದತಾಂ ಶ್ರೇಷ್ಠಸ್ತಾವೃಷೀ ಪ್ರಾಂಜಲಿಸ್ತದಾ।
10015002c ಪ್ರಯುಕ್ತಮಸ್ತ್ರಮಸ್ತ್ರೇಣ ಶಾಮ್ಯತಾಮಿತಿ ವೈ ಮಯಾ।।

ಮಾತನಾಡುವವರಲ್ಲಿ ಶ್ರೇಷ್ಠನಾದ ಅವನು ಕೈಮುಗಿದು ಆ ಋಷಿಗಳಿಗೆ ಹೇಳಿದನು: “ಅಸ್ತ್ರದಿಂದ ಅಸ್ತ್ರವು ಪ್ರಶಮನಗೊಳ್ಳಲಿ ಎಂದೇ ನಾನು ಇದನ್ನು ಪ್ರಯೋಗಿಸಿದ್ದೆ.

10015003a ಸಂಹೃತೇ ಪರಮಾಸ್ತ್ರೇಽಸ್ಮಿನ್ಸರ್ವಾನಸ್ಮಾನಶೇಷತಃ।
10015003c ಪಾಪಕರ್ಮಾ ಧ್ರುವಂ ದ್ರೌಣಿಃ ಪ್ರಧಕ್ಷ್ಯತ್ಯಸ್ತ್ರತೇಜಸಾ।।

ಈ ಪರಮಾಸ್ತ್ರವನ್ನು ಹಿಂದೆ ತೆಗೆದುಕೊಂಡಿದ್ದೇ ಆದರೆ ಪಾಪಕರ್ಮಿ ದ್ರೌಣಿಯು ಅಸ್ತ್ರದ ತೇಜಸ್ಸಿನಿಂದ ನಮ್ಮೆಲ್ಲರನ್ನೂ ಅಶೇಷವಾಗಿ ಭಸ್ಮಮಾಡಿಬಿಡುತ್ತಾನೆ ಎನ್ನುವುದು ನಿಶ್ಚಯ!

10015004a ಅತ್ರ ಯದ್ಧಿತಮಸ್ಮಾಕಂ ಲೋಕಾನಾಂ ಚೈವ ಸರ್ವಥಾ।
10015004c ಭವಂತೌ ದೇವಸಂಕಾಶೌ ತಥಾ ಸಂಹರ್ತುಮರ್ಹತಃ।।

ಈ ಸಂದರ್ಭದಲಿ ನಮ್ಮ ಮತ್ತು ಲೋಕಗಳ ಸರ್ವಥಾ ಹಿತವನ್ನು ಗಮನದಲ್ಲಿಟ್ಟುಕೊಂಡು ದೇವಸಂಕಾಶರಾದ ನೀವಿಬ್ಬರೂ ಇದನ್ನು ಬಗೆಹರಿಸಬೇಕಾಗಿದೆ.”

10015005a ಇತ್ಯುಕ್ತ್ವಾ ಸಂಜಹಾರಾಸ್ತ್ರಂ ಪುನರೇವ ಧನಂಜಯಃ।
10015005c ಸಂಹಾರೋ ದುಷ್ಕರಸ್ತಸ್ಯ ದೇವೈರಪಿ ಹಿ ಸಂಯುಗೇ।।

ಹೀಗೆ ಹೇಳಿ ಧನಂಜಯನು ಯುದ್ಧದಲ್ಲಿ ದೇವತೆಗಳಿಗೂ ಹಿಂದೆ ತೆಗೆದುಕೊಳ್ಳಲು ಕಷ್ಟಕರವಾದ ಆ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಂಡನು.

10015006a ವಿಸೃಷ್ಟಸ್ಯ ರಣೇ ತಸ್ಯ ಪರಮಾಸ್ತ್ರಸ್ಯ ಸಂಗ್ರಹೇ।
10015006c ನ ಶಕ್ತಃ ಪಾಂಡವಾದನ್ಯಃ ಸಾಕ್ಷಾದಪಿ ಶತಕ್ರತುಃ।।

ರಣದಲ್ಲಿ ಪ್ರಯೋಗಿಸಿದ ಆ ಪರಮಾಸ್ತ್ರವನ್ನು ಹಿಂದೆ ತೆಗೆದುಕೊಳ್ಳಲು ಪಾಂಡವ ಅರ್ಜುನನಲ್ಲದೇ ಸಾಕ್ಷಾತ್ ಶತಕ್ರತುವಿಗೂ ಸಾಧ್ಯವಾಗುತ್ತಿರಲಿಲ್ಲ.

