013 ಬ್ರಹ್ಮಶಿರೋಸ್ತ್ರತ್ಯಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಐಷೀಕ ಪರ್ವ

ಅಧ್ಯಾಯ 13

ಸಾರ

ಭೀಮಸೇನ ಮತ್ತು ಅವನನ್ನು ಹಿಂಬಾಲಿಸಿ ಹೋದ ಕೃಷ್ಣ-ಅರ್ಜುನ-ಯುಧಿಷ್ಠಿರರು ಅಶ್ವತ್ಥಾಮನಿದ್ದಲ್ಲಿಗೆ ಹೋದುದು (1-12). ಆಯುಧಧಾರಿಗಳಾಗಿದ್ದ ಅವರನ್ನು ಕಂಡು ವ್ಯಾಸನೊಂದಿಗಿದ್ದ ಋಷಿಗಳ ಗುಂಪಿನಲ್ಲಿದ್ದ ಅಶ್ವತ್ಥಾಮನು ಜೊಂಡುಹುಲ್ಲಿಗೆ ಬ್ರಹ್ಮಶಿರಾಸ್ತ್ರವನ್ನು ಅಭಿಮಂತ್ರಿಸಿ “ಅಪಾಂಡವಾಯ” ಎಂದು ಹೇಳಿ ಪ್ರಯೋಗಿಸಿದುದು (13-20).

10013001 ವೈಶಂಪಾಯನ ಉವಾಚ।
10013001a ಏವಮುಕ್ತ್ವಾ ಯುಧಾಂ ಶ್ರೇಷ್ಠಃ ಸರ್ವಯಾದವನಂದನಃ।
10013001c ಸರ್ವಾಯುಧವರೋಪೇತಮಾರುರೋಹ ಮಹಾರಥಂ।
10013001e ಯುಕ್ತಂ ಪರಮಕಾಂಬೋಜೈಸ್ತುರಗೈರ್ಹೇಮಮಾಲಿಭಿಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಯೋದ್ಧರಲ್ಲಿ ಶ್ರೇಷ್ಠ ಸರ್ವಯಾದವ ನಂದನನು ಹೇಮಮಾಲೆಗಳಿಂದ ಅಲಂಕೃತಗೊಂಡಿದ್ದ ಪರಮ ಕಾಂಬೋಜದ ತುರಗಗಳನ್ನು ಕಟ್ಟಿದ್ದ, ಸರ್ವ ಶ್ರೇಷ್ಠ ಆಯುಧಗಳಿಂದ ಭರಿತವಾಗಿದ್ದ ಮಹಾರಥವನ್ನೇರಿದನು.

10013002a ಆದಿತ್ಯೋದಯವರ್ಣಸ್ಯ ಧುರಂ ರಥವರಸ್ಯ ತು।
10013002c ದಕ್ಷಿಣಾಮವಹತ್ಸೈನ್ಯಃ ಸುಗ್ರೀವಃ ಸವ್ಯತೋಽವಹತ್।
10013002e ಪಾರ್ಷ್ಣಿವಾಹೌ ತು ತಸ್ಯಾಸ್ತಾಂ ಮೇಘಪುಷ್ಪಬಲಾಹಕೌ।।

ಉದಯಿಸುವ ಸೂರ್ಯನ ಎಣೆಗೆಂಪಿನ ಬಣ್ಣದ ಆ ಶ್ರೇಷ್ಠ ರಥದ ಬಲಭಾಗಕ್ಕೆ ಸೈನ್ಯವನ್ನು ಎಡಭಾಗಕ್ಕೆ ಸುಗ್ರೀವವನ್ನೂ ಕಟ್ಟಲಾಗಿತ್ತು. ಅವುಗಳ ಹಿಂದೆ ಮೇಘಪುಷ್ಪ ಮತ್ತು ಬಲಾಹಕಗಳನ್ನು ಕಟ್ಟಲಾಗಿತ್ತು.

