ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಐಷೀಕ ಪರ್ವ
ಅಧ್ಯಾಯ 11
ಸಾರ
ಮಕ್ಕಳ ಮತ್ತು ಸಹೋದರರ ವಧೆಯ ಕುರಿತು ಕೇಳಿ ಶೋಕಾರ್ತಳಾದ ದ್ರೌಪದಿಯು ಅಶ್ವತ್ಥಾಮನಿಗೆ ಪ್ರತೀಕಾರವಾಗದೇ ಇದ್ದರೆ ಪ್ರಾಯೋಪವೇಶ ಮಾಡುತ್ತೇನೆ ಎಂದು ಹಠಹಿಡಿದುದು (1-20). ಅಶ್ವತ್ಥಾಮನ ರಥವನ್ನನುಸರಿಸಿ ಭೀಮಸೇನನು ಹೋದುದು (21-30).
10011001 ವೈಶಂಪಾಯನ ಉವಾಚ।
10011001a ಸ ದೃಷ್ಟ್ವಾ ನಿಹತಾನ್ಸಂಖ್ಯೇ ಪುತ್ರಾನ್ಭ್ರಾತೄನ್ಸಖೀಂಸ್ತಥಾ।
10011001c ಮಹಾದುಃಖಪರೀತಾತ್ಮಾ ಬಭೂವ ಜನಮೇಜಯ।।
ವೈಶಂಪಾಯನನು ಹೇಳಿದನು: “ಜನಮೇಜಯ! ರಣದಲ್ಲಿ ಮಕ್ಕಳೂ ಮೊಮ್ಮಕ್ಕಳೂ, ಸ್ನೇಹಿತರೂ ಹತರಾದುದನ್ನು ನೋಡಿ ಮಹಾದುಃಖದಿಂದ ಅವನು ಸಂತಪ್ತನಾಗಿಹೋದನು.
10011002a ತತಸ್ತಸ್ಯ ಮಹಾನ್ ಶೋಕಃ ಪ್ರಾದುರಾಸೀನ್ಮಹಾತ್ಮನಃ।
10011002c ಸ್ಮರತಃ ಪುತ್ರಪೌತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಹ।।
ಪುತ್ರ-ಪೌತ್ರರನ್ನೂ, ಸಹೋದರರನ್ನೂ, ಸ್ವಜನರನ್ನೂ ಸ್ಮರಿಸಿಕೊಳ್ಳುತ್ತಿದ್ದ ಆ ಮಹಾತ್ಮನ ಶೋಕವು ಇನ್ನೂ ಹೆಚ್ಚಾಯಿತು.
10011003a ತಮಶ್ರುಪರಿಪೂರ್ಣಾಕ್ಷಂ ವೇಪಮಾನಮಚೇತಸಂ।
10011003c ಸುಹೃದೋ ಭೃಶಸಂವಿಗ್ನಾಃ ಸಾಂತ್ವಯಾಂ ಚಕ್ರಿರೇ ತದಾ।।
ಕಂಬನಿಗಳಿಂದ ಕಣ್ಣುಗಳು ತುಂಬಿಹೋಗಿದ್ದ, ನಡುಗುತ್ತಾ ಎಚ್ಚರದಪ್ಪುತ್ತಿದ್ದ ಅವನನ್ನು ತುಂಬಾ ವ್ಯಾಕುಲಗೊಂಡಿದ್ದ ಸುಹೃದಯರು ಸಂತಯಿಸತೊಡಗಿದರು.
10011004a ತತಸ್ತಸ್ಮಿನ್ ಕ್ಷಣೇ ಕಾಲ್ಯೇ ರಥೇನಾದಿತ್ಯವರ್ಚಸಾ।
10011004c ನಕುಲಃ ಕೃಷ್ಣಯಾ ಸಾರ್ಧಮುಪಾಯಾತ್ಪರಮಾರ್ತಯಾ।।
ಅದೇ ಕ್ಷಣದಲ್ಲಿ ಆದಿತ್ಯವರ್ಚಸ ರಥದಲ್ಲಿ ನಕುಲನು ಪರಮ ಆರ್ತೆ ಕೃಷ್ಣೆಯನ್ನು ಅಲ್ಲಿಗೆ ಕರೆತಂದನು.