10015007a ಬ್ರಹ್ಮತೇಜೋಭವಂ ತದ್ಧಿ ವಿಸೃಷ್ಟಮಕೃತಾತ್ಮನಾ।
10015007c ನ ಶಕ್ಯಮಾವರ್ತಯಿತುಂ ಬ್ರಹ್ಮಚಾರಿವ್ರತಾದೃತೇ।।

ಬ್ರಹ್ಮತೇಜಸ್ಸಿನಿಂದ ಹುಟ್ಟಿದ್ದ ಅದನ್ನು ಅಕೃತಾತ್ಮನು ಪ್ರಯೋಗಿಸಿದರೆ ಬ್ರಹ್ಮಚರ್ಯವ್ರತದಲ್ಲಿದ್ದವನ ಹೊರತಾಗಿ ಬೇರೆಯಾರಿಗೂ ಅದನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

10015008a ಅಚೀರ್ಣಬ್ರಹ್ಮಚರ್ಯೋ ಯಃ ಸೃಷ್ಟ್ವಾವರ್ತಯತೇ ಪುನಃ।
10015008c ತದಸ್ತ್ರಂ ಸಾನುಬಂಧಸ್ಯ ಮೂರ್ಧಾನಂ ತಸ್ಯ ಕೃಂತತಿ।।

ಬ್ರಹ್ಮಚರ್ಯವ್ರತನಿಷ್ಠನಾಗಿರದವನು ಅದನ್ನು ಪ್ರಯೋಗಿಸಿ ಪುನಃ ಹಿಂದೆತೆಗೆದುಕೊಳ್ಳಲು ಪ್ರಯತ್ನಿಸಿದರೆ ಅನುಯಾಯಿಗಳೊಂದಿಗೆ ಅವನ ಶಿರವನ್ನು ಅದು ಕತ್ತರಿಸಿಬಿಡುತ್ತದೆ.

10015009a ಬ್ರಹ್ಮಚಾರೀ ವ್ರತೀ ಚಾಪಿ ದುರವಾಪಮವಾಪ್ಯ ತತ್।
10015009c ಪರಮವ್ಯಸನಾರ್ತೋಽಪಿ ನಾರ್ಜುನೋಽಸ್ತ್ರಂ ವ್ಯಮುಂಚತ।।

ಅರ್ಜುನನು ಬ್ರಹ್ಮಚಾರಿಯಾಗಿದ್ದನು. ವ್ರತನಿರತನಾಗಿದ್ದನು. ಮಹಾಕಷ್ಟಗಳನ್ನು ಪಡೆದಿದ್ದಾಗಲೂ ಪರಮ ವ್ಯಸನಗಳು ಬಂದಿದ್ದಾದರೂ ಆ ಅಸ್ತ್ರವನ್ನು ಇದೂವರೆಗೆ ಪ್ರಯೋಗಿಸದೇ ಇದ್ದನು.

10015010a ಸತ್ಯವ್ರತಧರಃ ಶೂರೋ ಬ್ರಹ್ಮಚಾರೀ ಚ ಪಾಂಡವಃ।
10015010c ಗುರುವರ್ತೀ ಚ ತೇನಾಸ್ತ್ರಂ ಸಂಜಹಾರಾರ್ಜುನಃ ಪುನಃ।।

ಅಂತಹ ಸತ್ಯವ್ರತಧರ ಶೂರ ಬ್ರಹ್ಮಚಾರಿ ಮತ್ತು ಗುರುವನ್ನು ಅನುಸರಿಸುತ್ತಿದ್ದ ಪಾಂಡವ ಅರ್ಜುನನು ಆ ಅಸ್ತ್ರವನ್ನು ಪುನಃ ಹಿಂದೆತೆಗೆದುಕೊಂಡನು.

