ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಐಷೀಕ ಪರ್ವ
ಅಧ್ಯಾಯ 12
ಸಾರ
ಅಶ್ವತ್ಥಾಮನ ಮೇಲೆ ಪ್ರತೀಕಾರವನ್ನೆಸಗಲು ಭೀಮಸೇನನು ಹೊರಟುಹೋಗಲು ಕೃಷ್ಣನು ಯುಧಿಷ್ಠಿರನಿಗೆ ಹಿಂದೆ ಅಶ್ವತ್ಥಾಮನು ಬ್ರಹ್ಮಶಿರ ಅಸ್ತ್ರದ ಬದಲಿಗಾಗಿ ಸುದರ್ಶನ ಚಕ್ರವನ್ನು ಕೇಳಿದ್ದನು ಎಂಬ ಕಥೆಯನ್ನು ಹೇಳಿ ಅಶ್ವತ್ಥಾಮನಿಂದ ಭೀಮಸೇನನನ್ನು ಉಳಿಸಬೇಕು ಎಂದು ಸೂಚಿಸಿದುದು (1-40).
10012001 ವೈಶಂಪಾಯನ ಉವಾಚ।
10012001a ತಸ್ಮಿನ್ಪ್ರಯಾತೇ ದುರ್ಧರ್ಷೇ ಯದೂನಾಮೃಷಭಸ್ತತಃ।
10012001c ಅಬ್ರವೀತ್ಪುಂಡರೀಕಾಕ್ಷಃ ಕುಂತೀಪುತ್ರಂ ಯುಧಿಷ್ಠಿರಂ।।
ವೈಶಂಪಾಯನನು ಹೇಳಿದನು: “ಆ ದುರ್ಧರ್ಷನು ಹೊರಟುಹೋಗಲು ಯದುಗಳ ಋಷಭ ಪುಂಡರೀಕಾಕ್ಷನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು:
10012002a ಏಷ ಪಾಂಡವ ತೇ ಭ್ರಾತಾ ಪುತ್ರಶೋಕಮಪಾರಯನ್।
10012002c ಜಿಘಾಂಸುರ್ದ್ರೌಣಿಮಾಕ್ರಂದೇ ಯಾತಿ ಭಾರತ ಭಾರತಃ।।
“ಭಾರತ! ನಿನ್ನ ಈ ಭ್ರಾತಾ ಪಾಂಡವ ಭಾರತನು ಪುತ್ರಶೋಕದ ಭಾರವನ್ನು ಹೊತ್ತು ಯುದ್ಧದಲ್ಲಿ ದ್ರೌಣಿಯನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ!
10012003a ಭೀಮಃ ಪ್ರಿಯಸ್ತೇ ಸರ್ವೇಭ್ಯೋ ಭ್ರಾತೃಭ್ಯೋ ಭರತರ್ಷಭ।
10012003c ತಂ ಕೃಚ್ಚ್ರಗತಮದ್ಯ ತ್ವಂ ಕಸ್ಮಾನ್ನಾಭ್ಯವಪದ್ಯಸೇ।।
ಭರತರ್ಷಭ! ನಿನ್ನ ಎಲ್ಲ ಸಹೋದರರಲ್ಲಿ ಭೀಮನು ನಿನಗೆ ಅತ್ಯಂತ ಪ್ರಿಯನಾದವನು. ಇಂದು ಅವನು ಕಷ್ಟಕ್ಕೆ ಸಿಲುಕಲಿದ್ದಾನೆ. ಅವನ ಸಹಾಯಕ್ಕೆ ನೀನು ಏಕೆ ಏನನ್ನೂ ಮಾಡುತ್ತಿಲ್ಲ?
10012004a ಯತ್ತದಾಚಷ್ಟ ಪುತ್ರಾಯ ದ್ರೋಣಃ ಪರಪುರಂಜಯಃ।
10012004c ಅಸ್ತ್ರಂ ಬ್ರಹ್ಮಶಿರೋ ನಾಮ ದಹೇದ್ಯತ್ಪೃಥಿವೀಮಪಿ।।
ಪರಪುರಂಜಯ ದ್ರೋಣನು ತನ್ನ ಮಗನಿಗೆ ನೀಡಿದ್ದ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವು ಇಡೀ ಭೂಮಿಯನ್ನೇ ದಹಿಸಿಬಿಡಬಲ್ಲದು.
