008 ರಾತ್ರಿಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಸೌಪ್ತಿಕ ಪರ್ವ

ಅಧ್ಯಾಯ 8

ಸಾರ

ಕೃಪ-ಕೃತವರ್ಮರಿಗೆ ದ್ವಾರದಲ್ಲಿಯೇ ನಿಂತು ಯಾರೂ ತಪ್ಪಿಸಿಕೊಳ್ಳದಹಾಗೆ ನೋಡಿಕೊಳ್ಳಿ ಎಂದು ಹೇಳಿ ಅಶ್ವತ್ಥಾಮನು ಪಾಂಡವ ಶಿಬಿರವನ್ನು ಹೊಕ್ಕು ಅಲ್ಲಿ ಮಲಗಿದ್ದ ಧೃಷ್ಟದ್ಯುಮ್ನನನ್ನು ನೋಡಿದುದು (1-13). ಅಶ್ವತ್ಥಾಮನಿಂದ ಧೃಷ್ಟದ್ಯುಮ್ನನ ವಧೆ (14-21). ಯುಧಾಮನ್ಯು-ಉತ್ತಮೌಜರನ್ನೂ ಕೊಂದು ಅಶ್ವತ್ಥಾಮನು ಶಿಬಿರದಲ್ಲಿದ್ದವರನ್ನೆಲ್ಲಾ ಸಂಹರಿಸತೊಡಗಿದುದು (22-43). ಅಶ್ವತ್ಥಾಮನಿಂದ ಐವರು ದ್ರೌಪದೇಯರ ಮತ್ತು ಶಿಖಂಡಿಯ ವಧೆ (44-60). ರಾತ್ರಿಯುದ್ಧದಲ್ಲಿ ಅಶ್ವತ್ಥಾಮನಿಂದ ಅಳಿದುಳಿದ ಪಾಂಡವ ಸೇನೆಯ ಸಂಪೂರ್ಣ ನಾಶ (61-151).

10008001 ಧೃತರಾಷ್ಟ್ರ ಉವಾಚ।
10008001a ತಥಾ ಪ್ರಯಾತೇ ಶಿಬಿರಂ ದ್ರೋಣಪುತ್ರೇ ಮಹಾರಥೇ।
10008001c ಕಚ್ಚಿತ್ಕೃಪಶ್ಚ ಭೋಜಶ್ಚ ಭಯಾರ್ತೌ ನ ನ್ಯವರ್ತತಾಂ।।

ಧೃತರಾಷ್ಟ್ರನು ಹೇಳಿದನು: “ಮಹಾರಥ ದ್ರೋಣಪುತ್ರನು ಹಾಗೆ ಶಿಬಿರವನ್ನು ಪ್ರವೇಶಿಸುವಾಗ ಭಯಾರ್ತರಾದ ಕೃಪ ಮತ್ತು ಭೋಜರು ಅವನನ್ನು ತಡೆಯಲಿಲ್ಲ ತಾನೇ?

10008002a ಕಚ್ಚಿನ್ನ ವಾರಿತೌ ಕ್ಷುದ್ರೈ ರಕ್ಷಿಭಿರ್ನೋಪಲಕ್ಷಿತೌ।
10008002c ಅಸಹ್ಯಮಿತಿ ವಾ ಮತ್ವಾ ನ ನಿವೃತ್ತೌ ಮಹಾರಥೌ।।

ರಕ್ಷಿಸುತ್ತಿದ್ದ ಕ್ಷುದ್ರ ಕಾವಲುಗಾರರು ಅವರನ್ನು ನೋಡಿ ತಡೆಯಲಿಲ್ಲ ತಾನೇ? ಆ ಮಹಾರಥರಿಬ್ಬರೂ ರಾತ್ರಿಯಲ್ಲಿ ಮಲಗಿರುವವರನ್ನು ಕೊಲ್ಲುವುದು ಅಸಹ್ಯವಾದುದೆಂದು ಭಾವಿಸಿ ಹಿಂದಿರುಗಲಿಲ್ಲ ತಾನೇ?

10008003a ಕಚ್ಚಿತ್ಪ್ರಮಥ್ಯ ಶಿಬಿರಂ ಹತ್ವಾ ಸೋಮಕಪಾಂಡವಾನ್।
10008003c ದುರ್ಯೋಧನಸ್ಯ ಪದವೀಂ ಗತೌ ಪರಮಿಕಾಂ ರಣೇ।।

ಶಿಬಿರವನ್ನು ಧ್ವಂಸಗೊಳಿಸಿ ಸೋಮಕ-ಪಾಂಡವರನ್ನು ಸಂಹರಿಸಿದ ನಂತರವೇ ಅವರಿಬ್ಬರೂ ರಣದಲ್ಲಿ ದುರ್ಯೋಧನನು ಹಿಡಿದ ಪರಮ ಮಾರ್ಗವನ್ನು ಹಿಡಿದರು ತಾನೇ?

10008004a ಪಾಂಚಾಲೈರ್ವಾ ವಿನಿಹತೌ ಕಚ್ಚಿನ್ನಾಸ್ವಪತಾಂ ಕ್ಷಿತೌ।
10008004c ಕಚ್ಚಿತ್ತಾಭ್ಯಾಂ ಕೃತಂ ಕರ್ಮ ತನ್ಮಮಾಚಕ್ಷ್ವ ಸಂಜಯ।।

ಅಥವಾ ಅವರಿಬ್ಬರೂ ಪಾಂಚಾಲರಿಂದಲೇ ಹತರಾಗಿ ಭೂಮಿಯ ಮೇಲೆ ಮಲಗಲಿಲ್ಲ ತಾನೇ? ಸಂಜಯ! ಅವರಿಬ್ಬರೂ ಆ ಸಮಯದಲ್ಲಿ ಏನನ್ನು ಮಾಡಿದರು ಎನ್ನುವುದನ್ನು ನನಗೆ ಹೇಳು!”

10008005 ಸಂಜಯ ಉವಾಚ।
10008005a ತಸ್ಮಿನ್ಪ್ರಯಾತೇ ಶಿಬಿರಂ ದ್ರೋಣಪುತ್ರೇ ಮಹಾತ್ಮನಿ।
10008005c ಕೃಪಶ್ಚ ಕೃತವರ್ಮಾ ಚ ಶಿಬಿರದ್ವಾರ್ಯತಿಷ್ಠತಾಂ।।

ಸಂಜಯನು ಹೇಳಿದನು: “ಮಹಾತ್ಮ ದ್ರೋಣಪುತ್ರನು ಆ ಶಿಬಿರವನ್ನು ಪ್ರವೇಶಿಸಲಾಗಿ ಕೃಪ ಮತ್ತು ಕೃತವರ್ಮರು ಶಿಬಿರದ್ವಾರದಲ್ಲಿಯೇ ಉಳಿದುಕೊಂಡರು.

10008006a ಅಶ್ವತ್ಥಾಮಾ ತು ತೌ ದೃಷ್ಟ್ವಾ ಯತ್ನವಂತೌ ಮಹಾರಥೌ।
10008006c ಪ್ರಹೃಷ್ಟಃ ಶನಕೈ ರಾಜನ್ನಿದಂ ವಚನಮಬ್ರವೀತ್।।

ರಾಜನ್! ಪ್ರಯತ್ನಶೀಲರಾದ ಆ ಮಹಾರಥರಿಬ್ಬರನ್ನೂ ನೋಡಿ ಪ್ರಹೃಷ್ಟನಾದ ಅಶ್ವತ್ಥಾಮನು ಮೆಲ್ಲನೇ ಈ ಮಾತನ್ನಾಡಿದನು:

10008007a ಯತ್ತೌ ಭವಂತೌ ಪರ್ಯಾಪ್ತೌ ಸರ್ವಕ್ಷತ್ರಸ್ಯ ನಾಶನೇ।
10008007c ಕಿಂ ಪುನರ್ಯೋಧಶೇಷಸ್ಯ ಪ್ರಸುಪ್ತಸ್ಯ ವಿಶೇಷತಃ।।

“ಪ್ರಯತ್ನಶೀಲರಾದ ನೀವಿಬ್ಬರೂ ಸರ್ವಕ್ಷತ್ರಿಯರ ನಾಶಕ್ಕೆ ಸಮರ್ಥರಾಗಿರುವಿರಿ. ಹೀಗಿರುವಾಗ ಅಳಿದುಳಿದವರ ಮತ್ತು ಅದರಲ್ಲೂ ವಿಶೇಷವಾಗಿ ಮಲಗಿರುವವರ ನಾಶದ ಕುರಿತು ಹೇಳುವುದೇನಿದೆ?

10008008a ಅಹಂ ಪ್ರವೇಕ್ಷ್ಯೇ ಶಿಬಿರಂ ಚರಿಷ್ಯಾಮಿ ಚ ಕಾಲವತ್।
10008008c ಯಥಾ ನ ಕಶ್ಚಿದಪಿ ಮೇ ಜೀವನ್ಮುಚ್ಯೇತ ಮಾನವಃ।।

ನಾನು ಶಿಬಿರವನ್ನು ಪ್ರವೇಶಿಸಿ ಕಾಲನಂತೆ ಸಂಚರಿಸುತ್ತೇನೆ. ಆದರೆ ನನ್ನಿಂದ ಯಾವನೊಬ್ಬ ಮಾನವನೂ ಜೀವಂತನಾಗಿ ತಪ್ಪಿಸಿಕೊಂಡು ಹೋಗಬಾರದು!”

10008009a ಇತ್ಯುಕ್ತ್ವಾ ಪ್ರಾವಿಶದ್ದ್ರೌಣಿಃ ಪಾರ್ಥಾನಾಂ ಶಿಬಿರಂ ಮಹತ್।
10008009c ಅದ್ವಾರೇಣಾಭ್ಯವಸ್ಕಂದ್ಯ ವಿಹಾಯ ಭಯಮಾತ್ಮನಃ।।

ಹೀಗೆ ಹೇಳಿ ದ್ರೌಣಿಯು ಪಾರ್ಥರ ಅ ಮಹಾ ಶಿಬಿರವನ್ನು ದ್ವಾರದ ಮೂಲಕವಾಗಿ ಹೋಗದೇ ಬೇರೊಂದು ಕಡೆಯಿಂದ ನೆಗೆದು, ತನಗಾಗಿ ಸ್ವಲ್ಪವೂ ಭಯಗೊಳ್ಳದೇ, ಪ್ರವೇಶಿಸಿದನು.

10008010a ಸ ಪ್ರವಿಶ್ಯ ಮಹಾಬಾಹುರುದ್ದೇಶಜ್ಞಶ್ಚ ತಸ್ಯ ಹ।
10008010c ಧೃಷ್ಟದ್ಯುಮ್ನಸ್ಯ ನಿಲಯಂ ಶನಕೈರಭ್ಯುಪಾಗಮತ್।।

ಆ ಬಿಡಾರವನ್ನು ಚೆನ್ನಾಗಿ ತಿಳಿದಿದ್ದ ಮಹಾಬಾಹುವು ಮೆಲ್ಲನೇ ಧೃಷ್ಟದ್ಯುಮ್ನನ ನಿಲಯದ ಬಳಿಸಾರಿದನು.

10008011a ತೇ ತು ಕೃತ್ವಾ ಮಹತ್ಕರ್ಮ ಶ್ರಾಂತಾಶ್ಚ ಬಲವದ್ರಣೇ।
10008011c ಪ್ರಸುಪ್ತಾ ವೈ ಸುವಿಶ್ವಸ್ತಾಃ ಸ್ವಸೈನ್ಯಪರಿವಾರಿತಾಃ।।

ಧೃಷ್ಟದ್ಯುಮ್ನನಾದರೋ ರಣದಲ್ಲಿ ಬಲವನ್ನುಪಯೋಗಿಸಿ ಮಹಾಕರ್ಮಗಳನ್ನೆಸಗಿ ಬಳಲಿ ಸ್ವಸೈನ್ಯದಿಂದ ಸುತ್ತುವರೆಯಲ್ಪಟ್ಟು ಸಂಪೂರ್ಣ ವಿಶ್ವಾಸದಿಂದ ಮಲಗಿದ್ದನು.

10008012a ಅಥ ಪ್ರವಿಶ್ಯ ತದ್ವೇಶ್ಮ ಧೃಷ್ಟದ್ಯುಮ್ನಸ್ಯ ಭಾರತ।
10008012c ಪಾಂಚಾಲ್ಯಂ ಶಯನೇ ದ್ರೌಣಿರಪಶ್ಯತ್ಸುಪ್ತಮಂತಿಕಾತ್।।

ಭಾರತ! ಧೃಷ್ಟದ್ಯುಮ್ನನ ಆ ನಿಲಯವನ್ನು ಪ್ರವೇಶಿಸಿ ದ್ರೌಣಿಯು ಶಯನದಲ್ಲಿ ಮಲಗಿದ್ದ ಪಾಂಚಾಲ್ಯನನ್ನು ಹತ್ತಿರದಿಂದ ನೋಡಿದನು.

10008013a ಕ್ಷೌಮಾವದಾತೇ ಮಹತಿ ಸ್ಪರ್ಧ್ಯಾಸ್ತರಣಸಂವೃತೇ।
10008013c ಮಾಲ್ಯಪ್ರವರಸಂಯುಕ್ತೇ ಧೂಪೈಶ್ಚೂರ್ಣೈಶ್ಚ ವಾಸಿತೇ।।

ಅವನು ಶ್ರೇಷ್ಠ ಹೂವಿನ ಹಾರಗಳಿಂದ ಸಮಲಂಕೃತನಾಗಿದ್ದನು. ಧೂಪ-ಚಂದನ-ಚೂರ್ಣಗಳಿಂದ ಸುವಾಸಿತವಾಗಿದ್ದ ಬಹುಮೂಲ್ಯ ಹಚ್ಚಡವನ್ನು ಹೊದ್ದು ಶುದ್ಧ ರೇಷ್ಮೆಯಿಂದ ಮಾಡಲ್ಪಟ್ಟ ದೊಡ್ಡ ಹಾಸಿಗೆಯ ಮೇಲೆ ಮಲಗಿದ್ದನು.

10008014a ತಂ ಶಯಾನಂ ಮಹಾತ್ಮಾನಂ ವಿಸ್ರಬ್ಧಮಕುತೋಭಯಂ।
10008014c ಪ್ರಾಬೋಧಯತ ಪಾದೇನ ಶಯನಸ್ಥಂ ಮಹೀಪತೇ।।

ಮಹೀಪತೇ! ನಿಶ್ಚಿಂತನಾಗಿ ಭಯರಹಿತನಾಗಿ ಹಾಸಿಗೆಯ ಮೇಲೆ ಮಲಗಿದ್ದ ಆ ಮಹಾತ್ಮನನ್ನು ಅವನು ಕಾಲಿನಿಂದ ಒದೆದು ಎಬ್ಬಿಸಿದನು.

10008015a ಸ ಬುದ್ಧ್ವಾ ಚರಣಸ್ಪರ್ಶಮುತ್ಥಾಯ ರಣದುರ್ಮದಃ।
10008015c ಅಭ್ಯಜಾನದಮೇಯಾತ್ಮಾ ದ್ರೋಣಪುತ್ರಂ ಮಹಾರಥಂ।।

ಚರಣಸ್ಪರ್ಶದಿಂದ ಎಚ್ಚೆದ್ದ ಅಮೇಯಾತ್ಮ ರಣದುರ್ಮದ ಧೃಷ್ಟದ್ಯುಮ್ನನು ಮಹಾರಥ ದ್ರೋಣಪುತ್ರನನ್ನು ಗುರುತಿಸಿದನು.

10008016a ತಮುತ್ಪತಂತಂ ಶಯನಾದಶ್ವತ್ಥಾಮಾ ಮಹಾಬಲಃ।
10008016c ಕೇಶೇಷ್ವಾಲಂಬ್ಯ ಪಾಣಿಭ್ಯಾಂ ನಿಷ್ಪಿಪೇಷ ಮಹೀತಲೇ।।

ಶಯನದಿಂದ ಮೇಲೆಳುತ್ತಿದ್ದ ಅವನನ್ನು ಮಹಾಬಲ ಅಶ್ವತ್ಥಾಮನು ತನ್ನೆರಡು ಕೈಗಳಿಂದ ಅವನ ತಲೆಗೂದಲನ್ನು ಹಿಡಿದು ಮೇಲೆತ್ತಿ ಅತ್ಯಂತ ರಭಸದಿಂದ ನೆಲಕ್ಕೆ ಅಪ್ಪಳಿಸಿದನು.

10008017a ಸ ಬಲಾತ್ತೇನ ನಿಷ್ಪಿಷ್ಟಃ ಸಾಧ್ವಸೇನ ಚ ಭಾರತ।
10008017c ನಿದ್ರಯಾ ಚೈವ ಪಾಂಚಾಲ್ಯೋ ನಾಶಕಚ್ಚೇಷ್ಟಿತುಂ ತದಾ।।

ಭಾರತ! ಬಲಪೂರ್ವಕವಾಗಿ ಒಮ್ಮಿಂದೊಮ್ಮೆಲೇ ಅಪ್ಪಳಿಸಲ್ಪಟ್ಟ ಪಾಂಚಾಲ್ಯನು ನಿದ್ರೆಯ ಜಡದಿಂದಾಗಿ ಅವನಿಂತ ತಪ್ಪಿಸಿಕೊಳ್ಳಲು ಅಶಕ್ಯನಾದನು.