10015011a ದ್ರೌಣಿರಪ್ಯಥ ಸಂಪ್ರೇಕ್ಷ್ಯ ತಾವೃಷೀ ಪುರತಃ ಸ್ಥಿತೌ।
10015011c ನ ಶಶಾಕ ಪುನರ್ಘೋರಮಸ್ತ್ರಂ ಸಂಹರ್ತುಮಾಹವೇ।।

ದ್ರೌಣಿಗಾದರೋ ತನ್ನ ಎದುರು ನಿಂತಿದ್ದ ಆ ಇಬ್ಬರು ಋಷಿಗಳನ್ನು ನೋಡಿ ಯುದ್ಧದಲ್ಲಿ ಪ್ರಯೋಗಿಸಿದ್ದ ಆ ಘೋರ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಳ್ಳಲು ಶಕ್ಯನಾಗಲಿಲ್ಲ.

10015012a ಅಶಕ್ತಃ ಪ್ರತಿಸಂಹಾರೇ ಪರಮಾಸ್ತ್ರಸ್ಯ ಸಂಯುಗೇ।
10015012c ದ್ರೌಣಿರ್ದೀನಮನಾ ರಾಜನ್ದ್ವೈಪಾಯನಮಭಾಷತ।।

ರಾಜನ್! ಸಂಯುಗದಲ್ಲಿ ಆ ಪರಮಾಸ್ತ್ರವನ್ನು ಪ್ರತಿಸಂಹಾರಮಾಡಲು ಅಶಕ್ತನಾದ ದ್ರೌಣಿಯು ದೀನಮನಸ್ಕನಾಗಿ ದ್ವೈಪಾಯನನಿಗೆ ಹೇಳಿದನು:

10015013a ಉತ್ತಮವ್ಯಸನಾರ್ತೇನ ಪ್ರಾಣತ್ರಾಣಮಭೀಪ್ಸುನಾ।
10015013c ಮಯೈತದಸ್ತ್ರಮುತ್ಸೃಷ್ಟಂ ಭೀಮಸೇನಭಯಾನ್ಮುನೇ।।

“ಮುನೇ! ಭೀಮಸೇನನನ ಭಯದ ಉತ್ತಮ ವ್ಯಸನದಿಂದ ಆರ್ತನಾಗಿ ಪ್ರಾಣತ್ರಾಣವನ್ನುಳಿಸಿಕೊಳ್ಳುವುದಕ್ಕಾಗಿ ಈ ಅಸ್ತ್ರವನ್ನು ನಾನು ಪ್ರಯೋಗಿಸಿದೆ.

10015014a ಅಧರ್ಮಶ್ಚ ಕೃತೋಽನೇನ ಧಾರ್ತರಾಷ್ಟ್ರಂ ಜಿಘಾಂಸತಾ।
10015014c ಮಿಥ್ಯಾಚಾರೇಣ ಭಗವನ್ಭೀಮಸೇನೇನ ಸಂಯುಗೇ।।

ಭಗವನ್! ಭೀಮಸೇನನು ಸಂಯುಗದಲ್ಲಿ ಅಧರ್ಮದಿಂದ ಮತ್ತು ಮಿಥ್ಯಾಚಾರ ಮೋಸದಿಂದ ಧಾರ್ತರಾಷ್ಟ್ರನನ್ನು ಸಂಹರಿಸಿದನು.

10015015a ಅತಃ ಸೃಷ್ಟಮಿದಂ ಬ್ರಹ್ಮನ್ಮಯಾಸ್ತ್ರಮಕೃತಾತ್ಮನಾ।
10015015c ತಸ್ಯ ಭೂಯೋಽದ್ಯ ಸಂಹಾರಂ ಕರ್ತುಂ ನಾಹಮಿಹೋತ್ಸಹೇ।।

ಬ್ರಹ್ಮನ್! ಆದುದರಿಂದ ಅಕೃತಾತ್ಮನಾದ ನಾನು ಈ ಅಸ್ತ್ರವನ್ನು ಪ್ರಕಟಿಸಿದೆನು. ಆದರೆ ಈಗ ಈ ಅಸ್ತ್ರವನ್ನು ಉಪಸಂಹಾರ ಮಾಡಲು ನಾನು ಶಕ್ಯನಿಲ್ಲ.