10012005a ತನ್ಮಹಾತ್ಮಾ ಮಹಾಭಾಗಃ ಕೇತುಃ ಸರ್ವಧನುಷ್ಮತಾಂ।
10012005c ಪ್ರತ್ಯಪಾದಯದಾಚಾರ್ಯಃ ಪ್ರೀಯಮಾಣೋ ಧನಂಜಯಂ।।
ಸರ್ವಧನುಷ್ಮತರಲ್ಲಿ ಕೇತುಪ್ರಾಯನಾದ ಆ ಮಹಾಭಾಗ ಆಚಾರ್ಯನು ಪ್ರೀತಿಯಿಂದ ಧನಂಜಯನಿಗೆ ಆ ಅಸ್ತ್ರವನ್ನು ಪ್ರತಿಪಾಲಿಸಿದ್ದನು.
10012006a ತತ್ಪುತ್ರೋಽಸ್ಯೈವಮೇವೈನಮನ್ವಯಾಚದಮರ್ಷಣಃ।
10012006c ತತಃ ಪ್ರೋವಾಚ ಪುತ್ರಾಯ ನಾತಿಹೃಷ್ಟಮನಾ ಇವ।।
ಅದನ್ನು ಸಹಿಸಿಕೊಳ್ಳಲಾರದ ಅವನ ಪುತ್ರನು ಆ ಅಸ್ತ್ರವನ್ನು ಕೇಳಿಕೊಳ್ಳಲು ದ್ರೋಣನು ಅಸಂತೋಷನಾಗಿಯೇ ಅದನ್ನು ತನ್ನ ಮಗನಿಗೆ ಉಪದೇಶಿಸಿದ್ದನು.
10012007a ವಿದಿತಂ ಚಾಪಲಂ ಹ್ಯಾಸೀದಾತ್ಮಜಸ್ಯ ಮಹಾತ್ಮನಃ।
10012007c ಸರ್ವಧರ್ಮವಿದಾಚಾರ್ಯೋ ನಾನ್ವಿಷತ್ಸತತಂ ಸುತಂ।।
ತನ್ನ ಮಗನು ಚಪಲನೆಂದು ತಿಳಿದಿದ್ದ ಆ ಮಹಾತ್ಮ ಸರ್ವಧರ್ಮವಿದು ಆಚಾರ್ಯನು ಮಗನಿಗೆ ಸತತವೂ ಈ ಅನುಶಾಸನವಿತ್ತಿದ್ದನು:
10012008a ಪರಮಾಪದ್ಗತೇನಾಪಿ ನ ಸ್ಮ ತಾತ ತ್ವಯಾ ರಣೇ।
10012008c ಇದಮಸ್ತ್ರಂ ಪ್ರಯೋಕ್ತವ್ಯಂ ಮಾನುಷೇಷು ವಿಶೇಷತಃ।।
“ಮಗೂ! ರಣದಲ್ಲಿ ಪರಮ ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾಗಲೂ ನೀನು ಈ ಅಸ್ತ್ರವನ್ನು ಉಪಯೋಗಿಸಕೂಡದು. ಅದರಲ್ಲೂ ವಿಶೇಷವಾಗಿ ಮನುಷ್ಯರ ಮೇಲೆ ಪ್ರಯೋಗಿಸಬಾರದು!”
10012009a ಇತ್ಯುಕ್ತವಾನ್ಗುರುಃ ಪುತ್ರಂ ದ್ರೋಣಃ ಪಶ್ಚಾದಥೋಕ್ತವಾನ್।
10012009c ನ ತ್ವಂ ಜಾತು ಸತಾಂ ಮಾರ್ಗೇ ಸ್ಥಾತೇತಿ ಪುರುಷರ್ಷಭ।।
ಪುರುಷರ್ಷಭ! ಇದನ್ನು ಹೇಳಿದ ಗುರುದ್ರೋಣನು ನಂತರ ಮಗನಿಗೆ “ನೀನು ಯಾವಾಗಲೂ ಸತ್ಪುರುಷರ ಮಾರ್ಗದಲ್ಲಿ ನಡೆಯುವವನಲ್ಲ ಎಂದು ನನಗೆ ತಿಳಿದಿದೆ!” ಎಂದೂ ಹೇಳಿದ್ದನು.
