009 ದುರ್ಯೋಧನಪ್ರಾಣತ್ಯಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಸೌಪ್ತಿಕ ಪರ್ವ

ಅಧ್ಯಾಯ 9

ಸಾರ

ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿ ಕೃಪ-ಅಶ್ವತ್ಥಾಮ-ಕೃತವರ್ಮರು ದುರ್ಯೋಧನನು ಬಿದ್ದಿದ್ದ ಸ್ಥಳಕ್ಕೆ ಬಂದುದು (1-9). ದುರ್ಯೊಧನನನ್ನು ನೋಡಿ ಕೃಪನ ಪರಿವೇದನೆ (10-17). ದುರ್ಯೋಧನನನ್ನು ನೋಡಿ ಅಶ್ವತ್ಥಾಮನ ಪರಿವೇದನೆ (18-51). ದುರ್ಯೋಧನನ ಪ್ರಾಣತ್ಯಾಗ (52-59).

10009001 ಸಂಜಯ ಉವಾಚ।
10009001a ತೇ ಹತ್ವಾ ಸರ್ವಪಾಂಚಾಲಾನ್ದ್ರೌಪದೇಯಾಂಶ್ಚ ಸರ್ವಶಃ।
10009001c ಅಗಚ್ಚನ್ಸಹಿತಾಸ್ತತ್ರ ಯತ್ರ ದುರ್ಯೋಧನೋ ಹತಃ।।

ಸಂಜಯನು ಹೇಳಿದನು: “ಅವರು ಸರ್ವ ಪಾಂಚಾಲರನ್ನೂ ದ್ರೌಪದೇಯರನ್ನೂ ಸಂಹರಿಸಿ ಒಟ್ಟಾಗಿ ದುರ್ಯೋಧನನು ಎಲ್ಲಿ ಹತನಾಗಿದ್ದನೋ ಅಲ್ಲಿಗೆ ಹೋದರು.

10009002a ಗತ್ವಾ ಚೈನಮಪಶ್ಯಂಸ್ತೇ ಕಿಂ ಚಿತ್ಪ್ರಾಣಂ ನರಾಧಿಪಂ।
10009002c ತತೋ ರಥೇಭ್ಯಃ ಪ್ರಸ್ಕಂದ್ಯ ಪರಿವವ್ರುಸ್ತವಾತ್ಮಜಂ।।

ಅಲ್ಲಿಗೆ ಹೋಗಿ ನರಾಧಿಪನಿಗೆ ಸ್ವಲ್ಪವೇ ಪ್ರಾಣವು ಉಳಿದಿದೆಯೆನ್ನುವುದನ್ನು ನೋಡಿ ರಥದಿಂದ ಇಳಿದು ನಿನ್ನ ಮಗನನ್ನು ಸುತ್ತುವರೆದು ಕುಳಿತರು.

10009003a ತಂ ಭಗ್ನಸಕ್ಥಂ ರಾಜೇಂದ್ರ ಕೃಚ್ಚ್ರಪ್ರಾಣಮಚೇತಸಂ।
10009003c ವಮಂತಂ ರುಧಿರಂ ವಕ್ತ್ರಾದಪಶ್ಯನ್ವಸುಧಾತಲೇ।।

ರಾಜೇಂದ್ರ! ತೊಡೆಯೊಡೆದು ಕಷ್ಟದಿಂದ ಪ್ರಾಣವನ್ನು ಹಿಡಿದುಕೊಂಡು ನಿಶ್ಚೇತನನಾಗಿ ರಕ್ತವನ್ನು ಕಾರುತ್ತಾ, ನೆಲದಮೇಲಿದ್ದ ದುರ್ಯೋಧನನನ್ನು ಅವರು ನೋಡಿದರು.

10009004a ವೃತಂ ಸಮಂತಾದ್ಬಹುಭಿಃ ಶ್ವಾಪದೈರ್ಘೋರದರ್ಶನೈಃ।
10009004c ಶಾಲಾವೃಕಗಣೈಶ್ಚೈವ ಭಕ್ಷಯಿಷ್ಯದ್ಭಿರಂತಿಕಾತ್।।

ಅನೇಕ ಘೋರ ತೋಳ-ನರಿಗಳು ಅವನನ್ನು ಕಚ್ಚಿ ತಿನ್ನಲು ಸುತ್ತುವರೆದು ಹತ್ತಿರ-ಹತ್ತಿರಕ್ಕೆ ಹೋಗುತ್ತಿದ್ದವು.

10009005a ನಿವಾರಯಂತಂ ಕೃಚ್ಚ್ರಾತ್ತಾನ್ ಶ್ವಾಪದಾನ್ಸಂಚಿಖಾದಿಷೂನ್।
10009005c ವಿವೇಷ್ಟಮಾನಂ ಮಹ್ಯಾಂ ಚ ಸುಭೃಶಂ ಗಾಢವೇದನಂ।।

ಮಾಂಸವನ್ನು ತಿನ್ನಲು ಮುಂದೆ ಬರುತ್ತಿರುವ ಆ ಶ್ವಾಪದಗಳನ್ನು ಬಹಳ ಕಷ್ಟದಿಂದ ತಡೆಯುತ್ತಾ ಅವನು ಗಾಢವೇದನೆಯಿಂದ ಮತ್ತು ಮಹಾ ನೋವಿನಿಂದ ಹೊರಳಾಡುತ್ತಿದ್ದನು.

10009006a ತಂ ಶಯಾನಂ ಮಹಾತ್ಮಾನಂ ಭೂಮೌ ಸ್ವರುಧಿರೋಕ್ಷಿತಂ।
10009006c ಹತಶಿಷ್ಟಾಸ್ತ್ರಯೋ ವೀರಾಃ ಶೋಕಾರ್ತಾಃ ಪರ್ಯವಾರಯನ್।।

ತನ್ನದೇ ರಕ್ತದಲ್ಲಿ ತೋಯ್ದು ನೆಲದಮೇಲೆ ಮಲಗಿದ್ದ ಆ ಮಹಾತ್ಮನನ್ನು ಅಳಿದುಳಿದಿದ್ದ ಆ ಮೂವರು ವೀರರೂ ಶೋಕಾರ್ತರಾಗಿ ಸುತ್ತುವರೆದರು.