10015016a ವಿಸೃಷ್ಟಂ ಹಿ ಮಯಾ ದಿವ್ಯಮೇತದಸ್ತ್ರಂ ದುರಾಸದಂ।
10015016c ಅಪಾಂಡವಾಯೇತಿ ಮುನೇ ವಹ್ನಿತೇಜೋಽನುಮಂತ್ರ್ಯ ವೈ।।

ಮುನೇ! ಪಾಂಡವರಿಲ್ಲದಂತಾಗಲಿ ಎಂದು ಹೇಳಿ ಅಗ್ನಿತೇಜಸ್ಸನ್ನು ಅನುಮಂತ್ರಿಸಿ ಈ ದುರಾಸದ ದಿವ್ಯ ಅಸ್ತ್ರವನ್ನು ನಾನು ಪ್ರಕಟಿಸಿದೆನು.

10015017a ತದಿದಂ ಪಾಂಡವೇಯಾನಾಮಂತಕಾಯಾಭಿಸಂಹಿತಂ।
10015017c ಅದ್ಯ ಪಾಂಡುಸುತಾನ್ಸರ್ವಾಂಜೀವಿತಾದ್ಭ್ರಂಶಯಿಷ್ಯತಿ।।

ಪಾಂಡವೇಯರ ಅಂತ್ಯವಾಗಲೆಂದು ಅಭಿಮಂತ್ರಿಸಿದ್ದ ಇದು ಇಂದು ಪಾಂಡುಸುತರೆಲ್ಲರನ್ನೂ ಜೀವಹೀನರನ್ನಾಗಿ ಮಾಡುತ್ತದೆ.

10015018a ಕೃತಂ ಪಾಪಮಿದಂ ಬ್ರಹ್ಮನ್ರೋಷಾವಿಷ್ಟೇನ ಚೇತಸಾ।
10015018c ವಧಮಾಶಾಸ್ಯ ಪಾರ್ಥಾನಾಂ ಮಯಾಸ್ತ್ರಂ ಸೃಜತಾ ರಣೇ।।

ಬ್ರಹ್ಮನ್! ರೋಷಾವಿಷ್ಟ ಚೇತನದಿಂದ ರಣದಲ್ಲಿ ಪಾರ್ಥರನ್ನು ವಧೆಮಾಡಲು ನಿಶ್ಚಯಿಸಿ ಈ ಅಸ್ತ್ರವನ್ನು ಸೃಷ್ಟಿಸಿದ ನಾನು ಪಾಪವನ್ನೆಸಗಿದ್ದೇನೆ!”

10015019 ವ್ಯಾಸ ಉವಾಚ।
10015019a ಅಸ್ತ್ರಂ ಬ್ರಹ್ಮಶಿರಸ್ತಾತ ವಿದ್ವಾನ್ಪಾರ್ಥೋ ಧನಂಜಯಃ।
10015019c ಉತ್ಸೃಷ್ಟವಾನ್ನ ರೋಷೇಣ ನ ವಧಾಯ ತವಾಹವೇ।।

ವ್ಯಾಸನು ಹೇಳಿದನು: “ಮಗೂ! ಪಾರ್ಥ ಧನಂಜಯನೂ ಕೂಡ ಬ್ರಹ್ಮಶಿರ ಅಸ್ತ್ರವನ್ನು ತಿಳಿದಿದ್ದಾನೆ. ಆದರೆ ರೋಷದಿಂದ ಯುದ್ಧದಲ್ಲಿ ನಿನ್ನ ವಧೆಗೆಂದು ಇದನ್ನು ಅವನು ಪ್ರಯೋಗಿಸಲಿಲ್ಲ.

10015020a ಅಸ್ತ್ರಮಸ್ತ್ರೇಣ ತು ರಣೇ ತವ ಸಂಶಮಯಿಷ್ಯತಾ।
10015020c ವಿಸೃಷ್ಟಮರ್ಜುನೇನೇದಂ ಪುನಶ್ಚ ಪ್ರತಿಸಂಹೃತಂ।।

ರಣದಲ್ಲಿ ನಿನ್ನ ಅಸ್ತ್ರವನ್ನು ಅಸ್ತ್ರದಿಂದ ಪ್ರತಿಶಮನಗೊಳಿಸುವ ಸಲುವಾಗಿ ಅರ್ಜುನನು ಇದನ್ನು ಪ್ರಯೋಗಿಸಿ ಪುನಃ ಪ್ರತಿಸಂಹಾರಗೊಳಿಸಿದ್ದಾನೆ.