10012010a ಸ ತದಾಜ್ಞಾಯ ದುಷ್ಟಾತ್ಮಾ ಪಿತುರ್ವಚನಮಪ್ರಿಯಂ।
10012010c ನಿರಾಶಃ ಸರ್ವಕಲ್ಯಾಣೈಃ ಶೋಚನ್ಪರ್ಯಪತನ್ಮಹೀಂ।।
ತಂದೆಯ ಆ ಅಪ್ರಿಯ ಮಾತನ್ನು ಸ್ವೀಕರಿಸಿ ದುಷ್ಟಾತ್ಮ ಅಶ್ವತ್ಥಾಮನು ಸರ್ವಕಲ್ಯಾಣಗಳಿಂದ ನಿರಾಶನಾಗಿ ಶೋಕಿಸುತ್ತಾ ಭೂಮಿಯಲ್ಲಿ ಅಲೆಯತೊಡಗಿದನು.
10012011a ತತಸ್ತದಾ ಕುರುಶ್ರೇಷ್ಠ ವನಸ್ಥೇ ತ್ವಯಿ ಭಾರತ।
10012011c ಅವಸದ್ದ್ವಾರಕಾಮೇತ್ಯ ವೃಷ್ಣಿಭಿಃ ಪರಮಾರ್ಚಿತಃ।।
ಕುರುಶ್ರೇಷ್ಠ! ಭಾರತ! ನೀವು ವನದಲ್ಲಿದ್ದಾಗ ಅವನು ದ್ವಾರಕೆಗೂ ಬಂದಿದ್ದ ಮತ್ತು ವೃಷ್ಣಿಗಳು ಅವನನ್ನು ಪರಮ ಗೌರವದಿಂದ ಸತ್ಕರಿಸಿದ್ದರು.
10012012a ಸ ಕದಾ ಚಿತ್ಸಮುದ್ರಾಂತೇ ವಸನ್ದ್ವಾರವತೀಮನು।
10012012c ಏಕ ಏಕಂ ಸಮಾಗಮ್ಯ ಮಾಮುವಾಚ ಹಸನ್ನಿವ।।
ಒಮ್ಮೆ ಅವನು ದ್ವಾರವತಿಯ ಹತ್ತಿರ ಸಮುದ್ರತೀರದಲ್ಲಿ ವಾಸಿಸುತ್ತಿದ್ದಾಗ ಏಕಾಂಗಿಯಾಗಿದ್ದ ನನ್ನನ್ನು ಒಂಟಿಯಾಗಿ ಸಂಧಿಸಿ ನಗುತ್ತಾ ಇದನ್ನು ಹೇಳಿದ್ದನು:
10012013a ಯತ್ತದುಗ್ರಂ ತಪಃ ಕೃಷ್ಣ ಚರನ್ಸತ್ಯಪರಾಕ್ರಮಃ।
10012013c ಅಗಸ್ತ್ಯಾದ್ಭಾರತಾಚಾರ್ಯಃ ಪ್ರತ್ಯಪದ್ಯತ ಮೇ ಪಿತಾ।।
10012014a ಅಸ್ತ್ರಂ ಬ್ರಹ್ಮಶಿರೋ ನಾಮ ದೇವಗಂಧರ್ವಪೂಜಿತಂ।
10012014c ತದದ್ಯ ಮಯಿ ದಾಶಾರ್ಹ ಯಥಾ ಪಿತರಿ ಮೇ ತಥಾ।।
“ಕೃಷ್ಣ! ದಾಶಾರ್ಹ! ಸತ್ಯಪರಾಕ್ರಮಿ ಮತ್ತು ಭಾರತರ ಆಚಾರ್ಯ ನನ್ನ ತಂದೆಯು ಉಗ್ರತಪಸ್ಸನ್ನು ಆಚರಿಸಿ ಅಗಸ್ತ್ಯನಿಂದ ದೇವಗಂಧರ್ವ ಪೂಜಿತ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು ಪಡೆದುಕೊಂಡಿದ್ದನು. ತಂದೆಯಲ್ಲಿದ್ದ ಆ ಅಸ್ತ್ರವು ಇಂದು ನನ್ನಲ್ಲಿಯೂ ಇದೆ.
10012015a ಅಸ್ಮತ್ತಸ್ತದುಪಾದಾಯ ದಿವ್ಯಮಸ್ತ್ರಂ ಯದೂತ್ತಮ।
10012015c ಮಮಾಪ್ಯಸ್ತ್ರಂ ಪ್ರಯಚ್ಚ ತ್ವಂ ಚಕ್ರಂ ರಿಪುಹರಂ ರಣೇ।।
ಯದೂತ್ತಮ! ನನ್ನಿಂದ ಈ ದಿವ್ಯಾಸ್ತ್ರವನ್ನು ಪಡೆದುಕೊಂಡು ನೀನು ನನಗೆ ರಣದಲ್ಲಿ ರಿಪುಹರಣಮಾಡಬಲ್ಲ ಚಕ್ರವನ್ನು ದಯಪಾಲಿಸು!”