10009006e ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।।
10009007a ತೈಸ್ತ್ರಿಭಿಃ ಶೋಣಿತಾದಿಗ್ಧೈರ್ನಿಃಶ್ವಸದ್ಭಿರ್ಮಹಾರಥೈಃ।
10009007c ಶುಶುಭೇ ಸಂವೃತೋ ರಾಜಾ ವೇದೀ ತ್ರಿಭಿರಿವಾಗ್ನಿಭಿಃ।।

ರಕ್ತದಿಂದ ತೋಯ್ದು ನಿಟ್ಟುಸಿರುಬಿಡುತ್ತಿದ್ದ ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ ಈ ಮೂವರು ಮಹಾರಥರಿಂದ ಸುತ್ತುವರೆದಿದ್ದ ರಾಜನು ಮೂರು ಅಗ್ನಿಗಳಿಂದ ಆವೃತವಾದ ಯಜ್ಞವೇದಿಯಂತೆ ತೋರಿದನು.

10009008a ತೇ ತಂ ಶಯಾನಂ ಸಂಪ್ರೇಕ್ಷ್ಯ ರಾಜಾನಮತಥೋಚಿತಂ।
10009008c ಅವಿಷಹ್ಯೇನ ದುಃಖೇನ ತತಸ್ತೇ ರುರುದುಸ್ತ್ರಯಃ।।

ರಾಜನಿಗೆ ಉಚಿತವಲ್ಲದಂತೆ ಮಲಗಿರುವ ಅವನನ್ನು ನೋಡಿ ಸಹಿಸಿಕೊಳ್ಳಲಾರದ ದುಃಖದಿಂದ ಆ ಮೂವರೂ ರೋದಿಸಿದರು.

10009009a ತತಸ್ತೇ ರುಧಿರಂ ಹಸ್ತೈರ್ಮುಖಾನ್ನಿರ್ಮೃಜ್ಯ ತಸ್ಯ ಹ।
10009009c ರಣೇ ರಾಜ್ಞಃ ಶಯಾನಸ್ಯ ಕೃಪಣಂ ಪರ್ಯದೇವಯನ್।।

ರಣದಲ್ಲಿ ಮಲಗಿದ್ದ ರಾಜನ ಮುಖದಿಂದ ರಕ್ತವನ್ನು ತನ್ನ ಎರಡೂ ಕೈಗಳಿಂದ ಒರೆಸುತ್ತಾ ಕೃಪನು ಪರಿವೇದಿಸಿದನು.

10009010 ಕೃಪ ಉವಾಚ।
10009010a ನ ದೈವಸ್ಯಾತಿಭಾರೋಽಸ್ತಿ ಯದಯಂ ರುಧಿರೋಕ್ಷಿತಃ।
10009010c ಏಕಾದಶಚಮೂಭರ್ತಾ ಶೇತೇ ದುರ್ಯೋಧನೋ ಹತಃ।।

ಕೃಪನು ಹೇಳಿದನು: “ಹನ್ನೊಂದು ಅಕ್ಷೌಹಿಣೀ ಸೇನೆಯ ಅಧಿಪತಿಯಾಗಿದ್ದ ಈ ದುರ್ಯೋಧನನು ಹತನಾಗಿ ರಕ್ತದಿಂದ ತೋಯ್ದು ಮಲಗಿದ್ದಾನೆ ಎಂದರೆ ದೈವಕ್ಕೆ ಯಾವುದೂ ಕಷ್ಟಸಾಧ್ಯವಲ್ಲ ಅಲ್ಲವೇ?

10009011a ಪಶ್ಯ ಚಾಮೀಕರಾಭಸ್ಯ ಚಾಮೀಕರವಿಭೂಷಿತಾಂ।
10009011c ಗದಾಂ ಗದಾಪ್ರಿಯಸ್ಯೇಮಾಂ ಸಮೀಪೇ ಪತಿತಾಂ ಭುವಿ।।

ಸುವರ್ಣದ ಕಾಂತಿಯುಳ್ಳ, ಸುವರ್ಣದಿಂದ ವಿಭೂಷಿತವಾಗಿರುವ ಗದೆಯು ಗದಾಪ್ರಿಯನಾದ ಇವನ ಸಮೀಪದಲ್ಲಿ ನೆಲದಮೇಲೆ ಬಿದ್ದಿರುವುದನ್ನು ನೋಡು!

10009012a ಇಯಮೇನಂ ಗದಾ ಶೂರಂ ನ ಜಹಾತಿ ರಣೇ ರಣೇ।
10009012c ಸ್ವರ್ಗಾಯಾಪಿ ವ್ರಜಂತಂ ಹಿ ನ ಜಹಾತಿ ಯಶಸ್ವಿನಂ।।

ರಣರಣದಲ್ಲಿಯೂ ಈ ಗದೆಯು ಈ ಶೂರನನ್ನು ಬಿಟ್ಟಿರಲಿಲ್ಲ. ಈಗ ಸ್ವರ್ಗಕ್ಕೆ ಹೋಗುತ್ತಿರುವಾಗಲೂ ಈ ಯಶಸ್ವಿನಿಯನ್ನು ಬಿಟ್ಟಿಲ್ಲ!

10009013a ಪಶ್ಯೇಮಾಂ ಸಹ ವೀರೇಣ ಜಾಂಬೂನದವಿಭೂಷಿತಾಂ।
10009013c ಶಯಾನಾಂ ಶಯನೇ ಧರ್ಮೇ ಭಾರ್ಯಾಂ ಪ್ರೀತಿಮತೀಮಿವ।।

ಶಯನದಲ್ಲಿ ಮಲಗಿರುವ ಧರ್ಮಪತ್ನಿಯಂತೆ ಅತೀವ ಪ್ರೀತಿಯಿಂದ ಈ ವೀರನ ಪಕ್ಕದಲ್ಲಿಯೇ ಇರುವ ಈ ಸುವರ್ಣವಿಭೂಷಿತ ಗದೆಯನ್ನು ನೋಡು!

10009014a ಯೋ ವೈ ಮೂರ್ಧಾವಸಿಕ್ತಾನಾಮಗ್ರೇ ಯಾತಃ ಪರಂತಪಃ।
10009014c ಸ ಹತೋ ಗ್ರಸತೇ ಪಾಂಸೂನ್ಪಶ್ಯ ಕಾಲಸ್ಯ ಪರ್ಯಯಂ।।

ಮೂರ್ಧಾವಸಿಕ್ತರ ಮುಂಭಾಗದಲ್ಲಿ ಹೋಗುತ್ತಿದ್ದ ಈ ಪರಂತಪನು ಹತನಾಗಿ ಮಣ್ಣನ್ನು ಮುಕ್ಕುತ್ತಿದ್ದಾನೆ. ಕಾಲದ ಈ ವೈಪರೀತ್ಯವನ್ನಾದರೂ ನೋಡು!