10008018a ತಮಾಕ್ರಮ್ಯ ತದಾ ರಾಜನ್ಕಂಠೇ ಚೋರಸಿ ಚೋಭಯೋಃ।
10008018c ನದಂತಂ ವಿಸ್ಫುರಂತಂ ಚ ಪಶುಮಾರಮಮಾರಯತ್।।

ರಾಜನ್! ಅವನ ಕಂಠ ಮತ್ತು ಎದೆಯನ್ನು ಎರಡೂ ಪಾದಗಳಿಂದ ಮೆಟ್ಟಿ ಹಿಡಿದು ಅಶ್ವತ್ಥಾಮನು ಚಡಪಡಿಸಿ ಕೂಗಿಕೊಳ್ಳುತ್ತಿದ್ದ ಧೃಷ್ಟದ್ಯುಮ್ನನನ್ನು ಪಶುವಂತೆ ಹೊಡೆಯತೊಡಗಿದನು.

10008019a ತುದನ್ನಖೈಸ್ತು ಸ ದ್ರೌಣಿಂ ನಾತಿವ್ಯಕ್ತಮುದಾಹರತ್।
10008019c ಆಚಾರ್ಯಪುತ್ರ ಶಸ್ತ್ರೇಣ ಜಹಿ ಮಾ ಮಾ ಚಿರಂ ಕೃಥಾಃ।
10008019e ತ್ವತ್ಕೃತೇ ಸುಕೃತಾಽಲ್ಲೋಕಾನ್ಗಚ್ಚೇಯಂ ದ್ವಿಪದಾಂ ವರ।।

ತನ್ನ ಉಗುರುಗಳಿಂದಲೇ ದ್ರೌಣಿಯನ್ನು ಪರಚುತ್ತಾ ಧೃಷ್ಟದ್ಯುಮ್ನನು ಅಸ್ಪಷ್ಟವಾಗಿ ಕೂಗಿಕೊಂಡನು: “ಆಚಾರ್ಯಪುತ್ರ! ದ್ವಿಪದರಲ್ಲಿ ಶ್ರೇಷ್ಠ! ಬೇಗನೇ ಶಸ್ತ್ರದಿಂದ ನನ್ನನ್ನು ಕೊಲ್ಲು! ನೀನು ಹಾಗೆ ಮಾಡಿದರೆ ನಾನು ಸುಕೃತರ ಲೋಕಗಳಿಗೆ ಹೋಗಬಲ್ಲೆ!”

10008020a ತಸ್ಯಾವ್ಯಕ್ತಾಂ ತು ತಾಂ ವಾಚಂ ಸಂಶ್ರುತ್ಯ ದ್ರೌಣಿರಬ್ರವೀತ್।
10008020c ಆಚಾರ್ಯಘಾತಿನಾಂ ಲೋಕಾ ನ ಸಂತಿ ಕುಲಪಾಂಸನ।
10008020e ತಸ್ಮಾಚ್ಚಸ್ತ್ರೇಣ ನಿಧನಂ ನ ತ್ವಮರ್ಹಸಿ ದುರ್ಮತೇ।।

ಅವನ ಆ ಅವ್ಯಕ್ತ ಮಾತುಗಳನ್ನು ಕೇಳಿ ದ್ರೌಣಿಯು ಹೇಳಿದನು: “ಕುಲಪಾಂಸಕನೇ! ಆಚಾರ್ಯರನ್ನು ಸಂಹರಿಸಿದವರಿಗೆ ಯಾವ ಪುಣ್ಯ ಲೋಕಗಳೂ ಇಲ್ಲ! ಆದುದರಿಂದ ದುರ್ಮತೇ! ನೀನು ಶಸ್ತ್ರದಿಂದಾದ ವಧೆಗೆ ಅರ್ಹನಲ್ಲ!”

10008021a ಏವಂ ಬ್ರುವಾಣಸ್ತಂ ವೀರಂ ಸಿಂಹೋ ಮತ್ತಮಿವ ದ್ವಿಪಂ।
10008021c ಮರ್ಮಸ್ವಭ್ಯವಧೀತ್ಕ್ರುದ್ಧಃ ಪಾದಾಷ್ಠೀಲೈಃ ಸುದಾರುಣೈಃ।।

ಹೀಗೆ ಹೇಳುತ್ತಾ ಆ ಕ್ರುದ್ಧ ವೀರನು ಮದಿಸಿದ ಆನೆಯು ಸಿಂಹವನ್ನು ಹೇಗೋ ಹಾಗೆ ಭಯಂಕರ ಕಾಲುಗಳಿಂದ, ಮೊಣಕಾಲುಗಳಿಂದ ಮತ್ತು ಮಂಡಿಗಳಿಂದ ಅವನ ಮರ್ಮಸ್ಥಾನಗಳಲ್ಲಿ ಪ್ರಹರಿಸಿ ಸಂಹರಿಸಿದನು.

10008022a ತಸ್ಯ ವೀರಸ್ಯ ಶಬ್ದೇನ ಮಾರ್ಯಮಾಣಸ್ಯ ವೇಶ್ಮನಿ।
10008022c ಅಬುಧ್ಯಂತ ಮಹಾರಾಜ ಸ್ತ್ರಿಯೋ ಯೇ ಚಾಸ್ಯ ರಕ್ಷಿಣಃ।।

ಮಹಾರಾಜ! ವಧಿಸಲ್ಪಡುತ್ತಿದ್ದ ಆ ವೀರನ ಶಬ್ಧದಿಂದ ನಿವಾಸದಲ್ಲಿದ್ದ ಸ್ತ್ರೀಯರು ಮತ್ತು ಅನ್ಯ ರಕ್ಷಕರು ಎಚ್ಚೆತ್ತರು.

10008023a ತೇ ದೃಷ್ಟ್ವಾ ವರ್ಷ್ಮವಂತಂ ತಮತಿಮಾನುಷವಿಕ್ರಮಂ।
10008023c ಭೂತಮೇವ ವ್ಯವಸ್ಯಂತೋ ನ ಸ್ಮ ಪ್ರವ್ಯಾಹರನ್ಭಯಾತ್।।

ಪ್ರಹರಿಸುತ್ತಿದ್ದ ಆ ಅತಿಮಾನುಷ ಮಿಕ್ರಮನನ್ನು ನೋಡಿ ಇವನು ಯಾವುದೋ ಭೂತವಿರಬಹುದೆಂದು ಬಗೆದು ಭಯದಿಂದ ಉದ್ವಿಗ್ನರಾಗಿ ಮಾತೇ ಹೊರಡದೇ ಸುಮ್ಮನಾಗಿದ್ದರು.

10008024a ತಂ ತು ತೇನಾಭ್ಯುಪಾಯೇನ ಗಮಯಿತ್ವಾ ಯಮಕ್ಷಯಂ।
10008024c ಅಧ್ಯತಿಷ್ಠತ್ಸ ತೇಜಸ್ವೀ ರಥಂ ಪ್ರಾಪ್ಯ ಸುದರ್ಶನಂ।।

ತನ್ನ ಉಪಾಯದಂತೆ ಅವನನ್ನು ಯಮಕ್ಷಯಕ್ಕೆ ಕಳುಹಿಸಿ ಆ ತೇಜಸ್ವೀ ಅಶ್ವತ್ಥಾಮನು ತನ್ನ ಸುಂದರ ರಥದ ಬಳಿಬಂದು ಅದನ್ನೇರಿದನು.

10008025a ಸ ತಸ್ಯ ಭವನಾದ್ರಾಜನ್ನಿಷ್ಕ್ರಮ್ಯಾನಾದಯನ್ದಿಶಃ।
10008025c ರಥೇನ ಶಿಬಿರಂ ಪ್ರಾಯಾಜ್ಜಿಘಾಂಸುರ್ದ್ವಿಷತೋ ಬಲೀ।।

ಶತ್ರುಗಳನ್ನು ಸಂಹರಿಸಲು ಬಯಸಿದ್ದ ಆ ಬಲಶಾಲಿಯು ಅವನ ಭವನದಿಂದ ಹೊರಬಂದು ರಥದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಇನ್ನೊಂದು ಶಿಬಿರವನ್ನು ಪ್ರವೇಶಿಸಿದನು.

10008026a ಅಪಕ್ರಾಂತೇ ತತಸ್ತಸ್ಮಿನ್ದ್ರೋಣಪುತ್ರೇ ಮಹಾರಥೇ।
10008026c ಸಹ ತೈ ರಕ್ಷಿಭಿಃ ಸರ್ವೈಃ ಪ್ರಣೇದುರ್ಯೋಷಿತಸ್ತದಾ।।

ಮಹಾರಥ ದ್ರೋಣಪುತ್ರನು ಹೊರಟುಹೋಗಲು ಅಲ್ಲಿದ್ದ ರಕ್ಷಕರೆಲ್ಲರೂ ಸ್ತ್ರೀಯರೊಂದಿಗೆ ಗಟ್ಟಿಯಾಗಿ ಅಳತೊಡಗಿದರು.

10008027a ರಾಜಾನಂ ನಿಹತಂ ದೃಷ್ಟ್ವಾ ಭೃಶಂ ಶೋಕಪರಾಯಣಾಃ।
10008027c ವ್ಯಾಕ್ರೋಶನ್ ಕ್ಷತ್ರಿಯಾಃ ಸರ್ವೇ ಧೃಷ್ಟದ್ಯುಮ್ನಸ್ಯ ಭಾರತ।।

ಭಾರತ! ರಾಜನು ಹತನಾದುದನ್ನು ನೋಡಿ ಅತ್ಯಂತ ಶೋಕಪರಾಯಣರಾದ ಧೃಷ್ಟದ್ಯುಮ್ನನ ಕ್ಷತ್ರಿಯರೆಲ್ಲರೂ ಕೂಗಿಕೊಳ್ಳತೊಡಗಿದರು.

10008028a ತಾಸಾಂ ತು ತೇನ ಶಬ್ದೇನ ಸಮೀಪೇ ಕ್ಷತ್ರಿಯರ್ಷಭಾಃ।
10008028c ಕ್ಷಿಪ್ರಂ ಚ ಸಮನಹ್ಯಂತ ಕಿಮೇತದಿತಿ ಚಾಬ್ರುವನ್।।

ಅವರ ಆ ಶಬ್ಧದಿಂದಾಗಿ ಸಮೀಪದಲ್ಲಿದ್ದ ಕ್ಷತ್ರಿಯರ್ಷಭರು ಬೇಗನೆ ಸನ್ನದ್ಧರಾಗಿ ಇದೇನೆಂದು ವಿಚಾರಿಸತೊಡಗಿದರು.

10008029a ಸ್ತ್ರಿಯಸ್ತು ರಾಜನ್ವಿತ್ರಸ್ತಾ ಭಾರದ್ವಾಜಂ ನಿರೀಕ್ಷ್ಯ ತಂ।
10008029c ಅಬ್ರುವನ್ದೀನಕಂಠೇನ ಕ್ಷಿಪ್ರಮಾದ್ರವತೇತಿ ವೈ।।

ರಾಜನ್! ಭಾರದ್ವಾಜ ಅಶ್ವತ್ಥಾಮನನ್ನು ನೋಡಿ ಭಯಭೀತರಾದ ಸ್ತ್ರೀಯರಾದರೋ ದೀನಕಂಠದಿಂದ “ಬೇಗನೇ ಓಡಿಹೋಗಿರಿ!” ಎಂದು ಕೂಗಿಕೊಂಡರು.

10008030a ರಾಕ್ಷಸೋ ವಾ ಮನುಷ್ಯೋ ವಾ ನೈನಂ ಜಾನೀಮಹೇ ವಯಂ।
10008030c ಹತ್ವಾ ಪಾಂಚಾಲರಾಜಂ ಯೋ ರಥಮಾರುಹ್ಯ ತಿಷ್ಠತಿ।।

“ಪಾಂಚಾಲರಾಜನನ್ನು ಸಂಹರಿಸಿ ರಥವನ್ನೇರಿ ನಿಂತಿರುವವನು ರಾಕ್ಷಸನೋ ಅಥವಾ ಮನುಷ್ಯನೋ ಎನ್ನುವುದನ್ನು ನಾವು ತಿಳಿಯಲಾರೆವು!”

10008031a ತತಸ್ತೇ ಯೋಧಮುಖ್ಯಾಸ್ತಂ ಸಹಸಾ ಪರ್ಯವಾರಯನ್।
10008031c ಸ ತಾನಾಪತತಃ ಸರ್ವಾನ್ರುದ್ರಾಸ್ತ್ರೇಣ ವ್ಯಪೋಥಯತ್।।

ಆಗ ಆ ಯೋಧಮುಖ್ಯರು ಒಡನೆಯೇ ಅಶ್ವತ್ಥಾಮನನ್ನು ಸುತ್ತುವರೆಯಲು ಅವನು ರುದ್ರಾಸ್ತ್ರದಿಂದ ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವರೆಲ್ಲರನ್ನೂ ಸಂಹರಿಸಿದನು.

10008032a ಧೃಷ್ಟದ್ಯುಮ್ನಂ ಚ ಹತ್ವಾ ಸ ತಾಂಶ್ಚೈವಾಸ್ಯ ಪದಾನುಗಾನ್।
10008032c ಅಪಶ್ಯಚ್ಚಯನೇ ಸುಪ್ತಮುತ್ತಮೌಜಸಮಂತಿಕೇ।।

ಧೃಷ್ಟದ್ಯುಮ್ನ ಮತ್ತು ಅವನ ಅನುಯಾಯಿಗಳನ್ನು ಸಂಹರಿಸಿ ಅವನು ಶಯನದಲ್ಲಿ ಮಲಗಿದ್ದ ಉತ್ತಮೌಜಸನನ್ನು ಹತ್ತಿರದಿಂದ ನೋಡಿದನು.

10008033a ತಮಪ್ಯಾಕ್ರಮ್ಯ ಪಾದೇನ ಕಂಠೇ ಚೋರಸಿ ಚೌಜಸಾ।
10008033c ತಥೈವ ಮಾರಯಾಮಾಸ ವಿನರ್ದಂತಮರಿಂದಮಂ।।

ಅಶ್ವತ್ಥಾಮನು ತನ್ನ ಓಜಸ್ಸು-ಪಾದಗಳಿಂದ ಅವನ ಕಂಠ-ಎದೆಗಳನ್ನು ಮೆಟ್ಟಿ ಧೃಷ್ಟದ್ಯುಮ್ನನನ್ನು ಕೊಂದ ಹಾಗೆಯೇ ಕೂಗಿಕೊಳ್ಳುತ್ತಿದ್ದ ಆ ಅರಿಂದಮನನ್ನು ಸಂಹರಿಸಿದನು.

10008034a ಯುಧಾಮನ್ಯುಸ್ತು ಸಂಪ್ರಾಪ್ತೋ ಮತ್ತ್ವಾ ತಂ ರಕ್ಷಸಾ ಹತಂ।
10008034c ಗದಾಮುದ್ಯಮ್ಯ ವೇಗೇನ ಹೃದಿ ದ್ರೌಣಿಮತಾಡಯತ್।।

ಉತ್ತಮೌಜಸನು ರಾಕ್ಷಸನಿಂದ ಹತನಾದನೆಂದು ತಿಳಿದ ಯುಧಾಮನ್ಯುವು ಗದೆಯನ್ನು ಮೇಲೆತ್ತಿ ವೇಗದಿಂದ ದ್ರೌಣಿಯ ಎದೆಗೆ ಅಪ್ಪಳಿಸಿದನು.

10008035a ತಮಭಿದ್ರುತ್ಯ ಜಗ್ರಾಹ ಕ್ಷಿತೌ ಚೈನಮಪಾತಯತ್।
10008035c ವಿಸ್ಫುರಂತಂ ಚ ಪಶುವತ್ತಥೈವೈನಮಮಾರಯತ್।।

ಮುಂದೆ ಧಾವಿಸಿ ಬಂದ ಯುಧಾಮನ್ಯುವನ್ನೂ ಹಿಡಿದು ನೆಲದ ಮೇಲೆ ಬೀಳಿಸಿ ಅಶ್ವತ್ಥಾಮನು ವಿಲಿವಿಲಿ ಒದ್ದಾಡುತ್ತಿರುವ ಅವನನ್ನು ಪಶುವಂತೆ ಹೊಡೆದು ಸಂಹರಿಸಿದನು.

10008036a ತಥಾ ಸ ವೀರೋ ಹತ್ವಾ ತಂ ತತೋಽನ್ಯಾನ್ಸಮುಪಾದ್ರವತ್।
10008036c ಸಂಸುಪ್ತಾನೇವ ರಾಜೇಂದ್ರ ತತ್ರ ತತ್ರ ಮಹಾರಥಾನ್।
10008036e ಸ್ಫುರತೋ ವೇಪಮಾನಾಂಶ್ಚ ಶಮಿತೇವ ಪಶೂನ್ಮಖೇ।।

ರಾಜೇಂದ್ರ! ಅವನನ್ನು ಕೊಂದ ಹಾಗೆಯೇ ಆ ವೀರನು ಅಲ್ಲಲ್ಲಿ ಮಲಗಿದ್ದ ಇತರ ಮಹಾರಥರನ್ನೂ ವಿಲಿವಿಲಿ ಒದ್ದಾಡುವಂತೆ ಮಾಡಿ ಯಜ್ಞದಲ್ಲಿ ಪಶುಗಳನ್ನು ಹೇಗೋ ಹಾಗೆ ಹಿಸುಕಿ ಸಂಹರಿಸಿದನು.