10012016a ಸ ರಾಜನ್ಪ್ರೀಯಮಾಣೇನ ಮಯಾಪ್ಯುಕ್ತಃ ಕೃತಾಂಜಲಿಃ।
10012016c ಯಾಚಮಾನಃ ಪ್ರಯತ್ನೇನ ಮತ್ತೋಽಸ್ತ್ರಂ ಭರತರ್ಷಭ।।
ರಾಜನ್! ಭರತರ್ಷಭ! ಹೀಗೆ ಕೈಮುಗಿದು ನನ್ನ ಅಸ್ತ್ರವನ್ನು ಕೇಳುತ್ತಿದ್ದ ಅವನಿಗೆ ಪ್ರಯತ್ನಪಟ್ಟು ಪ್ರೀತಿಯಿಂದಲೇ ನಾನು ಹೇಳಿದೆ:
10012017a ದೇವದಾನವಗಂಧರ್ವಮನುಷ್ಯಪತಗೋರಗಾಃ।
10012017c ನ ಸಮಾ ಮಮ ವೀರ್ಯಸ್ಯ ಶತಾಂಶೇನಾಪಿ ಪಿಂಡಿತಾಃ।।
“ದೇವ-ದಾನವ-ಗಂಧರ್ವ-ಮನುಷ್ಯ-ಪಕ್ಷಿ-ಉರಗಗಳಲ್ಲಿ ನನ್ನ ವೀರ್ಯದ ನೂರನೆಯ ಒಂದು ಭಾಗದಷ್ಟು ಸಮನಾದವರು ಯಾರೂ ಇಲ್ಲ.
10012018a ಇದಂ ಧನುರಿಯಂ ಶಕ್ತಿರಿದಂ ಚಕ್ರಮಿಯಂ ಗದಾ।
10012018c ಯದ್ಯದಿಚ್ಚಸಿ ಚೇದಸ್ತ್ರಂ ಮತ್ತಸ್ತತ್ತದ್ದದಾನಿ ತೇ।।
ಇದು ನನ್ನ ಧನುಸ್ಸು. ಇದು ಶಕ್ತಿ. ಇದು ಚಕ್ರ. ಇದು ಗದೆ. ನೀನು ನನ್ನಿಂದ ಯಾವ ಅಸ್ತ್ರವನ್ನು ಪಡೆಯಲಿಚ್ಛಿಸುವೆಯೋ ಆ ಅಸ್ತ್ರವನ್ನು ನಾನು ನಿನಗೆ ಕೊಡುತ್ತೇನೆ.
10012019a ಯಚ್ಚಕ್ನೋಷಿ ಸಮುದ್ಯಂತುಂ ಪ್ರಯೋಕ್ತುಮಪಿ ವಾ ರಣೇ।
10012019c ತದ್ಗೃಹಾಣ ವಿನಾಸ್ತ್ರೇಣ ಯನ್ಮೇ ದಾತುಮಭೀಪ್ಸಸಿ।।
ಯಾವುದನ್ನು ಎತ್ತಿಕೊಳ್ಳಲು ಅಥವಾ ರಣದಲ್ಲಿ ಪ್ರಯೋಗಿಸಲು ನಿನಗೆ ಸಾಧ್ಯವಾಗುವುದೋ ಅದನ್ನು ನೀನು, ನನಗೆ ಕೊಡಬೇಕೆಂದು ಬಯಸಿರುವ ಆ ಅಸ್ತ್ರವನ್ನು ಕೊಡದೇ, ನನ್ನಿಂದ ಪಡೆದುಕೊಳ್ಳಬಹುದು.”
10012020a ಸ ಸುನಾಭಂ ಸಹಸ್ರಾರಂ ವಜ್ರನಾಭಮಯಸ್ಮಯಂ।
10012020c ವವ್ರೇ ಚಕ್ರಂ ಮಹಾಬಾಹೋ ಸ್ಪರ್ಧಮಾನೋ ಮಯಾ ಸಹ।।
ಮಹಾಬಾಹೋ! ನನ್ನೊಡನೆ ಸ್ಪರ್ಧಿಸುತ್ತಿದ್ದ ಅವನು ಸುಂದರ ನಾಭಿಯಿಂದ ಕೂಡಿದ್ದ, ವಜ್ರಮಯ ನಾಭಿಯನ್ನು ಹೊಂದಿದ್ದ, ಸಹಸ್ರ ಅರೆಗಳುಳ್ಳ ಚಕ್ರವನ್ನು ಆರಿಸಿಕೊಂಡನು.