10015021a ಬ್ರಹ್ಮಾಸ್ತ್ರಮಪ್ಯವಾಪ್ಯೈತದುಪದೇಶಾತ್ಪಿತುಸ್ತವ।
10015021c ಕ್ಷತ್ರಧರ್ಮಾನ್ಮಹಾಬಾಹುರ್ನಾಕಂಪತ ಧನಂಜಯಃ।।

ನಿನ್ನ ತಂದೆಯ ಉಪದೇಶದಿಂದ ಬ್ರಹ್ಮಾಸ್ತ್ರವನ್ನು ಪಡೆದುಕೊಂಡಿದ್ದರೂ ಮಹಾಬಾಹು ಧನಂಜಯನು ಕ್ಷತ್ರಧರ್ಮದಿಂದ ವಿಚಲಿತನಾಗಲಿಲ್ಲ.

10015022a ಏವಂ ಧೃತಿಮತಃ ಸಾಧೋಃ ಸರ್ವಾಸ್ತ್ರವಿದುಷಃ ಸತಃ।
10015022c ಸಭ್ರಾತೃಬಂಧೋಃ ಕಸ್ಮಾತ್ತ್ವಂ ವಧಮಸ್ಯ ಚಿಕೀರ್ಷಸಿ।।

ಇಂತಹ ಧೃತಿಮತನಾದ, ಸಾಧುವಾದ, ಸರ್ವಾಸ್ತ್ರವಿದುವಾದ, ಸತ್ಪುರುಷನಾದ ಅರ್ಜುನನನ್ನು ಭ್ರಾತೃ-ಬಂಧುಗಳೊಂದಿಗೆ ವಧಿಸಲು ನೀನು ಏಕೆ ಬಯಸುತ್ತಿರುವೆ?

10015023a ಅಸ್ತ್ರಂ ಬ್ರಹ್ಮಶಿರೋ ಯತ್ರ ಪರಮಾಸ್ತ್ರೇಣ ವಧ್ಯತೇ।
10015023c ಸಮಾ ದ್ವಾದಶ ಪರ್ಜನ್ಯಸ್ತದ್ರಾಷ್ಟ್ರಂ ನಾಭಿವರ್ಷತಿ।।

ಯಾವದೇಶದಲ್ಲಿ ಬ್ರಹ್ಮಶಿರವು ಇನ್ನೊಂದು ಪರಮಾಸ್ತ್ರದಿಂದ ನಾಶಗೊಳ್ಳುತ್ತದೆಯೋ ಆ ರಾಷ್ಟ್ರದಲ್ಲಿ ಹನ್ನೆರಡು ವರ್ಷಗಳ ಪರ್ಯಂತ ಮಳೆಯು ಸುರಿಯುವುದಿಲ್ಲ.

10015024a ಏತದರ್ಥಂ ಮಹಾಬಾಹುಃ ಶಕ್ತಿಮಾನಪಿ ಪಾಂಡವಃ।
10015024c ನ ವಿಹಂತ್ಯೇತದಸ್ತ್ರಂ ತೇ ಪ್ರಜಾಹಿತಚಿಕೀರ್ಷಯಾ।।

ಇದೇ ಕಾರಣದಿಂದ ಮಹಾಬಾಹು ಪಾಂಡವನು ಶಕ್ತಿವಂತನಾಗಿದ್ದರೂ ಪ್ರಜಾಹಿತವನ್ನು ಬಯಸಿ ನಿನ್ನ ಈ ಅಸ್ತ್ರವನ್ನು ವಿನಾಶಗೊಳಿಸಲಿಲ್ಲ.

10015025a ಪಾಂಡವಾಸ್ತ್ವಂ ಚ ರಾಷ್ಟ್ರಂ ಚ ಸದಾ ಸಂರಕ್ಷ್ಯಮೇವ ನಃ।
10015025c ತಸ್ಮಾತ್ಸಂಹರ ದಿವ್ಯಂ ತ್ವಮಸ್ತ್ರಮೇತನ್ಮಹಾಭುಜ।।

ಮಹಾಭುಜ! ಪಾಂಡವರನ್ನು, ರಾಷ್ಟ್ರವನ್ನು ಮತ್ತು ನಿನ್ನನ್ನು ಕೂಡ ಸದಾ ಸಂರಕ್ಷಿಸಲೋಸುಗ ಈ ದಿವ್ಯಾಸ್ತ್ರವನ್ನು ಉಪಸಂಹರಿಸು!