10013003a ವಿಶ್ವಕರ್ಮಕೃತಾ ದಿವ್ಯಾ ನಾನಾರತ್ನವಿಭೂಷಿತಾ।
10013003c ಉಚ್ಚ್ರಿತೇವ ರಥೇ ಮಾಯಾ ಧ್ವಜಯಷ್ಟಿರದೃಶ್ಯತ।।

ಆ ರಥದ ಮೇಲೆ ವಿಶ್ವಕರ್ಮನಿಂದ ನಿರ್ಮಿತವಾದ ನಾನಾರತ್ನವಿಭೂಷಿತ ದಿವ್ಯ ಮಾಯಾ ಧ್ವಜವು ಮೇಲೆದ್ದು ಕಾಣುತ್ತಿತ್ತು.

10013004a ವೈನತೇಯಃ ಸ್ಥಿತಸ್ತಸ್ಯಾಂ ಪ್ರಭಾಮಂಡಲರಶ್ಮಿವಾನ್।
10013004c ತಸ್ಯ ಸತ್ಯವತಃ ಕೇತುರ್ಭುಜಗಾರಿರದೃಶ್ಯತ।।

ಆ ಧ್ವಜದಲ್ಲಿ ಪ್ರಭಾಮಂಡಲರಶ್ಮಿವಂತ, ಸರ್ಪಗಳ ಶತ್ರು ಸತ್ಯವತ ವೈನತೇಯನು ಪ್ರಕಾಶಿಸುತ್ತಿದ್ದನು.

10013005a ಅನ್ವಾರೋಹದ್ಧೃಷೀಕೇಶಃ ಕೇತುಃ ಸರ್ವಧನುಷ್ಮತಾಂ।
10013005c ಅರ್ಜುನಃ ಸತ್ಯಕರ್ಮಾ ಚ ಕುರುರಾಜೋ ಯುಧಿಷ್ಠಿರಃ।।

ಸರ್ವಧನುಷ್ಮತರ ಕೇತುಪ್ರಾಯನಾದ ಹೃಷೀಕೇಶ, ಸತ್ಯಕರ್ಮಿ ಅರ್ಜುನ ಮತ್ತು ಕುರುರಾಜ ಯುಧಿಷ್ಠಿರರು ಆ ರಥವನ್ನೇರಿದರು.

10013006a ಅಶೋಭೇತಾಂ ಮಹಾತ್ಮಾನೌ ದಾಶಾರ್ಹಮಭಿತಃ ಸ್ಥಿತೌ।
10013006c ರಥಸ್ಥಂ ಶಾಂಙ್ರಧನ್ವಾನಮಶ್ವಿನಾವಿವ ವಾಸವಂ।।

ರಥಸ್ಥನಾಗಿದ್ದ ಶಾಂಙ್ರಧನ್ವಿ ದಾಶಾರ್ಹನ ಎರಡೂ ಕಡೆಗಳಲ್ಲಿ ಕುಳಿತಿದ್ದ ಆ ಇಬ್ಬರು ಮಹಾತ್ಮರು ವಾಸವನ ಪಕ್ಕಗಳಲ್ಲಿದ್ದ ಅಶ್ವಿನೀ ಕುಮಾರರಂತೆ ತೋರಿದರು.

10013007a ತಾವುಪಾರೋಪ್ಯ ದಾಶಾರ್ಹಃ ಸ್ಯಂದನಂ ಲೋಕಪೂಜಿತಂ।
10013007c ಪ್ರತೋದೇನ ಜವೋಪೇತಾನ್ಪರಮಾಶ್ವಾನಚೋದಯತ್।।

ಅವರಿಬ್ಬರನ್ನೂ ಕುಳ್ಳಿರಿಸಿಕೊಂಡು ದಾಶಾರ್ಹನು ಆ ಲೋಕಪೂಜಿತ ರಥಕ್ಕೆ ಹೂಡಿದ್ದ ವೇಗಶಾಲೀ ಶ್ರೇಷ್ಠ ಕುದುರೆಗಳನ್ನು ತಿವಿದು ಪ್ರಚೋದಿಸಿದನು.