10012021a ಗೃಹಾಣ ಚಕ್ರಮಿತ್ಯುಕ್ತೋ ಮಯಾ ತು ತದನಂತರಂ।
10012021c ಜಗ್ರಾಹೋಪೇತ್ಯ ಸಹಸಾ ಚಕ್ರಂ ಸವ್ಯೇನ ಪಾಣಿನಾ।
10012021e ನ ಚೈತದಶಕತ್ ಸ್ಥಾನಾತ್ಸಂಚಾಲಯಿತುಮಚ್ಯುತ।।
ಚಕ್ರವನ್ನು ಎತ್ತಿಕೋ ಎಂದು ನಾನು ಹೇಳಿದ ನಂತರ ಬೇಗನೇ ಹಾರಿಬಂದು ಅವನು ಎಡಗೈಯಿಂದ ಚಕ್ರವನ್ನು ಹಿಡಿದುಕೊಂಡನು. ಅಚ್ಯುತ! ಆದರೆ ಅವನಿಗೆ ಅದನ್ನು ಎತ್ತುವುದಿರಲಿ ಅದಿದ್ದ ಸ್ಥಳದಿಂದ ಅಲುಗಿಸಲು ಕೂಡ ಅವನಿಗೆ ಸಾಧ್ಯವಾಗಲಿಲ್ಲ!
10012022a ಅಥ ತದ್ದಕ್ಷಿಣೇನಾಪಿ ಗ್ರಹೀತುಮುಪಚಕ್ರಮೇ।
10012022c ಸರ್ವಯತ್ನೇನ ತೇನಾಪಿ ಗೃಹ್ಣನ್ನೇತದಕಲ್ಪಯತ್।।
ಆಗ ಅವನು ಬಲಗೈಯನ್ನೂ ಮುಂದೆ ಚಾಚಿ ಎರಡೂ ಕೈಗಳಿಂದ ಚಕ್ರವನ್ನು ಮೇಲೆತ್ತಲು ಪ್ರಯತ್ನಿಸಿದನು. ಸರ್ವ ಪ್ರಯತ್ನದಿಂದಲೂ ಅವನಿಗೆ ಅದನ್ನು ಹಿಡಿದೆತ್ತಲು ಸಾಧ್ಯವಾಗಲಿಲ್ಲ.
10012023a ತತಃ ಸರ್ವಬಲೇನಾಪಿ ಯಚ್ಚೈತನ್ನ ಶಶಾಕ ಸಃ।
10012023c ಉದ್ಧರ್ತುಂ ವಾ ಚಾಲಯಿತುಂ ದ್ರೌಣಿಃ ಪರಮದುರ್ಮನಾಃ।
10012023e ಕೃತ್ವಾ ಯತ್ನಂ ಪರಂ ಶ್ರಾಂತಃ ಸ ನ್ಯವರ್ತತ ಭಾರತ।।
ಭಾರತ! ಹೀಗೆ ಸರ್ವಬಲವನ್ನುಪಯೋಗಿಸಿಯೂ ಅದನ್ನು ಅಲುಗಾಡಿಸಲು ಅಥವಾ ಎತ್ತಲು ಸಾಧ್ಯವಾಗದಿದ್ದಾಗ ಪರಮ ದುರ್ಮನನಾದ ದ್ರೌಣಿಯು ಪರಮ ಯತ್ನವನ್ನು ಮಾಡಿ ಆಯಾಸಗೊಂಡು ಹಿಂದೆ ಸರಿದನು.