10008037a ತತೋ ನಿಸ್ತ್ರಿಂಶಮಾದಾಯ ಜಘಾನಾನ್ಯಾನ್ಪೃಥಗ್ಜನಾನ್।
10008037c ಭಾಗಶೋ ವಿಚರನ್ಮಾರ್ಗಾನಸಿಯುದ್ಧವಿಶಾರದಃ।।

ಆಗ ಆ ಖಡ್ಗಯುದ್ಧವಿಶಾರದನು ಖಡ್ಗವನ್ನು ತೆಗೆದುಕೊಂಡು ಶಿಬಿರದ ಒಂದೊಂದು ಭಾಗದಲ್ಲಿಯೂ ಪ್ರತ್ಯೇಕ ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸುತ್ತಾ ಅನ್ಯರನ್ನೂ ಸಂಹರಿಸಿದನು.

10008038a ತಥೈವ ಗುಲ್ಮೇ ಸಂಪ್ರೇಕ್ಷ್ಯ ಶಯಾನಾನ್ಮಧ್ಯಗೌಲ್ಮಿಕಾನ್।
10008038c ಶ್ರಾಂತಾನ್ನ್ಯಸ್ತಾಯುಧಾನ್ಸರ್ವಾನ್ ಕ್ಷಣೇನೈವ ವ್ಯಪೋಥಯತ್।।

ಹಾಗೆಯೇ ಆಯುಧಗಳನ್ನು ಕೆಳಗಿಟ್ಟು ಬಳಲಿ ಮಲಗಿದ್ದ ಮಧ್ಯಗೌಲ್ಮಿಕರ ಗುಲ್ಮವನ್ನು ನೋಡಿ ಅವರೆಲ್ಲರನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು.

10008039a ಯೋಧಾನಶ್ವಾನ್ದ್ವಿಪಾಂಶ್ಚೈವ ಪ್ರಾಚ್ಚಿನತ್ಸ ವರಾಸಿನಾ।
10008039c ರುಧಿರೋಕ್ಷಿತಸರ್ವಾಂಗಃ ಕಾಲಸೃಷ್ಟ ಇವಾಂತಕಃ।।

ಶ್ರೇಷ್ಠ ಖಡ್ಗದಿಂದ ಯೋಧರನ್ನೂ, ಕುದುರೆಗಳನ್ನೂ ಮತ್ತು ಆನೆಗಳನ್ನೂ ತುಂಡರಿಸುತ್ತಿದ್ದ ಅವನ ಸರ್ವಾಂಗಗಳೂ ರಕ್ತದಿಂದ ತೋಯ್ದು ಕಾಲವು ಸೃಷ್ಟಿಸಿದ ಅಂತಕನಂತೆಯೇ ತೋರುತ್ತಿದ್ದನು.

10008040a ವಿಸ್ಫುರದ್ಭಿಶ್ಚ ತೈರ್ದ್ರೌಣಿರ್ನಿಸ್ತ್ರಿಂಶಸ್ಯೋದ್ಯಮೇನ ಚ।
10008040c ಆಕ್ಷೇಪೇಣ ತಥೈವಾಸೇಸ್ತ್ರಿಧಾ ರಕ್ತೋಕ್ಷಿತೋಽಭವತ್।।

ಅವರು ವಿಲವಿಲನೆ ಒದ್ದಾಡುತ್ತಿರುವುದರಿಂದ, ಕತ್ತಿಯನ್ನು ಬಾರಿ ಬಾರಿ ಮೇಲೆತ್ತುತ್ತಿದ್ದುದರಿಂದ ಮತ್ತು ಖಡ್ಗವನ್ನು ಪ್ರಹರಿಸುತ್ತಿದ್ದುದರಿಂದ – ಈ ಮೂರು ಕಾರಣಗಳಿಂದ ಅವನು ರಕ್ತಸಿಕ್ತನಾದನು.

10008041a ತಸ್ಯ ಲೋಹಿತಸಿಕ್ತಸ್ಯ ದೀಪ್ತಖಡ್ಗಸ್ಯ ಯುಧ್ಯತಃ।
10008041c ಅಮಾನುಷ ಇವಾಕಾರೋ ಬಭೌ ಪರಮಭೀಷಣಃ।।

ಕೆಂಪುಬಣ್ಣವನ್ನು ತಾಳಿದ್ದ ಅವನ ದೇಹ ಮತ್ತು ಯುದ್ಧದಲ್ಲಿ ಬಳಸುತ್ತಿದ್ದ ಕೆಂಪಾಗಿ ಹೊಳೆಯುತ್ತಿದ್ದ ಖಡ್ಗದಿಂದ ಅವನು ಪರಮ ಭೀಷಣ ಅಮಾನುಷ ಆಕಾರವನ್ನು ತಾಳಿದನು.

10008042a ಯೇ ತ್ವಜಾಗ್ರತ ಕೌರವ್ಯ ತೇಽಪಿ ಶಬ್ದೇನ ಮೋಹಿತಾಃ।
10008042c ನಿರೀಕ್ಷ್ಯಮಾಣಾ ಅನ್ಯೋನ್ಯಂ ದ್ರೌಣಿಂ ದೃಷ್ಟ್ವಾ ಪ್ರವಿವ್ಯಥುಃ।।

ಕೌರವ್ಯ! ಅವರು ಕೂಡ ಶಬ್ಧದಿಂದ ಮೋಹಿತರಾಗಿ ಎಚ್ಚೆತ್ತು ಅನ್ಯೋನ್ಯರನ್ನು ನಿರೀಕ್ಷಿಸುತ್ತಾ ದ್ರೌಣಿಯನ್ನು ನೋಡಿ ವ್ಯಥಿತರಾದರು.

10008043a ತದ್ರೂಪಂ ತಸ್ಯ ತೇ ದೃಷ್ಟ್ವಾ ಕ್ಷತ್ರಿಯಾಃ ಶತ್ರುಕರ್ಶನಾಃ।
10008043c ರಾಕ್ಷಸಂ ಮನ್ಯಮಾನಾಸ್ತಂ ನಯನಾನಿ ನ್ಯಮೀಲಯನ್।।

ಅವನ ಆ ರೂಪವನ್ನು ನೋಡಿ ಶತ್ರುಕರ್ಶನ ಕ್ಷತ್ರಿಯರು ಅವನೊಬ್ಬ ರಾಕ್ಷಸನೆಂದೇ ತಿಳಿದು ಕಣ್ಣುಗಳನ್ನು ಮುಚ್ಚಿಕೊಂಡರು.

10008044a ಸ ಘೋರರೂಪೋ ವ್ಯಚರತ್ಕಾಲವಚ್ಚಿಬಿರೇ ತತಃ।
10008044c ಅಪಶ್ಯದ್ದ್ರೌಪದೀಪುತ್ರಾನವಶಿಷ್ಟಾಂಶ್ಚ ಸೋಮಕಾನ್।।

ಘೋರರೂಪದ ಕಾಲನಂತೆ ಶಿಬಿರದಲ್ಲಿ ಸಂಚರಿಸುತ್ತಿದ್ದ ಅವನನ್ನು ದ್ರೌಪದೀಪುತ್ರರು ಮತ್ತು ಅಳಿದುಳಿದ ಸೋಮಕರು ನೋಡಿದರು.

10008045a ತೇನ ಶಬ್ದೇನ ವಿತ್ರಸ್ತಾ ಧನುರ್ಹಸ್ತಾ ಮಹಾರಥಾಃ।
10008045c ಧೃಷ್ಟದ್ಯುಮ್ನಂ ಹತಂ ಶ್ರುತ್ವಾ ದ್ರೌಪದೇಯಾ ವಿಶಾಂ ಪತೇ।
10008045e ಅವಾಕಿರನ್ ಶರವ್ರಾತೈರ್ಭಾರದ್ವಾಜಮಭೀತವತ್।।

ವಿಶಾಂಪತೇ! ಅವನ ಶಬ್ಧದಿಂದ ಎಚ್ಚೆತ್ತ ಆ ಮಹಾರಥ ದ್ರೌಪದೇಯರು ಧೃಷ್ಟದ್ಯುಮ್ನನು ಹತನಾದುದನ್ನು ಕೇಳಿ ಧನುಸ್ಸನ್ನು ಹಿಡಿದು ಭಯಗೊಳ್ಳದೇ ಶರವ್ರಾತಗಳಿಂದ ಭಾರದ್ವಾಜ ಅಶ್ವತ್ಥಾಮನನ್ನು ಮುಸುಕಿದರು.

10008046a ತತಸ್ತೇನ ನಿನಾದೇನ ಸಂಪ್ರಬುದ್ಧಾಃ ಪ್ರಭದ್ರಕಾಃ।
10008046c ಶಿಲೀಮುಖೈಃ ಶಿಖಂಡೀ ಚ ದ್ರೋಣಪುತ್ರಂ ಸಮಾರ್ದಯನ್।।

ಅವರ ಆ ನಿನಾದದಿಂದ ಸಂಪೂರ್ಣವಾಗಿ ಎಚ್ಚೆತ್ತ ಪ್ರಭದ್ರಕರೂ ಮತ್ತು ಶಿಖಂಡಿಯೂ ದ್ರೋಣಪುತ್ರನನ್ನು ಶಿಲೀಮುಖಗಳಿಂದ ಪ್ರಹರಿಸಿದರು.

10008047a ಭಾರದ್ವಾಜಸ್ತು ತಾನ್ದೃಷ್ಟ್ವಾ ಶರವರ್ಷಾಣಿ ವರ್ಷತಃ।
10008047c ನನಾದ ಬಲವನ್ನಾದಂ ಜಿಘಾಂಸುಸ್ತಾನ್ಸುದುರ್ಜಯಾನ್।।

ಭಾರದ್ವಾಜನಾದರೋ ಅವರನ್ನು ನೋಡಿ ಬಲವತ್ತಾಗಿ ನಿನಾದಿಸಿ ಶರವರ್ಷಗಳನ್ನು ಸುರಿಸಿ ಆ ಸುದುರ್ಜಯರನ್ನು ಸಂಹರಿಸಿದನು.

10008048a ತತಃ ಪರಮಸಂಕ್ರುದ್ಧಃ ಪಿತುರ್ವಧಮನುಸ್ಮರನ್।
10008048c ಅವರುಹ್ಯ ರಥೋಪಸ್ಥಾತ್ತ್ವರಮಾಣೋಽಭಿದುದ್ರುವೇ।।

ಆಗ ತಂದೆಯ ವಧೆಯನ್ನು ನೆನಪಿಸಿಕೊಂಡು ಪರಮ ಸಂಕ್ರುದ್ಧನಾದ ಅಶ್ವತ್ಥಾಮನು ರಥದಿಂದ ಕೆಳಗಿಳಿದು ತ್ವರೆಮಾಡಿ ಆಕ್ರಮಣಿಸಿದನು.

10008049a ಸಹಸ್ರಚಂದ್ರಂ ವಿಪುಲಂ ಗೃಹೀತ್ವಾ ಚರ್ಮ ಸಂಯುಗೇ।
10008049c ಖಡ್ಗಂ ಚ ವಿಪುಲಂ ದಿವ್ಯಂ ಜಾತರೂಪಪರಿಷ್ಕೃತಂ।
10008049e ದ್ರೌಪದೇಯಾನಭಿದ್ರುತ್ಯ ಖಡ್ಗೇನ ವ್ಯಚರದ್ ಬಲೀ।।

ಸಹಸ್ರಚಂದ್ರಗಳುಳ್ಳ ವಿಶಾಲ ಗುರಾಣಿಯನ್ನು ಮತ್ತು ಬಂಗಾರದಿಂದ ಪರಿಷ್ಕೃತಗೊಂಡಿದ್ದ ವಿಶಾಲ ದಿವ್ಯ ಖಡ್ಗವನ್ನು ಹಿಡಿದು ಬಲಶಾಲೀ ಅಶ್ವತ್ಥಾಮನು ಸಂಯುಗದಲ್ಲಿ ದ್ರೌಪದೇಯರನ್ನು ಖಡ್ಗದಿಂದ ಆಕ್ರಮಣಿಸುತ್ತಾ ಸಂಚರಿಸಿದನು.

10008050a ತತಃ ಸ ನರಶಾರ್ದೂಲಃ ಪ್ರತಿವಿಂಧ್ಯಂ ತಮಾಹವೇ।
10008050c ಕುಕ್ಷಿದೇಶೇಽವಧೀದ್ರಾಜನ್ಸ ಹತೋ ನ್ಯಪತದ್ಭುವಿ।।

ರಾಜನ್! ಆಗ ಆ ನರಶಾರ್ದೂಲನು ರಣದಲ್ಲಿ ಪ್ರತಿವಿಂಧ್ಯನ ಹೊಟ್ಟೆಯನ್ನು ತಿವಿಯಲು ಅವನು ಹತನಾಗಿ ಭೂಮಿಯ ಮೇಲೆ ಬಿದ್ದನು.

10008051a ಪ್ರಾಸೇನ ವಿದ್ಧ್ವಾ ದ್ರೌಣಿಂ ತು ಸುತಸೋಮಃ ಪ್ರತಾಪವಾನ್।
10008051c ಪುನಶ್ಚಾಸಿಂ ಸಮುದ್ಯಮ್ಯ ದ್ರೋಣಪುತ್ರಮುಪಾದ್ರವತ್।।

ಪ್ರತಾಪವಾನ್ ಸುತಸೋಮನಾದರೋ ದ್ರೌಣಿಯನ್ನು ಪ್ರಾಸದಿಂದ ಹೊಡೆದು ಪುನಃ ಖಡ್ಗವನ್ನೆತ್ತಿ ದ್ರೋಣಪುತ್ರನನ್ನು ಆಕ್ರಮಣಿಸಿದನು.

10008052a ಸುತಸೋಮಸ್ಯ ಸಾಸಿಂ ತು ಬಾಹುಂ ಚಿತ್ತ್ವಾ ನರರ್ಷಭಃ।
10008052c ಪುನರಭ್ಯಹನತ್ಪಾರ್ಶ್ವೇ ಸ ಭಿನ್ನಹೃದಯೋಽಪತತ್।।

ನರರ್ಷಭನು ಖಡ್ಗವನ್ನು ಹಿಡಿದಿದ್ದ ಸುತಸೋಮನ ಬಾಹುವನ್ನು ಕತ್ತರಿಸಿ ಪುನಃ ಅವನ ಪಕ್ಕೆಗೆ ಹೊಡೆಯಲು ಅವನು ಹೃದಯವೊಡೆದು ಬಿದ್ದನು.

10008053a ನಾಕುಲಿಸ್ತು ಶತಾನೀಕೋ ರಥಚಕ್ರೇಣ ವೀರ್ಯವಾನ್।
10008053c ದೋರ್ಭ್ಯಾಮುತ್ಕ್ಷಿಪ್ಯ ವೇಗೇನ ವಕ್ಷಸ್ಯೇನಮತಾಡಯತ್।।

ವೀರ್ಯವಾನ್ ನಾಕುಲಿ ಶತಾನೀಕನಾದರೋ ತನ್ನೆರಡು ಭುಜಗಳಿಂದಲೂ ರಥಚಕ್ರವನ್ನು ಮೇಲೆತ್ತಿ ರಭಸದಿಂದ ಅಶ್ವತ್ಥಾಮನ ಎದೆಯಮೇಲೆ ಪ್ರಹರಿಸಿದನು.

10008054a ಅತಾಡಯಚ್ಚತಾನೀಕಂ ಮುಕ್ತಚಕ್ರಂ ದ್ವಿಜಸ್ತು ಸಃ।
10008054c ಸ ವಿಹ್ವಲೋ ಯಯೌ ಭೂಮಿಂ ತತೋಽಸ್ಯಾಪಾಹರಚ್ಚಿರಃ।।

ಆ ದ್ವಿಜನಾದರೋ ಚಕ್ರವನ್ನು ಬಿಸುಟ ಶತಾನೀಕನನ್ನು ಹೊಡೆದು ಅವನು ವಿಹ್ವಲನಾಗಿ ಭೂಮಿಯ ಮೇಲೆ ಬೀಳಲು ಅವನ ಶಿರವನ್ನು ಅಪಹರಿಸಿದನು.

10008055a ಶ್ರುತಕರ್ಮಾ ತು ಪರಿಘಂ ಗೃಹೀತ್ವಾ ಸಮತಾಡಯತ್।
10008055c ಅಭಿದ್ರುತ್ಯ ತತೋ ದ್ರೌಣಿಂ ಸವ್ಯೇ ಸ ಫಲಕೇ ಭೃಶಂ।।

ಆಗ ಶ್ರುತಕರ್ಮನು ಪರಿಘವನ್ನು ಹಿಡಿದು ದ್ರೌಣಿಯನ್ನು ಬೆನ್ನಟ್ಟಿ ಅವನ ಎಡಗೈಯನ್ನು ಬಲವಾಗಿ ಪ್ರಹರಿಸಿದನು.