10011005a ಉಪಪ್ಲವ್ಯಗತಾ ಸಾ ತು ಶ್ರುತ್ವಾ ಸುಮಹದಪ್ರಿಯಂ।
10011005c ತದಾ ವಿನಾಶಂ ಪುತ್ರಾಣಾಂ ಸರ್ವೇಷಾಂ ವ್ಯಥಿತಾಭವತ್।।
ಉಪಪ್ಲವ್ಯಕ್ಕೆ ಹೋಗಿದ್ದ ಅವಳು ತನ್ನ ಪುತ್ರರೆಲ್ಲರ ವಿನಾಶದ ಮಹಾ ಅಪ್ರಿಯ ವಿಷಯವನ್ನು ಕೇಳಿ ವ್ಯಥಿತಳಾಗಿದ್ದಳು.
10011006a ಕಂಪಮಾನೇವ ಕದಲೀ ವಾತೇನಾಭಿಸಮೀರಿತಾ।
10011006c ಕೃಷ್ಣಾ ರಾಜಾನಮಾಸಾದ್ಯ ಶೋಕಾರ್ತಾ ನ್ಯಪತದ್ಭುವಿ।।
ಚಂಡಮಾರುತಕ್ಕೆ ಸಿಲುಕಿದ ಬಾಳೆಯ ಮರದಂತೆ ಶೋಕಾರ್ತಳಾಗಿದ್ದ ಕೃಷ್ಣೆಯು ರಾಜನ ಬಳಿಸೇರಿ ಭೂಮಿಯ ಮೇಲೆ ಬಿದ್ದಳು.
10011007a ಬಭೂವ ವದನಂ ತಸ್ಯಾಃ ಸಹಸಾ ಶೋಕಕರ್ಶಿತಂ।
10011007c ಫುಲ್ಲಪದ್ಮಪಲಾಶಾಕ್ಷ್ಯಾಸ್ತಮೋಧ್ವಸ್ತ ಇವಾಂಶುಮಾನ್।।
ಅರಳಿದ ಕಮಲದ ದಳಗಳಂಥಹ ವಿಶಾಲ ಕಣ್ಣುಗಳಿದ್ದ ಅವಳ ಮುಖವು ಶೋಕಕರ್ಶಿತಗೊಂಡು ಒಡನೆಯೇ ರಾಹುಗ್ರಸ್ತ ಚಂದ್ರನಂತೆ ಕಾಂತಿಹೀನವಾಯಿತು.
10011008a ತತಸ್ತಾಂ ಪತಿತಾಂ ದೃಷ್ಟ್ವಾ ಸಂರಂಭೀ ಸತ್ಯವಿಕ್ರಮಃ।
10011008c ಬಾಹುಭ್ಯಾಂ ಪರಿಜಗ್ರಾಹ ಸಮುಪೇತ್ಯ ವೃಕೋದರಃ।।
ಅವಳು ಕೆಳಗೆ ಬೀಳುತ್ತಿರುವುದನ್ನು ನೋಡಿ ಸತ್ಯವಿಕ್ರಮಿ ಕುಪಿತ ವೃಕೋದರನು ಅವಳಿದ್ದಲ್ಲಿಗೆ ಹಾರಿ ತನ್ನ ಎರಡೂ ಕೈಗಳಿಂದ ಅವಳನ್ನು ಹಿಡಿದುಕೊಂಡನು.