10009015a ಯೇನಾಜೌ ನಿಹತಾ ಭೂಮಾವಶೇರತ ಪುರಾ ದ್ವಿಷಃ।
10009015c ಸ ಭೂಮೌ ನಿಹತಃ ಶೇತೇ ಕುರುರಾಜಃ ಪರೈರಯಂ।।

ಹಿಂದೆ ಯಾರಿಂದ ಶತ್ರುಗಳು ಹತರಾಗಿ ನೆಲಕ್ಕುರುಳುತ್ತಿದ್ದರೋ ಆ ಕುರುರಾಜನೇ ಇಂದು ಶತ್ರುಗಳಿಂದ ಹತನಾಗಿ ನೆಲದಮೇಲೆ ಮಲಗಿದ್ದಾನೆ!

10009016a ಭಯಾನ್ನಮಂತಿ ರಾಜಾನೋ ಯಸ್ಯ ಸ್ಮ ಶತಸಂಘಶಃ।
10009016c ಸ ವೀರಶಯನೇ ಶೇತೇ ಕ್ರವ್ಯಾದ್ಭಿಃ ಪರಿವಾರಿತಃ।।

ಯಾವ ರಾಜನನ್ನು ನೂರಾರು ಗುಂಪುಗಳಲ್ಲಿ ಜನರು ಭಯದಿಂದ ನಮಸ್ಕರಿಸುತ್ತಿದ್ದರೋ ಅವನು ಕ್ರವ್ಯಾದಿಗಳಿಂದ ಸುತ್ತುವರೆಯಲ್ಪಟ್ಟು ವೀರಶಯನದಲ್ಲಿ ಮಲಗಿದ್ದಾನೆ!

10009017a ಉಪಾಸತ ನೃಪಾಃ ಪೂರ್ವಮರ್ಥಹೇತೋರ್ಯಮೀಶ್ವರಂ।
10009017c ಧಿಕ್ಸದ್ಯೋ ನಿಹತಃ ಶೇತೇ ಪಶ್ಯ ಕಾಲಸ್ಯ ಪರ್ಯಯಂ।।

ಧಿಕ್ಕಾರ! ಯಾವ ಈಶ್ವರನನ್ನು ಹಿಂದೆ ನೃಪರು ಸಂಪತ್ತಿಗಾಗಿ ಉಪಾಸಿಸುತ್ತಿದ್ದರೋ ಅವನು ಸದ್ಯದಲ್ಲಿ ಹತನಾಗಿ ಮಲಗಿದ್ದಾನೆ! ಕಾಲದ ಈ ವಿಪರ್ಯಾಸವನ್ನಾದರೂ ನೋಡು!””

10009018 ಸಂಜಯ ಉವಾಚ।
10009018a ತಂ ಶಯಾನಂ ನೃಪಶ್ರೇಷ್ಠಂ ತತೋ ಭರತಸತ್ತಮ।
10009018c ಅಶ್ವತ್ಥಾಮಾ ಸಮಾಲೋಕ್ಯ ಕರುಣಂ ಪರ್ಯದೇವಯತ್।।

ಸಂಜಯನು ಹೇಳಿದನು: “ಭರತಸತ್ತಮ! ಆಗ ಮಲಗಿದ್ದ ಆ ನೃಪಶ್ರೇಷ್ಠನನ್ನು ನೋಡಿ ಅಶ್ವತ್ಥಾಮನು ಕರುಣೆಯಿಂದ ಪರಿವೇದಿಸಿದನು.

10009019a ಆಹುಸ್ತ್ವಾಂ ರಾಜಶಾರ್ದೂಲ ಮುಖ್ಯಂ ಸರ್ವಧನುಷ್ಮತಾಂ।
10009019c ಧನಾಧ್ಯಕ್ಷೋಪಮಂ ಯುದ್ಧೇ ಶಿಷ್ಯಂ ಸಂಕರ್ಷಣಸ್ಯ ಹ।।

“ರಾಜಶಾರ್ದೂಲ! ನೀನು ಸರ್ವಧನುಷ್ಮತರಲ್ಲಿ ಮುಖ್ಯನೆಂದೂ, ಸಂಕರ್ಷಣನ ಶಿಷ್ಯನಾದ ನಿನ್ನನ್ನು ಯುದ್ಧದಲ್ಲಿ ಧನಾಧ್ಯಕ್ಷನ ಸಮಾನನೆಂದೂ ಹೇಳುತ್ತಾರೆ!

10009020a ಕಥಂ ವಿವರಮದ್ರಾಕ್ಷೀದ್ಭೀಮಸೇನಸ್ತವಾನಘ।
10009020c ಬಲಿನಃ ಕೃತಿನೋ ನಿತ್ಯಂ ಸ ಚ ಪಾಪಾತ್ಮವಾನ್ನೃಪ।।

ಅನಘ! ನೃಪ! ಹೀಗಿರುವಾಗ ಬಲಶಾಲಿಗಳಲ್ಲಿ ನಿತ್ಯವೂ ಮೋಸಗಾರನಾದ ಪಾಪಾತ್ಮ ಭೀಮಸೇನನು ನಿನ್ನಲ್ಲಿರುವ ಛಿದ್ರವನ್ನು ಕಂಡುಕೊಂಡನು!

10009021a ಕಾಲೋ ನೂನಂ ಮಹಾರಾಜ ಲೋಕೇಽಸ್ಮಿನ್ಬಲವತ್ತರಃ।
10009021c ಪಶ್ಯಾಮೋ ನಿಹತಂ ತ್ವಾಂ ಚೇದ್ಭೀಮಸೇನೇನ ಸಂಯುಗೇ।।

ಮಹಾರಾಜ! ಯುದ್ಧದಲ್ಲಿ ನೀನು ಭೀಮಸೇನನಿಂದ ಹತನಾಗಿರುವುದನ್ನು ನೋಡಿ ಈ ಲೋಕದಲ್ಲಿ ಕಾಲವೇ ಬಲವತ್ತರವೆಂದೆನಿಸುವುದಿಲ್ಲವೇ?

10009022a ಕಥಂ ತ್ವಾಂ ಸರ್ವಧರ್ಮಜ್ಞಂ ಕ್ಷುದ್ರಃ ಪಾಪೋ ವೃಕೋದರಃ।
10009022c ನಿಕೃತ್ಯಾ ಹತವಾನ್ಮಂದೋ ನೂನಂ ಕಾಲೋ ದುರತ್ಯಯಃ।।

ಸರ್ವಧರ್ಮಜ್ಞನಾದ ನಿನ್ನನ್ನು ಕ್ಷುದ್ರ ಪಾಪಿ ಮಂದ ವೃಕೋದರನು ಮೋಸದಿಂದ ಕೊಂದನೆಂದರೆ ಕಾಲವನ್ನು ಅತಿಕ್ರಮಿಸುವುದು ಅಸಾಧ್ಯವೆಂದಲ್ಲವೇ?