10008056a ಸ ತು ತಂ ಶ್ರುತಕರ್ಮಾಣಮಾಸ್ಯೇ ಜಘ್ನೇ ವರಾಸಿನಾ।
10008056c ಸ ಹತೋ ನ್ಯಪತದ್ಭೂಮೌ ವಿಮೂಢೋ ವಿಕೃತಾನನಃ।।

ಅಶ್ವತ್ಥಾಮನಾದರೋ ಶ್ರುತಕರ್ಮನನ್ನು ಶ್ರೇಷ್ಠ ಖಡ್ಗದಿಂದ ಹೊಡೆದು ಸಂಹರಿಸಲು ಅವನು ಹತನಾಗಿ ವಿಕೃತ ಮುಖವುಳ್ಳವನಾಗಿ ವಿಮೂಢನಾಗಿ ನೆಲದ ಮೇಲೆ ಬಿದ್ದನು.

10008057a ತೇನ ಶಬ್ದೇನ ವೀರಸ್ತು ಶ್ರುತಕೀರ್ತಿರ್ಮಹಾಧನುಃ।
10008057c ಅಶ್ವತ್ಥಾಮಾನಮಾಸಾದ್ಯ ಶರವರ್ಷೈರವಾಕಿರತ್।।

ಆ ಶಬ್ಧವನ್ನು ಕೇಳಿದ ಮಹಾಧನ್ವಿ ವೀರ ಶ್ರುತಕೀರ್ತಿಯು ಅಶ್ವತ್ಥಾಮನ ಬಳಿಸಾರಿ ಅವನನ್ನು ಶರವರ್ಷಗಳಿಂದ ಮುಚ್ಚಿದನು.

10008058a ತಸ್ಯಾಪಿ ಶರವರ್ಷಾಣಿ ಚರ್ಮಣಾ ಪ್ರತಿವಾರ್ಯ ಸಃ।
10008058c ಸಕುಂಡಲಂ ಶಿರಃ ಕಾಯಾದ್ ಭ್ರಾಜಮಾನಮಪಾಹರತ್।।

ಅವನ ಶರವರ್ಷಗಳನ್ನು ಕೂಡ ಗುರಾಣಿಯಿಂದ ತಡೆದು ಅಶ್ವತ್ಥಾಮನು ಕುಂಡಲಗಳೊಂದಿಗೆ ಹೊಳೆಯುತ್ತಿದ್ದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿದನು.

10008059a ತತೋ ಭೀಷ್ಮನಿಹಂತಾ ತಂ ಸಹ ಸರ್ವೈಃ ಪ್ರಭದ್ರಕೈಃ।
10008059c ಅಹನತ್ಸರ್ವತೋ ವೀರಂ ನಾನಾಪ್ರಹರಣೈರ್ಬಲೀ।
10008059e ಶಿಲೀಮುಖೇನ ಚಾಪ್ಯೇನಂ ಭ್ರುವೋರ್ಮಧ್ಯೇ ಸಮಾರ್ದಯತ್।।

ಆಗ ಭೀಷ್ಮಹಂತಕ ಶಿಖಂಡಿಯು ಸರ್ವ ಪ್ರಭದ್ರಕರೊಂದಿಗೆ ನಾನಾ ಪ್ರಹರಣಗಳಿಂದ ಬಲಶಾಲೀ ಅಶ್ವತ್ಥಾಮನನ್ನು ಎಲ್ಲ ಕಡೆಗಳಿಂದ ಮುತ್ತಿದನು. ಮತ್ತು ಶಿಲೀಮುಖದಿಂದ ಅವನ ಹುಬ್ಬುಗಳ ಮಧ್ಯೆ ಹೊಡೆದನು.

10008060a ಸ ತು ಕ್ರೋಧಸಮಾವಿಷ್ಟೋ ದ್ರೋಣಪುತ್ರೋ ಮಹಾಬಲಃ।
10008060c ಶಿಖಂಡಿನಂ ಸಮಾಸಾದ್ಯ ದ್ವಿಧಾ ಚಿಚ್ಚೇದ ಸೋಽಸಿನಾ।।

ಅದರಿಂದ ಕ್ರೋಧಸಮಾವಿಷ್ಟನಾದ ಮಹಾಬಲಿ ದ್ರೋಣಪುತ್ರನು ಶಿಖಂಡಿಯ ಬಳಿಸಾರಿ ಖಡ್ಗದಿಂದ ಅವನನ್ನು ಎರಡಾಗಿ ಸೀಳಿದನು.

10008061a ಶಿಖಂಡಿನಂ ತತೋ ಹತ್ವಾ ಕ್ರೋಧಾವಿಷ್ಟಃ ಪರಂತಪಃ।
10008061c ಪ್ರಭದ್ರಕಗಣಾನ್ಸರ್ವಾನಭಿದುದ್ರಾವ ವೇಗವಾನ್।
10008061e ಯಚ್ಚ ಶಿಷ್ಟಂ ವಿರಾಟಸ್ಯ ಬಲಂ ತಚ್ಚ ಸಮಾದ್ರವತ್।।

ಶಿಖಂಡಿಯನ್ನು ಸಂಹರಿಸಿ ಕ್ರೋಧಾವಿಷ್ಟನಾದ ವೇಗವಾನ್ ಪರಂತಪನು ಪ್ರಭದ್ರಕ ಗಣಗಳೆಲ್ಲವನ್ನೂ ಆಕ್ರಮಣಿಸಿದನು. ಹಾಗೆಯೇ ಉಳಿದಿದ್ದ ವಿರಾಟನ ಸೇನೆಯನ್ನೂ ಆಕ್ರಮಣಿಸಿದನು.

10008062a ದ್ರುಪದಸ್ಯ ಚ ಪುತ್ರಾಣಾಂ ಪೌತ್ರಾಣಾಂ ಸುಹೃದಾಮಪಿ।
10008062c ಚಕಾರ ಕದನಂ ಘೋರಂ ದೃಷ್ಟ್ವಾ ದೃಷ್ಟ್ವಾ ಮಹಾಬಲಃ।।

ಆ ಮಹಾಬಲನು ದ್ರುಪದನ ಪುತ್ರರು, ಪೌತ್ರರು ಮತ್ತು ಸುಹೃದರನ್ನು ಬಿಡದೇ ಹುಡುಕಿ ಹುಡುಕಿ ಘೋರ ಕದನವನ್ನು ನಡೆಸಿದನು.

10008063a ಅನ್ಯಾನನ್ಯಾಂಶ್ಚ ಪುರುಷಾನಭಿಸೃತ್ಯಾಭಿಸೃತ್ಯ ಚ।
10008063c ನ್ಯಕೃಂತದಸಿನಾ ದ್ರೌಣಿರಸಿಮಾರ್ಗವಿಶಾರದಃ।।

ಖಡ್ಗಪ್ರಹರಣದಲ್ಲಿ ವಿಶಾರದನಾದ ದ್ರೌಣಿಯು ಅನ್ಯ ಅನ್ಯ ಯೋಧರ ಬಳಿಗೆ ಹೋಗಿ ನಿದ್ರಿಸುತ್ತಿದ್ದ ಎಲ್ಲರನ್ನೂ ಖಡ್ಗದಿಂದ ಕತ್ತರಿಸಿ ಹಾಕಿದನು.

10008064a ಕಾಲೀಂ ರಕ್ತಾಸ್ಯನಯನಾಂ ರಕ್ತಮಾಲ್ಯಾನುಲೇಪನಾಂ।
10008064c ರಕ್ತಾಂಬರಧರಾಮೇಕಾಂ ಪಾಶಹಸ್ತಾಂ ಶಿಖಂಡಿನೀಂ।।
10008065a ದದೃಶುಃ ಕಾಲರಾತ್ರಿಂ ತೇ ಸ್ಮಯಮಾನಾಮವಸ್ಥಿತಾಂ।
10008065c ನರಾಶ್ವಕುಂಜರಾನ್ಪಾಶೈರ್ಬದ್ಧ್ವಾ ಘೋರೈಃ ಪ್ರತಸ್ಥುಷೀಂ।
10008065e ಹರಂತೀಂ ವಿವಿಧಾನ್ಪ್ರೇತಾನ್ಪಾಶಬದ್ಧಾನ್ವಿಮೂರ್ಧಜಾನ್।।

ಅವರು ನಸುನಗುತ್ತಾ ಕುಳಿತಿರುವ, ಕೆಂಪು ಮುಖ ಮತ್ತು ಕಣ್ಣುಗಳುಳ್ಳ, ಕೆಂಪು ಮಾಲೆ ಮತ್ತು ಲೇಪನಗಳನ್ನು ಧರಿಸಿರುವ, ಕೆಂಪು ವಸ್ತ್ರವನ್ನು ಉಟ್ಟಿರುವ, ಪಾಶವನ್ನು ಹಿಡಿದಿರುವ ಏಕಾಂಗೀ, ಶಿಖಂಡಿನೀ, ಕಾಲೀ ಕಾಲರಾತ್ರಿಯನ್ನು ನೋಡಿದರು. ಅವಳು ಮನುಷ್ಯ-ಕುದುರೆ-ಕುಂಜರಗಳನ್ನು ಪಾಶಗಳಲ್ಲಿ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದಳು. ಅವಳು ಬೋಳುತಲೆಯ ವಿವಿಧ ಪ್ರೇತಗಳನ್ನು ಪಾಶಗಳಲ್ಲಿ ಬಂಧಿಸಿ ಸೆಳೆದುಕೊಂಡು ಹೋಗುತ್ತಿದ್ದಳು.

10008066a ಸ್ವಪ್ನೇ ಸುಪ್ತಾನ್ನಯಂತೀಂ ತಾಂ ರಾತ್ರಿಷ್ವನ್ಯಾಸು ಮಾರಿಷ।
10008066c ದದೃಶುರ್ಯೋಧಮುಖ್ಯಾಸ್ತೇ ಘ್ನಂತಂ ದ್ರೌಣಿಂ ಚ ನಿತ್ಯದಾ।।

ಮಾರಿಷ! ಆ ಯೋಧಪ್ರಮುಖರು ಮಲಗಿದ್ದಾಗ ನಿತ್ಯವೂ ಕೊಂಡೊಯ್ಯುತ್ತಿದ್ದ ಕಾಳಿಯನ್ನು ಮತ್ತು ಸಂಹರಿಸುತ್ತಿದ್ದ ದ್ರೌಣಿಯನ್ನು ಸ್ವಪ್ನದಲ್ಲಿ ಕಾಣುತ್ತಿದ್ದರು.

10008067a ಯತಃ ಪ್ರವೃತ್ತಃ ಸಂಗ್ರಾಮಃ ಕುರುಪಾಂಡವಸೇನಯೋಃ।
10008067c ತತಃ ಪ್ರಭೃತಿ ತಾಂ ಕೃತ್ಯಾಮಪಶ್ಯನ್ದ್ರೌಣಿಮೇವ ಚ।।

ಕುರುಪಾಂಡವ ಸೇನೆಗಳ ಸಂಗ್ರಾಮವು ಪ್ರಾರಂಭವಾದಾಗಿನಿಂದಲೇ ಅವರು ಆ ಕಾಳಿಯ ಮತ್ತು ದ್ರೌಣಿಯ ಕೃತ್ಯಗಳನ್ನು ಕನಸಿನಲ್ಲಿ ಕಾಣುತ್ತಿದ್ದರು.

10008068a ತಾಂಸ್ತು ದೈವಹತಾನ್ಪೂರ್ವಂ ಪಶ್ಚಾದ್ದ್ರೌಣಿರ್ನ್ಯಪಾತಯತ್।
10008068c ತ್ರಾಸಯನ್ಸರ್ವಭೂತಾನಿ ವಿನದನ್ಭೈರವಾನ್ರವಾನ್।।

ಮೊದಲೇ ದೈವದಿಂದ ಹತರಾದ ಅವರನ್ನು ದ್ರೌಣಿಯು ನಂತರ ಕೆಳಗುರುಳಿಸಿ, ಸರ್ವಭೂತಗಳನ್ನೂ ಭಯಗೊಳಿಸುವಂತೆ ಭೈರವ ಕೂಗನ್ನು ಕೂಗಿದನು.

10008069a ತದನುಸ್ಮೃತ್ಯ ತೇ ವೀರಾ ದರ್ಶನಂ ಪೌರ್ವಕಾಲಿಕಂ।
10008069c ಇದಂ ತದಿತ್ಯಮನ್ಯಂತ ದೈವೇನೋಪನಿಪೀಡಿತಾಃ।।

ದೈವದಿಂದ ಪೀಡಿತರಾದ ಆ ವೀರರು ಹಿಂದೆ ಕನಸಿನಲ್ಲಿ ಕಂಡ ಕಾಲಿಕೆಯನ್ನು ಸ್ಮರಿಸಿಕೊಂಡು ಇದು ಅದೇ ಎಂದು ಅಂದುಕೊಂಡರು.

10008070a ತತಸ್ತೇನ ನಿನಾದೇನ ಪ್ರತ್ಯಬುಧ್ಯಂತ ಧನ್ವಿನಃ।
10008070c ಶಿಬಿರೇ ಪಾಂಡವೇಯಾನಾಂ ಶತಶೋಽಥ ಸಹಸ್ರಶಃ।।

ಆಗ ಆ ಕೋಲಾಹಲದಿಂದ ಪಾಂಡವೇಯರ ಶಿಬಿರದಲ್ಲಿದ್ದ ನೂರಾರು ಸಹಸ್ರಾರು ಧನ್ವಿಗಳು ಎಚ್ಚೆತ್ತರು.

10008071a ಸೋಽಚ್ಚಿನತ್ಕಸ್ಯ ಚಿತ್ಪಾದೌ ಜಘನಂ ಚೈವ ಕಸ್ಯ ಚಿತ್।
10008071c ಕಾಂಶ್ಚಿದ್ಬಿಭೇದ ಪಾರ್ಶ್ವೇಷು ಕಾಲಸೃಷ್ಟ ಇವಾಂತಕಃ।।

ಕಾಲವು ಸೃಷ್ಟಿಸಿದ ಅಂತಕನಂತೆ ದ್ರೌಣಿಯು ಅವರಲ್ಲಿ ಕೆಲವರನ್ನು ತುಂಡರಿಸಿದನು. ಕೆಲವರನ್ನು ಪಾದಗಳಿಂದ ತುಳಿದು ಕೊಂದನು. ಇನ್ನು ಕೆಲವರನ್ನು ಪಕ್ಕೆಗಳಲ್ಲಿ ತಿವಿದು ಕೊಂದನು.

10008072a ಅತ್ಯುಗ್ರಪ್ರತಿಪಿಷ್ಟೈಶ್ಚ ನದದ್ಭಿಶ್ಚ ಭೃಶಾತುರೈಃ।
10008072c ಗಜಾಶ್ವಮಥಿತೈಶ್ಚಾನ್ಯೈರ್ಮಹೀ ಕೀರ್ಣಾಭವತ್ಪ್ರಭೋ।।

ಪ್ರಭೋ! ಆ ಶಿಬಿರ ಪ್ರದೇಶವು ಅತಿ ಉಗ್ರರೀತಿಯಲ್ಲಿ ಉಂಡೆಯಾಗಿಬಿಟ್ಟಿದ್ದ, ಆತುರದಿಂದ ಜೋರಾಗಿ ಕೂಗುತ್ತಿದ್ದ ಯೋಧರಿಂದಲೂ, ಅನ್ಯ ಆನೆ-ಕುದುರೆಗಳಿಂದಲೂ ತುಂಬಿಹೋಯಿತು.

10008073a ಕ್ರೋಶತಾಂ ಕಿಮಿದಂ ಕೋಽಯಂ ಕಿಂ ಶಬ್ದಃ ಕಿಂ ನು ಕಿಂ ಕೃತಂ।
10008073c ಏವಂ ತೇಷಾಂ ತದಾ ದ್ರೌಣಿರಂತಕಃ ಸಮಪದ್ಯತ।।

“ಇದೇನಿದು? ಇವನ್ಯಾರು? ಏನು ಶಬ್ಧ? ಇವನೇನು ಮಾಡುತ್ತಿರುವನು?” ಎಂದು ಕೂಗಿಕೊಳ್ಳುತ್ತಿರುವ ಅವರಿಗೆ ದ್ರೌಣಿಯು ಅಂತಕನಾದನು.

10008074a ಅಪೇತಶಸ್ತ್ರಸಂನಾಹಾನ್ಸಂರಬ್ಧಾನ್ಪಾಂಡುಸೃಂಜಯಾನ್।
10008074c ಪ್ರಾಹಿಣೋನ್ಮೃತ್ಯುಲೋಕಾಯ ದ್ರೌಣಿಃ ಪ್ರಹರತಾಂ ವರಃ।।

ಪ್ರಹರಿಗಳಲ್ಲಿ ಶ್ರೇಷ್ಠ ದ್ರೌಣಿಯು ಶಸ್ತ್ರಗಳನ್ನು ಕೆಳಗಿಟ್ಟಿದ್ದ, ಶಸ್ತ್ರಗಳನ್ನು ತೊಟ್ಟಿದ್ದ ಆದರೆ ಗಾಬರಿಗೊಂಡಿದ್ದ ಪಾಂಡು-ಸೃಂಜಯರನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.