10011009a ಸಾ ಸಮಾಶ್ವಾಸಿತಾ ತೇನ ಭೀಮಸೇನೇನ ಭಾಮಿನೀ।
10011009c ರುದತೀ ಪಾಂಡವಂ ಕೃಷ್ಣಾ ಸಹಭ್ರಾತರಮಬ್ರವೀತ್।।
ಭೀಮಸೇನನಿಂದ ಸಮಾಧಾನಗೊಳಿಸಲ್ಪಟ್ಟ ಭಾಮಿನಿ ಕೃಷ್ಣೆಯು ರೋದಿಸುತ್ತಾ ಭ್ರಾತರರೊಂದಿಗಿದ್ದ ಪಾಂಡವನಿಗೆ ಹೇಳಿದಳು:
10011010a ದಿಷ್ಟ್ಯಾ ರಾಜಂಸ್ತ್ವಮದ್ಯೇಮಾಮಖಿಲಾಂ ಭೋಕ್ಷ್ಯಸೇ ಮಹೀಂ।
10011010c ಆತ್ಮಜಾನ್ ಕ್ಷತ್ರಧರ್ಮೇಣ ಸಂಪ್ರದಾಯ ಯಮಾಯ ವೈ।।
“ರಾಜನ್! ಅದೃಷ್ಟವಶಾತ್ ನೀನು ಕ್ಷತ್ರಧರ್ಮದಂತೆ ನಿನ್ನ ಮಕ್ಕಳನ್ನು ಯಮನಿಗಿತ್ತು ಇಂದು ಈ ಅಖಿಲ ಭೂಮಿಯನ್ನು ಭೋಗಿಸುವಂತವನಾಗಿದ್ದೀಯೆ!
10011011a ದಿಷ್ಟ್ಯಾ ತ್ವಂ ಪಾರ್ಥ ಕುಶಲೀ ಮತ್ತಮಾತಂಗಗಾಮಿನಂ।
10011011c ಅವಾಪ್ಯ ಪೃಥಿವೀಂ ಕೃತ್ಸ್ನಾಂ ಸೌಭದ್ರಂ ನ ಸ್ಮರಿಷ್ಯಸಿ।।
ಒಳ್ಳೆಯದಾಯಿತು! ನೀನು ಕುಶಲಿಯಾಗಿದ್ದುಕೊಂಡು ಈ ಇಡೀ ಭೂಮಿಯನ್ನು ಪಡೆದು ಮತ್ತ ಮಾತಂಗದಂತೆ ನಡೆಯುತ್ತಿದ್ದ ಸೌಭದ್ರನನ್ನು ಸ್ಮರಿಸಿಕೊಳ್ಳುತ್ತಿಲ್ಲ!
10011012a ಆತ್ಮಜಾಂಸ್ತೇನ ಧರ್ಮೇಣ ಶ್ರುತ್ವಾ ಶೂರಾನ್ನಿಪಾತಿತಾನ್।
10011012c ಉಪಪ್ಲವ್ಯೇ ಮಯಾ ಸಾರ್ಧಂ ದಿಷ್ಟ್ಯಾ ತ್ವಂ ನ ಸ್ಮರಿಷ್ಯಸಿ।।
ಒಳ್ಳೆಯದಾಯಿತು! ನನ್ನ ಶೂರ ಮಕ್ಕಳು ಧರ್ಮದಿಂದಾಗಿ ಮಡಿದಿದ್ದಾರೆ ಎನ್ನುವುದನ್ನು ಕೇಳಿ ಉಪಪ್ಲವ್ಯದಲ್ಲಿದ್ದ ನನಗೇನಾಗಿರಬಹುದೆಂದು ನೀನು ಯೋಚಿಸುತ್ತಿಲ್ಲ!
10011013a ಪ್ರಸುಪ್ತಾನಾಂ ವಧಂ ಶ್ರುತ್ವಾ ದ್ರೌಣಿನಾ ಪಾಪಕರ್ಮಣಾ।
10011013c ಶೋಕಸ್ತಪತಿ ಮಾಂ ಪಾರ್ಥ ಹುತಾಶನ ಇವಾಶಯಂ।।
ಪಾಪಕರ್ಮಿ ದ್ರೌಣಿಯು ಮಲಗಿದ್ದವರನ್ನು ಸಂಹರಿಸಿದನು ಎನ್ನುವುದನ್ನು ಕೇಳಿ ಪಾರ್ಥ! ಬೆಂಕಿಯು ಕಟ್ಟಿಗೆಯನ್ನು ಸುಡುವಂತೆ ಶೋಕವು ನನ್ನನ್ನು ಸುಡುತ್ತಿದೆ!