10013008a ತೇ ಹಯಾಃ ಸಹಸೋತ್ಪೇತುರ್ಗೃಹೀತ್ವಾ ಸ್ಯಂದನೋತ್ತಮಂ।
10013008c ಆಸ್ಥಿತಂ ಪಾಂಡವೇಯಾಭ್ಯಾಂ ಯದೂನಾಮೃಷಭೇಣ ಚ।।

ಪಾಂಡವರಿಬ್ಬರು ಮತ್ತು ಯದುಗಳ ಋಷಭನು ಕುಳಿತಿದ್ದ ಆ ಉತ್ತಮ ಸ್ಯಂದನವನ್ನು ಕುದುರೆಗಳು ಎಳೆಯುತ್ತಾ ಹಾರಿ-ಕುಪ್ಪಳಿಸಿ ಓಡತೊಡಗಿದವು.

10013009a ವಹತಾಂ ಶಾಂಙ್ರಧನ್ವಾನಮಶ್ವಾನಾಂ ಶೀಘ್ರಗಾಮಿನಾಂ।
10013009c ಪ್ರಾದುರಾಸೀನ್ಮಹಾನ್ ಶಬ್ದಃ ಪಕ್ಷಿಣಾಂ ಪತತಾಮಿವ।।

ಶಾಂಙ್ರಧನ್ವಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಆ ಶೀಘ್ರಗಾಮೀ ಕುದುರೆಗಳ ಖುರಪುಟಗಳಿಂದ ಪರ್ವತಗಳು ಬೀಳುತ್ತಿರುವವೋ ಎನ್ನುವಂತೆ ಮಹಾಶಬ್ಧವುಂಟಾಯಿತು.

10013010a ತೇ ಸಮಾರ್ಚನ್ನರವ್ಯಾಘ್ರಾಃ ಕ್ಷಣೇನ ಭರತರ್ಷಭ।
10013010c ಭೀಮಸೇನಂ ಮಹೇಷ್ವಾಸಂ ಸಮನುದ್ರುತ್ಯ ವೇಗಿತಾಃ।।

ಭರತರ್ಷಭ! ಆ ನರವ್ಯಾಘ್ರರು ವೇಗದಿಂದ ಹೋಗಿ ಕ್ಷಣದಲ್ಲಿಯೇ ಮಹೇಷ್ವಾಸ ಭೀಮಸೇನನನ್ನು ಸಮೀಪಿಸಿದರು.

10013011a ಕ್ರೋಧದೀಪ್ತಂ ತು ಕೌಂತೇಯಂ ದ್ವಿಷದರ್ಥೇ ಸಮುದ್ಯತಂ।
10013011c ನಾಶಕ್ನುವನ್ವಾರಯಿತುಂ ಸಮೇತ್ಯಾಪಿ ಮಹಾರಥಾಃ।।

ಕೋಪದಿಂದ ಉರಿಯುತ್ತಾ ಶತ್ರುವಿಗಾಗಿ ಮುನ್ನುಗ್ಗುತ್ತಿದ್ದ ಕೌಂತೇಯನನ್ನು ತಡೆಯಲು ಆ ಮಹಾರಥರಿಗೆ ಸಾಧ್ಯವಾಗಲಿಲ್ಲ.

10013012a ಸ ತೇಷಾಂ ಪ್ರೇಕ್ಷತಾಮೇವ ಶ್ರೀಮತಾಂ ದೃಢಧನ್ವಿನಾಂ।
10013012c ಯಯೌ ಭಾಗಿರಥೀಕಚ್ಚಂ ಹರಿಭಿರ್ಭೃಶವೇಗಿತೈಃ।
10013012e ಯತ್ರ ಸ್ಮ ಶ್ರೂಯತೇ ದ್ರೌಣಿಃ ಪುತ್ರಹಂತಾ ಮಹಾತ್ಮನಾಂ।।

ಶ್ರೀಮಂತ ದೃಢಧನ್ವಿ ಕೃಷ್ಣ-ಅರ್ಜುನ-ಯುಧಿಷ್ಠಿರರು ನೋಡುತ್ತಿದ್ದಂತೆಯೇ ಭೀಮಸೇನನು ಅತ್ಯಂತವೇಗವಾಗಿ ಕುದುರೆಗಳನ್ನು ಓಡಿಸುತ್ತಾ ಮಹಾತ್ಮರ ಪುತ್ರಹಂತಕ ದ್ರೌಣಿಯು ಎಲ್ಲಿ ಇರುವನೆಂದು ಕೇಳಿದ್ದನೋ ಆ ಭಾಗೀರಥೀತೀರವನ್ನು ತಲುಪಿದನು.