10008075a ತತಸ್ತಚ್ಚಸ್ತ್ರವಿತ್ರಸ್ತಾ ಉತ್ಪತಂತೋ ಭಯಾತುರಾಃ।
10008075c ನಿದ್ರಾಂಧಾ ನಷ್ಟಸಂಜ್ಞಾಶ್ಚ ತತ್ರ ತತ್ರ ನಿಲಿಲ್ಯಿರೇ।।

ನಿದ್ರೆಯಿಂದ ಕುರುಡರಾಗಿ ಸಂಜ್ಞೆಗಳನ್ನು ಕಳೆದುಕೊಂಡಿದ್ದ ಅವರು ಭಯಾತುರರಾಗಿ ಶಸ್ತ್ರಗಳನ್ನು ಅಲ್ಲಲ್ಲಿಯೇ ಬಿಸುಟು ಹಾರಿ ಅಲ್ಲಲ್ಲಿಯೇ ಅಡಗಿಕೊಳುತ್ತಿದ್ದರು.

10008076a ಊರುಸ್ತಂಭಗೃಹೀತಾಶ್ಚ ಕಶ್ಮಲಾಭಿಹತೌಜಸಃ।
10008076c ವಿನದಂತೋ ಭೃಶಂ ತ್ರಸ್ತಾಃ ಸಂನ್ಯಪೇಷನ್ಪರಸ್ಪರಂ।।

ಕೆಲವರ ತೊಡೆಗಳು ಕಂಭಗಳಂತಾಗಿ ಬಗ್ಗಿಸಲಾಗದೇ ಹಿಡಿದುಕೊಂಡಿದ್ದವು. ದುಃಖದಿಂದ ಅವರ ಉತ್ಸಾಹಗಳು ಉಡುಗಿಹೋಗಿದ್ದವು. ನಡುಗಿ ಜೋರಾಗಿ ಕೂಗಿಕೊಳ್ಳುತ್ತಾ ಪರಸ್ಪರರನ್ನು ಅಪ್ಪಿಕೊಳ್ಳುತ್ತಿದ್ದರು.

10008077a ತತೋ ರಥಂ ಪುನರ್ದ್ರೌಣಿರಾಸ್ಥಿತೋ ಭೀಮನಿಸ್ವನಂ।
10008077c ಧನುಷ್ಪಾಣಿಃ ಶರೈರನ್ಯಾನ್ಪ್ರೇಷಯದ್ವೈ ಯಮಕ್ಷಯಂ।।

ಅನಂತರ ದ್ರೌಣಿಯು ಪುನಃ ಭಯಂಕರ ಶಬ್ಧವುಳ್ಳ ರಥವನ್ನೇರಿ ಧನುಷ್ಪಾಣಿಯಾಗಿ ಅನ್ಯರನ್ನೂ ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.

10008078a ಪುನರುತ್ಪತತಃ ಕಾಂಶ್ಚಿದ್ದೂರಾದಪಿ ನರೋತ್ತಮಾನ್।
10008078c ಶೂರಾನ್ಸಂಪತತಶ್ಚಾನ್ಯಾನ್ಕಾಲರಾತ್ರ್ಯೈ ನ್ಯವೇದಯತ್।।

ಹಾರುತ್ತಿದ್ದ ಮತ್ತು ತನ್ನ ಮೇಲೆ ಬೀಳುತ್ತಿದ್ದ ನರೋತ್ತಮ ಶೂರರನ್ನು ಅವರೆಷ್ಟೇ ದೂರದಲ್ಲಿದ್ದರೂ ಸಂಹರಿಸಿ ಕಾಲರಾತ್ರಿಗೆ ನೈವೇದ್ಯವಾಗಿಸುತ್ತಿದ್ದನು.

10008079a ತಥೈವ ಸ್ಯಂದನಾಗ್ರೇಣ ಪ್ರಮಥನ್ಸ ವಿಧಾವತಿ।
10008079c ಶರವರ್ಷೈಶ್ಚ ವಿವಿಧೈರವರ್ಷಚ್ಚಾತ್ರವಾಂಸ್ತತಃ।।

ಅದೇ ರೀತಿಯಲ್ಲಿ ರಥದ ಎದಿರು ನಿಂತ ಶತ್ರುಗಳನ್ನು ಮರ್ದಿಸಿದನು. ವಿವಧ ಶರವರ್ಷಗಳನ್ನು ಅವರ ಮೇಲೆ ಸುರಿಸಿದನು.

10008080a ಪುನಶ್ಚ ಸುವಿಚಿತ್ರೇಣ ಶತಚಂದ್ರೇಣ ಚರ್ಮಣಾ।
10008080c ತೇನ ಚಾಕಾಶವರ್ಣೇನ ತದಾಚರತ ಸೋಽಸಿನಾ।।

ಪುನಃ ಅವನು ಶತಚಂದ್ರರ ಚಿತ್ರಗಳಿರುವ ಗುರಾಣಿಯನ್ನೂ ಆಕಾಶವರ್ಣದ ಖಡ್ಗವನ್ನೂ ತಿರುಗಿಸುತ್ತಾ ಸಂಚರಿಸುತ್ತಿದ್ದನು.

10008081a ತಥಾ ಸ ಶಿಬಿರಂ ತೇಷಾಂ ದ್ರೌಣಿರಾಹವದುರ್ಮದಃ।
10008081c ವ್ಯಕ್ಷೋಭಯತ ರಾಜೇಂದ್ರ ಮಹಾಹ್ರದಮಿವ ದ್ವಿಪಃ।।

ರಾಜೇಂದ್ರ! ಹಾಗೆ ಯುದ್ಧದುರ್ಮದ ದ್ರೌಣಿಯು ಆ ಶಿಬಿರವನ್ನು ಒಂದು ಸಲಗವು ಮಹಾಸರೋವರವನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ಧ್ವಂಸಮಾಡಿದನು.

10008082a ಉತ್ಪೇತುಸ್ತೇನ ಶಬ್ದೇನ ಯೋಧಾ ರಾಜನ್ವಿಚೇತಸಃ।
10008082c ನಿದ್ರಾರ್ತಾಶ್ಚ ಭಯಾರ್ತಾಶ್ಚ ವ್ಯಧಾವಂತ ತತಸ್ತತಃ।।

ರಾಜನ್! ನಿದ್ರೆ ಮತ್ತು ಬಳಲಿಕೆಯಿಂದ ವಿಚೇತಸರಾಗಿದ್ದ ಯೋಧರು ಆ ಶಬ್ಧದಿಂದ ಎಚ್ಚೆತ್ತು ಭಯಾರ್ತರಾಗಿ ಅಲ್ಲಿಂದಲ್ಲಿಗೆ ಓಡಿಹೋಗುತ್ತಿದ್ದರು.

10008083a ವಿಸ್ವರಂ ಚುಕ್ರುಶುಶ್ಚಾನ್ಯೇ ಬಹ್ವಬದ್ಧಂ ತಥಾವದನ್।
10008083c ನ ಚ ಸ್ಮ ಪ್ರತಿಪದ್ಯಂತೇ ಶಸ್ತ್ರಾಣಿ ವಸನಾನಿ ಚ।।

ಇತರರು ವಿಸ್ವರವಾಗಿ ಕೂಗಿಕೊಳ್ಳುತ್ತಿದ್ದರು. ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ಕೆಲವರಿಗೆ ಶಸ್ತ್ರಗಳಾಗಲೀ ಕವಚಗಳಾಗಲೀ ದೊರೆಯುತ್ತಲೇ ಇರಲಿಲ್ಲ.

10008084a ವಿಮುಕ್ತಕೇಶಾಶ್ಚಾಪ್ಯನ್ಯೇ ನಾಭ್ಯಜಾನನ್ಪರಸ್ಪರಂ।
10008084c ಉತ್ಪತಂತಃ ಪರೇ ಭೀತಾಃ ಕೇ ಚಿತ್ತತ್ರ ತಥಾಭ್ರಮನ್।
10008084e ಪುರೀಷಮಸೃಜನ್ ಕೇ ಚಿತ್ ಕೇ ಚಿನ್ಮೂತ್ರಂ ಪ್ರಸುಸ್ರುವುಃ।।

ಕೆಲವರು ಕೂದಲುಬಿಚ್ಚಿಕೊಂಡಿದ್ದರು. ಇನ್ನು ಕೆಲವರು ಪರಸ್ಪರರನ್ನು ಗುರುತಿಸುತ್ತಿರಲಿಲ್ಲ. ಇತರರು ಭೀತರಾಗಿ ಕುಪ್ಪಳಿಸುತ್ತಿದ್ದರೆ ಇನ್ನು ಕೆಲವರು ಅಲ್ಲಲ್ಲಿಯೇ ಸುತ್ತುತ್ತಿದ್ದರು. ಕೆಲವರು ಮಲವಿಸರ್ಜನೆ ಮಾಡಿದರೆ ಇನ್ನು ಕೆಲವರು ಮೂತ್ರವಿಸರ್ಜನೆ ಮಾಡಿದರು.

10008085a ಬಂಧನಾನಿ ಚ ರಾಜೇಂದ್ರ ಸಂಚಿದ್ಯ ತುರಗಾ ದ್ವಿಪಾಃ।
10008085c ಸಮಂ ಪರ್ಯಪತಂಶ್ಚಾನ್ಯೇ ಕುರ್ವಂತೋ ಮಹದಾಕುಲಂ।।

ರಾಜೇಂದ್ರ! ಆನೆ-ಕುದುರೆಗಳು ಕಟ್ಟನ್ನು ಬಿಚ್ಚಿಕೊಂಡು ಓಡಿಹೋಗಿ ಅನ್ಯರಿಗೆ ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು.

10008086a ತತ್ರ ಕೇ ಚಿನ್ನರಾ ಭೀತಾ ವ್ಯಲೀಯಂತ ಮಹೀತಲೇ।
10008086c ತಥೈವ ತಾನ್ನಿಪತಿತಾನಪಿಂಷನ್ಗಜವಾಜಿನಃ।।

ಅಲ್ಲಿ ಕೆಲವರು ಭೀತರಾಗಿ ನೆಲದಮೇಲೆಯೇ ಅಡಗಿರಲು ಅವರನ್ನೇ ಓಡಿಹೋಗುತ್ತಿದ್ದ ಆನೆ-ಕುದುರೆಗಳು ತುಳಿದು ಸಾಯಿಸುತ್ತಿದ್ದವು.

10008087a ತಸ್ಮಿಂಸ್ತಥಾ ವರ್ತಮಾನೇ ರಕ್ಷಾಂಸಿ ಪುರುಷರ್ಷಭ।
10008087c ತೃಪ್ತಾನಿ ವ್ಯನದನ್ನುಚ್ಚೈರ್ಮುದಾ ಭರತಸತ್ತಮ।।

ಪುರುಷರ್ಷಭ! ಭರತಸತ್ತಮ! ಅಲ್ಲಿ ಹಾಗೆ ನಡೆಯುತ್ತಿರುವಾಗ ರಾಕ್ಷಸರು ತೃಪ್ತರಾಗಿ ಮುದದಿಂದ ನಾದಗೈಯುತ್ತಿದ್ದರು.

10008088a ಸ ಶಬ್ದಃ ಪ್ರೇರಿತೋ ರಾಜನ್ಭೂತಸಂಘೈರ್ಮುದಾ ಯುತೈಃ।
10008088c ಅಪೂರಯದ್ದಿಶಃ ಸರ್ವಾ ದಿವಂ ಚಾಪಿ ಮಹಾಸ್ವನಃ।।

ರಾಜನ್! ಮುದಿತ ಭೂತಸಂಘಗಳಿಂದ ಪ್ರೇರಿತ ಆ ಶಬ್ಧವು ಜೋರಾಗಿ ದಿಕ್ಕುಗಳೆಲ್ಲವನ್ನೂ ಆಕಾಶವನ್ನೂ ತುಂಬಿತು.

10008089a ತೇಷಾಮಾರ್ತಸ್ವರಂ ಶ್ರುತ್ವಾ ವಿತ್ರಸ್ತಾ ಗಜವಾಜಿನಃ।
10008089c ಮುಕ್ತಾಃ ಪರ್ಯಪತನ್ರಾಜನ್ಮೃದ್ನಂತಃ ಶಿಬಿರೇ ಜನಂ।।

ರಾಜನ್! ಅವರ ಆರ್ತಸ್ವರವನ್ನು ಕೇಳಿ ಬೆದರಿದ ಆನೆ-ಕುದುರೆಗಳು ಕಟ್ಟುಗಳನ್ನು ಕಿತ್ತುಕೊಂಡು ಶಿಬಿರದಲ್ಲಿದ್ದ ಜನರನ್ನು ತುಳಿದು ನಾಶಗೊಳಿಸಿದವು.

10008090a ತೈಸ್ತತ್ರ ಪರಿಧಾವದ್ಭಿಶ್ಚರಣೋದೀರಿತಂ ರಜಃ।
10008090c ಅಕರೋಚ್ಚಿಬಿರೇ ತೇಷಾಂ ರಜನ್ಯಾಂ ದ್ವಿಗುಣಂ ತಮಃ।।

ಅಲ್ಲಿ ಓಡಿಹೋಗುತ್ತಿದ್ದ ಅವುಗಳ ಕಾಲುಗಳಿಂದ ಮೇಲೇರಿದ ಧೂಳು ಶಿಬಿರದಲ್ಲಿ ಕವಿದ ರಾತ್ರಿಯ ಕತ್ತಲೆಯನ್ನು ದ್ವಿಗುಣಗೊಳಿಸಿತು.

10008091a ತಸ್ಮಿಂಸ್ತಮಸಿ ಸಂಜಾತೇ ಪ್ರಮೂಢಾಃ ಸರ್ವತೋ ಜನಾಃ।
10008091c ನಾಜಾನನ್ಪಿತರಃ ಪುತ್ರಾನ್ಭ್ರಾತೄನ್ಭ್ರಾತರ ಏವ ಚ।।

ಹಾಗೆ ಕಪ್ಪಾಗಲು ಎಲ್ಲಕಡೆ ಜನರು ಪ್ರಮೂಢರಾದರು. ತಂದೆಯಂದಿರು ಮಕ್ಕಳನ್ನೂ ಸಹೋದರರು ಸಹೋದರರನ್ನೂ ಗುರುತಿಸಲಾರದೇ ಹೋದರು.

10008092a ಗಜಾ ಗಜಾನತಿಕ್ರಮ್ಯ ನಿರ್ಮನುಷ್ಯಾ ಹಯಾ ಹಯಾನ್।
10008092c ಅತಾಡಯಂಸ್ತಥಾಭಂಜಂಸ್ತಥಾಮೃದ್ನಂಶ್ಚ ಭಾರತ।।

ಭಾರತ! ಸವಾರರಿಲ್ಲದ ಆನೆಗಳು ಆನೆಗಳನ್ನು ಮತ್ತು ಕುದುರೆಗಳು ಕುದುರೆಗಳನ್ನು ಆಕ್ರಮಿಣಿಸಿ, ಕಾಲಿನಿಂದ ತುಳಿದು ನಾಶಗೊಳಿಸುತ್ತಿದ್ದವು.

10008093a ತೇ ಭಗ್ನಾಃ ಪ್ರಪತಂತಶ್ಚ ನಿಘ್ನಂತಶ್ಚ ಪರಸ್ಪರಂ।
10008093c ನ್ಯಪಾತಯಂತ ಚ ಪರಾನ್ಪಾತಯಿತ್ವಾ ತಥಾಪಿಷನ್।।

ಅವುಗಳು ಪರಸ್ಪರರನ್ನು ಹೊಡೆದು ಕೆಳಗುರುಳಿಸುತ್ತಿದ್ದವು ಮತ್ತು ಕೊಲ್ಲುತ್ತಿದ್ದವು. ಇತರರನ್ನು ಕೆಳಗೆ ಬೀಳಿಸಿ ತುಳಿದು ಸಾಯಿಸುತ್ತಿದ್ದವು.

10008094a ವಿಚೇತಸಃ ಸನಿದ್ರಾಶ್ಚ ತಮಸಾ ಚಾವೃತಾ ನರಾಃ।
10008094c ಜಘ್ನುಃ ಸ್ವಾನೇವ ತತ್ರಾಥ ಕಾಲೇನಾಭಿಪ್ರಚೋದಿತಾಃ।।

ಕಾಲನಿಂದ ಪ್ರಚೋದಿತರಾದ ಆ ನರರು ಕತ್ತಲೆಯಿಂದ ಆವೃತರಾಗಿ ಮತ್ತು ನಿದ್ರೆಯಿಂದ ಬುದ್ಧಿಕಳೆದುಕೊಂಡು ತಮ್ಮವರನ್ನೇ ಕೊಲ್ಲುತ್ತಿದ್ದರು.