10011014a ತಸ್ಯ ಪಾಪಕೃತೋ ದ್ರೌಣೇರ್ನ ಚೇದದ್ಯ ತ್ವಯಾ ಮೃಧೇ।
10011014c ಹ್ರಿಯತೇ ಸಾನುಬಂಧಸ್ಯ ಯುಧಿ ವಿಕ್ರಮ್ಯ ಜೀವಿತಂ।।
10011015a ಇಹೈವ ಪ್ರಾಯಮಾಸಿಷ್ಯೇ ತನ್ನಿಬೋಧತ ಪಾಂಡವಾಃ।
10011015c ನ ಚೇತ್ಫಲಮವಾಪ್ನೋತಿ ದ್ರೌಣಿಃ ಪಾಪಸ್ಯ ಕರ್ಮಣಃ।।
ಪಾಂಡವರೇ! ಕೇಳಿಕೊಳ್ಳಿ! ಪಾಪಕರ್ಮವನ್ನೆಸಗಿದ ದ್ರೌಣಿಯ ಮತ್ತು ಅವನ ಅನುಯಾಯಿಗಳ ಜೀವವನ್ನು ನೀನು ಯುದ್ಧದಲ್ಲಿ ವಿಕ್ರಮದಿಂದ ಅಪಹರಿಸದೇ ಇದ್ದರೆ, ದ್ರೌಣಿಯು ಅವನ ಪಾಪಕರ್ಮದ ಫಲವನ್ನು ಪಡೆಯದೇ ಇದ್ದರೆ, ಇಲ್ಲಿಯೇ ನಾನು ಪ್ರಾಯೋಪವೇಶವನ್ನು ಮಾಡುತ್ತೇನೆ!”
10011016a ಏವಮುಕ್ತ್ವಾ ತತಃ ಕೃಷ್ಣಾ ಪಾಂಡವಂ ಪ್ರತ್ಯುಪಾವಿಶತ್।
10011016c ಯುಧಿಷ್ಠಿರಂ ಯಾಜ್ಞಸೇನೀ ಧರ್ಮರಾಜಂ ಯಶಸ್ವಿನೀ।।
ಪಾಂಡವ ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಯಾಜ್ಞಸೇನಿ ಯಶಸ್ವಿನೀ ಕೃಷ್ಣೆಯು ಪ್ರಾಯೋಪವೇಶಕ್ಕಾಗಿ ಕುಳಿತಳು.
10011017a ದೃಷ್ಟ್ವೋಪವಿಷ್ಟಾಂ ರಾಜರ್ಷಿಃ ಪಾಂಡವೋ ಮಹಿಷೀಂ ಪ್ರಿಯಾಂ।
10011017c ಪ್ರತ್ಯುವಾಚ ಸ ಧರ್ಮಾತ್ಮಾ ದ್ರೌಪದೀಂ ಚಾರುದರ್ಶನಾಂ।।
ಹಾಗೆ ಕುಳಿತಿದ್ದ ತನ್ನ ಪ್ರಿಯ ಮಹಿಷೀ ಚಾರುದರ್ಶನೆ ದ್ರೌಪದಿಗೆ ಧರ್ಮತ್ಮಾ ರಾಜರ್ಷಿ ಪಾಂಡವನು ಹೇಳಿದನು:
10011018a ಧರ್ಮ್ಯಂ ಧರ್ಮೇಣ ಧರ್ಮಜ್ಞೇ ಪ್ರಾಪ್ತಾಸ್ತೇ ನಿಧನಂ ಶುಭೇ।
10011018c ಪುತ್ರಾಸ್ತೇ ಭ್ರಾತರಶ್ಚೈವ ತಾನ್ನ ಶೋಚಿತುಮರ್ಹಸಿ।।
“ಶುಭೇ! ಧರ್ಮಜ್ಞೇ! ನಿನ್ನ ಪುತ್ರರು ಮತ್ತು ಸಹೋದರರು ಧರ್ಮಾನುಸಾರವಾಗಿ ಯುದ್ಧಮಾಡಿ ಧರ್ಮಮಾರ್ಗದಲ್ಲಿಯೇ ನಿಧನವನ್ನು ಹೊಂದಿದ್ದಾರೆ. ಅವರ ಕುರಿತು ದುಃಖಿಸಬಾರದು.