10009023a ಧರ್ಮಯುದ್ಧೇ ಹ್ಯಧರ್ಮೇಣ ಸಮಾಹೂಯೌಜಸಾ ಮೃಧೇ।
10009023c ಗದಯಾ ಭೀಮಸೇನೇನ ನಿರ್ಭಿನ್ನೇ ಸಕ್ಥಿನೀ ತವ।।

ಧರ್ಮಯುದ್ಧಕ್ಕೆ ನಿನ್ನನ್ನು ಕರೆದು ರಣದಲ್ಲಿ ಭೀಮಸೇನನು ಅಧರ್ಮದಿಂದ ನಿನ್ನ ತೊಡೆಯನ್ನು ಒಡೆದನು!

10009024a ಅಧರ್ಮೇಣ ಹತಸ್ಯಾಜೌ ಮೃದ್ಯಮಾನಂ ಪದಾ ಶಿರಃ।
10009024c ಯದುಪೇಕ್ಷಿತವಾನ್ ಕ್ಷುದ್ರೋ ಧಿಕ್ತಮಸ್ತು ಯುಧಿಷ್ಠಿರಂ।।

ಅಧರ್ಮದಿಂದ ನಿನ್ನನ್ನು ಹೊಡೆದು ಕಾಲಿನಿಂದ ನಿನ್ನ ಶಿರವನ್ನು ಒದೆದುದಕ್ಕೂ ಉಪೇಕ್ಷೆಮಾಡದ ಕ್ಷುದ್ರ ಯುಧಿಷ್ಠಿರನಿಗೂ ಧಿಕ್ಕಾರ!

10009025a ಯುದ್ಧೇಷ್ವಪವದಿಷ್ಯಂತಿ ಯೋಧಾ ನೂನಂ ವೃಕೋದರಂ।
10009025c ಯಾವತ್ ಸ್ಥಾಸ್ಯಂತಿ ಭೂತಾನಿ ನಿಕೃತ್ಯಾ ಹ್ಯಸಿ ಪಾತಿತಃ।।

ಎಂದಿನವರೆಗೆ ಪ್ರಾಣಿಗಳಿರುವವೋ ಅಲ್ಲಿಯವರೆಗೆ ಯುದ್ಧಗಳಲ್ಲಿ ಯೋಧರು ಈ ಪಾತಿತನು ಮೋಸಗಾರನು ಎಂದು ವೃಕೋದರನಿಗೆ ಹೇಳುತ್ತಾರೆ!

10009026a ನನು ರಾಮೋಽಬ್ರವೀದ್ರಾಜಂಸ್ತ್ವಾಂ ಸದಾ ಯದುನಂದನಃ।
10009026c ದುರ್ಯೋಧನಸಮೋ ನಾಸ್ತಿ ಗದಯಾ ಇತಿ ವೀರ್ಯವಾನ್।।

ರಾಜನ್! ಯದುನಂದನ ರಾಮನು ಸದಾ “ವೀರ್ಯವಾನ್ ದುರ್ಯೋಧನನನ ಸಮನಾದವನು ಗದಾಯುದ್ಧದಲ್ಲಿ ಇಲ್ಲ!” ಎಂದು ಹೇಳುತ್ತಿರಲಿಲ್ಲವೇ?

10009027a ಶ್ಲಾಘತೇ ತ್ವಾಂ ಹಿ ವಾರ್ಷ್ಣೇಯೋ ರಾಜನ್ಸಂಸತ್ಸು ಭಾರತ।
10009027c ಸುಶಿಷ್ಯೋ ಮಮ ಕೌರವ್ಯೋ ಗದಾಯುದ್ಧ ಇತಿ ಪ್ರಭೋ।।

ಭಾರತ! ಪ್ರಭೋ! ರಾಜನ್! ಸಂಸದಿಗಳಲ್ಲಿ ವಾರ್ಷ್ಣೇಯನು “ಗದಾಯುದ್ಧದಲ್ಲಿ ಕೌರವ್ಯನು ನನ್ನ ಪ್ರಧಾನ ಶಿಷ್ಯ!” ಎಂದು ಹೇಳುತ್ತಿರಲಿಲ್ಲವೇ?

10009028a ಯಾಂ ಗತಿಂ ಕ್ಷತ್ರಿಯಸ್ಯಾಹುಃ ಪ್ರಶಸ್ತಾಂ ಪರಮರ್ಷಯಃ।
10009028c ಹತಸ್ಯಾಭಿಮುಖಸ್ಯಾಜೌ ಪ್ರಾಪ್ತಸ್ತ್ವಮಸಿ ತಾಂ ಗತಿಂ।।

ಶತ್ರುವನ್ನು ಎದುರಿಸಿ ಹತನಾದ ಕ್ಷತ್ರಿಯನಿಗೆ ಯಾವ ಪ್ರಶಸ್ತ ಗತಿಯು ದೊರೆಯುತ್ತದೆಯೆಂದು ಪರಮ‌ಋಷಿಗಳು ಹೇಳುತ್ತಾರೋ ಆ ಉತ್ತಮ ಗತಿಯನ್ನು ನೀನೂ ಪಡೆದಿರುವೆ.

10009029a ದುರ್ಯೋಧನ ನ ಶೋಚಾಮಿ ತ್ವಾಮಹಂ ಪುರುಷರ್ಷಭ।
10009029c ಹತಪುತ್ರಾಂ ತು ಶೋಚಾಮಿ ಗಾಂಧಾರೀಂ ಪಿತರಂ ಚ ತೇ।
10009029e ಭಿಕ್ಷುಕೌ ವಿಚರಿಷ್ಯೇತೇ ಶೋಚಂತೌ ಪೃಥಿವೀಮಿಮಾಂ।।

ದುರ್ಯೋಧನ! ಪುರುಷರ್ಷಭ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ಪುತ್ರರನ್ನು ಕಳೆದುಕೊಂಡ ಗಾಂಧಾರಿ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ! ಶೋಕಿಸುತ್ತಾ ಅವರಿಬ್ಬರೂ ಈ ಭೂಮಿಯಲ್ಲಿ ಭಿಕ್ಷುಕರಂತೆ ಸುತ್ತುವರಲ್ಲ ಎಂದು ಶೋಕಿಸುತ್ತಿದ್ದೇನೆ!