10008095a ತ್ಯಕ್ತ್ವಾ ದ್ವಾರಾಣಿ ಚ ದ್ವಾಃಸ್ಥಾಸ್ತಥಾ ಗುಲ್ಮಾಂಶ್ಚ ಗೌಲ್ಮಿಕಾಃ।
10008095c ಪ್ರಾದ್ರವಂತ ಯಥಾಶಕ್ತಿ ಕಾಂದಿಶೀಕಾ ವಿಚೇತಸಃ।।

ದ್ವಾರಪಾಲಕರು ದ್ವಾರಗಳನ್ನು ಮತ್ತು ಗೌಲ್ಮಿಕರು ಗುಲ್ಮಗಳನ್ನು ಬಿಟ್ಟು ಯಥಾಶಕ್ತಿಯಾಗಿ, ಯಾವ ದಿಕ್ಕಿನಲ್ಲಿ ಓಡಿಹೋಗುತ್ತಿದ್ದೇವೆಂಬ ವಿಚಾರವಿಲ್ಲದೇ, ಓಡುತ್ತಿದ್ದರು.

10008096a ವಿಪ್ರನಷ್ಟಾಶ್ಚ ತೇಽನ್ಯೋನ್ಯಂ ನಾಜಾನಂತ ತದಾ ವಿಭೋ।
10008096c ಕ್ರೋಶಂತಸ್ತಾತ ಪುತ್ರೇತಿ ದೈವೋಪಹತಚೇತಸಃ।।

ವಿಭೋ! ಅವರು ಅನ್ಯೋನ್ಯರನ್ನು ಗುರುತಿಸದೇ ಸಂಹರಿಸುತ್ತಿದ್ದರು. ದೈವದಿಂದಾಗಿ ಬುದ್ಧಿಯನ್ನೇ ಕಳೆದುಕೊಂಡು “ಅಪ್ಪಾ! ಮಗನೇ!” ಎಂದು ಕೂಗಿಕೊಳ್ಳುತ್ತಿದ್ದರು.

10008097a ಪಲಾಯತಾಂ ದಿಶಸ್ತೇಷಾಂ ಸ್ವಾನಪ್ಯುತ್ಸೃಜ್ಯ ಬಾಂಧವಾನ್।
10008097c ಗೋತ್ರನಾಮಭಿರನ್ಯೋನ್ಯಮಾಕ್ರಂದಂತ ತತೋ ಜನಾಃ।।

ಮಲಗಿದ್ದ ಬಾಂಧವರನ್ನೂ ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದರು. ಆಗ ಜನರು ಗೋತ್ರ-ನಾಮಗಳನ್ನು ಹೇಳಿಕೊಂಡು ಅನ್ಯೋನ್ಯರನ್ನು ಕರೆಯುತ್ತಿದ್ದರು.

10008098a ಹಾಹಾಕಾರಂ ಚ ಕುರ್ವಾಣಾಃ ಪೃಥಿವ್ಯಾಂ ಶೇರತೇ ಪರೇ।
10008098c ತಾನ್ಬುದ್ಧ್ವಾ ರಣಮತ್ತೋಽಸೌ ದ್ರೋಣಪುತ್ರೋ ವ್ಯಪೋಥಯತ್।।

ಕೆಲವರು ಹಾಹಾಕಾರವನ್ನು ಮಾಡುತ್ತಾ ನೆಲದಮೇಲೆ ಮಲಗಿಕೊಂಡಿದ್ದರು. ರಣಮತ್ತ ದ್ರೋಣಪುತ್ರನು ಅವರೆಲ್ಲಿರುವರೆಂದು ತಿಳಿದು ತುಳಿದು ಕೊಲ್ಲುತ್ತಿದ್ದನು.

10008099a ತತ್ರಾಪರೇ ವಧ್ಯಮಾನಾ ಮುಹುರ್ಮುಹುರಚೇತಸಃ।
10008099c ಶಿಬಿರಾನ್ನಿಷ್ಪತಂತಿ ಸ್ಮ ಕ್ಷತ್ರಿಯಾ ಭಯಪೀಡಿತಾಃ।।

ಪುನಃ ಪುನಃ ಅವನಿಂದ ವಧಿಸಲ್ಪಡುತ್ತಿದ್ದ ಇನ್ನು ಕೆಲವು ಕ್ಷತ್ರಿಯರು ಭಯಪೀಡಿತರಾಗಿ ಶಿಬಿರದಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದರು.

10008100a ತಾಂಸ್ತು ನಿಷ್ಪತತಸ್ತ್ರಸ್ತಾನ್ ಶಿಬಿರಾಂಜೀವಿತೈಷಿಣಃ।
10008100c ಕೃತವರ್ಮಾ ಕೃಪಶ್ಚೈವ ದ್ವಾರದೇಶೇ ನಿಜಘ್ನತುಃ।।

ಜೀವದ ಆಸೆಯಿಂದ ಶಿಬಿರದ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದ ಅವರನ್ನು ಕೃತವರ್ಮ ಮತ್ತು ಕೃಪರು ದ್ವಾರಪ್ರದೇಶದಲ್ಲಿಯೇ ಕೊಲ್ಲುತ್ತಿದ್ದರು.

10008101a ವಿಶಸ್ತ್ರಯಂತ್ರಕವಚಾನ್ಮುಕ್ತಕೇಶಾನ್ಕೃತಾಂಜಲೀನ್।
10008101c ವೇಪಮಾನಾನ್ ಕ್ಷಿತೌ ಭೀತಾನ್ನೈವ ಕಾಂಶ್ಚಿದಮುಂಚತಾಂ।।

ಅವರ ಯಂತ್ರ-ಕವಚಗಳು ಕಳಚಿಹೋಗಿದ್ದವು. ಕೂದಲು ಕೆದರಿದ್ದವು. ಕೆಲವರು ಬಿಟ್ಟುಬಿಡಿರೆಂದು ಕೈಮುಗಿದು ಭಯದಿಂದ ನಡುಗುತ್ತಾ ನೆಲದಲ್ಲಿ ಉರುಳುತ್ತಿದ್ದರು.

10008102a ನಾಮುಚ್ಯತ ತಯೋಃ ಕಶ್ಚಿನ್ನಿಷ್ಕ್ರಾಂತಃ ಶಿಬಿರಾದ್ಬಹಿಃ।
10008102c ಕೃಪಸ್ಯ ಚ ಮಹಾರಾಜ ಹಾರ್ದಿಕ್ಯಸ್ಯ ಚ ದುರ್ಮತೇಃ।।

ಆದರೆ ದುರ್ಮತಿ ಕೃಪ ಮತ್ತು ಹಾರ್ದಿಕ್ಯರು ಅವರಲ್ಲಿ ಯಾರನ್ನೂ ಶಿಬಿರದಿಂದ ಹೊರಗೆ ಹೋಗಲು ಬಿಡಲಿಲ್ಲ.

10008103a ಭೂಯಶ್ಚೈವ ಚಿಕೀರ್ಷಂತೌ ದ್ರೋಣಪುತ್ರಸ್ಯ ತೌ ಪ್ರಿಯಂ।
10008103c ತ್ರಿಷು ದೇಶೇಷು ದದತುಃ ಶಿಬಿರಸ್ಯ ಹುತಾಶನಂ।।

ಅದಕ್ಕೂ ಹೆಚ್ಚಾಗಿ ದ್ರೋಣಪುತ್ರನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಅವರು ಶಿಬಿರದ ಮೂರು ಕಡೆಗಳಲ್ಲಿ ಬೆಂಕಿಯನ್ನು ಹೊತ್ತಿಸಿದರು.

10008104a ತತಃ ಪ್ರಕಾಶೇ ಶಿಬಿರೇ ಖಡ್ಗೇನ ಪಿತೃನಂದನಃ।
10008104c ಅಶ್ವತ್ಥಾಮಾ ಮಹಾರಾಜ ವ್ಯಚರತ್ಕೃತಹಸ್ತವತ್।।

ಮಹಾರಾಜ! ಅದರ ಬೆಳಕಿನಲ್ಲಿ ಪಿತೃನಂದನ ಅಶ್ವತ್ಥಾಮನು ಖಡ್ಗವನ್ನು ಕೈಯಲ್ಲಿ ಹಿಡಿದು ಸಂಚರಿಸಿದನು.

10008105a ಕಾಂಶ್ಚಿದಾಪತತೋ ವೀರಾನಪರಾಂಶ್ಚ ಪ್ರಧಾವತಃ।
10008105c ವ್ಯಯೋಜಯತ ಖಡ್ಗೇನ ಪ್ರಾಣೈರ್ದ್ವಿಜವರೋ ನರಾನ್।।

ಆ ದ್ವಿಜವರನು ತನ್ನ ಮೇಲೆ ಬೀಳುತ್ತಿದ್ದ ಕೆಲವು ವೀರರನ್ನೂ, ಓಡಿಹೋಗುತ್ತಿದ್ದ ಇತರರನ್ನೂ ಖಡ್ಗದಿಂದ ಪ್ರಾಣವಿಲ್ಲದಂತೆ ಮಾಡಿದನು.

10008106a ಕಾಂಶ್ಚಿದ್ಯೋಧಾನ್ಸ ಖಡ್ಗೇನ ಮಧ್ಯೇ ಸಂಚಿದ್ಯ ವೀರ್ಯವಾನ್।
10008106c ಅಪಾತಯದ್ದ್ರೋಣಸುತಃ ಸಂರಬ್ಧಸ್ತಿಲಕಾಂಡವತ್।।

ಆ ವೀರ್ಯವಾನನು ಕೆಲವರನ್ನು ಖಡ್ಗದಿಂದ ಮಧ್ಯದಲ್ಲಿಯೇ ಸೀಳಿದನು. ದ್ರೋಣಸುತನು ಸಂರಬ್ಧನಾಗಿ ಸೇನೆಯನ್ನು ಎಳ್ಳಿನ ಹೊಲದಂತೆ ಕಡಿದು ಕೆಳಗುರುಳಿಸಿದನು.

10008107a ವಿನದದ್ಭಿರ್ಭೃಶಾಯಸ್ತೈರ್ನರಾಶ್ವದ್ವಿರದೋತ್ತಮೈಃ।
10008107c ಪತಿತೈರಭವತ್ಕೀರ್ಣಾ ಮೇದಿನೀ ಭರತರ್ಷಭ।।

ಭರತರ್ಷಭ! ಬಹಳವಾಗಿ ಗಾಯಗೊಂಡು ಕಿರುಚುತ್ತಾ ಬಿದ್ದಿದ್ದ ಉತ್ತಮ ಆನೆ, ಕುದುರೆ ಮತ್ತು ಮನುಷ್ಯರ ರಾಶಿಗಳಿಂದ ಮೇದಿನಿಯು ತುಂಬಿಹೋಯಿತು.

10008108a ಮಾನುಷಾಣಾಂ ಸಹಸ್ರೇಷು ಹತೇಷು ಪತಿತೇಷು ಚ।
10008108c ಉದತಿಷ್ಠನ್ ಕಬಂಧಾನಿ ಬಹೂನ್ಯುತ್ಥಾಯ ಚಾಪತನ್।।

ಸಹಸ್ರಾರು ಮನುಷ್ಯರು ಹತರಾಗಿ ಬೀಳುತ್ತಿರಲು ಅನೇಕ ಶಿರವಿಲ್ಲದ ದೇಹಗಳು ಎದ್ದುನಿಲ್ಲುತ್ತಿದ್ದವು. ಎದ್ದು ಬೀಳುತ್ತಿದ್ದವು.

10008109a ಸಾಯುಧಾನ್ಸಾಂಗದಾನ್ಬಾಹೂನ್ನಿಚಕರ್ತ ಶಿರಾಂಸಿ ಚ।
10008109c ಹಸ್ತಿಹಸ್ತೋಪಮಾನೂರೂನ್ ಹಸ್ತಾನ್ಪಾದಾಂಶ್ಚ ಭಾರತ।।

ಭಾರತ! ಆಯುಧಗಳಿದ್ದ ಮತ್ತು ಅಂಗದಗಳನ್ನು ಧರಿಸಿದ್ದ ಬಾಹುಗಳನ್ನು ಮತ್ತು ಶಿರಗಳನ್ನು, ಆನೆಯ ಸೊಂಡಿಲಿನಂತಿರುವ ತೊಡೆಗಳನ್ನೂ, ಕೈಗಳನ್ನೂ, ಪಾದಗಳನ್ನೂ ಅವನು ಕತ್ತರಿಸಿದನು.

10008110a ಪೃಷ್ಠಚ್ಚಿನ್ನಾನ್ ಶಿರಶ್ಚಿನ್ನಾನ್ಪಾರ್ಶ್ವಚ್ಚಿನ್ನಾಂಸ್ತಥಾಪರಾನ್।
10008110c ಸಮಾಸಾದ್ಯಾಕರೋದ್ದ್ರೌಣಿಃ ಕಾಂಶ್ಚಿಚ್ಚಾಪಿ ಪರಾಙ್ಮುಖಾನ್।।

ದ್ರೌಣಿಯು ಕೆಲವರ ಪೃಷ್ಠಭಾಗಗಳನ್ನು, ಕೆಲವರ ಶಿರಸ್ಸುಗಳನ್ನು ಮತ್ತು ಇನ್ನು ಕೆಲವರ ಪಕ್ಕೆಗಳನ್ನು ಕತ್ತರಿಸಿದನು. ಇನ್ನು ಓಡಿಹೋಗುತ್ತಿದ್ದವರ ಕೆಲವರ ತಲೆಗಳನ್ನು ಹಿಂದು-ಮುಂದಾಗಿಸಿದನು.

10008111a ಮಧ್ಯಕಾಯಾನ್ನರಾನನ್ಯಾಂಶ್ಚಿಚ್ಚೇದಾನ್ಯಾಂಶ್ಚ ಕರ್ಣತಃ।
10008111c ಅಂಸದೇಶೇ ನಿಹತ್ಯಾನ್ಯಾನ್ಕಾಯೇ ಪ್ರಾವೇಶಯಚ್ಚಿರಃ।।

ಕೆಲವರನ್ನು ಕಟಿಪ್ರದೇಶದಲ್ಲಿ ಕತ್ತರಿಸಿದನು. ಕೆಲವರ ಕಿವಿಗಳನ್ನು ಕತ್ತರಿಸಿದನು. ಅನ್ಯರ ಕುತ್ತಿಗೆಯಮೇಲೆ ಹೊಡೆದು ತಲೆಯು ಶರೀರದೊಳಕ್ಕೆ ಸೇರಿಕೊಳ್ಳುವಂತೆ ಮಾಡಿದನು.

10008112a ಏವಂ ವಿಚರತಸ್ತಸ್ಯ ನಿಘ್ನತಃ ಸುಬಹೂನ್ನರಾನ್।
10008112c ತಮಸಾ ರಜನೀ ಘೋರಾ ಬಭೌ ದಾರುಣದರ್ಶನಾ।।

ಹೀಗೆ ಅವನು ಅನೇಕ ಮನುಷ್ಯರನ್ನು ಸಂಹರಿಸುತ್ತಾ ಸಂಚರಿಸುತ್ತಿರಲು ರಾತ್ರಿಯ ಕತ್ತಲೆಯು ಘೋರವೂ ನೋಡಲು ದಾರುಣವಾಗಿಯೂ ಕಂಡಿತು.

10008113a ಕಿಂ ಚಿತ್ಪ್ರಾಣೈಶ್ಚ ಪುರುಷೈರ್ಹತೈಶ್ಚಾನ್ಯೈಃ ಸಹಸ್ರಶಃ।
10008113c ಬಹುನಾ ಚ ಗಜಾಶ್ವೇನ ಭೂರಭೂದ್ಭೀಮದರ್ಶನಾ।।

ಇನ್ನೂ ಪ್ರಾಣವಿಟ್ಟುಕೊಂಡಿದ್ದವರ ಕೆಲವರು ಮತ್ತು ಅನ್ಯ ಸಹಸ್ರಾರು ಹತರಾದ ನರ, ಕುದುರೆ, ಆನೆಗಳಿಂದ ಭೂಮಿಯು ತುಂಬಿಕೊಂಡು ನೋಡಲು ಭಯಂಕರವಾಗಿತ್ತು.

10008114a ಯಕ್ಷರಕ್ಷಃಸಮಾಕೀರ್ಣೇ ರಥಾಶ್ವದ್ವಿಪದಾರುಣೇ।
10008114c ಕ್ರುದ್ಧೇನ ದ್ರೋಣಪುತ್ರೇಣ ಸಂಚಿನ್ನಾಃ ಪ್ರಾಪತನ್ಭುವಿ।।

ಯಕ್ಷ-ರಾಕ್ಷಸರಿಂದ ಮತ್ತು ಕ್ರುದ್ಧ ದ್ರೋಣಪುತ್ರನಿಂದ ಧ್ವಂಸಗೊಳ್ಳುತ್ತಿದ್ದ ರಥ-ಕುದುರೆ-ಆನೆಗಳು ದಾರುಣವಾಗಿ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬೀಳುತ್ತಿದ್ದವು.