10011019a ದ್ರೋಣಪುತ್ರಃ ಸ ಕಲ್ಯಾಣಿ ವನಂ ದೂರಮಿತೋ ಗತಃ।
10011019c ತಸ್ಯ ತ್ವಂ ಪಾತನಂ ಸಂಖ್ಯೇ ಕಥಂ ಜ್ಞಾಸ್ಯಸಿ ಶೋಭನೇ।।
ಕಲ್ಯಾಣೀ! ಶೋಭನೇ! ದ್ರೋಣಪುತ್ರನು ಇಲ್ಲಿಂದ ದೂರದಲ್ಲಿರುವ ವನಕ್ಕೆ ಹೊರಟುಹೋಗಿದ್ದಾನೆ. ಅವನು ಅಲ್ಲಿ ಯುದ್ಧದಲ್ಲಿ ಹತನಾದುದು ನಿನಗಾದರೋ ಹೇಗೆ ತಿಳಿಯಬೇಕು?”
10011020 ದ್ರೌಪದ್ಯುವಾಚ।
10011020a ದ್ರೋಣಪುತ್ರಸ್ಯ ಸಹಜೋ ಮಣಿಃ ಶಿರಸಿ ಮೇ ಶ್ರುತಃ।
10011020c ನಿಹತ್ಯ ಸಂಖ್ಯೇ ತಂ ಪಾಪಂ ಪಶ್ಯೇಯಂ ಮಣಿಮಾಹೃತಂ।
10011020e ರಾಜನ್ ಶಿರಸಿ ತಂ ಕೃತ್ವಾ ಜೀವೇಯಮಿತಿ ಮೇ ಮತಿಃ।।
ದ್ರೌಪದಿಯು ಹೇಳಿದಳು: “ದ್ರೋಣಪುತ್ರನ ಶಿರದಲ್ಲಿ ಸಹಜವಾದ ಮಣಿಯೊಂದಿದೆಯೆಂದು ಕೇಳಿದ್ದೇವೆ. ಯುದ್ಧದಲ್ಲಿ ಆ ಪಾಪಿಯನ್ನು ಸಂಹರಿಸಿ ಅವನ ಮಣಿಯನ್ನು ಅಪಹರಿಸಿದುದನ್ನು ನಾನು ನೋಡಬೇಕು! ರಾಜನ್! ಅದು ನಿನ್ನ ಶಿರದಲ್ಲಿರುವಂತೆ ಮಾಡಿದರೆ ಮಾತ್ರ ನಾನು ಜೀವಿಸಿರಬಲ್ಲೆ!””
10011021 ವೈಶಂಪಾಯನ ಉವಾಚ।
10011021a ಇತ್ಯುಕ್ತ್ವಾ ಪಾಂಡವಂ ಕೃಷ್ಣಾ ರಾಜಾನಂ ಚಾರುದರ್ಶನಾ।
10011021c ಭೀಮಸೇನಮಥಾಭ್ಯೇತ್ಯ ಕುಪಿತಾ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ರಾಜ ಪಾಂಡವನಿಗೆ ಹೀಗೆ ಹೇಳಿ ಚಾರುದರ್ಶನೆ ಕೃಷ್ಣೆಯು ಭೀಮಸೇನನ ಬಳಿಬಂದು ಕುಪಿತಳಾಗಿ ಈ ಮಾತನ್ನಾಡಿದಳು:
10011022a ತ್ರಾತುಮರ್ಹಸಿ ಮಾಂ ಭೀಮ ಕ್ಷತ್ರಧರ್ಮಮನುಸ್ಮರನ್।
10011022c ಜಹಿ ತಂ ಪಾಪಕರ್ಮಾಣಂ ಶಂಬರಂ ಮಘವಾನಿವ।
10011022e ನ ಹಿ ತೇ ವಿಕ್ರಮೇ ತುಲ್ಯಃ ಪುಮಾನಸ್ತೀಹ ಕಶ್ಚನ।।
“ಭೀಮ! ಕ್ಷತ್ರಧರ್ಮವನ್ನು ನೆನಪಿಸಿಕೊಂಡು ನನ್ನನ್ನು ಕಾಪಾಡಬೇಕಾಗಿದೆ. ಮಘವಾನನು ಶಂಬರನನ್ನು ಹೇಗೋ ಹಾಗೆ ಆ ಪಾಪಿಷ್ಟನನ್ನು ನೀನು ಕೊಲ್ಲು! ವಿಕ್ರಮದಲ್ಲಿ ನಿನ್ನ ಸಮಾನ ಪುರುಷನು ಯಾರೂ ಇಲ್ಲ!