10009030a ಧಿಗಸ್ತು ಕೃಷ್ಣಂ ವಾರ್ಷ್ಣೇಯಮರ್ಜುನಂ ಚಾಪಿ ದುರ್ಮತಿಂ।
10009030c ಧರ್ಮಜ್ಞಮಾನಿನೌ ಯೌ ತ್ವಾಂ ವಧ್ಯಮಾನಮುಪೇಕ್ಷತಾಂ।।

ವಾರ್ಷ್ಣೇಯ ಕೃಷ್ಣನಿಗೆ ಮತ್ತು ದುರ್ಮತಿ ಅರ್ಜುನನಿಗೆ ಧಿಕ್ಕಾರ! ಧರ್ಮಜ್ಞರೆಂದು ಗೌರವಿಸಲ್ಪಡುವ ಅವರಿಬ್ಬರೂ ನಿನ್ನ ವಧೆಯನ್ನು ಉಪೇಕ್ಷಿಸಲಿಲ್ಲ.

10009031a ಪಾಂಡವಾಶ್ಚಾಪಿ ತೇ ಸರ್ವೇ ಕಿಂ ವಕ್ಷ್ಯಂತಿ ನರಾಧಿಪಾನ್।
10009031c ಕಥಂ ದುರ್ಯೋಧನೋಽಸ್ಮಾಭಿರ್ಹತ ಇತ್ಯನಪತ್ರಪಾಃ।।

ನರಾಧಿಪ ಪಾಂಡವರೆಲ್ಲರೂ ಕೂಡ ಏನು ಹೇಳಿಕೊಳ್ಳುತ್ತಾರೆ? ನಮ್ಮಿಂದ ದುರ್ಯೋಧನನು ಹೇಗೆ ಹತನಾದನು ಎಂದು ಹೇಗೆತಾನೇ ಹೇಳಿಕೊಳ್ಳುತ್ತಾರೆ?

10009032a ಧನ್ಯಸ್ತ್ವಮಸಿ ಗಾಂಧಾರೇ ಯಸ್ತ್ವಮಾಯೋಧನೇ ಹತಃ।
10009032c ಪ್ರಯಾತೋಽಭಿಮುಖಃ ಶತ್ರೂನ್ಧರ್ಮೇಣ ಪುರುಷರ್ಷಭ।।

ಗಾಂಧಾರೇ! ಪುರುಷರ್ಷಭ! ಶತ್ರುಗಳನ್ನು ಧರ್ಮದಿಂದಲೇ ಎದುರಿಸಿ ಹೋರಾಡಿ ಹತನಾದ ಪ್ರಾಯಶಃ ನೀನೇ ಧನ್ಯ!

10009033a ಹತಪುತ್ರಾ ಹಿ ಗಾಂಧಾರೀ ನಿಹತಜ್ಞಾತಿಬಾಂಧವಾ।
10009033c ಪ್ರಜ್ಞಾಚಕ್ಷುಶ್ಚ ದುರ್ಧರ್ಷಃ ಕಾಂ ಗತಿಂ ಪ್ರತಿಪತ್ಸ್ಯತೇ।।

ಹತಪುತ್ರಳಾದ ಮತ್ತು ಬಂಧು-ಬಾಂಧವರನ್ನು ಕಳೆದುಕೊಂಡಿರುವ ಗಾಂಧಾರೀ ಮತ್ತು ದುರ್ಧರ್ಷ ಪ್ರಜ್ಞಾಚಕ್ಷುವು ಯಾವ ಗತಿಯನ್ನು ಹೊಂದುತ್ತಾರೆ?

10009034a ಧಿಗಸ್ತು ಕೃತವರ್ಮಾಣಂ ಮಾಂ ಕೃಪಂ ಚ ಮಹಾರಥಂ।
10009034c ಯೇ ವಯಂ ನ ಗತಾಃ ಸ್ವರ್ಗಂ ತ್ವಾಂ ಪುರಸ್ಕೃತ್ಯ ಪಾರ್ಥಿವಂ।।

ಪಾರ್ಥಿವನಾದ ನಿನ್ನನ್ನು ಹಿಂದೆಬಿಟ್ಟು ಸ್ವರ್ಗಕ್ಕೆ ಹೋಗಿರದ ಕೃತವರ್ಮ, ನಾನು ಮತ್ತು ಮಹಾರಥ ಕೃಪ – ಈ ನಮಗೆ ಧಿಕ್ಕಾರವಿರಲಿ!

10009035a ದಾತಾರಂ ಸರ್ವಕಾಮಾನಾಂ ರಕ್ಷಿತಾರಂ ಪ್ರಜಾಹಿತಂ।
10009035c ಯದ್ವಯಂ ನಾನುಗಚ್ಚಾಮಸ್ತ್ವಾಂ ಧಿಗಸ್ಮಾನ್ನರಾಧಮಾನ್।।

ಸರ್ವಕಾಮನೆಗಳನ್ನು ಒದಗಿಸಿಕೊಡುತ್ತಿದ್ದ, ಪ್ರಜಾಹಿತ ರಕ್ಷಕನನ್ನು ಅನುಸರಿಸದ ನರಾಧಮರಂತಿರುವ ಈ ನಮಗೆ ಧಿಕ್ಕಾರವಿರಲಿ!

10009036a ಕೃಪಸ್ಯ ತವ ವೀರ್ಯೇಣ ಮಮ ಚೈವ ಪಿತುಶ್ಚ ಮೇ।
10009036c ಸಭೃತ್ಯಾನಾಂ ನರವ್ಯಾಘ್ರ ರತ್ನವಂತಿ ಗೃಹಾಣಿ ಚ।।

ನರವ್ಯಾಘ್ರ! ನಿನ್ನ ವೀರ್ಯದಿಂದಲೇ ಕೃಪನಿಗೆ, ನನಗೆ ಮತ್ತು ನನ್ನ ತಂದೆಗೆ ಸೇವಕರೊಂದಿಗೆ ಸಂಪದ್ಭರಿತ ಭವನಗಳು ಲಭಿಸಿದ್ದವು.