10008115a ಮಾತೄರನ್ಯೇ ಪಿತೄನನ್ಯೇ ಭ್ರಾತೄನನ್ಯೇ ವಿಚುಕ್ರುಶುಃ।
10008115c ಕೇ ಚಿದೂಚುರ್ನ ತತ್ಕ್ರುದ್ಧೈರ್ಧಾರ್ತರಾಷ್ಟ್ರೈಃ ಕೃತಂ ರಣೇ।।
10008116a ಯತ್ಕೃತಂ ನಃ ಪ್ರಸುಪ್ತಾನಾಂ ರಕ್ಷೋಭಿಃ ಕ್ರೂರಕರ್ಮಭಿಃ।
10008116c ಅಸಾಂನಿಧ್ಯಾದ್ಧಿ ಪಾರ್ಥಾನಾಮಿದಂ ನಃ ಕದನಂ ಕೃತಂ।।

ಕೆಲವರು ತಾಯಿಯರನ್ನೂ, ಕೆಲವರು ತಂದೆಯರನ್ನೂ ಮತ್ತು ಕೆಲವರು ಸೋದರರನ್ನೂ ಕೂಗಿ ಕರೆಯುತ್ತಿದ್ದರು. ಕೆಲವರು ಹೀಗೆ ಅಂದುಕೊಳ್ಳುತ್ತಿದ್ದರು: “ಈ ರೀತಿ ಮಲಗಿರುವವರನ್ನು ರಾಕ್ಷಸರಂತೆ ಕ್ರೂರವಾಗಿ ಧಾಳಿನಡೆಸಿದಂತೆ ರಣದಲ್ಲಿ ಕ್ರುದ್ಧ ಧಾರ್ತರಷ್ಟ್ರರೂ ಮಾಡಲಿಲ್ಲ! ಪಾರ್ಥರು ಇಲ್ಲಿ ಇಲ್ಲವೆಂದು ತಿಳಿದೇ ಇವರು ನಮ್ಮೊಂದಿಗೆ ಕದನವಾಡುತ್ತಿದ್ದಾರೆ!

10008117a ನ ದೇವಾಸುರಗಂಧರ್ವೈರ್ನ ಯಕ್ಷೈರ್ನ ಚ ರಾಕ್ಷಸೈಃ।
10008117c ಶಕ್ಯೋ ವಿಜೇತುಂ ಕೌಂತೇಯೋ ಗೋಪ್ತಾ ಯಸ್ಯ ಜನಾರ್ದನಃ।।

ಯಾರನ್ನು ಜನಾರ್ದನನು ರಕ್ಷಿಸುತ್ತಿದ್ದಾನೋ ಆ ಕೌಂತೇಯನನ್ನು ದೇವ-ಅಸುರ-ಗಂಧರ್ವರಿಂದಲೂ, ಯಕ್ಷ-ರಾಕ್ಷಸರಿಂದಲೂ ಗೆಲ್ಲಲು ಶಕ್ಯವಿಲ್ಲ!

10008118a ಬ್ರಹ್ಮಣ್ಯಃ ಸತ್ಯವಾಗ್ದಾಂತಃ ಸರ್ವಭೂತಾನುಕಂಪಕಃ।
10008118c ನ ಚ ಸುಪ್ತಂ ಪ್ರಮತ್ತಂ ವಾ ನ್ಯಸ್ತಶಸ್ತ್ರಂ ಕೃತಾಂಜಲಿಂ।
10008118e ಧಾವಂತಂ ಮುಕ್ತಕೇಶಂ ವಾ ಹಂತಿ ಪಾರ್ಥೋ ಧನಂಜಯಃ।।

ಬ್ರಹ್ಮಣ್ಯನೂ, ಸತ್ಯವಾಗ್ಮಿಯೂ, ಜಿತೇಂದ್ರಿಯನೂ, ಸರ್ವಭೂತಗಳ ಮೇಲೆ ಅನುಕಂಪನಾಗಿರುವ ಪಾರ್ಥ ಧನಂಜಯನು ಮಲಗಿರುವವರನ್ನು, ಪ್ರಮತ್ತರಾಗಿರುವವರನ್ನು, ಶಸ್ತ್ರವನ್ನು ಕೆಳಗಿಟ್ಟವರನ್ನು, ಕೈಮುಗಿದು ಕೇಳಿಕೊಳ್ಳುವವರನ್ನು, ಓಡಿಹೋಗುತ್ತಿರುವವರನ್ನು ಮತ್ತು ತಲೆ ಬಿಚ್ಚಿಕೊಂಡಿರುವವರನ್ನು ಕೊಲ್ಲುವುದಿಲ್ಲ!

10008119a ತದಿದಂ ನಃ ಕೃತಂ ಘೋರಂ ರಕ್ಷೋಭಿಃ ಕ್ರೂರಕರ್ಮಭಿಃ।
10008119c ಇತಿ ಲಾಲಪ್ಯಮಾನಾಃ ಸ್ಮ ಶೇರತೇ ಬಹವೋ ಜನಾಃ।।

ಕ್ರೂರಕರ್ಮಿಗಳಾದ ರಾಕ್ಷಸರೇ ನಮ್ಮ ಮೇಲೆ ಈ ಘೋರ ಕೃತ್ಯವನ್ನೆಸಗುತ್ತಿದ್ದಾರೆ!” ಹೀಗೆ ವಿಲಪಿಸುತ್ತಾ ಅನೇಕ ಜನರು ಭೂಮಿಯ ಮೇಲೆ ಮಲಗಿದ್ದರು.

10008120a ಸ್ತನತಾಂ ಚ ಮನುಷ್ಯಾಣಾಮಪರೇಷಾಂ ಚ ಕೂಜತಾಂ।
10008120c ತತೋ ಮುಹೂರ್ತಾತ್ಪ್ರಾಶಾಮ್ಯತ್ಸ ಶಬ್ದಸ್ತುಮುಲೋ ಮಹಾನ್।।

ಸ್ವಲ್ಪವೇ ಸಮಯದಲ್ಲಿ ಕೂಗಿಕೊಳ್ಳುತ್ತಿದ್ದ ಮತ್ತು ವಿಲಪಿಸುತ್ತಿದ್ದ ಮನುಷ್ಯರ ಮಹಾ ತುಮುಲ ಶಬ್ಧವು ಉಡುಗಿಹೋಯಿತು.

10008121a ಶೋಣಿತವ್ಯತಿಷಿಕ್ತಾಯಾಂ ವಸುಧಾಯಾಂ ಚ ಭೂಮಿಪ।
10008121c ತದ್ರಜಸ್ತುಮುಲಂ ಘೋರಂ ಕ್ಷಣೇನಾಂತರಧೀಯತ।।

ಭೂಮಿಪ! ಮೇಲೆದ್ದಿದ್ದ ಆ ತುಮುಲ ಘೋರ ಧೂಳು ಕೂಡ ರಕ್ತದಿಂದ ಭೂಮಿಯು ತೋಯ್ದುಹೋಗಲು ಕ್ಷಣಮಾತ್ರದಲ್ಲಿ ಅದೃಶ್ಯವಾಯಿತು.

10008122a ಸಂವೇಷ್ಟಮಾನಾನುದ್ವಿಗ್ನಾನ್ನಿರುತ್ಸಾಹಾನ್ಸಹಸ್ರಶಃ।
10008122c ನ್ಯಪಾತಯನ್ನರಾನ್ಕ್ರುದ್ಧಃ ಪಶೂನ್ಪಶುಪತಿರ್ಯಥಾ।।

ಕೃದ್ಧನಾದ ಪಶುಪತಿಯು ಪಶುಗಳನ್ನು ಹೇಗೋ ಹಾಗೆ ಅಶ್ವತ್ಥಾಮನು ಪ್ರಾಣವುಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ, ಉದ್ವಿಗ್ನರಾಗಿದ್ದ, ನಿರುತ್ಸಾಹಿಗಳಾಗಿದ್ದ ಸಹಸ್ರಾರು ಜನರನ್ನು ಕೆಳಗುರುಳಿಸಿದನು.

10008123a ಅನ್ಯೋನ್ಯಂ ಸಂಪರಿಷ್ವಜ್ಯ ಶಯಾನಾನ್ದ್ರವತೋಽಪರಾನ್।
10008123c ಸಂಲೀನಾನ್ಯುಧ್ಯಮಾನಾಂಶ್ಚ ಸರ್ವಾನ್ದ್ರೌಣಿರಪೋಥಯತ್।।

ಅನ್ಯೋನ್ಯರನ್ನು ಅಪ್ಪಿಕೊಂಡು ಮಲಗಿದ್ದವರನ್ನು, ಓಡಿಹೋಗುತ್ತಿರುವವರನ್ನು, ಅಡಗಿಕೊಂಡಿದ್ದವರನ್ನು ಮತ್ತು ಯುದ್ಧಮಾಡುತ್ತಿದ್ದವರನ್ನು ಎಲ್ಲರನ್ನೂ ದ್ರೌಣಿಯು ಸಂಹರಿಸಿದನು.

10008124a ದಹ್ಯಮಾನಾ ಹುತಾಶೇನ ವಧ್ಯಮಾನಾಶ್ಚ ತೇನ ತೇ।
10008124c ಪರಸ್ಪರಂ ತದಾ ಯೋಧಾ ಅನಯನ್ಯಮಸಾದನಂ।।

ಕೆಲವರು ಬೆಂಕಿಯಲ್ಲಿ ಸುಟ್ಟುಹೋದರು. ಕೆಲವರನ್ನು ಅಶ್ವತ್ಥಾಮನು ವಧಿಸಿದನು. ಇನ್ನು ಕೆಲವು ಯೋಧರು ಪರಸ್ಪರರನ್ನು ಕೊಂದು ಯಮಸಾದನಕ್ಕೆ ಹೋದರು.

10008125a ತಸ್ಯಾ ರಜನ್ಯಾಸ್ತ್ವರ್ಧೇನ ಪಾಂಡವಾನಾಂ ಮಹದ್ಬಲಂ।
10008125c ಗಮಯಾಮಾಸ ರಾಜೇಂದ್ರ ದ್ರೌಣಿರ್ಯಮನಿವೇಶನಂ।।

ರಾಜೇಂದ್ರ! ಆ ರಾತ್ರಿಯ ಅರ್ಧಭಾಗವು ಕಳೆಯುವುದರೊಳಗಾಗಿ ದ್ರೌಣಿಯು ಪಾಂಡವರ ಆ ಮಹಾಸೇನೆಯನ್ನು ಯಮನಿವೇಶನಕ್ಕೆ ಕಳುಹಿಸಿದನು.

10008126a ನಿಶಾಚರಾಣಾಂ ಸತ್ತ್ವಾನಾಂ ಸ ರಾತ್ರಿರ್ಹರ್ಷವರ್ಧಿನೀ।
10008126c ಆಸೀನ್ನರಗಜಾಶ್ವಾನಾಂ ರೌದ್ರೀ ಕ್ಷಯಕರೀ ಭೃಶಂ।।

ಆ ರಾತ್ರಿಯು ನಿಶಾಚರ ಪ್ರಾಣಿಗಳ ಹರ್ಷವನ್ನು ಹೆಚ್ಚಿಸುತ್ತಿದ್ದರೆ ಮನುಷ್ಯ-ಆನೆ-ಕುದುರೆಗಳಿಗೆ ರೌದ್ರವೂ ಕ್ಷಯಕಾರಿಯೂ ಆಗಿತ್ತು.

10008127a ತತ್ರಾದೃಶ್ಯಂತ ರಕ್ಷಾಂಸಿ ಪಿಶಾಚಾಶ್ಚ ಪೃಥಗ್ವಿಧಾಃ।
10008127c ಖಾದಂತೋ ನರಮಾಂಸಾನಿ ಪಿಬಂತಃ ಶೋಣಿತಾನಿ ಚ।।

ಅಲ್ಲಿ ಅನೇಕ ವಿಧದ ರಾಕ್ಷಸರೂ ಪಿಶಾಚಿಗಳೂ ನರಮಾಂಸಗಳನ್ನು ಭಕ್ಷಿಸುತ್ತಿರುವುದು ಮತ್ತು ರಕ್ತವನ್ನು ಕುಡಿಯುತ್ತಿರುವುದು ಕಾಣುತ್ತಿತ್ತು.

10008128a ಕರಾಲಾಃ ಪಿಂಗಲಾ ರೌದ್ರಾಃ ಶೈಲದಂತಾ ರಜಸ್ವಲಾಃ।
10008128c ಜಟಿಲಾ ದೀರ್ಘಸಕ್ಥಾಶ್ಚ ಪಂಚಪಾದಾ ಮಹೋದರಾಃ।।
10008129a ಪಶ್ಚಾದಂಗುಲಯೋ ರೂಕ್ಷಾ ವಿರೂಪಾ ಭೈರವಸ್ವನಾಃ।
10008129c ಘಟಜಾನವೋಽತಿಹ್ರಸ್ವಾಶ್ಚ ನೀಲಕಂಠಾ ವಿಭೀಷಣಾಃ।।
10008130a ಸಪುತ್ರದಾರಾಃ ಸುಕ್ರೂರಾ ದುರ್ದರ್ಶನಸುನಿರ್ಘೃಣಾಃ।
10008130c ವಿವಿಧಾನಿ ಚ ರೂಪಾಣಿ ತತ್ರಾದೃಶ್ಯಂತ ರಕ್ಷಸಾಂ।।

ಕಪ್ಪಾಗಿದ್ದ, ಹಳದಿ ಬಣ್ಣದ, ರೌದ್ರರಾಗಿ ತೋರುತ್ತಿದ್ದ, ಪರ್ವತದಂತಹ ಹಲ್ಲುಗಳಿದ್ದ, ಧೂಳಿನಿಂದ ತುಂಬಿಕೊಂಡಿದ್ದ, ಜಟಾಧಾರಿಗಳಾಗಿದ್ದ, ಅಗಲ ಹಣೆಗಳನ್ನು ಹೊಂದಿದ್ದ, ಐದು ಕಾಲುಗಳಿದ್ದ, ದೊಡ್ಡ ದೊಡ್ಡ ಹೊಟ್ಟೆಗಳಿದ್ದ, ಹಿಂದುಮುಂದಾದ ಬೆರಳುಗಳಿದ್ದ, ಕಠೋರರಾದ, ವಿರೂಪರಾದ, ಭೈರವ ಸ್ವರವಿದ್ದ, ದೊಡ್ಡ ಶರೀರವಿದ್ದ, ಹ್ರಸ್ವ ಶರೀರವಿದ್ದ, ನೀಲಕಂಠಗಳಿದ್ದ, ವಿಭೀಷಣರಾದ, ಕ್ರೂರರೂ, ದುರ್ಧರ್ಷರೂ, ನಿರ್ದಯಿಗಳೂ ಆದ ಆ ರಾಕ್ಷಸರು ವಿವಿಧರೂಪಗಳಲ್ಲಿ ಕಾಣುತ್ತಿದ್ದರು.

10008131a ಪೀತ್ವಾ ಚ ಶೋಣಿತಂ ಹೃಷ್ಟಾಃ ಪ್ರಾನೃತ್ಯನ್ಗಣಶೋಽಪರೇ।
10008131c ಇದಂ ವರಮಿದಂ ಮೇಧ್ಯಮಿದಂ ಸ್ವಾದ್ವಿತಿ ಚಾಬ್ರುವನ್।।

ರಕ್ತವನ್ನು ಕುಡಿದು ಹರ್ಷಗೊಂಡ ಕೆಲವರು “ಇದು ಉತ್ತಮವಾಗಿದೆ! ಇದು ರುಚಿಯಾಗಿದೆ! ಪವಿತ್ರವಾಗಿದೆ!” ಎಂದು ಹೇಳಿಕೊಳ್ಳುತ್ತಾ ಗುಂಪಿನಲ್ಲಿ ನರ್ತಿಸುತ್ತಿದ್ದರು.

10008132a ಮೇದೋಮಜ್ಜಾಸ್ಥಿರಕ್ತಾನಾಂ ವಸಾನಾಂ ಚ ಭೃಶಾಸಿತಾಃ।
10008132c ಪರಮಾಂಸಾನಿ ಖಾದಂತಃ ಕ್ರವ್ಯಾದಾ ಮಾಂಸಜೀವಿನಃ।।

ಮೇದಸ್ಸು, ಮಜ್ಜೆ, ಅಸ್ಥಿ, ರಕ್ತ ಮತ್ತು ಮಾಂಸಗಳನ್ನು ತುಂಬಾ ಆತುರವಾಗಿ ತಿನ್ನುವ ಮಾಂಸಜೀವಿ ಕ್ರವ್ಯಾದರು ಯೋಧರ ಮಾಂಸವನ್ನು ಯಥೇಚ್ಛವಾಗಿ ತಿನ್ನುತ್ತಿದ್ದರು.

10008133a ವಸಾಂ ಚಾಪ್ಯಪರೇ ಪೀತ್ವಾ ಪರ್ಯಧಾವನ್ವಿಕುಕ್ಷಿಲಾಃ।
10008133c ನಾನಾವಕ್ತ್ರಾಸ್ತಥಾ ರೌದ್ರಾಃ ಕ್ರವ್ಯಾದಾಃ ಪಿಶಿತಾಶಿನಃ।।

ಹೊಟ್ಟೆಯೇ ಇಲ್ಲದ ಕೆಲವರು ವಸೆಯನ್ನು ಕುಡಿದು ಓಡಿಹೋಗುತ್ತಿದ್ದರು. ಹಸಿ ಮಾಂಸವನ್ನು ತಿನ್ನುತ್ತಿದ್ದ ಆ ರೌದ್ರ ಕ್ರವ್ಯಾದಗಳಿಗೆ ಅನೇಕ ಮುಖಗಳಿದ್ದವು.