10015026a ಅರೋಷಸ್ತವ ಚೈವಾಸ್ತು ಪಾರ್ಥಾಃ ಸಂತು ನಿರಾಮಯಾಃ।
10015026c ನ ಹ್ಯಧರ್ಮೇಣ ರಾಜರ್ಷಿಃ ಪಾಂಡವೋ ಜೇತುಮಿಚ್ಚತಿ।।

ನಿನ್ನ ರೋಷವು ತಣಿಯಲಿ. ಪಾರ್ಥರು ನಿರಾಮಯರಾಗಲಿ. ರಾಜರ್ಷಿ ಪಾಂಡವನು ಅಧರ್ಮದಿಂದ ಯಾರನ್ನೂ ಜಯಿಸಲು ಇಚ್ಛಿಸುವವನಲ್ಲ.

10015027a ಮಣಿಂ ಚೈತಂ ಪ್ರಯಚ್ಚೈಭ್ಯೋ ಯಸ್ತೇ ಶಿರಸಿ ತಿಷ್ಠತಿ।
10015027c ಏತದಾದಾಯ ತೇ ಪ್ರಾಣಾನ್ಪ್ರತಿದಾಸ್ಯಂತಿ ಪಾಂಡವಾಃ।।

ನಿನ್ನ ಶಿರಸ್ಸಿನಲ್ಲಿ ಇರುವ ಮಣಿಯನ್ನು ಇವರಿಗೆ ಕೊಟ್ಟುಬಿಡು. ಇದನ್ನು ತೆಗೆದುಕೊಂಡು ಪ್ರತಿಯಾಗಿ ಪಾಂಡವರು ನಿನ್ನ ಪ್ರಾಣವನ್ನು ನೀಡುತ್ತಾರೆ.”

10015028 ದ್ರೌಣಿರುವಾಚ।
10015028a ಪಾಂಡವೈರ್ಯಾನಿ ರತ್ನಾನಿ ಯಚ್ಚಾನ್ಯತ್ಕೌರವೈರ್ಧನಂ।
10015028c ಅವಾಪ್ತಾನೀಹ ತೇಭ್ಯೋಽಯಂ ಮಣಿರ್ಮಮ ವಿಶಿಷ್ಯತೇ।।

ದ್ರೌಣಿಯು ಹೇಳಿದನು: “ಇದೂವರೆಗೆ ಪಾಂಡವರು ಸಂಗ್ರಹಿಸಿಟ್ಟಿಕೊಂಡಿರುವ ರತ್ನಗಳಿಗಿಂತ ಮತ್ತು ಕೌರವ್ಯನ ಸಂಪತ್ತಿಗಿಂತ ನನ್ನ ಈ ಮಣಿಯು ಹೆಚ್ಚಿನ ಮೌಲ್ಯದ್ದಾಗಿದೆ.

10015029a ಯಮಾಬಧ್ಯ ಭಯಂ ನಾಸ್ತಿ ಶಸ್ತ್ರವ್ಯಾಧಿಕ್ಷುಧಾಶ್ರಯಂ।
10015029c ದೇವೇಭ್ಯೋ ದಾನವೇಭ್ಯೋ ವಾ ನಾಗೇಭ್ಯೋ ವಾ ಕಥಂ ಚನ।।
10015030a ನ ಚ ರಕ್ಷೋಗಣಭಯಂ ನ ತಸ್ಕರಭಯಂ ತಥಾ।
10015030c ಏವಂವೀರ್ಯೋ ಮಣಿರಯಂ ನ ಮೇ ತ್ಯಾಜ್ಯಃ ಕಥಂ ಚನ।।

ಈ ಮಣಿಯನ್ನು ಧರಿಸಿದವನಿಗೆ ಶಸ್ತ್ರ-ವ್ಯಾಧಿ-ಹಸಿವೆ ಮತ್ತು ಆಶ್ರಯಗಳ ಭಯವಿರುವುದಿಲ್ಲ. ದೇವತೆಗಳ, ದಾನವರ, ನಾಗಗಳ ಅಥವಾ ಯಾರ ಭಯವೂ ಇರುವುದಿಲ್ಲ. ರಾಕ್ಷಸರ ಭಯವಿರುವುದಿಲ್ಲ ಮತ್ತು ತಸ್ಕರಭಯವಿರುವುದಿಲ್ಲ. ಇಂತಹ ವೀರ್ಯವುಳ್ಳ ಮಣಿಯನ್ನು ನಾನು ಎಂದೂ ಬಿಟ್ಟುಕೊಡುವುದಿಲ್ಲ!