10012024a ನಿವೃತ್ತಮಥ ತಂ ತಸ್ಮಾದಭಿಪ್ರಾಯಾದ್ವಿಚೇತಸಂ।
10012024c ಅಹಮಾಮಂತ್ರ್ಯ ಸುಸ್ನಿಗ್ಧಮಶ್ವತ್ಥಾಮಾನಮಬ್ರುವಂ।।
ಹಿಂದೆಸರಿದ ಮತ್ತು ಅದರಿಂದಾಗಿ ಮನಸ್ಸನ್ನು ಕೆಡಿಸಿಕೊಂಡಿದ್ದ ಉದ್ವಿಗ್ನ ಅಶ್ವತ್ಥಾಮನಿಗೆ ನಾನು ಹೀಗೆ ಹೇಳಿದ್ದೆನು:
10012025a ಯಃ ಸ ದೇವಮನುಷ್ಯೇಷು ಪ್ರಮಾಣಂ ಪರಮಂ ಗತಃ।
10012025c ಗಾಂಡೀವಧನ್ವಾ ಶ್ವೇತಾಶ್ವಃ ಕಪಿಪ್ರವರಕೇತನಃ।।
10012026a ಯಃ ಸಾಕ್ಷಾದ್ದೇವದೇವೇಶಂ ಶಿತಿಕಂಠಮುಮಾಪತಿಂ।
10012026c ದ್ವಂದ್ವಯುದ್ಧೇ ಪರಾಜಿಷ್ಣುಸ್ತೋಷಯಾಮಾಸ ಶಂಕರಂ।।
10012027a ಯಸ್ಮಾತ್ಪ್ರಿಯತರೋ ನಾಸ್ತಿ ಮಮಾನ್ಯಃ ಪುರುಷೋ ಭುವಿ।
10012027c ನಾದೇಯಂ ಯಸ್ಯ ಮೇ ಕಿಂ ಚಿದಪಿ ದಾರಾಃ ಸುತಾಸ್ತಥಾ।।
“ದೇವ-ಮನುಷ್ಯರಲ್ಲಿ ಅತ್ಯಂತ ಪ್ರಾಮಾಣಿಕನೆಂದು ಖ್ಯಾತಿಗೊಂಡಿರುವ, ಗಾಂಡೀವಧನ್ವಿ, ಶ್ವೇತಾಶ್ವ, ಕಪಿಪ್ರವರನನನ್ನು ಧ್ವಜದಲ್ಲಿಟ್ಟಿಕೊಂಡಿರುವ, ಸಾಕ್ಷಾತ್ ದೇವದೇವೇಶ ಶಿತಿಕಂಠ ಉಮಾಪತಿ ಶಂಕರನನ್ನು ದ್ವಂದ್ವಯುದ್ಧದಲ್ಲಿ ಪರಾಜಯಗೊಳಿಸಲು ಪ್ರಯತ್ನಿಸಿ ತೃಪ್ತಿಗೊಳಿಸಿದ ಅರ್ಜುನನಿಗಿಂತ ಹೆಚ್ಚಿನ ಪ್ರಿಯ ಪುರುಷನು ಈ ಭುವಿಯಲ್ಲಿ ಬೇರೆ ಯಾರೂ ಇಲ್ಲ. ನನ್ನ ಪತ್ನಿಯರು ಮತ್ತು ಮಕ್ಕಳಲ್ಲಿಕೂಡ ಅವನಿಗೆ ನಾನು ಕೊಡಲಾರದವರು ಯಾರೂ ಇಲ್ಲ.
10012028a ತೇನಾಪಿ ಸುಹೃದಾ ಬ್ರಹ್ಮನ್ಪಾರ್ಥೇನಾಕ್ಲಿಷ್ಟಕರ್ಮಣಾ।
10012028c ನೋಕ್ತಪುರ್ವಮಿದಂ ವಾಕ್ಯಂ ಯತ್ತ್ವಂ ಮಾಮಭಿಭಾಷಸೇ।।
ಬ್ರಾಹ್ಮಣ! ನನಗೆ ಅತ್ಯಂತ ಸುಹೃದನಾದ ಅಕ್ಲಿಷ್ಟಕರ್ಮಿ ಪಾರ್ಥನೂ ಕೂಡ ನೀನು ನನ್ನೊಡನೆ ಕೇಳಿದಂತೆ ಇದೂವರೆಗೂ ಕೇಳಿಲ್ಲ.
10012029a ಬ್ರಹ್ಮಚರ್ಯಂ ಮಹದ್ಘೋರಂ ಚೀರ್ತ್ವಾ ದ್ವಾದಶವಾರ್ಷಿಕಂ।
10012029c ಹಿಮವತ್ಪಾರ್ಶ್ವಮಭ್ಯೇತ್ಯ ಯೋ ಮಯಾ ತಪಸಾರ್ಚಿತಃ।।
10012030a ಸಮಾನವ್ರತಚಾರಿಣ್ಯಾಂ ರುಕ್ಮಿಣ್ಯಾಂ ಯೋಽನ್ವಜಾಯತ।
10012030c ಸನತ್ಕುಮಾರಸ್ತೇಜಸ್ವೀ ಪ್ರದ್ಯುಮ್ನೋ ನಾಮ ಮೇ ಸುತಃ।।
ಹನ್ನೆರಡು ವರ್ಷಗಳು ಹಿಮವತ್ಪರ್ವತದಲ್ಲಿ ಬ್ರಹ್ಮಚರ್ಯದಿಂದ ಘೋರ ತಪಸ್ಸನ್ನು ಮಾಡಿದ ನನ್ನಿಂದ ಸಮಾನವ್ರತಚಾರಿಣಿ ರುಕ್ಮಿಣಿಯಲ್ಲಿ ಜನಿಸಿದ ಸನತ್ಕುಮಾರನ ತೇಜಸ್ಸುಳ್ಳ ಪ್ರದ್ಯುಮ್ನನೆಂಬ ನನ್ನ ಮಗನಿದ್ದಾನೆ.