10008134a ಅಯುತಾನಿ ಚ ತತ್ರಾಸನ್ಪ್ರಯುತಾನ್ಯರ್ಬುದಾನಿ ಚ।
10008134c ರಕ್ಷಸಾಂ ಘೋರರೂಪಾಣಾಂ ಮಹತಾಂ ಕ್ರೂರಕರ್ಮಣಾಂ।।

ಆ ಗುಂಪುಗಳಲ್ಲಿ ಹತ್ತುಸಾವಿರ, ಲಕ್ಷ, ಹತ್ತು ಲಕ್ಷ ಘೋರರೂಪಿ ಮಹಾ ಕ್ರೂರಕರ್ಮಿ ರಾಕ್ಷಸರಿದ್ದರು.

10008135a ಮುದಿತಾನಾಂ ವಿತೃಪ್ತಾನಾಂ ತಸ್ಮಿನ್ಮಹತಿ ವೈಶಸೇ।
10008135c ಸಮೇತಾನಿ ಬಹೂನ್ಯಾಸನ್ಭೂತಾನಿ ಚ ಜನಾಧಿಪ।।

ಜನಾಧಿಪ! ಆ ಮಹಾಜನಸಂಹಾರದಿಂದ ತೃಪ್ತರಾಗಿ ಮುದಿತರಾಗಿದ್ದ ಆ ಭೂತಗಳು ಅನೇಕ ಸಂಖ್ಯೆಗಳಲ್ಲಿ ಸೇರಿಕೊಂಡಿದ್ದವು.

10008136a ಪ್ರತ್ಯೂಷಕಾಲೇ ಶಿಬಿರಾತ್ಪ್ರತಿಗಂತುಮಿಯೇಷ ಸಃ।
10008136c ನೃಶೋಣಿತಾವಸಿಕ್ತಸ್ಯ ದ್ರೌಣೇರಾಸೀದಸಿತ್ಸರುಃ।
10008136e ಪಾಣಿನಾ ಸಹ ಸಂಶ್ಲಿಷ್ಟ ಏಕೀಭೂತ ಇವ ಪ್ರಭೋ।।

ಪ್ರಾತಃಕಾಲವಾಗುತ್ತಲೇ ದ್ರೌಣಿಯು ಶಿಬಿರದಿಂದ ಹೊರಡಲು ಅನುವಾಗಲು, ರಕ್ತದಿಂದ ತೋಯ್ದುಹೋಗಿದ್ದ ಅವನ ಖಡ್ಗದ ಹಿಡಿಯು ಅವನ ಕೈಯೊಂದಿಗೆ ಅಂಟಿಕೊಂಡಿತ್ತು! ಪ್ರಭೋ! ಆಗ ಖಡ್ಗದ ಹಿಡಿ ಮತ್ತು ಅವನ ಕೈ ಒಂದೇ ಎಂಬಂತೆ ಕಾಣುತ್ತಿತ್ತು.

10008137a ಸ ನಿಃಶೇಷಾನರೀನ್ಕೃತ್ವಾ ವಿರರಾಜ ಜನಕ್ಷಯೇ।
10008137c ಯುಗಾಂತೇ ಸರ್ವಭೂತಾನಿ ಭಸ್ಮ ಕೃತ್ವೇವ ಪಾವಕಃ।।

ಯುಗಾಂತದಲ್ಲಿ ಸರ್ವಭೂತಗಳನ್ನು ಭಸ್ಮಮಾಡಿದ ಪಾವಕನು ಹೇಗೋ ಹಾಗೆ ಆ ಜನಕ್ಷಯದಲ್ಲಿ ಶತ್ರುಗಳನ್ನು ನಿಃಶೇಷರನ್ನಾಗಿ ಮಾಡಿದ ಅಶ್ವತ್ಥಾಮನು ವಿರಾಜಿಸಿದನು.

10008138a ಯಥಾಪ್ರತಿಜ್ಞಂ ತತ್ಕರ್ಮ ಕೃತ್ವಾ ದ್ರೌಣಾಯನಿಃ ಪ್ರಭೋ।
10008138c ದುರ್ಗಮಾಂ ಪದವೀಂ ಕೃತ್ವಾ ಪಿತುರಾಸೀದ್ಗತಜ್ವರಃ।।

ಪ್ರಭೋ! ಪ್ರತಿಜ್ಞೆ ಮಾಡಿದಂತೆ ಆ ಕೃತ್ಯವನ್ನು ಮಾಡಿ ತಂದೆಗೆ ದುರ್ಗಮ ಪದವಿಯನ್ನು ಇತ್ತು ಅವನು ಚಿಂತಾಶೋಕಗಳಿಂದ ವಿಮುಕ್ತನಾದನು.

10008139a ಯಥೈವ ಸಂಸುಪ್ತಜನೇ ಶಿಬಿರೇ ಪ್ರಾವಿಶನ್ನಿಶಿ।
10008139c ತಥೈವ ಹತ್ವಾ ನಿಃಶಬ್ದೇ ನಿಶ್ಚಕ್ರಾಮ ನರರ್ಷಭಃ।।

ರಾತ್ರಿ ಜನರು ಮಲಗಿದ್ದಾಗ ಶಿಬಿರವನ್ನು ಹೇಗೆ ಪ್ರವೇಶಿಸಿದ್ದನೋ ಹಾಗೆಯೇ ಅವರನ್ನು ಕೊಂದ ನರರ್ಷಭನು ನಿಃಶಬ್ಧನಾಗಿ ಹೊರಬಂದನು.

10008140a ನಿಷ್ಕ್ರಮ್ಯ ಶಿಬಿರಾತ್ತಸ್ಮಾತ್ತಾಭ್ಯಾಂ ಸಂಗಮ್ಯ ವೀರ್ಯವಾನ್।
10008140c ಆಚಖ್ಯೌ ಕರ್ಮ ತತ್ಸರ್ವಂ ಹೃಷ್ಟಃ ಸಂಹರ್ಷಯನ್ವಿಭೋ।।

ವಿಭೋ! ಆ ವೀರ್ಯವಾನನು ಶಿಬಿರದಿಂದ ಹೊರಬಂದು ಕೃಪ-ಕೃತವರ್ಮರಿಬ್ಬರನ್ನೂ ಸೇರಿ ಹೃಷ್ಟನಾಗಿ ಅವರಿಗೂ ಹರ್ಷವನ್ನು ತರುತ್ತಾ ತಾನು ಮಾಡಿದ ಕರ್ಮವೆಲ್ಲವನ್ನೂ ಹೇಳಿಕೊಂಡನು.

10008141a ತಾವಪ್ಯಾಚಖ್ಯತುಸ್ತಸ್ಮೈ ಪ್ರಿಯಂ ಪ್ರಿಯಕರೌ ತದಾ।
10008141c ಪಾಂಚಾಲಾನ್ಸೃಂಜಯಾಂಶ್ಚೈವ ವಿನಿಕೃತ್ತಾನ್ಸಹಸ್ರಶಃ।
10008141e ಪ್ರೀತ್ಯಾ ಚೋಚ್ಚೈರುದಕ್ರೋಶಂಸ್ತಥೈವಾಸ್ಫೋಟಯಂಸ್ತಲಾನ್।।

ಆಗ ಅವರಿಬ್ಬರು ಪ್ರಿಯಕರರೂ ಅವನಿಗೆ ಪ್ರಿಯವಾದುದನ್ನು ಮಾಡಲೋಸುಗ ತಾವೂ ಕೂಡ ಸಹಸ್ರಾರು ಪಾಂಚಾಲರನ್ನು ಮತ್ತು ಸೃಂಜಯರನ್ನು ಕೊಂದ ವಿಷಯವನ್ನು ಹೇಳಿಕೊಂಡರು. ಮೂವರೂ ಆನಂದದಿಂದ ಜೋರಾಗಿ ಗರ್ಜಿಸಿ ಚಪ್ಪಾಳೆ ತಟ್ಟಿದರು.

10008142a ಏವಂವಿಧಾ ಹಿ ಸಾ ರಾತ್ರಿಃ ಸೋಮಕಾನಾಂ ಜನಕ್ಷಯೇ।
10008142c ಪ್ರಸುಪ್ತಾನಾಂ ಪ್ರಮತ್ತಾನಾಮಾಸೀತ್ಸುಭೃಶದಾರುಣಾ।।

ಈ ವಿಧವಾಗಿ ಆ ರಾತ್ರಿ ಮೈಮರೆತು ಮಲಗಿದ್ದ ಸೋಮಕರ ತುಂಬಾ ದಾರುಣ ಜನಕ್ಷಯವು ನಡೆದುಹೋಯಿತು.

10008143a ಅಸಂಶಯಂ ಹಿ ಕಾಲಸ್ಯ ಪರ್ಯಾಯೋ ದುರತಿಕ್ರಮಃ।
10008143c ತಾದೃಶಾ ನಿಹತಾ ಯತ್ರ ಕೃತ್ವಾಸ್ಮಾಕಂ ಜನಕ್ಷಯಂ।।

ಕಾಲವನ್ನು ಅತಿಕ್ರಮಿಸುವುದು ನಿಸ್ಸಂಶಯವಾಗಿಯೂ ಅಶಕ್ಯವಾದುದು. ನಮ್ಮವರ ಜನಕ್ಷಯವನ್ನು ಮಾಡಿದ ಅವರು ಹೀಗೆ ಹತರಾದರು.”

10008144 ಧೃತರಾಷ್ಟ್ರ ಉವಾಚ।
10008144a ಪ್ರಾಗೇವ ಸುಮಹತ್ಕರ್ಮ ದ್ರೌಣಿರೇತನ್ಮಹಾರಥಃ।
10008144c ನಾಕರೋದೀದೃಶಂ ಕಸ್ಮಾನ್ಮತ್ಪುತ್ರವಿಜಯೇ ಧೃತಃ।।

ಧೃತರಾಷ್ಟ್ರನು ಹೇಳಿದನು: “ನನ್ನ ಮಗನ ವಿಜಯದಲ್ಲಿಯೇ ದೃಢವ್ರತನಾಗಿದ್ದ ಮಹಾರಥ ದ್ರೌಣಿಯು ಈ ಮಹಾಮಹತ್ವದ ಕೆಲಸವನ್ನು ಹಿಂದೆಯೇ ಏಕೆ ಮಾಡಲಿಲ್ಲ?

10008145a ಅಥ ಕಸ್ಮಾದ್ಧತೇ ಕ್ಷತ್ರೇ ಕರ್ಮೇದಂ ಕೃತವಾನಸೌ।
10008145c ದ್ರೋಣಪುತ್ರೋ ಮಹೇಷ್ವಾಸಸ್ತನ್ಮೇ ಶಂಸಿತುಮರ್ಹಸಿ।।

ಈಗ ಅವನು ಹತನಾದ ನಂತರ ಮಹೇಷ್ವಾಸ ದ್ರೋಣಪುತ್ರನು ಈ ಕರ್ಮವನ್ನೇಕೆ ಎಸಗಿದನು ಎನ್ನುವುದನ್ನು ನನಗೆ ಹೇಳಬೇಕು!”

10008146 ಸಂಜಯ ಉವಾಚ।
10008146a ತೇಷಾಂ ನೂನಂ ಭಯಾನ್ನಾಸೌ ಕೃತವಾನ್ಕುರುನಂದನ।
10008146c ಅಸಾಂನಿಧ್ಯಾದ್ಧಿ ಪಾರ್ಥಾನಾಂ ಕೇಶವಸ್ಯ ಚ ಧೀಮತಃ।।
10008147a ಸಾತ್ಯಕೇಶ್ಚಾಪಿ ಕರ್ಮೇದಂ ದ್ರೋಣಪುತ್ರೇಣ ಸಾಧಿತಂ।
10008147c ನ ಹಿ ತೇಷಾಂ ಸಮಕ್ಷಂ ತಾನ್ ಹನ್ಯಾದಪಿ ಮರುತ್ಪತಿಃ।।

ಸಂಜಯನು ಹೇಳಿದನು: “ಕುರುನಂದನ! ಪಾರ್ಥ, ಧೀಮತ ಕೇಶವ ಮತ್ತು ಸಾತ್ಯಕಿಯರ ಭಯದಿಂದಾಗಿ ಅವನು ಈ ಕಾರ್ಯವನ್ನು ಮೊದಲೇ ಮಾಡಲಿಲ್ಲ. ಅವರಿಲ್ಲದಿರುವುದರಿಂದಲೇ ಈಗ ದ್ರೋಣಪುತ್ರನಿಗೆ ಈ ಕಾರ್ಯವು ಸಾಧ್ಯವಾಯಿತು. ಅವರ ಸಮಕ್ಷಮದಲ್ಲಿ ಸಂಹರಿಸಲು ಮರುತ್ಪತಿ ಇಂದ್ರನಿಗೂ ಸಾಧ್ಯವಾಗುತ್ತಿರಲಿಲ್ಲ!

10008148a ಏತದೀದೃಶಕಂ ವೃತ್ತಂ ರಾಜನ್ಸುಪ್ತಜನೇ ವಿಭೋ।
10008148c ತತೋ ಜನಕ್ಷಯಂ ಕೃತ್ವಾ ಪಾಂಡವಾನಾಂ ಮಹಾತ್ಯಯಂ।
10008148e ದಿಷ್ಟ್ಯಾ ದಿಷ್ಟ್ಯೇತಿ ಚಾನ್ಯೋನ್ಯಂ ಸಮೇತ್ಯೋಚುರ್ಮಹಾರಥಾಃ।।

ರಾಜನ್! ವಿಭೋ! ಜನರು ಮಲಗಿರುವಾಗ ಈ ರೀತಿಯ ಘಟನೆಯು ನಡೆದುಹೋಯಿತು! ಪಾಂಡವರಿಗೆ ಮಹಾವಿನಾಶಕಾರಿಯಾದ ಈ ಜನಕ್ಷಯವನ್ನು ಮಾಡಿ ಆ ಮಹಾರಥರು ಅನ್ಯೋನ್ಯರನ್ನು ಸೇರಿ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದು ಅಂದುಕೊಂಡರು.

10008149a ಪರ್ಯಷ್ವಜತ್ತತೋ ದ್ರೌಣಿಸ್ತಾಭ್ಯಾಂ ಚ ಪ್ರತಿನಂದಿತಃ।
10008149c ಇದಂ ಹರ್ಷಾಚ್ಚ ಸುಮಹದಾದದೇ ವಾಕ್ಯಮುತ್ತಮಂ।।

ಅವರಿಬ್ಬರ ಅಭಿನಂದನೆಗಳನ್ನು ಹರ್ಷದಿಂದ ಸ್ವೀಕರಿಸಿ, ಅವರಿಬ್ಬರನ್ನೂ ಆಲಂಗಿಸಿ, ದ್ರೌಣಿಯು ಆನಂದದಿಂದ ಈ ಮಹಾಸತ್ವಪೂರ್ಣಮಾತನ್ನು ಹೇಳಿದನು:

10008150a ಪಾಂಚಾಲಾ ನಿಹತಾಃ ಸರ್ವೇ ದ್ರೌಪದೇಯಾಶ್ಚ ಸರ್ವಶಃ।
10008150c ಸೋಮಕಾ ಮತ್ಸ್ಯಶೇಷಾಶ್ಚ ಸರ್ವೇ ವಿನಿಹತಾ ಮಯಾ।।

“ನನ್ನಿಂದ ಸರ್ವ ಪಾಂಚಾಲರೂ ಎಲ್ಲ ದ್ರೌಪದೇಯರೂ ಹತರಾದರು. ಉಳಿದ ಸೋಮಕ-ಮತ್ಸ್ಯರೆಲ್ಲರೂ ಹತರಾದರು.

10008151a ಇದಾನೀಂ ಕೃತಕೃತ್ಯಾಃ ಸ್ಮ ಯಾಮ ತತ್ರೈವ ಮಾಚಿರಂ।।
10008151c ಯದಿ ಜೀವತಿ ನೋ ರಾಜಾ ತಸ್ಮೈ ಶಂಸಾಮಹೇ ಪ್ರಿಯಂ।

ಈಗ ನಾವು ಕೃತಕೃತ್ಯರಾದೆವು. ತಡಮಾಡದೇ ಅಲ್ಲಿಗೆ ಹೋಗೋಣ. ಒಂದು ವೇಳೆ ನಮ್ಮ ರಾಜನು ಜೀವಂತನಾಗಿದ್ದರೆ ಅವನಿಗೆ ಈ ಪ್ರಿಯವಿಷಯವನ್ನು ತಿಳಿಸೋಣ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ರಾತ್ರಿಯುದ್ಧೇ ಅಷ್ಟಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ರಾತ್ರಿಯುದ್ಧ ಎನ್ನುವ ಎಂಟನೇ ಅಧ್ಯಾಯವು.