10013013a ಸ ದದರ್ಶ ಮಹಾತ್ಮಾನಮುದಕಾಂತೇ ಯಶಸ್ವಿನಂ।
10013013c ಕೃಷ್ಣದ್ವೈಪಾಯನಂ ವ್ಯಾಸಮಾಸೀನಮೃಷಿಭಿಃ ಸಹ।।

ಅಲ್ಲಿ ನದೀತೀರದಲ್ಲಿ ಋಷಿಗಳೊಂದಿಗೆ ಕುಳಿತಿದ್ದ ಯಶಸ್ವಿ, ಮಹಾತ್ಮ, ಕೃಷ್ಣದ್ವೈಪಾಯನ ವ್ಯಾಸನನ್ನು ಕಂಡನು.

10013014a ತಂ ಚೈವ ಕ್ರೂರಕರ್ಮಾಣಂ ಘೃತಾಕ್ತಂ ಕುಶಚೀರಿಣಂ।
10013014c ರಜಸಾ ಧ್ವಸ್ತಕೇಶಾಂತಂ ದದರ್ಶ ದ್ರೌಣಿಮಂತಿಕೇ।।

ಅಲ್ಲೇ ಹತ್ತಿರದಲ್ಲಿ ತುಪ್ಪವನ್ನು ಬಳಿದುಕೊಂಡಿದ್ದ, ಕುಶಚೀರಣವನ್ನು ಧರಿಸಿದ್ದ, ಧೂಳಿನಿಂದ ತುಂಬಿಕೊಂಡಿದ್ದ, ಕೆದರಿದ ಕೂದಲಿದ್ದ ಕ್ರೂರಕರ್ಮಿ ದ್ರೌಣಿಯನ್ನು ನೋಡಿದನು.

10013015a ತಮಭ್ಯಧಾವತ್ಕೌಂತೇಯಃ ಪ್ರಗೃಹ್ಯ ಸಶರಂ ಧನುಃ।
10013015c ಭೀಮಸೇನೋ ಮಹಾಬಾಹುಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।

ಶರವನ್ನು ಹೂಡಿದ ಧನುಸ್ಸನ್ನು ಹಿಡಿದು ಮಹಾಬಾಹು ಕೌಂತೇಯ ಭೀಮಸೇನನು ಅವನನ್ನು ಎದುರಿಸಿ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು.

10013016a ಸ ದೃಷ್ಟ್ವಾ ಭೀಮಧನ್ವಾನಂ ಪ್ರಗೃಹೀತಶರಾಸನಂ।
10013016c ಭ್ರಾತರೌ ಪೃಷ್ಠತಶ್ಚಾಸ್ಯ ಜನಾರ್ದನರಥೇ ಸ್ಥಿತೌ।
10013016e ವ್ಯಥಿತಾತ್ಮಾಭವದ್ದ್ರೌಣಿಃ ಪ್ರಾಪ್ತಂ ಚೇದಮಮನ್ಯತ।।

ಬಾಣವನ್ನು ಹೂಡಿ ಧನುಸ್ಸನ್ನು ಹಿಡಿದಿದ್ದ ಭೀಮನನ್ನು ಮತ್ತು ಹಿಂದೆ ರಥದಲ್ಲಿ ನಿಂತಿದ್ದ ಸಹೋದರರೀರ್ವರು ಮತ್ತು ಜನಾರ್ದನರನ್ನು ನೋಡಿ ದ್ರೌಣಿಯು ವ್ಯಥಿತಾತ್ಮನಾಗಿ ಕಾಲವು ಸನ್ನಿಹಿತಯಿತೆಂದು ಭಾವಿಸಿದನು.