10011023a ಶ್ರುತಂ ತತ್ಸರ್ವಲೋಕೇಷು ಪರಮವ್ಯಸನೇ ಯಥಾ।
10011023c ದ್ವೀಪೋಽಭೂಸ್ತ್ವಂ ಹಿ ಪಾರ್ಥಾನಾಂ ನಗರೇ ವಾರಣಾವತೇ।
10011023e ಹಿಡಿಂಬದರ್ಶನೇ ಚೈವ ತಥಾ ತ್ವಮಭವೋ ಗತಿಃ।।
ವಾರಣಾವತ ನಗರದಲ್ಲಿ ಹಿಡಿಂಬನನ್ನು ನೋಡಿ ಪರಮವ್ಯಸನಕ್ಕೆ ಸಿಲುಕಿದ್ದ ಪಾರ್ಥರಿಗೆ ನೀನು ದ್ವೀಪಪ್ರಾಯನಾಗಿ ಅವರನ್ನು ರಕ್ಷಿಸಿದೆಯೆಂದು ಸರ್ವಲೋಕಗಳಲ್ಲಿ ವಿಖ್ಯಾತವಾಗಿದೆ.
10011024a ತಥಾ ವಿರಾಟನಗರೇ ಕೀಚಕೇನ ಭೃಶಾರ್ದಿತಾಂ।
10011024c ಮಾಮಪ್ಯುದ್ಧೃತವಾನ್ಕೃಚ್ಚ್ರಾತ್ಪೌಲೋಮೀಂ ಮಘವಾನಿವ।।
ಹಾಗೆಯೇ ವಿರಾಟನಗರದಲ್ಲಿ ಕೀಚಕನಿಂದ ಬಹಳ ಪೀಡೆಗೊಳಗಾಗಿದ್ದ ನನ್ನನ್ನು ಮಘವಾನನು ಪೌಲೋಮಿಯನ್ನು ಹೇಗೋ ಹಾಗೆ ಆ ಕಷ್ಟದಿಂದ ಪಾರುಮಾಡಿದ್ದೆ!
10011025a ಯಥೈತಾನ್ಯಕೃಥಾಃ ಪಾರ್ಥ ಮಹಾಕರ್ಮಾಣಿ ವೈ ಪುರಾ।
10011025c ತಥಾ ದ್ರೌಣಿಮಮಿತ್ರಘ್ನ ವಿನಿಹತ್ಯ ಸುಖೀ ಭವ।।
ಪಾರ್ಥ! ಅಮಿತ್ರಘ್ನ! ಹಿಂದೆ ಇನ್ನೂ ಅನ್ಯ ಮಹಾಕರ್ಮಗಳನ್ನು ಮಾಡಿದ್ದಂತೆ ನೀನು ದ್ರೌಣಿಯನ್ನು ಸಂಹರಿಸಿ ಸುಖಿಯಾಗಿರು!”