10012031a ತೇನಾಪ್ಯೇತನ್ಮಹದ್ದಿವ್ಯಂ ಚಕ್ರಮಪ್ರತಿಮಂ ಮಮ।
10012031c ನ ಪ್ರಾರ್ಥಿತಮಭೂನ್ಮೂಢ ಯದಿದಂ ಪ್ರಾರ್ಥಿತಂ ತ್ವಯಾ।।
ಮೂಢ! ಆ ನನ್ನ ಮಗನೂ ಕೂಡ ಇಂದು ನೀನು ನನ್ನಿಂದ ಕೇಳಿದ ಈ ದಿವ್ಯವಾದ ಅಪ್ರತಿಮ ಚಕ್ರವನ್ನು ಇದೂವರೆಗೆ ಕೇಳಲಿಲ್ಲ!
10012032a ರಾಮೇಣಾತಿಬಲೇನೈತನ್ನೋಕ್ತಪೂರ್ವಂ ಕದಾ ಚನ।
10012032c ನ ಗದೇನ ನ ಸಾಂಬೇನ ಯದಿದಂ ಪ್ರಾರ್ಥಿತಂ ತ್ವಯಾ।।
ನೀನು ಕೇಳಿದ ಇದನ್ನು ಎಂದೂ ಅತಿಬಲನಾದ ರಾಮನೂ, ಗದನೂ, ಸಾಂಬನೂ ನನ್ನನ್ನು ಕೇಳಲಿಲ್ಲ!
10012033a ದ್ವಾರಕಾವಾಸಿಭಿಶ್ಚಾನ್ಯೈರ್ವೃಷ್ಣ್ಯಂಧಕಮಹಾರಥೈಃ।
10012033c ನೋಕ್ತಪೂರ್ವಮಿದಂ ಜಾತು ಯದಿದಂ ಪ್ರಾರ್ಥಿತಂ ತ್ವಯಾ।।
ನೀನು ಕೇಳುವ ಇದನ್ನು ದ್ವಾರಕಾವಾಸಿಗಳಲ್ಲಿ ಮತ್ತು ವೃಷ್ಣಿ-ಅಂಧಕ ಮಹಾರಥರಲ್ಲಿ ಬೇರೆ ಯಾರೂ ಮೊದಲು ಕೇಳಿರಲಿಲ್ಲ!
10012034a ಭಾರತಾಚಾರ್ಯಪುತ್ರಃ ಸನ್ಮಾನಿತಃ ಸರ್ವಯಾದವೈಃ।
10012034c ಚಕ್ರೇಣ ರಥಿನಾಂ ಶ್ರೇಷ್ಠ ಕಿಂ ನು ತಾತ ಯುಯುತ್ಸಸೇ।।
ಅಯ್ಯಾ! ಭಾರತಾಚಾರ್ಯಪುತ್ರ! ಸರ್ವಯಾದವರಿಂದ ಸನ್ಮಾನಿತನಾಗಿರುವ ರಥಿಗಳಲ್ಲಿ ಶ್ರೇಷ್ಠನಾದ ನೀನು ಯಾರೊಡನೆ ಯುದ್ಧಮಾಡಲು ಬಯಸುತ್ತಿರುವೆ?”
10012035a ಏವಮುಕ್ತೋ ಮಯಾ ದ್ರೌಣಿರ್ಮಾಮಿದಂ ಪ್ರತ್ಯುವಾಚ ಹ।
10012035c ಪ್ರಯುಜ್ಯ ಭವತೇ ಪೂಜಾಂ ಯೋತ್ಸ್ಯೇ ಕೃಷ್ಣ ತ್ವಯೇತ್ಯುತ।।
ನಾನು ಇದನ್ನು ಕೇಳಲು ದ್ರೌಣಿಯು ನನಗೆ ಉತ್ತರಿಸಿದ್ದನು: “ಕೃಷ್ಣ! ನಿನ್ನನ್ನು ಪೂಜಿಸಿ ನಿನ್ನೊಡನೆಯೇ ಯುದ್ಧಮಾಡಲು ಬಯಸಿದ್ದೆ.