10013017a ಸ ತದ್ದಿವ್ಯಮದೀನಾತ್ಮಾ ಪರಮಾಸ್ತ್ರಮಚಿಂತಯತ್।
10013017c ಜಗ್ರಾಹ ಚ ಸ ಚೈಷೀಕಾಂ ದ್ರೌಣಿಃ ಸವ್ಯೇನ ಪಾಣಿನಾ।
10013017e ಸ ತಾಮಾಪದಮಾಸಾದ್ಯ ದಿವ್ಯಮಸ್ತ್ರಮುದೀರಯತ್।।

ಆ ಅದೀನಾತ್ಮ ದ್ರೌಣಿಯು ದಿವ್ಯ ಪರಮಾಸ್ತ್ರವನ್ನು ಧ್ಯಾನಿಸಿ, ಎಡಗೈಯಿಂದ ಜೊಂಡುಹುಲ್ಲನ್ನು ಹಿಡಿದುಕೊಂಡು ಅದರ ಮೇಲೆ ದಿವ್ಯಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸಿದನು.

10013018a ಅಮೃಷ್ಯಮಾಣಸ್ತಾನ್ ಶೂರಾನ್ದಿವ್ಯಾಯುಧಧರಾನ್ ಸ್ಥಿತಾನ್।
10013018c ಅಪಾಂಡವಾಯೇತಿ ರುಷಾ ವ್ಯಸೃಜದ್ದಾರುಣಂ ವಚಃ।।

ದಿವ್ಯಾಯುಧಧಾರಿಗಳಾಗಿ ನಿಂತಿರುವ ಆ ಶೂರರನ್ನು ಸಹಿಸಿಕೊಳ್ಳಲಾರದೇ ಅಶ್ವತ್ಥಾಮನು ರೋಷದಿಂದ “ಅಪಾಂಡವಾಯ!” ಎಂಬ ದಾರುಣ ವಚನವನ್ನು ಹೇಳಿ ಅದನ್ನು ಪ್ರಯೋಗಿಸಿದನು.

10013019a ಇತ್ಯುಕ್ತ್ವಾ ರಾಜಶಾರ್ದೂಲ ದ್ರೋಣಪುತ್ರಃ ಪ್ರತಾಪವಾನ್।
10013019c ಸರ್ವಲೋಕಪ್ರಮೋಹಾರ್ಥಂ ತದಸ್ತ್ರಂ ಪ್ರಮುಮೋಚ ಹ।।

ರಾಜಶಾರ್ದೂಲ! ಹೀಗೆ ಹೇಳಿ ಪ್ರತಾಪವಾನ್ ದ್ರೋಣಪುತ್ರನು ಸರ್ವಲೋಕವನ್ನು ಪ್ರಮೋಹಗೊಳಿಸಲು ಆ ಅಸ್ತ್ರವನ್ನು ಪ್ರಯೋಗಿಸಿದನು.

10013020a ತತಸ್ತಸ್ಯಾಮಿಷೀಕಾಯಾಂ ಪಾವಕಃ ಸಮಜಾಯತ।
10013020c ಪ್ರಧಕ್ಷ್ಯನ್ನಿವ ಲೋಕಾಂಸ್ತ್ರೀನ್ಕಾಲಾಂತಕಯಮೋಪಮಃ।।

ಆಗ ಆ ಜೊಂಡುಹುಲ್ಲಿನಲ್ಲಿ ಅಗ್ನಿಯು ಹುಟ್ಟಿಕೊಂಡಿತು. ಕಾಲಾಂತಕಯಮನಿಗೆ ಸಮಾನ ಆ ಅಗ್ನಿಯು ಮೂರು ಲೋಕಗಳನ್ನೂ ದಹಿಸಿಬಿಡುವುದೋ ಎಂಬಂತೆ ಕಾಣುತ್ತಿತ್ತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಬ್ರಹ್ಮಶಿರೋಸ್ತ್ರತ್ಯಾಗೇ ತ್ರಯೋದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಬ್ರಹ್ಮಶಿರೋಸ್ತ್ರತ್ಯಾಗ ಎನ್ನುವ ಹದಿಮೂರನೇ ಅಧ್ಯಾಯವು.