10011026a ತಸ್ಯಾ ಬಹುವಿಧಂ ದುಃಖಾನ್ನಿಶಮ್ಯ ಪರಿದೇವಿತಂ।
10011026c ನಾಮರ್ಷಯತ ಕೌಂತೇಯೋ ಭೀಮಸೇನೋ ಮಹಾಬಲಃ।।
ಹಾಗೆ ಬಹುವಿಧವಾಗಿ ದುಃಖದಿಂದ ಪರಿವೇದಿತಳಾಗಿದ್ದ ಅವಳನ್ನು ನೋಡಿ ಮಹಾಬಲ ಕೌಂತೇಯ ಭೀಮಸೇನನು ಸಹಿಸಿಕೊಳ್ಳಲಾರದಾದನು.
10011027a ಸ ಕಾಂಚನವಿಚಿತ್ರಾಂಗಮಾರುರೋಹ ಮಹಾರಥಂ।
10011027c ಆದಾಯ ರುಚಿರಂ ಚಿತ್ರಂ ಸಮಾರ್ಗಣಗುಣಂ ಧನುಃ।।
ಅವನು ಸುಂದರ ಚಿತ್ರಿತ ಮಾರ್ಗಣಗುಣವುಳ್ಳ ಧನುವನ್ನೆತ್ತಿಕೊಂಡು ಕಾಂಚನದ ವಿಚಿತ್ರಭಾಗಗಳನ್ನುಳ್ಳ ಮಹಾರಥವನ್ನು ಏರಿದನು.
10011028a ನಕುಲಂ ಸಾರಥಿಂ ಕೃತ್ವಾ ದ್ರೋಣಪುತ್ರವಧೇ ವೃತಃ।
10011028c ವಿಸ್ಫಾರ್ಯ ಸಶರಂ ಚಾಪಂ ತೂರ್ಣಮಶ್ವಾನಚೋದಯತ್।।
ನಕುಲನನ್ನು ಸಾರಥಿಯನ್ನಾಗಿ ಮಾಡಿಕೊಂಡು ದ್ರೋಣಪುತ್ರನ ವಧೆಯನ್ನು ನಿಶ್ಚಯಿಸಿ ಶರದೊಂದಿಗೆ ಚಾಪವನ್ನು ಟೇಂಕರಿಸಿ ಕೂಡಲೇ ಅಶ್ವಗಳನ್ನು ಓಡಿಸಿದನು.
10011029a ತೇ ಹಯಾಃ ಪುರುಷವ್ಯಾಘ್ರ ಚೋದಿತಾ ವಾತರಂಹಸಃ।
10011029c ವೇಗೇನ ತ್ವರಿತಾ ಜಗ್ಮುರ್ಹರಯಃ ಶೀಘ್ರಗಾಮಿನಃ।।
ಪುರುಷವ್ಯಾಘ್ರ! ಪ್ರಚೋದಿತಗೊಂಡ ಆ ವಾಯುವೇಗದ ಶೀಘ್ರಗಾಮಿ ಕುದುರೆಗಳು ತ್ವರಿತ ವೇಗದಿಂದ ಮುಂದುವರೆದವು.
10011030a ಶಿಬಿರಾತ್ಸ್ವಾದ್ಗೃಹೀತ್ವಾ ಸ ರಥಸ್ಯ ಪದಮಚ್ಯುತಃ।
10011030c ದ್ರೋಣಪುತ್ರರಥಸ್ಯಾಶು ಯಯೌ ಮಾರ್ಗೇಣ ವೀರ್ಯವಾನ್।।
ಪ್ರತಿಜ್ಞೆಯಿಂದ ಚ್ಯುತನಾಗದ ವೀರ್ಯವಾನ್ ಭೀಮನು ಶಿಬಿರದಿಂದ ಹೊರಟು ದ್ರೋಣಪುತ್ರನ ರಥದ ಮಾರ್ಗದಲ್ಲಿಯೇ ಪ್ರಯಾಣಮಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ದ್ರೌಣಿವಧಾರ್ಥಂ ಭೀಮಸೇನಗಮನೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ದ್ರೌಣಿವಧಾರ್ಥಂ ಭೀಮಸೇನಗಮನ ಎನ್ನುವ ಹನ್ನೊಂದನೇ ಅಧ್ಯಾಯವು.