10009037a ಭವತ್ಪ್ರಸಾದಾದಸ್ಮಾಭಿಃ ಸಮಿತ್ರೈಃ ಸಹಬಾಂಧವೈಃ।
10009037c ಅವಾಪ್ತಾಃ ಕ್ರತವೋ ಮುಖ್ಯಾ ಬಹವೋ ಭೂರಿದಕ್ಷಿಣಾಃ।।

ನಿನ್ನ ಪ್ರಸಾದದಿಂದಲೇ ನಾವುಗಳು ಮಿತ್ರರು ಮತ್ತು ಬಂಧುಗಳೊಡನೆ ಭೂರಿದಕ್ಷಿಣೆಗಳನ್ನಿತ್ತು ಅನೇಕ ಮುಖ್ಯ ಕ್ರತುಗಳನ್ನು ಮಾಡುವಂಥವರಾಗಿದ್ದೆವು.

10009038a ಕುತಶ್ಚಾಪೀದೃಶಂ ಸಾರ್ಥಮುಪಲಪ್ಸ್ಯಾಮಹೇ ವಯಂ।
10009038c ಯಾದೃಶೇನ ಪುರಸ್ಕೃತ್ಯ ತ್ವಂ ಗತಃ ಸರ್ವಪಾರ್ಥಿವಾನ್।।

ನಿನ್ನಿಂದ ಇಷ್ಟೊಂದು ಸಹಾಯ-ಸಂಪತ್ತುಗಳನ್ನು ಪಡೆದಿರುವ ನಾವು ನಿನ್ನ ಮೊದಲೇ ಹೊರಟುಹೋಗಿರುವ ಸರ್ವಪಾರ್ಥಿವರಂತೆ ಏಕೆ ಹೋಗುತ್ತಿಲ್ಲ?

10009039a ವಯಮೇವ ತ್ರಯೋ ರಾಜನ್ಗಚ್ಚಂತಂ ಪರಮಾಂ ಗತಿಂ।
10009039c ಯದ್ವೈ ತ್ವಾಂ ನಾನುಗಚ್ಚಾಮಸ್ತೇನ ತಪ್ಸ್ಯಾಮಹೇ ವಯಂ।।

ರಾಜನ್! ಪರಮಗತಿಯನ್ನನುಸರಿಸಿ ಹೋಗುತ್ತಿರುವ ನಿನ್ನನ್ನು ನಾವು ಮೂವರು ಮಾತ್ರ ಅನುಸರಿಸಿ ಬರುತ್ತಿಲ್ಲ ಎಂದು ನಾವು ಪರಿತಪಿಸುತ್ತಿದ್ದೇವೆ.

10009040a ತ್ವತ್ಸ್ವರ್ಗಹೀನಾ ಹೀನಾರ್ಥಾಃ ಸ್ಮರಂತಃ ಸುಕೃತಸ್ಯ ತೇ।
10009040c ಕಿಂ ನಾಮ ತದ್ಭವೇತ್ಕರ್ಮ ಯೇನ ತ್ವಾನುವ್ರಜೇಮ ವೈ।।

ನಿನ್ನನ್ನು ಕಳೆದುಕೊಂಡ ನಾವು ನಿನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತಾ ಸ್ವರ್ಗಹೀನರಾಗಿ, ಸಂಪತ್ತುಗಳನ್ನು ಕಳೆದುಕೊಂಡು ಸುತ್ತುತ್ತಿರುತ್ತೇವೆ. ನಿನ್ನನ್ನು ಅನುಸರಿಸಿ ಬರದೇ ಇರುವ ನಮ್ಮ ಈ ಕೃತ್ಯಕ್ಕೆ ಯಾವ ಹೆಸರಿದೆ?

10009041a ದುಃಖಂ ನೂನಂ ಕುರುಶ್ರೇಷ್ಠ ಚರಿಷ್ಯಾಮೋ ಮಹೀಮಿಮಾಂ।
10009041c ಹೀನಾನಾಂ ನಸ್ತ್ವಯಾ ರಾಜನ್ಕುತಃ ಶಾಂತಿಃ ಕುತಃ ಸುಖಂ।।

ಕುರುಶ್ರೇಷ್ಠ! ರಾಜನ್! ನೀನಿಲ್ಲದೇ ದುಃಖದಿಂದ ಈ ಭೂಮಿಯನ್ನು ಸುತ್ತುವ ನಮಗೆ ಎಲ್ಲಿಯ ಶಾಂತಿ ಮತ್ತು ಎಲ್ಲಿಯ ಸುಖ?

10009042a ಗತ್ವೈತಾಂಸ್ತು ಮಹಾರಾಜ ಸಮೇತ್ಯ ತ್ವಂ ಮಹಾರಥಾನ್।
10009042c ಯಥಾಶ್ರೇಷ್ಠಂ ಯಥಾಜ್ಯೇಷ್ಠಂ ಪೂಜಯೇರ್ ವಚನಾನ್ಮಮ।।

ಮಹಾರಾಜ! ನೀನಾದರೋ ಈ ಮೊದಲೇ ಹೋಗಿರುವ ಮಹಾರಥರನ್ನು ಸೇರಿ ಯಥಾಶ್ರೇಷ್ಠವಾಗಿ ಯಥಾಜ್ಯೇಷ್ಠವಾಗಿ ನನ್ನ ಮಾತಿನಿಂದ ಗೌರವಿಸು!

10009043a ಆಚಾರ್ಯಂ ಪೂಜಯಿತ್ವಾ ಚ ಕೇತುಂ ಸರ್ವಧನುಷ್ಮತಾಂ।
10009043c ಹತಂ ಮಯಾದ್ಯ ಶಂಸೇಥಾ ಧೃಷ್ಟದ್ಯುಮ್ನಂ ನರಾಧಿಪ।।

ನರಾಧಿಪ! ಸರ್ವಧನುಷ್ಮತರಿಗೆ ಕೇತುಪ್ರಾಯನಾದ ಆಚಾರ್ಯನನ್ನು ಸಂಪೂಜಿಸಿ ಇಂದು ನಾನು ಧೃಷ್ಟದ್ಯುಮ್ನನನ್ನು ಸಂಹರಿಸಿದೆ ಎನ್ನುವುದನ್ನು ಹೇಳು.