10015031a ಯತ್ತು ಮೇ ಭಗವಾನಾಹ ತನ್ಮೇ ಕಾರ್ಯಮನಂತರಂ।
10015031c ಅಯಂ ಮಣಿರಯಂ ಚಾಹಮಿಷೀಕಾ ನಿಪತಿಷ್ಯತಿ।
10015031e ಗರ್ಭೇಷು ಪಾಂಡವೇಯಾನಾಮಮೋಘಂ ಚೈತದುದ್ಯತಂ।।

ಹೀಗಿದ್ದರೂ ಭಗವಾನನಾದ ನೀನು ಹೇಳಿದ ಕಾರ್ಯವನ್ನು ಮಾಡಬೇಕಾಗಿದೆ. ನಾನು ಮತ್ತು ನನ್ನ ಮಣಿಯು ಇಲ್ಲಿವೆ. ಆದರೆ ಈ ಜೊಂಡುಹುಲ್ಲು ಮಾತ್ರ ಪಾಂಡವೇಯರ ಗರ್ಭಗಳ ಮೇಲೆ ಬೀಳುತ್ತದೆ. ಇದನ್ನು ಅಮೋಘಗೊಳಿಸಲು ನನಗೆ ಸಾಧ್ಯವಿಲ್ಲ!”

10015032 ವ್ಯಾಸ ಉವಾಚ।
10015032a ಏವಂ ಕುರು ನ ಚಾನ್ಯಾ ತೇ ಬುದ್ಧಿಃ ಕಾರ್ಯಾ ಕದಾ ಚನ।
10015032c ಗರ್ಭೇಷು ಪಾಂಡವೇಯಾನಾಂ ವಿಸೃಜ್ಯೈತದುಪಾರಮ।।

ವ್ಯಾಸನು ಹೇಳಿದನು: “ಹಾಗೆಯೇ ಮಾಡು! ಎಂದೂ ನಿನ್ನ ಬುದ್ಧಿಯನ್ನು ಬೇರೆ ಕಾರ್ಯಗಳಲ್ಲಿ ತೊಡಗಿಸಬೇಡ. ಪಾಂಡವೇಯರ ಗರ್ಭಗಳಲ್ಲಿ ಇದನ್ನು ವಿಸರ್ಜಿಸಿ ಶಾಂತನಾಗು!””

10015033 ವೈಶಂಪಾಯನ ಉವಾಚ।
10015033a ತತಃ ಪರಮಮಸ್ತ್ರಂ ತದಶ್ವತ್ಥಾಮಾ ಭೃಶಾತುರಃ।
10015033c ದ್ವೈಪಾಯನವಚಃ ಶ್ರುತ್ವಾ ಗರ್ಭೇಷು ಪ್ರಮುಮೋಚ ಹ।।

ವೈಶಂಪಾಯನನು ಹೇಳಿದನು: “ದ್ವೈಪಾಯನನ ಮಾತನ್ನು ಕೇಳಿ ತುಂಬಾ ಆತುರದಲ್ಲಿದ್ದ ಅಶ್ವತ್ಥಾಮನು ಆ ಪರಮಾಸ್ತ್ರವನ್ನು ಪಾಂಡವರ ಗರ್ಭಗಳ ಮೇಲೆ ಪ್ರಯೋಗಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಬ್ರಹ್ಮಶಿರೋಽಸ್ತ್ರಸ್ಯ ಪಾಂಡವೇಯಗರ್ಭಪ್ರವೇಶನೇ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಬ್ರಹ್ಮಶಿರೋಽಸ್ತ್ರಸ್ಯ ಪಾಂಡವೇಯಗರ್ಭಪ್ರವೇಶನ ಎನ್ನುವ ಹದಿನೈದನೇ ಅಧ್ಯಾಯವು.