10012036a ತತಸ್ತೇ ಪ್ರಾರ್ಥಿತಂ ಚಕ್ರಂ ದೇವದಾನವಪೂಜಿತಂ।
10012036c ಅಜೇಯಃ ಸ್ಯಾಮಿತಿ ವಿಭೋ ಸತ್ಯಮೇತದ್ಬ್ರವೀಮಿ ತೇ।।
ಅಜೇಯನೆನಿಸಿಕೊಳ್ಳಬೇಕೆಂದೇ ನಾನು ನಿನ್ನ ದೇವದಾನವಪೂಜಿತ ಚಕ್ರವನ್ನು ಕೇಳಿದೆನು. ವಿಭೋ! ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
10012037a ತ್ವತ್ತೋಽಹಂ ದುರ್ಲಭಂ ಕಾಮಮನವಾಪ್ಯೈವ ಕೇಶವ।
10012037c ಪ್ರತಿಯಾಸ್ಯಾಮಿ ಗೋವಿಂದ ಶಿವೇನಾಭಿವದಸ್ವ ಮಾಂ।।
ಕೇಶವ! ನಿನ್ನಿಂದ ನಾನು ಈ ದುರ್ಲಭ ಕಾಮನೆಯನ್ನು ಪಡೆಯದೇ ಹಿಂದಿರುಗುತ್ತೇನೆ. ಗೋವಿಂದ! ನನ್ನನ್ನು ಮಂಗಳಕರ ಮಾತಿನಿಂದ ಬೀಳ್ಕೊಡು!
10012038a ಏತತ್ಸುನಾಭಂ ವೃಷ್ಣೀನಾಮೃಷಭೇಣ ತ್ವಯಾ ಧೃತಂ।
10012038c ಚಕ್ರಮಪ್ರತಿಚಕ್ರೇಣ ಭುವಿ ನಾನ್ಯೋಽಭಿಪದ್ಯತೇ।।
ಸುಂದರ ನಾಭಿಯುಳ್ಳ ಇದನ್ನು ವೃಷ್ಣಿಗಳಲ್ಲಿ ಋಷಭನಾದ ನೀನೇ ಧರಿಸಬೇಕು. ಈ ಅಪ್ರತಿಮ ಚಕ್ರವನ್ನು ತಿರುಗಿಸಲು ಭುವಿಯಲ್ಲಿ ಬೇರೆ ಯಾರಿಗೂ ಸಾಧ್ಯವಾಗಲಾರದು!”
10012039a ಏತಾವದುಕ್ತ್ವಾ ದ್ರೌಣಿರ್ಮಾಂ ಯುಗ್ಯಮಶ್ವಾನ್ಧನಾನಿ ಚ।
10012039c ಆದಾಯೋಪಯಯೌ ಬಾಲೋ ರತ್ನಾನಿ ವಿವಿಧಾನಿ ಚ।।
ನನಗೆ ಹೀಗೆ ಹೇಳಿ ಬಾಲಕ ದ್ರೌಣಿಯು ಎರಡು ಕುದುರೆಗಳನ್ನೂ, ಧನವನ್ನೂ, ವಿವಿಧರತ್ನಗಳನ್ನೂ ತೆಗೆದುಕೊಂಡು ಹೊರಟು ಹೋದನು.
10012040a ಸ ಸಂರಂಭೀ ದುರಾತ್ಮಾ ಚ ಚಪಲಃ ಕ್ರೂರ ಏವ ಚ।
10012040c ವೇದ ಚಾಸ್ತ್ರಂ ಬ್ರಹ್ಮಶಿರಸ್ತಸ್ಮಾದ್ರಕ್ಷ್ಯೋ ವೃಕೋದರಃ।।
ಅವನು ಮಹಾಕೋಪಿಷ್ಟ. ದುರಾತ್ಮಿ. ಚಪಲ ಮತ್ತು ಕ್ರೂರಿ ಕೂಡ. ಬ್ರಹ್ಮಶಿರಾಸ್ತ್ರವನ್ನು ತಿಳಿದಿರುವ ಅವನಿಂದ ವೃಕೋದರನನ್ನು ರಕ್ಷಿಸು!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಯುಧಿಷ್ಠಿರಕೃಷ್ಣಸಂವಾದೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಯುಧಿಷ್ಠಿರಕೃಷ್ಣಸಂವಾದ ಎನ್ನುವ ಹನ್ನೆರಡನೇ ಅಧ್ಯಾಯವು.