10009044a ಪರಿಷ್ವಜೇಥಾ ರಾಜಾನಂ ಬಾಹ್ಲಿಕಂ ಸುಮಹಾರಥಂ।
10009044c ಸೈಂಧವಂ ಸೋಮದತ್ತಂ ಚ ಭೂರಿಶ್ರವಸಮೇವ ಚ।।
10009045a ತಥಾ ಪೂರ್ವಗತಾನನ್ಯಾನ್ಸ್ವರ್ಗಂ ಪಾರ್ಥಿವಸತ್ತಮಾನ್।
10009045c ಅಸ್ಮದ್ವಾಕ್ಯಾತ್ಪರಿಷ್ವಜ್ಯ ಪೃಚ್ಚೇಥಾಸ್ತ್ವಮನಾಮಯಂ।।

ಈ ಮೊದಲೇ ಸ್ವರ್ಗಕ್ಕೆ ಹೊರಟುಹೋಗಿರುವ ಪಾರ್ಥಿವಸತ್ತಮರನ್ನು – ಸುಮಹಾರಥ ಬಾಹ್ಲಿಕ ರಾಜ, ಸೈಂಧವ, ಸೋಮದತ್ತ ಮತ್ತು ಭೂರಿಶ್ರವರನ್ನು ನನ್ನ ಈ ಮಾತಿನಿಂದ ಆಲಂಗಿಸಿ ಅವರ ಕುಶಲವನ್ನು ಪ್ರಶ್ನಿಸು.”

10009046a ಇತ್ಯೇವಮುಕ್ತ್ವಾ ರಾಜಾನಂ ಭಗ್ನಸಕ್ಥಮಚೇತಸಂ।
10009046c ಅಶ್ವತ್ಥಾಮಾ ಸಮುದ್ವೀಕ್ಷ್ಯ ಪುನರ್ವಚನಮಬ್ರವೀತ್।।

ಹೀಗೆ ಹೇಳಿ ಅಶ್ವತ್ಥಾಮನು ತೊಡೆಯೊಡೆದು ಅಚೇತಸನಾಗಿದ್ದ ರಾಜನನ್ನು ದಿಟ್ಟಿಸಿನೋಡುತ್ತಾ ಪುನಃ ಈ ಮಾತನ್ನಾಡಿದನು:

10009047a ದುರ್ಯೋಧನ ಜೀವಸಿ ಚೇದ್ವಾಚಂ ಶ್ರೋತ್ರಸುಖಾಂ ಶೃಣು।
10009047c ಸಪ್ತ ಪಾಂಡವತಃ ಶೇಷಾ ಧಾರ್ತರಾಷ್ಟ್ರಾಸ್ತ್ರಯೋ ವಯಂ।।

“ದುರ್ಯೋಧನ! ನೀನಿನ್ನೂ ಜೀವಿಸಿರುವೆ! ಕೇಳಲು ಇಂಪಾಗಿರುವ ಈ ಮಾತನ್ನು ಕೇಳು. ಈಗ ಪಾಂಡವರಲ್ಲಿ ಕೇವಲು ಏಳುಮಂದಿ ಮತ್ತು ಧಾರ್ತರಾಷ್ಟ್ರರಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ!

10009048a ತೇ ಚೈವ ಭ್ರಾತರಃ ಪಂಚ ವಾಸುದೇವೋಽಥ ಸಾತ್ಯಕಿಃ।
10009048c ಅಹಂ ಚ ಕೃತವರ್ಮಾ ಚ ಕೃಪಃ ಶಾರದ್ವತಸ್ತಥಾ।।

ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಹಾಗೆಯೇ ನಾನು, ಕೃತವರ್ಮ ಮತ್ತು ಶಾರದ್ವತ ಕೃಪ.

10009049a ದ್ರೌಪದೇಯಾ ಹತಾಃ ಸರ್ವೇ ಧೃಷ್ಟದ್ಯುಮ್ನಸ್ಯ ಚಾತ್ಮಜಾಃ।
10009049c ಪಾಂಚಾಲಾ ನಿಹತಾಃ ಸರ್ವೇ ಮತ್ಸ್ಯಶೇಷಂ ಚ ಭಾರತ।।

ಭಾರತ! ದ್ರೌಪದೇಯರೆಲ್ಲರೂ ಹತರಾಗಿದ್ದಾರೆ. ಧೃಷ್ಟದ್ಯುಮ್ನನೂ, ಅವನ ಮಕ್ಕಳೂ, ಪಾಂಚಾಲರೂ ಮತ್ತು ಅಳಿದುಳಿದಿದ್ದ ಮತ್ಸ್ಯರು ಎಲ್ಲರೂ ಹತರಾಗಿದ್ದಾರೆ.

10009050a ಕೃತೇ ಪ್ರತಿಕೃತಂ ಪಶ್ಯ ಹತಪುತ್ರಾ ಹಿ ಪಾಂಡವಾಃ।
10009050c ಸೌಪ್ತಿಕೇ ಶಿಬಿರಂ ತೇಷಾಂ ಹತಂ ಸನರವಾಹನಂ।।

ಪ್ರತೀಕಾರ ಮಾಡಿದುದನ್ನು ನೋಡು! ಪಾಂಡವರೂ ಹತಪುತ್ರರಾಗಿದ್ದಾರೆ. ಶಿಬಿರದಲ್ಲಿ ಮಲಗಿರುವ ಅವರೆಲ್ಲರೂ ಸೈನಿಕ-ವಾಹನಗಳೊಂದಿಗೆ ಹತರಾಗಿದ್ದಾರೆ.

10009051a ಮಯಾ ಚ ಪಾಪಕರ್ಮಾಸೌ ಧೃಷ್ಟದ್ಯುಮ್ನೋ ಮಹೀಪತೇ।
10009051c ಪ್ರವಿಶ್ಯ ಶಿಬಿರಂ ರಾತ್ರೌ ಪಶುಮಾರೇಣ ಮಾರಿತಃ।।

ಮಹೀಪತೇ! ರಾತ್ರಿ ಶಿಬಿರವನ್ನು ಪ್ರವೇಶಿಸಿ ನಾನು ಪಾಪಕರ್ಮಿ ಧೃಷ್ಟದ್ಯುಮ್ನನನ್ನು ಪಶುವಂತೆ ಗುದ್ದಿ ಕೊಂದೆನು.”

10009052a ದುರ್ಯೋಧನಸ್ತು ತಾಂ ವಾಚಂ ನಿಶಮ್ಯ ಮನಸಃ ಪ್ರಿಯಾಂ।
10009052c ಪ್ರತಿಲಭ್ಯ ಪುನಶ್ಚೇತ ಇದಂ ವಚನಮಬ್ರವೀತ್।।

ಮನಸ್ಸಿಗೆ ಪ್ರಿಯವಾದ ಆ ಮಾತನ್ನು ಕೇಳಿ ದುರ್ಯೋಧನನು ಪುನಃ ಚೇತರಿಸಿಕೊಂಡು ಈ ಮಾತನ್ನಾಡಿದನು:

10009053a ನ ಮೇಽಕರೋತ್ತದ್ಗಾಂಗೇಯೋ ನ ಕರ್ಣೋ ನ ಚ ತೇ ಪಿತಾ।
10009053c ಯತ್ತ್ವಯಾ ಕೃಪಭೋಜಾಭ್ಯಾಂ ಸಹಿತೇನಾದ್ಯ ಮೇ ಕೃತಂ।।

“ಗಾಂಗೇಯ, ಕರ್ಣ ಮತ್ತು ನಿನ್ನ ತಂದೆ ಇವರು ಮಾಡಲಾಗದ ಕಾರ್ಯವನ್ನು ಇಂದು ನೀನು ಕೃಪ-ಭೋಜರನ್ನು ಕೂಡಿಕೊಂಡು ಮಾಡಿದ್ದೀಯೆ!

10009054a ಸ ಚೇತ್ಸೇನಾಪತಿಃ ಕ್ಷುದ್ರೋ ಹತಃ ಸಾರ್ಧಂ ಶಿಖಂಡಿನಾ।
10009054c ತೇನ ಮನ್ಯೇ ಮಘವತಾ ಸಮಮಾತ್ಮಾನಮದ್ಯ ವೈ।।

ಶಿಖಂಡಿಯೊಡನೆ ಆ ಕ್ಷುದ್ರ ಸೇನಾಪತಿಯು ನಿನ್ನಿಂದ ಹತನಾದನೆಂದರೆ ಇಂದು ನಾನು ನನ್ನನ್ನು ಮಘವತ ಇಂದ್ರನ ಸಮನೆಂದೇ ಅಂದುಕೊಳ್ಳುತ್ತೇನೆ!

10009055a ಸ್ವಸ್ತಿ ಪ್ರಾಪ್ನುತ ಭದ್ರಂ ವಃ ಸ್ವರ್ಗೇ ನಃ ಸಂಗಮಃ ಪುನಃ।
10009055c ಇತ್ಯೇವಮುಕ್ತ್ವಾ ತೂಷ್ಣೀಂ ಸ ಕುರುರಾಜೋ ಮಹಾಮನಾಃ।
10009055e ಪ್ರಾಣಾನುದಸೃಜದ್ವೀರಃ ಸುಹೃದಾಂ ಶೋಕಮಾದಧತ್।।

ಒಳ್ಳೆಯದಾಗಲಿ! ನಿಮಗೆ ಮಂಗಳವಾಗಲಿ! ನಾವು ಪುನಃ ಸ್ವರ್ಗದಲ್ಲಿ ಸಂಧಿಸೋಣ!” ಎಂದು ಹೇಳಿ ಮಹಾಮನಸ್ವಿ ಕುರುರಾಜನು ಸುಮ್ಮನಾದನು. ಕೂಡಲೇ ಆ ವೀರನು ಸುಹೃದಯರಿಗೆ ಶೋಕವನ್ನು ವಹಿಸಿಕೊಟ್ಟು ಪ್ರಾಣಗಳನ್ನು ತೊರೆದನು.

10009056a ತಥೇತಿ ತೇ ಪರಿಷ್ವಕ್ತಾಃ ಪರಿಷ್ವಜ್ಯ ಚ ತಂ ನೃಪಂ।
10009056c ಪುನಃ ಪುನಃ ಪ್ರೇಕ್ಷಮಾಣಾಃ ಸ್ವಕಾನಾರುರುಹೂ ರಥಾನ್।।

ಹಾಗೆಯೇ ಆಗಲೆಂದು ಅವರು ಆ ನೃಪನನ್ನು ಆಲಂಗಿಸಿ, ಪುನಃ ಪುನಃ ಅವನನ್ನು ನೋಡುತ್ತಾ ತಮ್ಮ ತಮ್ಮ ರಥಗಳನ್ನು ಏರಿದರು.

10009057a ಇತ್ಯೇವಂ ತವ ಪುತ್ರಸ್ಯ ನಿಶಮ್ಯ ಕರುಣಾಂ ಗಿರಂ।
10009057c ಪ್ರತ್ಯೂಷಕಾಲೇ ಶೋಕಾರ್ತಃ ಪ್ರಾಧಾವಂ ನಗರಂ ಪ್ರತಿ।।

ಹೀಗೆ ಬೆಳಗಿನಜಾವದಲ್ಲಿ ನಿನ್ನ ಮಗನ ಕರುಣಾಜನಕ ಮಾತನ್ನು ಕೇಳಿ ಶೋಕಾರ್ತನಾಗಿ ನಗರಕ್ಕೆ ಓಡಿ ಬಂದೆನು.

10009058a ತವ ಪುತ್ರೇ ಗತೇ ಸ್ವರ್ಗಂ ಶೋಕಾರ್ತಸ್ಯ ಮಮಾನಘ।
10009058c ಋಷಿದತ್ತಂ ಪ್ರನಷ್ಟಂ ತದ್ದಿವ್ಯದರ್ಶಿತ್ವಮದ್ಯ ವೈ।।

ಅನಘ! ಇಂದು ನಿನ್ನ ಮಗನು ಸ್ವರ್ಗಕ್ಕೆ ಹೊರಟುಹೋಗಲು ಶೋಕಾರ್ತನಾದ ನನಗೆ ಋಷಿಯು ಕೊಟ್ಟಿದ್ದ ಆ ದಿವ್ಯದರ್ಶಿತ್ವವು ಕಳೆದುಹೋಯಿತು!””

10009059 ವೈಶಂಪಾಯನ ಉವಾಚ।
10009059a ಇತಿ ಶ್ರುತ್ವಾ ಸ ನೃಪತಿಃ ಪುತ್ರಜ್ಞಾತಿವಧಂ ತದಾ।
10009059c ನಿಃಶ್ವಸ್ಯ ದೀರ್ಘಮುಷ್ಣಂ ಚ ತತಶ್ಚಿಂತಾಪರೋಽಭವತ್।।

ವೈಶಂಪಾಯನನು ಹೇಳಿದನು: “ಈ ಪುತ್ರ-ಬಂಧುಗಳ ವಧೆಯನ್ನು ಕೇಳಿ ಆ ನೃಪತಿಯು ದೀರ್ಘವಾದ ಬಿಸಿ ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದುರ್ಯೋಧನಪ್ರಾಣತ್ಯಾಗೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದುರ್ಯೋಧನಪ್ರಾಣತ್ಯಾಗ ಎನ್ನುವ ಒಂಭತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-9/18, ಉಪಪರ್ವಗಳು-78/100, ಅಧ್ಯಾಯಗಳು-1292/1995, ಶ್ಲೋಕಗಳು-49023/73784.